Indian Institute Of Science ದ ಮಹಿಳಾ ದಿನ ಭಾಗ ೨

ಇವತ್ತಿಗೆ ಸುಮಾರು ನೂರು ವರ್ಷಗಳ ಮೊದಲಿನ ತನಕ ಭಾರತೀಯ ಮಹಿಳೆಯರ ಪಾಡು ಶತಮಾನಗಳಿಂದ ಒಂದೇ ಬಗೆಯಲ್ಲಿತ್ತು. ನಿಮ್ಮ ಮುತ್ತಜ್ಜಿಯ ಬಾಲ್ಯಕಾಲದ ವರೆಗೂ ಹೆಣ್ಣುಮಕ್ಕಳ ಶಾಲೆಗಳು ಇರಲಿಲ್ಲ. ಬಾಲವಿವಾಹ ಪ್ರಚಲಿತವಿತ್ತು.. ೧೪ನೇವಯಸ್ಸಿಗೆ ಗೃಹಿಣಿ ಪಟ್ಟ! ಬೇಕಿಲ್ಲದ ಬಸಿರು-ಬಾಣಂತನಗಳು, ಮಾಡಿ ಮುಗಿಯದ ಗೃಹಕೃತ್ಯಗಳಿಗೆ ಅಡ್ದ ಬರುತ್ತಿದ್ದವು ಬೇರೆ! ದುರ್ದೈವದಿಂದ ಹೆಣ್ಣು ವಿಧವೆಯಾದಳೋ  ಬಲಾತ್ಕಾರದ ಸನ್ಯಾಸಿ ಜೀವನ. ತಲೆಬೋಳಿಸಿ, ಕೆಂಪು ಸೀರೆ ಉಡಿಸಿ, ಅಡಿಗೆ ಮನೆಯಲ್ಲಿ ಬಿಟ್ಟಿ ಆಳಾಗಿ ಆಯುಷ್ಯ ಸವಿಸಿ ಇಲ್ಲವಾಗುತ್ತಿದ್ದ ಮಹಿಳೆಯರಿಗಿಂತ ತುಂಬ ಮುಂದೆ ಬಂದಿದ್ದೇವೆ.!ಈಗ ಇಂಥವರನ್ನು ಕಾಣುವದು ಚಲಚಿತ್ರಗಳಲ್ಲಿ ಮತ್ತು ಟಿ.ವಿ ಸೀರಿಯಲ್ಲುಗಳಲ್ಲಿ ಮಾತ್ರ! ಇದೊಂದು ಬಲು ದೊಡ್ಡ ಬದಲಾವಣೆ.  ಆದರೆ ಚಿಕ್ಕ ಊರುಗಳಲ್ಲಿಯೇ ಹೆಚ್ಚಿನ ವರ್ಷಗಳನ್ನು ಕಳೆದ ನಾನು ಹೋದ ಶತಮಾನದ ಆರೇಳು ದಶಕಗಳ ನಂತರವೂ ಇಂಥವರೊಡನೇ  ಬೆರೆಯುವ ಸಂದರ್ಭಗಳನ್ನು ಅನುಭವಿಸಿದ್ದೇನೆ.

ಸಮಾಜ ಸುಧಾರಕರ ( ಕರ್ವೆ, ರಾನಡೆ, ಭಂಡಾರಕರ್ ಮತ್ತು ದಕ್ಷಿಣದ ಹಲವು ಸುಧಾರಕರು )ಸ್ತ್ರೀ ಶಿಕ್ಷಣದತ್ತ ಗಮನ ಹೋದರೂ , ಇಡೀ ದೇಶದಲ್ಲಿ ನಿಜವಾದ ಮಹಿಳೆಯರ ಮುನ್ನಡೆಗೆ ಸಹಾಯವಾದದ್ದು ಸ್ವಾತಂತ್ರ್ಯ ಚಳುವಳಿಯಿಂದಾಗಿ. ಮೊದಲಿನಿಂದಲೂ ಗಾಂಧೀಜಿಯವರು ಸ್ತ್ರೀ ಪುರುಷರ ಸಮಾನತೆ ಘೋಷಿಸಿದ್ದರಿಂದ ಸಾಮಾಜಿಕವಾಗಿ ಹಿಂದುಳಿದವರೆನಿಸಿಕೊಂಡ ಮಹಿಳೆಯರೂ ಸಹ ಚಳುವಳಿಯಲ್ಲಿ ಧುಮುಕಿದರು. ಸ್ವಾತಂತ್ರ್ಯೋತ್ತರ ಕಾಲದಲ್ಲೂ ಸ್ತ್ರೀಶಿಕ್ಷಣ, ಸ್ವಾವಲಂಬಿ ಶಿಕ್ಷಣ ಕ್ಷೇತ್ರದಲ್ಲಿ ಸದ್ದಿಲ್ಲದೇ ದುಡಿದು ಮಾಯವಾಗಿದ್ದಾರೆ.

ಮೈಸೂರು ಮಹಾರಾಜರು ಲೋಕಕಲ್ಯಾಣ  ಕಾರ್ಯಗಳಲ್ಲಿ ಹೆಸರು ಮಾಡಿದವರು. ಹೀಗಾಗಿ ಮೈಸೂರು ಪ್ರಾಂತ – ಬೆಂಗಳೂರೂ ಸೇರಿದಂತೆ  ಸುಧಾರಣಾ ಕ್ಷೇತ್ರದಲ್ಲಿ ಮುಂದುವರೆದಿತ್ತು. ಆದರೆ ಮುಂಬೈ-ಕರ್ನಾಟಕ, ಹೈದ್ರಾಬಾದ – ಕರ್ನಾಟಕದ ಭಾಗಗಳು ನಿದಾನವಾಗಿ ಶೈಕ್ಷಣಿಕ ಸವಲತ್ತುಗಳಿಗೆ  ತೆರೆದುಕೊಂಡವು.

ನೋಡಿ! ಈ ಐವತ್ತು ವರ್ಷಗಳ ಅಖಂಡ ಕರ್ನಾಟಕ ಮತ್ತು ಮೂವತ್ತು ವರ್ಷಗಳ ಆಧುನಿಕ ಕರ್ನಾಟಕದಲ್ಲಿ ಮಹಿಳೆ   ವಿವಿಧ ಕ್ಷೇತ್ರಗಳಲ್ಲಿ  ಮುಂದುವರೆಯುತ್ತಿದ್ದಾಳೆ. ಆಡಳಿತ, ನ್ಯಾಯಾಂಗ, ವೈದ್ಯಕೀಯ, ಪೋಲಿಸ್, ವಿಜ್ಞಾನ, ಗಗನಯಾನ, ಕ್ರೀಡೆಗಳು, ನಾನಾ ಸೇವಾಕ್ಷೇತ್ರಗಳು. ಇತ್ತೀಚೆಗೆ  ಸೈನ್ಯದಲ್ಲಿ ಅತ್ಯಂತ  ಕಠಿಣವೆನಿಸಿದ ವಿಭಾಗಗಳೂ ಮಹಿಳೆಯರಿಗೆ ಮುಕ್ತವಾಗಿವೆ.

ಇವೆಲ್ಲ ಆಶಾದಾಯಕ ಅಂಶಗಳೇ! ಆದರೆ, ನಗರವಾಸಿಗಳಿಗೆ ಅಷ್ಟೊಂದು ಪರಿಚಿತವಿಲ್ಲದ ಕೆಲ ಅಂಶಗಳನ್ನು ಇಲ್ಲಿಯ ವಿದ್ಯಾವಂತ ಸೋದರಿಯರೊಂದಿಗೆ ಹಂಚಿಕೊಳ್ಳಲು ಯತ್ನಿಸುತ್ತೇನೆ.

ನಮ್ಮ ಭಾರತ ಎರಡು ಬಗೆಯದಾಗಿದೆ. ಒಂದು ಸುಶಿಕ್ಷಿತ ನಾಗರಿಕರ ಭಾರತ , ಇನ್ನೊಂದು ಅಷ್ಟಿಷ್ಟು ಶಿಕ್ಷಣ ಲಭ್ಯವಿರುವ ಗ್ರಾಮೀಣ ಭಾರತ. ನನ್ನ ಊರು ಕರಾವಳಿಯ ಹೊನ್ನಾವರ ಮತ್ತು ಅಕ್ಕಪಕ್ಕದ ಸಣ್ಣ ಊರುಗಳಲ್ಲಿ ಹತ್ತು ವರ್ಷಗಳಿಂದ ಪ್ರತಿ ವರ್ಷ ೩-೪ ತಿಂಗಳು ಕಳೆಯುತ್ತಿದ್ದೇನೆ. ನಗರಗಳಲ್ಲಿ ಲಭ್ಯವಿರುವ ಯಾವ ಉದ್ಯೋಗವಕಾಶಗಳೂ  ಗ್ರಾಮೀಣ ಮಹಿಳೆಯರಿಗಿಲ್ಲ. ಹಿಂದೊಮ್ಮೆ ಕೃಷಿ, ಮೀನುಗಾರಿಕೆ ತೋಟಗಾರಿಕೆ ಗಳಲ್ಲಿ ಪುರುಷರಿಗೆ ಸಮಸಮವಾಗಿ ನಾರೀಬಲವಿತ್ತು. ಕೃಷಿಗೆ ಕೈಗೆ ಹತ್ತುವ ಯುವಕಜನರು ಈ ದಿನಗಳಲ್ಲಿ ಅನಿಶ್ಚಿತ ಕೃಷಿ ಆದಾಯದಿಂದ ಬೇಸತ್ತು ಸಣ್ಣ ಪುಟ್ಟ ಕೆಲಸಗಳಿಗೆ ನಗರಗಳಿಗೆ ಗುಳೇ ಹೋಗುತ್ತಾರೆ. ನೀರಿನ ಬರದ ಪ್ರದೇಶದಲ್ಲಂತೂ ಇದು ಕುಟುಂಬ ಸಹಿತ ಕಾಯಂ ಕಾಣುವ ನೋಟ .ಮೀನುಗಾರಿಕೆಯಲ್ಲಿ ಹೆಣ್ಣು ಮಕ್ಕಳು  ಮಾರಾಟ , ಬಲೆ ಹೆಣೆಯುವದು, ಮೀನು ಒಣಗಿಸುವದು, ಮೊದಲಾದುವುಗಳಲ್ಲಿ ತೊಡಗಿರುತ್ತಿದ್ದರು.. ಈಗ ಮತ್ಸ್ಯಕ್ಷಾಮ ಬಂದು  ಹಲವು ವರ್ಷಗಳು ಸಂದವು. ಮತ್ಸ್ಯೋದ್ಯಮ ದೊಡ್ಡ ಸಾಹುಕಾರರ  ಪಾಲಾಗಿ, ಯಂತ್ರ ಚಾಲಿತವಾಗಿದೆ.

ಕತ್ತದ ಕೈಗಾರಿಕೆ  ದೊಡ್ಡ ಗೃಹದ್ಯೋಗವಾಗಿತ್ತು. ಕರಾವಳಿಯಲ್ಲಿ ಮಹಿಳೆಯರ ಸ್ವ ಉದ್ಯೋಗವಾಗಿತ್ತು. ಈಗ ಪ್ಲಾಸ್ಟಿಕ್ ಯುಗ ಬಂದು ದೊಡ್ಡ ಏಟು. ಕುಡಿತವೆಂಬುದು ಸಾರ್ವತ್ರಿಕ ಶಾಪವಾಗಿದೆ. ಕುಡುಕ ಗಂಡ   ಕಲಿಯುವ ಎಳೆ ಮಕ್ಕಳು, ಮನೆಮನೆ ಗಳಲ್ಲಿ ಕಂಡು ಬಂದು, ಮನೆಯಾಕೆಯ ಬಾಳು ನರಕಪ್ರಾಯವಾಗಿದೆ. ಬಿಸಿಯೂಟ, ಉಚಿತ ಯುನಿಫಾರ್ಮ ಮತ್ತು ಪುಸ್ತಕಗಳಿಂದಾಗಿ ಓದುವ ಎಳೆಯರ ಸಂಖ್ಯೆಯಲ್ಲಿ ಹೆಚ್ಚಳವಿದ್ದರೂ ಮನೆಯ ಹೆಣ್ಣುಮಕ್ಕಳ ಸ್ಥಿತಿಯಲ್ಲಿ ಬದಲಾವಣೆ ಇಲ್ಲ. ಹೊರಗೂ ಗೇಯಬೇಕಲ್ಲ? ಜವಾಬ್ದಾರಿ ಜಾಸ್ತಿಯಾಗಿದೆ.

ನಗರದ ಮಹಿಳೆಯರ ಪಾಡು ಚೆನ್ನಾಗಿದೆ ಅನ್ನಲಾರೆ! ಮುಖ್ಯವಾಗಿ ಮಧ್ಯಮ ವರ್ಗದ ಉದ್ಯೋಗಸ್ಥೆಯರ ಸಂಕಷ್ಟಗಳು ಬೇರೆ. ಮನೆ ಒಳ ಹೊರಗಿನ ದುಡಿತದಲ್ಲಿ ಗೃಹಸ್ಥನ ನೆರವು ಸಾಕಷ್ಟು ದೊರೆಯುತ್ತಿಲ್ಲ. ಮನೆಕಟ್ಟುವ ಲೋನ್ , ಮಕ್ಕಳಿಗೆ ಓದಿಸುವ ಲೋನ್, ಹಿರಿಯರ ಆರೋಗ್ಯದ ಮೇಲ್ವಿಚಾರಣೆಗಳೆಲ್ಲ ಅವಳ ಹೊಣೆ. ಬಿಚ್ಚು ಮನಸ್ಸಿನ ಅಂತಃಕರಣದಿಂದ ಪತ್ನಿಗೆ ಸಹಾಯ ಮಾಡುವವರಿದ್ದಾರೆ. ಆದರೆ ಅಂಥವರು ಕಡಿಮೆ.

ವಿದೇಶಿಯರ ಮಾರಕವಾದ ಕೊಳ್ಳುಬಾಕ ಸಂಸ್ಕೃತಿಯನ್ನು ನಮ್ಮದಾಗಿಸಿಕೊಂಡಿದ್ದೇವೆ. ಹೊಸಬಗೆಯ ಮನೆ, ಕಾರು, ಬಟ್ಟೆ-ಬರೆ, ಆಭರಣಗಳು, ಟಿ.ವಿ, ಮೊಬಾಯ್ಲ ಇತರ ವಿದ್ಯುತ್ ಉಪಕರಣಗಳು. ಎಲ್ಲದಕ್ಕೂ ಹಣ ಬೇಕಲ್ಲ? ಎಲ್ಲೆಲ್ಲೂ, ಎಲ್ಲದಕ್ಕೂ ಪರದಾಡುವವರನ್ನು ನೋಡುತ್ತಿದ್ದೇವೆ.

 ಇವನ್ನೆಲ್ಲ ಕಂಡ ಮೇಲೆ ಇದ್ದುದನ್ನು ಅರಿತುಕೊಂಡು ಇಲ್ಲದಕ್ಕೆ ಪರಿತಪಿಸದೇ ತನಗಿಂತ ದುರ್ದೈವಿ ಮಹಿಳೆಯರು ಎಲ್ಲ ಬಗೆಯ ಅವಕಾಶ ವಂಚಿತರು ಮಿಲಿಯಗಟ್ಲೆ ಇದ್ದಾರೆ! ಇದ್ದುದರಲ್ಲಿ ನೆಮ್ಮದಿಯಾಗಿರಲು ಯತ್ನಿಸೋಣ ಎನ್ನುವ ಪ್ರಯತ್ನ ಜಾರಿ ಇಟ್ಟರೆ, ನಮ್ಮನ್ನು ನಾವು ಸಂತೈಸಿಕೊಳ್ಳಬಹುದು.

 ಜ್ಯೋತ್ಸ್ನಾ ಕಾಮತ್