ಅಮೇರಿಕನ್ ಕುಟುಂಬದೊಡನೆ

ಅಮೇರಿಕನ್ ಕುಟುಂಬದೊಡನೆ

“ಈ ವಾರಾಂತ್ಯದಲ್ಲಿ ಅಮೇರಿಕನ್ ಕುಟುಂಬದೊಡನೆ ಕಳೆಯಬೇಕೆಂದಿದ್ದರೆ ಈ ಕಾರ್ಡನ್ನು ನಮ್ಮ ಆಫೀಸಿಗೆ ಗುರುವಾರದೊಳಗೆ ತರಬೇಕು” ಎಂದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಕೇಂದ್ರದಿಂದ ಸಂದೇಶ ಒಂದು ಬಂದಿತ್ತು. ಅಮೇರಿಕನ್ನರನ್ನು ಅರಿಯಲು ಪ್ರಯತ್ನಿಸುತ್ತಿದ್ದವ ಅವರೊಡನೆ ಬೆರೆಯುವ ಈ ಸುಸಂಧಿ ದೊರಕಿದರೆ ಬಿಟ್ಟಾನೆಯೇ? ಒಪ್ಪಿಗೆಯ ಕಾರ್ಡು ಆಫೀಸಿಗೆ ತಲುಪಿದ ಮರುದಿನ ಕುಟುಂಬದ ಯಜಮಾನಿ ನನಗೆ ಪೋನ ಮಾಡಿದಳು. “ಹಾಯ್ ಹಾಯ್”ಗಳು ಮುಗಿದ ನಂತರ ತಾನು ಯಾರು, ತನ್ನ ಪತಿ ಏನು ಮಾಡುತ್ತಾರೆ ಎಲ್ಲವನ್ನೂ ವಿವರಿಸಿದಳು. “ಈ ರವಿವಾರ ನಮ್ಮ ಮನೆಗೆ ಅತಿಥಿಯಾಗಿ ದಯಮಾಡಿಸಲು ಒಪ್ಪಿದ್ದಕ್ಕೆ ಬಹಳ ಧನ್ಯವಾದಗಳು. ಆದ್ದರಿಂದ ನಿಮ್ಮ ಮನೆಯ ವಿಳಾಸ ಸರಿಯಾಗಿ ತಿಳಿಸುವಿರಾ?” ಎಂದಳು. ಮನೆಯನ್ನು ಮುಟ್ಟುವ ದಾರಿ ವಿವರಿಸಿ, ಹತ್ತು ನಿಮಿಷ ಮುಂಚಿತವಾಗಿ ಹೊರಗೆ ಬಂದು ನಿಲ್ಲುವೆನೆಂದು ನಿವೇದಿಸಿದೆ.

ಅಮೇರಿಕೆಯಲ್ಲಿ ಮನೆ ಹುಡುಕುವಷ್ಟು ಸುಲಭವಾಗಿ ಭಾರತದಲ್ಲಿ ಹುಡುಕಲಾಗಲಿಕ್ಕಿಲ್ಲ. ಅಲ್ಲಿಯ ಪಟ್ಟಣಗಳಲ್ಲಿ ಉದ್ದಕ್ಕೆ ಚಾಚಿದ ರಾಜಮಾರ್ಗಗಳನ್ನು `ಎವ್ಹೆನ್ಯೂ’ ಎಂದೂ ಅದಕ್ಕೆ ಕೂಡುವ ಚಿಕ್ಕ ಮಾರ್ಗಗಳನ್ನು `ಸ್ಟ್ರೀಟ್’ ಎಂದೂ ಸ್ಟ್ರೀಟ್ಗಳನ್ನು ಜೋಡಿಸುವ ರಸ್ತೆಗಳಿಗೆ `ಪ್ಲೇಸ್’ಗಳೆಂದೂ ಕರೆಯುವದು ವಾಡಿಕೆ. ಎರಡು ರಸ್ತೆಗಳ ನಡುವೆ ಇರುವ ಕಟ್ಟಡಗಳ ಗುಂಪಿಗೆ `ಬ್ಲಾಕ್’ ಎನ್ನುವರು. ಪ್ರತಿಯೊಂದು ಬ್ಲಾಕನಿಂದ ಇನ್ನೊಂದು ಬ್ಲಾಕ್ಗೆ ಹೋದರೆ ಮನೆಯ ನಂಬರುಗಳಲ್ಲಿ ನೂರು ಅಂಕಿಗಳ ಅಂತರವಿರುತ್ತದೆ. ಮತ್ತು ರಸ್ತೆಯ ಒಂದು ದಿಕ್ಕಿನ ಮನೆಗಳಿಗೆ `ಸರಿ’ ನಂಬರುಗಳಿದ್ದರೆ ಇನ್ನೊಂದು ದಿಕ್ಕಿನವಕ್ಕೆ `ಬೆಸ’ ನಂಬರುಗಳಿರುತ್ತವೆ. ಆದ್ದರಿಂದ `೪೯೬, ವೆಸ್ಟ್-ಕಾಟ್-ಸ್ಟ್ರೀಟ್’ ಅಂದರೆ ರಸ್ತೆಯ ಮೇಲಿನ ನಾಲ್ಕನೇ `ಬ್ಲಾಕ್’ನಲ್ಲಿ ಎಡಕ್ಕೆ ಇರುವ ಮನೆಯೆಂದು ಯಾರಿಗೂ ಹುಡುಕುವ ಮೊದಲೇ ತಿಳಿದುಹೋಗುತ್ತದೆ.

ಅಂದು ಮುಂಜಾವಿನಿಂದ ಒಳ್ಳೇ ಸಡಗರದಲ್ಲಿದ್ದೆ. ಅಮೇರಿಕನ್ ಕುಮಾರಿ ಮೊದಲನೇ ಸಲ `ಡೇಟಿಂಗ್’ಗೆ ಹೋಗುವ ಸಂಭ್ರಮ, ಉತ್ಸಾಹ ನನ್ನಲ್ಲಿ ತುಂಬಿದ್ದವು. ಮೊದಲ ಸಲ ಕೌಟುಂಬಿಕ ಅಮೇರಿಕನ್ನರನ್ನು ಭೆಟ್ಟಿಯಾದಾಗ ಕೈಜೋಡಿಸಿ ನಮಸ್ಕಾರ ಮಾಡಬೇಕೇ, ಏನು ಕೈ ಕುಲುಕಬೇಕೆ ಎಂಬ ಒಂದು ಅನುಮಾನ ಬಂದು ಎರಡನ್ನೂ ಕನ್ನಡಿಯಲ್ಲಿ ಅಭಿನಯಿಸಿ ನೋಡಿದೆ. ಕೈ ಕುಲುಕುವುದು ಸಾಮಾನ್ಯವಾಗಿದ್ದರೂ ನಮ್ಮ ಪದ್ಧತಿಯನ್ನು ಏಕೆ ಬಿಡಬೇಕು ಎಂಬ ಸ್ವಾಭಿಮಾನ ಒಳಗೇ ಕುಮ್ಮಕ್ ನಡೆಸಿತ್ತು. ಆದ್ದರಿಂದ ಮನೆಯೊಳಗೆ ಕಾಲಿಡುತ್ತಲೇ ಮೊದಲು ನಮಸ್ಕಾರ ಮಾಡುವದೆಂದೂ ಅಮೇಲೆ ಬೇಕೆನಿಸಿದರೆ ಕೈಕುಲುಕುವದೆಂದೂ ನಿರ್ಧರಿಸಿಕೊಂಡೆ. ಹೇಗೆ ಕೂಡ್ರುವುದು, ಹೇಗೆ ತಿನ್ನುವುದು. ಎಲ್ಲದರ ಬಗ್ಗೆಯೂ ಮನಸ್ಸಿನಲ್ಲಿ ಚಿತ್ರಿಸಿಕೊಂಡೆ. ಎರಡು ಗಂಟೆಯಿಂದಲೇ ಹೊರಡುವ ತಯಾರಿ ನಡೆಸಿದೆ. ಮೂರು ಗಂಟೆಗೆ ಸಿದ್ಧತೆ ಮುಗಿದಿತ್ತು. ವೇಳೆ ಹೋಗದಂತಾಯಿತು. `ಟಿ. ವ್ಹಿ’. ಹಚ್ಚಿ ನೋಡಿದೆ, ಕೇಳಿದೆ. ಅದೂ ಬೇಸರ ಬಂತು. ಪುಸ್ತಕವೊಂದನ್ನು ತೆರೆದು ಪುಟಗಳ ಮೇಲೆ ಸುಮ್ಮನೆ ಕಣ್ಣಾಡಿಸಿದೆ. ಅದೂ ಬೇಡವಾಯಿತು. ಮೂರೂವರೆಯ ಸುಮಾರಿಗೆ ಮನೆಯಿಂದ ಹೊರಗೆ ಬಂದು, ಬರುವ ಕಾರಿಗಾಗಿ (ಅಪರಿಚಿತ) ಕಾದೆ. ಎಂದೂ ಕಾಣದ ವ್ಯಕ್ತಿಗಾಗಿ, ಎಂದೂ ನೋಡದ ಕಾರಿಗಾಗಿ ಕಾಯುತ್ತ ನಿಂತೇ ನಿಂತೆ. ಮೈ ಕೊರೆಯುವ ಚಳಿ, ತೊಟ್ಟ ದಪ್ಪ ಉಣ್ಣೆಯ ಬಟ್ಟೆಯೊಳಗಿಂದಲೂ ಒಳಬಂದು ಚುಚ್ಚುತ್ತಿತ್ತು-ಅಲ್ಲ, ಮೈದಡವುತ್ತಿತ್ತು. ಅದಕ್ಕೆ ಮೈ ನವಿರಿಗೊಳಗಾಯಿತು; ಕಿವಿ ಕೆಂಪಡರಿದವು; ಮೂಗು ನೀರು ಸುರಿಸಲಾರಂಭಿಸಿತು; ಕೈ ಕಾಲು ನಡುಗಲಾರಂಭಿಸಿದವು. ಆದರೂ ನಿಂತಿದ್ದೆ, ನೋಡುತ್ತಿದ್ದೆ. ಎದುರಿಗೆ ಹೊರಟಿತ್ತು ಕಾರುಗಳ ಇರಿವೆ–ಸಾಲು. ಎಲ್ಲಿಗೋ? ಎತ್ತೋ? ಏನೋ! ಕಾರಿನಲ್ಲಿ ಹೊರಟವರಿಗೂ ತಿಳಿದಂತಿರಲಿಲ್ಲ ತಾವು ಎತ್ತ ಹೋಗಲಿದ್ದೇವೆಂಬುದು. ತಮ್ಮ ದೇಶದಲ್ಲಿ ಹೇರಳವಾಗಿ ಲಭ್ಯವಿದ್ದ ಪೆಟ್ರೋಲನ್ನು ಸುಡಲು ಹೊರಟಂತೆ ಇತ್ತು. ಕುದುರೆಯಂತೆ ಓಡುವ ಕಾರು, ಬಾರಕೋಲೇಟು ತಿಂದು ಬಾಲ ಮುರಿದುಕೊಂಡ ಎತ್ತಿನಂತೆ ಓಡುವ ಕಾರು, ಕತ್ತೆಯಂತೆ ನಿಂತು ನಿಂತು ಮಾಲೀಕನಿಂದ ಏಟು ತಿಂದ ಮೇಲೇ ಮುಂದುವರಿದ ಕಾರು, ಒಂಟೆಯಂತೆ ಎತ್ತರವಾದ, ಆಡಿನಂತೆ ಕುಳ್ಳಾದ, ಹಾವಿನಂತೆ ರ್ಯಾವಿಕೊಂಡು ಹೋಗುವ, ಕಾಗೆ–ಕಪ್ಪಿನ, ಗಿಳಿ–ಹಸರಿನ ನಾನಾ ಬಣ್ಣದ ಕಾರುಗಳು ನಾನಾ ಸ್ವರಗೈಯುತ್ತ ಮೆರವಣಿಗೆ ಹೊರಟಿದ್ದವು. ಅವುಗಳಲ್ಲಿ ಪ್ರತಿಯೊಂದು ಕಾರೂ ನನಗಾಗಿ ಬರುತ್ತಿದ್ದಂತೆ, ಅವುಗಳ ಒಳಗಿದ್ದ ಪ್ರತಿ ಅಪರಿಚಿತ ಕಣ್ಣುಗಳೆರಡು ನನ್ನನ್ನೇ ಅರಸುತ್ತಿದ್ದಂತೆ, ಕಾರು ತಟ್ಟನೆ ನನ್ನ ಹತ್ತಿರ ಬಂದು ನಿಂತಂತೆ ಭಾಸವಾಗುತ್ತಿತ್ತು. ನಾಲ್ಕು ಹೊಡೆದು ಹತ್ತು ನಿಮಿಷಗಳಾಗಿರಬೇಕು, ನನ್ನ ತಾಳ್ಮೆಯ ಮೇರೆ ಮೀರಿತು. ಜಗತ್ತಿನಲ್ಲಿ ಮುಂದುವರಿದ ರಾಷ್ಟ್ರದ ಪ್ರಜೆಯೇ ಹೀಗೆ ಮಾಡಿದರೆ ಭಾರತೀಯರು ತಮ್ಮದೇ ಆದ ಪದ್ಧತಿಯಲ್ಲಿ ತಡಮಾಡಿ ಹೋಗುತ್ತಿದ್ದರೆ ಅದರಲ್ಲಿ ತಪ್ಪೇನಿದೆ? ಎಂದು ನನಗೆ ನಾನೇ ತರ್ಕಹೂಡಿ ಸಂತೈಸಿಕೊಂಡೆ. ಒಂದೇ ನಿಮಿಷದಲ್ಲಿ ಅಮೇರಿಕನ್ನರ ಬಗ್ಗೆ ಆದರ–ಗೌರವಗಳೆಲ್ಲ ಹಾರಿಹೋದವು. ಅಷ್ಟರಲ್ಲಿ ರಕ್ತವರ್ಣದ ದೆವ್ವನಂತಹ ಕಾರೊಂದು ಹೊಗೆ ಉಗುಳುತ್ತ ಧಾವಿಸಿ ಬಂದು “ತಡಮಾಡಿದ್ದಕ್ಕೆ ಕ್ಷಮಿಸಬೇಕು” ಎನ್ನುವ ರೀತಿಯಲ್ಲಿ ನನ್ನೆದುರು ಬಂದು ಸ್ತಬ್ಧವಾಗಿ ನಿಂತಿತು. ಕಾರಿನ ಒಡೆಯನು “ಬಹಳ ಹೊತ್ತಿನಿಂದಾ ಕಾಯುತ್ತಿದ್ದೀರಾ?” ಎಂದು ಸೌಜನ್ಯದಿಂದ ವಿಚಾರಿಸಿ, ಕಾರಿನ ಬಾಗಿಲನ್ನು ಹೊರದೂಡಿದನು. ಕೊರೆಯುವ ಆ ಚಳಿಯಿಂದ ಹೇಗೆ ಪಾರಾಗಬೇಕು ಎಂದು ಯೋಚಿಸುತ್ತಿದ್ದ ನನಗೆ, ಕಾರಿನ ಒಳಗಿನ ಆ ಬೆಚ್ಚಗಿನ ಹವೆ ಆಕರ್ಷಿಸಿತಲ್ಲದೆ, ಕಾರಿನ ಒಳಗಿಂದ ಬಂದ ಆ ಪ್ರಶ್ನೆಯಲ್ಲ. ಸರಿ, ಕಾರು ಮುಂದೆ ನಡೆಯಿತು. ನಮ್ಮ ಮಾತಿಗೆ ಪ್ರಾರಂಭವಾಯಿತು.

“ನೀವು ಆಫ್ರಿಕದಿಂದ ಈ ದೇಶಕ್ಕೆ ಎಂದು ಬಂದಿರಿ?”

“ಬಂದದ್ದು ಭಾರತದಿಂದ. ಭಾರತ ಆಫ್ರಿಕದಲ್ಲಿಲ್ಲ. ಏಶ್ಯದಲ್ಲಿದೆ.” ಮುಂದೆ ಮಾತನಾಡುವ ಬದಲು ಆತ ಕಾರಿಗೆ ಬ್ರೆಕ್ ಹಾಕಿದ. ನನ್ನ ಉತ್ತರದಿಂದ ಆತ ಅಸಂತುಷ್ಟನಾದನೇ ಎಂದು ಸ್ವಲ್ಪ ಗಲಿಬಿಲಿಯಾಯಿತು ಮನಸ್ಸು. ನನ್ನ ಹೆಸರನ್ನು ಎರಡೆರಡು ಬಾರಿ ಕೇಳಿ ತಿಳಿದುಕೊಂಡು ಕಾರನ್ನು ನಮ್ಮ ಮನೆಯ ಕಡೆಗೇ ಹೊರಳಿಸಿದ. ಕೂಡಲೇ ನನ್ನ ಉತ್ತರಕ್ಕಾಗಿ ಕ್ಷಮೆ ಕೇಳಬೇಕೆಂದಿದ್ದೆ. ಆದರೆ ಅವನೇ ಮೊದಲು ಮಾಡಿದ;

“ಕ್ಷಮಿಸಬೇಕು, ನಾನು ಕರೆದುಕೊಂಡು ಹೋಗಲು ಬಂದವರು ನೀವಲ್ಲ.”

ನನಗೆ ಇದಾವ ತರದ ಆತಿಥ್ಯವೆಂದು ತಿಳಿಯದೇ, ಮರುಮಾತನಾಡದೇ, ಒಳಗೆ ಮನಸ್ಸು ಮುರುಟಿಗೊಂಡು ಲಗುಬಗೆಯಿಂದ ನನ್ನ ಮನೆಯೊಳಕ್ಕೆ ಸೇರಿದೆ. ಬಟ್ಟೆ ಬದಲಿಸಿ, ರೇಡಿಯೋ ಹಚ್ಚಿ, ಕಣ್ಣುಮುಚ್ಚಿ ಬಿದ್ದುಕೊಂಡೆ. ಯಾವನೋ ನಿಗ್ರೊ ಸಂಗೀತಗಾರ ಕಿರುಚಿಕೊಳ್ಳುತ್ತಲೇ (ನನಗೆ ಹಾಗೆ ಅನಿಸಿತು; ಬಹುತೇಕ ಸಂಗೀತ ವಿಷಯದಲ್ಲಿ, ಭಾಷೆಯ ವಿಷಯದಲ್ಲಿ ಅಪರಿಚಿತನಾದವನಿಗೆ ಮೊಟ್ಟಮೊದಲು ಹೀಗೇ ಅನಿಸುತ್ತಿರಬೇಕು) ಇದ್ದ. ನಂತರ ಮೃದುವಾದ ಹೆಣ್ಣುದನಿಯೊಂದು “ಈಗ ಸಮಯ ಮೂರುವರೆ ಗಂಟೆ. ಇನ್ನು ಅಂತರ್ರಾಷ್ಟ್ರೀಯ ವಾರ್ತೆ ಕೇಳಿ.” ಎಂದಿತು. ಏನು ಮೂರುವರೆ ಗಂಟೆಯೇ! ದಿಗ್ಗನೆದ್ದು ನನ್ನ ಗಡಿಯಾರವನ್ನು ನೋಡಿಕೊಂಡೆ. ಅದು ನಾಲ್ಕುವರೆ ತೋರಿಸಿತು! ಮತ್ತು ನೋಡುತ್ತಿರುವ ನನ್ನ ಗಡಿಯಾರ ಹಾಗೆ ನನಗೆ ಮೋಸ ಮಾಡಲಿಕ್ಕಿಲ್ಲೆಂಬ ವಿಶ್ವಾಸ ಇದ್ದರೂ ಇಂದು ತಪ್ಪಿದ್ದರೆ, ಅನಿಸಿತು. ಹೆಚ್ಚಚ್ಚು ವಿಚಾರಮಾಡಿದಂತೆ ಹೆಚ್ಚೆಚ್ಚು ಅಧೈರ್ಯ ಮೂಡಿತು. ಮತ್ತೆ ಬಟ್ಟೆಗಳನ್ನು ಧರಿಸಿದೆ. ಎರಡು ಕಿವಿ ನೂರು ಕಿವಿ ಮಾಡಿಕೊಂಡು ರೇಡಿಯೋ ಕೇಳಲಾರಂಭಿಸಿದೆ. ಹೆಣ್ಣು ದನಿ “ಈಗ ನಾಲ್ಕು ಗಂಟೆ” ಎಂದಾಗ ತಿರುಗಿ ಉತ್ಸಾಹದ ಕಾರಂಜಿ ನನ್ನಲ್ಲಿ ಪುಟಿಯಲಾರಂಭಿಸಿತು. ಚಟ್ನೇ ಎದ್ದು ರಸ್ತೆಯತ್ತ ಧಾವಿಸಿದೆ. ಅಮೇರಿಕನ್ ಆಗಂತಕನೊಬ್ಬ ನನಗಾಗಿ ಅಲ್ಲಿ ಇಲ್ಲಿ ವಿಚಾರಿಸುತ್ತಿದ್ದ. ನನ್ನನ್ನು ನೋಡಿ “ತಾವು ಮಿ| ಕ್ಯಾಮೆಟರೇ?” ಎಂದು ಕೇಳಿದ. ಹೌದೆಂದು ಕೈ ಕುಲುಕಿದೆ. “ನಾನು ತಡಮಾಡಿ ಬಂದಿಲ್ಲವಷ್ಟೆ?” ಎಂದು ಅವನು ಕೇಳಿದಾಗ “ನಾನೇ ಎರಡು ನಿಮಿಷ ತಡಮಾಡಿದ್ದೇನೆ, ಕ್ಷಮಿಸಬೇಕು” ಎಂದೆ. ಔಪಚಾರಿಕ ಮಾತುಗಳನ್ನು ಮುಗಿಸುವದರಲ್ಲಿ ಅವರ ಮನೆ ಮುಟ್ಟಿದೆವು. ಮನೆಯೊಡತಿ ಬಾಗಿಲು ತೆಗೆದು ಸುಸ್ವಾಗತ ಬಯಸಿದಳು. ಯಜಮಾನನು ಪತ್ನಿಯ, ಮಗಳ ಪರಿಚಯ ಮಾಡಿಕೊಟ್ಟ. ಒಳಗೆ ಇನ್ನೂ ಬಹಳಷ್ಟು ಅತಿಥಿಗಳು ಆಗಮಿಸಿದ್ದರು. ಅವರೆಲ್ಲರ ಪರಿಚಯವಾಯಿತು. ಎಲ್ಲರಂತೆ ನನಗೂ ಕೈದಿಯ ನಂಬರಿನ ಚೀಟಿಯಂತೆ (ನಂಬರಿನ ಬದಲಾಗಿ ಹೆಸರಿದ್ದ) ಚೀಟಿಯೊಂದು ಬಂದಿತು. ಅದನ್ನು ನನ್ನ ಕೋಟಿಗೆ ಅಂಟಿಸಿದಳು ಯಜಮಾನಿ ತನ್ನ ಕೈಯಿಂದಲೇ. ಅತಿಥಿಗಳು ಇನ್ನೂ ಬರುತ್ತಲೇ ಇದ್ದರು ಪ್ರತಿಯೊಬ್ಬರು ಬಂದಾಗಲೂ ಎದ್ದು ನಿಂತು, ಪರಿಚಯಮಾಡಿಕೊಳ್ಳುವುದು ಪದ್ಧತಿ. ಬಂದವರೆಲ್ಲ `ಹಾಯ್’ ಕ್ರಿಶ್, ನೀನು ಭಾರತೀಯನೇ?” ಎಂದು ಕೇಳುತ್ತಿದ್ದರು. ಯಜಮಾನಿ “ಕ್ರಿಶ್, ನಿನಗೆ `ಶೆರಿ’ ಕೊಡಲೋ, `ಓಡ್ಕ’ ನಡೆಯುವದೊ?” ಎಂದು ನನ್ನನ್ನು ಕೇಳಿದಾಗ “ಹಾಗೆಂದರೇನು?” ಎಂದು ಕೇಳಿದೆ. “ಇವುಗಳೆಲ್ಲ ಪಾನೀಯ (drinks) ಗಳೆಂದು ನಿನಗೆ ಗೊತ್ತಿಲ್ಲವೇ?” ಎಂದು ಆಶ್ಚರ್ಯದ ನೋಟ ನನ್ನತ್ತ ಬೀರಿದರು. “ಸೆರೆಯ ಸೇವನೆ ನಾನು ಮಾಡುವುದಿಲ್ಲ” ಎಂದಾಗ “ಹಾಗಾದರೆ ಯಾವ ಬಿಯರ್ ಕೊಡಲಿ?” ಎಂದಳು “ಬಿಯರನ್ನೂ ಕುಡಿಯುವದಿಲ್ಲ” ಎಂದಾಗ ದಿಗ್ಭ್ರಾಂತಳಾದಳು. ಕಣ್ಣುಗಳನ್ನು ಇಷ್ಟು ಅಗಲ ಮಾಡಿ ನೋಡಹತ್ತಿದಳು. “ಬಿಯರಿನಲ್ಲೇನಿದೆ, ಬರೀ ನೀರು ಕುಡಿದ ಹಾಗೆ?” ಎಂದು ಮತ್ತೆ ಕೇಳಿದಳು. ಭಾರತದಲ್ಲಿ ಪಾನೀಯದ (ಈ ತರಹದ್ದು) ಪದ್ಧತಿ ಸಾಮಾನ್ಯವಾಗಿ ಇಲ್ಲವೆಂದೂ ನನ್ನ ಪ್ರದೇಶದಲ್ಲಿ ಪಾನಪ್ರತಿಬಂಧವಿದೆಯೆಂದು ತಿಳಿಸಿದೆ. “ಹಾಗಾದರೆ ಮನಸ್ಸು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಭಾರತೀಯರು ಏನು ಮಾಡುತ್ತಾರೆ?” ಎಂದು ಕೇಳಿದಳು. “ಭಾರತೀಯರು ಯಾವಾಗಲೂ ಪ್ರಸನ್ನಸ್ಥಿತಿಯಲ್ಲಿರುತ್ತಾರೆಂದು ನಮ್ಮ ಸರಕಾರ ನಂಬಿದೆ. ಆದ್ದರಿಂದ ಈ ನಿರ್ಬಂಧ ಹೇರಿದ್ದಾರೆ.” ಎಂದು ನಾನು ಉತ್ತರಿಸಿದಾಗ ಅವರೆಲ್ಲ ನಗದೇ ಇರಲಿಲ್ಲ. ಚಳಿಯಿಂದ ನಡಗುತ್ತಿದ್ದವನಿಗೆ ಬಿಸಿಬಿಸಿ ಚಹಾ ಆಗಲಿ, ಕಾಫಿಯಾಗಲಿ ಬೇಕಾಗಿತ್ತು. ಆದರೆ ಪಾನ ವಿರೋಧಿಯಾದ ನನಗೆ “ಸೋಡಾ ಕೊಡಲೇ?” ಎಂದಾಗ ಒಳಗೆ ಕಿವುಚಿಕೊಳ್ಳುವಂತಾದರೂ ಬೇಡ ಎನ್ನುವದಾಗಲಿಲ್ಲ. `ರೆಫ್ರಿಜಿರೇಟರ್’ದೊಳಗಿಂದ ಸೋಡಾದ ಬಾಟ್ಲಿ ತೆಗೆದಾಗ “ಅಯ್ಯಪ್ಪ! ಇದನ್ನು ಹೇಗೆ ಕುಡಿಯುವುದು?” ಎಂದು ಯೋಚಿಸುತ್ತಿದ್ದಂತೆಯೇ ಬರ್ಫದ ತುಂಡುಗಳಿಂದ ಅರ್ಧ ತುಂಬಿದ ಗ್ಲಾಸಿನಲ್ಲಿ ಸೋಡಾ ಸುರಿದು ನನ್ನ ಕೈಗಿತ್ತಳು. ಅದನ್ನು ನೋಡಿಯೇ ಕರಳು ಕಿತ್ತಹಾಗಾಯಿತು. ಇನ್ನು ಕುಡಿಯುವದೆಂತು? ಒಂದು ಗುಟುಕೂ ಅದರೊಳಗಿಂದ ಕುಡಿಯಲಾಗಲಿಲ್ಲ.

ಮಾತಿನಲ್ಲಿ ಅಮೇರಿಕನ್ನರನ್ನು ಸೋಲಿಸುವ ದೇಶ ಇನ್ನೊಂದಿಲ್ಲವೆಂದು ತೋರುತ್ತದೆ. ನಾಲ್ಕು ಜನ ಒಟ್ಟಿಗೆ ಸೇರಿದ ಕೂಡಲೇ ಮುಕ್ಕಾಲು ಪಾಲು ಮಾತಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆ ಮಾತು ಈ ಮಾತು ಆಡುತ್ತ ಯಜಮಾನಿ, “ನೀನು ಸಾಯರೆಕ್ಯೂಸ್ ವಿಶ್ವವಿದ್ಯಾಲಯದಲ್ಲಿ ರಾಜಕಾರಣಶಾಸ್ತ್ರ ಓದುತ್ತೀಯಾ?” ಎಂದು ಕೇಳಿದಳು. “ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ `ಅರಣ್ಯಶಾಸ್ತ್ರ’ ಅಭ್ಯಸಿಸುತ್ತಿದ್ದೇನೆ?” ಎಂದು ನಾನು ಉತ್ತರಿಸಿದಾಗ ಅಲ್ಲಿ ಕುಳಿತವರಲ್ಲಿ ಹಲವರು ನನ್ನನ್ನು ಕುತೂಹಲದಿಂದ ನೋಡಹತ್ತಿದರು. ಯಜಮಾನಿ ಕಣ್ಣರಳಿಸಿ, ಖುರ್ಚಿಯನ್ನು ನನ್ನತ್ತ ಸರಿಸಿಕೊಂಡು “ಹಾಗಾದರೆ ನೀನು ಬಹಳ ಶಾಣ್ಯಾ ಇರಬೇಕು. ಅಂಥಿಂಥವರಿಗೆ ಅಲ್ಲಿ ಪ್ರವೇಶ ಸಿಗುವುದಿಲ್ಲ, ನೂರು ಸ್ಥಳಗಳಿದ್ದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸ್ಪರ್ಧಿಸುತ್ತಾರೆ. ನನ್ನ ಮಗನಿಗೆ ಅಲ್ಲಿ ಪ್ರವೇಶ ಸಿಗದ್ದರಿಂದ ವಾಶಿಂಗ್ಟನ್ನಿಗೆ ಕಳಿಸಬೇಕಾಯಿತು!” ಎಂದು ಹಚ್ಚಿಕೊಂಡು ಮಾತಾಡಿ “ನೀನು ಅಲ್ಲಿ `ಬಿಎಸ್’ಗೆ (ಬಿ.ಎಸ್ಸಿ.) ಓದುತ್ತೀಯಾ? “ ಎಂದು ಕೇಳಿದ್ದಕ್ಕೆ ನಾನು ಇಲ್ಲವೆಂದು `ಎಂ.ಎಸ್’ ಇರಬೇಕೆಂದುಕೊಂಡು ಸುಮ್ಮನಾದಳು. ನಾನು `ಪಿಎಚ್.ಡಿ.’ಗಾಗಿ ಓದುತ್ತಿದ್ದೇನೆಂದಾಗ ಆಕೆಗೆ ಇನ್ನೂ ಆಶ್ವರ್ಯವಾಯಿತು. ಅನಂತರ ನನ್ನನ್ನು `ಡಾಕ್ಟರ್’ ಅಥವಾ `Do’ ಸಂಬೋಧಿಸಹತ್ತಿದ್ದಳು. ನಮ್ಮ ದೇಶದಲ್ಲಿ ಬಂದ ಕೂಡಲೇ ನಿನಗಾದ ಮೊದಲ ಅನುಭವಗಳನ್ನು ವಿವರಿಸುವಿಯಾ?” ಎಂದು ಮಾಮೂಲಿ, ಆದರೆ ಪ್ರತಿಯೊಬ್ಬರೂ ಕೇಳುವ ಪ್ರಶ್ನೆಯನ್ನೇ ಕೇಳಿದಳು. ನಾನು ಅಂದು ಸಂಜೆ ನಡೆದ ಘಟನೆಯನ್ನು ಒಂದಿಷ್ಟು ಬಣ್ಣ ಹಚ್ಚಿ, ರಸವತ್ತಾಗಿ ಮಾಡಿ ವಿವರಿಸಿದೆ. ಎಲ್ಲರೂ ಬಿದ್ದು ಬಿದ್ದು ನಕ್ಕರು. “ಕ್ರಿಶ್ ನಿನ್ನ ಈ ಫಜೀತಿಗೆ ನಾವೇ ಕಾರಣರು. ಚಳಿಗಾಲದಲ್ಲಿ ಈ ದೇಶದಲ್ಲಿ ಗಡಿಯಾರಗಳನ್ನು ಒಂದು ಗಂಟೆ ಹಿಂದೆಯೂ, ಬೇಸಿಗೆಯಲ್ಲಿ ಒಂದು ಗಂಟೆ ಮುಂದೆಯೂ ಇಡುವರು. ದುರ್ದೈವಕ್ಕೆ ನಿನ್ನೆ ಮಧ್ಯರಾತ್ರಿಯಿಂದ ಈ ಬದಲಾವಣೆ ಜಾರಿಗೆ ಬಂದಿದೆ. ಹೊಸದಾಗಿ ಬಂದ ನಿನಗೆ ಈ ವಿಚಾರವನ್ನು ನಾವು ಮೊದಲೇ ತಿಳಿಸಬೇಕಾಗಿತ್ತು.” ಎಂದು ಕೊನೆಗಳಿಗೆಯಲ್ಲಿ ಪಾದ್ರಿಯ ಎದುರಿಗೆ ತಪ್ಪೊಪ್ಪಿಕೊಳ್ಳುವ ಧಾಟಿಯಲ್ಲಿ ಮರುಗಿ ಯಜಮಾನಿ ಸತ್ಯವಿವರಣೆ ಕೊಟ್ಟಳು.

ಭಾರತದ ಬಗ್ಗೆ ಭಾರತೀಯರ ಬಗ್ಗೆ ಉತ್ಸುಕತೆಯುಳ್ಳ ಈ ಜನ ಒಂದೇ ಸಮನೇ ಪ್ರಶ್ನೆ ಕೇಳಹತ್ತಿದರು. ಸಾಮಾನ್ಯವಾಗಿ ನಮ್ಮ ಮಾತುಕತೆ ಈ ಧಾಟಿಯಲ್ಲಿ ಸಾಗಿತ್ತು:

“ಕ್ರಿಶ್ ನೀನು ಅಮೇರಿಕೆಗೆ ಯಾವಾಗ ಬಂದೇ? ನಮ್ಮ ದೇಶ ನಿನ್ನ ಮನಸ್ಸಿಗೆ ಬಂತೆ?”

“ನಾನಿಲ್ಲಿಗೆ ಬಂದು ಕೇವಲ ಎರಡು ತಿಂಗಳಾದವು. ಈ ಅವಧಿಯಲ್ಲಿ ನಿಮ್ಮ ದೇಶ ತೂಗಿ ಅಳೆಯಲಾರೆ. ಇನ್ನೂ ಬಹಳ ಸಂಚರಿಸಬೇಕು; ಬಹಳ ಜನರನ್ನು ಭೆಟ್ಟಿಯಾಗಬೇಕು. ಭಾರತಕ್ಕೆ ನಾನು ಇಲ್ಲಿಯ ವಾಸ್ತವ್ಯ ಮುಗಿಸಿಕೊಂಡು ಮರಳುವ ಮುಂಚೆ ನೀವು ಈ ಪ್ರಶ್ನೆ ಕೇಳಿದ್ದರೆ, ಅದೂ ಕೆಲಮಟ್ಟಿಗೆ ಮಾತ್ರ ಸಮರ್ಪಕ ಉತ್ತರ ಕೊಡಬಹುದೋ ಏನೋ … ಈಗಿನ ಮಟ್ಟಕ್ಕೆ ಹೇಳುವದಾದರೆ, ನಾವು ಓದಿ, ಕೇಳಿ ತಿಳಿದಷ್ಟು ನಿಮ್ಮ ದೇಶ ಆಕರ್ಷಣೀಯವಾಗಿಲ್ಲ; ಜ್ಞಾನಸಮೃದ್ಧವಾಗಿಲ್ಲ. ನಾವು ಭಾರತದಲ್ಲಿದ್ದಾಗ ನಿಮ್ಮ ದೇಶದ ಪ್ರಚಾರಜನ್ಯ–ಕಾಲ್ಪನಿಕ–ಚಿತ್ರವೇ ನಮ್ಮಲ್ಲಿ ಮುಖ್ಯವಾಗಿ ತುಂಬಿರುವುದರಿಂದ, ಇಲ್ಲಿ ಬಂದ ಕೂಡಲೇ ಅದು ಅಳಿಸಿ ಹೋಗಿ, ಮುಖಾಳಾಗಿ–ಒಮ್ಮೊಮ್ಮೆ ವಿದ್ರೂಪವಾಗಿ ಕಂಡು–ನಮಗೆ ನಿರಾಶೆಯಾಗುವುದು ಸಹಜವಿದೆ.”

“ನೀನೊಬ್ಬನೇ ಇಲ್ಲಿಗೆ ಬಂದಂತಿದೆ? ಭಾರತದಲ್ಲಿ ನಿನಗೊಂದು ಕುಟುಂಬವಿದೆಯೇ? (Do you have a family back at home?)

“ಹೌದು, ನಮ್ಮದು ಸ್ವಲ್ಪ ದೊಡ್ಡ ಕುಟುಂಬ.”

“ನಿನಗೆ ಎಷ್ಟು ಮಕ್ಕಳೆಂದು ಕೇಳಬಹುದೇ?”

“ನನಗಿನ್ನೂ ಮದುವೆಯಾಗಿಲ್ಲ.”

“ಇದೇ ಈಗ ನಿನಗೊಂದು ಕುಟುಂಬವಿದೆಯೆಂದು ಹೇಳಲಿಲ್ಲವೇ ಕ್ರಿಶ್?”

“ನಮ್ಮ ದೇಶದಲ್ಲಿ ತಂದೆ–ತಾಯಿ, ಅಕ್ಕ–ತಂಗಿ, ಅಣ್ಣ–ತಮ್ಮಂದಿರೆಲ್ಲ ನಿಕಟ ಕುಟುಂಬದಲ್ಲಿ ಬರುತ್ತಾರೆ.”

ಈ ನಮ್ಮ ಕುಟುಂಬದ ವ್ಯಾಖ್ಯೆಯನ್ನು ನಾನು ಕೊಟ್ಟಾಗ, ಹೆಂಡತಿ, ಮಕ್ಕಳಷ್ಟೇ ಕುಟುಂಬವೆಂದು ನಂಬಿದ್ದ ಅಮೇರಿಕನ್ರು ಆಶ್ಚರ್ಯದಿಂದ ನಕ್ಕರು.

“ದನ–ಕರು ಬರುದಿಲ್ಲವೇ ನಿಮ್ಮ ಕುಟುಂಬದಲ್ಲಿ?” ಒಬ್ಬ ಕೊಂಕಾಡಿದ.

“ದೃಷ್ಟಿಯನ್ನು ಬೆಳೆಸಿದರೆ ಬರುತ್ತದೆ. ದೃಷ್ಟಿಹೀನರಿಗೆ ತಮ್ಮ ಕೈಕಾಲೂ ಪರಕೀಯವೆ.” ಎಂದು ಉಕ್ಕಿಬರುತ್ತಿದ್ದ ಸಿಟ್ಟನ್ನು ಒತ್ತಿ ಉತ್ತರಿಸಿದೆ. ಆತ ಮರ್ಮಸ್ಪರ್ಶವಾಗಿಯೊ ಬೇಕೆಂದೇ ಬೇರೆ ಪ್ರಶ್ನೆ ಕೇಳಿದ:

“ನಿನಗೊಬ್ಬ ಗೆಳತಿ (ಗೆಣತಿ; girl-friend ) ಇದ್ದಾಳೆಯೇ?”

“ಐದಾರು ಗೆಳತಿಯರಿದ್ದರೂ ಇಬ್ಬರು ಮೂವರು ಉತ್ತಮ ಗೆಳೆಯರಿದ್ದಾರೆ.”

ಭಾರತೀಯರಿಗೆ ಈ ರೀತಿಯ ಸ್ನೇಹಿತರಿರುವದು ಅಸಾಧ್ಯದ ಮಾತು ಎನ್ನುವ ಧಾಟಿಯಲ್ಲೇ ಹೇಳಿದೆ. ನನ್ನ ಈ ಉತ್ತರವನ್ನು ಕೇಳಿ ಇನ್ನೊಮ್ಮೆ ಅವರೆಲ್ಲ ನಗೆಯಲ್ಲಿ ಮುಳುಗಿದರು.

ಅರ್ಥವಾಗದ ನನ್ನ ಪೆಚ್ಚು ಮುಖ ನೋಡಿ, “ಅಸಂತೋಷವಾಯಿತೇ? ಕ್ಷಮಿಸು. ಈ ದೇಶದಲ್ಲಿ ಮದಿವೆಯಾಗದ ಯುವಕನಿಗೆ ಗೆಳತಿಯೊಬ್ಬಳು, ಮತ್ತು ಯುವತಿಗೆ ಒಬ್ಬ ಗೆಳೆಯನಿರುತ್ತಾನೆ. ಇವರು ತೀರ ಅನ್ಯೋನ್ಯರಾಗಿರುತ್ತಾರೆ. ಕೊನೆಗೆ ಮದಿವೆಯಾಗುತ್ತಾರೆ. ಆದ್ದರಿಂದ ಒಬ್ಬನಿಗೆ ಒಬ್ಬಳೇ `ಗೆಳತಿ’ ಇರುತ್ತಾಳೆ. ನೀನು ಹೇಳುವ ಗೆಳತಿಯರು ಈ ವರ್ಗಕ್ಕೆ ಸೇರಿದವರಲ್ಲ ಎಂದು ಒಬ್ಬರು ವಿವರಿಸಿದರು.

“ಹಾಗಿದ್ದರೆ ನೀನು ನನ್ನ ಜೀವನದ ಸಂಗಾತಿಯನ್ನು ಹೇಗೆ ತಿಳಿದುಕೊಳ್ಳುವಿಯಾ?”

“ನನ್ನ ಹಿರಿಯರು ನನಗಾಗಿ ಈ ಕೆಲಸ ಮಾಡುತ್ತಾರೆ.”

“ಆಂ! ನೀನು ಮದಿವೆಯಾಗುವವಳನ್ನು ನಿನ್ನ ಹಿರಿಯರು ನಿನಗಾಗಿ ಆರಿಸುತ್ತಾರೆಯೇ?”

“ಹೌದು.”

“ಅಂದರೆ ನಿಮ್ಮ ದೇಶದಲ್ಲಿ ಚಿಕ್ಕವರ ಬದಲಾಗಿ ಹಿರಿಯರೇ `ಡೇಟಿಂಗ್’ ಮಾಡುತ್ತಾರೆ ಎಂದ ಹಾಗಾಯಿತು!”

ಎಲ್ಲರೂ ನಕ್ಕರು. ನನಗೆ ಅಸಮಾಧಾನವಾದರೂ ತೋರಗೊಡಲಿಲ್ಲ.

“ನನ್ನ ಕಿರಿಮಗನೂ ಕೂಡ ತನಗೆ ಬೇಕಾದ ಬಟ್ಟೆ–ಬರೆ, ಬೂಟುಗಳನ್ನು ತಾನೇ ಆರಿಸಿಕೊಳ್ಳುತ್ತಾನೆ. ಅಷ್ಟೊಂದು ಸ್ವಾತಂತ್ರ್ಯವಿದೆ ಇಲ್ಲಿ. ನಿನ್ನ ಪ್ರಿಯೆಯನ್ನು ಕೂಡ ಆರಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲವೇ ನಿನ್ನ ದೇಶದಲ್ಲಿ? ನಿನಗೆ ಏನೂ ಗುರುತುಪರಿಚಯವಿಲ್ಲದ, ನಿನ್ನ ಹಿರಿಯರು ಆರಿಸಿದ ಯಾವಳನ್ನೊ ಮದಿವೆಯಾಗುವೆಯಾ?”

“ಅದರಲ್ಲಿ ತಪ್ಪೇನಿದೆ? ಹಿರಿಯರಿಗೆ ಹತ್ತಾರು ಕನ್ಯಾಪಾಲಕರು ಬಂದು ತಮ್ಮ ಕನ್ಯೆಯ ರೂಪ–ವಿದ್ಯೆಗಳ ಬಗ್ಗೆ ನಿವೇದಿಸುತ್ತಾರೆ. ನಂತರ ವರನ ಪಾಲಕರು ತಮ್ಮ ಅಂತಸ್ತು, ಬೇಡಿಕೆಗಳನ್ವಯ ಯೋಗ್ಯ ಕನ್ಯೆಯನ್ನು ಆರಿಸುತ್ತಾರೆ … ”

“ಅಂಗಡಿಯಲ್ಲಿ ಹತ್ತು ಸೀರೆಗಳನ್ನು ನೋಡಿ ಒಂದನ್ನು ಆರಿಸುವ ಪದ್ಧತಿ ಎಳ್ಳಷ್ಟು ನನ್ನ ಮನಸ್ಸಿಗೆ ಬಂದಿಲ್ಲ.” ಎಂದು ತೀರ್ಮಾನ ಕೊಟ್ಟ. ಸೀರೆ ಮತ್ತು ಕನ್ಯೆಗಳನ್ನು ಒಂದೇ ತೆರನಾಗಿ ಕಂಡ ಈ ಪೆಚ್ಚು ಅಮೇರಿಕನ್ನರ ಬಗ್ಗೆ ನನಗೆ ತಿರಸ್ಕಾರವೆನಿಸದೇ ಇರಲಿಲ್ಲ. ಅಂತೆಯೇ ಸ್ವಲ್ಪ ಗಡಸುದನಿಯಲ್ಲಿ,

“ಕ್ಷಮಿಸಿ. ನೀವು ಅಮೇರಿಕನ್ನರು ಎಲ್ಲ ಜಗತ್ತನ್ನು ಒಂದೇ ಕಾಜಿನಿಂದ ನೋಡುವ ಪರಿಪಾಠ ಇಟ್ಟುಕೊಂಡಂತೆ ತೋರುತ್ತದೆ. ನಿಮಗೆ ಇನ್ನೊಬ್ಬರ ಸಾಮಾಜಿಕ–ಪದ್ಧತಿಗಳನ್ನು ತಿಳಿದುಕೊಳ್ಳುವ ಆಸ್ಥೆಯೂ ಇದ್ದಂತಿಲ್ಲ. ನಮ್ಮ ವಿವಾಹ–ಪದ್ಧತಿ ಸಾವಿರಾರು ವರ್ಷಗಳವರೆಗೆ ಒರೆಗಲ್ಲಿಗೆ ತಿಕ್ಕಿ ಎಲ್ಲ ರೀತಿಯಿಂದಲೂ ಯೋಗ್ಯವೆಂದು ತೀರ್ಮಾನ ಮಾಡಿದ ಪದ್ಧತಿ. ಪಾಲಕರು ಕನ್ಯೆಯ ಮನೆತನ, ಬೆಳೆದು ಬಂದ ರೀತಿ, ವಿದ್ಯೆ, ಕಲೆ, ನಡತೆ ಮೊದಲಾದವುಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿ ನಂತರ ತಾವೇ ನೋಡಿ, ಬಳಿಕ ಮಗನ ಒಪ್ಪಿಗೆ ಪಡೆಯುವುದು ರೂಢಿ. ಮಗನ ಒಪ್ಪಿಗೆಯಾಗದಿದ್ದರೆ ಇನ್ನೊಂದು ಕನ್ಯೆಯ ಶೋಧನೆ. ಕನ್ಯೆಯ ಪಾಲಕರೂ ಅವಳ ಒಪ್ಪಿಗೆ ಪಡೆಯುತ್ತಾರೆ. ನಮ್ಮ ಮದಿವೆಗಳಲ್ಲಿ ನಿಮ್ಮ ಮದಿವೆಗಳಿಗಿಂತ ಪರಸ್ಪರರ ಅನುಮತಿಗೆ ಹೆಚ್ಚಿನ ಅವಕಾಶವಿದೆ. ಅಲ್ಲದೇ ಹಿರಿಯರ ಅನುಭವ, ಸಂಸಾರದ ತಿಳವಳಿಕೆ ಲಾಭವೂ ನಮಗೆ ದೊರೆಯುತ್ತದೆ. ಇಂತಹ ಮದಿವೆ ಸಂಪೂರ್ಣವಾಗದೇ ಏನು?”

“ಮದಿವೆಯಾಗಲಿದ್ದ ಇಬ್ಬರು ಮುಖ್ಯ ವ್ಯಕ್ತಿಗಳು ಒಬ್ಬರನ್ನು ಇನ್ನೊಬ್ಬರು ಅರಿಯದ್ದರಿಂದ ಅವರ ಜೀವನ ಸುಗಮವಾಗಿ ನಡೆಯುವದೋ ಇಲ್ಲವೋ ಹೇಗೆ ತಿಳಿಯಬೇಕು? ಅದರಲ್ಲಿ ಸರಿಯಾಗಿ ಹೊಂದಿಕೆಯಾಗದಿದ್ದರೆ?”

“ಹಾಗಾದರೆ ನಿಮ್ಮ ವಿವಾಹ–ಪದ್ಧತಿಯನ್ನೇ ತೆಗೆದುಕೊಳ್ಳಿ. ಯುವಕನೊಬ್ಬ ಹತ್ತಾರು ಯುವತಿಯರೊಡನೆ `ಡೇಟ್’ (date) ಮಾಡಿ, ತನಗೆ ಯಾರು ಸರಿಯಾಗಿ ಹೊಂದಿಕೊಳ್ಳುತ್ತಾಳೆ (ಇದರಲ್ಲಿ ದೈಹಿಕ ಘಟಕವೇ ಮುಖ್ಯವಾಗಿರುತ್ತದೆ.) ಎಂದು ಪರೀಕ್ಷಿಸಿ ನೋಡುತ್ತಾನೆ. ಆತನು ಒಪ್ಪಿಕೊಂಡವಳನ್ನೆ ಮದಿವೆಯಾಗುತ್ತಾನೆ. ಇಷ್ಟು ಪರಿಶೀಲನೆಯ ತರುವಾಯವೂ ನಿಮ್ಮಲ್ಲಿ ಪ್ರತಿ ಐದು ಮದಿವೆಗಳಲ್ಲಿ ಒಂದು ವಿಚ್ಛೇದನೆಯಲ್ಲಿ ಕೊನೆಗೊಳ್ಳುತ್ತದೆ. ಏಕೆ? ದೈಹಿಕ ಆಕರ್ಷಣೆಯೇ ನಿಮ್ಮ ವಿವಾಹಗಳ ತಳಹದಿಯಾಗಿದೆ. ದೈಹಿಕ ಆಕರ್ಷಣೆ ಕಡಿಮೆಯಾದಾಗ ಇಲ್ಲವೇ ಬೌದ್ಧಿಕ ತಾಕಲಾಟ ಬಂದಾಗ ವಿವಾಹ–ವಿಚ್ಛೇದನೆಯೇ ಮಾರ್ಗವೆಂಬ ತೀರ್ಮಾನಕ್ಕೆ ಬರುತ್ತಾರೆ. ನಮ್ಮ ಮದಿವೆಗಳಲ್ಲಿ ಸಂಸ್ಕಾರಕ್ಕೆ ಹೆಚ್ಚು ಮಹತ್ವ ಕೊಡುವುದರಿಂದ, ದೈಹಿಕ ಆಕರ್ಷಣೆ ಕಡಿಮೆಯಾದರೂ ಪರಸ್ಪರ ತಿಳವಳಿಕೆ ಬೆಳೆಯುತ್ತದೆ. ನಮ್ಮಲ್ಲಿ ಒಬ್ಬರಿಗಾಗಿ ಇನ್ನೊಬ್ಬರು ಎಂಬ ಧೋರಣೆ ಇರುವುದರಿಂದ ತಮ್ಮ ಒಡನಾಡಿಯ ಸುಖಕ್ಕಾಗಿ ಇಬ್ಬರೂ ಪರಸ್ಪರ ಹೆಣಗಾಡುತ್ತಾರೆ. ಅದರಿಂದ ಪ್ರೀತಿ ಬೆಳೆಯುತ್ತದೆ; ತಾಳುತ್ತದೆ. ನಮ್ಮಲ್ಲಿ `ಹೊಲಿವುಡ್ ಸಂಸ್ಕೃತಿ’ಯನ್ನು ಅನುಸರಿಸುವ ನಟ–ನಟಿಯರನ್ನು ಬಿಟ್ಟರೆ ವಿವಾಹ–ವಿಚ್ಛೇದನೆಯ ಹೆಸರೇ ಇಲ್ಲ.”

ನನ್ನ ವಾದಕ್ಕೆ ಪ್ರತಿವಾದ ಹೂಡುವುದು ಉಚಿತವಲ್ಲವೆಂದು ಆಳವಾಗಿ ವಿಚಾರಿಸಿದ ಒಬ್ಬಿಬ್ಬರು ಹೇಳಿದರು:

“ಕ್ರಿಶ್, ನೀನು ಹೇಳುವುದು ಉಚಿತವಿದೆ. ಯಾಕೊ ನಾವು ಈ ದೆಸೆಯಲ್ಲಿ ವಿಚಾರಿಸಲೇ ಇಲ್ಲ. ನೀನು ಮಂಡಿಸುವ ವಿಚಾರ–ಪ್ರತಿಪಾದನೆ, ವಾದ ಮಾಡುವ ಠೀವಿ ನೋಡಿದರೆ ನೀನೊಬ್ಬ ಉತ್ತಮ ವಿವಾಹ–ಸಲಹೆಗಾರ (marriage consultant) ಆಗಬಹುದು. ಕೀಟ–ಶಾಸ್ತ್ರಜ್ಞನಾಗುವ ಬದಲು ನೀನು ಇದನ್ನೇ ಏಕೆ ಮಾಡಬಾರದು?”

“ಅಂತಹ ಉದ್ಯೋಗ ಕೈಕೊಂಡರೆ ನಮ್ಮ ದೇಶದಲ್ಲಿ ಉಪವಾಸ ಬಿದ್ದು ನರಳಬೇಕಾದೀತು.” ಎಂದ ನನ್ನ ಉತ್ತರಕ್ಕೆ ಮತ್ತೆ ಎಲ್ಲರೂ ನಕ್ಕರು.

ನಾವು ಮಾತಿನಲ್ಲಿ ಮುಳುಗಿದ್ದಾಗ, ಮನೆಯ ಯಜಮಾನಿ ಏನೋ ಅಮೂಲ್ಯ ವಸ್ತುಗಳನ್ನು ಕಳಕೊಂಡವಳಂತೆ ಬಾಡಿದ ಮುಖದಿಂದ, “ನನ್ನ ಕಾರ್ಯಕ್ರಮದ ಟಿಪ್ಪಣಿ ಸಿಗಲೊಲ್ಲದು” ಎಂದು ಗೊಣಗಿದಳು. ಬಂದ ಅತಿಥಿಗಳ ಸೈನ್ಯ, ಟಿಪ್ಪಣೆಯ ಶೋಧದಲ್ಲಿ ತೊಡಗಿತು. ಅರ್ಧತಾಸು ಹುಡುಕಿದ ನಂತರ ಪುಸ್ತಕ ಒಂದರಿಂದ ಹೊರ ಬಂದಿತು ಟಿಪ್ಪಣೆ. ಅದರಲ್ಲಿ, ಯಾರು ಎಲ್ಲಿ ಕೂಡ್ರಬೇಕು; ಯಾವ ಅಡಿಗೆ ಮೊದಲು ಬಡಿಸಬೇಕು ಮುಂತಾದವುಗಳ ವಿವರಗಳನ್ನು ನಮೂದಿಸಲಾಗಿತ್ತು. ಯಜಮಾನಿ ತಲೆ ಕರೆದುಕೊಳ್ಳುತ್ತ ಕೇಳಿದಳು:

“ಕ್ರಿಶ್, ನೀನು ಮಾಂಸ ತಿನ್ನುತ್ತೀಯಲ್ಲವೇ?”

“ತಿನ್ನುವ ಮನಸ್ಸಿದ್ದರೂ ತಿಂದು ರೂಢಿಯಿಲ್ಲ” ಎಂದು ಉತ್ತರಿಸಿದೆ. ಬಂದ ಅತಿಥಿಗಳಲ್ಲೊಬ್ಬ “ಹಿಂಡು(ಹಿಂದು)ಗಳು ಮಾಂಸವನ್ನೇಕೆ ತಿನ್ನುವುದಿಲ್ಲ? ನಿಮ್ಮ ಧರ್ಮ ಹಾಗೆ ಬೋಧಿಸುತ್ತದೆಯೇ?” ಅಧಿಕ ಪ್ರಶ್ನೆ ಮಾಡಿದ.

“ಹಾಗೇನೂ ಇಲ್ಲದಿದ್ದರೂ ನಮ್ಮಲ್ಲಿ ಹೆಚ್ಚಿನ ಜನ, ನಮ್ಮ ಜೀವನಕ್ಕಾಗಿ ಇನ್ನೊಂದು ಜೀವವನ್ನು ಹಿಂಸಿಸುವುದು ಅಧರ್ಮವಂದು ನಂಬುತ್ತಾರೆ. ಇನ್ನೂ ಕೆಲವರಿಗೆ ಕುರಿ, ಕೋಳಿ, ದನ–ಕರುಗಳ ಮಾಂಸ ತಿನ್ನಬೇಕೆಂದರೆ ಆತ್ಮೀಯತೆಯಿಂದ ಸಾಕಿ, ಸಲಹಿ ಬೆಳೆಸುವ ಪ್ರಾಣಿಗಳು ಕಣ್ಣೀರು ಸುರಿಸುತ್ತ ಅಸಹಾಯಕವಾಗಿ ನಿಂತ ಸನ್ನಿವೇಶ ಕಣ್ಣಿಗೆ ಕಟ್ಟಿದಂತಾಗಿ `ಬೇಡ’ ಎನ್ನಿಸುತ್ತದೆ. ಅದೇ ನಿಮಗೆ ಚೆನ್ನಾಗಿ ಮೇಯ್ದ ದಷ್ಟ–ಪುಷ್ಟವಾಗಿ ಬೆಳೆದ ದನ ನೋಡಿದಾಗ, ಖುರಗಳ ಮೇಲೆ ನಿಂತ ಮಾಂಸದ ಸವಿಯನ್ನು ನೆನೆಸಿಯೇ ಬಾಯಿ ನೀರೂರಬಹುದು ಇದು ಸಂಸ್ಕಾರಭೇದ. ನಮ್ಮ–ನಿಮ್ಮಲ್ಲಿ ಆಕಾಶಪಾತಾಳದಷ್ಟು ಅಂತರವಿದೆ.” ಎಂದು ನಾನು ಉತ್ತರಿಸಿದ ಕೂಡಲೇ ಇನ್ನೊಬ್ಬ ಅತಿಥಿ ವಿಚಾರಿಸಿದ:

“ಹಿಂಡುಗಳು(ಹಿಂದು)ಆಕಳು ಪವಿತ್ರವೆಂದು ಗೋಮಾಂಸವನ್ನಷ್ಟೆ ತಿನ್ನುವುದಿಲ್ಲವೆಂದು ತಿಳಿದಿದ್ದೆ. ನೀನು ಹೇಳಿದ್ದು ನೋಡಿದರೆ ಎಲ್ಲ ಮಾಂಸವೂ ಹೆಚ್ಚಿನ ಜನರಿಗೆ ತ್ಯಾಜ್ಯವೆನಿಸುತ್ತದೆ. ಹೀಗಿದ್ದಾಗ ನೀವು ಶರೀರಕ್ಕೆ ಅವಶ್ಯವಾದ ಪ್ರೋಟೀನುಗಳನ್ನು ಹೇಗೆ ಪಡೆಯುತ್ತೀರಿ?”

“ಸಮತೂಕ ಆಹಾರದ ಬಗ್ಗೆ ನಿಮ್ಮಷ್ಟು ನಾವು ಕಾಳಜಿ ವಹಿಸುವುದಿಲ್ಲ. ನಮಗೆ ಬಾಯಿ–ರುಚಿ ಮುಖ್ಯ. ಅಲ್ಲದೇ ಹಾಲು–ಹೈನ, ದ್ವಿದಳಗಳನ್ನು ಸಾಕಷ್ಟು ಸೇವಿಸುವುದರಿಂದ ಪ್ರೋಟಿನ ಕೊರತೆ ತುಂಬಿಬರುತ್ತದೆ.” ಎಂದು ನಾನು ರಕ್ಷಿಸಿಕೊಂಡೆ. ಯಜಮಾನಿ ನಡುವೆಯೇ ಕೇಳಿದಳು:

“ಕ್ರಿಶ್, ವಿನೋದದ ಮಾತಿರಲಿ, ನಿನಗೆ ಬೀಫ್ ಅಡಿಗೆ ಬಿಟ್ಟು ಉಳಿದದ್ದು ನಡೆಯುತ್ತದಲ್ಲವೆ?”

“ಬೀಫ್ ಕೂಡಾ ನಡೆಯುತ್ತದೆ. ಹಡಗದಲ್ಲಿ ತಿಂದು ಆಗಿದೆ.” ಎಂದು ಒಪ್ಪಿಕೊಂಡೆ. ಅದಕ್ಕೆ ಯಜಮಾನ.

“ಶಾಂತಂ ಪಾಪಂ! ಅದು ಹೇಗೆ ತಿಂದೇ? ನೀನು ಹಿಂದೂ ಅಲ್ಲವೇ? ಬೀಫ್ ತಿನ್ನುವುದು ಪಾಪಕೃತ್ಯವಲ್ಲವೇ?” ಎಂದು ಕೆಣಕಿದ. ಅದಕ್ಕೆ ನಾನು,

“ನಮ್ಮ ಪುರಾಣಗಳಲ್ಲಿ ಆಕಳುಗಳು ಕುಡಿಯಲು ಹಾಲನ್ನೂ ಸಾರಿಸಲು, ಉರಿಸಲು ಸೆಗಣಿಯನ್ನು ಕೊಡುವದರಿಂದ ಅವುಗಳನ್ನೂ ಭಕ್ಷಿಸಬಾರದೆಂದು ಹೇಳಿದೆ. ಅಮೇರಿಕನ್ ಮಾಂಸದ ದನಗಳು (beef-cattle) ಇವು ಹಿಂಡುವದಿಲ್ಲ, ಊಳುವುದಿಲ್ಲ, ಮಾಂಸಕ್ಕಾಗಿ ಒಂದೆಡೆ ಕಟ್ಟಿ, ಮೇವು, ಕಾಳು–ಕಡ್ಡಿ ಹಾಕಿ ಚೆನ್ನಾಗಿ ಮೇಯಿಸಿ, ಇವನ್ನು ಕೊಬ್ಬಿಸಿರುತ್ತಾರೆ. ಯಾವ ಕೆಲಸಕ್ಕೂ ಬಾರದವುಗಳು. ಆದ್ದರಿಂದ ನಮ್ಮ ಪುರಾಣದ ಮಾತುಗಳು ನಿಮ್ಮ ದನಗಳಿಗೆ ಅನ್ವಯಿಸುವುದಿಲ್ಲ.” ಎಂದು ಸಮರ್ಥಿಸಿದೆ. ಈ ಉತ್ತರ ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು.

“Only Indian cows are holy” (ಕೇವಲ ಭಾರತೀಯ ಆಕಳುಗಳು ಅಷ್ಟೇ ಪವಿತ್ರ) ಅಮೇರಿಕನ ಆಕಳುಗಳು ಅಲ್ಲ–ಅಲ್ಲವೇ? ನೀನು ಬಲೇ ಹಾಸ್ಯಪ್ರಿಯನಾಗಿದ್ದೀ, ಚತುರ, ಮಾತಿನಲ್ಲಿ ನಿನ್ನನ್ನು ಯಾರು ಸೋಲಿಸಬಲ್ಲರು? ಹೋಗಲಿ, ಕಾಮಧೇನುವಲ್ಲದ ಗೋಮಾಂಸ ಭಾರತೀಯರು ತಿನ್ನುವದಾದರೆ ಗೋದಿಯ ಜೊತೆಗೆ ಅದನ್ನೂ ಭಾರತೀಯರಿಗೆ ನಾವು ಕೊಡಬಹುದಲ್ಲಾ?” ಎಂದು ಮತ್ತೊಬ್ಬರು ಮಾತು ಮುಂದೆ ಜಗ್ಗಿದರು. ಅಷ್ಟರಲ್ಲಿ ಊಟಕ್ಕೆ ಕರೆ ಬಂದಿತು. ಯಜಮಾನಿ ಒಬ್ಬೊಬ್ಬರನೇ ಕರೆದು ಅವರೆಲ್ಲ ಎಲ್ಲೆಲ್ಲಿ ಕುಳಿತುಕೊಳ್ಳಬೇಕೆಂದು ತೋರಿಸಿದಳು. ಪ್ರತಿಯೊಂದು ಕುರ್ಚಿಯ ಮೇಲೂ ಆಯಾ ಅತಿಥಿಯ ಹೆಸರಿತ್ತು. ದೊಡ್ಡದೊಂದು ಟೇಬಲ್; ನಟ್ಟನಡುವೆ ಅಲಂಕಾರಭರಿತವಾದ ಮಿಣಮಿಣಗುವ ಮೇಣಬತ್ತಿಗಳು. ಸುಂದರವಾಗಿ ಅರಳಿದ. ಓರಣವಾಗಿ ಜೋಡಿಸಿದ ಹೂಗೊಂಚಲುಗಳು. ಪ್ರತಿಯೊಬ್ಬರ ಮುಂದೆಯೂ ಪ್ಲೇಟು, ಚಮಚ, ಮುಳ್ಳು–ಚಮಚ, ಚಾಕುಗಳು, ಒಂದೊಂದು ಕಾಗದ ಟುವಾಲು. ಎಲ್ಲಕ್ಕೂ ಮೊದಲು `ಪಂಚ್’ (ಮಿಶ್ರಿತ ಹಣ್ಣಿನ ರಸ) ಬಂದಿತು. ಅದನ್ನು ಸೇವಿಸುತ್ತಿದ್ದಂತೆ ಯಜಮಾನಿ ಎದ್ದು ನಿಂತು ಸಣ್ಣದೊಂದು ಭಾಷಣ ಕುಟ್ಟಿದಳು. ಅಂತರಾಷ್ಟ್ರೀಯ ವಿದ್ಯಾರ್ಥಿಯೊಬ್ಬ ಅತಿಥಿಯಾಗಿ ಬಂದದ್ದಕ್ಕೆ ತನ್ನ ಸಂತೋಷವನ್ನು ವ್ಯಕ್ತಪಡಿಸಿದಳು. ನಂತರ ತನ್ನ ಸ್ಥಳದಲ್ಲಿ ಬಂದು, “ಇಂದು ದಯಪಾಲಿಸಿದ ರೊಟ್ಟಿಗಾಗಿ” ದೇವರನ್ನು ಅಭಿನಂದಿಸಿದಳು. ಅವಳು ಬಡಿಸಿಕೊಳ್ಳಲಾರಂಭಿಸಿದ ನಂತರ ಪ್ರತಿಯೊಬ್ಬರು ಬಡಿಸಿಕೊಳ್ಳಲಾರಂಭಿಸಿದರು. ಅಡಿಗೆ ಸಪ್ತವರ್ಣಗಳಿಂದ ರಂಜಿತವಾಗಿತ್ತು. ಅಂತೆಯೇ ಕೊಟ್ಟ ಪ್ಲೇಟಿನ ತುಂಬ ಬಡಿಸಿಕೊಂಡೆ. ಹಲವು ಹಸಿ ತರಕಾರಿಗಳ ಸಮೂಹದಂತಿದ್ದ `ಸೆಲೆಡ್’, ಬಣ್ಣಬಣ್ಣದ ಆದರೆ ಸುಗಂಧ, ರುಚಿ ಎರಡೂ ಇಲ್ಲದ ಮಾಂಸ, ಬ್ರೆಡ್, ಬೆಣ್ಣೆಗಳಿದ್ದವು ಯಾವುದರ ರುಚಿಯೂ ನಾಲಿಗೆಗೆ ಹಿಡಿಸಲಿಲ್ಲ. ಎಲ್ಲರೂ ಎರಡು–ಮೂರು ಬಾರಿ ಬಡಿಸಿಕೊಂಡರೆ, ನನಗೆ ಮೊದಲು ಬಡಿಸಿಕೊಂಡದ್ದನ್ನೇ ಗಂಟಲೊಳಕ್ಕೆ ಇಳಿಸಬೇಕಾದರೆ ಸಾಕುಬೇಕಾಯಿತು. ಊಟದ ಕೊನೆಯಲ್ಲಿ ಹಾಲು, ಸಕ್ಕರೆ ಕಾಣದ ಕಹಿ ಕಾಫಿ ಬಂದಿತು. ಒಂದು ಗುಟುಕೂ ಕುಡಿಯಲಾಗಲಿಲ್ಲ. ಊಟದ ನಂತರ ಬಂದ ಐಸ್ಕ್ರೀಮ್ ಮನಸ್ಸಿಗೆ ಸ್ವಲ್ಪ ನೆಮ್ಮದಿ ಕೊಟ್ಟಿತು. ಊಟದ ನಂತರ ಇನ್ನಷ್ಟು ಹರಟೆಯಾಯಿತು. ಮನೆಗೆ ಹೊರಟು ನಿಂತಾಗ ಬೇಡಬೇಡವೆಂದೂ ಯಜಮಾನಿ ಮಾಂಸದ ಅಡಿಗೆಯ ಪೊಟ್ಟಣವನ್ನು ಕಟ್ಟಿಕೊಟ್ಟಳು. ಮನೆ ಮುಟ್ಟಿದಾಗ ಮಧ್ಯರಾತ್ರಿಯಾಗಿ ಹೋಗಿತ್ತು. ಹಸಿದ ಹೊಟ್ಟೆ ಹಸಿದಂತೇ ಇನ್ನೂ ಇತ್ತು. ಒಂದಿಸ್ಟು ಉಪ್ಪಿಟ್ಟು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳಬೇಕಾಯಿತು. ಕೊಟ್ಟ ಮಾಂಸದ ಅಡಿಗೆ ನಾಲ್ಕೈದು ದಿನಗಳ ವರೆಗೆ `ಫ್ರಿಜ್’ದಲ್ಲಿ ಹಾಗೇ ಹೊರಳಾಡುತ್ತ ಬಿದ್ದಿತ್ತು.

ಆಮೇಲಿನ ದಿನಗಳಲ್ಲಿ ಮೇಲಿಂದ ಮೇಲೆ ಇಂಥ ಆಮಂತ್ರಣಗಳು ಬರುತ್ತಿದ್ದವು. ಮತ್ತೆ–ಎರಡು ಮೂರು ಆಮಂತ್ರಣಗಳನ್ನು ಸ್ವೀಕರಿಸಿ ಹೋದಾಗ ಎಲ್ಲೆಡೆಗೂ ಒಂದೇ ತರದ ಪ್ರಶ್ನೆ, ಒಂದೇ ತೆರನ ಅಡಿಗೆ, ಒಂದೇ ರೀತಿಯ ಅತಿಥ್ಯ; ಮನೆಗೆ ಬಂದ ಮೇಲೆ ಉಪ್ಪಿಟ್ಟಿನ ಕಾರ್ಯಕ್ರಮ, ಇವುಗಳಿಂದ ಮನಸ್ಸು ಬೇಸರಕ್ಕೆ ಇಟ್ಟುಕೊಂಡಿತು. ಇವೆಲ್ಲ ಔತಣಗಳು, ಬಂದ ಹೊರನಾಡಿನವರನ್ನು ಕರೆದು ತಮ್ಮ ಪ್ರತಿಷ್ಠೆಯನ್ನು ಸಮಾಜದಲ್ಲಿ ಬೆಳೆಸುವ ಸಾಧನವಾಗಿದೆಯೆಂದು ತಿಳಿದಾಗ ಇಂತಹ ಆಮಂತ್ರಣಗಳನ್ನು ಸ್ವೀಕರಿಸುವುದನ್ನೆ ಬಿಟ್ಟು ಬಿಟ್ಟೆ.

ಯಾಂಕಿ ಗೆಳೆಯರು