ತಾನಸೇನನಿಂದ ಭೀಮಸೇನನವರೆಗೆ ಉತ್ತರಾದಿ ಸಂಗೀತವು ನಡೆದುಬಂದ ಹಾದಿ ಭಾಗ ೫

೪೦ ವರ್ಷಗಳ ಮೊದಲು ಮೋಟಾರಿನಲ್ಲಿ ಹೋದಾಗ ಈ ಊರುಗಳಲ್ಲಿಯ ‘ಬುಜ಼ುರ್ಗ’ ಮುದುಕರು ಈ ಘರಾಣೆಗಳ ‘ಕಿಸ್ಸೆ’ ಕತೆಗಳನ್ನು ರಸವತ್ತಾಗಿ ಬಣ್ಣಿಸುವವರಿದ್ದರು.  ಧ್ರುಪದ್ ಪರಂಪರೆಯ ‘ಬಂಡಾರ್’ ಮನೆತನ ಬಿಕಾನೇರ ಬಳಿಯಲ್ಲಿದ್ದರೆ, ಧ್ರುಪದ್ ಪದ್ಧತಿಯ ಮೂಲ ‘ನೌಹಾರ’ ಜಯಪುರ ಬಳಿಯಲ್ಲಿದೆ.  ಡಾಗರ್ ಬಾಣಿಯ ಮೂಲ ಅಲಿಗಡದ ಪಕ್ಕದ ದಂತೂರಿನಲ್ಲಿ ಸಿಗುತ್ತದೆ.  ಆಗ್ರಾ, ಅತ್ರೋಲಿ, ಖುರ್ಜಾ ಕೈರಾನಾ, ಸಿಕಂದರ್ ಪುರ್, ಲೋಹಾರಿ ತಳವಂಡಿ ಇವೆಲ್ಲ ಗಾಯಕರ ಸುಗ್ಗಿ ಪ್ರದೇಶವಷ್ಟೇ ಅಲ್ಲ, ಭಾರತದ ಖ್ಯಾತ ಪೈಲವಾನರ ಗರ ಸ್ಥಾನವೂ ಹೌದು!  ಮೈಹರ್, ರೇವಾ, ಸತನಾದ ಪಕ್ಕದಲ್ಲಿಯ ಒಂದು ಚಿಕ್ಕ ಸಂಸ್ಥಾನ.  ಇದು ಮೈಹರ್ ಘರಾಣೆ ಆದದ್ದು ಆಗಿದ್ದು ಅಲ್ಲಾವುದ್ದೀನರ ಕೃಪೆಯಿಂದ.  ಇದೆಲ್ಲವನ್ನೂ ಬರೆಯುವ ಕಾರಣವೆಂದರೆ, ‘ಇಟ್ಟಾವಾ’ ಪರಂಪರೆ, ಇಮದಾದ ಮನೆತನಕ್ಕೆ ಸೇರಿದ ವಿಲಾಯತ್ ಖಾನ್ (ಸಿತಾರ್) ಇವರ ಶಿಷ್ಯರೆಲ್ಲ ಸೇರಿ ಅವರು ಜೀವಂತವಿದ್ದಾಗಲೇ, ‘ವಿಲಾಯತ್ ಖಾನ್ ಘರಾಣೆ’ಯನ್ನು ಸ್ಥಾಪಿಸುವ ಆಟಾಟೋಪವನ್ನು ನಡೆಸಿದ್ದರು.  ಇಂತಹ ರಾಜಕಾರಣ ನಡೆದಾಗ ಭೀಮಸೇನ ಜೋಶಿಯವರು ಹೇಳಿದ ಮಾತು ಎಷ್ಟು ಸತ್ಯವೆಂದೆನಿಸುತ್ತದೆ. ಸತ್ಕಾರ ಒಂದರಲ್ಲಿ ಉತ್ತರಿಸುವಾಗ ‘ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಗುರುಗಳು ವಿದ್ಯಾದಾನ ಮಾಡಿದುದರಿಂದ ಇಂದು ನಾವು ಲಕ್ಷಗಟ್ಟಲೆ ಸಂಪಾದಿಸುತ್ತಿದ್ದೇವೆ’ ಎಂದರು. ಕೊಳಲಿನಲ್ಲಿ ಪನ್ನಾಬಾಬು ಘರಾಣೆ, ಸಂತೂರಿನಲ್ಲಿ ಶಿವಜೀ (ಶಿವಕುಮಾರ ಶರ್ಮಾ) ಘರಾಣೆ ಇವೆಲ್ಲ ಮಾನವನ ‘ಹಾಂಜಿ’ ಸ್ವಭಾವದ ಸಂಕುಚಿತ ದೃಷ್ಟಿಕೋನದ ಮತ್ತೊಂದು ರೂಪವನ್ನು ಎತ್ತಿ ತೋರಿಸುತ್ತದೆ.

ಧ್ರುಪದ್ ಮತ್ತು ಖಯಾಲ್ ಎಂಬ ಉತ್ತರಾದಿ ಪ್ರಣಾಲಿಯಲ್ಲಿ ದಕ್ಷಿಣದಲ್ಲಿ ಪ್ರಚಲಿತವಿದ್ದ ‘ಜಾವಳಿ’ ಪ್ರಕಾರದ ಠುಮರಿ ಸಂಗೀತಕ್ಕೂ ಪರಂಪರೆಗಳಿವೆ.  ಇವುಗಳಲ್ಲಿ ‘ಬನಾರಸ್ ಘರಾಣೆ’, ‘ಪಂಜಾಬ್ ಘರಾಣೆ’ ಮತ್ತು ‘ಲಖನೌ ಘರಾಣೆ’ ಪ್ರಚಾರದಲ್ಲಿವೆ.  ಪಂಜಾಬ್ ಘರಾಣೆಯ ಠುಮರಿಯ ಭಾರ ಖ್ಯಾಲ್ ಗಾಯಕ ಬಂಗಾಲದ ಅಜಯ್ ಚಕ್ರವರ್ತಿ ಹೊತ್ತರೆ, ಬನಾರಸ್ ಘರಾಣೆಯ ಸಿದ್ಧೇಶ್ವರಿ ದೇವಿ, ಗಿರಿಜಾ ದೇವಿ ಇಡೀ ಭಾರತದಲ್ಲಿ ಹೆಸರನ್ನು ಮಾಡಿದ್ದಾರೆ.  ಲಖನೌ ಘರಾಣೆಯ ಬೇಗಂ ಅಖ್ತರ್ ಅಥವಾ ಅಖ್ತರಿ ಬಾಯಿಯವರ ಹೆಸರೆತ್ತದೆ ಯಾರೂ ಠುಮರಿಯ ವಿಷಯದಲ್ಲಿ ಭರತವಾಕ್ಯವನ್ನು ನುಡಿಯುವುದು ಅಶಕ್ಯ.  ಮರಾಠಿಗರಿಗೆ ಠುಮರಿ ಹಾಡಲು ಬರುವುದಿಲ್ಲ, ಕನ್ನಡಿಗರಿಗೆ ಮರಾಠೀ ಉಚ್ಚಾರದ ದಾಂಧಲೆ ಇದ್ದಾಗ ಉರ್ದು ಪದ್ಯವನ್ನು ಹೇಗೆ ಹಾಡಬಲ್ಲರು? ಇದಕ್ಕೆಲ್ಲ ಉತ್ತರ ಕೊಟ್ಟದ್ದು ಭೈಯ್ಯಾ ಗಣಪತರಾವ್ ಎಂಬ ರಾಜ ಘರಾಣೆಯ ಹಾಡುಗಾರ.  ಇವರಿಂದಲೇ ಠುಮರಿ ಇಡೀ ಹಿಂದುಸ್ಥಾನದಲ್ಲಿ ಪ್ರಚಲಿತಗೊಂಡಿತು.  ಇವರ ತಾಯಿ ಚಂದ್ರಭಾಗಾದೇವಿ, ಗುರು ಸಾದಿಕ ಅಲಿ.  ಧ್ರುಪದ್, ಟಪ್ಪಾ, ಖಯಾಲ್ ಇವನ್ನೆಲ್ಲಾ ಕಲಿತು ಗಣಪತರಾಯರು ಠುಮರಿಯ ಖಾಸಾ ಅಂಗವಾದ ‘ಖಟಕಾ’ ಮತ್ತು ‘ಮುರುಕಿ’ಗಳನ್ನು ತಮ್ಮ ಕಂಠದಲ್ಲಿಳಿಸಿಕೊಂಡಿದ್ದರು.  ಇವರ ಬಗ್ಗೆ ‘ಖಯಾಲ್ ಗಾಯನದಲ್ಲಿ ಸದಾರಂಗನಂತೆ, ಠುಮರಿಯಲ್ಲಿ ಗಣಪತರಾವ್’ ಎಂಬ ಮಾತು ರೂಢಿಯಲ್ಲಿತ್ತು.  ಇವರ ಶಿಷ್ಯರಲ್ಲಿ ಸಜ್ಜಾದ ಹುಸೇನ್, ಗೌಹರಜಾನ್ ಆಗ್ರೆವಾಲಿ ಮಲಕಾಜಾನ ಮತ್ತು ಜದ್ದನ್ ಬಾಯಿ (ಚಿತ್ರಪಟ ತಾರೆ ನರ್ಗೀಸ್ ಅವರ ತಾಯಿ) ಇದ್ದಾರೆ. ಇವರ ಶಿಷ್ಯ ಮೌಜುದ್ದೀನ್ ೧೯೨೦-೪೦ರಲ್ಲಿ ಠುಮರಿ ಸಾಮ್ರಾಟರೆಂಬ ಹೆಸರನ್ನು ಗಳಿಸಿದ್ದರು. ೧೯೧೫ರಲ್ಲಿ ಭೈಯ್ಯಾ ಗಣಪತರಾವ್ ಜೋಧಪುರದಲ್ಲಿ ತೀರಿಕೊಂಡರು.  ಕರ್ನಾಟಕ, ಮಹಾರಾಷ್ಟ್ರದಲ್ಲಿ ಠುಮರಿ ಪ್ರಚಲಿತವಿದ್ದರೂ, ಇಲ್ಲಿಯ ಠುಮರಿಗಳಿಗೆ ಲಾವಣಿ ಲೋಕಸಂಗೀತದ ಒಗ್ಗರಣೆ ಇರುತ್ತದೆ.  ಉರ್ದು ಮತ್ತು ಪರ್ಶಿಯನ್ ಶಬ್ದಗಳ ಉಚ್ಚಾರ ಕನ್ನಡಿಗರೂ, ಮರಾಠಿಗರೂ ಸರಿಯಾಗಿ ಉಚ್ಚರಿಸದೇ ಹಾಡುತ್ತಿದ್ದುದರಿಂದ ಶೋಭಾ ಗುರ್ಟು ಬಿಟ್ಟು ಈ ಪ್ರಣಾಲಿಯಲ್ಲಿ ಯಾರೂ ಮುಂದೆ ಬರಲಿಲ್ಲ ಎಂಬುದು ದುಃಖದ ವಿಷಯ.

ಉತ್ತರಾದೀ ಸಂಗೀತ ಪ್ರಣಾಲಿಯಲ್ಲಿ ಪಕ್ಕವಾದ್ಯಗಳ ಅಂದರೆ ಪಖಾವಜ, ತಬಲಾ ಮತ್ತು ಇತರ ವಾದ್ಯಗಳಾದ ಸಿತಾರ್, ಸರೋದ್, ಬಾನ್ಸುರಿ (ಕೊಳಲು) ಮತ್ತು ಇತ್ತೀಚಿನ ಸಂತೂರ್ ಇವುಗಳಿಗೂ ಪರಂಪರೆ ಇದೆ.  ತಾನಸೇನನ ವಂಶಜರು ಬೀನ್‌ಕಾರರಾಗಿದ್ದು ಇವರ ವಂಶಜರೇ ಇಂದು ಸಿತಾರ್ ಮತ್ತು ಸರೋದ್ ವಾದ್ಯಗಳಲ್ಲಿ ಹೆಸರುಮಾಡಿದ್ದಾರೆ.  ರಾಮಪುರದ ಮೈಹರ್ ಘರಾಣೆಯ ಅಲ್ಲಾವುದೀನ ಖಾನ ಗಾಯನದಲ್ಲಿ ಪ್ರಾವೀಣ್ಯವನ್ನು ಪಡೆದು, ೧೦-೧೫ ವಾದ್ಯಗಳನ್ನು ಬಾರಿಸುತ್ತಿದ್ದರೂ, ಸರೋದ್ ವಾದ್ಯವನ್ನೇ ತನ್ನದಾಗಿ ಮಾಡಿಕೊಂಡರು.  ಇಟ್ಟಾವಾ ಪರಂಪರೆಯ ಸಿತಾರ್ ವಾದಕ ವಿಲಾಯತ ಖಾರು, ಸೂಫಿ ಸಂತ ಇನಾಯತ ಖಾನರ ಮಗ.  ಕಲಿತದ್ದು ಧ್ರುವತಾರಾ ಜೋಶಿ ಎಂಬ ಇನಾಯತ ಖಾನರ ಶಿಷ್ಯರಲ್ಲಿ.  ಈಗಿನ ಖ್ಯಾತ ಸರೋದ್ ವಾದಕ ಅಮಜಾದ ಅಲಿ ೮ ವರ್ಷದವರಿದ್ದಾಗ ತಂದೆ ಹಫೀಜ ಅಲಿ ತೀರಿಕೊಂಡರು.  ಮುಂದೆ ಅಲ್ಲಿ ಇಲ್ಲಿ, ಅಲಿ ಅಕಬರ್ ಖಾನರ ಬಳಿ ಕಲಿತು ಮುಂದೆ ಬಂದರು. ತಮ್ಮ ಘರಾಣೆಗೆ ‘ಬಂಗಶ್’ ಘರಾಣೆ ಎಂದು ನಾಮಕರಣ ಮಾಡಿದರು.  ಮೈಹರ್ ಘರಾಣೆಯ ಪಂಡಿತ ರವಿಶಂಕರರ ಶಿಷ್ಯ, ಖ್ಯಾತ ವಿಶ್ವಮೋಹನ ಭಟ್ಟರು ಪಾಶ್ಚಾತ್ಯ ವಾದ್ಯವಾದ ಗೀಟಾರಿಗೆ  ಕೊಂಚ ಬದಲಾವಣೆಯನ್ನು ಮಾಡಿ ಅದಕ್ಕೆ ‘ಮೋಹನವೀಣಾ’ ಎಂದು ಹೆಸರನ್ನು ಇಟ್ಟಿದ್ದ್ದಾರೆ.

ಭಾತ್‌ಖಾಂಡೆಯವರಿಗೆ (೧೮೬೦-೧೯೩೭) ಉತ್ತರಾದಿ ಸಂಗೀತದ ವೈಯ್ಯಾಕರಣಿ (ವ್ಯಾಕರಣ) ಅಥವಾ ಪಾಣಿನಿ ಎಂಬ ಉಪಾಧಿ ಇದೆ.  ಇವರು ಮೊದಲು ಸಿತಾರ್ ಕಲಿತು ನಂತರ ಧ್ರುವಪದ ಮತ್ತು ಖಯಾಲ್ ಕಲಿತರು.  ಆದರೆ ವಿಧಿಲಿಖಿತ ಬೇರೆಯೇ ಇತ್ತು. ಕೆಲ ಗೆಳೆಯರ ಸಹಾಯದಿಂದ ಮತ್ತು ಫಾರ್ಸಿ ಉತ್ತೇಜಕ ಮಂಡಳಿಯ ಧನಸಹಾಯ ಹಾಗೂ ಸಕ್ರಿಯ ಕಾರ್ಯಗಳಿಂದ ಇಡೀ ಉತ್ತರಾದಿ ಸಂಗೀತ ಪ್ರಣಾಲಿಯನ್ನು ವೈಜ್ಞಾನಿಕ ದೃಷ್ಟಿಕೋಣದಿಂದ ಅಭ್ಯಸಿಸಿ ಅದಕ್ಕೊಂದು ಹೊಸ ಆಯಾಮ ಕೊಟ್ಟ ಮೇರು ಮೇಧಾವಿ ಇವರು.  ಹಲವು ಬಾರಿ ದೇಶಾಟನೆ ನಡೆಸಿ, ಹಳ್ಳಿಯಿಂದ ದಿಲ್ಲಿಯವರೆಗೆ ಇತಿಹಾಸ ಸಂಶೋಧಕನಂತೆ ದಿನರಾತ್ರಿ ದುಡಿಯುವಲ್ಲ್ಲಿ ಮುಳುಗಿದವರು. ಆದರೆ ನಿರಕ್ಷರಕುಕ್ಷಿ ಆದರೂ ಅತ್ಯಂತ ಜ್ಞಾನಿಗಳಾಗಿ ಸಂಗೀತದಲ್ಲಿ ಅವ್ವಲ್ ಸ್ಥಾನವನ್ನು ಪಡೆದ ಉಸ್ತಾದ್‌ರೊಂದಿಗೆ ಬೆರೆತು ಅವರ ರಾಗ ಮತ್ತು ಬಂದಿಶಗಳ ಭಂಡಾರವನ್ನು ಅರಿತುಕೊಂಡರು. ಇಷ್ಟೇ ಅಲ್ಲ ಈ ರಾಗ ಸಂಗೀತಕ್ಕೆ  ಸ್ವರಗಳ ಭಾಷೆಯಲ್ಲಿ ನೀಡಿದರು.  ಮತ್ತು ಹತ್ತು ಥಾಟುಗಳಲ್ಲಿ ವಿಭಜನೆ ಮಾಡಿದರು. ಇವರು ಬರೆದ ‘ಹಿಂದೂಸ್ತಾನಿ ಸಂಗೀತ ಪದ್ಧತಿ’ಯ ೫ ಭಾಗಗಳು ಉತ್ತರಾದಿ ಪ್ರಣಾಲಿಯ ಇಂದಿನ ಕೈಪಿಡಿಗಳು.  ಭಾತಖಾಂಡೆಯವರ ಈ ಕೆಲಸವನ್ನು ಮುಂದುವರಿಸಿದವರು ಅವರ ಶಿಷ್ಯ ಶ್ರೀಕೃಷ್ಣ ರತನಜನಕರ್ ಇವರು.  ಆ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತ್ತು. ಆಗಿನ ಪ್ರಸಾರ ಮಾಧ್ಯಮದ ಸಚಿವರಾದ ಬಿ.ವಿ. ಕೇಸಕರರು ಇವರ ಶಿಷ್ಯರು. ಹೀಗಾಗಿ ಆಕಾಶವಾಣಿಯಲ್ಲಿ ಲೋಕಾಶ್ರಯವಲ್ಲದೇ, ಇವರ ಪರಂಪರೆಗೆ ‘ಸರಕಾರದ ಆಶ್ರಯ’ವೂ ಸಿಕ್ಕಿತು.  ಬೇರೆ ಪ್ರಣಾಲಿಯ ಕುಶಲ ಗಾಯಕರನ್ನು ಆಡಿಷನ್‌ಗೆ ಕರೆಸಿ ಇತರ ಕಲಾವಿದರ ಕೋಪಕ್ಕೆ ತುತ್ತಾದರು.  ರಾಷ್ಟ್ರೀಯ ಪ್ರಸಾರ ಮಾಧ್ಯಮಕ್ಕೆ ಒಂದು ಹೊಸ ದಿಕ್ಕನ್ನು ಕೊಟ್ಟರೂ ಕೇಸಕರ್ ಅವರಿಗೆ ತುಂಬ ನೋವು ಕೊಟ್ಟದ್ದು, ಖ್ಯಾತ ಕಲಾವಿದರೆಲ್ಲ ಸೇರಿ ಆಕಾಶವಾಣಿಗೆ ಬಹಿಷ್ಕಾರವನ್ನು ಹಾಕಿದಾಗ. ಈ ಕಲಾಕಾರ ಮಂಡಳಿಯ ನೇತೃತ್ವವನ್ನು ಮಲ್ಲಿಕಾರ್ಜುನ ಮನ್ಸೂರ, ಕೇಸರಬಾಯಿ, ಮೋಗುಬಾಯಿ, ಗಂಗೂಬಾಯಿ ಮುಂತಾದವರು ವಹಿಸಿಕೊಂಡಿದ್ದರು.

ಭೀಮಸೇನರನ್ನು ಕಿರಾನಾ ಪರಂಪರೆಯಲ್ಲಿ ಸೇರಿಸಿದ್ದು ಅವರು ಸವಾಯಿ ಗಂಧರ್ವರ ಶಿಷ್ಯರೆಂದು. ಆದರೆ ಸ್ವಸಾಮರ್ಥ್ಯದಿಂದ ತಮ್ಮ ಗಾಯನ ಶೈಲಿಯಲ್ಲಿ, ಕಿರಾನಾ ತಳಹದಿಯನ್ನು ಭದ್ರವಾಗಿಟ್ಟು ಎಂತಹ ಬದಲಾವಣೆಯನ್ನು ಮಾಡಿದ್ದಾರೆ ಎಂಬುದಕ್ಕೆ ಭೀಮಸೇನ ಜೋಶಿಯವರ ‘ಹಿಂದಿನ’ ೩ ನಿಮಿಷದ ರಿಕಾರ್ಡು, ಅದೇ ರಾಗದಲ್ಲಿಯ ಸವಾಯಿ ಗಂಧರ್ವರ ೩ ನಿಮಿಷದ ರಿಕಾರ್ಡು ಮತ್ತು ಇತ್ತೀಚಿನ ‘ಸ್ವರಾಧಿರಾಜ’ ಧ್ವನಿಸುರುಳಿಗಳನ್ನು ಅಭ್ಯಸಿಸಿದರೆ ಒಂದು ಮಾತು ನಿಶ್ಚಿತವಾಗಿ ಮುಂದೆ ಬರುತ್ತದೆ. ೧೯೪೦ರ ಅವರ ಹಾಡುಗಾರಿಕೆಯಲ್ಲಿ ಸವಾಯಿ ಗಂಧರ್ವರ ಛಾಪು ಶೇಕಡಾ ೮೦ರಷ್ಟು ಇದ್ದರೆ, ಅವರ ಇತ್ತೀಚಿನ ಅದೇ ರಾಗದ ಧ್ವನಿಸುರುಳಿಗಳಲ್ಲಿ ಬೇರೆ ಬೇರೆ ಪರಂಪರೆಗಳನ್ನು ಎಷ್ಟು ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ ಎಂಬ ಮಾತು ಸ್ಪಷ್ಟವಾಗುತ್ತದೆ. ಅವರ ‘ಲಲಿತಾಗೌರಿ’ಯಲ್ಲಿ ಕೇಸರಬಾಯಿ ಇಣುಕಿದರೆ, ಅವರ ‘ಮಾರವಾ’ದಲ್ಲಿ ಇಂದೋರಿನ ಅಮೀರ್ ಖಾನರ ಪ್ರಭಾವ ಸ್ವಲ್ಪ ಕಾಣಿಸುತ್ತದೆ.  ‘ಮಿಯಾಮಲ್ಹಾರ’ದಲ್ಲಿಯಂತೂ, ಉತ್ತರಾದಿ ಪ್ರಣಾಲಿಯ ಆಗ್ರಾ, ಗ್ವಾಲಿಯರ ಘರಾಣೆಯ ಅಂಶಗಳನ್ನು ರಸಿಕರು ಗಮನಿಸಬಹುದು.  ಆದರೆ ಮೂಲ ಮಾತ್ರ ಕಿರಾನಾ ಘರಾಣೆಯೇ.  ಭಕ್ತಿ ಸಂಗೀತಕ್ಕೂ, ಹೊಸ ದಿಕ್ಕು ತೋರಿಸಿ ಮರಾಠಿಯಲ್ಲಿ ಸಂತವಾಣಿ, ಕನ್ನಡದಲ್ಲಿ ದಾಸರ ಪದಗಳನ್ನು ಮನೆಮನೆಗೆ ಮುಟ್ಟಿಸಿದರು.  ತಾನಸೇನನ ನಂತರ ಭೀಮಸೇನರ ಹೆಸರು ಮನೆಮಾತಾದದ್ದು ಅವರ ಗುಣಗ್ರಾಹಕತ್ವ ಹಾಗೂ ನವ್ಯವಿದ್ದುದನ್ನೆಲ್ಲಾ ತನ್ನ ಹಾಡುಗಾರಿಕೆಯಲ್ಲಿ ರೂಪವನ್ನು ಕೆಡಿಸದೇ ಸೇರಿಸಿಕೊಳ್ಳುವ ಹವ್ಯಾಸವಿಟ್ಟುಕೊಂಡದ್ದರಿಂದ. ಭೀಮಸೇನ ಜೋಶಿ ಇಂದಿಗೆ ‘ತಾನಸೇನನ ನಂತರ ಭೀಮಸೇನ’ ಎಂಬ ಉಪಾಧಿಗೆ ಅರ್ಹರಾಗಿದ್ದಾರೆ.  ಸವಾಯಿ ಗಂಧರ್ವ ಹೇಗೆ ಹಾಡುತ್ತಿದ್ದರು ಎಂಬುದು ಗಂಗೂಬಾಯಿಯವರ ಗಾಯನದಲ್ಲಿ ತನ್ನದೇ ಆದ ವಿಶಿಷ್ಟ ಪದ್ಧತಿಯಲ್ಲಿ ಸಿಕ್ಕರೆ, ಅವರ ಮಗಳು ಕೃಷ್ಣಾಬಾಯಿಯವರ ಸ್ವತಂತ್ರ ಹಾಡುಗಾರಿಕೆಯಲ್ಲಿ ಅಬ್ದುಲ್ ಕರೀಮ್ ಖಾನರ ಒಂದಾನೊಂದು ಕಾಲದ ಶಿಷ್ಯೆ ರೋಶನಾರಾ ಬೇಗಂ ಇಣುಕುತ್ತಾರೆ.

ಸುಮಾರು ೪೦೦ ವರ್ಷಗಳ ಹಿಂದೆ ಅಕಬರ್ ಬಾದಶಾಹ ತಾನಸೇನ್ (೧೫೫೬-೧೬೦೮) ಸಾವಿರವರ್ಷದಲ್ಲಿ ಹುಟ್ಟಿದ ಒಬ್ಬ ಗಾಯಕ ಎಂದು ಸ್ವಲ್ಪ ಅತಿಶಯೋಕ್ತಿಯಿಂದ ಭಾವವಿಹ್ವಲನಾಗಿ ಹೇಳಿದ್ದು ಇತಿಹಾಸದ ಮಾತು. ಇದನ್ನು ಸ್ವಲ್ಪ ಮರೆತು, ಭೀಮಸೇನ ಜೋಶಿಯವರು ತಮಗೆ ಗೊತ್ತಿದ್ದ ಕೆಲವೇ ಸಿದ್ಧ ರಾಗಗಳನ್ನು, ಆ ರಾಗಗಳ ಶುದ್ಧತೆಯನ್ನು ಮರೆಯದೇ, ಅವುಗಳನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ಹೊಸ ಹೊಳಪನ್ನು ನೀಡಿ, ಇಪ್ಪತ್ತನೇ ಶತಮಾನದ ನಾಲ್ಕನೇ ದಶಕದಿಂದ ಈವರೆಗೆ ಎಡೆಬಿಡದೇ ಅಸಂಖ್ಯ ಕಚೇರಿಗಳನ್ನು ನಡೆಸಿದ ಏಕಮೇವಾದ್ವಿತೀಯ ಹಾಡುಗಾರ ಎಂದು ಎದೆ ತಟ್ಟಿ ಹೇಳಬಹುದು. ವಿದೇಶದಲ್ಲಿ ವಾಸಿಸುತ್ತ, ಭಾರತೀಯತ್ವವನ್ನು ತೊರೆದು, ಎರಡು ವರ್ಷಕ್ಕೊಮ್ಮೆ ಭಾರತಕ್ಕೆ ಬಂದು ಭಾರತ ಸರಕಾರದಿಂದ ಭಾರತರತ್ನ ಪ್ರಶಸ್ತಿಯನ್ನು ವಯಸ್ಸು ೮೦ ದಾಟಿದರೂ ದಿಲ್ಲಿಯಲ್ಲಿ ಗುರುಕುಲ ಸ್ಥಾಪಿಸುವ ಉದ್ದೇಶದಿಂದ ಸರಕಾರದಿಂದ ೮-೧೦ ಎಕರೆ ಜಮೀನು ಪಡೆಯುವ ಆಸೆಯನ್ನು ಇಟ್ಟುಕೊಂಡಿದ್ದ ವಿದ್ವಾಂಸರೆಲ್ಲಿ? ಮತ್ತು ಸರಕಾರದಿಂದ ಏನನ್ನೂ ಅಪೇಕ್ಷಿಸದೇ ರಸಿಕರನ್ನು ಉಚಿತವಾಗಿಯೋ ಅಥವಾ ಕಡಿಮೆ ದರದಲ್ಲಿ ಹಾಡಿ ತಣಿಸುವ ಶಕ್ತಿಯನ್ನು ತನ್ನ ಕೊನೆ ತನಕ ಇಟ್ಟುಕೊಂಡಿದ್ದ ಪಂಡಿತ ಭೀಮಸೇನ ಜೋಶಿಯವರೆಲ್ಲಿ?