ತಾನಸೇನನಿಂದ ಭೀಮಸೇನನವರೆಗೆ ಉತ್ತರಾದಿ ಸಂಗೀತವು ನಡೆದುಬಂದ ಹಾದಿ ಭಾಗ ೪

ಜಯಪುರ್ ಘರಾಣೆ: ಪ್ರತಿಯೊಂದು ಮನೆತನದಲ್ಲಿ ಒಬ್ಬ ಪ್ರತಿಭಾವಂತ ಮತ್ತು ಪ್ರಯೋಗಶೀಲ ಗಾಯಕನಿದ್ದರೆ ಆ ಘರಾಣೆಯ ಚೌಕಟ್ಟು ತಂತಾನೇ ಕಳಚಿ ಬೀಳುವುದು ಸಹಜ.  ಇಂತಹ ಉದಾಹರಣೆ ಉತ್ತರಾದಿ ಸಂಗೀತದಲ್ಲಿ ಬಹಳ ಇವೆ.  ಇವರೇ ಉತ್ತರಾದಿ ಸಂಗೀತದ ಮೇರು ವ್ಯಕ್ತಿಗಳು. ಅಲ್ಲಾದಿಯಾ ಖಾನ್ ಸಾಹೇಬರು ಇಂತಹ ಮೇರುವ್ಯಕ್ತಿಗಳಲ್ಲಿ ಒಬ್ಬರು. ಈ ಪರಂಪರೆಗೆ, ಧ್ರುವಪದ ಗಾಯನದ ಹೊಳಪನ್ನು ಕೊಟ್ಟು ಖಯಾಲ್ ಗಾಯನಕ್ಕೆ ಅಳವಡಿಸಿ, ವಕ್ರ ತಾನಗಳ ಸಿಡಿಲಿನಂತಹ ಏರಿಳಿತದ ಪ್ರಕಾರಗಳನ್ನು ಇವರು ಪ್ರಚಾರದಲ್ಲಿ ತಂದರು.  ಹದಿನೇಳನೆಯ ಶತಮಾನದಲ್ಲಿ ತಾನರಸ್ ಖಾನ್ ಮಾಡಿದ್ದ ಪ್ರಯೋಗವನ್ನು ಇವರೂ ಮಾಡಿದರು.  ಈ ಪ್ರಣಾಲಿಯ ಭಾವಿ ಶಿಷ್ಯವೃಂದ, ರಾಗದ ಶುದ್ಧತೆಯನ್ನು ತಾನ್‌ಗಳಲ್ಲಿ ಇಟ್ಟುಕೊಂಡಿದ್ದರಿಂದ, ಹಲವು ಅಪ್ರಚಲಿತ ರಾಗಗಳನ್ನು ಕಚೇರಿಗಳಲ್ಲಿ ಹಾಡಿ ‘ವಾಹವಾ’, ‘ಭೇಷ್’ ಎಂದು ರಸಿಕರ ಮಾನ್ಯತೆ ಪಡೆದುದರಿಂದ, ಮತ್ತು ಕರ್ಮಧರ್ಮಸಂಯೋಗದಿಂದ ಅತ್ಯಂತ ಪ್ರತಿಭಾವಂತ ಶಿಷ್ಯರನ್ನು ‘ಪೂರಿ ತಾಲೀಮ’ ಕೊಟ್ಟು ತರಬೇತಿಗೊಳಿಸಿದುದರಿಂದ ಈ ಘರಾಣೆ ಇಂದು ಬಹಳ ಊರ್ಜಿತಾವಸ್ಥೆಯಲ್ಲಿದೆ.  ಜಯಪುರ-ಅತ್ರೋಳಿ ಅಥವಾ ಅಲ್ಲಾದಿಯಾ ಮನೆತನದ ಇವರ ಇಬ್ಬರು ಮಕ್ಕಳು ಮಂಜೀಖಾನ್, ಭೂರ್ಜಿಖಾನರು ತಮ್ಮದೇ ವಿಶಿಷ್ಟಸ್ಥಾನವನ್ನು ತಂದೆಯವರಿದ್ದಾಗಲೇ ಪಡೆದುಕೊಂಡಿದ್ದರು.  ಕೇಸರಬಾಯಿ ಕೇರಕರ್ ಮತ್ತು ಮೋಗುಬಾಯಿ ಕುರ್ಡಿಕರ್ ಇವರೆಲ್ಲ ಅಲ್ಲಾದಿಯಾ ಖಾನರ ಶಿಷ್ಯ ಪರಂಪರೆಗೆ ಸೇರಿದವರು. ನಿವೃತ್ತಿ ಬುವಾ ಸರನಾಯಕ, ಗಜಾನನ ಬುವಾ ಜೋಶಿ (ಗಾಯನ-ವಯೊಲಿನ) ಮತ್ತು ಹಿಂದಿನ ಶತಮಾನದ ಪ್ರತಿಭಾವಂತ ಗಾಯಕ ಭಾಸ್ಕರ ಬುವಾ ಬಖಲೆ ಇವರೆಲ್ಲ ಈ ಪರಂಪರೆಯ ಅಜರಾಮರ  ಗಾಯಕರು.  ಮಂಜೀಖಾನ ಮತ್ತು ಬುರ್ಜಿಖಾನ್ ಅವರ ಶಿಷ್ಯ ಮಲ್ಲಿಕಾರ್ಜುನ ಮನ್ಸೂರರ ಹೆಸರನ್ನು ಯಾರು ತಾನೆ ಕೇಳಿಲ್ಲ? ಈ ಘರಾಣೆಯ ಮತ್ತೊಬ್ಬ ಯುಗಪುರುಷರೆಂದರೆ ಭಾಸ್ಕರ ಬುವಾ ಬಖಲೆ (೧೮೬೭-೧೯೨೨) ಅವರು ಪ್ರತಿಯೊಂದು ಮನೆತನದ ಅಧ್ವರ್ಯುಗಳ ತಾಲೀಮನ್ನು ಪಡೆದ ಹಿಂದಿನ ಶತಮಾನದ ಮಹಾನುಭಾವರು.  ಬಡೋದಾ ಸಂಸ್ಥಾನದ ಬಳಿಯ ಕರೂರ್ ಎಂಬಲ್ಲಿ ಹುಟ್ಟಿದ ಇವರಿಗೆ ಚಿಕ್ಕಂದಿನಲ್ಲಿಯೇ ಎಲ್ಲಾ ಪರಂಪರೆಯ ಸಂಗೀತ ಆಲಿಸುವ, ಅಭ್ಯಸಿಸುವ ಪ್ರಸಂಗಗಳು ಒದಗಿದವು.  ಆಗ್ರಾ ಪರಂಪರೆಯ ಸಂಗೀತವನ್ನು ಆಲಿಸುವ, ಅಭ್ಯಸಿಸುವ ಪ್ರಸಂಗಗಳು ಒದಗಿದವು.  ಆಗ್ರಾ ಮನೆತನದ ನಥನ್ ಖಾನರಿಂದ ‘ಫಿರತ್ ಮತ್ತು ಬೊಲ್‌ತಾನ್’ವನ್ನು ಇವರು ಪಡೆದುಕೊಂಡರೆ, ಫೈಜ್ ಮಹಮ್ಮದರಿಂದ ವಿಲಂಬಿತ ಪ್ರಸ್ತುತಿಯ ಗುರುಮಂತ್ರವನ್ನು ಪಡೆದರು.  ಆಲಾಪ್ ಮತ್ತು ತರಾನಾಗಳನ್ನು ಹಿಂದೆ ಹೇಳಿದ ಬಂದೇ ಅಲಿಖಾನ ಬೀನ್‌ಕಾರರಿಂದ ಪಡೆದರೆ, ಕಠಿಣ, ಅಪ್ರಚಲಿತ ರಾಗಗಳ ಪ್ರಸ್ತುತಿ ಇವರಿಗೆ ಅಲ್ಲದಿಯಾ ಖಾನರಿಂದ ದೊರಕಿತು.  ಇಷ್ಟೇ ಅಲ್ಲ, ಗ್ವಾಲಿಯರ್ ಪರಂಪರೆಯ ಹಡ್ಡುಖಾನ್ ಅವರ ಸುಪುತ್ರ ಭೂಗಂಧರ್ವರೆಂದು ಪ್ರಸಿದ್ಧಿ ಪಡೆದ ರಹಿಮತ್ ಖಾನರವರಿಂದ ಉತ್ತರಾದಿ ಸಂಗೀತದ ಮಾಧುರ್ಯವನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡರು.  ಕರ್ನಾಟಕ, ಮಹಾರಾಷ್ಟ್ರದಲ್ಲಿ ಉತ್ತರಾದೀ ಸಂಗೀತದ ಪ್ರಚಾರ ಇವರಿಂದ ಆಯಿತು.  ಕೆಲಕಾಲ ಧಾರವಾಡದ ಟ್ರೈನಿಂಗ್ ಕಾಲೇಜಿನಲ್ಲಿ ಸಂಗೀತದ ಶಿಕ್ಷಕರಾಗಿದ್ದರು.

ಪತಿಯಾಲಾ ಘರಾಣೆ:  ಈ ಮನೆತನದ ಅಧ್ವರ್ಯು ಬಡೆ ಗುಲಾಮ್ ಅಲಿಖಾನ್ ಸಾಹೇಬರು (೧೯೦೨-೧೯೬೮). ಪಂಜಾಬ್ ಅಂಗದ ಠುಮರಿ ಗಾಯನವನ್ನು ಇವರೂ, ಇವರಿಗಿಂತ ಇವರ ತಮ್ಮ ಬರಖತ್ ಅಲಿ ಅವರು ಬಹಳ ಚೆನ್ನಾಗಿ ಪ್ರಸ್ತುತ ಪಡಿಸುತ್ತಿದ್ದರು. ಪಂಜಾಬ್‌ದ ಕಸೂರ್ನಲ್ಲಿ ಜನ್ಮಿಸಿದ ಇವರು ಚಿಕ್ಕಪ್ಪ ಕಾರೇಖಾನರಿಂದ ಮತ್ತು ಅಲೈಯಾಫತ್ತು ಜೋಡಿಯ ಅಲಿಬಕ್ಷರಿಂದ ಸಂಗೀತ ಶಿಕ್ಷಣವನ್ನು ಪಡೆದರು. ಹೊಟ್ಟೆಪಾಡಿಗಾಗಿ ಕೆಲಕಾಲ ಸಾರಂಗಿಯನ್ನೂ ನುಡಿಸುತ್ತಿದ್ದರು.  ಇವರ ವಾಸ್ತವ್ಯ ಪಾಕಿಸ್ತಾನದಲ್ಲಿ, ಆದರೆ ಇವರ ಹಿತಚಿಂತಕರು, ರಸಿಕವೃಂದ ಭಾರತದಲ್ಲಿ.  ಲಾಹೋರದ ನಿವಾಸಿಯಾಗಿದ್ದುದರಿಂದ, ಭಾರತದ ನಾಗರಿಕನಾಗುವ ಸಂಭವವಿರಲಿಲ್ಲ. ಅಂದರೆ, ಭಾರತದಲ್ಲಿಯೇ ಹುಟ್ಟಿಬೆಳೆದು ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋದವರು ಸಲೀಸಾಗಿ ನಾಗರಿಕತ್ವವನ್ನು ಪಡೆದುಕೊಂಡರು. ಆದರೆ ಬಡೆ ಗುಲಾಮ್ ಅವರಂಥವರಿಗೆ, ವಿಭಜನೆಯ ಮೊದಲಿನ ಲಾಹೋರ ವಾಸ್ತವ್ಯದಿಂದ ಭಾರತೀಯ ನಾಗರಿಕತ್ವ ಪಡೆಯುವುದಕ್ಕೆ ಬಹಳ ಶ್ರಮಿಸಬೇಕಾಯಿತು. ಕೊನೆಗೊಮ್ಮೆ ೧೯೫೭ರಲ್ಲಿ ಭಾರತೀಯ ನಾಗರಿಕರಾದರು.  ಬಳಿಕ ಹನ್ನೊಂದು ವರ್ಷಗಳಲ್ಲಿಯೇ ತೀರಿಕೊಂಡರು.  ಇವರ ಮಗ ಮುನವರ್ ಅಲಿ ಕಲಕತ್ತೆಯ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಗುರುಕುಲ ಪದ್ಧತಿಯಂತೆ ಸಂಗೀತವನ್ನು ಕಲಿಸುತ್ತಿದ್ದರು. ಈಗ ಈ ಮನೆತನದ ಭಾರವನ್ನು ಖ್ಯಾತ ಗಾಯಕ ಅಜಯ್ ಚಕ್ರವರ್ತಿ ಸಂಭಾಳಿಸುತ್ತಿದ್ದಾರೆ.  ಇದರದೇ ಉಪಶಾಖೆಯಾದ ಮೇವಾಡ ಮನೆತನ.  ಇವರ ಪ್ರಸ್ತುತಿ ಕೊಂಚ ಆಲಂಕಾರಿಕವಾಗಿದ್ದು ರಾಗದ ಕಡೆಗೆ ಸ್ವಲ್ಪ ದುರ್ಲಕ್ಷ್ಯವೆ. ಈ ಮನೆತನದ ಪಂ. ಜಸರಾಜರು ಅತ್ಯಂತ ಖ್ಯಾತಿಯನ್ನು ಪಡೆದ ಗಾಯಕರು.

ಕಿರಾನಾ ಮನೆತನ: ಪಾನಿಪತ್ತದ ಬಳಿಯ ಕೈರಾನಾ ಊರಿನಿಂದ ದಕ್ಷಿಣಕ್ಕೆ ಬಂದ ಅಬ್ದುಲ ಕರೀಮ ಖಾನ ಸಾಹೇಬರು ಈ ಉತ್ತರಾದಿ ಪ್ರಣಾಲಿಯನ್ನು ತುಂಬಾ ಲೋಕಾಭಿಮುಖರಾಗಿ ಮಾಡಿದರು. ಅವರದು ಮೂಲತಃ ಸಾರಂಗಿವಾದಕರ ಮನೆತನ.  ಮೊಗಲ ಬಾದಶಹ ಜಹಾಂಗೀರನ ಕಾಲದಲ್ಲಿ ಕೈರಾನಾದಲ್ಲಿ ನೆಲೆಸಿದ ಇದು ಒಂದು ಐತಿಹಾಸಿಕ ಕುಟುಂಬ.  ಕರ್ನಾಟಕ, ಮಹಾರಾಷ್ಟ್ರದ ನಿವಾಸಿಗಳು ಅಬ್ದುಲ ಕರೀಂ ಖಾನರನ್ನು ಕಿರಾನಾ ಪ್ರಣಾಲಿಯ ಪ್ರವರ್ತಕರೆಂದು ತಿಳಿದುಕೊಂಡಿದ್ದಾರೆ, ಆದರೆ, ಉತ್ತರ ಹಿಂದುಸ್ಥಾನದಲ್ಲಿ ಇದೇ ಮನೆತನದ ಇತರ ಗಾಯಕರು, ವಾದಕರು ದಿಲ್ಲಿ, ಪಾನಿಪತ್ತು ಮತ್ತು ಕಲಕತ್ತಾದಲ್ಲಿ ನೆಲೆಸಿದ್ದಾರೆ. ಇವರ ಪರಂಪರೆ ಕೊಂಚ ಭಿನ್ನವಾದದ್ದು . ಹಾಡುಗಾರಿಕೆ ಯಲ್ಲಿ , ನಿಯಾಜ಼ ಅಹಮ್ಮದ್-ಫೈಯ್ಯಾಜ ಅಹಮ್ಮದ್, ಕಲಕತ್ತೆಯ ಮಗರೂರ್ ಅಲಿ ಖಾನ ಹಾಗೂ ದಿಲ್ಲಿಯ ಮಣಿಪ್ರಸಾದ ಹಳೆಯ ಕಿರಾನಾ ಪರಂಪರೆಯನ್ನು ಉತ್ತರದಲ್ಲಿ ಬೆಳೆಸಿದರೆ, ಅಬ್ದುಲ ಕರೀಮ ಖಾನ ಸಾಹೇಬರು ದಕ್ಷಿಣದಲ್ಲಿ ಅತ್ಯಂತ ನಾಟ್ಯಮಯ ಪರಿಸ್ಥಿತಿಯಲ್ಲಿ ಬರೋಡಾದಿಂದ, ಮಿರಜ, ಸಾಂಗಲಿ, ಮುಂಬಯಿ ಮತ್ತು ಬೆಳಗಾವಿಯಲ್ಲಿ ವಾಸ್ತವ್ಯಮಾಡಿ ಅಸಂಖ್ಯ ಕಚೇರಿಗಳನ್ನು ನಡೆಸಿದರು.  ಕರ್ನಾಟಕ ಸಂಗೀತವನ್ನೂ ಚೆನ್ನಾಗಿ ಅರ್ಥಮಾಡಿಕೊಂಡು, ಕೀರವಾಣಿ ಮತ್ತು ಸಿಂಧುಭೈರವಿಯಂತಹ ಕರ್ನಾಟಕ ಸಂಗೀತದ ರಾಗಗಳನ್ನು ಉತ್ತರಾದಿ ಸಂಗೀತದಲ್ಲಿ ತಂದು ರೂಢಿಗೊಳಿಸಿದರು. ಇವರ ಪಟ್ಟ ಶಿಷ್ಯ ಸವಾಯಿ ಗಂಧರ್ವ ಊರ್ಫ ರಾಮಭಾವು ಕುಂದಗೋಳಕರ, ರೋಶನಾರಾ ಬೇಗಂ, ಮಗ ಸುರೇಶಬಾಬು ಮಾನೆ, ಮಗಳು ಹೀರಾಬಾಯಿಗೆ ತಾಲೀಮು ಕೊಟ್ಟದ್ದು ಇವರ ಕಿರಿಯ ತಮ್ಮ ಉಸ್ತಾದ್ ವಹೀದ್ ಖಾನರು.  ಕೆಲಕಾಲ ಇವರೂ ಕಲಿಸಿದರು.  ಸವಾಯಿ ಗಂಧರ್ವರ ಹೆಸರನ್ನು ಅಜರಾಮರ ಮಾಡಿದ ಶ್ರೇಯ ಪಂಡಿತ ಭೀಮಸೇನ ಜೋಶಿ ಹಾಗೂ ಸಂಗೀತ ವಿದುಷಿ ಗಂಗೂಬಾಯಿ ಇವರಿಗೆ ಸಲ್ಲುತ್ತದೆ.  ಮುಂಬಯಿಯಲ್ಲಿ ಪಂಡಿತ ಫಿರೋಜ್ ದಸ್ತೂರ‍್ದ ಅವರು ಎಂಬತ್ತು ದಾಟಿದರೂ ಆಗಾಗ ಕಚೇರಿ ನಡೆಸುತ್ತಿದ್ದರು. ಕಿರಾನಾ ವಾದ್ಯ ಪರಂಪರೆಯಲ್ಲಿ ಸಾದಿಕ್ ಅಲಿ ಬೀನ್‌ಕಾರ ಎಂಬ ಮಹಾಪುರುಷರು ಬೀನ್‌ಕಾರರೆಂದು ಖ್ಯಾತಿ ಪಡೆದಿದ್ದರು.  ಇವರ ಮಗ ಬಂದೇ ಅಲಿ ಖಾನ್, ಮೊಮ್ಮಗ ಮುರಾದ್ ಖಾನ್.

ಮನೆತನ, ಪರಂಪರೆ, ಘರಾಣೆ ಈ ಶಬ್ದಗಳು ರೂಢಿಗೊಂಡದ್ದು ಇಪ್ಪತ್ತರ ಶತಮಾನದಲ್ಲಿಯೇ.  ಹಾಡುಗಾರ, ವಾದಕ ಬೇರೆ ಬೇರೆ ಸಂಸ್ಥಾನಗಳಿಗೆ ವಲಸೆ ಹೋಗುವ ಪದ್ಧತಿ ಇದ್ದುದರಿಂದ ಅಲ್ಲಿ ಮೊದಲೇ ಸ್ಥಾಪಿತರಾಗಿದ್ದ ಕಲಾವಿದರ ಕೌಶಲ್ಯ ಮತ್ತು ಹೊಸದಾಗಿ ಬಂದವರ ವೈಶಿಷ್ಟ್ಯಗಳನ್ನು ಗುರುತಿಸಲು ಮಾಡಿದ ಶಬ್ದ ‘ಘರಾಣೆ’.  ಈ ಪದ್ಧತಿ ಪ್ರಾರಂಭವಾದ ಕೂಡಲೇ ಈ ಮನೆತನದ ‘ಖಲೀಫಾ’ ಯಾರು ಎಂಬ ಪ್ರಶ್ನೆ ಬಂದಾಗ ‘ಘರಾಣೆ’ ರೂಢಿಗೊಂಡಿತು.  ಖಲೀಫಾ ಎಂದರೆ ತನ್ನ ವಂಶದ ಜನ್ಮಜಾತ ನಾಯಕರು. ಉದಾಹರಣೆಗೆ ಮೈಹರ್ ಘರಾಣೆಯ ಖಲೀಫಾ ಅವರು ಅಲ್ಲಾ ಉದ್ದೀನ್ ಖಾನರ ಮಗ, ಉಸ್ತಾದ್ ಅಲಿ ಅಕಬರ್ ಖಾನರು. ಅವರ ವಾಸ್ತವ್ಯವೆಲ್ಲ ಅಮೇರಿಕೆಯಲ್ಲಿದ್ದರೂ ಸಹ, ಅವರ ಹೊರತು ಅಲ್ಲಾವುದ್ದಿನ್ ಖಾನರ ಅಳಿಯ, ಇತ್ತೀಚೆಗೆ ಭಾರತರತ್ನ ಪ್ರಶಸ್ತಿಯನ್ನು ಪಡೆದ ರವಿಶಂಕರರು ಆಗಲಾರರು, ಅಥವಾ ಭಾರೀ ಶಿಷ್ಯ ಸಂಪತ್ತಿಯನ್ನು ತಯಾರುಮಾಡಿದ ಮಗಳು ಅನ್ನಪೂರ್ಣಾದೇವಿ ಕೂಡ ಆಗಲಾರರು.  ಹಾಗೆಯೇ, ಇಡೀ ಭಾರತವರ್ಷದಲ್ಲಿ ಇತ್ತೀಚೆಗೆ ಮುನ್ನಡೆಯಲ್ಲಿದ್ದ ಜಯಪರ-ಅತ್ರೋಲಿ ಘರಾಣೆಯ ಖಲೀಫಾ, ಎಂದೂ ಕಚೇರಿ ನಡೆಸದ ಕೊಲ್ಲಾಪುರ ನಿವಾಸಿ ಬಾಬಾ ಅಜ಼ೀಜುದ್ದೂನ್ ಖಾನರೇ ಹೊರತು ಬೇರೆ ಯಾರೂ ಈ ಪಟ್ಟಕ್ಕೆ ಅರ್ಹರಲ್ಲ. ಕಾರಣ ಬಾಬಾ, ಈ ಮನೆತನದ ಅಲ್ಲಾದಿಯಾ ಖಾನರ ಮೊಮ್ಮಗ.  ಮಲ್ಲಿಕಾರ್ಜುನ ಮನ್ಸೂರರು ಕೂಡ ಈ ಬಾಬಾರ ಬಳಿ ಹೊಸ ಬಂದಿಶ್‌ಗಳನ್ನು ಕಲಿಯಲು ಎಪ್ಪತ್ತರ ಹರೆಯದಲ್ಲಿ ಬಂದಾಗ ಬಾಬಾರ ಕಾಲುಮುಟ್ಟಿ ನಮಸ್ಕಾರವನ್ನು ಮಾಡಿ ಶಿಷ್ಯನಂತೆ ಕಲಿತದ್ದು ಇದೆ.  ಮಲ್ಲಿಕಾರ್ಜುನರ ಮನೆತನವೇ ಬೇರೆ ಎಂದು ತಿಳಿದರೆ, ಅವರ ಮಗ ರಾಜಶೇಖರ ಈ ಹೊಸ ಮನೆತನದ ಖಲೀಫಾ ಆಗುತ್ತಾರೆಯೇ ಹೊರತು, ಪಂಚಾಕ್ಷರೀ ಮತ್ತಿಗಟ್ಟಿ ಅಲ್ಲ……….

to be continued