ಗಂಡು-ಹೆಣ್ಣು

ಒಂದು ಮಧ್ಯರಾತ್ರಿ. ದಿನದ ಕೆಲಸ ಮುಗಿಸಿ ಕಾಲೇಜಿನಿಂದ ಮನೆಗೆ ಹೊರಟಿದ್ದೆ. (ಉಚ್ಚವ್ಯಾಸಂಗ ಮಾಡುವವರಿಗೆ ಇಪ್ಪತ್ತುನಾಲ್ಕು ಗಂಟೆ ಕೆಲಸ ಮಾಡುವ ಸೌಕರ್ಯಗಳಿವೆ) ಕಟ್ಟಡದಿಂದ ಇಳಿದು ಕೆಳಗೆ ಬರುತ್ತಲೇ ವಿದ್ಯಾರ್ಥಿಗಳ ಕೋಲಾಹಲ ಕೇಳಿಸಿತು. ನಾಲ್ಕೂ ದಿಕ್ಕಿನಲ್ಲಿ ಓಡಾಡುತ್ತಿದ್ದರು. ಗದ್ದಲವೇ ಗದ್ದಲ. ನನಗೆ ಏನೆಂದೂ ತಿಳಿಯಲೇ ಇಲ್ಲ. ಯಾರಾದರೂ ಸತ್ತರೇ? ಖೂನಿಯಾಯಿತೇ? ಕಳವಾಯಿತೇ? ಏನೂ ಗೊತ್ತಾಗದು. ಓಡುವವರ ಹಿಂದೆ ಹಿಂದೆ ನಾನೂ ಓಡಿದೆ. ಅವರೆಲ್ಲ ವಿದ್ಯಾರ್ಥಿನಿಯರ ವಸತಿಗೃಹಗಳತ್ತ ಧಾವಿಸುತ್ತಿದ್ದರು. ಸಾಯರೆಕ್ಯೂಸದಲ್ಲಿ ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಓದುತ್ತಾರೆ. (ಇವರಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚುಕಡಿಮೆ ವಿದ್ಯಾರ್ಥಿನಿಯರಿದ್ದಾರೆ) ಅಲ್ಲಿ ಕೂಡಿದ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕೈದು ಸಾವಿರವಿರಬಹುದು. ಏಕೆ, ಏನು ಎಂದು ಯಾರನ್ನು ಕೇಳುವುದು? ಕೇಳಿದ್ದರೆ ಯಾರೂ ಕಿವಿಗೊಡುವ ಸ್ಥಿತಿಯಲ್ಲಿರಲಿಲ್ಲ. ಪೋಲಿಸರ ಕಾರುಗಳು ಕೆಂಪು ಹಳದಿ ದೀಪಗಳಿಂದ ಬೆಳಕು ಕಾರುತ್ತ ಬಂದು ನಿಂತಿದ್ದವು. ಹುಡುಗರೆಲ್ಲ ವಿದ್ಯಾರ್ಥಿನಿಯರ ವಸತಿಗೃಹಗಳನ್ನು ಸುತ್ತುವರಿದು ಕೈ ಎತ್ತಿ, ಕೂಗಾಡಿ ಕುಣಿಯುತ್ತಿದ್ದರು. ಹಿಂದೆ ಪ್ರೇಕ್ಷಕರಾಗಿ ನಿಂತ ವಿದ್ಯಾರ್ಥಿಗಳು `ಈ ವರ್ಷ ಅಷ್ಟು ಉತ್ಸಾಹವಿಲ್ಲ. ಹೋದ ವರ್ಷದ ತಮಾಷೆ ನೋಡಬೇಕಿತ್ತು” ಎಂದರು. ಇದು ಪ್ರತಿವರ್ಷದ ತಮಾಷೆಯೆಂದು ಆಗ ನನಗೆ ಗೊತ್ತಾಯಿತು. ಹುಡುಗರು ಏನೇನೆಂದು ಕೂಗುತ್ತಿದ್ದರೋ ಸರಿಯಾಗಿ ಕೇಳಿಸದ್ದರಿಂದ ಹತ್ತಿರ ಹೋಗಿ ನಿಂತೆ. “ನಮಗೆ ಪೆಂಟಿ ಬೇಕು” (We want panties) ಎಂದು ಕೂಗಾಡುತ್ತಿದ್ದರು. ಪಕ್ಕದಲ್ಲಿ ನಿಂತವನಿಗೆ “ಇದು ಏನು?” ಎಂದು ಕೇಳಿದೆ. “ಪೆಂಟಿ ಹಲ್ಲೆ” (Panty-raid) ಎಂದು ಹೇಳಿದ. ಆದರೂ ಅರ್ಥವಾಗಲಿಲ್ಲ. ಇನ್ನೂ ಸಮೀಪ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಹುಡುಗಿಯರೆಲ್ಲ ತಮ್ಮ ತಮ್ಮ ವಸತಿಗೃಹಗಳ ಹೆಬ್ಬಾಗಿಲನ್ನು ಭದ್ರವಾಗಿ ಮುಚ್ಚಿ ಕಟ್ಟಡದ ಮೇಲೆ ಏರಿದ್ದಾರೆ. ಅಲ್ಲಿಂದ ಹುಡುಗರು ಕೂಗಿದಾಗೊಮ್ಮೆ ಬಣ್ಣಬಣ್ಣದ ಅರಿವೆಗಳನ್ನು ಕೆಳಗೆ ಒಗೆಯುತ್ತಿದ್ದಾರೆ. ಬಿದ್ದ ಅರಿವೆಗಳಿಗಾಗಿ ವಿದ್ಯಾರ್ಥಿಗಳು ಕಚ್ಚಾಡಿ ಕೂಗುತ್ತಿದ್ದರು. ಬಟ್ಟೆ ಪಡೆದ ಭಾಗ್ಯಶಾಲಿ ಅಲ್ಲಿಂದ ನಾಗಲೋಟ ಕೀಳುತ್ತಿದ್ದ. ಹೀಗೆ ಒಂದು ಕಟ್ಟಡ ಇನ್ನೊಂದು ಕಟ್ಟಡಕ್ಕೆ ಈ ಜನಜಂಗುಳಿ ಸಾಗುತ್ತಿತ್ತು. ಯಾರಿಗೋ ಕುಲಪತಿಗಳ ಮನೆಗೇ ಹೋಗುವ ಮನಸ್ಸಾಯಿತು. ಸರಿ, ಹುಡುಗರೆಲ್ಲ `ಹೋ’ ಎಂದು ಹೊರಟೇಬಿಟ್ಟರು. ನಾನು ಮಾತ್ರ ಅವರ ಬೆನ್ನುಹತ್ತದೆ ಮನೆಗೆ ಬಂದು ಮಲಗಿದೆ.

ಮರುದಿನ ಸಹಪಾಠಿಯೊಬ್ಬನಿಗೆ `Panty-raid’ ವಿವರಗಳನ್ನು ಕೇಳಿದೆ. `ನೀನೆಂದೂ ಭಾಗವಹಿಸಲಿಲ್ಲವೇ?’ ಎಂದು ನಕ್ಕು ಕೇಳಿದ. “ಅದು ಏನೆಂದೇ ಗೊತ್ತಿಲ್ಲ. ಭಾಗವಹಿಸುವದಾದರೂ ಹೇಗೆ?” ಎಂದಾಗ ಆತ ವಿವರಿಸಿ ಹೇಳಿದ:

`Panty’ ಎಂದರೆ ಸ್ತ್ರೀಯರು ಹಾಕಿಕೊಳ್ಳುವ ಒಳಚಡ್ಡಿಯಂತೆ. ಅದನ್ನು ನಾಯಲೋನ್ ಅಥವಾ ಬೇರೆ ಹಗುರಾದ ಬಟ್ಟೆಯಿಂದ ತಯಾರಿಸಿರುತ್ತಾರೆ. ಹಳೆಯ ಪೆಂಟಿಗಳನ್ನೆಲ್ಲ ವಿದ್ಯಾರ್ಥಿನಿಯರು ಕೂಡಹಾಕುತ್ತಾರಂತೆ. ವರ್ಷಕ್ಕೊಮ್ಮೆ ಹುಡುಗರು ಹಲ್ಲೆಗೆ ಬಂದಾಗ ಅವುಗಳನ್ನು ಮೇಲಿನಿಂದ ಎಸೆದು ಸಂತೋಷಪಡುತ್ತಾರಂತೆ. ಆದಷ್ಟು ಹೆಚ್ಚು ಪೆಂಟಿಗಳನ್ನು ಸಂಗ್ರಹಿಸಿದವರು `ಶೂರ’ನೆಂದು ಪರಿಗಣಿಸಲ್ಪಡುತ್ತಾನಂತೆ! ಹುಡುಗರು ತಮ್ಮ ಕೋಣೆಯಲ್ಲಿ “ಈ ಪೆಂಟಿಗಳನ್ನು ಅಭಿಮಾನದಿಂದ ಜೋಪಾನವಾಗಿಟ್ಟು ಅವುಗಳನ್ನು ತೋರಿಕೆಗೆ ತೂಗುಹಾಕುತ್ತಾರಂತೆ! ಈ ಆಟದಲ್ಲಿ ಯಾವ ಸ್ವಾರಸ್ಯವೂ ಕಂಡುಬರದ ನನಗೆ “ಎಂಥಾ ಮೂರ್ಖರಪ್ಪಾ ಇವರು! ಇಂಥವರು ಸುಧಾರಿಸಿದವರು ಬೇರೆ!” ಎನಿಸದೆ ಇರಲಿಲ್ಲ.

ಅಮೇರಿಕನ್ ಸಮಾಜದ ಸ್ತ್ರೀ-ಪುರುಷರಿಗೆ ಸ್ವತಂತ್ರವಾಗಿ ಕಲೆಯುವ ಸ್ವಾತಂತ್ರ್ಯವಿದೆ. ಈ ಸಮಾನತೆ ನನ್ನಂತಹ ವಿದೇಶಿಯರಿಗೆ ಕೆಲಕಾಲ ತೊಂದರೆಗೆ ಇಟ್ಟುಕೊಂಡಿತು. ಈ ಸಮಾನತೆ ಬಾಹ್ಯರೂಪ ಉಡುಪುಗಳಲ್ಲಿ ಕೂಡ ತೀರ ಸಾಮಾನ್ಯಕ್ಕೆ ಬಂದು ಬಿಟ್ಟಿದೆ. ಜಡೆ ಬಿಟ್ಟು, ಸೀರೆಯುಟ್ಟವರು ಹೆಂಗಸರು, ಇವೆರಡೂ ಇಲ್ಲದೇ ಮೀಸೆ ಬಿಟ್ಟವರು ಗಂಡಸರು ಎಂದು ನಂಬಿದ ನಾನು, ಈ ಮೂರು ಇಲ್ಲದ ದೇಶದಲ್ಲಿ ಗಂಡಸರು-ಹೆಂಗಸರನ್ನು ಹೇಗೆ ಗುರುತಿಸಬೇಕೆಂಬುದೆ ದೊಡ್ಡ ಪ್ರಶ್ನೆಯಾಯಿತು. ಅದಕ್ಕಾಗಿ ನಾನು ಒಂದು ಸಂಶೋಧನೆಯನ್ನೇ ಕೈಕೊಳ್ಳಬೇಕಾಯಿತು. ಸಾವಿರಾರು ಅಮೇರಿಕನ್ನರನ್ನು ಹತ್ತಿರದಿಂದ ನೋಡಿದೆ. ಈ ಪರೀಕ್ಷೆಯ ಪರಿಣಾಮವಾಗಿ ಅಮೇರಿಕನ್ ಸ್ತ್ರೀ-ಪುರುಷರ ಬಗ್ಗೆ ಹಲವಾರು ಮನರಂಜಕ ಸಂಗತಿಗಳನ್ನು ಕಂಡುಕೊಂಡೆ. ಈ ನನ್ನ ಸಂಶೋಧನೆಯ ಕೆಲ ಮುದ್ದೆ (ಅಂಶ)ಗಳನ್ನು ಓದುಗರ ಮುಂದೆ ಇಡುತ್ತೇನೆ.

* ರಸ್ತೆಯಲ್ಲಾಗಲೀ ಕಾರಿನಲ್ಲಾಗಲೀ ಇಬ್ಬರು ಹೊರಟರೆ ಅವರಲ್ಲಿ ಒಬ್ಬರು ಹೆಂಗಸೆಂದು ತಿಳಿಯತಕ್ಕದ್ದು.
* ಇಬ್ಬರು ಹೊರಟಾಗ ಒಬ್ಬರೇ `ಚುಯಿಂಗ್ ಗಮ್’ (ಸಿಹಿ ಅಂಟು)ಜಗಿಯುತ್ತಿದ್ದರೆ ಅವರು ಹೆಣ್ಣು ಹುಡುಗಿ
* ಇಬ್ಬರಲ್ಲಿ ಒಬ್ಬರ ಹತ್ತಿರ `ವೈನಿಟಿ-ಬ್ಯಾಗ್’ ಇದ್ದರೆ ಆಕೆ ಹುಡುಗಿ.
* ರಸ್ತೆಯಲ್ಲಿ ಹೊರಟಾಗ ಮಧುಮಧುರ ಸೆಂಟಿನ ಸುವಾಸನೆ ಹೊರ ಹೊಮ್ಮುತ್ತಿದ್ದರೆ ಆಕೆ ಪ್ರೌಢ ಮಹಿಳೆ.
* ಈ ಸುಗಂಧ ಹೆಚ್ಚಾಗುತ್ತ ನಡೆದಿದ್ದರೆ ಆಕೆಯ ಪ್ರಾಯವೂ ಹೆಚ್ಚುತ್ತ ನಡೆದಿದೆಯೆಂದು ತಿಳಿಯಬೇಕು.
* ಕೈ, ಮುಖ, ಕಣ್ಣುಗಳಿಗೆ ಹೆಚ್ಚಿನ ಬಣ್ಣ ಸವರಿ, ಹೆಚ್ಚಿನ ಅಲಂಕಾರ ಮಾಡಿಕೊಂಡಿದ್ದರೆ ಅವಳು ಆಗಲೇ ಮುದುಕಿಯಾಗಿದ್ದಾಳೆಂದು ತಿಳಿಯಬೇಕು.
* ಯಾರೊಬ್ಬರ ಬಟ್ಟೆಗಳು ಹವಾಮಾನಕ್ಕನುಸರಿಸಿ ಆಕುಂಚನ ಹೊಂದುತ್ತ ನಡೆದಿದ್ದರೆ ಆಕೆ ಸ್ತ್ರೀ ಎಂದು ತಿಳಿಯಬೇಕು.
* ಚಳಿಗಾಲದಲ್ಲಿ ಉಪಯೋಗಿಸಿದ ಪ್ಯಾಂಟನ್ನು ಅರ್ಧಕ್ಕೆ ಹರಿದು ವಸಂತ ಋತುವಿನಲ್ಲಿಯೂ, ಬೇಸಿಗೆಯಲ್ಲೂ ಅದನ್ನು ಇನ್ನೂ ಹರಿದು ೧/೪ಕ್ಕೆ ಇಳಿಸಿ ಧರಿಸಿದರೆ ಆಕೆ ವಿದ್ಯಾರ್ಥಿನಿಯೆಂದು ನಿರ್ಧರಿಸಬೇಕು.
* ಸಣ್ಣ ಕಾರಿನಲ್ಲಿ ಅರ್ಧ ಸೀಟಿನಲ್ಲಿ ಇಬ್ಬರು ಕುಳಿತಿದ್ದರೆ ಅವರು ಪ್ರೇಮದ ಭರದಲ್ಲಿದ್ದ, ಆದರೆ ಮದುವೆಯಾಗದ ಜೋಡಿಯೆಂದು ತಿಳಿಯಬೇಕು.
* ಸಣ್ಣ ಕಾರಿನಲ್ಲಿ ಒಂದು ಇಡೀ ಸೀಟಿನಲ್ಲಿ ಇಬ್ಬರು ಆರೂಢರಾಗಿದ್ದರೆ ಅವರ ವಿವಾಹ ನಿಶ್ಚಯವಾಗಿದೆಯೆನ್ನಬಹುದು.
* ದೊಡ್ಡ ಕಾರಿನಲ್ಲಿ ಇಬ್ಬರು ಎರಡು ಸೀಟಿನಲ್ಲಿ ಕುಳಿತಿದ್ದರೆ ಅವರ ಮದುವೆ ನಿಶ್ಚಯವಾಗಿದೆ ಎಂದರ್ಥ.
* ದೊಡ್ಡ ಕಾರಿನಲ್ಲಿ ಇಬ್ಬರು ಎರಡು ಮೂಲೆಗೆ ಕುಳಿತಿದ್ದರೆ ಅವರ ವಿವಾಹವಾಗಿ ಒಂದೆರಡು ಮಕ್ಕಳಿದ್ದಾರೆ ಎಂದು ಊಹಿಸಲಡ್ಡಿಯಿಲ್ಲ.
* ದೊಡ್ಡ ಕಾರಿನಲ್ಲಿ ಗಂಡಸಾಗಲಿ, ಹೆಂಗಸಾಗಲಿ ಒಂಟಿಯಾಗಿದ್ದರೆ ಅವರ ವಿವಾಹವಿಚ್ಛೇದವಾಗಿದೆ; ಇನ್ನೊಂದು ಮದುವೆಗಾಗಿ ಹೆಣಗುತ್ತಿದ್ದಾರೆ ಎಂದು ತಿಳಿಯಬೇಕು

ಅಮೇರಿಕನ್ ಸಮಾಜ ತಮ್ಮ ಯುವಕ-ಯುವತಿಯರಿಗೆ ಕೊಡಮಾಡಿದ ಸ್ವಾತಂತ್ರ್ಯ ಭಾರತೀಯ ಕಣ್ಣಿಗೆ `ವಿಪರೀತ’ವೆನಿಸದೆ ಇರಲಾರದು.

ಅವರಿಗೆ ಜನಸಮೂಹದಲ್ಲಿ ಆಲಂಗಿಸುವ ಚುಂಬಿಸುವ ಸ್ವಾತಂತ್ರ್ಯವಿದೆ. (ಆದರೆ ಅಂತರಂಗದಲ್ಲಿ ಇದನ್ನು ಮಾಡಬಾರದಂತೆ)

“ದ್ಯಾರ್ಥಿನಿಯರು ವಾರದಂತ್ಯದಲ್ಲಿ ರಾತ್ರಿ ಒಂದು ಗಂಟೆಯ ತನಕ ತನ್ನ ಪ್ರಿಯತಮನೊಡನೆ ಇರಬಹುದು. ಆದರೆ ಒಂದರ ನಂತರ ವಸತಿಗೃಹಕ್ಕೆ ಬಂದರೆ ತೀವ್ರ ಶಿಕ್ಷೆಯಂತೆ.
ವಸತಿಗೃಹದ ಅತಿಥಿಗೃಹದಲ್ಲಿ ಯುವತಿಯರು ಯುವಕರ ತೊಡೆಯನ್ನೇರಬಹುದಂತೆ. ಆದರೆ ಅವರಿಬ್ಬರ ನಡುವೆ ವರ್ತಮಾನಪತ್ರವಾದರೂ ಇರಬೇಕಂತೆ.
ಯುವತಿಯರು ಯುವಕರು ಕೋಣೆಯಲ್ಲಿರಬಹುದು. ಆದರೆ ಕೋಣೆಯ ಬಾಗಿಲು ತೆರೆದಿರಬೇಕಂತೆ. ಇನ್ನೂ ಕೆಲ ಕಡೆ ಬಾಗಿಲು ಮುಚ್ಚಬಹುದು. ಆದರೆ ಚಿಲಕ ಹಾಕಬಾರದೆಂದು ನಿಯಮವಂತೆ.
ಗಂಡು-ಹೆಣ್ಣು ವಿಶೇಷ ಸಲಿಗೆಯಿಂದ ಇರಬಹುದು. ಆದರೆ ಹೆಣ್ಣು ಮದುವೆಯಾಗುವ ಮೊದಲು ತಾಯಿಯಾಗದಿದ್ದರಾಯಿತು.
ಮದುವೆಯಾಗುವ ಯುವಕನೊಡನೆ ಮದುವೆಯ ಮೊದಲು ದೇಹದ ಸಂಬಂಧ ಬೆಳೆಸಿದರೂ ಆಕೆ ಕುಮಾರಿಯೆಂದೇ ಪರಿಗಣಿಸಲ್ಪಡುವಳು.
ಆದರೆ ಅಮೇರಿಕನ್ ಸಮಾಜದ ಯಾವ ದೃಷ್ಟಿಕೋನ ಇಟ್ಟುಕೊಂಡು ಈ ಸ್ವಾತಂತ್ರ್ಯ ಕೊಡಮಾಡಿದೆಯೋ ಅದರ ವಿಪರೀತವಾಗಿ ಸರಕಾರಕ್ಕೆ ಮತ್ತು ಸಮಾಜಕ್ಕೆ ಹೊಸ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ.

ಇಂಥ ಕೆಲ ತೊಡಕುಗಳು:

ರಸ್ತೆ, ಬೀದಿ, ಕಾಲೇಜು-ಹೂದೋಟ, ಪಾರ್ಕುಗಳಲ್ಲಿ ಬಹಿರಂಗವಾಗಿ ಕಾಮಕ್ರೀಡೆ ನಡೆಯುತ್ತಿದೆ.
ಅಮೇರಿಕನ್ ಮಕ್ಕಳು ಬುದ್ಧಿಯಿಂದ ಬೆಳೆಯುವ ಮೊದಲೇ ದೇಹದಿಂದ ಬೆಳೆದುಬಿಡುತ್ತಾರೆ. ೧೨-೧೪ ವರ್ಷದವರೂ `dating’ ಮಾಡುವುದು ಸಾಮಾನ್ಯ ವಿಷಯ.
ಅಮೇರಿಕನ್ ಕುಮಾರಿಯರಲ್ಲಿ ಹೆಚ್ಚಿನ ಜನರು ಹೈಸ್ಕೂಲ ವಿದ್ಯಾಭ್ಯಾಸ ಕೂಡ ಮುಗಿಸುವುದಿಲ್ಲ. ಇದಕ್ಕೆ ಕಾರಣ ಅವರು ಮದುವೆಯಾಗುವ ಮೊದಲೇ ಗರ್ಭಿಣಿಯರಿರುತ್ತಾರೆ.
ಅಮೇರಿಕೆಯ ಶೇಕಡಾ ೬೦% ಹುಡುಗಿಯರಿಗೆ ಮತ್ತು ಶೇಕಡಾ ೯೦% ಹುಡುಗರಿಗೆ ಮದುವೆಯ ಮೊದಲೇ ಕಾಮಜೀವನದ ಅನುಭವವು ಇರುತ್ತದೆ.
ಗರ್ಭನಿರೋಧಕ ಸಲಕರಣೆಗಳು ಧಾರಾಳವಾಗಿ ಲಭ್ಯವಿದ್ದರೂ, ಅವುಗಳ ಉಪಯೋಗ ಸಾಕಷ್ಟು ಇದ್ದು, ಸಾಯರೆಕ್ಯೂಸದಂತಹ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ನೂರಕ್ಕೂ ಮಿಕ್ಕಿ ವಿದ್ಯಾರ್ಥಿನಿಯರು ಗರ್ಭವತಿಯರಾಗುತ್ತಾರೆ.
ಜನ್ಮತಾಳುವ ಪ್ರತಿ (conceived) ಹದಿನೆಂಟು ಮಕ್ಕಳಲ್ಲಿ ಒಂದು ಬೆಳಕು ಕಾಣುವುದಿಲ್ಲ. (ಗರ್ಭಪಾತ ಸಾಮಾನ್ಯ)
ಮದುವೆ ಕಾಲದಲ್ಲಿ ಪ್ರತಿ ಐದನೇ ಹೆಣ್ಣುಮಗಳು ಗರ್ಭಿಣಿಯಿರುತ್ತಾಳೆ.
ಸಾಮಾನ್ಯವಾಗಿ ಅಮೇರಿಕನ್ ಕುಮಾರಿಯರು ತಮ್ಮ ಹದಿನೆಂಟನೇ ವಯಸ್ಸಿನಲ್ಲಿಯೂ, ಹುಡುಗರು ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿಯೂ ಮದುವೆಯಾಗುತ್ತಾರೆ. ಅಂದರೆ ೧೪-೧೫ ವರ್ಷಕ್ಕೆ ಮದುವೆಯಾಗುವ ಕುಮಾರಿಯರೂ ಇದ್ದಾರೆ.

“ಅಮೇರಿಕನ್ ಪತ್ನಿ ಹೆಚ್ಚಾಗಿ ತನ್ನ ಮೊದಲ ಮಗುವನ್ನು ಹತ್ತೊಂಬತ್ತನೇ ವಯಸ್ಸಿನಲ್ಲೂ, ಕೊನೆಯ ಮಗುವನ್ನು ಇಪ್ಪತ್ತಾರನೇ ವಯಸ್ಸಿನಲ್ಲೂ ಪಡೆಯುತ್ತಾಳೆ. ಆದ್ದರಿಂದ ಮೂವತ್ತಾರು ವರ್ಷದ ಮಹಿಳೆ ಅಜ್ಜಿಯಾಗಿದ್ದರೆ ಆಶ್ವರ್ಯವಿಲ್ಲ.
ಒಮ್ಮೊಮ್ಮೆ ಮಗುವನ್ನು ಗಾಡಿಯಲ್ಲಿ ದೂಡಿಕೊಂಡು ಹೋಗುವ ತಾಯಿ, ಇನ್ನೂ ಬುದ್ಧಿಯಿಂದ ಮಗುವಾಗಿಯೇ ಇರುತ್ತಾಳೆ.
ಪ್ರತಿ ಐದು ಮದುವೆಗಳಲ್ಲಿ ಒಂದು ವಿವಾಹವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ.
ಒಮ್ಮೆ ವಿವಾಹವಿಚ್ಛೇದನೆಯಾದವರು, ಎರಡು–ಮೂರು ಸಲ ಮರು ಮದುವೆ ಮಾಡಿಕೊಳ್ಳುವದೂ ಉಂಟು. ಇಂಥವರಿಗೆ ಮೂರು ವಿವಾಹಗಳ ಮಕ್ಕಳೂ ಇರುವುದು ಸಾಮಾನ್ಯ.
ವಿಚ್ಛೇದನೆ ಹೊಂದಿದವರ ಮಕ್ಕಳಿಗೆ ಸಾಕಷ್ಟು ಆತ್ಮೀಯತೆಗಳು ಸಿಗುವುದಿಲ್ಲ. ಬಾಲ ಅಪರಾಧಿಗಳಲ್ಲಿ ಇವರ ಸಂಖ್ಯೆಯೇ ಹೆಚ್ಚಾಗಿದೆ.
ನವಜನಾಂಗದಲ್ಲಿ ಹಿರಿಯರ ಬಗ್ಗೆ, ಸಮಾಜದ ಬಗ್ಗೆ, ಚರ್ಚಿನ ಬಗ್ಗೆ, ಸರಕಾರದ ಬಗ್ಗೆ ಯಾವ ಆದರವೂ ಇರುವುದಿಲ್ಲ. ಹೀಗಾಗಿ ಸ್ವೇಚ್ಛಾಚಾರಿಯಾಗುತ್ತಾರೆ.
ಪ್ರತಿ ಹನ್ನೆರಡು ಅಮೇರಿಕನ್ನರಲ್ಲಿ ಒಬ್ಬ ಮಾನಸಿಕ ರೋಗಿಯಿರುತ್ತಾನೆ. 2
ಅಮೇರಿಕನ್ ಸರಕಾರ ಮತ್ತು ಸಮಾಜಗಳು ಈ ತೊಡಕುಗಳನ್ನು ಬಿಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಮದುವೆಯಾಗದ ತಾಯಂದಿರಿಗೆ `ಅಶ್ರಮ’ಗಳನ್ನು ತೆರೆದಿದ್ದಾರೆ. ತಂದೆ-ತಾಯಿಗಳಿಗೆ ಬೇಡಾದ (unwanted) ಮಕ್ಕಳನ್ನು ಸಾಕಲು ಕೊಡುವ ಏರ್ಪಾಡಿದೆ. ಅಲಕ್ಷಿತ (neglected) ಮಕ್ಕಳಿಗಾಗಿ ಮಿತ್ರಗೃಹ (friendship homes) ಗಳಿವೆ. ಇವೆಲ್ಲ ವ್ಯವಸ್ಥೆ ಇದ್ದರೂ ಸಮಸ್ಯೆಗಳು ಹೆಚ್ಚುತ್ತಲೆ ಇವೆ. ಆದರೆ ಸಮಸ್ಯೆಗಳ ಮೂಲ ಕಾರಣವನ್ನು ಹುಡುಕಿ ತೆಗೆದು ಅದಕ್ಕೆ ಕೊಡಲಿಯೇಟು ಹಾಕುವ ಧೀರಪ್ರಯತ್ನವನ್ನು ಸಮಾಜ, ಸರಕಾರಗಳೆರಡೂ ಮಾಡುತ್ತಿಲ್ಲ. ಅಮೇರಿಕನ್ ಜನಜೀವನವನ್ನು ಪರಿಶೀಲಿಸಿದರೆ ಅವರ ಸಮಸ್ಯೆಗಳ ಕಾರಣಗಳು ತಾನಾಗಿ ಹೊಳೆಯುವವು.

ಅಮೇರಿಕನ್ ಕೌಟುಂಬಿಕ ಜೀವನದ ಅಡಿಗಲ್ಲೆಂದರೆ ವೈಯಕ್ತಿಕ ಸ್ವಾತಂತ್ರ್ಯ ಸಮಾನತೆ, ಇಂತಹದರಲ್ಲಿ ತಂದೆ-ತಾಯಿಗಳಿಗೆ ಮಕ್ಕಳ ಮೇಲೆ ಅಧಿಕಾರವೂ ಇಲ್ಲ.
ಮಕ್ಕಳಿಗೆ ದುಡಿದು ಹಣ ಸಂಪಾದಿಸುವ ಸೌಲಭ್ಯಗಳಿದ್ದುದರಿಂದ ಅವರು ಪಾಲಕರ ಮೇಲೆ ಅಷ್ಟೊಂದು ಅವಲಂಬಿಸುವುದಿಲ್ಲ.
ಗಂಡು-ಹೆಣ್ಣಿನ ಮಿಲನ ಸಾಮೂಹಿಕ ಚಟುವಟಿಕೆಯೆಂದು ಪರಿಗಣಿಸಲ್ಪಟ್ಟಿರುವದರಿಂದ ಅದಕ್ಕೆ ಯಾವ ನಿರ್ಬಂಧವೂ ಇಲ್ಲ.
ಸಿಗರೇಟುಗಳನ್ನು ಯಂತ್ರಗಳು ಮಾರುವುದರಿಂದ ಅಮೇರಿಕನ್ ಮಕ್ಕಳು ಯಾವ ನಿರ್ಬಂಧವೂ ಇಲ್ಲದೇ ತೀರ ಚಿಕ್ಕ ವಯಸ್ಸಿನಿಂದಲೇ ಸೇದುವುದನ್ನು ಪ್ರಾರಂಭಿಸುತ್ತಾರೆ.
ಬಿಯರ್, ಸೆರೆ ಸೇವಿಸುವುದು ಸಾಮಾಜಿಕ-ಪದ್ಧತಿಯೆನಿಸುವದರಿಂದ ಮಕ್ಕಳು ಸಮಾಜದಲ್ಲಿ ಅಷ್ಟೇಕೆ ಮನೆಯಲ್ಲೆ ಇವುಗಳ ರುಚಿ ನೋಡುತ್ತಾರೆ. `ಸಾಮಾಜಿಕ ಪದ್ಧತಿ’ ಬರಬರುತ್ತ ರೂಢಿಯಾಗಿಬಿಡುತ್ತದೆ.
ಎಷ್ಟೋ ಮಕ್ಕಳಿಗೆ ತಂದೆ-ತಾಯಂದಿರ ಕಾರು ನಾಲ್ಕು ಗಾಲಿಯ ಪ್ರಣಯಮಂದಿರವಾಗಿಬಿಡುತ್ತದೆ.

ಗೃಹವಿಜ್ಞಾನ