ಮೊಗೂಬಾಯಿ ಕುರ್ಡಿಕರ (೧೯೦೪-೨೦೦೧) ಭಾಗ ೧

೧೯೦೪ರ ಜುಲೈ ೧೫ರಂದು ಗೋವಾದ ಕುರ್ಡಯಿ ಊರಲ್ಲಿ ದೇವದಾಸಿ ಮನೆತನದಲ್ಲಿ ಮೋಗುಬಾಯಿ ಹುಟ್ಟಿದರು. ರವಳನಾಥ ದೇವಾಲಯದ ಪರಿಚಾರಿಕೆ, ಇವರ ತಾಯಿ ಸಂಗೀತ ನೃತ್ಯದ ಬಾಲಾಮೃತವನ್ನು ಇವರಿಗೆ ಚಿಕ್ಕವರಿದ್ದಾಗಿನಿಂದ ಕುಡಿಸಿರಬೇಕು. ಕರ್ನಾಟಕದ ನಾಗರತ್ನಮ್ಮನವರ ಹಾಗೆ. ತಾಯಿಯ ಹೆಸರು ಜಯಶ್ರಿಬಾಯಿ. ಅವರ ಶಾರೀರ ಕೂಡ ಅತ್ಯಂತ ಮಧುರವಾಗಿತ್ತು. ಗ್ವಾಲಿಯರ್ ಪರಂಪರೆಯ ರಾಮಕೃಷ್ಣ ಬುವಾ ವಝೆ ಆ ಕಾಲದಲ್ಲಿ ಈ ದೇವದಾಸಿಯರಿಗೆ ಸಂಗೀತ ಶಿಕ್ಷಣ ಕೊಡುತ್ತಿದ್ದರು. (ದತ್ತಿಬಾಯಿ, ತಾರಾಬಾಯಿ ಶಿರೋಡಕರ್ ಇತ್ಯಾದಿ) ಎರಡು ವರ್ಷದ ಪುಟ್ಟ ಮೋಗುವಿಗೆ ಅವರ ಬಳಿಯಲ್ಲೇ ಕಲಿಸಬೆಕೆಂದು ಅಮ್ಮನ ಹಂಬಲ. ಆದರೆ ಅವರ ಇಚ್ಛೆ ನೆರವೇರಲಿಲ್ಲ. ಮಗುವಿನ ವಯಸ್ಸು ತುಂಬಾ ಎಳೆಯದು, ಐದು ವರ್ಷದಾದ ಕೂಡಲೇ ಕಂಕುಳಲ್ಲಿ ಮಗುವನ್ನೆತ್ತಿ ನಡೆದರು ಪಕ್ಕದ ಜಾಂಬಾವಲಿಯತ್ತ (Jamboleum in Goa). “ಬುವಾ, ಈ ಮೋಗುಗೆ ಗಾನಾ ಕಲಿಸ್ತಿರಾ? ಪರಮೇಶ್ವರನ ಕೃಪೆ, ಅತ್ಯಂತ ಸುಂದರ ಶಾರೀರ ಪಡೆದಿದ್ದಾಳೆ. ನಿಮ್ಮ ಕೃಪೆ ಇದ್ದರೆ, ಸ್ವಲ್ಪ ಸಂಗೀತ ಕಲಿತಾಳು? ಎಂದು ರಾಮಕೃಷ್ಣ ಬುವಾ ವಝೆ ಅವರಲ್ಲಿ ಬೇಡಿಕೊಂಡಳು ತಾಯಿ. “ಅಮ್ಮ ನಮ್ಮದೇನು? ನಮ್ಮ ಕಾಲಿಗೆ ಚಕ್ರ. ಈ ಚಾತುರ್ಮಾಸ ಇಲ್ಲಿ, ಯಾರಿಗೆ ಗೊತ್ತು ಮುಂದೆ ಎಲ್ಲಿ?”

“ನಾಲ್ಕು ತಿಂಗಳಾದರೆ, ನಾಲ್ಕು ತಿಂಗಳು. ಇರಲಿ ನಿಮ್ಮ ಜೊತೆ. ನಿಮ್ಮ ತಾಲೀಮು ನಾಕು ತಿಂಗಳೆಂದರೆ, ಬೇರೆಯವರದು ಒಂದು ವರ್ಷ.” ಸರಿ! ನಾಲ್ಕು ತಿಂಗಳು ತಾಯಿ ಮತ್ತು ಮಗಳು ಜಾಂಬಾವಲಿಯಲ್ಲಿ ಉಳಿದರು. ಆದರೆ ಮುಂದೆ? ಕುರ್ಡಯಿಗೆ ಮರಳಿ ಬಂದ ತಾಯಿಗೆ ಮಗಳದೇ ಕಾಳಜಿ. ನಾಲ್ಕೇ ತಿಂಗಳಲ್ಲಿ ಐದು ವರ್ಷದ ಬಾಲಕಿಗೆ ಎಲ್ಲ ಸ್ವರಗಳ ಪರಿಚಯವಾಗಿತ್ತು. ಅಂದಿನ ಕಾಲದಲ್ಲಿ (೧೯೧೦-೧೯೧೫) ಮರಾಠಿ ನಾಟಕ ಕಂಪನಿಗಳು ಸಂಗೀತ ಉಸ್ತಾದರನ್ನೂ-ಪಂಡಿತರನ್ನೂ ತಮ್ಮ ತಮ್ಮ ಕಂಪನಿಗಳಲ್ಲಿ ಸಂಬಳಕೊಟ್ಟು ಇಟ್ಟುಕೊಳ್ಳುವ ರೂಢಿ ಇತ್ತು. ಚತುರ ಜಯಶ್ರೀ ಬಾಯಿ ತಾನೇ ನಾಟಕ ಕಂಪನಿಯಲ್ಲಿ ಕೆಲಸ ಮಾಡಿದರೆ, ತಂತಾನೆ ಸಂಗೀತ ಕಲಿಸುವ ಪ್ರಶ್ನೆ ಪರಿಹಾರವಾಗುತ್ತದೆ ಎಂದುಕೊಂಡು ನಿರ್ಧರಿಸಿ ಹುಡುಕಲು ಪ್ರಾರಂಭಿಸಿದರು. ಕೊಂಕಣಿ ಕಂಪನಿ ಇದ್ದರೆ ಭಲೆ! ಸಂಗೀತ ಕಲಿಸುವ ಉಸ್ತಾದ ಇದ್ದರೆ ಡಬಲ್ ಭಲಾ! ಇಂತಹ ಒಂದು ಚಂದ್ರೇಶ್ವರ ಭೂತನಾಥ ಸಂಗೀತ, ನಾಟಕ ಮಂಡಳಿ ಜಯಶ್ರೀಬಾಯಿಯವರಿಗೆ ಗೋವಾದಲ್ಲೇ ಸಿಕ್ಕಿತು!
ಚಂದ್ರೇಶ್ವರ, ಗೋವಾದಲ್ಲಿಯ ಒಂದು ಬೆಟ್ಟ. ಚಂದ್ರೇಶ್ವರದೇವರು ಈ ಬೆಟ್ಟದ ಅಧಿದೇವತೆ. ಪರ್ವತದ ಸುತ್ತಲೂ ಒಂದಿಪ್ಪತ್ತು ಕುಳಗಳು. ಖ್ಯಾತ ತಬಲಾವಾದಕ ಲಯಭಾಸ್ಕರ, ಖಾಪುಮಾಮಾ ಪರ್ವತಕರ್ ಇಲ್ಲಿಯವರೇ. ಅವರು ವಿಚಿತ್ರವೀಣೆ, ದಿಲರುಬಾ ಇತ್ಯಾದಿ ವಾದ್ಯಗಳನ್ನು ಬಾರಿಸುತ್ತಿದ್ದರು. ನಂತರ ಸನ್ಯಾಸಾಶ್ರಮದಲ್ಲಿದ್ದು ಸಂಗೀತ ಮುಂದುವರೆಸಿದರು. ಇಲ್ಲಿ ಮೋಗುಬಾಯಿಗೆ ಅವಳ ವಯಸ್ಸಿಗೆ ತಕ್ಕಂತೆ ‘ಪ್ರಹ್ಲಾದ’, ‘ಧ್ರುವ’ ಪಾತ್ರಗಳಲ್ಲಿ ಬಾಳು ಪರ್ವತಕರ್ (ಕಂಪನಿಯ ಮಾಲಿಕರು) ಶಿಕ್ಷಣ ಕೊಟ್ಟರು. ಜಯಶ್ರೀ, ನಾಟಕಗಳಲ್ಲಿಯೂ ತಾಯಿಯ ಪಾತ್ರ ವಹಿಸಿದ್ದರಿಂದ ವೇದಿಕೆಯ ಅಂಜಿಕೆ ತಂತಾನೆ ಬಿಟ್ಟು ಹೋಯಿತು. ಹೀಗೆ ಶುರು ಆಯಿತು ಮೋಗುಬಾಯಿಯವರ ನಾಟ್ಯ ಸಂಸ್ಕಾರ.
ಸ್ಥಾನೀಯ ನಾಟಕ ಕಂಪನಿಗಳ ಉತ್ಪನ್ನ ಅಷ್ಟಕಷ್ಟೆ, ಎರಡು ಹೊತ್ತಿನ ಕೂಳು, ವಿಶ್ರಾಮ, ನಾಟಕಗಳಲ್ಲಿಯ ಸಂಗೀತ-ಸಾಹಿತ್ಯದ ಅಭ್ಯಾಸ. ಗೋವಾದಲ್ಲಿಯೇ ಕಂಪನಿಯ ತಿರುಗಾಟ. ಹೀಗಿದ್ದಾಗಲೇ ಒಂದು ದಿನ ಮಾಲಕರು ನಾಟಕ ಕಂಪನಿಗೆ ಬೀಗ ಜಡಿದರು! ಇಷ್ಟರಲ್ಲಿ ಮೋಗು ೮ ವರ್ಷದವಳಾಗಿದ್ದು, ನಾಟಕದ ಪದ್ಯಗಳಿಗೆ ‘ವನ್ಸಮೋರ್’ ತೆಗೆದುಕೊಳ್ಳುವದು ವಾಡಿಕೆಯಾಗಿ ಬಿಟ್ಟಿತ್ತು. ತಾಯಿಗೆ ಆ ಕಾಲಕ್ಕೆ ಗುಣವಾಗದ ಕ್ಷಯರೋಗ ಅಂಟಿಕೊಂಡಿತ್ತು. ಕುರ್ಡಯಿಯಲ್ಲಿಯೇ ತಾಯಿ ಕಾಲವಶರಾದರು. ಎಂಟು ವರ್ಷದ ತಬ್ಬಲಿ ಮೋಗು! ಬಾಳು ಪರ್ವತಕರರ ಆಶ್ರಯದಲ್ಲಿದ್ದ ಮಗುವಿಗೆ ಒಂದು ದಿನ ಗುರುಗಳು (ಬಾಳಕೃಷ್ಣ ಬುವಾ ವಜ಼ೆ) ಹೇಳಿದರು, “ಮೋಗು, ಸಾತಾರಕರ ಮಂಡಳಿಯಿಂದ ನಿನಗೆ ಕಂಪನಿ ಸೇರಲು ಆಮಂತ್ರಣ ಬಂದಿದೆ. ನನಗೂ ಬಾ ಎಂದು ಹೇಳಿದ್ದಾರೆ. ಕಿರ್ಲೋಸ್ಕರ್ ಕಂಪನಿಯಲ್ಲಿ ತರಬೇತಿ ಪಡೆದ ಚಿಂತೋಬಾ ಗುರವ ದಿವೇಕರರೂ (ಇವರು ಪುಣೆಯ ಖ್ಯಾತ ವೀಣಾವಾದಕ ಹಿಂದರಾಜ ದಿವೇಕರರ ತಾತ) ಅಲ್ಲಿದ್ದಾರೆ. ನಿನ್ನ ಮುಂದಿನ ಶಿಕ್ಷಣದ ಪ್ರಬಂಧ ಆಗಿದೆ, ನಡೆ“ ಎಂದು ಇಬ್ಬರೂ ಆ ಕಂಪನಿಯತ್ತ ನಡೆದರು.

ಇದೆಲ್ಲ ಮಾಹಿತಿ, ಮುಂದೆ ಬರುವ ಘಟನೆಗಳನ್ನೆಲ್ಲ ಕೌಸಲ್ಯಾತಾಯಿಯವರ ಪತಿ, ಮಂಜೇಶ್ವರ ದಿನಕರರಾಯರು ನನಗೆ ಆಗಾಗ ಹೇಳಿದ್ದು, ನಾನು ಬರೆದುಕೊಂಡಿದ್ದು. ಸಾತಾರಕರ ನಾಟಕ ಮಂಡಳಿ ಕೇವಲ ಸ್ತ್ರೀ ಕಲಾವಿದರದು, ಗಂಡು ಪಾತ್ರಗಳನ್ನು ಕೂಡ ಸ್ತ್ರೀಯರೇ ಮಾಡುತ್ತಿದ್ದರು. ೧೯೧೦-೧೧ರಲ್ಲಿ ಸ್ಥಾಪನೆಯಾದ ಈ ಕಂಪನಿ ಒಳ್ಳೆಯ ಉಚ್ಛ್ರಾಯ ಅವಸ್ಥೆಯಲ್ಲಿತ್ತು, ಚಿಂತೋಬಾ ಗುರವ ಇವರು ಅತ್ಯಂತ ಲಕ್ಷ್ಯಪೂರ್ವಕವಾಗಿ ಮೋಗುಬಾಯಿಗೆ ಸಂಗೀತ ಕಲಿಸಲು ತೊಡಗಿದರು. ‘ರಾಮರಾಜ್ಯವಿಯೋಗ’ದಲ್ಲಿ, ‘ವಿವೇಕ’, ಪುಣ್ಯಪ್ರಭಾವ ನಾಟಕದಲ್ಲಿ, ‘ಕಿಂಕಿಣಿ’, ಅಣ್ಣಾಸಾಹೇಬ ಕಿರ್ಲೋಸ್ಕರರ ಅಜರಾಮರವಾದ ‘ಸೌಭದ್ರ’ ನಾಟಕದಲ್ಲಿ, ‘ಸುಭದ್ರಾ’, ಇವೆಲ್ಲ ಪ್ರಮುಖ ಪಾತ್ರಗಳು ಮೋಗುಬಾಯಿಯವರ ಪಾಲಿಗೆ ಬಂದವು. ಈ ಕಂಪನಿಯಲ್ಲಿ ನೃತ್ಯ ಕಲಿಸಲು, ರಾಮಲಾಲ್, ಚುನಿಲಾಲ್ ಮತ್ತು ಮಜಲೇಖಾನ್ ಎಂಬ ನೃತ್ಯವಿಶಾರದರೂ ಇದ್ದರು. ಹೀಗೆ ನೃತ್ಯ ಮತ್ತು ಸಂಗೀತದಲ್ಲಿ ಪ್ರಾವಿಣ್ಯಗಳಿಸುತ್ತಾ ಬಾಲಕಿ ಮೋಗು ತಾರುಣ್ಯದೆಡೆ ಹೆಜ್ಜೆ ಹಾಕುತ್ತಿದ್ದಳು. ತುಂಬ ತಾರುಣ್ಯದ ಈ ಯುವತಿ ಅನೇಕರ ಮನ ಸೆಳೆಯುತ್ತಿದ್ದರೆ ಆಶ್ಚರ್ಯವೇನಿಲ್ಲ. ಗೋವಾದಲ್ಲಿ ಅಂಜನಿಬಾಯಿ ಮಾಲ್ಪೇಕರ ಜೊತೆ ಆದ ಪ್ರಸಂಗವೇ ಮಹಾರಾಷ್ಟ್ರದಲ್ಲಿಯ ಒಂದು ಚಿಕ್ಕ ಸಂಸ್ಥಾನದಲ್ಲಿ ಮೋಗುಬಾಯಿಯವರೊಂದಿಗೆ ಆಯಿತಂತೆ. ‘ಪುಣ್ಯ ಪ್ರಭಾವ’ದಲ್ಲಿ ಕಿಂಕಿಣಿಯ ಪಾತ್ರ ವಹಿಸಿದ ಮೋಗು ಅವರ ಮೇಲೆ, ಮೋಹಿತರಾದ ಸಂಸ್ಥಾನಿಕರು ಎರಡು ಅಂಕಗಳು ಆದ ನಂತರ ನಾಟಕ ಕಂಪನಿಯ ಮಾಲಿಕರಿಗೆ, “ಕಿಂಕಿಣಿಯನ್ನು ಬಂಗಲೆ ಹತ್ತಿರ ನಾಟಕ ಮುಗಿದ ಕೂಡಲೇ ಕರತರಬೇಕು” ಎಂಬ ಕಟ್ಟಾಜ್ಞೆಯನ್ನು ಮಾಡಿದರು. ಮಾಲಿಕರು ಅತ್ಯಂತ ಧೈರ್ಯದಿಂದ ಮೋಗುಬಾಯಿಯವರನ್ನು ಮೋಟಾರಿನಲ್ಲಿ ಕುಳ್ಳಿರಿಸಿ ಈ ಸಂಸ್ಥಾನದ ಹದ್ದು ದಾಟಿಸಿದರು. ಎರಡೇ ಅಂಕಗಳಲ್ಲಿ ಕಿಂಕಿಣಿಯ ಪಾತ್ರವಿದ್ದ ಕಾರಣದಿಂದ ನಾಟಕ ಮುಗಿಯುವಷ್ಟರಲ್ಲಿ ಮೋಗು ಪರಾರಿಯಾಗಿದ್ದಳು. ಅವರ ಬಲಗೈ ತೋಳಿನ ಮೇಲಿನ ದೊಡ್ಡ ಗಾಯದ ಕಲೆ ಈ ಭಯಾನಕ ನೆನಪನ್ನು ಪದೇ ಪದೇ ಮಾಡುತ್ತಿತ್ತಂತೆ. ಈ ಪ್ರಸಂಗದ ನಂತರ ಮೋಗುಬಾಯಿ ಮರಳಿ ರಂಗಭೂಮಿಯ ಕಡೆ ನೋಡಲಿಲ್ಲ. ಆಕೆ ತನ್ನ ಊರು ಕುರ್ಡಯಿ ಸೇರಿದಳು. ಇದ್ದ ಒಂದೇ ಜೀವಕ್ಕೆ ಜತೆ ಎಂದು ಚಿಕ್ಕಮ್ಮ ರಮಾಬಾಯಿ ಇದ್ದರು. ಒಂದು ವರ್ಷ ಕೆಲಸ ಕಾರ್ಯವಿಲ್ಲದೇ ಮನೆಯಲ್ಲಿಯೇ ದಿನನಿತ್ಯ, ಗೊತ್ತಿದ್ದಷ್ಟೇ ರಾಗ-ಪದಗಳ ಉಜಳಣಿ ತಂಬೂರಿಯ ಜೊತೆಗೆ ನಡೆದೇ ಇರುತ್ತಿತ್ತು. ಬಾಳುಮಾಮಾ ಪರ್ವತಕರ್ ಆಗಿಂದಾಗ ಮನೆಗೆ ಬಂದು ಸ್ಫೂರ್ತಿ ಕೊಟ್ಟು ಹೋಗುತ್ತಿದ್ದರು.

೧೯೧೯ರಲ್ಲಿ ಬಾಳುಮಾಮಾರ ಜೊತೆ ಸಾಂಗಲಿಗೆ ಮೋಗುಬಾಯಿಯ ಬರೋಣವಾಯಿತು. ಇನಾಯತಖಾನರ ಬಳಿ ಅವರ ಸಂಗೀತ ಶಿಕ್ಷಣ ಶುರು ಆದ ೩-೪ ತಿಂಗಳಲ್ಲೇ ಅದೂ ನಿಂತು ಹೋಯಿತು. ಇನಾಯತಖಾನರಿಗೆ ಕಲಿಸುವ ಡಿಮಾಂಡ ಬಹಳ ಇತ್ತು. ಗೋವಾದವರೇ ಆದ ಜ್ಯೋತ್ಸ್ನಾ ಕೆಳೇಕರ್ (ಭೋಳೆ) ಇವರಿಗೂ ಕಲಿಸುತ್ತಿದ್ದರು. ಮೋಗು ಧೈರ್ಯಗೆಡದೇ ಇನಾಯತಖಾನರು ಕಲಿಸಿದ್ದ ಚೀಜುಗಳನ್ನು ಮತ್ತೇ ಮತ್ತೇ ಹಾಡುತ್ತ, ಗೊತ್ತಿದ್ದ ಹಾಡುಗಳನ್ನು ತಂಬೂರಿಯೊಂದಿಗೆ ತಾಲೀಮು ಮಾಡುತ್ತಿರುತ್ತಿದ್ದಳು.

ಒಂದು ದಿನ ಹೀಗೆಯೇ, ಸಾಂಗಲಿಯ ಬಾಡಿಗೆ ಮನೆಯಲ್ಲಿ ತಂಬೂರಿ ಮೀಟುತ್ತ ‘ಮೃಚ್ಛಕಟಿಕ’ ನಾಟಕದಲ್ಲಿಯ ಒಂದು ಹಾಡು, ‘ಮಾಡಿವರಿ ಚಲಗ ಗಡೆ’ ನಾಟ್ಯ ಸಂಗೀತದಂತೆ ಹಾಡದೇ, ಖಯಾಲದಂತೆ ಹಾಡುತ್ತ ಹಾಡುತ್ತ ಮಗ್ನಳಾದಾಗ ರಸ್ತೆಯಲ್ಲಿ ನಡೆಯುತ್ತಿದ್ದ, ಒಬ್ಬ ಶುಭ್ರ ವಸ್ತ್ರಧಾರಿ, ತೇಜಪುಂಜ ವ್ಯಕ್ತಿ ಒಮ್ಮೆಲೆ ಮೋಗುಬಾಯಿ ಹಾಡುತ್ತಿದ್ದುದನ್ನು ಕೇಳುತ್ತ ನಿಂತು, ಹಾಡು ನಿಲ್ಲಿಸಿದ ಕೂಡಲೇ ಭಾವ ಸಮಾಧಿಯಿಂದ ಹೊರಗೆ ಬಂದು, ಮಾಳಿಗೆ ಏರಿ ಮೋಗುವಿಗೆ ಧೀರ ಗಂಭೀರ ಧ್ವನಿಯಲ್ಲಿ, “ಗಾತೆ ರಹೊ ಬೇಟಿ, ಗಾತೆ ರಹೋ. ಪ್ರತಿದಿನ ಇಲ್ಲಿಂದ ಹೋಗುವಾಗ ನಿನ್ನ ಹಾಡನ್ನು ಕೇಳುತ್ತಿರುತ್ತೇನೆ. ನಿನ್ನ ಮುಂದೆ ಕುಳಿತು ಹಾಡು ಕೇಳುವ ಮನಸ್ಸಾಯಿತು. ಮೇಲೇರಿ ಬಂದೆ. ಹಾಡ್ತಿಯಾ?” ಎಂದು ಕೇಳಿದರು.
ಮೋಗುಬಾಯಿ ಪಿಟ್ಟೆನ್ನದೇ ಹಾಡಿನ ಅಂತರಾ ಪುನಃ ಪ್ರಾರಂಭಿಸಿದರು. ಹಾಡು ಮುಕ್ತಾಯವಾದ ಮೇಲೆ, “ಬೇಟಾ, ನಾಳೆಯಿಂದ ನಾನು ನಿನ್ನ ರಿಯಾಜ಼ು ಪ್ರಾರಂಭ ಮಾಡುತ್ತೇನೆ” ಎಂದಿಷ್ಟೇ ಹೇಳಿ ಮೋಗುವಿನ ನಮಸ್ಕಾರ ಸ್ವೀಕರಿಸುತ್ತಾ ಆ ವ್ಯಕ್ತಿ ಹೊರಟುಹೋಯಿತು.

ಇವರೇ ಖ್ಯಾತಿವೆತ್ತ ಉಸ್ತಾದ ಅಲ್ಲಾದಿಯಾಖಾನ ಸಾಹೇಬರು! ಮೋಗುವಿಗೆ ಅಕ್ಷರಶಃ ಅಲ್ಲಾದಿಯಾರ ಪರಿಚಯವಿರಲಿಲ್ಲ. ಕೇವಲ ೧೫-೧೬ರ ತರುಣಿ. ಅವರ ಠೀವಿ ನೋಡಿ ಅವರು ಸಂಗೀತದಲ್ಲಿಯ ಅಧಿಕಾರಯುತ ವ್ಯಕ್ತಿ ಎಂದಿಷ್ಟೇ ಗೊತ್ತಾಗಿತ್ತು ಅವರಿಗೆ. ತಾಲೀಮು ಪ್ರಾರಂಭವಾದ ೪-೫ ದಿನಗಳ ನಂತರವೇ ತನಗೆ ಕಲಿಸುವ ಉಸ್ತಾದ ಅಲ್ಲಾದಿಯಾಖಾನರು ಎಂದು ತಿಳಿದು ಬಂತು! ಭೀಮಸೇನ್ ಜೋಶಿಯವರಿಗೆ ಗುರುವಿನ ಶೋಧದಲ್ಲಿ ಊರೂರು ಸುತ್ತಬೇಕಾಗಿತ್ತು. ಆದರೆ ಇಲ್ಲಿ ಗುರುಗಳು ಶಿಷ್ಯರ ಶೋಧದಲ್ಲಿ ಬಂದಿದ್ದರು! ಹೀಗೆ ಸುಮಾರು ೨ವರ್ಷ ಅಲ್ಲಾದಿಯಾಖಾನರ, ‘ಸಿನಾ ಬಸೀನಾ (ಗುರುಮುಖಿ) ತಾಲೀಮು ಮೋಗುಬಾಯಿಯವರಿಗೆ ಸಿಕ್ಕಿತು. ‘ಮುಲ್ತಾನಿ’, ‘ತೋಡಿ’, ‘ಪೂರ್ವಿ’ ಮತ್ತು ‘ಧನಶ್ರೀ’ ಈ ನಾಲ್ಕು ರಾಗಗಳನ್ನು ತಮ್ಮ ಶಿಷ್ಯಳ ಶ್ರೀಕಂಠದಲ್ಲಿ ಇಳಿಸಿದರು. ತಮ್ಮ ಜೈಪುರ್–ಅತ್ರೋಳಿ ಪರಂಪರೆಯ ಅನುಸಾರವಾಗಿ ಉಸ್ತಾದರ ಆರೋಗ್ಯ ಮತ್ತು ವಯಸ್ಸು ನೋಡಿದರೆ ಆ ಕಾಲದಲ್ಲಿ ಮೋಗು, ‘ಬಹುತ ಕುಛ್’ ಕಲಿತಿರಬೇಕೆಂದು ತಜ್ಞರ ಊಹೆ. ಆಯುರ್ವೇದ ಪಂಡಿತರಾದ ಸಾಂಬಾರೆ ವೈದ್ಯರ ಮನೆಗೆ ಹೋಗುವ ದಾರಿಯಲ್ಲಿಯೇ, ಮೋಗುಬಾಯಿಯವರ ಬಾಡಿಗೆಯ ಖೋಲಿ. ಆಗಾಗ ಭೇದಿಯಿಂದ ಬಳಲುತ್ತಿದ್ದ ಖಾನಸಾಹೇಬರು ಪ್ರತಿದಿನ ತಪ್ಪದೇ ವೈದ್ಯರ ಮನೆಗೆ ಹೋಗಿ ಬರುವಾಗ ಮೋಗುಗೆ ರಿಯಾಜು ಮಾಡಿಸುತ್ತಿದ್ದರು………

ಮುಂದುವರೆಯುವದು