’ಸಂಗೀತ ಸರಸಿ- ಪ್ರಕಾಶ ಬುರ್ಡೆಯವರ ಸಂಗೀತಯಾನ’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಎಸ್ ಎಲ್ ಭೈರಪ್ಪನವರ ಭಾಷಣ. ಭಾಗ ೧

ಪ್ರಕಾಶ ಬುರ್ಡೆಯವರ ,  ಸಂಗೀತ ಸರಸಿ – ಪ್ರಕಾಶ  ಬುರ್ಡೆ ಯವರ ಸಂಗೀತ ಯಾನ  ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮವು ಡಾ ಕೃಷ್ಣಾನಂದ ಕಾಮತ್ ಪ್ರತಿಷ್ಠಾನ , ಹೊನ್ನಾವರ ಇದರ ಆಶ್ರಯದಲ್ಲಿ , ಶನಿವಾರ ೧೧ ಮಾರ್ಚ ೨೦೦೭ರಂದು ನಗರ  ಕೇಂದ್ರ ಗ್ರಂಥಾಲಯದ ಕಿಕ್ಕಿರಿದ ಸಭಾಗೃಹದಲ್ಲಿ  ಸಾಯಂಕಾಲ   ೩ ರಿಂದ ೬ ಗಂಟೆಯ ಸಮಯದಲ್ಲಿ  ನೆರವೇರಿತು. ಆ ಸಂದರ್ಭದಲ್ಲಿ  ದೇಶದ ಜನಪ್ರಿಯ ಕಾದಂಬರಿಕಾರರಾದ ಎಸ. ಎಲ್ ಭೈರಪ್ಪನವರು ಮಾತನಾಡಿದರು. ಅವರ ಭಾಷಣದ ಅವತರಣಿಕೆಯನ್ನು ಈ ಕೆಳಗೆ ಕೊಡಲಾಗಿದೆ.

“ನಾನಂತೂ ವಿದ್ವತಪೂರ್ಣ ಭಾಷಣ ಮಾಡೊದಿಲ್ಲ. ಯಾಕೆ ಅಂದ್ರೆ ಸೃಜನಶೀಲ ಸಾಹಿತಿಯು ವಿದ್ವತಪೂರ್ಣ ಭಾಷಣಕ್ಕೆ ಇಳಿಯಬಾರದು, ಇಳದ್ರೆ ಸೃಜನಶೀಲತೆ ಬತ್ತಿ ಹೋಗತ್ತೆ ಅನ್ನೊದನ್ನ ಅನುಭವದಿಂದ ಹೇಳುತ್ತಿದ್ದೇನೆ. ಇವತ್ತಿನ ದಿವಸ ಮುಖ್ಯವಾಗಿ ಇಬ್ಬರು ಮಹನೀಯರ ಕೊಡುಗೆಯನ್ನು ಜ್ಞಾಪಿಸಿ ಕೊಳ್ಳೊ ಪ್ರಸಂಗ. ಕೃಷ್ಣಾನಂದ ಕಾಮತರು ನನಗೆ ಬಹಳ ಆತ್ಮೀಯರಾಗಿದ್ದರು. ನಮ್ಮ ಜ್ಯೋತ್ಸ್ನಾ ಕಾಮತರಿಗಿಂತ ಕೃಷ್ಣಾನಂದ ಕಾಮತರಲ್ಲಿ ಹೆಚ್ಚು ಆತ್ಮೀಯತೆ ಇತ್ತು. ಕಾರಣ ನಾವು ಇಬ್ಬರ ಪುರುಷರ ಜೊತೆ ಇರುವ ಆತ್ಮೀಯತೆ ಮಹಿಳೆಯರಲ್ಲಿ ಬರುವದು ಕಷ್ಟ. ಇವರು ರೇಡಿಯೊದಲ್ಲಿ ಇರುವದರಿಂದ ಸಲಿಗೆ ಜಾಸ್ತಿ ಕೊಟ್ರೆ ಕಾರ್ಯಕ್ರಮ ಕೊಡಿ ಎಂದು ಗಂಟು ಬೀಳ್ತಾರೆ ಅನ್ನೋ ಭಯಕ್ಕೆ ದೂರ ಇರತಿದ್ದೆ. ಕೃಷ್ಣಾನಂದ ಕಾಮತರು ಹಲವು ವಿಷಯಗಳಲ್ಲಿ ಪರಿಣಿತರು. ಮೂಲತಃ ವಿಜ್ಞಾನಿಗಳು, ಒಳ್ಳೆ ಫೊಟೊಗ್ರಾಫರು, ಪ್ರವಾಸ ಕಥನ ಬರೆಯುವವರು. ನಮ್ಮಿಬ್ಬರಲ್ಲಿ ಸಾಮ್ಯವಿತ್ತು. ನಾನೂ ಪ್ರವಾಸ ಮಾಡುವೆ ಆದರೆ ಪ್ರವಾಸ ಕಥನ ಬರೆದಿಲ್ಲ. ಅವರು ಬರೆಯುವವರು, ಪ್ರಕಟಣೆ ಕೂಡ ಮಾಡ್ತಾ ಇದ್ರು. ಸಾಹಿತ್ಯ ಓದುವವರು. ಜೊತೆಗೆ ಕೂತರೆ ಗಂಟೆಗಟ್ಲೆ ಮಾತಾಡ್ತಿದ್ವಿ. ಹೀಗಾಗಿ ಆತ್ಮೀಯತೆ ಇತ್ತು.”

ಪ್ರಕಾಶ ಬುರ್ಡೆಯವರು ಮುಂಬಯಿನಲ್ಲಿ ಇರುತ್ತಿದ್ದರು. ಅವರ ಸಂಗೀತದ ಪ್ರೇಮ ಆಳ, ಮತ್ತು ಸಂಗೀತದ ಜ್ಞಾನ ವಿಶಾಲವಾಗಿತ್ತು. ನಾನು ‘ಮಂದ್ರ’ ಕಾದಂಬರಿ ಬರೆಯುವಾಗ ನನಗೆ ಅವರಿಂದ ಒಂದು ವಿಶೇಷವಾದ ಸಹಾಯ ದೊರಕಿತು. ಆ ಕಾದಂಬರಿಯ ಬಹುಭಾಗ ಕ್ರಿಯೆ ಮುಂಬಯಿಯಲ್ಲಿದ್ದ ಕಾರಣ ನಾನು ಬಹಳ ಸಲ ಮುಂಬಯಿಗೆ ಹೋಗುತ್ತಿದ್ದೆ. ಮುಂಬಯಿಯ ಪರಿಚಯವಿದ್ದರೂ ಕೂಡ ಸಂಗೀತ ಕ್ಷೇತ್ರದ ಪರಿಚಯ ಅಷ್ಟು ನಿಕಟವಾಗಿ ಆಗಿರಲಿಲ್ಲ. ಸಂಗೀತ ಕ್ಷೇತ್ರದ ಬೇರೆ ಬೇರೆ ಮುಖಗಳನ್ನು ಬಲ್ಲವರ ಜೊತೆ ಇದ್ದು ನಾನು ಅಭ್ಯಾಸ ಮಾಡಿ ನೋಟ್ಸ ಬರಿತಿದ್ದೆ. ಹೀಗಾಗಿ ಮೂರು -ನಾಲ್ಕು ಸಲ ಮುಂಬಯಿಗೆ ಹೋಗಬೇಕಾಯಿತು. ಈ ಸಂದರ್ಭದಲ್ಲಿ ನನಗೆ ಪ್ರಕಾಶ ಬುರ್ಡೆಯವರ ಪರಿಚಯವಾಯಿತು. ಅವರು ನಾನು ಇದ್ದಷ್ಟು ದಿನ ಅಂದ್ರೆ ಎಂಟು ದಿನಾ ಬೆಳಿಗ್ಗೆಯಿಂದ ಸಂಜೆ ತನಕ ನನ್ನೊಡನೆ ಇದ್ದು ,ಯಾರಯಾರನ್ನ ಭೇಟಿ ಮಾಡಬೇಕು, ಅವರಿಂದ ಯಾವ ಯಾವ ಮಾಹಿತಿ ಸಂಗ್ರಹಿಸಬೇಕೆಂದು ಯಾದಿ ಮಾಡಿ ಕರಕೊಂಡು ಹೋಗ್ತಿದ್ದರು. ದೊಡ್ಡ ದೊಡ್ಡ ಸಂಗೀತಗಾರರ ಹತ್ತಿರ ಸಾಹಿತ್ಯಕ್ಕೆ ಬೇಕಾಗುವ ಮಾಹಿತಿ ಜಾಸ್ತಿ ಸಿಗೊಲ್ಲ. ಅವರಲ್ಲಿ ಒಂದು ತರಹದ ಶ್ರೀಮದ್ ಗಾಂಭೀರ್ಯ ಇರ್ತದೆ. ಬಹಳ ಮಾಹಿತಿ ಸಿಗೋದು ಈ ಮಧ್ಯಮ ವರ್ಗದ ಜನರು ಅಂದ್ರೆ ಸಾಥಿದಾರರು, ತಬಲಜಿಯವರು ಹಾರ್ಮೋನಿಯಮ್ ನುಡಿಸುವವರಿಂದ ಸಿಕ್ಕೊದು ಎಂದು ಅವರನ್ನು ಭೇಟಿ ಮಾಡಿಸಿದರು. ಬುರ್ಡೆಯವರಿಗೆ ಎಲ್ಲರೂ ಪರಿಚಯದವರೇ. ಹೋದ ತಕ್ಷಣ ಹರಟೆ ಶುರು ಮಾಡಸತಿದ್ರು. ಮಹಾರಾಷ್ಟ್ರದಲ್ಲಿ ಅದಕ್ಕೆ ಗಪ್ಪಾ ಅಂತಾರೆ. ಸಂಗೀತ ಜಗತ್ತಿನ ಒಳ ವಿಷಯ ಎಲ್ಲ ಹೇಳತಿದ್ರು.

“ಅವರಿಗೂ ಕೂಡ ಬುರ್ಡೆಯವರ ಜೊತೆ ಸ್ನೇಹ ಮತ್ತು ಸಮಾನತೆ ಇತ್ತು. ಅವರು ಹಿಂದಿ ಅಥವಾ ಮರಾಠಿಯಲ್ಲಿ ಮಾತಾಡ್ತಿದ್ರು, ಈ ಎರಡು ಭಾಷೆಗಳು ನನಗೆ ಗೊತ್ತಾಗುತ್ತಿರುವದರಿಂದ ಕೇಳ್ತಾ ಕೇಳ್ತಾ ನಾನು ನೋಟ ಮಾಡಿಕೊಳ್ತಿದ್ದೆ. ಪ್ರಕಾಶ ಅವರು ಮಧ್ಯ ಮಧ್ಯದಲ್ಲಿ ಕೆಲ ಹೆಚ್ಚಿನ ವಿವರಗಳನ್ನೂ ಕೂಡ ಡಿಕ್ಟೇಟ ಮಾಡೋವ್ರು. ಸಾಹಿತ್ಯ ಬರೆಯುವವನಿಗೆ ಒಳಜೀವನವೇ ಮುಖ್ಯವಾಗಿ ಬೇಕಾಗಿರೋದು. ವಿದ್ವತಪೂರ್ಣ ಶಾಸ್ತ್ರ ಬೇಕಿಲ್ಲ. ಶಾಸ್ತ್ರಾನು ನಾನು ಉಪಯೋಗಿಸಿದ್ದಿನಿ. ಒಂದು ದಿನ ಪ್ರಕಾಶ್ ಅವರು ಒಬ್ಬ ಸಂಗೀತಗಾರನನ್ನು ಭೇಟಿ ಮಾಡಸ್ತಿನಿ, ಅವನಿಗೆ ಸಂಗೀತ ಪ್ರಪಂಚದ ಬೇಕಾದಷ್ಟು ಮಾಹಿತಿ ಇದೆ ಎಂದು ಹೇಳಿದರು. ಆದರೆ ಅದು ಸಾಯಂಕಾಲ ಬಾರನಲ್ಲಿಯೇ ಆಗಬೇಕು ಎಂದು ಕರೆದುಕೊಂಡು ಹೋದರು. ಆ ಬಾರು ಒಂದು ಸಿಟಿ ಬಸ್ ತರಹ ಒಬ್ಬರ ಪಕ್ಕ ಇನ್ನೊಬ್ಬರು ಕುಳಿತಿದ್ರೂ, ಮಾತನಾಡಿದ್ದು ಕೇಳಿಸುತ್ತಿರಲಿಲ್ಲ. ಬುರ್ಡೆಯವರಂತೂ ಅವನಿಗೆ ಆರ್ಡರ್ ಮಾಡ್ತಾ ಇದ್ರು. ಕೊನೆಗೆ ಒಂದು ಹಂತ ಮೀರಿದ ಮೇಲೆ ಅವನಿಗೆ ಸರಿಯಾಗಿ ಮಾತಾಡೊಕೆ ಆಗಲಿಲ್ಲ. ನಾನು ಕರ್ನಾಟಕ ಸಂಘದ ಒಂದು ರೂಮಿನಲ್ಲಿ ಮಾಡಬಹುದಲ್ಲ ಅಂದೆ ಅದಕ್ಕೆ ಬುರ್ಡೆಯವರು ಅಲ್ಲಿ ಪಾನೀಯ ನಿಷಿಧ್ಧ ಅಂದರು. ನನಗಂತೂ ಇದೆಂತಹ ಕಲಾಹೀನತೆ! ಎಂದು ಅನಿಸಿತು. ಹೋಗಲಿ ಎಸ್ ಸಿ ಆರ್ ಭಟ್ಟ ಅಂದರೆ ಆ ಕಾಲದ ಬಹು ದೊಡ್ಡ ಸಂಗೀತಗಾರರು ಅವರ ಶಾಲೆಯಲ್ಲಿ ಮಾಡಿದರೆ ಎಂದು ಕೇಳಿದೆ. ‘ಅಯ್ಯೊ ಅವರು ಗುರುಗಳು ಸಾಧ್ಯವಿಲ್ಲ’ ಅಂದರು. ಹೀಗಾಗಿ ಅವನಿಂದ ಸಿಗುವ ಮಾಹಿತಿ ಕೂಡ ಸಿಗಲಿಲ್ಲ.”

“ಇನ್ನೂ ಈ ಪುಸ್ತಕದ ಬಗ್ಗೆ, ಪ್ರಕಾಶ ಬುರ್ಡೆಯವರು ಬರಿತಾರೆ ಎಂದು ಗೊತ್ತಿತ್ತು. ಆದರೆ ಪುಣೆ ವಿಶ್ವವಿದ್ಯಾಲಯವು ಮರಾಠಿಗೆ ಅನುವಾದವಾದ ನನ್ನ ಸಾಹಿತ್ಯದ ಮೇಲೆ ಎರಡು ದಿನದ ಸೆಮಿನಾರನ್ನು ಆಯೋಜಿಸಿತ್ತು. ಮಹಾರಾಷ್ಟ್ರದ ಎಲ್ಲ ವಿಶ್ವವಿದ್ಯಾಲಗಳ, ಎಲ್ಲ ಕಾಲೇಜುಗಳ ಮರಾಠಿ ಡಿಪಾರ್ಟಮೆಂಟಗಳ ಪ್ರಾಧ್ಯಾಪಕರು ಭಾಗವಹಿಸಿದ್ದರು. ಕನ್ನಡಕ್ಕೆ, ’ಮಂದ್ರ’ ಪಬ್ಲಿಶ್ ಆಗಿತ್ತು, ಆದರೆ ಇನ್ನೂ ಮರಾಠಿಗೆ ಅನುವಾದವಾಗಿರಲಿಲ್ಲ. ಪ್ರಕಾಶ ಬುರ್ಡೆಯವರು ಮರಾಠಿಯಲ್ಲಿ ಕಾದಂಬರಿಯ ವೈಶಿಷ್ಟ್ಯವನ್ನು ತುಂಬ ಚೆನ್ನಾಗಿ ಚರ್ಚಿಸಿದರು. ಸಂಗೀತದ ಮೇಲೆ ಬರೆದ ಇಂತಹ ಕಾದಂಬರಿ ಮಹಾರಾಷ್ಟ್ರದಲ್ಲಿ ಇನ್ನೂ ಬಂದಿಲ್ಲ ಎಂದು ಹೇಳಿದರು. ಅಲ್ಲಿಯೇ ಕುಳಿತಿದ್ದ ಉಮಾ ಕುಲಕರ್ಣಿಯವರು, ಹಾಗಾದರೆ ತನ್ನ ಬೇರೆ ಕೆಲಸಗಳನ್ನು ಪಕ್ಕಕ್ಕೆ ಇಟ್ಟು ಮಂದ್ರದ ಅನುವಾದ ಮಾಡುತ್ತೇನೆ ಎಂದು ಹೇಳಿ, ಆರು ತಿಂಗಳಲ್ಲಿ ಮುಗಿಸಿದರು. ಇಡೀ ಮಹರಾಷ್ಟ್ರದಲ್ಲಿ ಕಾದಂಬರಿಗೆ ಮೆಚ್ಚಿಗೆ ಸಿಕ್ಕಿತು.”

“ಜ್ಯೋತ್ಸ್ನಾ ಕಾಮತರು ಈ ಪುಸ್ತಕವನ್ನು ಕಳಿಸಿ ಒಂದು ತಿಂಗಳಾಗಿತ್ತು, ೨೦ ದಿನಗಳಲ್ಲಿ ಓದಿ ಮುಗಿಸಿದೆ. ಬುರ್ಡೆಯವರು ಸಂಗೀತವನ್ನು ತಿಳಿದ ವಿದ್ವಾಂಸರು. ಕಳೆದ ಒಂದು ವರ್ಷದಲ್ಲಿ ಇಂತಹ ಒಳ್ಳೆ ಪುಸ್ತಕ ಓದಿಲ್ಲ. ನೀವು ಓದಬೇಕು. ನಿದಾನಕ್ಕೆ ಒಂದೆರಡು ಲೇಖನಗಳನ್ನು ಓದಿ, ಸಂಗೀತ ಪ್ರಪಂಚದ ಒಳನೋಟ ಇದರಲ್ಲಿದೆ. ಗಾಯನದ ವೈಶಿಷ್ಟ್ಯಗಳು, ಬೇರೆ ಬೇರೆ ಘರಾಣೆಗಳ ಬಗ್ಗೆ, ಯಾರು ಯಾರ ಶಿಷ್ಯರು, ಅವರ ಗಾಯನ ಶೈಲಿಗಳು, ಮತ್ತು ಮುಖ್ಯವಾಗಿ ಸಂಗೀತ ಪ್ರಪಂಚದ ಒಳಜೀವನವನ್ನು ಇಲ್ಲಿ ಕಾಣಬಹುದು.”

೧೯೬೪-೬೫ರ ಅಹಮದಾಬಾದದಲ್ಲಾದ ಸಂಗೀತದ ಒಳನೋಟದ ನನ್ನ ಅನುಭವ ಹೇಳುತ್ತೇನೆ. ಈಗ ಸುಪ್ರಸಿಧ್ಧರಾದ ಅಮಜದ ಅಲಿ ಖಾನರ ಪ್ರಥಮ ಕಚೇರಿ ಇತ್ತು. ಅವರ ಹೆಸರು ಯಾರೂ ಕೇಳಿರಲಿಲ್ಲ, ಆದರೆ ಅವರ ತಬಲಾ ಸಾಥಿದಾರರಾದ ಶಾಂತಾಪ್ರಸಾದರು ಹೆಚ್ಚು ಪ್ರಸಿದ್ಧರಿದ್ದರು. ಹೀಗಾಗಿ ನಾವು ಗುಂಪು ಕಟ್ಟಿಕೊಂಡು ಆ ಕಚೇರಿಗೆ ಹೋದೆವು. ಅಮಜದ ಅಲಿಖಾನ್ ಬಹಳ ಚಿಕ್ಕ ಹುಡುಗ. ಕಚೇರಿಯ ಮಧ್ಯ ಮಧ್ಯದಲ್ಲಿ ಸಾಮ್ತಾಪ್ರಸಾದರು ಮೈಕಿನಲ್ಲಿ ,” ಕಲಾಕಾರ ತೊ ಪೈದಾ ಹೊತಾ ಹೈ, ಬನತಾ ನಹಿಂ ” ಎಂದು ಹೇಳುತ್ತಾ ಸಂತೂರ ವಾದಕನನ್ನು ಹೊಗಳುತ್ತಾ ಇದ್ದರು. ಅಂದರೆ ಅಮಜದ ಅಲಿ ಹುಟ್ಟು ಕಲಾಕಾರ ಎಂದು ಅವನ ಜಾಹಿರಾತು ಮಾಡುತ್ತಿದ್ದರು. ಹೀಗೆ ಪ್ರತಿ ಊರಲ್ಲೂ ಈ ಪ್ರಕಾರ ನಡೆಯುತ್ತಿತ್ತೆಂದು ಆಮೇಲೆ ತಿಳಿಯಿತು. ಈ ಕೆಲಸಕ್ಕೆ ಸಾಮ್ತಾಪ್ರಸಾದರಿಗೆ ಡಬಲ್ ದುಡ್ಡು ಸಿಗುತ್ತಿತ್ತಂತೆ! ಇವಕ್ಕೆಲ್ಲ ಈಗಿನ ಭಾಷೆಯಲ್ಲಿ ಡೀಲ್  ಅಂತಾರೆ. ಇಂತಹ ರಂಜಕ ಸತ್ಯಗಳನ್ನು ಈ ಪುಸ್ತಕದಲ್ಲಿ ನೀವು ಕಾಣಬಹುದು.

ಮುಂದಿನ ಪುಟಗಳಲ್ಲಿ ಮುಂದುವರೆಯುವದು….