ಅಮೀರಬಾಯಿ ಕರ್ನಾಟಕಿ (೧೯೦೬-೧೯೬೫)

ನಾನು ಹತ್ತು ವರ್ಷದವನಿದ್ದಾಗ ಅಂಚೆ ಖಾತೆಯಲ್ಲಿದ್ದ ನಮ್ಮ ತಂದೆಯವರಿಗೆ ಗೋಕರ್ಣಕ್ಕೆ ವರ್ಗವಾಯಿತು. ‘ತಾಯಿ ಇಲ್ಲದ ಮಕ್ಕಳು; ವ್ಯವಹಾgಜ್ಞಾನವಿಲ್ಲದ, ಸದಾ ಪುಸ್ತಕಗಳಲ್ಲೇ ಮುಳುಗಿದ್ದ ಮಗ’ ಎಂದುಕೊಂಡು ನಮ್ಮ ಯೋಗಕ್ಷೇಮ ನೋಡಲು, ಮೋತಿಬಿಂದುವಿನಿಂದ ಎರಡೂ ಕಣ್ಣು ಮಂಜಾದ ನಮ್ಮಜ್ಜ ತನ್ನ ದೊಡ್ಡ ಊರುಗೋಲು ಮತ್ತು ತನಗಿಂತ ಉದ್ದವಾದ ಮುಂಡಾಸು ಸುತ್ತಿ ನಮ್ಮೊಂದಿಗೆ ಗೋಕರ್ಣಕ್ಕೆ ಬಂದಾಯಿತು. ಅದಾಗಲೇ ಅವರಿಗೆ ವರ್ಷ ಎಪ್ಪತ್ತು. ಮನೆಯಲ್ಲಿಯೇ ಪೋಸ್ಟ ಆಫೀಸು, ಅಥವಾ ಪೋಸ್ಟ ಆಫೀಸಿನಲ್ಲಿಯೇ ಮನೆ! ವಿದ್ಯುದ್ದೀಪಗಳಿಲ್ಲದ ಕಾಲ. ಊರಿಗೆ ಏಕೇ, ಇಡೀ ಹಿಂದುಸ್ಥಾನಕ್ಕೆ ಮಹಾಶಿವರಾತ್ರಿ ದೊಡ್ಡ ಹಬ್ಬ. ಜಾತ್ರೆಗೆ ಇನ್ನೂ ಎರಡು ತಿಂಗಳು ಇದ್ದರೂ ಗೋಕರ್ಣ ಕ್ಷೇತ್ರದಲ್ಲಿ ಅದಾಗಲೇ ತುಂಬಾ ಸಡಗರ. ಊರಲ್ಲಿ ಒಂದು ಸರ್ಕಸ್ಸು. ಒಂದು ಟೂರಿಂಗ ಟಾಕೀಜು ಬರುತ್ತೆಂದು ತಮಟೆ ಹೊಡೆದಾಗಿತ್ತು. ಶಿವರಾತ್ರಿಯ ೧೫ ದಿನ ಮೊದಲೇ ಮುರಲೀಧರ ದೇವಾಲಯದ ಎದುರಿನ ವಿಶಾಲ ಬೂರಲಗದ್ದೆಯಲ್ಲಿ ಒಂದು ಸರ್ಕಸ್ಸಿಗೆ, ಮತ್ತೊಂದು ಟಾಕೀಜಿಗೆ ಢೇರೆ ಹಾಕಲು ಬಯಲು ಅಗೆಯುವ ಮೊದಲೇ ಶಾಲೆ ಬಿಟ್ಟ ಕೂಡಲೇ ನಮ್ಮೆಲ್ಲರ ಢೇರೆ ಅಲ್ಲಿಯೇ! ದೀಪ ಹಚ್ಚುವ ಮೊದಲು ಮನೆ ಸೇರದ ನನ್ನನ್ನು ಹುಡುಕಲು ಅಜ್ಜ ಮತ್ತು ಹಿರಿಯಕ್ಕ ಅನೇಕ ಸಲ ಬೂರಲ ಗದ್ದೆಗೆ ಬಂದದ್ದಿದೆ! ಸರಿ, ತಾರಾಬಾಯಿ ಗ್ರ್ರಾಂಡ ಸರ್ಕಸ್ಸು ತನ್ನ ಬಿಡಾರದೊಂದಿಗೆ ಆನೆ ಕುದುರೆಗಳ ಸಹಿತ ಬೇರು ಬಿಟ್ಟಿತು. ಮತ್ತೊಂದರಲ್ಲಿ ಸಿನೇಮಾ ಅಂದರೆ, ಟಾಕೀಜು. ಟಾಕೀ “ರತನ”.
ಪೋಲಿಸು, ಗ್ರಾಮ ಪಂಚಾಯತಿ ಮತ್ತು ಅಂಚೆ ಖಾತೆಯವರಿಗೆ ಕಾಂಪ್ಲಿಮೆಂಟರಿ ಪಾಸ್ಗಳು ಅಂದೂ ಇತ್ತು! ಇಂದೂ ಇದೆ! ಹೀಗಾಗಿ ಯಾರಿಗೂ ತಿಳಿಸದೇ ಭಗವಾನ, ಬಾಬುರಾವ್ ಪೈಲವಾನ ನಟಿಸಿದ ಸ್ಟಂಟ ಪಿಕ್ಚರಗಳೂ ‘ಮಾಯಾ ಮಚ್ಛೀಂದ್ರ’, ‘ಹರಿಶ್ಚಂದ್ರ’ ಮತ್ತು ‘ಕೀಲು ಗುರ್ರಂ’ ಎಂಬ ತೆಲುಗು ಸಿನೆಮಾ ಹಾಗೂ ‘ರತನ’ ನೋಡಿದ ನೆನಪಿದೆ. ಅದರಲ್ಲಿಯ ಕೆಲವು ಹಾಡುಗಳು ತುಂಬಾ ಜನಪ್ರಿಯವಾಗಿದ್ದು, ಮನೆಯಲ್ಲಿ, “ಅಖಿಯಾಂ ಮಿಲಾಕೆ” ಮತ್ತು “ಮಿಲ್ಕೆ ಬಿಛಡ ಗಯೆ ಅಖಿಯಾಂ ಹಾಯ್ ರಾಮಾ” ಈ ಹಾಡು ನಾವೆಲ್ಲ ಮಕ್ಕಳು ಮೆಲುಕು ಹಾಕುತ್ತಿದ್ದ ನೆನಪು. ಇದರಲ್ಲಿಯ, “ಮಿಲಕೆ ಬಿಛಡ ಗಯೆ” ಹಾಡಿದ್ದು ನಮ್ಮ ಕರ್ನಾಟಕದ ಅಮೀರಬಾಯಿ ಎಂದು ಗೊತ್ತಾದದ್ದು ಹಲವಾರು ವರ್ಷಗಳ ನಂತರ. ಮುಂಜಾನೆ ಶಾಲೆಗೆ ಹೋಗುವ ಮೊದಲು ಕಾರವಾರದಲ್ಲಿಯ ಬಾಳಿಗಾ ಅವರ ಹೋಟೆಲ್ಲು ಮುಂದೆ ನಿಂತು ಹಾಡುಗಳನ್ನು ಕೇಳಿ ಮುಂದೆ ಸಾಗುವ ಪರಿಪಾಠ. ಆಗ ಕೇಳಿದ ಹಲವು ಸಿನೇ ಗೀತಗಳ ಮುಖಡಾ (ಪದ್ಯದ ಮೊದಲ ಸಾಲುಗಳು) ಇನ್ನೂ ನೆನಪಿನಲ್ಲಿವೆ.

ಅಮೀರಬಾಯಿಯವರ ಪೂರ್ವಾಶ್ರಮ ಅಂದರೆ ಮುಂಬಯಿ ಸೇರುವ ಮೊದಲಿನ ವರ್ಷಗಳ ಮಾಹಿತಿಯನ್ನು ಸಂಗ್ರಹಿಸಲಾಗಲಿಲ್ಲ. ಮುಂಬಯಿಯ ರಾಷ್ಟ್ರೀಯ ಸಂಸ್ಥೆಯಲ್ಲಿಯೂ, ಹಿಂದಿ, ಇಂಗ್ಲಿಷು, ಫ಼್ರೆಂಚ ಸಿನೇಮಾಗಳ ಬಗ್ಗೆ ಪುಸ್ತಕಗಳಿದ್ದರೂ ಅಮೀರಬಾಯಿಯವರ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ. ಮುಂದೆ ಪುಣೆಗೆ ಹೋದಾಗ ಅಲ್ಲಿಯ ಸಂಸ್ಥೆಯ ಲಾಯಬ್ರರಿನಲ್ಲಿ ಕೆಲವು ಹಳೆಯ ಪತ್ರಿಕೆಗಳಲ್ಲಿಯ ಲೇಖನಗಳ ಆಧಾರದ ಮೇಲೆ ಮತ್ತು ಮಾಣಿಕ ಪ್ರೇಮಚಂದ ಅವರು ಇಂಗ್ಲೀಷನಲ್ಲಿ, “Yesterday’s Melodies” ಎಂಬ ಪುಸ್ತಕದಲ್ಲಿ ಅಮೀರಬಾಯಿಯವರ ಬಗ್ಗೆ ಬರೆದ ಲೇಖನದ ಆಧಾರದಿಂದ ಇದನ್ನು ಬರೆಯುತ್ತಿದ್ದೇನೆ. ವಾಮನ್‌ರಾವ್ ಮಾಸ್ತರರ ಕಂಪನಿಯಲ್ಲಿ ಸ್ತ್ರೀ ಪಾತ್ರ ಮಾಡುತ್ತಿದ್ದ ಅಮೀರಬಾಯಿ ಹಿಂದಿನ ಶತಮಾನದ ಮೂರನೇ ದಶಕದಲ್ಲಿ ಮುಂಬಯಿ ತಲುಪಿರಬೇಕು. ಮೂಕಿಗಳು ಟಾಕಿ ಆದಾಗ ಅಂದರೆ ಹಾಡುಗಾರಿಕೆ ಚಲನಚಿತ್ರಕ್ಕೆ ಒದಗಿದಾಗ, ಖುರ್ಶಿದ್, ನೂರಜಹಾನ್, ಸುರೈಯ್ಯಾರೊಂದಿಗೆ ಸ್ಫೂರದ್ರೂಪಿ ಎನಿಸಿಕೊಂಡ ಹಾಡುವ ನಾಯಕಿಯರಲ್ಲಿ ಅಮೀರಬಾಯಿ ಒಬ್ಬರಾಗಿದ್ದರು.
‘ವಿಷ್ಣುಭಕ್ತಿ’ (೧೯೩೯), ಅಮೀರಬಾಯಿಯವರ ಟಾಕಿಗಳಲ್ಲಿಯ ಮೊದಲನೆಯ ಚಿತ್ರಪಟ. ಬಳಿಕ, ‘ಸರದಾರ’ (೧೯೪೦), ದರ್ಶನ (೧೯೪೧), ‘ಸ್ಟೇಶನ ಮಾಸ್ತರ’, (೧೯೪೨) ಬಿಡುಗಡೆಯಾದವು. ಇವೆಲ್ಲ ‘ಬಿ’ ಗ್ರೆಡ್ ಚಿತ್ರಪಟಗಳಾಗಿದ್ದರಿಂದ ಅವರ ಹೆಸರು ಕರ್ನಾಟಕದ ಮತ್ತೊಬ್ಬ ಚಿತ್ರಪಟ ಕಲಾವಿದ ಬಸವರಾಜ ಮನ್ಸೂರಂತೆಯೇ ಹಿಂದೆ ಉಳಿಯಿತು. ‘ಕಿಸ್ಮತ್’ ನಂತರವೇ ಅಮೀರಬಾಯಿಯವರ ಕಿಸ್ಮತ್ (ಭಾಗ್ಯ) (೧೯೪೨) ಝಗ್ಗೆಂದಿತು! ಸಂಗೀತ ದಿಗ್ದರ್ಶಕ ಅನಿಲ ಬಿಸ್ವಾಸರಿಗೆ ಅಮೀರಬಾಯಿಯವರ ಶಾರೀರ ಇಷ್ಟು ಸೇರಿತೆಂದರೆ, ಹಿರೋಯಿನ್ ಮಮತಾಜ಼್ ಶಾಂತಿಗಿಂತ, ಅಮೀರಬಾಯಿಯವರಿಂದ ಟಾಪ್ ಹಾಡುಗಳನ್ನು ಹಾಡಿಸಿದರು. ಮುಂಬಯಿಯ ಸೂಪರ ಸಿನೇಮಾದಲ್ಲಿಯೇ ‘ಕಿಸ್ಮತ್’ ೬೦ ವಾರಗಳಿಗೂ ಮಿಕ್ಕಿ ಪ್ರದರ್ಶಿಸಲಾಯಿತು. ಅಮೀರಬಾಯಿಯವರ ಹಾಡಿನ ರೆಕಾರ್ಡುಗಳಿಗೆ ತುಂಬಾ ಬೇಡಿಕೆ ಬಂದಿತ್ತು. ‘ಧೀರೆ ಧೀರೆ ಆರೆ ಬಾದಲ, ಧೀರೆ ಆ ಮೇರಾ ಬುಲಬುಲ ಸೋ ರಹಾ ಹೈ ಶೋರ ಗುಲ್ ನ ಮಚಾ’. ಈ ಹಾಡು ಒಂದು ಸುಂಟರಗಾಳಿಯನ್ನೇ ಎಬ್ಬಿಸಿತು! ಇದರ ಜೋಡಿಗೆ ಕಿಸ್ಮತ್‌ದೊಳಗಿನ iತ್ತೊಂದು ಖ್ಯಾತ ಹಾಡುಗಳೆಂದರೆ, ‘ಘರ್ ಘರ್ ಮೆಂ ದಿವಾಲಿ ಹೈ, ಮೇರೆ ಘರಮೆಂ ಅಂಧೇರಾ’ ಮಗದೊಂದು, ‘ಅಬ ತೆರೆ ಸಿವಾ ಕೌನ್ ಮೇರಾ, ಕಿಸನ ಕನೈಯಾ’ ಹೀಗೆ. ಅಮೀರಬಾಯಿಯವರ ಹೆಸರು ಇಡೀ ಹಿಂದುಸ್ತಾನದಲ್ಲಿ ಮನೆ ಮಾತಾಯಿತು. ಚಲೇ ಜಾವ ಚಳುವಳಿಯಲ್ಲಿ ಪ್ರತಿಯೊಬ್ಬ ಸ್ವಯಂ ಸೇವಕ-ಸೇವಕಿಯರ ಬಾಯಲ್ಲಿ ಅವರು ಕೋರಸ್‌ನಲ್ಲಿ ಹಾಡಿದ, ‘ದೂರ ಹಟೊ, ದೂರ ಹಟೊ ದುನಿಯಾವಾಲೊ ಹಿಂದೋಸತಾನ ಹಮಾರಾ ಹೈ’ ಹಾಡಂತೂ ಅಜರಾಮರವಾಗಿದೆ. ಈಗಲೂ ಆಗಸ್ಟ ೧೫ರಂದು ಮತ್ತು ಜನವರಿ ೨೬ಕ್ಕೆ ಈ ಹಾಡನ್ನು ತಪ್ಪದೇ ದೂರದರ್ಶನದ ಚ್ಯಾನೆಲಗಳು ಬಿತ್ತರಿಸುತ್ತವೆ.
೧೯೪೦ರಿಂದ, ಅಮೀರಬಾಯಿಯವರ ಸುವರ್ಣ ಯುಗ ಪ್ರಾರಂಭವಾಗಿತ್ತು. ‘ರತನ’ ಬಿಡುಗಡೆಯಾದ ಕೂಡಲೇ (೧೯೪೪) ನೌಷಾದ ಅಲಿಯವರ ಹೇಳಿಕೆಯಂತೆ, ‘ಲೋಗ ತೋ ಅಮೀರಬಾಯಿಕೆ ಉಪರ ಫಿದಾ ಹೋಗಯೆ ಥೆ!”

ಕರ್ನಾಟಕ ಸಂಘದ ಪೋಷಕರಲ್ಲಿ ಒಬ್ಬರಾದ ಸುಶೀಲಾರಾಣಿ ತೊಂಬತ್-ಪಟೇಲರು ಅಮೀರಬಾಯಿಯವರಿಗಿಂತ ಮೊದಲು ಮುಂಬಯಿಗೆ ಬಂದು ‘ದ್ರೌಪದಿ’ ಸಿನೇಮಾದಲ್ಲಿ ದ್ರೌಪದಿಯ ಪಾತ್ರವನ್ನು ವಹಿಸಿದವರು.ದುಂಬಾಲು ಬಿದ್ದು ಅಮೀರಬಾಯಿಯವರ ಬಗ್ಗೆ ಕೇಳಿದೆ. ಹಾರಿಕೆಯ ಉತ್ತರ ಕೊಟ್ಟ ಅವರು ಅವರೇ ನನಗೆ ನೌಷಾದರ ಭೇಟಿ ಮಾಡಿಸಿದರು. ನನಗಂತೂ, ‘ಸೋನೆಪೆ ಸುಹಾಗಾ’ದಂತಾಯಿತು! ‘ರತನ’ದ ಸಂಗೀತ ದಿಗ್ದರ್ಶಕರೇ ನೌಷಾದ ಸಾಹೇಬರು. “ಮಾಷಾ ಅಲ್ಲಾ! ಕ್ಯಾ ಗಲಾ ಪಾಯಾ ಥಾ ಉನ್ಹೋಂನೆ!” ಸಾಹೇಬರು ತಮ್ಮ ಅಪ್ಪಟ ಉರ್ದುವಿನಲ್ಲಿ ಅಮೀರಬಾಯಿಯ ಕಂಠ ಸಂಗೀತದ ವರ್ಣನೆ ಪ್ರಾರಂಭಿಸಿದರು . “ಶಂಶಾದ ಬೇಗಮ್ರಂತೆ ಖುಲ್ಲಾ ಆವಾಜ಼್, ಆದರೆ ಅವರ ಶಾರೀರದಲ್ಲಿ ರಿಯಾಜ಼ು ಮಾಡಿದ್ದುದರಿಂದ ಒಂದು ಹೊಳಪಿನ ನುಣುಪು ಇತ್ತು. ಸ್ವರಗಳು ಅಕ್ಷರಶಃ ಮುತ್ತಿನಂತೆ ಜಾರುತ್ತಿದ್ದವು. ಶಂಶಾದರದು ಸ್ವಲ್ಪ ಕಂಚಿನ ಧ್ವನಿ. ಅಮೀರಬಾಯಿಯವರದು ನುಣ್ಣಗಿನದು, ಗೋಲಾಕಾರದ್ದು, ತಾರ ಸಪ್ತಕದ ಮಧ್ಯಮ ತನಕ ಸಲೀಸಾಗಿ ಹೋಗುವಂತಹುದು. ಗಂಟಲಿನಲ್ಲಿ ಚೆನ್ನಾದ ‘ಫೀರತ್’ (ಠಿiಟಿ) ಇತ್ತು. ನಾವು ಪ್ರಾಕ್ಟೀಸಿಗೆ ಕುಳಿತಾಗ ಅವರಿಂದ ಭಜನೆಯನ್ನೋ, ಇಲ್ಲವೇ ಅವರ ಮಾತೃಭಾಷೆಯಲ್ಲಿಯ ಹಾಡನ್ನೋ ಹಾಡಿಸುತ್ತಿದ್ದೆವು. (ಅವರ ಮಾತೃಭಾಷೆ ಕನ್ನಡವೇ ಎಂದು ಕೇಳಿದಾಗ ೯೦ ವರ್ಷದ ನೌಷಾದರು ಸರಿಯಾಗಿ ಹೌದು ಎಂದು ಹೇಳಲಿಲ್ಲ. ಮುಪ್ಪಿನ ಮರೆವು ಇರಬೇಕು. ಮತ್ತೊಮ್ಮೆ ಫೋನಿಸಿದಾಗ, ‘ಸಾಹೇಬರಿಗೆ ಆರಾಮವಿಲ್ಲ ಎಂದು ತಿಳಿಯಿತು)ಅವರ ಸಮಕಾಲೀನರಲ್ಲಿ, ನೂರಜಹಾನ್, ಸುರೈಯ್ಯಾ, ಗೀತಾದತ್ ಬಿಟ್ಟರೆ, ಈ ಲೆಕ್ಕ ಕಡಿಮೆ ಇದ್ದರೂ ಇವರ ಮಾಧುರ್ಯ ಕೊಂಚವೂ ಕಡಿಮೆ ಇರಲಿಲ್ಲ. ಅಮೀರಬಾಯಿ ಎಸ್.ಡಿ ಬರ್ಮನ್‌ರ ‘ಶಿಕಾರಿ’ಯಲ್ಲಿ ಹಾಡಿದ್ದು ಇದೆ. (೧೯೪೮) ‘ದೇವಕನ್ಯಾ’ದಲ್ಲಿ ಶಾಮಸುಂದರ ಹಾಡಿಸಿದರೆ, ಸಿ. ರಾಮಚಂದ್ರ ‘ಶೆಹನಾಯಿ’ ಚಿತ್ರಪಟದಲ್ಲಿ (೧೯೪೭) ಅವರಿಂದ ಹಾಡಿಸಿದರು.

ಕೋಕಿಲ ಕಂಠದ ಸುಂದರಿ ಅಮೀರಬಾಯಿಯವರ ಹಾಡುಗಳಿಗೆ ಮೆರಗು ಕೊಟ್ಟವರಲ್ಲಿ, ಖೇಮಚಂದ ಪ್ರಕಾಶ, ಎಸ್.ಡಿ ಬರ್ಮನ್, ಗುಲಾಮ್ ಅಹಮದ್ ಮತ್ತು ಹುಸ್ನ ಲಾಲ್ ಭಗತರಾಮ್ ಮುಂತಾದವರು ಇದ್ದರು. ಹಿಂದುಸ್ಥಾನಕ್ಕೆ ಸ್ವಾತಂತ್ರ್ಯ ಸಿಗಲಿಕ್ಕೂ, ಸಿನೇ ಸಂಗೀತದಲ್ಲಿ ಲತಾ ಎಂಬ ತೆಳ್ಳಗಿನ ಉದ್ದಕೂದಲಿನ ಪಾರ್ಶ್ವಗಾಯಕಿಯ ಉದಯವಾಗಿ ಭದ್ರವಾಗಿ ತಳ ಊರಲಿಕ್ಕೂ ಸರಿಯಾಯಿತು. ಕಿರಿಯ-ಹಿರಿಯ ಗಾಯಕ ನಟಿಯರು ಈ ಲತಾ ಸುಂಟರ ಗಾಳಿಯನ್ನು ತಡೆಯಲಾರದೇ ನಿಷ್ಪ್ರಭರಾದರು. ಇದರಲ್ಲಿ ಅಮೀರಬಾಯಿ ಕೂಡ ಸಿಕ್ಕಿಬಿದ್ದರು.
ಅಷ್ಟು ಹೊತ್ತಿಗೆ ಅವರ ಹಣದ ತಾಪತ್ರಯ ಕೂಡ ಹೆಚ್ಚಾಗಿ ತಮ್ಮ ಕಲೆಯ ಅವಮೂಲ್ಯವನ್ನು ತಾವೇ ಮಾಡಿಕೊಂಡರು. ಚಿಕ್ಕ-ಪುಟ್ಟ ಪಾತ್ರಗಳನ್ನು ವಹಿಸುವ ಮಹತ್ವದ ಕಾರಣವೆಂದರೆ, ಹಿಮಾಲಯ ಶೇಠ ಎಂಬ ಸಿನೆ ಕಲಾವಂತನನ್ನು ಮದುವೆಯಾಗಿ ಹೆಸರಿಗೆ ಮಾತ್ರಕ್ಕೆ , ‘ಶೇಠಾಣಿ’ಯಾದರು. ಅವನಿಗೆ ಜೂಜಿನ ವ್ಯಸನ ಕೂಡ ಇತ್ತು. ಹೊಡೆದು ಬಡೆದು ಬೆದರಿಸಿ ಅಮೀರಬಾಯಿಯ ಸಂಪತ್ತನ್ನು ಕೆಲವೇ ತಿಂಗಳಗಳಲ್ಲಿ ಆತ ಹಾಳು ಮಾಡಿದ. ವಿವಾಹ ವಿಚ್ಚೇದನ ಕೂಡ ಕೊಡಲಿಲ್ಲ, ಒಬ್ಬನ ಮಧ್ಯಸ್ತಿಕೆಯಿಂದ, ‘ಇರುವ ಮನೆ, ಕಾರು ಕೊಟ್ಟರೆ ಸ್ಟಾಂಪ್ ಪೇಪರಿಗೆ ರುಜ಼ು ಹಾಕುತ್ತ್ತೇನೆ’ ಎಂದು ಬೆದರಿಸಿದ. ಅದಕ್ಕೂ ಅಮೀರಬಾಯಿ ಒಪ್ಪಿಕೊಂಡು ಮನೆಯನ್ನು ಖಾಲಿ ಮಾಡಿ, ತಂಗಿಯ ಮನೆಯ ಪಕ್ಕದಲ್ಲಿ (ಮಾಹಿಮ್-ಕಾಪಡ್ ಬಜ಼ಾರದಲ್ಲಿ) ಬಿಡಾರ ಹೂಡುವ ವ್ಯವಸ್ಥೆ ಮಾಡಿ, ‘ಹೂಂ ಸರಿ ಸಹಿ ಹಾಕು’ ಎಂದಾಗ ಆತ ಇವರ ಸಹಿ ಮಾಡಿಸಿ ಹೊರಗೆ ಹೋಗಿ ತನ್ನ ,’ಖೊಟಾ’(ಸುಳ್ಳು) ಸಹಿ ಸ್ಟ್ಯಾಂಪು ಪೇಪರ್ ತಂದು ಕೊಟ್ಟ. ಎರಡೇ ದಿನಗಳಲ್ಲಿ ಹಿಮಾಲಯ ವಾಪಸ್ಸು ಬಂದು ಹಣದ ಕಾಟ ಪ್ರಾರಂಭಿಸಿದ. ಅಮೀರಬಾಯಿಯವರನ್ನು ಹೊಡೆದು ಬಡಿದಾಗ ಮಾಹಿಮ್ ಸ್ಟೇಶನದಲ್ಲಿ ಕಂಪ್ಲೇಂಟು ಕೊಟ್ಟರೆ, ಪೋಲಿಸಿನವರೇ ಅಮೀರಬಾಯಿಯವರನ್ನು, ‘ನಿಮ್ಮ ಸ್ಟಾಂಪ ಪೇಪರ್ ಕಾಯದೆಗೆ ಅನುಸರಿಸಿ ಇಲ್ಲ. ನಿಮ್ಮ ಪತಿಯ ಸಹಿಯನ್ನು ನೀವು ಫೋರ್ಜ ಮಾಡಿದ್ದರಿಂದ ನಿಮ್ಮನ್ನೇ ಪೋಲಿಸು ಕೋಠಡಿಯಲ್ಲಿ ಹಾಕುತ್ತೇವೆ ಎಂದರಂತೆ. ಇಂತಹ ಪರಿಸ್ಥಿತಿಯಲ್ಲಿ, ಗೌಹರಬಾಯಿ ಗಂಧರ್ವ, ತನ್ನ ಮರಾಠಿ ವಕೀಲರಿಂದ ಒಬ್ಬ ಕಾಯದೆ ತಜ್ಞರನ್ನು ಕರೆಸಿ, ಅಮೀರಬಾಯಿಯವರ ವಿಚ್ಛೇದನ ಪತ್ರವನ್ನು ೨-೩ ದಿನಗಳಲ್ಲಿ ಸರಿ ಮಾಡಿಸಿಕೊಟ್ಟರಂತೆ!
ಈ ಆಘಾತದಿಂದ ಅಮೀರಬಾಯಿಗೆ ಹೊರಬರಲು ತುಂಬ ಕಷ್ಟವಾಯಿತು. ಅವರ ಅದೃಷ್ಟಕ್ಕೆ ಅವರ ಸಹಾಯಕ್ಕೆ ‘ಬದ್ರಿ ಕಾಂಚವಾಲಾ’ ಎಂಬ ಗುಜರಾತಿ ಗೃಹಸ್ಥ ಮುಂದೆ ಬಂದು ಅಮೀರಬಾಯಿಯವರ ಕೈ ಹಿಡಿದರು. ಈ ಘಟನೆಯ ನಂತರವೂ, ಅಮೀರಬಾಯಿ ಕೆಲವು ಧ್ವನಿಮುದ್ರಿಕೆಗಳನ್ನು ಕೊಟ್ಟಿದ್ದೂ ಇದೆ. ‘ಸುಬಹ ಕಾ ತಾರಾ’ (೧೯೫೪), ಡಾರ್ಕ ಸ್ಟ್ರೀಟ್ (೧೯೬೧) ಮತ್ತು, ‘ಜಾದೂ ಅಂಗೂರಿ’ (೧೯೬೪) ಇವು ಪ್ರಮುಖವಾದವು.