Indian Institute Of Science ದ ಮಹಿಳಾ ದಿನ ಭಾಗ ೧

ಮಹಿಳಾದಿನ ಆಚರಣೆಯಂದು ಮುಖ್ಯ ಅತಿಥಿಯಾಗಿ (೦೮/೩/೨೦೧೧) ಮಾಡಿದ ಭಾಷಣದ ಅಂಶಗಳು:

ಈ ಮಹಾನಗರದ ಪ್ರತಿಷ್ಠಿತ ಉಚ್ಚಶಿಕ್ಷಣ ಮತ್ತು ವೈಜ್ಞಾನಿಕ  ಸಂಶೋಧನೆಗೆ ಹೆಸರಾದ ಇಂಡಿಯನ್  ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ Women’s Forum ದಿಂದ ಆಯೋಜಿತವಾದ  ಮಹಿಳೆಯರೇ ಮುಂದಾಗಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕಿದ್ದು ತುಂಬ ಸಂತೊಷದ ವಿಚಾರ ! ಇನ್ನೂ ಹೆಚ್ಚಿನ ಸಂತೋಷಕ್ಕೆ ಕಾರಣ -ಇದು ಈ ಸಂಸ್ಥೆಯ ಶತಮಾನೋತ್ಸವ ಸಂಧರ್ಭದಲ್ಲಿ ಏರ್ಪಟ್ಟದ್ದು. ನಾನು ಇತಿಹಾಸದ ವಿದ್ಯಾರ್ಥಿ. ವಿಜ್ಞಾನಿಗಳ ಸಂಸ್ಥೆಗೆ ಆಮಂತ್ರಿತಳಾಗಿ ಬಂದಿದಿನಿ!  ವಿಜ್ಞಾನದ ವಿದ್ಯಾರ್ಥಿಗಳಿಗೆ ನಾವು ಮುಂದೆ ಮುಂದೆ ಹೋಗ್ತಾ ಇದ್ದೇವೆ! ಅಭಿವೃಧ್ಧಿ ಕ್ಷೇತ್ರದಲ್ಲಿ ಮುಂದಡಿ ಇಡ್ತಾ ಇದ್ದೇವೆ ಎಂಬ ಖುಷಿ ನಿಮ್ಮದಾದರೆ, ಇತಿಹಾಸದವಳಿಗೆ ಹಿಂದೆ ,ಹಿಂದೆ  ಇನ್ನೂ ಹಿಂದೆ  – ಅತೀ  ಪ್ರಾಚೀನ ಯುಗದಲ್ಲಿ ಹೇಗೆ ಬದುಕಿದ್ದೇವೆ? ಎಂದು ಪತ್ತೆ ಹಚ್ಚುವದರಲ್ಲಿಯೇ ಖುಷಿ! ಎರಡೂ ತದ್ವಿರುದ್ಧವಾದ ಸಂದರ್ಭಗಳು ಅಲ್ಲವೇ? ಆದರೆ ನೋಡಿ ಈ ಕಾರ್ಯಕ್ರಮದ ಸಂಘಟಕ -ಸ್ನೇಹಿತರು  ಈ ವಿರುದ್ಧ ಪ್ರಸಂಗಗಳ  ಪ್ರತಿನಿಧಿಗಳನ್ನು ಒಂದೆಡೆ ತಂದಿದ್ದಾರೆ. ಅವರಿಗೆ ಅಭಿನಂದನ ಸಲ್ಲಬೇಕು.

ಹಿಂದಿನದೆಲ್ಲಾನೂ ಪ್ರೀತಿಯಿಂದ ನೋಡತಿದ್ರೂ ನಾನೇನೂ ಹಿಂದುಳಿದವಳಲ್ಲ! ಪ್ರಾಚೀನ ಅರ್ವಾಚೀನ ಭೇದವಿಲ್ಲದೇ ನಮ್ಮ ಹಿರಿಯರು ಹೇಗೆ ಅತ್ಯಾಧುನಿಕವೆನಿಸುವ ಅಂಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಕೊಂಡಿದ್ದರು? ಎಂಬುದೇ ನನ್ನ ಡಾಕ್ಟರೇಟ್ ಪ್ರಬಂಧದಲ್ಲಿ ಕಾಣಿಸುವ ಪ್ರಯತ್ನ ಮಾಡಿದ್ದೇನೆ. ಕರ್ನಾಟಕದ ಸಾಮಾಜಿಕ ಜೀವನದ ಪ್ರಾಚೀನ ನೋಟಗಳು ನನ್ನ ಅಧ್ಯಯನ ವಿಷಯವಾಗಿತ್ತು. ಹೇಳಿಕೇಳಿ ನಾವು ಭಾರತೀಯರು ಧರ್ಮದಿಂದ ಹಿಡಿದು ಆಟಗಳವರೆಗೆ, ಅಧ್ಯಯನದಿಂದ  ಅಡಿಗೆ ಮನೆಯವರೆಗೆ ದೈನಂದಿನ ಎಲ್ಲ ಚಟುವಟಿಕೆಗಳಿಗೂ ವ್ಯಾವಹಾರಿಕ ರೂಪ ಕೊಟ್ಟವರು! ಯೋಗಾಭ್ಯಾಸ ಆಧ್ಯಾತ್ಮಿಕ ಸಾಧನೆಗೆ ಸಹಾಯವಾದರೆ, ಆಟೋಟಗಳಲ್ಲಿ ದೈಹಿಕ ಶ್ರಮದ ಉಚ್ಚಮಟ್ಟದ ಸಹನೆ, ಶಕ್ತಿಗಳಿಗೆ ನೆರವು ನೀಡಬೇಕು. ತಿನ್ನುವ ಆಹಾರವಾದರೋ, ಈಗ ಎಲ್ಲರೂ ಪ್ರತಿಪಾದಿಸುತ್ತಿರುವ ಸಿರಿಧಾನ್ಯ, ನಾರಿನ ಸಿಪ್ಪೆಯ , ಹಸಿರು ತರಕಾರಿಯ ಅಂಶಗಳನ್ನು ಒಳಗೊಂಡಿರಬೇಕು! ಎಂಬುದನ್ನು   ಶತಮಾನಗಳಿಂದ ಕಂಡುಕೊಂಡವರು.

ವಿಟ್ಯಾಮಿನ್ ಗಳನ್ನು ಲ್ಯಾಬಗಳಲ್ಲಿ ಶೋಧಿಸಿ, ಹೆಸರಿಸಿ ವಿಂಗಡಿಸುವ ಪರಿ ಗೊತ್ತಿಲ್ಲದಿದ್ದರೂ ತರಕಾರಿ,ಹಣ್ಣುಧಾನ್ಯಗಳಲ್ಲಿ ಜೀವನ ಪೋಷಕ  ಅಂಶಗಳನ್ನು ಕಂಡು ಹಿಡಿದು ದೈನಂದಿನ ಊಟದಲ್ಲಿ ಅಳವಡಿಸಿದ್ದರು. ಕರಾವಳಿಯವಳಾದ ನಾನು ಆ ಪ್ರದೇಶದ ನಾರು- ಬೇರು, ಚಿಗುರು, ಎಲೆ, ದಿಂಡು, ಹೂ, ಹಣ್ಣುಗಳನ್ನೆಲ್ಲ ನಿತ್ಯೋಪಯೋಗಿಯ ವಸ್ತುಗಳನ್ನಾಗಿ ಬಳಸುವದನ್ನು ಸೇವಿಸಿಯೇ ಬೆಳೆದಿದ್ದೇನೆ!

ನನ್ನ ಮುಂಬೈ ವರ್ಗಾವರ್ಗಿಯ ದಿನಗಳಲ್ಲಿ ಅಲ್ಲಿಯ  BARC ಯ ಕರ್ನಾಟಕ ಸಂಘದಲ್ಲಿ ೧೯೮೭ರಲ್ಲಿ ಕರ್ನಾಟಕ ಸಂಘದವರು ನೀರು ಮತ್ತು ಪೇಯಗಳ ಸ್ವಚ್ಚತೆ ಮತ್ತು ಕಾಯ್ದಿರಿಸುವಿಕೆಯ ಕುರಿತು ಸೆಮಿನಾರ್ ಏರ್ಪಡಿಸಿದ್ದರು. ಇದರಲ್ಲಿ ಚಾರಿತ್ರಿಕ ಅಂಶಗಳೇನಾದರೂ ಇವೆಯೇ ? ಎಂದು ವಿವರಿಸಲು ನನ್ನನ್ನು ಆಮಂತ್ರಿಸಿದ್ದರು. ನನ್ನPhD ಅಧ್ಯಯನ ಆಹಾರ ಮತ್ತು ಪಾನೀಯಗಳ ಚರಿತ್ರೆಯನ್ನು ಒಳಗೊಂಡಿದ್ದರಿಂದ ಒಪ್ಪ್ಕೊಂಡಿದ್ದೆ.  ಕ್ರಿ.ಶಕ ೬- ೭ನೇ ಶತಮಾನದ ಹ್ಯೂಯನ್ ತ್ಸಾಂಗ್, ಇತ್ಸಿಂಗರು ಉಲ್ಲೇಖಿಸಿದ ಭಿಕ್ಷುಗಳು ನಾಲಂದ ವಿಶ್ವವಿದ್ಯಾಲಯದಲ್ಲಿ ನೀರಿನ ಸ್ವಚ್ಚತೆಗೆ ಗಮನ ಕೊಡುವದರಿಂದ ಹಿಡಿದು ಮಂಗರಸನ ಸೂಪಶಾಸ್ತ್ರದಲ್ಲಿ ( ೧೬ನೇ ಶತಮಾನದ ಆದಿಭಾಗ) ಹೇಳಿರುವ ಕುಡಿಯುವ ನೀರಿನ ಪ್ರಕಾರಗಳು, ಅವನ್ನು ತಂಪಾಗಿಸಿ  ಕಾಯ್ದಿರಿಸುವ ಪ್ರಕಾರಗಳ ಉಲ್ಲೇಖ  ಇರುವದನ್ನು ಹೇಳಿದ್ದೆ.

ಜೊತೆಗೆ, ಬೆಲ್ಲ, ಸಕ್ಕರೆ ಇಲ್ಲದೇ ರುಚಿಯಾದ ಪೇಯಗಳು ಪ್ರಚಲಿತವಿದ್ದವು. ಅವನ್ನು ಬಿಸಿಲಲ್ಲಿ ನಾನಾ ಹಣ್ಣುಗಳ ರಸವನ್ನು ಕಾಯಿಸಿ ತೆಗೆದ ರಸಗಳಿಂದ  ತಯಾರಿಸುತ್ತಿದ್ದ ಬಗೆ  ವಿವರಿಸಿದ್ದೆ. ಆ ಬಳಿಕ ಆ ಸಂಸ್ಥೆಯ  biochemical  ವಿಭಾಗದ ಅಧಿಕಾರಿಗಳು ನನ್ನ ಬಳಿ ಬಂದು ,” ನೀವು ಹೇಳಿದ, ‘ ಜ್ಯೂಸ್ ಕಾದಿರಿಸುವ ವಿಧಾನಗಳು ಶಾಸ್ತ್ರೀಯವಾಗಿಯೇ ಇವೆ! ಅಂತರ ಇಷ್ಟೆ! ನೀವು ಹೇಳಿದ ಬಿಸಿಲಲ್ಲಿ ಕಾಯಿಸಿ ರಸ ತೆಗೆಯುವ ಬದಲಾಗಿ ಲ್ಯಾಬಗಳಲ್ಲಿ ಕುದಿಸಿ ರಸ ತೆಗೆಯುವ ವಿಧಾನ ಅನುಸರಿಸುತ್ತೇವೆ’’ ಎಂದರು.

ಒಮ್ಮೆ ನಿಮ್ಮ ಸಂಸ್ಥೆಯ ಬಳಿಯೇ ಇರುವ Wood Technology ವಿಭಾಗದವರು ,’ಮರದ ಸಂಸ್ಕೃತಿಯ’ ಬಗ್ಗೆ ಚಾರಿತ್ರಿಕ  ಅಂಶಗಳ ಬಗ್ಗೆ ಮಾತನಾಡಲು ಆಮಂತ್ರಿಸಿದರು.. ಸಸ್ಯಶಾಸ್ತ್ರದ ಉಲ್ಲೇಖಗಳಿದ್ದ ಹಿಂದಿನ ಕೆಲ ಸಂಸ್ಕೃತ-ಕನ್ನಡ ಕೋಶಗಳ ಅಲ್ಪ ಪರಿಚಯ ಇದ್ದುದರಿಂದ  ಉತ್ತಮ ಮರ ಹೊಂದುವ  ಸಾವಯವ (organic) ಕೃಷಿಯ ಬಗ್ಗೆ ಸ್ವಲ್ಪದರಲ್ಲಿ ಹೇಳಿ  ದೊಡ್ಡ ದೊಡ್ಡ ಸಾಗರಗಾಮಿ  ಹಡಗುಗಳನ್ನು ನಿರ್ಮಿಸಲು ಬೇಕಾದ ತುಂಬ ಗಟ್ಟಿ ಸಾಗವಾನಿ ಮರಗಳನ್ನು ಬ್ರಿಟಿಶರು ಭಾರತದಲ್ಲಿ ಬೆಳೆಸಿ, ಬಳಸುತ್ತಿದ್ದ ರೀತಿ ಹೇಳಿದ್ದೆ.

ಹೀಗೆ ಹಿಂದಿನದೆಲ್ಲ ತಿಳಿದುಕೊಂಡು ಮುಂದಿನದರ ಗುರಿ ಹೊಂದಿದ ಎಳೆಯರಿಗೆ, ಆಸಕ್ತಿಯುಳ್ಳ ಇತರರಿಗೆ, ನಮ್ಮ ಸಂಸ್ಕೃತಿ ಪರಿಚಯಿಸುವ ಸಂದರ್ಭಗಳು ಬಂದಿವೆ. ಇವು ನನ್ನ ಶಿಕ್ಷಣದ ಸಾರ್ಥಕ ಸಂದರ್ಭಗಳು. ನನಗೆ ಕೊಟ್ಟ ಅಲ್ಪ ಸಮಯದಲ್ಲಿ ನಿಮ್ಮ ಸಂಸ್ಥೆ ಶತಮಾನ ದಾಟಿದ ಸಂದರ್ಭದಲ್ಲಿ , ಮಹಿಳೆಯ ಅಂದು-ಇಂದಿನ ಹೊರಳು ನೋಟಗಳನ್ನು ನೆನಪಿಸಿಕೊಳ್ಳಲು ಸಂಘಟಕರು ಕೇಳಿಕೊಂಡಿದ್ದಾರೆ. ಸ್ವಲ್ಪದರಲ್ಲಿ ಹೇಳಲು ಯತ್ನಿಸುವೆ.

ಮುಂದುವರೆಯುತ್ತದೆ………