ಕಮ್ಮಟಿಗ’ ದ ವಿಮರ್ಶೆ-ಎಚ್ . ವಿ ಸಾವಿತ್ರಮ್ಮ (ಪಾಪಚ್ಚಿ)

(ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಪ್ರೊ. ರಾಮಸ್ವಾಮಿ  ( ೧೯೧೧-೨೦೦೧) ಹೈದರಾಬಾದದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಅವರ ಪತ್ನಿ ಎಚ್.ವಿ ಸಾವಿತ್ರಮ್ಮ (೧೯೧೬-೨೦೧೨) ಆತ್ಮೀಯರಾಗಿ ಎಲ್ಲರ ’ಪಾಪಚ್ಚಿ’ಯಾಗಿದ್ದರು. ದೀರ್ಘಾಯುಷಿಗಳಾಗಿದ್ದ ಈ ದಂಪತಿ ತುಂಬ ಹಿಂದೆಯೇ ನಿಜ಼ಾಮರ ರಾಜಧಾನಿ ಹೈದ್ರಾಬಾದದಲ್ಲಿ ನೆಲೆಸಿದ್ದರು. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು  ಆ ಪ್ರದೇಶದಲ್ಲಿ ಜೀವಂತವಾಗಿರಿಸಲು, ಈ ಹಿರಿಯರು ಕೈಕೊಂಡ ಪ್ರಯತ್ನ ಅಸಾಧಾರಣವಾದದ್ದು. ಆಕಸ್ಮಿಕವಾಗಿ ಸಂಭವಿಸಿದ ಈ ಕುಟುಂಬದ ಸ್ನೇಹ ನಾಲ್ಕು ದಶಕಗಳಿಗೂ ಮೀರಿ ಮುಂದುವರೆದು ಬಂದಿದೆ.

ಕೃಷ್ಣಾನಂದ ಕಾಮತರ ಸ್ಮರಣ ಗ್ರಂಥ, ’ ಕಮ್ಮಟಿಗ’ ವನ್ನು ಓದಿ ಸಾವಿತ್ರಮ್ಮನವರು ಪ್ರತಿಕ್ರಿಯಿಸಿದ ಬಗೆ ಇಲ್ಲಿದೆ….)

ಶ್ರೀಮತಿ ಜ್ಯೋತ್ಸ್ನಾ ಕಾಮತ್ ಅವರಿಗೆ- ನಿಮ್ಮ ಕಮ್ಮಟಿಗ ನನ್ನ ಕೈ ಸೇರಿದುದಕ್ಕೆ ವಂದನೆಗಳು.ನನ್ನ ಕಣ್ಣುಗಳು ಮಂಜಾಗುತ್ತಿವೆ.  ಬಿಸಿಲಿನ ಬೆಳಕಿನಲ್ಲಿ ಕೂತು ನಿತ್ಯವೂ ಸ್ವಲ್ಪ ಸ್ವಲ್ಪ ಹಾಳೆಗಳನ್ನು ಓದುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ ಊದಯ ಟಿವಿಯಲ್ಲಿ  ನಿಮ್ಮ ಮತ್ತು ಡಾ. ಕೃಷ್ಣಾನಂದ

ಕಾಮತರ ಪರಿಚಯ ಕಾರ್ಯಕ್ರಮವನ್ನು ನೋಡಿದಾಗ ಶ್ರೀಮತಿ ಶೈಲಜಾ ಅವರು ಶ್ರೀ ಕೃಷ್ಣಾನಂದರನ್ನು ಹೆಚ್ಚಾಗಿ ಪರಿಚಯಿಸಿದರೇ ಹೊರತು ನಿಮ್ಮನ್ನು ಹೆಚ್ಚಾಗಿ ಪರಿಚಯ ಮಾಡಿಕೊಡಲಿಲ್ಲವೆಂಬ ಭಾವನೆ ನನಗೆ ಉಂಟಾಗಿತ್ತು. ಈಗ ಶ್ರೀ ಕೃಷ್ಣಾನಂದರ ಆಪ್ತೇಷ್ಟರ ಆತ್ಮೀಯ ಲೇಖನಗಳನ್ನು ಓದಿದ ಮೇಲೆ ಅವರ ಸಾಹಿತ್ಯ ಲೋಕದ ವಿಸ್ತಾರವು ನನ್ನ ಊಹೆಗೆ ಮೀರಿದುದು ಎಂದು ಈಗ ಅರ್ಥವಾಯಿತು. ಶ್ರೀ ಕೃಷ್ಣಾನಂದರ ಬಗ್ಗೆ ಒಬ್ಬೊಬ್ಬರ ವಿಚಾರಶ್ರೇಣಿಗಳನ್ನು ಓದುತ್ತಿದ್ದಂತೆ ಅವರು ನಮಗೆ ಹತ್ತಿರ ಹತ್ತಿರ ವಾಗುತ್ತಿದ್ದಂತೆ ಭಾಸವಾಗುತ್ತದೆ. ನಮ್ಮನಿಮ್ಮ ಕುಟುಂಬ ವಿಚಾರಗಳಲ್ಲೂ ಸಾಮ್ಯವೇ ಹೆಚ್ಚಾಗಿ ಕಾಣಿಸುತ್ತಿದೆ. ನಿಮಗೆ ಒಬ್ಬ ಮಗ ಹುಟ್ಟಿ ಎಷ್ಟೋ ವರ್ಷಗಳಾದ ಮೇಲೆ ಬೆಂಗಳೂರಿನಲ್ಲಿ ಸ್ಥಿರಪಟ್ಟಿರಿ. ನಾವು ಆರು ಜನ ಮಕ್ಕಳಾದಮೇಲೆ  ಹೈದರಾಬಾದಿನಲ್ಲಿ ಸ್ಥಿರಪಟ್ಟೆವು. ಲಕ್ಷ್ಮೀ ಕಟಾಕ್ಷವೂ ಅಷ್ಟೇ.ಆರಕ್ಕೆ ಹೆಚ್ಚಲಿಲ್ಲ, ಮೂರಕ್ಕೆ ಕಗ್ಗಲಿಲ್ಲ. ಆದುದರಿಂದಲೇ ನಮ್ಮಂತೆಯೇ ನಮ್ಮ ಮಕ್ಕಳೂ ಸರಳ ಜೀವನಕ್ಕೆ ಅಂಟಿಕೊಂಡಿದ್ದಾರೆ.

ಶ್ರೀ ಕೃಷ್ಣಾನಂದರ ಉತ್ತರಕನ್ನಡ ಜಿಲ್ಲೆಯ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ಭಾಷಣವನ್ನು ಓದಿದರೆ ಸಾಕು….ಆಡುಮುಟ್ಟದ ಸೊಪ್ಪಿಲ್ಲ ಎನ್ನುತ್ತಾರೆ. ಆದರೆ ಆಡು ಮುಟ್ಟದ ಸೊಪ್ಪೂ ಇದೆ-ಆದರೆ ಶ್ರೀ ಕೃಷ್ಣಾನಂದರ ಹೊನ್ನಾವರ-ಉತ್ತರ ಕರ್ನಾಟಕ ಜಿಲ್ಲೆಯ ವಿಚಾರ ವಿಮರ್ಶೆಗೆ ಸಿಕ್ಕದ ಒಂದೂ ವಿಷಯವಿಲ್ಲವೆಂದೇ ಭಾವಿಸುತ್ತೇನೆ. ಬರೀ ಕನ್ನಡ ಸಾಹಿತ್ಯದವರ ಭಾಷಣದಲ್ಲಿ ಭಾಷೆ- ಸಾಹಿತ್ಯ-ಜನಜೀವನ-ಇತಿಹಾಸ ಇವುಗಳನ್ನೇ ಕಾಣುತ್ತೇವೆ. ಆದರೆ ಶ್ರೀ  ಕೃಷ್ಣಾನಂದರ ಭಾಷಣದಲ್ಲಿ ಒಬ್ಬ ಸಂಶೊಧಕನ ಶ್ರಧ್ಧೆ, ವಿಜ್ಞಾನಿಯ ಬುದ್ಧಿಶಕ್ತಿ, ಕಲಾಕಾರನ  ಕೌಶಲ್ಯ, ಛಾಯಾಗ್ರಾಹಕನ ತೀಕ್ಷ್ಣ ದೃಷ್ಟಿ ಎಲ್ಲವೂ ಐಕ್ಯವಾಗಿವೆ. ಅದರಲ್ಲೂ ಪ್ರಾಣಿ ಪಕ್ಷಿಗಳ ವಿಚಾರ, ಅವು ತಾವೇ ಕ್ರಿಮಿಕೀಟಗಳನ್ನು ನಿವಾರಣೆ ಮಾಡಿಕೊಳ್ಳುವ ಬಗೆ ಇವೆಲ್ಲ ಎಂಥವರಿಗೂ ಆಶ್ಚರ್ಯವನ್ನುಂಟು ಮಾಡುವದು.

 ಶ್ರೀ  ಕೃಷ್ಣಾನಂದರ ಸಮಗ್ರ ಸಾಹಿತ್ಯವನ್ನು ನಾವು ಓದದಿದ್ದರೂ ಕೆಲವರ ಮೆಚ್ಚುಗೆಯ ಲೇಖನಗಳನ್ನು  ಓದಿದರೇ ಸಾಕು. ಅವರ ಸಮಗ್ರ ಸಾಹಿತ್ಯದ ಪರಿಚಯವಾಗುವದು. ಅವರು ಚಿ ವಿಕಾಸನಿಗೆ ಬರೆದ ಪತ್ರವನ್ನು ಓದಿದಾಗ ಅವರ ಸರಳತೆ ಔದಾರ್ಯ ಎಲ್ಲವೂ ವ್ಯಕ್ತವಾಗುವದು. ಚಿ. ವಿಕಾಸನು ಅವರ , ’ಬಾಪ್ಪಾ’ ರವರ ವಿಚಾರವನ್ನು ಬರೆದಿರುವದರಲ್ಲಿ ಅವನು, ’ಡೆವಲಪ್ ಮೆಂಟ್ ಬ್ಯಾಂಕರ್ ಒಡೆದಿದ್ದ ಸಂದರ್ಭದಲ್ಲಿ ಶ್ರೀ ಕಾಮತರು ಕಳೆದ ಸಹನೆಗೆ ಸಮನಾಗಿ- ನಮ್ಮ ಬಿ.ರಾ ಅವರು ಕಷ್ಟಪಟ್ಟು ಗಳಿಸಿದ್ದ ಇಪ್ಪತ್ತು ಸಾವಿರ ರೂಪಾಯಿನ ಠೇವಣಾತಿ ಮುಳುಗಿಹೋಯಿತು! ಆಗ ಅವರು ಸಮಾಧಾನವಾಗೇ, “ಹೋಗಲಿ ಬಿಡು” ಎಂದುಬಿಟ್ಟರು. ಮತ್ತೊಂದು ಸಾಮ್ಯ. ಬಂದ ಲಕ್ಕೋಟೆಗಳನ್ನು ಕತ್ತರಿಸಿ ಒಳ-ಹೊರಗೆ ಮಾಡಿ ಉಪಯೋಗಿಸುತ್ತಿದ್ದುದು.

ನೀವಿಬ್ಬರೂ ಇಷ್ಟು ವಿದ್ಯಾವಂತರಾದರೂ- ಯಾರೋ ನಮಗೆ ಹೇಳಿದ್ದರು,” ಸರಸ್ವತಿ ನಿಮಗೆ ಹತ್ತಿರವಾದರೂ ಲಕ್ಷ್ಮೀ ಮಾತ್ರ ದೂರ ನಿಂತು ನೋಡ್ತಾ ಇರ್ತಾಳೆ” ಎಂದು. ಅದು ನಿಮಗೂ ಅನ್ವಯಿಸಬಹುದೆಂದು ಭಾವಿಸುತ್ತೇನೆ. ನೀವು ಸಾಮೀಪ್ಯದ ದಂಪತಿಗಳಾಗಿದ್ದುದಕ್ಕಿಂತಲೂ ಪತ್ರ ವ್ಯವಹಾರದ ದಂಪತಿಗಳಾಗಿದ್ದ ಕಾಲವೇ ಹೆಚ್ಚೆಂದು ತೋರುತ್ತೆ!

 ಅಂಥಾ ಶಿಸ್ತು-ಸಂಯಮದ ಸಿಪಾಯಿ ನನ್ನ ಲೆಕ್ಕದಲ್ಲಿ ಅಷ್ಟು ಚಿಕ್ಕ ವಯಸ್ಸಿಗೇ ಕಾಲವಶರಾಗಿದ್ದು ಈ ವಯಸ್ಸಿಗೆ ತುಂಬಲಾರದ ನಷ್ಟ. ವಿಧಿ-ಮೀರಲು ಸಾಧ್ಯವಿಲ್ಲ. ಆದರೂ ಚಿ ವಿಕಾಸ ಕಾಮತ್ ಇಲ್ಲೇ ಇದ್ದಿದ್ದರೆ? ಎನ್ನಿಸಬಹುದಲ್ಲವೇ? ಮಾತೃಹೃದಯ.

ಎಚ್.ವಿ ಸಾವಿತ್ರಮ್ಮ

ಹೈದರಾಬಾದ