ಸಂಗೀತ ಸಾಮ್ರಾಜ್ಞಿಯರು-

 

ಪ್ರಸ್ತಾವನೆ

ಕೆಲವು ವರ್ಷಗಳ ಹಿಂದೆ, ಉಡುಪಿಯಿಂದ ಪ್ರಕಟವಾಗುತ್ತಿದ್ದ ಸಂಗೀತಕ್ಕೆ ಮೀಸಲಾದ  ‘ರಾಗ ಧನಶ್ರೀ’ ಎಂಬ ಮಾಸಪತ್ರಿಕೆಗೆ, ಅಪರೂಪದ ಧ್ವನಿಮುದ್ರಿಕೆಗಳು’ ಎಂಬ ಲೇಖನಮಾಲೆ ಬರೆದಿದ್ದೆ. ಭಾರತೀಯ ಸಂಗೀತದ ಮೊಟ್ಟ ಮೊದಲ ಮುದ್ರಣ, ೧೯೦೨ನೇ ಇಸವಿಯ ನವೆಂಬರ ೨ನೇ ತಾರೀಖು ಆದದ್ದು, ಅದೂ ಕಲಕತ್ತೆಯ ಆ ಕಾಲದ ದೊಡ್ಡ ಹಾಟೇಲಿನ ಎರಡು ವಿಶಾಲವಾದ ಹಾಲಿನಲ್ಲಿ (suite) ಸಮಾರಂಭ ಆಯೋಜಿಸಲಾಗಿತ್ತು. ಇದು ಹಿಂದುಸ್ಥಾನಿ ಸಂಗೀತ ಇತಿಹಾಸದ ಒಂದು ದಾಖಲೆ. ಈ ಮುದ್ರಣಕ್ಕೆ ಗೋಹರಜಾನಳಿಗೆ  ಮೂರು ಸಾವಿರ ರೂಪಾಯಿ ಧನಾದೇಶ ಆ ಕಾಲದಲ್ಲಿ ಕೊಡಲಾಗಿತ್ತು! ಈ ಗೋಹರಜಾನಳ ಬಗ್ಗೆ ಬರೆಯುವಾಗ ನನಗೆ ಹಿಂದುಸ್ಥಾನಿ ಸಂಗೀತದಲ್ಲಿ ಹಾಡಿ, ಕುಣಿದು, ಸಾವಿರಾರು ಜನರಿಗೆ ಸಂತೋಷ ನೀಡಿದ  ಈ ಪ್ರತಿಭಾಶಾಲಿ ಯುವತಿಯರ ಬಗ್ಗೆ, ಅವರ ಕೊಡುಗೆಯ ಬಗ್ಗೆ ಒಂದು ಲೇಖನಮಾಲೆ ಬರೆಯಬಹುದಲ್ಲ ಎಂದು ಅನಿಸಿದರೂ, ಈ ಐದು ವರ್ಷಗಳಲ್ಲಿ  ಒಂದು ಸರಿಯಾದ, ‘ಮೂಹೂರ್ತ’ ಸಿಗದೇ ಲೇಖನ ಬರೆಯುವದನ್ನು ಮುಂದೆ ಹಾಕಬೇಕಾಯಿತು! ಮೊನ್ನೆ ಸೂಫಿ ಪಂಥ ಮತ್ತು ಹಿಂದುಸ್ಥಾನಿ ಸಂಗೀತ ಈ  ವಿಷಯದ ಮೆಲೆ ಬರೆಯುವಾಗ ಅದೇ ಮರೆತ ಕೊರೆತ ಮತ್ತೇ ಪ್ರಾರಂಭಿಸಿತು! ನಾಯಕಸಾನಿ, ಕರ್ಟೇಸನ್, ತವಾಯಫ್, ಡಾನ್ಸಿಂಗ್ ಗರ್ಲ್ಸ್, ಸಾನಿ, ಸೂಳೆ, ಇವೆಲ್ಲ ವಾರಾಂಗನೆಯವರ  ಅನೇಕ ಹೆಸರುಗಳು.  ಕೆಲವರಿಗೆ ಗಣಿಕೆಯೆಂದು ಕರೆಯುವದುಂಟು. ವಸಂತಸೇನೆಯ ಕಾಲದಿಂದ ಖ್ಯಾತಿ ಪಡೆದ ಈ ಸಮಾಜ, ಭಾರತದಲ್ಲಿ ವಿವಿಧ ಕಾಲಖಂಡಗಳಲ್ಲಿ ಅತ್ಯುಚ್ಚ ಶ್ರೇಣಿಯಲ್ಲಿ ಇದ್ದದ್ದು, ವಿಶೇಷವಾಗಿ ೬೪ ಕಲೆಗಳಲ್ಲಿ ಅಲ್ಲದಿದ್ದರೂ, ಒಂದು ಹತ್ತಿಪ್ಪತು ಕಲೆಗಳಲ್ಲಿ ಆದರೂ ಪ್ರಾವಿಣ್ಯ ಪಡೆದು, ರಾಜ ಮಹಾರಾಜರ ಕುಮಾರರಿಗಾಗಿ, ಆಸ್ಥಾನದಲ್ಲಿದ್ದವರ ಚಿರಂಜೀವರಿಗಾಗಿ ಒಂದು , ತರಬೇತಿ ನೀಡುವ ‘ಸಂಸ್ಥೆ’ ಎಂದು ಹೆಸರು ಮಾಡಿದ್ದು ನಾವು ಕಾಣುತ್ತೇವೆ.

ಇದೇ ವಸಂತಸೇನೆ ಮುಂದೆ ಮೊಗಲರ ಕಾಲದಲ್ಲಿ, ‘ತವಾಯಫ್’ ಎಂದು ‘ನಾಮಾಂತರ’ವಾದರೂ ವೃತ್ತಿ ಬಿಟ್ಟು ಕೊಡಲಿಲ್ಲ. ಹಾಡುಗಾರಿಕೆ, ವಿವಿಧ ವಾದ್ಯ ವಾದನ, ನೃತ್ಯ, ಓದು ಬರಹ, ಚಿತ್ರಕಲೆ, ಬಗೆಬಗೆಯ ಒಳಾಂಗಣ,  ಹೊರಾಂಗಣ ಕ್ರೀಡೆಗಳು, ಆಟಗಳು ಮುಂತಾದ ಕಲೆಗಳಲ್ಲಿ  ಪಾರಂಗತರಾಗಿ ಅವನ್ನೆಲ್ಲ ನವಾಬರ, ನವಾಬಜಾದರ ಮಕ್ಕಳಿಗೆ ಕಲಿಸಿ ಅವರನ್ನು ಸುಸಂಸ್ಕೃತ ಮನುಷ್ಯರನ್ನಾಗಿ  ಮಾಡುವ ಭಾರ  ಅವರ ಮೇಲಿತ್ತು! ಈ ಸಂಸ್ಕೃತಿ, ಲಖನೌ ನವಾಬ, ಖ್ಯಾತ ಸಂಗೀತಪ್ರಿಯ ವಾಜಿದಲಿಶಾಹನ ಆಳಿಕೆಯ ತನಕ ನಡೆದಿತ್ತು. ಖಿಲಜಿ ಮತ್ತು ಮೊಗಲ ಕಾಲದಲ್ಲಿ , ‘ತವಾಯಫ್’ ಸಂಸ್ಕೃತಿ ಉತ್ತರ ಹಿಂದುಸ್ಥಾನದಲ್ಲಿ ರೂಢಿಗೊಂಡು ಬ್ರಿಟಿಷರ ಆಗಮನದ ತನಕ ಅಂದರೆ, ಮೊದಲು ಕಲಕತ್ತೆ ರಾಜಧಾನಿ ಮಾಡಿಕೊಂಡು, ಬಳಿಕ ದೆಹಲಿಗೆ ಸ್ಥಿತ್ಯಂತರಿಸಿದ , ಈಸ್ಟ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿಯೇ ಈ ಸಂಸ್ಕೃತಿಯ ಇಳಿಗಾಲ ಪ್ರಾರಂಭವಾಯಿತು. ‘ಕಂಪನಿ’ ಸರಕಾರ ಭಾರತದಲ್ಲಿ ಬೇರು ಬಿಡುತ್ತಿದ್ದಾಗಲೇ, ೪೫ ವರ್ಷದ ಒಬ್ಬ ಆಂಗ್ಲ ಸರದಾರ ೧೪-೧೫ ವರ್ಷದ ಬೇಗಮ್ ಸುಮ್ರು ಎಂಬ ತವಾಯಫ್ ಕನ್ಯೆಗೆ ಮರುಳಾಗಿ ಅವಳನ್ನು ಮದುವೆಯಾದದ್ದು, ಈ ‘ತವಾಯಫ್’ ಸಂಸ್ಕೃತಿಗೆ ಸ್ವಲ್ಪ ಸಾಮರ್ಥ್ಯ ನೀಡಿದ್ದು ೧೭೫೦ ರ ಸುಮಾರಿಗೆ.

೧೭೫೭ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಏನಕೇನ ಪ್ರಕಾರೇನ ಈ ನಾಯಕಸಾನಿಯರು ಉತ್ತರದಲ್ಲಿಯ ರಾಜ, ಮಹಾರಾಜ, ನವಾಬರಿಗೆ ಸಹಾಯ ಮಾಡುತ್ತಿದ್ದುದರಿಂದಲೋ ಏನೋ ಆಳುವವರ ವಕ್ರದೃಷ್ಟಿ ತವಾಯಫ್‌ರ ಮೇಲೆ ಬಿದ್ದು ಅವರ ಅಳಿಗಾಲ ಪ್ರಾರಂಭವಾಯಿತು. ಜೊತೆಗೆ ಅದಾಗಲೇ ಪೌರ್ವಾತ್ಯರನ್ನು ಕಾಡು  ಅಥವಾ ಅಸಂಸ್ಕೃತರೆಂದು ಪರಿಗಣಿಸಿ, ಮತಾಂತರಿಸಿ ಸಚ್ಚರಿತ್ರರನ್ನಾಗಿಸಿ, ಯೇಸುಕ್ರಿಸ್ತನ ಕೃಪೆಗೆ ಪಾತ್ರರನ್ನಾಗಿಸಲು ಕ್ರೈಸ್ತಮಿಶನರಿಗಳ ತಂಡಗಳು ಭಾರತಕ್ಕೆ  ಬರಲಾರಂಭಿಸಿದವು. ಸ್ತ್ರೀ ಪುರುಷರ ವಿವಾಹ ಬಾಹ್ಯವಾದ, ಯಾವುದೇ ಸಾಂಸ್ಕೃತಿಕ ಕೂಟಗಳು ವಿಷಯಲಂಪಟತೆಯ ದ್ಯೋತಕವೆಂದು ಪರಿಗಣಿಸುವ ಕ್ರೈಸ್ತರ ನೈತಿಕ ನಿಷ್ಠುರತೆಯು (Puritanism), ಮೆಲ್ಲಮೆಲ್ಲಗೆ ಹರಡಲಾರಂಬಿಸಿದ ಬ್ರಿಟಿಷ ಸಾಮ್ರಾಜ್ಯಶಾಹಿಗೆ ಜೊತೆಗೊಟ್ಟಿತು. ಸಂಗೀತ ನೃತ್ಯ್ಯದಂತಹ ಲಲಿತಕಲೆಗಳಿಗೆ ಆಗರವಾಗಿದ್ದ ತವಾಯಫ್ ಕೋಠಿಗಳು ರಾಜಾಶ್ರಯ, ಲೋಕಾಶ್ರಯಗಳನ್ನೂ ಕಳೆದುಕೊಂಡು ಕ್ರಮೇಣ ವೇಶ್ಯಾವಾಟಿಕೆಯ ರೂಪ ಪಡೆದವು.

ವಸಂತಸೇನೆಯಂತಹ ಸುಸಂಸ್ಕೃತ , ಆಗರ್ಭ ಶ್ರೀಮಂತ ನಾಯಕಸಾನಿಯರ ಬಳಗದವರು ಸೂಳೆ,ಬೀದಿಬಸವಿ ಎಂದು ಎನಿಸಿಕೊಂಡರು! ಆದರೂ ದೆಹಲಿ, ಲಖನೌ, ಹೈದ್ರಾಬಾದ , ಮುಂಬಯಿಯ ‘ಪೀಲಾ ಹಾವುಸ್’, ಕೆನೆಡಿ ಬ್ರಿಡ್ಜ ಭಾಗ ದಲ್ಲಿ ೧೯೬೦ರ ತನಕ ,’ಮುಜರಾ’ ಮಾಡುವ , ತವಾಯಫ್ ಮನೆಗಳು ಗೌರವಾನ್ವಿತರಾಗಿ ಇದ್ದುದಕ್ಕೆ ಅನೇಕ ಪುರಾವೆಗಳಿವೆ. ನಾನೂ ಒಂದೆರಡು ಮುಜರಾ ನೋಡಿದ್ದೇನೆ! ಈ ಲೇಖನಮಾಲೆ ‘ಕೋಠಿ’ ಸಂಗೀತ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದ ನಾಯಕಸಾನಿಯರಿಗೆ, ಸಂಗೀತ ಸಾಮ್ರಾಜ್ನಿಯರಿಗೆ ಮೀಸಲಾಗಿದೆ. ಪ್ರಾಮುಖ್ಯವಾಗಿ ಉತ್ತರಭಾರತದ ನಾಯಕಸಾನಿಯವರ ಸಂಗೀತ-ನೃತ್ಯತ ಕಲೆಯನ್ನು ‘ಅಮೀರ-ಉಮರಾವ್’ ಜನರಿಂದ ಹಿಡಿದು ಜನಸಾಮಾನ್ಯರಿಗೂ ಮುಟ್ಟಿಸುವ ಕಾರ್ಯ ಮಾಡಿದ್ದು, ಕಾಲಕಾಲಕ್ಕೆ ಧ್ವನಿಮುದ್ರಣ ಮಾಡಿ, ಠುಮರಿ, ದಾದರಾ, ಗಜ಼ಲ್, ಕವ್ವಾಲಿ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಇದೆ. ಈ ಕೋಠಿಯಲ್ಲಿ ಸಂಗೀತ ಕಲಿಸುವ ಉಸ್ತಾದರಿಗೆ ಮತ್ತು ಪಂಡಿತರಿಗೆ ಸಮಾಜದಲ್ಲಿ ಉಚ್ಚಸ್ಥಾನವಿತ್ತು. ‘ಕೋಠಿವಾಲೆ ಗವಾಯಿ’ ಎಂದು ಪರಿಚಯ ಮಾಡಿಕೊಡುವ ಕಾಲವೊಂದಿತ್ತು ಎಂಬುದು ಗಮನಾರ್ಹ!