ಕಿಟೆಲ್ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕಿರುಭಾಷಣ

[ಪ್ರತಿ ವರ್ಷ, ರಾಜ್ಯೋತ್ಸವ ಸಂದರ್ಭದಲ್ಲಿ, ಬೆಂಗಳೂರಿನ ಪ್ರಸಿದ್ಧ ಜರ್ಮನ್ ಮೈಕೋ ಕಂಪನಿಯು ಕನ್ನಡ ಸಾಹಿತ್ಯ, ಇತಿಹಾಸ, ಸಂಶೋಧನೆಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕಿಟೆಲ್ ಪ್ರಶಸ್ತಿಯನ್ನು ಕೊಡಮಾಡುತ್ತದೆ. 2001 ರ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ( 1832- 1903 ) ಪ್ರಶಸ್ತಿ ಡಾ| ಜ್ಯೋತ್ಸ್ನಾ ಕಾಮತರಿಗೆ ಸಂದಿತು. ಆ ಸಂದರ್ಭದಲ್ಲಿ  ಮಾಡಿದ ಕಿರುಭಾಷಣ ]

 

ಕನ್ನಡಾಭಿಮಾನಿಗಳೇ,

ನನಗೆ ಬುದ್ಧಿ ಬರುತ್ತಿರುವ ಕಾಲದಲ್ಲೇ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ನನಗೆ ಒಬ್ಬ ಅತ್ಯಂತ ದೊಡ್ಡ ಪವಾಡ ಪುರುಷನಾಗಿದ್ದ. 8-10 ವರ್ಷದ ಬಾಲಕಿಯಾಗಿದ್ದಾಗ ಸಾಹಿತ್ಯ ಪ್ರೇಮಿಯಾದ ನನ್ನ ತಂದೆ ಹುಬ್ಬಳ್ಳಿಯ ಯಾವುದೋ ಹಳೇ ಪುಸ್ತಕದಂಗಡಿಯಿಂದ, 1893 ರಲ್ಲಿ ಪ್ರಕಟವಾಗಿದ್ದ ಕಿಟೆಲ್ ಕೋಶ ಹೊತ್ತು ಮನೆಗೆ ತಂದಿದ್ದರು. 1752 ಪುಟಗಳ ಬೃಹದ್ ಗ್ರಂಥವನ್ನು ಆ ವಯಸ್ಸಿನಲ್ಲಿ ಎತ್ತಿ ನೋಡುವುದು ಕಷ್ಟ! ಸಾಲದಕ್ಕೆ ಕನ್ನ ಮಾಧ್ಯಮದಲ್ಲಿ ಓದಿದಾಕೆಗೆ ಕೋಶದ ಇಂಗ್ಲಿಷ್ , ಅರ್ಥವೂ ಆಗುತ್ತಿರಲಿಲ್ಲ ಮೂರನೇ ವರ್ಗದ ಪುಸ್ತಕ ಓದುತ್ತಿದಾಕೆಗೆ ಇಂಥಾ ದೊಡ್ಡ ಪುಸ್ತಕ ಬರೆದವ ರಾಕ್ಷಸರಿರಬೇಕು ಅನಿಸಿತ್ತು!

ವರ್ಷಗಳು ಕಳೆದಂತೆ ಕಿಟೆಲ್ ಕೋಶದೊಂದಿಗೆ ನನ್ನ ನಂಟು ಹೆಚ್ಚಾಗುತ್ತಾ ನಡೆಯಿತು. ನನ್ನ ಡಾಕ್ಟರೇಟಿಗೆ ಹಳೆಗನ್ನಡ ಕಾವ್ಯಗಳನ್ನು ಓದಲು ಪ್ರಾರಂಬಿಸಿದ್ದೆ. ಯಾರೂ ಆರಿಸದ ವಿಷಯ ಆಗ ಚರಿತ್ರೆಯಲ್ಲಿ PhDಗೆ ಆರಿಸಿದ್ದೆ. ಮಧ್ಯಯುಗದ ಕನ್ನಡಿಗರ ಸಾಮಾಜಿಕ ಜೀವನ’. ಆಕರಗಳ ಕಲ್ಪನೆಯಿಲ್ಲದ್ದರಿಂದ ಹಳೆಯ ಸಂಸ್ಕೃತ ಕಾವ್ಯ, ಶಾಸನಗಳು, ಶಾಸ್ತ್ರಗಳ ಅಭ್ಯಾಸ, ಜೊತೆಗೆ ಕನ್ನಡ ಆಕರಗಳನ್ನು ಓದಿ ಇಂಗ್ಲಿಷಿನಲ್ಲಿ ಮಹಾ ಪ್ರಬಂಧ ಬರೆಯಬೇಕಾದ ಪ್ರಮೆಯ ಬೇರೆ! ಕಿಟೆಲ್ ಕೋಶ ನನ್ನ ಸಹಾಯಕ್ಕೆ ಧಾವಿಸಿ ಬಂದಿತು. ಇತ್ತೀಚಿನ ವರ್ಷಗಳಲ್ಲಿ ಕಿಟೆಲ್ ಕೋಶದ ಪರಿಷ್ಕೃತ ಆವೃತ್ತಿಯ ಐದು ಸಂಪುಟಗಳು ಬಂದಿವೆ. ಆದರೆ ನನ್ನ ಪಾಲಿಗೆ ರೆವರೆಂಡ್ ಕಿಟೆಲ್ ಬರೆದ ಉದ್ಗ್ರಂಥ ನನ್ನ ಪಾಲಿನ ಪಿತ್ರಾರ್ಜಿತ ಆಸ್ತಿಯಾಗಿದೆ.

ಕನ್ನಡ ಸಾಹಿತ್ಯ ಸಂಶೋಧಕರಿಗೆಲ್ಲ ಪ್ರಾತಃ ಸ್ಮರಣೀಯರಾದ ಕಿಟೆಲ್ ಕುರಿತು ನಾನೇನೂ ಹೊಸದು ಹೇಳುವುದು ಉಳಿದಿಲ್ಲ! ಆದರೆ ಬರೆ ಕೋಶವಷ್ಟೆ ಅಲ್ಲದೆ ಅವರು ಕನ್ನಡ ಶಾಸನಗಳನ್ನು ಓದಿ, ವಿಶ್ಲೇಷಿಸಿ, ಸಂಪಾದಿಸಿದ ಸಂಶೋಧನಾಲೇಖಗಳು ಕೋಶದಷ್ಟೇ ಅತ್ಯುಪಯುಕ್ತವಾಗಿ ಪರಿಣಮಿಸಿದವು ಎಂದು ಹೇಳಲು ಬಯಸುತ್ತೇನೆ. ಇತಿಹಾಸ ಹಾಗೂ ಕನ್ನಡ ಪ್ರಾಚೀನ ಸಾಹಿತ್ಯದ ಅವಿನಾ ಸಂಬಂಧ ಇದೆ! ಎಂದು ತೋರಿಸಿಕೊಟ್ಟು ಕಿಟೆಲರು ನನ್ನ ಅಧ್ಯಯನಕ್ಕೆ ದಾರಿ ದೀಪವಾದರು. ಕಿಟೆಲ್‌ರ ಕರ್ಮಭೂಮಿ, ಧಾರವಾಡದಲ್ಲೇ ನನ್ನ ಕನ್ನಡ ವ್ಯಾಸಂಗ ನಡೆಯಿತು. Phd ಕೂಡ ಅಲ್ಲೇ ಮುಗಿಸಿದೆ. ಉತ್ತರಕರ್ನಾಟಕದ ಗಂಡುಗನ್ನಡ ಮಾದರಿಯ ಭಾಷಾ ಪ್ರಭೇದವನ್ನು ಗುರ್ತಿಸಲಿಕ್ಕೆ ಕಿಟೆಲ್ ಕೋಶ ಬಿಟ್ಟರೆ ಇನ್ನಿಲ್ಲ! ಶಬ್ದಾರ್ಥದ ಜೊತೆಗೆ ಗಾದೆಮಾತು, ಪಡೆನುಡಿ, ಆಡುಗನ್ನಡ ವಾಕ್ಯಗಳನ್ನು ವಿವರಣೆಗೆ ತಪ್ಪದೆ ಸೇರಿಸಿದ್ದು ಅವರ ದೊಡ್ಡ ಸಾಧನೆ! ಭಾರತದ ಯಾವಭಾಷೆಯಲ್ಲೂ ಇಂಥ ವಿಸ್ತ್ರತ ಶಾಸ್ತ್ರೀಯವಾಗಿರುವ ಸಾಹಿತ್ಯಸಂದರ್ಭದ ಅರ್ಥನೀಡುವ ಕೋಶ ಇನ್ನೊಂದಿಲ್ಲ! ಎಂದು ಬಲ್ಲವರು ಹೇಳುತ್ತಾರೆ. ಈ ಮಹತ್ಕಾರ್ಯ ಅಂದರೆ ಕೋಶವನ್ನು ನಿರ್ಮಿಸಿ ಕಿಟೆಲ್, ಹರಿದು ಹಂಚಿಹೋದ ಕನ್ನಡ ಜನಕ್ಕೆಲ್ಲ ಒಂದುಗೂಡಿಸುವ ಮಹಾಶಕ್ತಿಯಾದರು! ರೆವರೆಂಡ್ ಕಿಟೆಲ್ ರನ್ನು ಇಂದು ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಿದ್ದೇನೆ. ಆ ಕಾಲದಲ್ಲಿ ಕಿಟೆಲ್ ಕೋಶವೊಂದೇ ದೇಶದ ತುಂಬ ಹರಡಿ ಹೋದ ಹಳೆಗನ್ನಡ ಅರಿಯಲೆತ್ನಿಸುವ ಸಂಶೋಧಕರಿಗೆ ದಾರಿದೀಪವಾಗಿತ್ತು.

46 ವರ್ಷಗಳ ಹಿಂದೆ ಐದು ರಾಜ್ಯಗಳಲ್ಲಿ ಹಂಚಿಹೋದ ಕನ್ನಡಿಗರ ಅವಸ್ಥೆ ಏನಿತ್ತು? ಎಂದು ಹೇಳಲು ಹೊರಟಿಲ್ಲ. ಮಹಾರಾಜರ ಸಂಸ್ಥಾನದ ಭಾಗವಾಗಿದ್ದ ಬೆಂಗಳೂರಿಗರು ಸುದೈವಿಗಳು. ಮುಂಬೈ ಪ್ರಾಂತ್ಯದ ಅತ್ಯಂತ ನಿರೀಕ್ಷಿತ ಭಾಗವಾಗಿದ್ದ ಉತ್ತರಕನ್ನಡ ಜಿಲ್ಲೆಯ ನಾವು  ಪ್ರತಿದಿನವೂ ಇತರ ಭಾಷಕರ ಜೋರು, ಒತ್ತಡಗಳನ್ನು ಅನುಭವಿಸಿದವರು. ಆದರೂ ಆಕಾಲದಲ್ಲೂ ಸಾಂಸ್ಕೃತಿಕವಾಗಿ ಕನ್ನಡಿಗರನ್ನು ಒಂದಾಗಿಸಲು ದುಡಿದ ಅನೇಕ ಮಹನೀಯರಿದ್ದರು. ಬಿ. ಎಂ. ಶ್ರೀ, ಅನಕೃರಂಥವರು ನಮ್ಮಲ್ಲಿ,  ಕಿಟೆಲ್ ಕರ್ಮಭೂಮಿಯಲ್ಲಿ ಸಾಕಷ್ಟು ಜನರಿದ್ದರು ಅವರಲ್ಲಿ ಕೌಜಲಗಿ ಹನುಮಂತರಾಯರು, ದೊಡ್ಡ ಸ್ವಾತಂತ್ರ್ಯ ಯೋಧರು, ಕವಿಗಳು, ತ್ರಿಭಾಷಾ ಲೇಖಕರು. ಕನ್ನಡ, ಇಂಗ್ಲಿಷ್, ಮರಾಠಿಗಳಲ್ಲಿ ಬರೆಯುತ್ತಿದ್ದ ಸಮಾಜಸೇವಕರು.

ಅವರು ಕನ್ನಡನಾಡಿನ ವೈವಿಧ್ಯತೆಯಲ್ಲಿ .ಏಕತೆಯನ್ನು ಕಂಡ ಒಂದು ವಿನೋದಪೂರ್ಣ ಹಾಡನ್ನು ಉದಾಹರಣೆಯಾಗಿ ಕೊಡ್ತೀನಿ.

ಭೋಜನ ಸುಖರತ ಈ ಕಾಡು! ಎನ್ನದು ಈ ಕನ್ನಡನಾಡು|

ಮಂಗಳೂರಿನ ಮತ್ಸ್ಯಾಹಾರಾ|

ಕೊಡಗಿನ ಕಟು ಕಾಫಿನೀರಾ|

ಮೈಸೂರಿನ ಇಡ್ಡಲಿ ದ್ವಾಶಿ, ಬಳ್ಳಾರಿಯ ಅನ್ನದರಾಶಿ|

ಕಲಬುರ್ಗಿಯಲ್ಲಿ ಕಂದೂರಿ, ಬೆಳಗಾವಿಯಲಿ ಬುರಬುರಿ|

ಧಾರವಾಡದಲಿ ಅವಲಕ್ಕಿ, ಕಾರವಾರದ ತಾಳೆಚಕ್ಕಿ|

ವಿಜಾಪುರದ ಬಣಬಣರೊಟ್ಟಿ! ನೆನಪಾದರ

ಉರೀತದ ಹೊಟ್ಟೀ!

ಆಂಬೊಡಿ ಉಪ್ಪಿಟ್ಟಿನ ದೇಶ! ನಾನಾವಿಧ ತಿಂಡಿಯ ಕೋಶ

ಹೆರೆತುಪ್ಪ ಕಡುಬಿನ ಬೀಡು! ಎನ್ನದು ಈ ಕನ್ನಡ ನಾಡು.

ಕನ್ನಡನಾಡಿನ ಪ್ರತಿ ಪ್ರದೇಶದ ಊಟ.ವೂ ವಿಶಿಷ್ಟ ರುಚಿ ಉಳ್ಳದ್ದು ಅಂತ ಹೇಳಿದ ಕೌಜಲಗಿ ಅವರು ವಿಜಾಪುರದವರಾಗಿದ್ದರು. ಗಟ್ಟಿಮೊಸರು, ಸೇಂಗಾ ಹಿಂಡಿಗೂ ರೊಟ್ಟಿಯಷ್ಟೇ ಪ್ರಸಿದ್ಧ ಅವರ ಊರು. ಆದರೂ ಸೌಜನ್ಯಕ್ಕಾಗಿ ಒಣಒಣರೊಟ್ಟಿ, ನೆನಪಾದ್ರ ಉರೀತದ ಹೊಟ್ಟೀ! ಅಂದರು. ಒಂದು ಮಾತು ನಿಜ. ನಾವು ಕನ್ನಡಿಗರು ನಮ್ಮನಮ್ಮಲ್ಲಿ ಎಷ್ಟೇ ಬಡಿದಾಡಿದ್ರೂ ಒಂದು ವಿಷಯದಲ್ಲಿ ಒಮ್ಮತ ಎಲ್ಲರದೂ! ಊಟ ಸೊಗಸಾಗಿರಬೇಕು. ವೈವಿಧ್ಯ ಉಳ್ಳದ್ಧಾಗಿರಬೇಕು!

 

ಅದರಂತೆ ಇಡೀ ಭಾರತವನ್ನು ಎರಡು ಮೂರು ವಿಚಾರಗಳು ಬಂಧಿಸಿಟ್ಟಿವೆ. ಒಂದು ಹೊಟ್ಟೆಯದು, ಇನ್ನೊಂದು ಕಿವಿಯದು ಮೂರನೆಯದು ಕಣ್ಣಿನದು. ಫಿಲ್ಮಿ ಸಂಗೀತ, ನೃತ್ಯ ಹಾಗೂ ಊಟ ತಿಂಡಿ. 25 ವರ್ಷದ ಹಿಂದೆ ಆಯಾ ಪ್ರದೇಶದ ಊಟ ಭಿನ್ನ ಇರ್ತಿತ್ತು. ಈಗ Platemeals ಎಷ್ಟು ಸಾಮಾನ್ಯವಾಗಿಬಿಟ್ಟಿದೆ, ಅಂದರೆ ಉತ್ತರಭಾರತ, ದಕ್ಷಿಣಭಾರತ, ಪೂರ್ವ, ಪಶ್ಚಿಮ ಭಾರತ ಎಲ್ಲಿಹೋದರೂ ಥಾಲಿಯೂಟ  ಸಿಕ್ಕೇ ಸಿಗತ್ತೆ! ಬೆಂಗಳೂರಿನ ಗಾಡಿ ಅಂಗಡಿಗಳು ಭಾರತವನ್ನು ನಾಲಿಗೆಯ ಮೂಲಕ ಬೆಸೆದುಬಿಟ್ಟಿವೆ! ಪಾನಿಪುರಿ, ಕಚೋರಿ, ಸಮೋಸ, ಗೋಬಿಮಂಚೂರಿ ಮೂಲಕ! ಉತ್ತರ ಭಾರತೀಯರು ಇಡ್ಲಿ-ವಡಾ-ಸಾಂಬಾರ್, ಉಪ್ಪಿಟ್ಟು ಚಪ್ಪರಿಸಿ ಹೊಡೆಯುತ್ತಾರೆ. ಪ್ಲೇಟ್ Meals ಕ್ರಾಂತಿ ಜನರನ್ನು ಒಟ್ಟಿಗೆ ತಂದದ್ದಿದೆ. ಹಾಗೆಯೇ MICO ಕನ್ನಡ ಬಳಗ ವಿವಿಧ ಭಾಷೆ-ಸಂಸ್ಕೃತಿಯ ಜನರನ್ನು ಸೇರಿಸಿಕೊಂಡು ಕನ್ನಡದ ಏಳ್ಗೆಗಾಗಿ ದುಡಿಯುತ್ತಾ ಇದೆ! ಎನ್ನುವ ಅಂಶವನ್ನು ಮೈಕೋ ಕನ್ನಡ ಸಂಘದ ಅಧ್ಯಕ್ಷ ಶ್ರೀ ರಾಮಮೂರ್ತಿ ಗಮನಕ್ಕೆ ತಂದುಕೊಟ್ಟರು. ಜೊತೆಗೆ ಕನ್ನಡಕ್ಕಾಗಿ ಶ್ರಮಿಸಿದ ಕಿಟೆಲ್ ರಂಥ ಮಹಾನುಭಾವರ ಹೆಸರಿಗೆ ಪ್ರಶಸ್ತಿ ಪ್ರಾರಂಭಿಸಿ ಈ ಪ್ರಶಸ್ತಿ ಪ್ರದಾನ, ರಾಜ್ಯೋತ್ಸವದ ಅಂಗವಾಗಿ ನಡೆದು ಬರುವಂತೆ ಬಳಗ ನೋಡಿಕೊಂಡಿದೆ. ಕಿಟೆಲ್‌ರ ಹೆಸರನ್ನು ಅಜರಾಮರವಾಗಿಸಿದೆ! ಎಂದು ಹೆಮ್ಮೆಯಿಂದ ನೆನೆಸಿಕೊಳ್ಳುತ್ತೇನೆ. ಜರ್ಮನ್ ಕಿಟೆಲ್‌ರ ಕನ್ನಡ ಅಭಿಮಾನದಂತೆ ಅವರ ಹೆಸರಿಗೆ ಪ್ರಶಸ್ತಿಯನ್ನು ಕೊಂಕಣಿ ಭಾಷೆಯ ನನಗೆ ಕನ್ನಡದ ತೀರ ಅಲ್ಪ ಸೇವೆಗೆ ಕೊಡಮಾಡಿದ್ದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸಿ ಎರಡು ಮಾತು ಮುಗಿಸ್ತೀನಿ.

ಜೈ ಕರ್ನಾಟಕ ಮಾತೆ|