ಗೋಹರಬಾಯಿ ಕರ್ನಾಟಕಿ – (೧೯೧೦-೧೯೬೩)

ನಿಮ್ಮಲ್ಲಿ ಅನೇಕರು ಡಾ. ರಹಮತ್ ತರೀಕೆರೆಯವರು ಅಮೀರಬಾಯಿ ಕರ್ನಾಟಕಿಯವರನ್ನು ಕುರಿತು ಬರೆದದ್ದನ್ನು ಓದಿರಬೇಕು. ಪುಸ್ತಕ ಓದಿದ ಮೇಲೆ ಅಮೀರಬಾಯಿಯ ಪ್ರತಿಭೆಯ ಬಗ್ಗೆ, ಚಿತ್ರರಂಗದಲ್ಲಿ ಮಹಾನ್ ಎತ್ತರಕ್ಕೆ ಬೆಳೆದ ಅವರ ವ್ಯಕ್ತಿತ್ವದ ಮೇಲೆ ಒಂದು ಪ್ರಭಾವಲಯ ಉತ್ಪನ್ನವಾಗುವ ಸಂಭವವಿದೆ. ಆ ಪ್ರಖರ ಬೆಳಕಿನೆದುರು ಅವರ ಮನೆಯಲ್ಲಿಯೇ ಹುಟ್ಟಿ ಬೆಳೆದ ಅಷ್ಟೇ ಪ್ರತಿಭಾವಂತ ಮತ್ತೊಬ್ಬ ಗಾಯಕಿಯನ್ನು ಮರೆಯುವ ಸಂಭವ ಜಾಸ್ತಿ. ನಾನೀಗ ಬರೆಯುತ್ತಿರುವದು ಗೋಹರಬಾಯಿ ಕರ್ನಾಟಕಿಯನ್ನು ಕುರಿತು. ಅವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯಲ್ಲಿಯ ಬೀಳಗಿ ಎಂಬ ಊರಿನಲ್ಲಿ  ೧೯೧೦ ರಲ್ಲಿ. .ಅವರ ತಂದೆ ಹುಸೇನ್ ಖಾನ್ ಕನ್ನಡ ನಾಟಕ ಕಂಪನಿಗಳಲ್ಲಿ  ತಬಲಾ ಬಾರಿಸುವವರಾಗಿದ್ದರು.

ಅವರ ಸಂಗೀತ ಶಿಕ್ಷಣ ನೀಲಕಂಠ ಬುವಾ , ಪಂಚಾಕ್ಷರಿ ಗವಯಿಗಳು , ಹಾಗೂ ನಾಟ್ಯ ಸಂಗೀತ ಬಸವರಾಜ ಮನ್ಸೂರ ಮುಂತಾದವರಲ್ಲಿ ಆಗಿತ್ತು.ಗೋಹರಬಾಯಿ ಕನ್ನಡ ನಾಟಕಗಳಲ್ಲಿ ಹಿರೋಯಿನ್ ಆಗಿ, ವಾಣಿವಿಲಾಸ, ವಾಮನರಾವ್ ಮಾಸ್ತರರ ಕಂಪನಿಯಲ್ಲಿ ತುಂಬಾ ಹೆಸರು ಮಾಡಿದ್ದರು.ಮುಂದೆ ಮುಂಬಯಿಯಲ್ಲಿ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ತಮ್ಮ ಸೌಂದರ್ಯ, ಮಧುರ ಸ್ವರದಿಂದ ಮತ್ತು ನಾಟ್ಯ ಕಲೆಗಳಿಂದ ಜನರ ಮನಸ್ಸನ್ನು ಸೆಳೆದು ಹೆಸರು ಗಳಿಸಿದರು. ರಾಸ ವಿಲಾಸ(೧೯೩೨), ಕಾಲಾ ಪಹಾಡ (೧೯೩೨), ಸೋಹನಿ ಮಹಿವಾಲ (೧೯೩೩), ಕಾಳಾ ವಾಘ ಮತ್ತು ಶಕಕರ್ತಾ ಶಿವಾಜಿ (ಮರಾಠೀ), ಪ್ಯಾರ ಕೀ ಮಾರ್ (೧೯೩೫), ಬಾಂಸುರಿವಾಲಾ, ಗೋಲ ನಿಶಾನ್, ಗ್ರಾಡ್ಯುಯೇಟ್ (೧೯೩೬), ಕಾಲಾಭೂತ, ಚಾಸೆಳೆದರು.ಬೂಕ ಸವಾರ (೧೯೩೭), ವಿಜಯ ಡಂಕಾ (೧೯೩೮), ಹವಾ ಖಟೋಲಾ ಮತ್ತು ಸ್ವದೇಶ ಸೇವಾ (೧೯೪೬), ಚಾಬೂಕ ಸ್ವಾರ ಮತ್ತು ಗೋಲ ನಿಶಾನ್ ಇವೆರಡೂ ಫಿಯರ್‌ಲೆಸ್ ನಾದಿಯಾಳಂತೆ ಸ್ಟಂಟ್ ರೋಲ್ ಹಾಗೂ ಅಪ್ರತಿಮ ಹಾಡುಗಾರಿಕೆಯಿಂದ  ಜನರ ಮನ ಸೆಳೆದರು. ಅವರ ೧೦೦ಕ್ಕಿಂತ ಹೆಚ್ಚು ಹಾಡುಗಳು ರಿಕಾರ್ಡು ಆಗಿವೆ.  ಕೇವಲ ೧೫-೧೮ ರಿಕಾರ್ಡುಗಳು ಮಾತ್ರ ಉಪಲಬ್ಧವಿವೆ.

ಗೋಹರ ಬಿ ಗ್ರೇಡ್, ಸಿ ಗ್ರೇಡ್ ಹಿಂದಿ ಚಿತ್ರಪಟಗಳಲ್ಲಿಯ ಹೀರೋಯಿನ್ ಆಗಿದ್ದರು. ಒಂದೆರಡು ಚಿತ್ರಪಟಗಳಿಗೆ ಸಂಗೀತ ಕೂಡ ಕೊಟ್ಟಿದ್ದಾರೆ.
‘ಗೋಲ ನಿಶಾನ’ದಲ್ಲಿ ಆಕೆ ಫಿಯರಲೆಸ್ ನಾದಿಯಾ ಹಾಗೆ ಸ್ಟಂಟ್ ಕೂಡ ಮಾಡಿದ್ದಾರೆ. ಒಂದು ಹಾಡನ್ನು ಬಾಲಗಂಧರ್ವರ ಸ್ಟೈಲಿನಲ್ಲಿ ಹಾಡಿದ್ದಾರೆ. ಮರಾಠಿ ಚಿತ್ರ ‘ಶತಕರ್ತಾ ಶಿವಾಜಿನಲ್ಲಿ ’ನಟಿಸಿದ್ದಾರೆ.  ಹಿಂದಿಯಲ್ಲಿ ‘ಕಾಲಾ ಪಹಾಡ’. ‘ಸೋಹನಿ ಮಹಿವಾಲ’ದಲ್ಲಿ ಇವರ ಹಾಡುಗಾರಿಕೆ ಮತ್ತು ನಟನೆ ಚೆನ್ನಾಗಿದೆ.

ಗೋಹರ ಮತ್ತು ಅಮೀರ ಬಾಯಿ ಸಾಧಾರಣ ಒಂದೇ ಹೊತ್ತಿಗೆ ಕನ್ನಡ ಥಿಯೇಟರಿನಿಂದ ಹಿಂದಿ/ಉರ್ದು ಸಿನೆಮಾಕ್ಕೆ ಜಂಪ್ ಮಾಡಿದವರು. ಅಮೀರಬಾಯಿಗಿಂತ ಗೋಹರ್ ಸಂಗೀತದಲ್ಲಿ ಜಾಸ್ತಿ ಪರಿಶ್ರಮ ಮಾಡಿದರು.  ಬಾಲಗಂಧರ್ವ ಗೋಹರಳ ಐಡಲ!  ಗೋಹರ ‘ಕಾನ್ಹೋಪಾತ್ರಾ’ ನಾಟಕದ ಹಾಡು, ‘ಅವಘಾಚಿ ಸಂಸಾರ’ ಮತ್ತು ಗೋಲ ನಿಶಾನ’  ಸಿನೇಮಾ ಹಾಡುಗಳನ್ನು ರಿಕಾರ್ಡು ಮಾಡೋ ಕಂಪನಿ ಜತೆ ಕಾಂಟ್ರಾಕ್ಟ ಮಾಡಿ  ಈ ಹಾಡುಗಳನ್ನು  ರಿಲೀಸ್ ಮಾಡಿದರು.  ಬಾಲಗಂಧರ್ವರ ‘ಕಾನ್ಹೋಪಾತ್ರಾ’ ನಾಟಕ ಜೋರಾಗಿ ಮುಂಬಯಿ, ಪುಣೆ, ಇಂದೋರ ಕಡೆ ಗಲ್ಲಾ ತುಂಬಿ ಹಣ ಕೊಡುತ್ತಿತ್ತು. ಸರಿ, ಗಂಧರ್ವರು ಹಾಡುಗಳ ರಾಯಲ್ಟಿ ಬಗ್ಗೆ ಗೋಹರ ಮೇಲೆ ಕೇಸ ಮಾಡಿದರು. ಗೋಹರಳ ವಕೀಲರು ‘ಇವೆರಡು ಸಂತ ಕಾನ್ಹೋಪಾತ್ರಾರ ಹಾಡು – ಇದರ ಮೇಲೆ  ರಾಯಲ್ಟಿ ಹಕ್ಕು ಯಾರಿಗೂ ಇಲ್ಲ’ ಎಂದು ವಾದಿಸಿದರು. ಎರಡೇ ಸಿಟ್ಟಿಂಗ್‌ನಲ್ಲಿ ಕೇಸು ಬಿದ್ದುಹೋಯ್ತು.

ಇಷ್ಟೇಲ್ಲ ಮನಸ್ತಾಪಗಳಾದರೂ ತಮ್ಮ ಕರಿಯರ್ ಉಚ್ರಾಯ ಸ್ಥಿತಿಯಲ್ಲಿ ಇದ್ದಾಗಲೇ  ಗೋಹರಬಾಯಿ ಕರ್ನಾಟಕಿ (ಬಿಜಾಪುರ) ಬಾಲಗಂಧರ್ವರ ಪ್ರೇಮಪಾಶದಲ್ಲಿ ಸಿಕ್ಕಿ ಹಾಕಿಕೊಂಡು ಉಪಪತ್ನಿ ಆದರು.  ಮುಂದೆ ೧೯೩೭ರ ಸುಮಾರಿಗೆ ಪ್ರಾರಂಭವಾದ ಈ ಪ್ರಣಯ ಸಂಬಂಧ ೧೯೫೧ರಲ್ಲಿ ಮುಗಿದು, ಗಂಧರ್ವರ ಹೆಂಡತಿ ತೀರಿಕೊಂಡ ಮೇಲೆ ರಿಜಿಸ್ಟರ್ ವಿವಾಹದ ನಂತರ ‘ಪತ್ನಿ’ ಎಂದೆನಿಸಿಕೊಂಡರು.  ಅಂದರೆ ಮದುವೆಯಾದಾಗ ಗೋಹರಳಿಗೆ ೪೦ ವರ್ಷ, ಮದುಮಗನಿಗೆ ೬೩. ಗೋಹರ ಹೀಗೆ ತನ್ನ ಯೌವನದಲ್ಲಿಯೇ ಯಶಸ್ವಿ ಮತ್ತು ಸ್ವತಂತ್ರ ತಾರಾಂಗಣವನ್ನು ಬಿಟ್ಟುಕೊಟ್ಟು, ಗೆದ್ದಲು ಹಿಡಿದ ಗಂಧರ್ವ ಕಂಪನಿ ಸೇರಿ, ಮುದುಕ ಬಾಲಗಂಧರ್ವರ ಹೀರೋಯಿನ್ ಆಗಿ, ನಾಟಕಗಳಲ್ಲಿ ಕೆಲಸ ಮಾಡಿ, ಕಂಪನಿಯ ಮ್ಯಾನೇಜರ್ ಆಗಿ, ಕಂಪನಿಯನ್ನೂ, ಮುದಿಕಾಲದಲ್ಲಿ ಗಂಧರ್ವರನ್ನೂ ಸಾಕಿ ಸಲಹಿದ ಮಹಾಪತ್ನಿ!

ಹುಟ್ಟು ನಟನಾದ, ಕಲೆಗಾಗಿಯೇ ಬದುಕಿ ಮರಾಠಿ ರಂಗಭೂಮಿಯ ‘ನಟಸಾರ್ವಭೌಮ’ ಎಂದು ಎನಿಸಿಕೊಂಡ ನಾರಾಯಣ ಶ್ರೀಪಾದ ರಾಜಹಂಸರಿಗೆ (ಬಾಲಗಂಧರ್ವರಿಗೆ) ನಾಟ್ಯ ಸರಸ್ವತಿ ಪ್ರಸನ್ನಳಾಗಿದ್ದಳು.  ಸ್ತ್ರೀ ಪಾತ್ರಗಳಲ್ಲಿ ಹೆಸರು ಮಾಡಿದ, ನಮ್ಮ ಕನ್ನಡ ನಾಟಕಗಳ ಹೆಮ್ಮಿಗೆ ನೀಲಕಂಠಪ್ಪನಂತೆ ೨೭ ವಿವಿಧ ಸ್ತ್ರೀ ಭೂಮಿಕೆಗಳನ್ನು ನಿರ್ವಹಿಸಿದ, ಗಂಧರ್ವರನ್ನು ಮರಾಠಿ ಪ್ರೇಕ್ಷಕರು ಅವರದೇ ಪುರುಷ ಭೂಮಿಕೆಗಳನ್ನು ಒಂದೇ ಏಟಿಗೆ ತಿರಸ್ಕರಿಸಿದರು. ಗಂಧರ್ವರಂತೆಯೇ ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಿದ್ದ ಗೋಹರಬಾಯಿಗೆ ಸಿಕ್ಕಿದ್ದು ನೆಗೆಟಿವ್ ಪ್ರತಿಕ್ರಿಯೆ. ಮರಳಿ ಮುದಿತನದಲ್ಲಿ ಗಂಧರ್ವರು ಸ್ತ್ರೀ ಪಾತ್ರ ಮಾಡಲು ಪ್ರಾರಂಭಿಸಿದ ಕೂಡಲೇ ‘ಇನ್ನೂ ಗಂಧರ್ವ ಕಾಣಲು ಸಿಕ್ಕುವುದಿಲ್ಲ’ ಎಂದು ಜನ ಕಿಕ್ಕಿರಿದು ಗಂಧರ್ವರ ನಾಟಕ ನೋಡಿದರು. ನಾಟಕ ಮಂಡಳಿಯ ಅರ್ಥವ್ಯವಸ್ಥೆ ಸುಧಾರಿಸಿತು. ‘ಮುದುಕಽಗಽ ದುಡಿಲಿಕ್ಕೆ ಹಚ್ಯಾಳ, ಈಕೀ ಮ್ಯಾನೇಜರ್ ಬಾಯಿ, ಮಜಾಮಾಡ್ತಾಳ’ ಜನಸಾಮಾನ್ಯರು ಆಡಿಕೊಂಡರು. ಇದೇ ತಾತ್ಸಾರ ಗಂಧರ್ವಪ್ರೇಮಿಗಳಲ್ಲಿ ಗೋಹರ-ದ್ವೇಷದಲ್ಲಿ ರೂಪಾಂತರಿತವಾಯಿತು.

ಮೇರು ಕಲಾವಿದ ಬಾಲಗಂಧರ್ವರಿಗೆ ಬೇಕಾದಷ್ಟು ಹೊಗಳಿಕೆ, ಕೆಂದ್ರ ನಾಟಕ ಅಕಾಡೆಮಿಯ ಪುರಸ್ಕಾರ, ಪದ್ಮಶ್ರೀ ಗೌರವ, ಹಲವಾರು ಪತ್ರಿಕೆಗಳಲ್ಲಿ ಲೇಖಗಳು, ಬಾಲಗಂಧರ್ವರ ಮೇಲೆಯೇ ೩-೪ ಪುಸ್ತಕಗಳು ಇವೆ, ಅವರದೇ ೭೫ನೇ ಹುಟ್ಟುಹಬ್ಬದ ದಿನಾಚರಣೆಗೆ ಅವರ ಪತ್ನಿಯಾದ ಗೋಹರಳಿಗೆ ವೇದಿಕೆಯ ಮೇಲೆ ಸ್ಥಾನವನ್ನು ಕೊಡದೇ, ತುಚ್ಛತೆಯಿಂದ ಅಲಕ್ಷಿಸಿದ್ದು, ಸ್ವತಃ ಬಾಲಗಂಧರ್ವರೇ ಅವಳನ್ನು ಕರೆಯದಿದ್ದಾಗ, ಗೋಹರ ಗಂಧರ್ವಳಿಗೆ ಏನು ಎನಿಸಿರಬೇಕು?

ಗೋಹರ, ಗಂಧರ್ವರ ಊಟ-ಉಪಚಾರ ನೋಡಿಕೊಂಡು, ಔಷಧ, ಗುಳಿಗೆ ಕೊಟ್ಟದ್ದು, ಅವರ ಕಂಪನಿಯಲ್ಲಿಯೇ ಒಂದು ಕಾಲದಲ್ಲಿ ನಟನಾಗಿದ್ದ ಖ್ಯಾತ ಮರಾಠಿ ನಾಟಕಕಾರ, ನಟ, ಕವಿ ಬಾಳಕೊಲ್ಹಟಕರರು ತಾನು ಬರೆದ ನಾಟಕದ ಪುಸ್ತಕ ‘ಪಾಹತೋ ಹೀ ದುರ್ವಾಂಚಿ ಜುಡಿ’, ಮಾಹಿಮ್‌ದಲ್ಲಿ ಆಗ ವಾಸಿಸುತ್ತಿದ್ದ ಗಂಧರ್ವರಿಗೆ ಕೊಡಲು ಹೋದಾಗಿನ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಬರೆದಿಟ್ಟಿದ್ದಾರೆ.
‘ಬಘಾ, ಕೋಣ ಆಲೈತೇ. ಬಾಳಽ ಆಲಾಽಯ್’ ( ನೋಡಿ ಯಾರು ಬಂದಿದ್ದಾರೆ? ಬಾಳ ಬಂದಿದ್ದಾನೆ.) ಎಂದು ಅತ್ಯಂತ ಪ್ರೀತಿಯಿಂದ,  ‘ಬಾಳ’ನನ್ನು ಕುರ್ಚಿಯಲ್ಲಿ ಕೂಡಿಸಿ ಗಂಧರ್ವರಿಗೆ ಮದ್ದುಕೊಡಲು ಹೋದ ಬಗ್ಗೆ ಕೊಲ್ಹಟಕರ ಬರೆಯುತ್ತಾರೆ. ೧೯೫೦ರ ಸುಮಾರಿಗೆ ಅಹಮ್ಮದನಗರದಿಂದ ಪುಣೆಗೆ ಹೋಗುವಾಗ ತಮ್ಮ ಕಾರು ನಿಲ್ಲಿಸಿ, ಬಾಳನ ಕೈಯಲ್ಲಿ ಇನ್ನೂರು ರೂಪಾಯಿ ತುರುಕಿ, ‘ಇಲ್ಲಿ ನಿನಗೇನೂ ಭವಿಷ್ಯವಿಲ್ಲ, ಕಂಪನಿ ಬಿಟ್ಟು ಬೇರೆ ಕಡೆ ಹೋಗು, ಭಗವಾನ ಭಲಾಕರೇ’ ಎಂದು ಹರಸಿ ಕಳಿಸಿದ್ದನ್ನು ಕೊಲ್ಹಟಕರ ಜ್ಞಾಪಿಸಿಕೊಳ್ಳುತ್ತಾರೆ. ‘ಗೋಹರಬಾಯಿಯಿಂದಲೇ ನಾನೊಬ್ಬ ಕಲಾವಿದನಾದೆ, ಲೇಖಕನಾದೆ’. ವ್ಯವಹಾರ ಕುಶಲತೆ ಇಲ್ಲದ ಗಂಧರ್ವರನ್ನು ವಾರ್ಧಕ್ಯದಲ್ಲಿ ಕಾಪಾಡಿದ್ದು ಗೋಹರ ಒಬ್ಬರೇ! ಕಂಪನಿ ೧೯೪೦ರಲ್ಲಿಯೇ ದಿವಾಳಿ ಆಗಿದ್ದರೂ, ಆಗಿನ ರಾಜ ಮಹಾರಾಜರಿಗೆ ಪತ್ರ ಬರೆದು ೧೯೫೪ರ ತನಕ ಕಂಪನಿಗೆ ರಾಜ ಮಾನ್ಯತೆಯನ್ನು ಪಡೆದು ನಡೆಸಿದ ಶ್ರೇಯ ಕೇವಲ ಗೋಹರಳದೇ.

ಅದೇನು ರಾಜಕೀಯ? ಗಂಧರ್ವರಿಗೆ ಆರ್ಥಿಕ ಸಹಾಯ ನೀಡಬೇಕು ಎಂದುಕೊಂಡು ಅಂದಿನ ಮುಂಬಯಿಯ ರಾಜಕೀಯ ನೇತಾರರು,ಪಿ.ಕೆ ಅತ್ರೇಯರಂತಹ ನಾಟಕಾರರು, ಮರಾಠಿ ನಾಟಕ ಪರಿಷತ್ತು ಕೂಡಿ ಹಣ ಒಟ್ಟು ಮಾಡಿ, ಧನಾದೇಶಕೊಡುವ ಪ್ರಸ್ತಾಪ ‘ಗಂಧರ್ವರ ನಂತರ ಈ ಮೊತ್ತ ಅವರ ಹೆಂಡತಿ ಗೋಹರಬಾಯಿಗೆ ಸಿಗಬೇಕು’ ಎಂಬುದು ವೃತ್ತಪತ್ರಿಕೆಗಳಲ್ಲಿ ಬಂದದ್ದೇ ತಡ, ಹಣ, ಒಟ್ಟಾಗುವ ಮೊದಲೇ ಗಾಳಿಯಲ್ಲಿ ಹಾರಿಹೋಯಿತು!

ಅರ್ಧಾಂಗ ವಾಯು ಹೊಡೆತದಿಂದ ಜರ್ಝರಿತರಾದ ಗಂಧರ್ವರನ್ನು ಆಕಾಶವಾಣಿ, ಇತರ ಸಂಘಸಂಸ್ಥೆಗಳು ಏರ್ಪಡಿಸಿದ ಕಚೇರಿಗಳು, ಗಣಪತಿ ಪೂಜೆಯ ಕಾರ್ಯಕಲಾಪಗಳಲ್ಲಿ ಅಕ್ಷರಶಃ ಅವರನ್ನು ಗೋಣಿಚೀಲದಲ್ಲಿ ಎತ್ತಿಕೊಂಡು ಹೋಗುವಂತಹ ವ್ಯವಸ್ಥೆಯನ್ನು ಗೋಹರಳಿಗೇನೇ ಮಾಡಬೇಕಾಗುತ್ತಿತ್ತು. ಪ್ರತ್ಯೇಕವಾಗಿ ಗೋಹರಳಿಗೂ ಕರೆ ಬರುತ್ತಿತ್ತು. ಆದರೆ, ಇಬ್ಬರೂ ರೋಗಗ್ರಸ್ತರು. ಗೋಹರ ಸಕ್ಕರೆ ಬೇನೆಯಿಂದ ನರಳುತ್ತಿದ್ದರೆ, ಗಂಧರ್ವರಿಗೆ ಪಾರ್ಶ್ವವಾಯು, ದಮ್ಮು. ರಾತ್ರಿ, ಅಪರಾತ್ರಿ ಗೋಹರ, ಗಂಧರ್ವರ ಸೇವೆ ಮಾಡುತ್ತಿದ್ದುದು ಬಾಳ ಕೊಲ್ಹಟಕರರು ನೆನಪಿಸಿಕೊಂಡಿದ್ದಾರೆ.

ಇಷ್ಟೆಲ್ಲ ದುಡಿದು, ಮಾನಸಿಕವಾಗಿ ದೈಹಿಕ ರೀತಿಯಲ್ಲಿ ಗಂಧರ್ವರಿಗೆ ಬೆಂಬಲ ನೀಡಿದರೂ ಗೋಹರಳಿಗೆ ಇದ್ದದ್ದು ನೈತಿಕ ಬಲವಷ್ಟೆ. ಆಸ್ತಮಾ ಬೇನೆ, ಡಯಾಬಿಟಿಸ್ ಬಲಿತು, ಗಂಧರ್ವರ ೭೫ರ ಸಂಭ್ರಮ ಮುಗಿದ ಒಂದು ತಿಂಗಳಲ್ಲಿಯೇ ಗೋಹರ ತೀರಿಕೊಂಡಳು. ಮಾಹೀಮ್ ಕಬ್ರಸ್ಥಾನದಲ್ಲಿ ಅಂತ್ಯಸಂಸ್ಕಾರವಾಯಿತು. ಆಗ ಅವರಿಗೆ ಕೇವಲ ೫೩ ವರ್ಷ ಅಷ್ಟೆ. ತಮ್ಮ ೭೫ರ ಸಮಾರಂಭಕ್ಕೆಂದು ಹೋಗಿದ್ದ ಗಂಧರ್ವರು ಪುಣೆಯಿಂದ ಬಂದು ಮಾಹೀಮ್ ಕಬ್ರಸ್ಥಾನದಲ್ಲಿ ‘ಹೆಂಗಸರಂತೆ’ ಎದೆ ಬಡಿದುಕೊಂಡು ಅತ್ತದ್ದನ್ನು ಆಗ ೮೫ ವರ್ಷ ದಾಟಿದ ಲಲಿತ ಕಲಾದರ್ಶ ಕಂಪನಿಯ ಮಾಲಕ ಭಾಲಚಂದ್ರ ಪೆಂಢಾರಕರರು ನೆನಪಿಸಿಕೊಳ್ಳುತ್ತಿದ್ದರು.

ಗೆಳೆಯ ವಿಕ್ರಾಂತ ಅಜಗಾಂವಕರ ಪ್ರತಿವರ್ಷ ಗೋಹರ ‘ಬಾಬಾ’ ತೀರಿಕೊಂಡ ದಿನ ಮಾಹೀಮ್ ಕಬ್ರಸ್ಥಾನಕ್ಕೆ ಹೋಗಿ ಕಣ್ಮುಚ್ಚಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಗೋಹರ ಬಾಬಾ ಎಂದು ಹೆಸರು ಇಟ್ಟಿದ್ದು ಬಾಲ ಗಂಧರ್ವರೇ! ಹೀಗೆ ಗಂಧರ್ವಯುಗದ ದುರಂತ ನಾಯಕಿಯ ಕೊನೆಯಾಯಿತು.