ಗಾನಗಂಗೆಯ ಘನತೆ

ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ ಬಗ್ಗೆ ಕೇಳರಿಯದವರು ಕಡಿಮೆ. ಸುಮಾರು ಒಂದು ಶತಮಾನ (1913-2010)ದ ಕಾಲ ಸಾರ್ಥಕವಾಗಿ ಬದುಕಿದ ಇವರ ಸಂಗೀತ, ವೈದುಷ್ಯದ ಬಗ್ಗೆ ಜೀವನ – ಸಾಧನೆಗಳ ಬಗ್ಗೆ ಬಂದ ಪುಸ್ತಕಗಳಿಗೆ, ಲೇಖನಗಳಿಗೆ ಲೆಕ್ಕವಿಲ್ಲ. ಧಾರವಾಡದ ಇವರ ಮನೆಯನ್ನು ಸ್ಮಾರಕವಗಿಸಲಾಗಿದೆ. ಅವರ ಹೆಸರಿನ ಟ್ರಸ್ಟ್, ಸಂಗೀತ ಪಾರಿತೋಷಕಗಳಿವೆ. ಸ್ವತಃ ಒಳ್ಳೆಯ ಮಾತುಗಾತಿಯಾದ ಅವರ ಸಂಗೀತ ಸ್ಮೃತಿಗಳನ್ನು ಬರೆದುಕೊಂಡು ಕಾಯ್ದಿರಿಸಿದವರಿದ್ದಾರೆ. ಅವರ ಗಾಯನ ಪ್ರಕಾರಗಳಂತೂ ಆಕಾಶವಾಣಿಯ ಆರ್ಕಾಯವ್ಸ್‍ದಿಂದ ಈಗಲೂ ಹೊರಹೊಮ್ಮುತ್ತಲೇ ಇರುತ್ತವೆ. ಅವರ ಶತಾಬ್ದಿಯನ್ನು ರಾಜ್ಯ ಮಟ್ಟದಲ್ಲಿ ಆಚರಿಸಲಾಯಿತು (2013).

ಇಷ್ಟಾದ ಬಳಿಕ ಈ ಮಹಾನ್ ಕಲಾವಿದೆಯ ಬಗ್ಗೆ ಸಂಗೀತವರಿಯದ ವ್ಯಕ್ತಿ ಏನುತಾನೆ ಬರೆದಾಳು? ಅನಿಸಬಹುದು. ಈ ಮಾತು ಖರೇ! ಅವರ ಸೀದಾಸಾದಾ, ಸರಳ ವ್ಯಕ್ತಿತ್ವದ ಹಿಂದೆ ಅಡಗಿದ್ದ ಒಂದೆರಡು ಅಪರೂಪದ ವಿಚಾರಗಳನ್ನು ನೆನಪಿಸಿಕೊಳ್ಳುವದೇ ಉದ್ದೇಶವಾಗಿದೆ.

gangubaihangal-with-Jyotsnakamat-kamat ಗಂಗೂಬಾಯಿ (ನಾನು ಅಕ್ಕಾವರ ಅಂತ ಕರೀತಿದ್ದೆ)ಯವರ ಪರಿಚಯ ನನ್ನ ಆಕಾಶವಾಣಿ ನೌಕರಿಯಷ್ಟೇ ಹಳೆಯದು (1964-1994) ನಾಲ್ಕು ಕೇಂದ್ರಗಳಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಹಲವು ಬಾರಿ ಭೇಟಿ ಮಾಡಿದ್ದೇನೆ. ಅವರ ವಿಶಿಷ್ಟ ಬ್ರಾಂಬ್ರ (ಬ್ರಾಹ್ಮಣರ) ಧಾಟಿಯ ಧಾರವಾಡ ಕನ್ನಡ ಕಿವಿಗೆ ಹಿತವಗಿದ್ದಷ್ಟೇ ಮನಸ್ಸಿನ ಮೇಲೆ ಅಚ್ಚೊತ್ತಿರುತ್ತಿತ್ತು. ವೈಯಕ್ತಿಕ ಸ್ಪರ್ಧೆ, ವೈಮನಸ್ಸು, ಪ್ರಸಿದ್ಧಿ, ಪ್ರಶಸ್ತಿ, ಗೌರವಗಳಿಗಾಗಿ ಹಾತೊರೆಯುವವರ ನಡುವೆ ಬಾಕಿ ಇರದ ಯಾವತ್ತೂ ಪ್ರಶಸ್ತಿಗಳೆಲ್ಲ ಸಂದಾಯವಾಗಿದ್ದರೂ, ಅವೆಲ್ಲವುಗಳ ಭಾರವನ್ನು ತಮ್ಮ ಪುಟ್ಟದಾದ ದೇಹದಿಂದ ಕಳಚಿಹಾಕಿ, ಸರಳ ಸ್ವಂತಿಕೆಯನ್ನು ಸದಾ ಸ್ಥುಪಿಸುವ ವ್ಯಕ್ತಿತ್ವ ಅವರದಾಗಿತ್ತು. ಮೊದಲಬಾರಿಗೆ ಅವರ ಅಲೌಕಿಕ ಪೌರುಷೇಯ ಧ್ವನಿಯ ಗಾನ ಕೇಳಿದ ಬಳಿಕ ಇದೇ ‘ಬಾಯಿ’ ಏನು? ಈಗ ತಾನೇ ಹಾಡಿ ಮುಗಿಸಿದವರು?” ಎಂದು ತಬ್ಬಿಬ್ಬಾದ ಕಲಾಪ್ರಿಯರನ್ನು ಕಂಡಿದ್ದೆ, ನಕ್ಕಿದ್ದೆ.

ಅವರ ಸಂಗೀತದಂತೆಯೇ ಅಪರೂಪದ ಒಂದೆರಡು ಘಟನೆಗಳನ್ನಷ್ಟೆ ಹೇಳಬಯಸುತ್ತೇನೆ.

ಅಕ್ಕಾವರಿಗೆ ಕನ್ನಡನಾಡಿನ, ಕನ್ನಡ ಭಾಷೆಯ ಅಕ್ಕರೆ ಬಲವಾಗಿತ್ತು. ಅಖಿಲಭಾರತದ ಖ್ಯಾತಿಯ ಗಾಯಕಿಯಾದ್ದರಿಂದ, ಟೇಪ್‍ರಿಕಾರ್ಡಿಂಗ್ ಶೋಧದ ಮೊದಲ ದಿನಗಳಲ್ಲಿ ಆಕಾಶವಾಣಿ ಕೇಂದ್ರಗಳಿಂದ ನೇರ ಪ್ರಸಾರವಷ್ಟೆ ಸಾಧ್ಯವಿತ್ತು. ಗಾಯನವನ್ನು ವೃತ್ತಿಯಾಗಿಸಿಕೊಂಡದ್ದರಿಂದ ಅವಿಭಜಿತ ಭಾರತದ ಮುಖ್ಯ ಕೇಂದ್ರಗಳಾಗಿದ್ದ ಮುಂಬೈ, ಕಲಕತ್ತಾ, ಡಾಕಾ, ಲಖನೌ, ದಿಲ್ಲಿ, ಲಾಹೋರ, ಕರಾಚಿ, ಪೇಶಾವರಗಳಿಗೆಲ್ಲ ಹೋಗುತ್ತಿದ್ದರು. ಆ ಕೇಂದ್ರಗಳಿಗೆಲ್ಲ ಟ್ರೇನ್ ಮೂಲಕ ಪ್ರವಾಸ ಕೈಗೊಳ್ಳುತ್ತಿದ್ದರು. ಹೀಗಾಗಿ ಅನೇಕ ಭಾಷೆಗಳನ್ನು ಬಲ್ಲವರಾಗಿದ್ದರು. ಕನ್ನಡದಷ್ಟೇ ಲಲಿತವಾಗಿ ಮರಾಠಿಯಲ್ಲಿ ಮಾತನಾಡುತ್ತಿದ್ದರು. ಹಿಂದಿಯಲ್ಲಿ ಹರಟೆ ಹೊಡೆಯಬಲ್ಲವರಾಗಿದ್ದರು. ಗುಜರಾಥಿ-ಬಂಗಾಲಿಗಳನ್ನೂ ಅರಿತಿದ್ದರು. ಕನ್ನಡಿಗರೇ ಆಗಿ, ಹುಟ್ಟುನಾಡಿನಲ್ಲಿ ಪ್ರೋತ್ಸಾಹವಿಲ್ಲವೆಂದು ಅರಿತ ಪ್ರಖ್ಯಾತ ಸಂಗೀತಗಾರರಲ್ಲಿ ಅನೇಕರು ಬೇರೆ ಭಾಷೆಯ ಪಟ್ಟಣಗಳಲ್ಲಿ ನೆಲೆಸಿ, ಯಶಸ್ವಿಯೂ ಆಗಿ ಕೀರ್ತಿಶೇಷರಾದರು. ಅಕ್ಕಾವರು ಮಾತ್ರ ಧಾರವಾಡ ಹುಬ್ಬಳ್ಳಿಯ ಬಾಳುಭಾಷೆಯ ಜೀವನವನ್ನು, ಸಂಗೀತಭಾವವನ್ನು ಅರಗಿಸಿಕೊಂಡವರಾಗಿದ್ದರು. ಹುಬ್ಬಳ್ಳಿ ನಗರದ ಬಗ್ಗೆ ವಿಶೇಷ ಮಮತೆ ಅವರಿಗಿತ್ತು. ವಿಭಿನ್ನ ಭಾಷೆ, ಪರಮತ ಸಹಿಷ್ಣುತೆಯ ಹಲವು ಮುಸ್ಲಿಂ ರೊಂದಿಗೆ ವ್ಯವಹರಿಸಿದವರು. ಈ ಬಗ್ಗೆ ತಮ್ಮ ಉತ್ತರ ಕರ್ನಾಟಕ ಸಹಜೀವನಕ್ಕೆ ಮಾದರಿಯಾಗಿದೆ! ಎನ್ನುತ್ತಿದ್ದರು. ಈದ್‍ಗಾಹ್ ಮೈದಾನ ಕುರಿತು ಹುಬ್ಬಳ್ಳಿಯಲ್ಲಿ ಕೆಲವರ್ಷಗಳ ಹಿಂದೆ ಕ್ಷೋಭೆ-ಗಲಭೆಗಳಾಗಿದ್ದವು. ರಾಜಕಾರಣಿಗಳಿಂದ” ಎಂಥಾ ಚಂದ ಆಗಿ ಒಂದಾಗಿ ಬಾಳೋದನ್ನ ಕಲಿಸಿದ ಊರಿಗೆ ಎಂಥಾ ಕೆಟ್ಟ ಹೆಸರು ಬಂತು! ಎಂದು ಮರುಗಿದ್ದರು. ತಾನು ತನ್ನದು-ತನ್ನ ಸಂಗೀತ ಶ್ರೇಷ್ಠತೆ ಬಗ್ಗೆ ಬೀಗುವವರನ್ನೇ ನೋಡಿದ್ದೆ. ಆದರೆ ತಮ್ಮ ಊರು ಅಕಾರಣವಾದ ಕ್ಷೋಭೆಯನ್ನುಂಟು ಮಾಡಿದ ರಾಜಕಾರಣವನ್ನು ಗುರುತಿಸಿ, ನಿರಪರಾಧಿಗಳ ನೋವನ್ನು ಸಾರ್ವಜನಿಕವಾಗಿ ತೋಡಿಕೊಂಡ ತಾಯಿಯ ಕರುಳನ್ನು ಗಂಗುಬಾಯಿ ಹೊಂದಿದ್ದರು. ಅವರ ಅನುಕಂಪದ ವಿಶಾಲ ಮನಸ್ಸು, ಭ್ರಾತೃಭಾವಗಳನ್ನು ಮೇಳೈಸಿಕೊಂಡ ಘಟನೆಯೊಂದು ನಾನು ಮೈಸೂರು ಬಾನುಲಿ ಕೇಂದ್ರದಲ್ಲಿದ್ದಾಗ ನಡೆಯಿತು.

ಸಂಗೀತೋತ್ಸವವೊಂದರಲ್ಲಿ ಪಾಲ್ಗೊಳ್ಳಲು ಅಕ್ಕಾವರು ಮೈಸೂರಿಗೆ ಬಂದಿದ್ದರು. ಹಳೆಯ ಪರಿಚಯದಿಂದ ಅವರ ಭೇಟಿಗೆ ಹೋಗಿದ್ದೆ. ಮೈಸೂರು ಆಕಾಶವಾಣಿ ಕೇಂದ್ರ ಪೂರ್ತಿ ಕರ್ನಾಟಕ ಸಂಗೀತಕ್ಕೆ ಮೀಸಲಾದ ಬಾನುಲಿಕೇಂದ್ರ. ಹೀಗಾಗಿ, ಪಕ್ಕವಾದನಕಾರರಿಲ್ಲದೇ ಹಿಂದುಸ್ತಾನಿ ಸಂಗೀತ ಪ್ರಸಾರಕ್ಕೆ ಅವಕಾಶ ಇರಲಿಲ್ಲ. ಅವರಿಂದ ಒಂದು ಸಂದರ್ಶನ ಮಾಡಿಸುವದು ಎಂದು ತೀರ್ಮಾನಿಸಿದೆ. “ನಮಗಾಗಿ ನೀವು ನಿಮ್ಮ ವಿಶಿಷ್ಟ ಬಾನುಲಿಕೇಂದ್ರಗಳ ಕೆಲ ಅನುಭವಗಳನ್ನು ಹೇಳಿ!” ಎಂದು ವಿನಂತಿಸಿ ಕೇಳಿದೊಡನೆ ಒಪ್ಪಿದರು. ಪೇಶಾವರ ಲಾಹೋರಗಳ ಅನುಭವಗಳನ್ನು ಹೇಳಿದರು. ಆಗಷ್ಟೆ ಅವರಿಗೆ ಮಹಾರಾಷ್ಟ್ರದ ಗೋದಾವರಿ ಪ್ರಶಸ್ತಿ ಸಂದಿತ್ತು. ಅದನ್ನು ನೀಡಿದವರು ಮರಾಠಿ ಸಾಹಿತ್ಯದ ಮೊದಲ ಜ್ಞಾನಪೀಠ ಪ್ರಶಸ್ತಿಕಾರ ಕುಸುಮಾಗ್ರಜರು. “ಗಾನಗಂಗೆ ಗೋದಾವರಿಯತ್ತ ಹರಿದು ಬಂದಳು! ಎಂದು ಅವರ ಸಂಗೀತ-ಸಾಹಿತ್ಯದ ಅವಿನಾಸಂಬಂಧದ ಕೆಲ ಮಾತುಗಳನ್ನು ಉದ್ಗರಿಸಿದ್ದರಂತೆ! ಈ ಸಂದರ್ಶನವನ್ನು ಕೇಳಿದ ಚದುರಂಗರು, ಹಾಮಾನಾ, ಪ್ರೊ.ಕೆ.ವೆಂಕಟರಾಮಪ್ಪ, ಇವರೆಲ್ಲ ಪೋನಿಸಿ ಮೆಚ್ಚಿಗೆ ತಿಳಿಸಿದ್ದರು. ಆದಾಗಲೇ ಬಹಳಷ್ಟು ಪ್ರಶಸ್ತಿಗಳನ್ನು ತನ್ನವಾಗಿಸಿಕೊಂಡ ಅಕ್ಕವರಿಗೆ ನಿಮಗೆ ಈ ಎಲ್ಲ ಪ್ರಶಸ್ತಿಗಳಲ್ಲಿ ಯಾವದು ಇಷ್ಟ? ಎಂಬ ಕ್ಲಿಶೆ ಪ್ರಶ್ನೆ ಕೇಳಿದ್ದೆ.

“ಸಂಗೀತವನ್ನು ಚೆನ್ನಾಗಿ ಅರಿತು, ಆಸ್ವಾದಿಸಬಲ್ಲ ಕೆಲವೇ ರಸಿಕರ ಪುಟ್ಟ ಮಹಫಿಲ್ ದಲ್ಲಿ ಹಾಡುವದಕ್ಕಿಂತ ಹೆಚ್ಚು ಇಷ್ಟವಾದದ್ದು ಯಾವುದೂ ಇಲ್ಲ!” ಎಂದು ಉದ್ಗರಿಸಿದ್ದರು.

ಈಗ ನಿಜವಾದ ಸ್ವಾರಸ್ಯದ ಘಟನೆ ಹೇಳುತ್ತೇನೆ. ಮೈಸೂರಿನಲ್ಲಿ ಎಸ್.ಬಿ. ಹುನಗುಂದ ಎಂಬ ಹಾರ್ಮೋನಿಯಂ ಕಲಾವಿದರಿದ್ದರು. ಅವರಿಗೆ ರೇಡಿಯೋ ಆಡಿಶನ್ ಆಗಿರಲಿಲ್ಲ. ಹೀಗಾಗಿ ಹಾಡುಗಾರರ ಜೀವನಾಡಿಯಾಗಿದ್ದ ರೇಡಿಯೋ ಬಿತ್ತರದಿಂದ ಅವರು ವಂಚಿತರಾಗಿದ್ದರು. ಅವರಿಗೆ ಆಡಿಷನ್ ಪರೀಕ್ಷೆ ಕೊಡಲು ಅವರು ಹಾರ್ಮೋನಿಯಂ ನುಡಿಸಿ ಸಾಥ್ ಕೊಡಲು ಆಡಿಷನ್ ಆದ ಹಿಂದುಸ್ತಾನಿಹಾಡುಗಾರರು ಬೇಕಾಗಿದ್ದರಷ್ಟೆ? ಮೈಸೂರಲ್ಲಿ ಸ್ಥಳೀಯವಾಗಿ ಯಾರು ಹಿಂದುಸ್ಥಾನಿ ಶಾಸ್ತ್ರೀಯ ಗಾಯಕರು ಇರಲಿಲ್ಲ. ಕೇವಲ ಸ್ಥಳೀಯ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಯಮಾವಳಿ ಆಯಾ ಕೇಂದ್ರಕ್ಕೆ ಅನ್ವಯಿಸುತ್ತಿತ್ತು. ಒಂದು ಮಾತು ಈ ಅಗ್ರಮಾನ್ಯ ಹಾಡುಗಾತಿಗೆ ವಿಚಾರಿಸಿ ನೋಡಬಾರದೇಕೆ? ಅನಿಸಿತು. ಹಿಂಜರಿಯುತ್ತ ಹೇಳಿದೆ. ಒಂದರ್ಧಗಂಟೆ ಹೊಸಬ ಹಾರ್ಮೋನಿಯಂ ಕಾರನನ್ನು ಆಡಿಷನ್‍ಗೆ ಒಡ್ಡಲು ಅಕ್ಕಾವರು ಕೂಡಲೇ ತಯಾರಾದರು! ನಿರ್ದಿಷ್ಟ ಅವಧಿಗೆ ಉಚಿತವಾಗಿ ಹಾಡಿದರು. ಮಧ್ಯಾಹ್ನದ ಹೊತ್ತು. ಮಧ್ಯಾಹ್ನ ರಾಗವಾದ ಮುಲ್ತಾಯನ್ನು ಸ್ಟುಡಿಯೋದಲ್ಲಿ ಕಾಯುತ್ತ ಕುಳಿತಿದ್ದ ಹುನಗುಂದ ಅವರ ಸಲುವಾಗಿ ಹಾಡಿದರು. ಹುನಗುಂದ ಹಾರ್ಮೋನಿಯಂ ಸಾಥ್ ಕೊಟ್ಟರು. ಕೇಳುತ್ತ ಹೊರಗಡೆ ಕುಳಿತ ಕೆಲವರಿಗೆ ಮೀರಿದ ಶ್ರವಣಸುಖ ಲಭಿಸಿತು!

ಸಾಮಾನ್ಯವಾಗಿ ಅಗ್ರಶ್ರೇಣಿಯ ಗಾಯಕರಿಗೆ ಬೆಳಗಿನವಾದರೆ ತೋಡಿ ರಾಗದ ಪ್ರಕಾರಗಳು, ಸಾಯಂಕಾಲ ರಾತ್ರಿಯಲ್ಲಿ ವಾದರೆ ರಾಗಗಳಾದ ಪೂರಿಯಾ, ದರಬಾರಿ ಕಾನಡಾ ಮುಂತಾದವನ್ನು ಹಾಡಿಸುವದು ರೂಢಿ. ಧ್ವನಿ ಕಳೆದುಕೊಂಡ ಅಥವಾ ವೃದ್ಧಾಪ್ಯದ ಗಾಯಕರಿಗೆ (ಸಹಾನುಭೂತಿಯಿಂದ) ಅಲ್ಪಾವಧಿಯ ಮಧ್ಯಾಹ್ನದ ರಾಗಗಳನ್ನು ಹಾಡಲು ಹೇಳುವದು ಆಗಿನ ಬಾನುಲಿಕೇಂದ್ರಗಳ ರೂಢಿಯಾಗಿತ್ತು. ಈ ಮಧ್ಯಾಹ್ನದ ರಾಗಕ್ಕೆ ಎಂಥ ನಿನಾದಶಕ್ತಿ ಇದೆ! ಎಂದು ಮೊದಲಬಾರಿ ಅರಿಯುವಂತೆ ಆಯಿತು.

ಯಾವ ಪ್ರತಿಫಲ ಇಲ್ಲದೇ ಬಾನುಲಿಕೇಂದ್ರವೊಂದಕ್ಕೆ ಬಂದು ಆಡಿಶನ್ ಕೊಡಲು ಹವಣಿಸುತ್ತಿದ್ದ ಕಲಾವಿದನಿಗೆ ಪ್ರಖ್ಯಾತ ಗಾಯಕಿಯೋರ್ವರು ಧ್ವನಿ ನೀಡಿದ ಉದಾಹರಣೆ ನಾನು ಕಂಡಿರಲಿಲ್ಲ! ಕೇಳಿಯೂ ಇರಲಿಲ್ಲ! ಸರಕಾರಿ ಸಂಸ್ಥೆಯೊಂದು ಈ ಸೌಲಭ್ಯವನ್ನು ಯಾಚಿಸುವಂತೆಯೂ ಇರಲಿಲ್ಲ! ಅಕ್ಕಾವರ ಸಂಗೀತದ, ಸಂಗೀತಕಾರರ ಅಕ್ಕರೆಯ ಮಾದರಿಯಾಗಿ ಇದನ್ನು ಇಲ್ಲಿ ನೆನಪಿಸಿಕೊಂಡಿದ್ದೇನೆ.

ಗಾನಗಂಗೆಗೆ ಸಾಥ್ ನೀಡಿದ ಹುನಗುಂದರು ಆಡಿಷನ್ ದಲ್ಲಿ ಉತ್ತೀರ್ಣರಾಗುವದರಲ್ಲಿ ಸಂದೇಹ ಇರಲಿಲ್ಲ. ಬಾನುಲಿಯಲ್ಲಿ ನುಡಿಸುವ ಅವರ ಕನಸು ನನಸಾದರೂ ಆ ಬಳಿಕ ಅವರು ಹೆಚ್ಚುಕಾಲ ಬದುಕಲಿಲ್ಲ.

(ಲೇಖಕಿ ಜ್ಯೋತ್ಸ್ನಾ ಕಾಮತರು ನಿವೃತ್ತ ಬಾನುಲಿಕೇಂದ್ರ ನಿರ್ದೇಶಕರು)

ಗಂಗೂಬಾಯಿ ಹಾನಗಲ್
ಜ್ಯೋತ್ಸ್ನಾ ಕಾಮತ್