ಮೂಗುತಿ ಅಥವಾ ನಾಸಾ( ನಾಸಿಕ) ಭರಣ

ಬಹುಶಃ ಭರತ ಖಂಡದ ಉದ್ದಗಲಕ್ಕೂ ಸ್ತ್ರೀಯರ ಅಚ್ಚುಮೆಚ್ಚಿನ ಆಭರಣವಾದ ಮೂಗುತಿ ಈ ದೇಶದ ಮೂಲ ಆಭರಣವಲ್ಲ! ಎಂದರೆ ಇತಿಹಾಸಜ್ಞರು ಮೂಗಿನ ಮೇಲೆ ಬೆರಳಿಟ್ಟುಕೊಂಡಾರು! ವೇದೋಪನಿಷತ್ತು ಬಿಡಿ, ಸ್ಮೃತಿ-ಸೂತ್ರಗಳಲ್ಲೂ ಅದರ ಉಲ್ಲೇಖ ಇಲ್ಲವೆಂದು ಮಹಾಮಹೋಪಾಧ್ಯಾಯ ಪಿ.ವಿ ಕಾಣೆ ಅವರು ಹೇಳಿದರೆ, ಪ್ರಾರಂಭದ ಯುಗದ ಶಿಲ್ಪ ವರ್ಣಚಿತ್ರಗಳಲ್ಲೂ ನಾಸಾಭರಣ ( ನಾಸ ಅಥವಾ ನಾಸಿಕ = ಸಂಸ್ಕೃತದಲ್ಲಿ ಮೂಗು ) ಗಳನ್ನು ಕಂಡಿಲ್ಲ! ಎಂದು ಪ್ರಾಚ್ಯ ಸಂಸ್ಕೃತಿ ವಿದ್ವಾಂಸರಾದ ಪಿ.ಕೆ ಗೋಡೆ ಬರೆಯುತ್ತಾರೆ. ಭಾರತೀಯ ಸಂಸ್ಕೃತಿ ಶೋಧಕರಲ್ಲಿ ಅಗ್ರಮಾನ್ಯರಾದ ಡಾ. ವಿ.ಎಸ್ ಅಳ್ಟೇಕರರೂ ಪ್ರಾಚೀನ ಶಿಲ್ಪ ನಾಟ್ಯ ಶಾಸ್ತ್ರ , ಅಮರಕೋಶಗಳಲ್ಲಿ ಅದರ ಉಲ್ಲೇಖ ಇಲ್ಲದುದನ್ನು ಒಪ್ಪಿಕೊಂಡಿದ್ದಾರೆ. ಕರ್ನಾಟಕದ ಪ್ರಸಿದ್ಧ  ಮಧ್ಯಯುಗದ ವಿಶ್ವಕೋಶವಾದ ೧೨ನೇ ಶತಮಾನದ ಮಾನಸೋಲ್ಲಾಸದಲ್ಲೂ, ಸ್ತ್ರೀಯರ ಯಾವತ್ತೂ ಆಭರಣಗಳ ವರ್ಣನೆ ಇದ್ದರೂ ಮೂಗುತಿಯ ಉಲ್ಲೇಖವಿಲ್ಲ. ಆದರೆ ಹದಿನೇಳನೆಯ ಶತಮಾನದ ಕೋಶ ವಾದ ಶಿವತತ್ವ ರತ್ನಾಕರದಲ್ಲಿ  ಮುತ್ತು ರತ್ನ ಖಚಿತ ಮೂಗುತಿ ಕಂಡು ಬರುತ್ತದೆ.

ಆಫ್ರಿಕದ ಮುಸ್ಲಿಂ ಜನಾಂಗಗಳಲ್ಲಿ ಪ್ರಚಲಿತವಿದ್ದ ಮೂಗುತಿ ಮುಸ್ಲಿಂ ವ್ಯಾಪಾರಿಗಳು, ಕ್ರಮೇಣ  ಅಕ್ರಮಣಕಾರರಿಂದ  ಭಾರತದಲ್ಲಿ ಹತ್ತನೇಯ ಶತಮಾನದಿಂದೀಚೆಗೆ  ಜನಪ್ರಿಯವಾದಂತಿದೆ. ಹರಿಹರನ ಗಿರಿಜಾಕಲ್ಯಾಣ , ಭೀಮಕವಿಯ ಬಸವಪುರಾಣ , ಪದ್ಮರಸನ ಪದ್ಮರಾಜಪುರಾಣ ಗಳಲ್ಲಿ ಮೂಗುತಿ ಮತ್ತು ನಾಸಿಕದ ‘ವಿಮಳ ಮೌಕ್ತಿಕ’ದ ಹೆಸರು ಇದೆ. ಬಹುಶಃ ವಿದೇಶಿಯರ ಈ ಬಳುವಳಿ ಭಾರತದ ಆಭರಣಪ್ರಿಯರಲ್ಲಿ ಬಲುಬೇಗ ಅಪಾರ ಮೆಚ್ಚಿಗೆ ಪಡೆಯಿತು. ದಕ್ಷಿಣದಲ್ಲಿ ಮಾಂಗಲ್ಯದ  ಲಕ್ಷಣವಾಗಿ ಮೆರೆಯಿತು..

೧೪ನೇ ಶತಮಾನದಲ್ಲಿ ಕರ್ನಾಟಕದ ಹೊನ್ನಾವರ ಸಂದರ್ಶಿಸಿದ  ಅರಬ್ ಪ್ರವಾಸಿ ಇಬ್ನೆ ಬತೂತ ಅಲ್ಲಿಯ ಚೆಂದದ ಹುಡುಗಿಯರು (ಮುಸ್ಲಿಂ) ಮೂಗಿ ನಲ್ಲಿ ಚಿನ್ನದ ಉಂಗುರ ಧರಿಸುತ್ತಿದುದನ್ನು ಗಮನಿಸಿದ್ದ . ಆ ಹುಡುಗಿಯರು ಆಗಲೂ ಹೆಜಾಬ ಧರಿಸುತ್ತಿರಲಿಲ್ಲ!

ಈಗಲೂ ಕರ್ನಾಟಕದ ಕರಾವಳಿಯ ಮುಸ್ಲಿಂ ಹೆಂಗಳೆಯರ ಮೂಗುತಿ ಎದ್ದು ಕಾಣುವಂತಿರುತ್ತದೆ. (ಚಿತ್ರ ೧)

lady with muguti 1

ಮಡಿವಂತಿಕೆ ತೋರದ ಹೇರಂಗಡಿ (ಹೊನ್ನಾವರ ತಾಲೂಕು) ಯ ಮಹಿಳೆಯರು, ಫೋಟೊ ತೆಗೆಯುವದಾಗಿ ಕೋರಿದಾಗ ನಗುನಗುತ್ತಲೇ ಪೋಸ್ ಕೊಟ್ಟರು.. ಕಿರಿಯರಿಂದ  ಹಿರಿಯರವರೆಗೆ ಎಲ್ಲರೂಚೆಂದದ ಮೂಗುತಿ ಧರಿಸಿದ್ದರು. (ಚಿತ್ರ ೨)

muguti 2

ನನ್ನ ತರುಣ ಆಭರಣಪ್ರಿಯರಲ್ಲಿ  ಒಂದು ಸೂಚನೆಯೆಂದರೆ, ಕಿವಿ, ಕೊರಳು, ಕೈಗಳ, ಸೊಂಟದ ಆಭರಣಗಳನ್ನು ತಮ್ಮವನ್ನಾಗಿಸಿಕೊಂಡವರು, ಮೂಗಿನ  ಆಭರಣವನ್ನೂ ಕೆಚ್ಹೆದೆಯವರು ಧರಿಸಲಾರಂಬಿಸಿದರೆ, ಸದ್ದಿಲ್ಲದೇ ಉಳಿದವರೂ ಅನುಕರಿಸುತ್ತಾರೆ!

ನೀವೇಕೆ  trendsettar  ಆಗಬಾರದು? ಅದರಂತೆ ಮೇಲ್ ಬುಗುಡಿ ಧರಿಸಿದ ಚೆಲುವ ಕೆಂಬಲ್ ಮರಾಠಿಗನನ್ನು ನೋಡಿ ! ( ಚಿತ್ರ ೩)

bugadi 3

 

ಜ್ಯೋತ್ಸ್ನಾ ಕಾಮತ್