ಮೋಗುಬಾಯಿ ಕುರ್ಡಿಕರ್ ಭಾಗ ೨

ಸಾಂಗಲಿಯ ಸಾಂಬಾರೆ ವೈದ್ಯರ ಉಲ್ಲೇಖ ಪಂ. ಮಲ್ಲಿಕಾರ್ಜುನ ಮನ್ಸೂರರ ಲೇಖನದಲ್ಲಿ ಕೂಡ ಬಂದಿದೆ. ಇವರು ಭಾರತದಲ್ಲಿಯ ಅತಿ ಪ್ರಸಿದ್ಧ ಆಯುರ್ವೇದ ತಜ್ಞರೂ ಖ್ಯಾತ ರಸಿಕಶಿರೋಮಣಿಗಳೂ ಆಗಿದ್ದರು. ನಾಟಕ ಕಂಪನಿಯ ಎಲ್ಲ ಹಾಡುಗಾರ-ಪಾತ್ರಧಾರಿಗಳೂ, ಗಾಯಕರೂ ಇವರೆಲ್ಲ ಈ ವೈದ್ಯರ ರೋಗಿಗಳು! ತಿಂಗಳಿಗೊಮ್ಮೆ ಇವರೆಲ್ಲ ಬಂದು ಸಂಗೀತ ಸಭೆ ನಡೆಸುವದು ಒಂದು ರೂಢಿಯಾಗಿತ್ತು. ಇಂತಹದೇ ಒಂದು ಅಲ್ಲಾದಿಯಾರ ಸಭೆಗೆ ಮಿರಜದಿಂದ ಮಲ್ಲಿಕಾರ್ಜುನ ಮನ್ಸೂರವರು ಸಾಂಗಲಿಗೆ ಬಂದದ್ದು. ಮೋಗುಬಾಯಿಯವರ ಮಹಡಿಯ ಕೋಣೆಯಿಂದ ಸಾಂಬಾರೆಯವರ ಅಂಗಣ ಸ್ಪಷ್ಟ ಕಾಣಿಸುತ್ತಿತ್ತು.

ಒಂದು ದಿನ ವೈದ್ಯ ಸಾಂಬಾರೆಯವರು ಅಲ್ಲಾದಿಯಾಖಾನರು ಅವರಲ್ಲಿ ಬಂದಾಗ ಮಾತೆತ್ತಿದರು. “ಉಸ್ತಾದರೇ, ನಿಮ್ಮಂತಹ ಶ್ರೇಷ್ಠ ಕಲಾವಿದರು ಒಂದು ಯಕಶ್ಚಿತ್ ಹುಡುಗಿಯ ಮನೆಗೆ ಹೋಗಿ ಸಂಗೀತ ಕಲಿಸುತ್ತಿದ್ದೀರಂತೆ. ಇದು ನನಗೆ ಸೇರಲಿಲ್ಲ. ಇದನ್ನು ನೀವು ಕೂಡಲೇ ನಿಲ್ಲಿಸಬೇಕಾಗಿ ನನ್ನ ನಮ್ರ ವಿನಂತಿ.” ಅಲ್ಲಾದಿಯ, ಅವರಿಗೆ ಉತ್ತರಿಸದೇ ಹಾಗೆಯೇ ಹೊರಟುಹೋದರು. ಆದರೆ ಮಾರನೆಯ ದಿನ ಮೋಗುಬಾಯಿಯವರಿಗೆ ಕಲಿಸಲು ಬರಲಿಲ್ಲ. ಹೀಗೆ ದಿನಗಳು ಉರುಳಿದವು. ದಿನಾಲು ಉಸ್ತಾದರು ತನ್ನ ಮನೆ ದಾಟಿ ಹೋದದ್ದು ಕಾಣಿಸುತ್ತಿತ್ತು. ಆದರೆ ತನಗೆ ಕಲಿಸಲು ಏಕೆ ಬರುವದಿಲ್ಲ? ಒಂದು ದಿನ ಧೈರ್ಯಮಾಡಿ ಮೋಗುಬಾಯಿ ಕೇಳಿದರು, “ಗುರುಗಳೇ ನನ್ನಿಂದ ಏನು ತಪ್ಪಾಯಿತು? ಯಾಕೆ ನನ್ನ ತಾಲೀಮು ನಿಲ್ಲಿಸಿದ್ದಿರಿ?” ಕಣ್ಣಂಚಿನಲ್ಲಿ ನೀರು ಸೂಸಿದ್ದು ಅವರಿಗೆ ಕಾಣಿಸಿತು. “ಏನು ಹೇಳಲಿ ಮೋಗು, ವೈದ್ಯ ಸಾಂಬಾರೆಯವರು ಹೀಗೆ ಹೇಳಿದರು.” ಮೋಗು ಬಾಯಿಯವರಿಗೆ ಆಶ್ಚರ್ಯ, “ಗುರುಗಳೇ ನನ್ನ ಮೇಲೆ ವೈದ್ಯ ಸಾಂಬಾರೆಯವರಿಗೆ ಸಿಟ್ಟು ಯಾಕೆ? ಅದಕ್ಕೆ ಉತ್ತರ ಕೊಟ್ಟರು ಖಾನ್ ಸಾಹೇಬರು, “ನನ್ನ ಗಾಯಕಿ ಕಲಿಯುವ ಅಂತಸ್ತು ನಿನ್ನದಲ್ಲ, ಎಂಬ ಭಾವನೆ ಅವರದು. ‘ನನ್ನ ಗ್ರಹಗಳೇ ಹಾಗೆ, ಏನೋ ದೋಷ ಇರಬಹುದು? ಇದಕ್ಕೇನಾದರೂ ಪರಿಹಾರವಿದೆಯೇ?’ ಮೋಗು ತಲೆತಗ್ಗಿಸಿ ಗುರುಗಳು ಹೇಳಿದ ಮಾತು ನೆನೆಸಿಕೊಂಡು ವ್ಯಥೆ ಪಟ್ಟರು.
ಧೈರ್ಯ ಮಾಡಿಕೊಂಡು, ಮೋಗು ಉಸ್ತಾದರಿಗೆ ಹೇಳಿದಳು, “ನನ್ನ ಹಾಡುಗಾರಿಕೆ ಸಾಂಬಾರೆ ಕೇಳಿದರೆ ಬಹುಶಃ ಅವರ ಪೂರ್ವಗ್ರಹದೂಷಿತ ಭಾವನೆ ಮಾಯವಾಗಬಹುದು ಗುರುಗಳೇ, ನೀವೇ ಪರಿಹಾರ ಸೂಚಿಸಬೇಕು.”

ಖಾನಸಾಹೇಬರು ಮೋಗುಬಾಯಿಯವರ ಕಚೇರಿ ತಮ್ಮಲ್ಲಿ ಆಗಲಿ ಎಂದು ಹೇಳಿ ಅತ್ಯಂತ ಧೈರ್ಯದಿಂದ ಸಾಂಬಾರೆಯವರನ್ನು ಒಪ್ಪಿಸಿದರು. ಮತ್ತು ಅವರಿಗೆ ತಿಳಿಯದಂತೆ ಮೋಗುಬಾಯಿಗೆ ‘ಮುಲ್ತಾನಿ’ ರಾಗದ ಒಂದು ಬಂದಿಶ ಹೇಳಿಕೊಟ್ಟರು., ‘ಇನ್ ದುರ್ಜನ ಲೋಗೊಂಕೊ ಕಹಾ ಕೋಸು’! ಸಾಂಬಾರೆ ಪಖವಾಜ್ ಅತ್ಯುತ್ತಮ ಬಾರಿಸುತ್ತಿದ್ದರು. ಆ ದಿನದ ಕಚೇರಿ ಚೆನ್ನಾಗಿ ನೆರವೇರಿತು. ಸಾಂಬಾರೆಯವರಿಗೂ ತಮ್ಮ ತಪ್ಪಿನ ಅರಿವಾಯಿತು. “ದುರ್ಜನ’ ತನ್ನನ್ನು ಉದ್ದೇಶಿಸಿಯೇ ಈಕೆ ಹಾಡುತ್ತಿದ್ದಾಳೆಯೇ? ಎಂದು ಭಾವಿಸಿ, ವೈದ್ಯರಾಜರು ಅಲ್ಲಾದಿಯಾಖಾನರ ಸೂಕ್ಷ ನಿರೀಕ್ಷಣೆಗೆ, ‘ದಾದ್’ ಕೊಟ್ಟು ತಾವೇ ಮೋಗುಬಾಯಿಗೆ ಕಲಿಸಬೇಕೆಂದು ಬಿನ್ನವಿಸಿದರು. ಇಷ್ಟೇ ಅಲ್ಲ ಮೋಗುವಿಗೆ ಕೂಡ ಆಗಾಗ ಮನೆಗೆ ಬಂದು ಹೋಗಲು ಅಪ್ಪಣೆ ಮಾಡಿದರು. ಮೋಗುಬಾಯಿಗೆ ಆದ ಸಂತೋಷ ವರ್ಣಿಸಲಸದಳ…

ಮೋಗು ಬಾಯಿಯವರ ಜಾತಕದಲ್ಲಿ ಗ್ರಹಮಾನ ಸರಿ ಇರಲಿಲ್ಲ ಎಂದು ಕಾಣಿಸುತ್ತದೆ. ಅಖಂಡ ಗುರುಯೋಗವೇ ಇರಲಿಲ್ಲ. ಅದಾದ ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿಯೇ ಅಸಾಮಾನ್ಯ ಗಾಯಕಿ ಎಂದು ಹೆಸರು ಮಾಡಿದ ಕೇಸರಬಾಯಿ ಕೇರಕರ್, ಅವರ ತಮ್ಮ ಮುಂದಿನ ಶಿಕ್ಷಣದ ಸಲುವಾಗಿ ಅಲ್ಲಾದಿಯಾಖಾನರಿಗೆ ಆಮಂತ್ರಣ ಬಂದಿತು. ಅಲ್ಲಾದಿಯಾ ಅವರು, ವಿಚಾರ ಮಾಡದೇ ಅದನ್ನು ಸ್ವೀಕರಿಸಿಬಿಟ್ಟರು. “ನೀನೂ ಮುಂಬಯಿಗೆ ಬಂದರೆ, ನಿನ್ನದೂ ತಾಲೀಮು ತೆಗೆದುಕೊಳ್ಳುತ್ತೇನೆ” ಎಂದು ಮೋಗುಬಾಯಿಗೆ ಹೇಳಿ ಮುಂಬಯಿಗೆ ಹೊರಟೇ ಹೋದರು.
೧೮-೧೯ರ ಯುವತಿ ಮೋಗುಗೆ, ಮುಂಬಯಿಗೆ ಹೋಗಿ ಇರುವದು ಅಷ್ಟು ಸುಲಭವಲ್ಲ ಎಂಬುದು ಗೊತ್ತಿತ್ತು. ನಿರಾಶೆಯಾಗಿ ಮರಳಿ ಕುರ್ಡಯಿಗೆ ರಮಕ್ಕನ ಜೊತೆ ಹೊರಟುಬಿಟ್ಟರು. ಇಲ್ಲಿಯೇ ಪ್ರಾರಂಭವಾಗುತ್ತದೆ ೨೦ನೇ ಶತಮಾನದ ಒಂದೇ ಘರಾಣೆಯ, ಒಬ್ಬನೇ ಉಸ್ತಾದನ, ಇಬ್ಬರು ಅಸಾಮಾನ್ಯ ಶಿಷ್ಯೆಯರ, ಸಂಗೀತ ಕ್ಷೇತ್ರದಲ್ಲಿಯ ಪೈಪೋಟಿ; ಈರ್ಷೆ, ಮತ್ಸರ ಮತ್ತು ಅಹಮಿಕೆಯ ಸಂಘರ್ಷ, ನಿಜ ಮತ್ತು ಮಿಥ್ಯ ದಂತಕಥೆಗಳ ಸುಗ್ಗಿ. ಕೇಸರಬಾಯಿ ಕೇರಕರ್ ಮತ್ತು ಮೋಗುಬಾಯಿ ಕುರ್ಡಿಕರ ಇವರ,

ಸ್ನೇಹ ಸಂಬಂಧ’ದ ಕತೆಗಳಿಂದ ನಾಟಕಕಾರರಿಗೂ ಸಾಕಷ್ಟು ಕಚ್ಚಾಮಾಲು ದೊರಕಿತು. ಮರಾಠಿಯಲ್ಲಿ ಒಂದೆರಡು, ನಾಟಕಗಳು, ಕಾದಂಬರಿ ಹಾಗೂ ಒಂದು ಚಲನಚಿತ್ರ, ಈ ವಸ್ತುವಿನ ಆಧಾರದ ಮೇಲೆ ರಚಿಸಿದ್ದು ಪ್ರಕಾಶ ಕಂಡಿವೆ. ಮೋಗುಬಾಯಿಯವರ ಬಗ್ಗೆ ಬರೆಯುವಾಗ, ಸುರಶ್ರೀ ಕೇಸರಬಾಯಿ ಕೇರಕರ್ ಸಹಜವಾಗಿ ಉಪನಾಯಿಕೆ ಅಥವಾ, ಸೈಡ್ ಹಿರೊಯಿನ್ ತರಹ ತೋರುತ್ತಾರೆ. ಇಬ್ಬರ ಹಾಡುಗಾರಿಕೆ, ಒಂದೇ ಪರಂಪರೆ, ಒಂದೇ ಗುರುಗಳ ಬಳಿ ಕಲಿತಿದ್ದರೂ ಅವರಲ್ಲಿ ವಿವಿಧತೆ ಕಾಣುತ್ತದೆ. ಕೇಸರಬಾಯಿಯವರ ಠೀವಿ ರಾಜಮಾನ್ಯ, ಒಂದು ತರಹದ ಕಮಾಂಡಿಂಗ್ ಪರ್ಸನಾಲಿಟಿಯಂತಿದ್ದರೆ, ಅದೇ ಮೋಗುಬಾಯಿಯವರದು ಕುಲೀನ, ಶಾಲೀನ ಸೌಂದರ್ಯ. ಅವರ ಸಂಗೀತ ಕೂಡ ಹಾಗೆಯೇ ವಿನಮ್ರ, ಅತ್ಯಂತ ನಯವಾಗಿ ಪೋಣಿಸಿದ್ದು, ಇಬ್ಬರ ಧ್ವನಿಮುದ್ರಿಕೆಗಳನ್ನು ಒಂದರ ನಂತರ ಮತ್ತೊಂದು ಒಂದೇ ರಾಗದಲ್ಲಿದ್ದದ್ದನ್ನು ಹಚ್ಚಿ ನಾನು ಮತ್ತು ಮಂಜೇಶ್ವರ ದಿನಕರರಾಯರು ಗಂಟೆಗಟ್ಟಲೇ ಆಲಿಸಿದ್ದೂ ಇದೆ……

ಮುಂದುವರೆಯುವದು