ಮೋಗುಬಾಯಿ ಕುರ್ಡಿಕರ್ ಭಾಗ ೩

ಕೇಸರಬಾಯಿ ಶಿಷ್ಯತ್ವ ಸಿಕ್ಕ ಮೇಲೆ ಅಲ್ಲಾದಿಯಾ ಪಂಜರದಲ್ಲಿದ್ದ ಸಿಂಹದಂತೆ ಆದರು. ಮೊದಲೇ ಅತ್ಯಂತ ಸುಂದರವಾದ ರೀತಿಯಲ್ಲಿ ಖಯಾಲ ಹಾಡುವ ಮಗ ಮಂಜೀಖಾನ (ಪಂ. ಮಲ್ಲಿಕಾರ್ಜುನ ಮನ್ಸೂರರ ಗುರು) ಒಮ್ಮೆಲೆ ಪೈಗಂಬರವಾಸಿಯಾಗಿದ್ದರಿಂದ ಅವರು ಬಹಳ ವ್ಯಥಿತರಾಗಿದ್ದರು. ಕೇಸರಬಾಯಿ ತಮ್ಮೆದುರಿಗಿಟ್ಟ ಎಲ್ಲ ನಿಯಮಗಳ ಕಂಟ್ರಾಕ್ಟಕ್ಕೆ ರುಜು ಹಾಕಿದರು. ಇದರಲ್ಲಿ ಒಂದು, “ಖಾನಸಾಹೇಬರು ತನ್ನ ಕಲಿಸುವಿಕೆಯ ಕಾಲದಲ್ಲಿ ಮತ್ತಾರಿಗೂ ಕಲಿಸಬಾರದು” ಎಂಬ ನಿಯಮ ಹಾಕಿದ್ದರು.

ಕುರ್ಡಯಿಗೆ ಮರಳಿ ಹೋದ ಮೋಗುಬಾಯಿಗೆ ಯಕ್ಷ ಪ್ರಶ್ನೆ. ತನ್ನ ಜಾತಕದಲ್ಲಿಯೇ ಈ ಗುರುಕೃಪೆ ಇರಲಿಕ್ಕಿಲ್ಲವೆಂದು ಕುಲದೇವತೆ ರವಳನಾಥನ ಮೊರೆ ಹೋದರು. ದೇವರ ಅನುಗ್ರಹದಂತೆ ರಮಕ್ಕಳೊಂದಿಗೆ ಸುಮಾರು ೧೯೨೩ರಲ್ಲಿ ಮುಂಬಯಿಗೆ ಪ್ರಯಾಣ ಬೆಳೆಸಿದರು. ಜಯಪುರ್ ಪ್ರಣಾಲಿಯ ಸಂಗೀತ ಕಲಿಯುವ ಪ್ರಶ್ನೆಯೇ ಇರಲಿಲ್ಲ. ಅಲ್ಲಾದಿಯಾ ಮಹಾಶಯರು ಕೇಸರಬಾಯಿಯವರ ಕರಾರಿನಲ್ಲಿ ಬಂದಿಯಾಗಿದ್ದರು. ದಿಕ್ಕು ಕಾಣದೇ ಕೊನೆಗೆ ಆಗ್ರಾ ಪರಂಪರೆಯ ವಿಲಾಯತ ಹುಸೈನಖಾನರ ಅಳಿಯ ಬಶೀರಖಾನರ ಬಳಿ ತಮ್ಮ ವಿದ್ಯೆ ಮುಂದುವರೆಸಿದರು. ಜಯಪುರ್–ಅತ್ರೋಳಿ ಪರಂಪರೆಯಲ್ಲಿ ಪಳಗಿದ ಮೋಗುಬಾಯಿಯವರ ಸ್ತ್ರೀ ಸುಲಭ ಶ್ರೀಕಂಠಕ್ಕೆ, ಆಗ್ರಾ ಪರಂಪರೆಯ ಮರ್ದಾನಿ ಥಾಟು (ಗಂಡು ಸ್ವರ)ಶೋಭಿಸುತ್ತಿರಲಿಲ್ಲ. ಕರ್ಮಧರ್ಮ ಸಂಯೋಗದಿಂದ ಮೋಗುಬಾಯಿ ಇರುವ ಕಾಲಿದಾಸ ಬಿಲ್ಡಿಂಗಿನ ಹಿಂದುಗಡೆಯೇ ಅಲ್ಲಾದಿಯಾಖಾನರ ವಾಸ್ತವ್ಯವಿತ್ತು! ಮುಂಜಾನೆ, ಸಂಜೆ ಮೋಗುಬಾಯಿ ರೀಯಾಜ಼್ ಮಾಡುವಾಗ ಅಲ್ಲಾದಿಯಾರ ಮನಸ್ಸು ಚಲವಿಚಲವಾಗದೇ ಇರುತ್ತಿರಲಿಲ್ಲ. ದೈವಯೋಗದ ಕರಾಮತ್ತು ನೋಡಿ ಗುರು ಬಶೀರಖಾನರು ಇವರ ಶಿಕ್ಷಣ ಅರ್ಧಕ್ಕೆ ಬಿಟ್ಟು ದಿಲ್ಲಿಗೆ ಪ್ರಸ್ಥಾನ ಮಾಡಿದರು. ಮತ್ತೊಮ್ಮೆ ಮೋಗುಬಾಯಿ, ‘ಗುರು ಬಿನಾ’ ಆದರು.ವ್ಯಥಿತ ಸ್ಥಿತಿಯಲ್ಲಿದ್ದ ಅಲ್ಲಾದಿಯಾ ಒಂದು ದಿನ ಮೋಗುಬಾಯಿಗೆ ಬಿಲ್ಡಿಂಗಿನಲ್ಲಿ ಸೇರುವಾಗ ನಿಲ್ಲಿಸಿದರು. “ಮಗು, ಇತ್ತೀಚಿನ ನಿನ್ನ ರಿಯಾಜ಼ದಲ್ಲಿ ಇಂಪು ಕಡಿಮೆಯಾಗಿದೆ. ನಾನು ಹಾಕಿಕೊಟ್ಟ ಸಂಸ್ಕಾರ ಎಲ್ಲಿ ಮಾಯವಾಯಿತು?”

ಆಗ್ರಾ ಪರಂಪರೆಯ ನಾಭಿಯ ಒತ್ತಡದಿಂದ ರಾಗದ ಮೊದಲ ಷಡ್ಜ ಹಚ್ಚುವ ಕ್ರಿಯೆ ಮತ್ತು ಗಾಯನದಲ್ಲಿಯ ಕೃತ್ರಿಮತೆ, ಮೂಗಿನಿಂದ ಹಾಡುವದು ಇದೆಲ್ಲ ಪರಿಶೀಲಿಸಿದ ಉಸ್ತಾದರ ವ್ಯಥೆ ಮೋಗುಬಾಯಿಯವರಿಗೆ ಅರ್ಥವಾಯಿತು.
“ನೀವು ಬಡಿಸಿಕೊಟ್ಟ ಪಂಚಪಕ್ವಾನ್ನಗಳ ಎಲೆಯನ್ನು, ನೀವೇ ಎತ್ತಿಕೊಂಡು ಹೋಗಿಬಿಟ್ಟಿರಿ. ನೀವೇ ಹೇಳಿ, ನಾನು ಎಷ್ಟು ದಿನ ಏಕಾದಶಿ ವ್ರತ ಮಾಡಲಿ?”
ದಿಗ್ಭ್ರಾಂತರಾದ ಖಾನಸಾಹೇಬರು ಒಂದು ಕ್ಷಣ ವಿಚಾರ ಮಾಡಿ ಉತ್ತರಿಸಿದರು. “ಮೋಗು ಒಂದು ಉಪಾಯವಿದೆ. ನನ್ನ ತಮ್ಮ ಹೈದರ ಕೊಲ್ಲಾಪುರದಲ್ಲಿ ಇದ್ದಾನೆ. ನಾನು ಹೇಳಿದರೆ ಆತ ಬಂದು ನಿನಗೆ ತಾಲೀಮು ಕೊಡಬಲ್ಲ.”
“ಖಾನಸಾಹೇಬರೇ, ನೀವೇ ಮತ್ತೊಮ್ಮೆ ಪರಂಪರೆ ಬದಲಿಸಲು ಹೇಳುತ್ತಿದ್ದಿರಾ. ನೀವು ಅಪ್ಪಣೆ ಮಾಡಿದಂತೆ ನಾನು ಕಲಿಯಲು ಶುರು ಮಾಡಿದರೆ ನನ್ನ ತಾಲೀಮು ವ್ಯವಸ್ಥಿತವಾಗಿ ನಡೆಯುವ ಗ್ಯಾರಂಟಿ ಏನು? ಬೇರೆ ಯಾರಾದರೂ ಅವರ ಕಿವಿ ಹಿಂಡಿದರೆ ಮಗದೊಮ್ಮೆ ನಾನೆಲ್ಲಿ ಹೋಗಲಿ?” ಮೋಗುಬಾಯಿಯ ಕಣ್ಣಂಚಿನಲ್ಲಿ ನೀರು ಮಿನುಗುತ್ತಿತ್ತು.
ಮುಪ್ಪಿನಲ್ಲಿಯ ಮಾರ್ದವತೆ ಮೋಗುಬಾಯಿಗೆ ಕಾಣಿಸುತ್ತಿತ್ತು. ಆದರೂ ಉಸ್ತಾದರ ಕಣ್ಣಿನಲ್ಲಿ ಅವರಿಗೆ ಧೃಢ ನಿಶ್ಚಯ ಕಾಣಿಸಿತು.
“ಬೇಟಾ, ಇದು ಅಸಂಭವ. ಇದೋ ನಾನು ಖಾತ್ರಿ ಕೊಡುತ್ತೇನೆ.”
ಮರಳಿದ ಖಾನಸಾಹೇಬರನ್ನು ನಿಲ್ಲಿಸಿ ಮೋಗುಬಾಯಿ ಹೇಳಿದ್ದು ಹೀಗೆ, “ಒಂದು ಪಕ್ಷಕ್ಕೆ ಹೈದರಖಾನರು ತಾಲೀಮು ಬಿಟ್ಟುಕೊಟ್ಟು ಹೋದರೆ, ನೀವೇ ಸ್ವತಃ ಕಲಿಸುತ್ತಿರಾ?” ಖಾನ ಸಾಹೇಬರು, “ಹೂಂ” ಎಂದು ಗೋಣು ಕೆಳಗೆ ಹಾಕಿದ ಕೂಡಲೇ ಇದುವರೆಗೆ ಅದುಮಿಟ್ಟಿದ್ದ ಕಣ್ಣೀರು ಧಾರೆ ಧಾರೆಯಾಗಿ ಇಳಿಯಿತು. ಆವಾರದಲ್ಲಿಯೇ ಉಸ್ತಾದರ ಕಾಲುಮುಟ್ಟಿ ನಮಸ್ಕಾರ ಮಾಡಿದರು ಮೋಗುಬಾಯಿ. ಉಸ್ತಾದರ ಕಣ್ಣೂ ತೇವವಾಗಿತ್ತು. ಕೇವಲ ಒಂದು ಶಬ್ದ, ‘ಹೂಂ’ ಎಂದದ್ದೆ ತಡ ಮೋಗುಬಾಯಿ ಮರಳಿ ಜೈಪುರ್ ಪರಂಪರೆಯತ್ತ ತಿರುಗಿದರು.

ಇದೆಲ್ಲ ವಿಸ್ತೃತವಾಗಿ ಬರೆಯುವ ಕಾರಣ ಮುಂಬರುವ ಮಾನವೀಯ ಮತ್ಸರ ಅವತಾರಕ್ಕೆ ಇದೊಂದು ನಾಂದಿಯಾಗಿತ್ತು. ಇದೆಲ್ಲ ೧೯೨೩ರಲ್ಲಿ ಆದ ಘಟನೆ. ಮೋಗುಬಾಯಿ ಕೇವಲ ೧೯ರ ಯುವತಿ ಜ್ಞಾನಾರ್ಜನೆಯ ಸಲುವಾಗಿ ಏನೇಲ್ಲ ತ್ಯಾಗಮಾಡುವ, ಈ ವಿಶಿಷ್ಟ ಬುದ್ಧಿ ಎಲ್ಲಿಂದ ಬಂದಿತು? ತಾಯಿ ಜಯಶ್ರೀಬಾಯಿಯ ಗೋಳನ್ನು ಪುಟ್ಟ ಮೋಗು ಅರಿತಿದ್ದಳು. ಇದೇ ಅವರಿಗೆ ಮುಂದಿನ ದಾರಿ ತೋರಿಸಿದ್ದಿರಬೇಕು.
ಮುಂಬಯಿಯಂತಹ ಶಹರದಲ್ಲಿ ಊಟ-ಉಡಿಗೆ, ವಾಸ್ತವ್ಯ ಎಲ್ಲ ಆಗಬೇಕಲ್ಲ? ದೇವದಾಸಿ ಕುಟುಂಬದವರಾದರೂ, ಅವರಿಗೂ ಕೂಡ ಸಮಾಜದಲ್ಲಿ ಗೌರವಯುತ ಉಪಪತ್ನಿಯ ಸ್ಥಾನವಿತ್ತು. ಅಂಜನಿಬಾಯಿ ಮಾಲ್ಪೆಕರ್ ತನ್ನ ಪತಿ ತೀರಿಕೊಂಡ ಕೂಡಲೇ ೩೫ನೇ ವರ್ಷದಲ್ಲಿಯೇ ಹಾಡುಗಾರಿಕೆ ಬಿಟ್ಟುಕೊಟ್ಟದ್ದು ಇದೆ. ಮೇನಕಾ ಶಿರೋಡಕರ್, ಕೇಸರಬಾಯಿ ಹೀಗೆ ಅನೇಕ ‘ಏಕಪತಿವ್ರತಸ್ಥ’ ಕಲಾವತಿಯರ ಉದಾಹರಣೆಗಳು ತುಂಬಾ ಇವೆ. ಮೋಗುಬಾಯಿಯವರ ಪಾಲಿಗೆ ಮಾಧವರಾವ್ ಭಾಟಿಯಾ ಬಂದರು. ಅವರು ನಡತೆಯಲ್ಲಿ ಸೌಜನ್ಯಮೂರ್ತಿ, , ಸಾಹಿತ್ಯ , ಸಂಗೀತ, ನೃತ್ಯದಲ್ಲಿ ಅಭಿರುಚಿ ಇದ್ದವರು. ಮಾಧವರಾವರು ಈ ಮೋಗುಬಾಯಿಯೆಡೆ ಆಕರ್ಷಿತರಾದರು. ಕೇವಲ ಸಂಗೀತ ಆಲಿಸುತ್ತಿದ್ದವರು ಅವರ ಜೀವನ ಸಂಗಾತಿಯಾದರು. ಮೋಗುಬಾಯಿ ಕುರ್ಡಿಕರ್ ಇವರ ಆಯುಷ್ಯದಲ್ಲೀಗ ಸ್ಥೈರ್ಯ ಬಂದಿತು. ಅಲ್ಲಾದಿಯಾ ಸಾಹೇಬರೂ ಕೂಡ ಮಾತು ಕೊಟ್ಟಂತೆ ಹೈದರ ಖಾನರನ್ನು ಕರೆಸಿದರು. ಅಖಂಡ ಆರು ವರ್ಷದ ಗುರುಮುಖಿ ವಿದ್ಯೆ ಮೋಗುಬಾಯಿಗೆ ಸಿಕ್ಕಿತು.

೧೯೩೧ರಲ್ಲಿ ಮೋಗುಬಾಯಿಗೆ ಕಿಶೋರಿ ಹುಟ್ಟಿದಳು. ಹೆರಿಗೆಗಾಗಿ ಕುರ್ಡಯಿಗೆ ಹೋದ ಮೋಗುಬಾಯಿ ಮರಳಿ ಬರುವ ತನಕ ಆರು ವರ್ಷ ಏಕಾಗ್ರತೆಯಿಂದ ಕಲಿಸುತ್ತಿದ್ದ. ಹೈದರಖಾನರಿಗೆ ಯಾರೋ ಅಸೂಯೆಯಿಂದ ಅವರು ದಿನಾಲು ಮೆಲಕುವ ವೀಳ್ಯದಲ್ಲಿ ಆರ್ಸೆನಿಕ್ ಕೂಡಿಸಿದ್ದರಿಂದಲೋ ಏನೋ ಒಂದು ತರಹದ ಮೂಢತೆ ಆವರಿಸಿತ್ತು. ಕೊನೆಗೆ ಅಲ್ಲಾದಿಯಾಖಾನರೇ ಹೈದರಖಾನರನ್ನು ಅತ್ರೋಳಿಗೆ ಸ್ಥಳಾಂತರಿಸಿದರು.

ಕಿಶೋರಿ ಹುಟ್ಟಿದ ನಂತರ ಮೋಗುಬಾಯಿ, ಎಲ್ಲರ ‘ಮಾಯಿ’ ಆದರು. ಮರಳಿ ಅದೇ ಹಾಡು? “ಇನ್ ದುರ್ಜನ ಲೋಗೋಂಕೊ ಕಹಾಂ ಕೋಸುಂ”! ಒಂದು ದಿನ ಕೇಸರಬಾಯಿಯವರ ತಬಲಾ ಸಾಥ್ ಕೊಡುವ ವಿಷ್ಣು ಶಿರೋಡಕರ ಮೋಗುಬಾಯಿಯವರ ಮನೆಗೆ ಬಂದರು. “ಮಾಯಿ, ಒಂದು ಒಳ್ಳೆ ಸುದ್ದಿ ಕೊಡುತ್ತೇನೆ , ನನಗೇನು ಕೊಡ್ತೀರಿ?
“ಸಂಗೀತದ ಹೊರತಾಗಿ ನನ್ನಲ್ಲಿ ಕೊಡಲು ಏನಿದೆ ಅಣ್ಣ .”
“ನಿನ್ನ ನಶೀಬದಲ್ಲಿ ಮತ್ತೊಮ್ಮೆ ಗುರುದರ್ಶನ ಯೋಗವಿದೆ. ಸ್ವತಃ ಅಲ್ಲಾದಿಯಾಖಾನರೇ ಬಂದು ನಿಮಗೆ ತಾಲೀಮು ಕೊಡ್ತಾರೆ ನೋಡಿ” ಎಂದರು. ಶಿರೋಡಕರ ಹೇಳಿದ ಮಾತು ಒಂದು ದಿನ ನಿಜವಾಯಿತು. ಗೋಧೂಳಿ ಸಮಯದಲ್ಲಿ ಕಿಶೋರಿಯನ್ನು ತೊಡೆಯಲ್ಲಿಟ್ಟು ಪೂರ್ವಿರಾಗದ ಆಲಾಪ ಮಾಡುತ್ತಿದ್ದಾಗ ಬಾಗಿಲಲ್ಲಿ ಅದೇ ತೇಜಃಪುಂಜ ವ್ಯಕ್ತಿ, ಖಾನ ಸಾಹೇಬರದು!
ಮೆಟ್ಟಿಲು ಬಳಿಯಲ್ಲಿಯೇ ಕೆಲಕಾಲ ಪೂರ್ವಿರಾಗದ ಸ್ವರಗಳನ್ನು ಸವಿಯುತ್ತ ನಿಂತಿದ್ದ ಅಲ್ಲಾದಿಯಾ ಕೈಯಲ್ಲಿದ್ದ ಕೋಲನ್ನು ಬದಿಗಿಟ್ಟು, ‘ಜೀತೆ ರಹೋ’ ಅನ್ನುತ್ತಾ ಒಳಗೆ ಕಾಲಿಟ್ಟರು. ಹೈದರಖಾನರ ನಿಸ್ಸೀಮ ತಾಲೀಮಿನಿಂದ ನುಣುಪಾದ ಮೋಗುಬಾಯಿಯ ಸ್ವರಗಳು ಋಷಿತುಲ್ಯ ಗುರುಗಳಿಗೆ ಕೊಂಚ ಪಶ್ಚಾತ್ತಾಪ, ಕೊಂಚ ಅಭಿಮಾನ ಮತ್ತು ಬಹಳಷ್ಟು ಆತ್ಮವಿಶ್ವಾಸದ ಮಿಶ್ರ ಭಾವನೆಗಳು ಉಕ್ಕಿಬಂದವು. ಓತಪ್ರೋತ ಭಾವನೆಗಳ ಹೊರೆ ಹೊತ್ತಿದ್ದ ಖಾನ ಸಾಹೇಬರೂ, ಮೋಗುಬಾಯಿಯವರೂ ಜೊತೆಗೆ ಕೂತು ಅತ್ತುಬಿಟ್ಟರು. ‘ಇಂತಹ ಒಂದು ರತ್ನಕ್ಕೆ ನಾನು ಸರಿಯಾದ ಆಕೃತಿ ಕೊಡಲಿಲ್ಲವಲ್ಲ’ ಎಂಬ ಅಪರಾಧ ಭಾವನೆ ಅಲ್ಲಾದಿಯಾರನ್ನು ಚುಚ್ಚುತ್ತಲೇ ಇತ್ತು. ಕೇಸರಬಾಯಿಯವರ ಕಾಂಟ್ರಾಕ್ಟನ್ನು ಬದಿಗೆ ಸರಿಸಿ, ಅವರು ಮಾಯಿಯವರಲ್ಲಿ ಬಂದಿದ್ದರು. ಅವರಿಗೆ ಆಗ ೮೦ ವರ್ಷ ದಾಟಿರಬೇಕು!
“ಈಗಾದರೂ ನನ್ನ ತಾಲೀಮಕ್ಕೆ ವ್ಯತ್ಯಯ ಬರಬಾರದು ಗುರುಗಳೇ” ಎಂದು ಮೋಗುಬಾಯಿ ಅಂದಾಗ ಖಾನಸಾಹೇಬರು ಮಾತಾಡದೇ ಸನ್ನೆಯಿಂದಲೇ ತಂಬೂರಿ ತೋರಿಸಿದರು. ಮುಂಜಾನೆಯ ಸಮಯವಾದರೂ ಕಾಫೀ ರಾಗ ಕಲಿಸಲು ಪ್ರಾರಂಭಿಸಿದರು. ಇದರ ಬಂದಿಶಿನ ಪ್ರಾರಂಭ, ‘ಸುಖಕರ ಆಯೀ’! ಕಿಶೋರಿಗೆ ಆಗ ಕೇವಲ ಮೂರು ವರ್ಷ.

೧೯೧೯ರಿಂದಲೇ ಅಲ್ಲಾದಿಯಾರ ತಾಲೀಮು ನಡೆಯುತ್ತಿದ್ದರೂ ಈವರೆಗೆ , ‘ಗಂಡಾ ಬಂಧ’ ಆಗಿರಲಿಲ್ಲ. ವಾರ್ಧಕ್ಯದೆಡೆ ಬಗ್ಗಿದ ಅಲ್ಲಾದಿಯಾಖಾನರಿಗೆ ಇದು ಒಂದು ಅತ್ಯಂತ ಆವಶ್ಯಕವಾದ ವಿಷಯವೆಂದು ಗೊತ್ತಿತ್ತು. ಕೇಸರಬಾಯಿಯವರ ಮತ್ಸರ ಎಂದು ಹೆಡೆಯೆತ್ತುವುದೋ ಎಂಬ ಭಯ ಬೇರೆ. “ಮೋಗೂ, ಯಹ ಕಾಮ್ ಜಲ್ದಿ ಕರಾಲೋ. ತುಮ್ಹೆಂ ಮಾಲೂಮ ಹೈ ಕ್ಯೂಂ”.
ಇದೇ ಹೊತ್ತಿಗೆ ಮೋಗುಬಾಯಿಯವರ ಯಜಮಾನರ ಆರೋಗ್ಯ ಸರಿ ಇರಲಿಲ್ಲ. ಮನೆಯಲ್ಲಿದ್ದ ಚಿನ್ನ ಸುಮಾರು ೧೨೫ ತೊಲೆ ಮಾರಿ ನಾಲ್ಕು ಸಾವಿರರೂಪಾಯಿ ಜೋಡಿಸಿ ಇಟ್ಟರು (ತೊಲೆಗೆ ೩೨ ರೂ) ಮೂರು ಸಾವಿರ ಗುರುದಕ್ಷಿಣೆ ಬಾಕಿ, ಮೇಲಿನ ಖರ್ಚು ಬಾಳುಮಾಮಾ, ಲಯಭಾಸ್ಕರ ಖಾಪುಮಾಮಾ, ಶಿರೋಡಕರ, ಇನ್ನಿತರರೆಲ್ಲ ಈ ವಿಧಿಗೆ ಹಾಜರು ಇದ್ದರು. ‘ಗಂಡಾ ಬಂಧನ’ ಇದು ಗುರು, ಶಿಷ್ಯೆಯನ್ನು ಸ್ವೀಕಾರ ಮಾಡುವ ಒಂದು ಔಪಚಾರಿಕ ವಿಧಿ. ಶಿಷ್ಯರ ಆಯುಷ್ಯದಲ್ಲಿ ಅತ್ಯಂತ ಮಹತ್ವದ ಘಟನೆ ಆದರೂ ಚರಿತ್ರೆಯಲ್ಲಿ ಅಷ್ಟೊಂದು ಮಹತ್ವವಿಲ್ಲವಿದ್ದರೂ ಮೋಗುಬಾಯಿಯವರ ಜೀವನದಲ್ಲಿ ಆದ ಒಂದು ಅತ್ಯಂತ ಕ್ಲೇಶದಾಯಕ ಅನುಭವವಾಗಿತ್ತು.

‘ಗಂಡಾಬಂಧನದ’ ದಿನವೇ ಗ್ರಹಾಚಾರ ಒದಗಿತು. ವಿರೋಧಿಗಳು ಒಂದು ಹ್ಯಾಂಡಬಿಲ್ಲು ಮುದ್ರಿಸಿ ಗಿರಗಾಂವಿನ ಗೋಮಾಂತಕ ಮರಾಠಾ ಸಮಾಜದ ಅಕ್ಕಪಕ್ಕದಲ್ಲಿ ಹಂಚಿದರು. ‘ಕೇಳಿರಿ ಕೇಳಿರಿ, ಬೊಂಬಾಯಿಯ ರಸಿಕ ಜನರೇ, ಈ ಪತ್ರಿಕೆಯಲ್ಲಿ ಕೊಟ್ಟಂತೆ ಮೋಗುಬಾಯಿ ಕುರ್ಡಿಕರ ಇವರು ಎಂದಿಗೂ ಅಲ್ಲಾದಿಯಾಖಾನ ಸಾಹೇಬರ ಶಾಗಿರ್ದ ಆಗಿರಲಿಲ್ಲ, ಆಗಿರಲೂ ಸಾಧ್ಯವಿಲ್ಲ. ಎಲ್ಲರೂ ಈ ಮಾತನ್ನು ಗಮನಿಸಬೇಕು’ ಎಂಬ ಪತ್ರಿಕೆ ಹಂಚಿದರು. ಯಾರೋ ಒಬ್ಬರು ಸರ್ವೇಯರ ಬಿಲ್ಡಿಂಗಿನಲ್ಲಿದ್ದ ಖಾನಸಾಹೇಬರಿಗೆ ಈ ಹ್ಯಾಂಡಬಿಲ್ಲನ್ನು ತೋರಿಸಿದರು. ಕೂಡಲೇ ಖಾನಸಾಹೇಬರು ಮೋಗುಬಾಯಿಯವರಿಗೆ ಒಕ್ಕಣೆ ಕಳಿಸಿದರು. ‘ಬೇಟಾ, ಕಾಳಜಿ ಮಾಡಬೇಡ, ನಾನಿದ್ದೇನೆ ನಿನ್ನ ಜೊತೆ.ಈ ಸುಳ್ಳು ಸಮಾಚಾರಕ್ಕೆ ಸರಿಯಾದ ಉತ್ತರ ಕೊಡುವೆ’……

 

ಮುಂದುವರೆಯುವದು