ಅಗ್ಗದ ಸುಖನಿದ್ರೆ

ನವಾರ್ ಕಾಟ್ ಗಳು

ತೀರ ಇತ್ತೀಚಿನವರೆಗೆ ಉಳ್ಳವರ ಮನೆಗಳಲ್ಲಿ ಕೂಡ ಪಾಶ್ಚಾತ್ಯ ಫರ್ನಿಚರ್ ಆಡಂಬರ ಇರುತ್ತಿರಲಿಲ್ಲ. ಊಟ-ತಿಂಡಿಗಳಂತೆ, ನಿದ್ರೆ, ವಿರಾಮಗಳಿಗೂ ಭೂಮಿ ತಾಯಿಯ ಆಸರೆ ಸಾಕಾಗಿತ್ತು.  ಕನ್ನಡಾಂಬೆಯ ಆಶೀರ್ವಾದ! ಈ ರಾಜ್ಯದ ಹವೆಯೂ ಹೆಚ್ಚು ಕಡಿಮೆ ಸಹ್ಯವಾಗಿದೆ. ಆದರೆ ವಿಂಧ್ಯದಾಚೆಯ ಪ್ರದೇಶಗಳಲ್ಲಿ ಉತ್ತರಕ್ಕೆ ಹೋದಂತೆ ಹವಾಮಾನ ವೈಪರೀತ್ಯ ಜಾಸ್ತಿ ಆಗುತ್ತ ಹೋಗುತ್ತದೆ. ಹೀಗಾಗಿ ಉಗ್ರ ಬೇಸಿಗೆಯಲ್ಲೂ, ಮರಗಟ್ಟುವ ಚಳಿಯಲ್ಲೂ ಕೂಡಿಯೇ ಉಪಯೋಗಿಸಬಹುದಾದ ನೂಲಿನ ಪಟ್ಟೆಗಳನ್ನು ಸುತ್ತಿದ ಹಗುರವಾದ ಕಟ್ಟಿಗೆಯ ಕಾಟ್ ಗಳು ಅಲ್ಲಿ ಬಡವ-ಬಲ್ಲಿದ ಭೇದವಿಲ್ಲದೆ ಮನೆಮನೆಗಳಲ್ಲಿ ಕಂಡುಬರುತ್ತವೆ. ಏಕೆಂದರೆ ರಾಜಸ್ಥಾನದ ಮರುಭೂಮಿಯಲ್ಲಿ ಮಳಲು ಬೇಗ ಆರಿ, ತಂಗಾಳಿ ಬೀಸಿ ಮನೆಯ ವರಾಂಡ ಅಥವಾ ತೆರೆದಿಟ್ಟ ಸ್ಥಳಗಳು ತಂಪಾಗಿದ್ದು, ಅತ್ತಿಂದಿತ್ತ ಒಯ್ಯಲು ಈ ಹಗುರವಾದ ಕಾಟ್ ಗಳು ಅನುಕೂಲ. ಅದರಂತೆ ಚಳಿಗಾಲದಲ್ಲಿ ಮನೆಯಲ್ಲಿ ಹಾಸಿಗೆ ಇಲ್ಲದಿದ್ದರೂ ಒಂದು ಬಟ್ಟೆ ಹೊರಸಿನ ಮೇಲೆ ಹಾಕಿದರೆ, ಬೇಸಿಗೆಯಂತೆ ಚಳಿಗಾಲದಲ್ಲೂ ಹಾಸಿಗೆ ತಯಾರ್. ನೇದ ನವಾರಗಳು ಬಟ್ಟೆಗಳ ಹಾಸಿಗೆಯಂತಿರುತ್ತವೆ.

ಕೆಲವೆಡೆ ಊಟ-ತಿಂಡಿ, ವಿರಾಮಕ್ಕೆ ಅತಿಥಿಗಳಿಗೆ ಕೂಡಲು, ಮಂತ್ರಾಲೋಚನ ಮಾಡಲು ಕಾಟ್ ಗಳೇ ನೆರವಾಗುತ್ತವೆ.

ಅದೇನೋ ಕೃಷ್ಣಾನಂದ ಕಾಮತರಿಗೆ ನವಾರದ ಮಂಚಗಳು ತುಂಬ ಇಷ್ಟವಾದವು. ಅಗ್ಗದ ಆಸರೆಯಾಗಿ, ಒಂದೆಡೆಯಿಂದ ಇನ್ನೊಂದೆಡೆ ಒಯ್ಯಲು ಸುಲಭವಾದ ಫರ್ನಿಚರ್! ಕೊನೆಗೊಮ್ಮೆ ಬೆಂಗಳೂರಿನಲ್ಲಿ ಸಂಸಾರ ಹೂಡಲು ನಿಶ್ಚಯಿಸಿದಾಗ ಹಿಂದೆ ಮುಂದೆ ಯೋಚಿಸದೆ ಟೀಕ್  (ಸಾಗವಾನಿ) ನಾಲ್ಕು ಕಾಲುಗಳನ್ನು ಜೋಡಿಸುವ ಖಾಲಿ ಫ್ರೆಮ್ ನಾಲ್ಕನ್ನು ಪರಿಚಯದ ಆಚಾರಿಯಿಂದ ಮಾಡಿಸಿದರು. ಚಾಪೆಯಂತೆ ನವಾರಗಳನ್ನು ಎರೆಡೂ ಬದಿಯಿಂದ ಹೆಣೆಯುತ್ತ ಬರಲು ತಂಗಿ ಮಾಲಿನಿಯ ನೆರವು ಪಡೆದರು.

ಅದೆಷ್ಟೊ ವರ್ಷ ಮನೆಯವರಿಗೂ, ಮನೆಗೆ ಬರುತ್ತಿದ ಅತಿಥಿ ಅಭ್ಯಾಗತರಿಗೂ ಈ ನವಾರದ ಮಂಚಗಳು ಸುಖಶಯನವಿತ್ತವು.

ಈ ಮಂಚಗಳ ಒಂದು ದೌರ್ಬಲ್ಯವೆಂದರೆ ಮಲಗಿದ ಭಾರಕ್ಕೆ ನಿಧಾನವಾಗಿ ಮಧ್ಯಭಾಗ ಪೊಳ್ಳಾಗುತ್ತ ನವಾರದ ಹೆಣಿಗೆ ಢೀಲಾ ಆಗಿ ಮಂಚವು ಜೋಳಿಗೆ ಯಂತಾಗುತ್ತದೆ. ಆಗಾಗ ಮನೆಯ ಗಟ್ಟಿಮುಟ್ಟಾದ ವ್ಯಕ್ತಿಗಳು ಎಳೆದು ಗಟ್ಟಿ ಮಾಡಬೇಕಾಗುತ್ತದೆ. ಈ ಕೆಲಸ ಕಾಮತರಿಗೆ ಮೀಸಲಾಗಿತ್ತು! ನವಾರದ ಪಟ್ಟಿಗಳನ್ನು ಬಿಡಿಸಿ ಪುನಃ ಹೆಣೆಯುವುದು ಶ್ರಮದ ಕೆಲಸವಷ್ಟೆ! ಅದನ್ನು ತಪ್ಪಿಸಲು ಸಡಿಲಾದ ಪಟ್ಟಿಗಳನ್ನು ಕತ್ತರಿಸಿ ಮತ್ತೆ ಹೊಲಿಯುವುದು ಸುಲಭ! ಎಂದು ಆ ಕೆಲಸಕ್ಕೆ ಇಳಿದರು.

ಹೊಲಿಯುವಾಗ ಬರೆಯಬೇಕಾದ ಲೇಖ / ಪುಸ್ತಕಗಳ ಚೌಕಟ್ಟು ಮನನ ಮಾಡಿಕೊಳ್ಳುವರು.

ಕೈ ಕೆಲಸ ಮಾಡುತ್ತಿರುವಾಗಲೇ ಮನೆಯ ಇತರ ಸದಸ್ಯರಿಗೆ ನಿರ್ದೇಶನ ಕೊಡುವುದು, ಅವರ ಮಾತುಗಳತ್ತ ಗಮನ ನೀಡುವುದು ಅವರ ದಿನಚರಿಯ ಭಾಗವಾಗಿತ್ತು.

ಈಗ ನೂಲಿನ ನವಾರ್ ಬದಲಾಗಿ ನೈಲೋನ್ ಪಟ್ಟಿ ಬಂದಿವೆ. ಕಟ್ಟಿಗೆ ಬದಲಾಗಿ ಪ್ಲಾಸ್ಟಿಕ್ ಕವಚಗಳು ಬಂದಿವೆ. ಅವು ಹಿತವಾಗಿಲ್ಲ.