ಹಿನ್ನಲೆಯಲ್ಲಿ

ಭಾಗ: ಒಂದು ಹಿನ್ನಲೆಯಲ್ಲಿ

ನ್ಯೂಯಾರ್ಕ್ ವಿಶ್ವವಿದ್ಯಾಲಯದವರು ಶಿಷ್ಯವೃತ್ತಿಯನ್ನು ದಯಪಾಲಿಸಿ `ಕೀಟಶಾಸ್ತ್ರ’ದಲ್ಲಿ (Entomology) ಪಿಎಚ್. ಡಿ. ಮಾಡುವ ಸದವಾಕಾಶವನ್ನು ನನಗೆ ಒದಗಿಸಿದಾಗ ಸಂತಸಪಟ್ಟವರಿಗಿಂತ ಅಸಮಾಧಾನಪಟ್ಟವರ ಸಂಖ್ಯೆಯೇ ಹೆಚ್ಚು. ತಂದೆ, ತಾಯಿ, ಆಪ್ತೇಷ್ಟರು ಮೂರು ನಾಲ್ಕು ವರ್ಷ ಈತ ತಮ್ಮನ್ನಗಲಿ ಇರುವನೆಂದು ಕಳವಳಪಟ್ಟರೆ, ಕೃತಕ ಹಿತವಂತರು ತಮ್ಮ ಮಕ್ಕಳಿಗೂ ಇಂಥ ಅವಕಾಶ ಸಿಗಲಿಲ್ಲವಲ್ಲಾ ಎಂದು ಕಸಿವಿಸಿಪಟ್ಟರು. ತಮಗೆ ದೊರೆಯದ್ದು ತಮ್ಮ ವಿದ್ಯಾರ್ಥಿಗೆ ದೊರಕಿತಲ್ಲಾ ಎಂದು ಶಿಕ್ಷಕವೃಂದ ಸೋಜಿಗಪಟ್ಟರೆ, ಸಹಪಾಠಿಗಳು ತಮಗೂ ಇಂಥ ಸಂಧಿ ದೊರಕೀತೆಂದು ಕನವರಿಸಿದರು. ಒಬ್ಬ, `ಯಾರೂ ಕೇಳಿ ಅರಿಯದ ವಿಷಯ ಕಲಿಯಲು ಹೋದರೆ ಏನು ಮಹಾ?’ ಎಂದು ತೆಪ್ಪಗಾದರೆ, ಇನ್ನೊಬ್ಬನು `ವಿದೇಶಕ್ಕೆ ಹೋಗುವದಿದ್ದರೆ ಜರ್ಮನಿಗೋ, ಬ್ರಿಟನ್ನಿಗೋ ಹೋಗಬೇಕು. ಡಿಗ್ರಿಗಳನ್ನು ಮಾರುವ ಅಮೇರಿಕೆಗೆ ಹೋದರೆ ಅದೇನು ವಿಶೇಷವಲ್ಲ’ ಎಂದು ಸಮಾಧಾನಪಟ್ಟಕೊಂಡನು. ಕೆಲವರಿಗೆ ಇಷ್ಟಕ್ಕೇ ಸಮಾಧಾನವಾಗಲಿಲ್ಲ. ಪೀಡಿಸಿದಾಗಲೇ ಹೆಚ್ಚು ಸಂತೋಷ ಅವರಿಗೆ. ನಟನೆಯ ಗೆಳೆಯನೊಬ್ಬ,`ಅಲ್ಲ ಕಣಯ್ಯಾ, ನಿನಗೊಂದು `ಟಾಯ್’ ಸರಿಯಾಗಿ ಕಟ್ಟಿಕೊಳ್ಳಲು ಬಾರದು. ಅಮೇರಿಕೆಗೆ ಹೋಗಿ ಏನು ಮಾಡುವಿಯಾ?’ ಎಂದು ವ್ಯಕ್ತಪಡಿಸಿದ ಸಂದೇಹಕ್ಕೆ `ಟಾಯ್ ಧರಿಸುವದು ಹೇಗೆಂದು ಕಲಿಯಲಿಕ್ಕೇ ಹೊರಟಿದ್ದೇನೆ’ ಎಂದು ಉತ್ತರ ದೊರೆಯಿತು. `ಮಗನಿಗೆ ಮದುವೆ ಮಾಡಿಯೇ ಕಳಿಸಮ್ಮ. ಇಲ್ಲವಾದರೆ ಕ್ರೈಸ್ತರ ಹುಡುಗಿಯೊಂದನ್ನು ತಂದಾನು.’ ಎಂದು ಹೆದರಿಸಿದ ನೆರೆಮನೆಯಾಕೆ `ಇಲ್ಲಿಯ ಬ್ರಾಹ್ಮಣ ಹುಡುಗಿ, ಅಲ್ಲಿಯ ಕ್ರಿಶ್ಚನ್ ಹುಡಿಗಿ ಕೂಡಿ ಇಬ್ಬರಾಗಬಾರದೆಂದು ಮಗನನ್ನು ಹೀಗೆಯೇ ಕಳಿಸುತ್ತೇನಮ್ಮ’ ಎಂಬ ಚುರುಕಿನ ಉತ್ತರವನ್ನು ಕೇಳಿಕೊಂಡಳು.

ಹೊರಟು ನಿಂತಾಗ ಎಚ್ಚರಿಕೆಯ ಮಾತು, ಕಿವಿಮಾತುಗಳಿಗೂ ಕಡಿಮೆಯಿರಲಿಲ್ಲ. ಪಿಎಚ್. ಡಿ. ಪದವಿಯನ್ನಷ್ಟೆ ತರಬೇಕು ವಿನಾ ಹುಡುಗಿಯನ್ನಲ್ಲ’ ಎಂದು ಶಿಕ್ಷಕವೃಂದ ಎಚ್ಚರಿಕೆಯನ್ನಿತ್ತರೆ, `ಬಂದ ಹಣದಲ್ಲಿ ಉಳಿಸಿ ಭಾರತದಲ್ಲಿ ಸಿಗಲಾರದ ಸಾಮಾನುಗಳನ್ನೆಲ್ಲ ತಾರೆಂದು ಮಿತ್ರವೃಂದ ನಿವೇದಿಸಿಕೊಂಡಿತು. ಸಂಸಾರದ ಸುಖದುಃಖಗಳನ್ನೆಲ್ಲ ಅನುಭವಿಸಿದ ವೃದ್ಧೆಯೊಬ್ಬಳು `ಮದುವೆಯಾಗದೇ ಹೋದರೂ ಚಿಂತೆಯಿಲ್ಲ. ಆದರೆ ಹತ್ತಿರ ಯಾವುದಾದರೂ ಯುವತಿಯ ಭಾವಚಿತ್ರ ಇಟ್ಟುಕೊಳ್ಳಲು ಮರೆಯಬೇಡ’ ಎಂದು ಉಪದೇಶಿಸಿದಳು. ಇನ್ನೊಬ್ಬಾಕೆ `ತಮ್ಮ ದೇಶಕ್ಕೆ ಕಲಿಯಲು ಬಂದ ಭಾರತೀಯರೆಲ್ಲ `ಮಹಾರಾಜ’ರಿರುತ್ತಾರೆಂದು ತಿಳಿದು ಅಲ್ಲಿಯ ಹುಡುಗಿಯರು ಬೆನ್ನುಹತ್ತುತ್ತಾರಂತೆ. ಎಚ್ಚರವಾಗಿರು’ ಎಂಬ ಕಿವಿಮಾತು ಹೇಳಿದರು. `ಅಮೇರಿಕೆಯಿಂದ ಮರಳಿದ ನಂತರ ದೊಡ್ಡ ಸಾಹೇಬನಾಗಿ ಕಾರಿನಲ್ಲಿ ಓಡಾಡುತ್ತೀಯಾ’ ಎಂದು ಆಶಾವಾದಿಯೊಬ್ಬ ನುಡಿದರೆ `ಮರಳಿದ ನಂತರ ನಮ್ಮನ್ನೆಲ್ಲ ಮಾತಾಡಿಸುತ್ತೀಯೊ ಅಥವಾ ಮರೆತುಬಿಡುತ್ತೀಯೊ’ ಎಂದು ನಿರಾಶಾವಾದಿಯೊಬ್ಬ ರಾಗ ಎಳೆದ.

ಬೆಳೆದು ನಿಂತ ಕನ್ಯೆಯರ ತಂದೆ–ತಾಯಿಗಳು, ತಿರುಗಿ ಬರುವಷ್ಟರಲ್ಲಿ ಈತ ತಯಾರಾಗುತ್ತಾನೆಂದು ಆದರ-ಆತ್ಮೀಯತೆಗಳಿಂದ ಮಾತನಾಡಿಸಿದರು. ಸಮಯ ಸಿಕ್ಕಾಗಲೆಲ್ಲ ಪತ್ರ ಬರೆಯಬೇಕೆಂದು ಎಲ್ಲರೂ ಕೇಳಿಕೊಂಡರೂ ತಾವಾಗಿ ಬರೆಯುತ್ತೇವೆಂದು ಯಾರು ಆಶ್ವಾಸನ ಕೊಡುವ ಗೋಜಿಗೆ ಹೋಗಲಿಲ್ಲ. ದೂರದ ಆಸೆ, ಕಾತರತೆ, ಕಳವಳಗಳಿಂದ ಎಲ್ಲರನ್ನೂ ಬೀಳ್ಕೊಟ್ಟು ಪ್ರಯಾಣಕ್ಕೆ ಸಿದ್ಧನಾದೆ.

`ಹಿಮಾಲಯ’ದಲ್ಲಿ….