ಸ್ವಗತ
ಹೇಳಿದ್ದೇ ಹೇಳುವುದು
ಮೂವತ್ತಾರು ವರುಷ–೧೯೩೩ ರಿಂದ
`ತೋಂ ಝಣಕ ಥೈ, ಥೈ ಝಣಕ ತೋಂ’.
ವೇಷ ಬೇರೆ ಆರ್ಭಟ ಬೇರೆ, ಆದರೂ
ಅಟ್ಟ ಅದೇ.
ಅವೇ ಕುಣಿತ. ಅವೇ ಪ್ರಸಂಗ:
ಪತ್ರ; ತಾರು; ಪೋನು.
ಊಟ, ಉಪಚಾರ; ಕಾಲಿಗೆ ನೆಲವಾಗಿ, ಹೊಟ್ಟೆಗೆ ಹಸಿವಾಗಿ.
ಹಿಗ್ಗಿ, ಹಿಗ್ಗಿಸಿ–ಒಬ್ಬರಿಗೊಬ್ಬರು ಕೃತಜ್ಞ.
ಅಮೂಲ್ಯ, ಅಪ್ರತಿಮ, ಚಿರನವ ಎಂದದ್ದೆಲ್ಲ
ಕಾಲದ ಝಳಕ್ಕೆ ನಿರ್ಮಾಲ್ಯ, ನಿರ್ವಿರ್ಯ …
ಓಹ್! ಕಟ್ಟಿದ ವೇಷಕ್ಕೆ ಹಿಲಾಲಿನ ಬೆಳಕು.
ಥಳಕ್ ಥಳಕು.
`ತಾವು ಬಂದಂಥವರು ಧಾರು ಸ್ವಾಮಿ?
ಅತಳ ಸುತಳ ಅಖಿಳ ಬ್ರಹ್ಮಾಂಡಕ್ಕೂ ಒಬ್ಬನೇ ಆದ’ … ಇಂಥವ.
ನೆರೆಮನೆಯ ಕಲ್ಲ್ಯಾ, ಮಲ್ಲ್ಯಾ, ಭೀಮ ಅರ್ಜುನ.
ಹೌದು, ಇದೆಲ್ಲಾ ಆಯ್ತು ಸ್ವಾಮೀ ಮುಂದೇನು?
ಏನು.
`ನಾನೂ ಅಮೇರಿಕೆಗೆ ಹೋಗಿದ್ದೆ’
ಇದು ಮೂವತ್ತರಡನೇ ವರ್ಷದ ಪುಸ್ತಕ.
ವರ್ಷದ ಮೊದಲನೆಯದು.
ದೇಶ ದೇಶ ಪರ್ಯಟನ ಮಾಡಿ ಬಂದವರು ಹೇಳಿದ ಕಥಿ
ಓದಲಿಕ್ಕೆ ಭಾಳ ರುಚಿ
ಸಾರಥಿ–ಕಾರ್ಯ ಆಯಿತಲ್ಲ, ಇನ್ನು ಮುಂದೇನು?
ನಾಮಾಕೀಂತ ಬೇಕೆ ಹೇಳುತ್ತೇನೆ ಕೇಳಿ;
ಇದನ್ನು ಕಥಿಸಿದವರು ಸ್ವಾಮೀ, ಕೃಷ್ಣನಂದ ಕಾಮತರು.
ಉತ್ತರ ಕನ್ನಡದವರು, ಸ್ವಾಭಿಮಾನಿಗಳು.
ಹೊರತಂದದ್ದು; ಮನೋಹರ ಗ್ರಂಥ ಮಾಲೆ.
ವೇಷ ಕಟ್ಟಿದವರು, ರುಬಾಬ್ ಮಾಡಿದವರು,
ಛಂದನ್ನ ಮೇಲ್ದಿ ಹೊಂದಿಸಿದವರು;
ಚಿತ್ರಕಲಾ ಕೈಯ ವಾಸುದೇವರು, ಮದ್ರಾಸಿನಲ್ಲಿದ್ದವರು.
ಇದನ್ನು ನಮ್ಮದಂತ ಹಚ್ಚಿಕೊಂಡು, ವಾಹವ್ಹಾ ಅಂತ ಬೆನ್ನು ಚಪ್ಪರಿಸಿ,
ಮುಂದ ತಂದವರು ನೀವು
ಗ್ರಾಹಕ–ವಾಚಕರು.
ನಿಮಗೆಲ್ಲಾರಿಗೂ ಸಾಲ ಹಿಡಿದು ನಮಿಸ್ತೇ ವಿ
ಗಮನ ಕೊಟ್ಟು ಎತ್ತಿ ಹಿಡೀರಿ ತೋಲ ಕಾಯಾಕ.
“ಇಲ್ ಅಂದ್ರ ನಿಲ್ ಅಂತೈತಿ ಗಾಳಿ, ತೂರಾಕ.”
(ಮೊದಲ ಆವೃತ್ತಿಯಿಂದ)
ಕ್ಷಮಸ್ವ.