ನನ್ನ ಮಾತು
ನಾನೂ ಅಮೇರಿಕೆಗೆ ಹೋಗಿದ್ದೆ.
ಇಂದು ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಅಮೇರಿಕೆಗೆ ಹೋಗಿ ಬರುತ್ತಾರೆ. ಹೋಗುವ ಮೊದಲು ನಾವೆಲ್ಲ ಕಟ್ಟಿಕೊಂಡ ಕನಸಿನ ನಾಡಿಗಿಂತ, ಹೋದ ನಂತರ ಕಂಡ ಪ್ರತ್ಯಕ್ಷ ಅಮೇರಿಕ ಬಹಳ ಭಿನ್ನವಾಗಿದೆ. ಅಲ್ಲಿ ಹೋದೊಡನೆ ನೂರಾರು ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ; ನೂರಾರು ವಿದ್ಯಾರ್ಥಿಗಳು ತಮ್ಮ ಓದನ್ನು ಮುಗಿಸದೇ ತಿರುಗಿ ಬರುತ್ತಾರೆ; ಹತ್ತಾರು ಜನ ವಿದ್ಯಾಭ್ಯಾಸ ಬಿಟ್ಟು `ಯಾಂಕಿ’ ಹುಡುಗಿಯರನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿಬಿಡುತ್ತಾರೆ; ತಾಳ್ಮೆ, ಸಂಯಮ, ಪ್ರಯತ್ನಶೀಲತೆ ಇದ್ದವರು ಅಧ್ಯಯನ ಮುಗಿಸಿ ಯಶಸ್ವಿಯಾಗಿ ಹಿಂದಿರುಗುತ್ತಾರೆ. ಇತ್ತೀಚಿಗೆ–ಕೆಲವೇ ತಿಂಗಳು ಅಮೇರಿಕೆಗೆ ಹೋಗಿ ಬರಲಿ, ಕೆಲವು ವರ್ಷ ಇದ್ದು ಬರಲಿ–ಹಲವರು ಅಮೇರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡವರಂತೆ ಅಧಿಕಾರವಾಣಿಯಿಂದ ಭಾಷಣ ಬಿಗಿಯುತ್ತಾರೆ; ಲೇಖನ ಬರೆಯುತ್ತಾರೆ. ಪುಸ್ತಕಗಳನ್ನೂ ಬರೆದು ಹೊರ ಹಾಕುತ್ತಾರೆ. ಬಹುಶಃ ಎಲ್ಲರೂ ಅಲ್ಲಿಯ ವೈಭವವನ್ನು, ಯಾಂತ್ರಿಕ ಪ್ರಗತಿಯನ್ನು, ಸಿರಿವಂತಿಕೆಯನ್ನು ಮಾತ್ರ (ಸ್ವಾಮಿಯವರು ಕನ್ನಡದಲ್ಲೆ ಬರೆದ “ಅಮೇರಿಕೆಯಲ್ಲಿ ನಾನು” ಎಂಬುದನ್ನು ಹೊರತುಪಡಿಸಿ) ಮನಮುಟ್ಟುವಂತೆ ವಿವರಿಸುತ್ತಾರೆ. ಇದರಿಂದ ಜನರು ಅಮೇರಿಕೆಯೆಂದರೆ ಅಪ್ಸರೆಯ ನಾಡು, ಶ್ರೀಮಂತಿಕೆಯ ಬೀಡು, ಭೂಲೋಕದ ಸ್ವರ್ಗ ಎಂದು ನಂಬಿ, ಏನೇನೋ ಕನಸು ಕಟ್ಟಿಕೊಂಡು, ಅಮೇರಿಕೆಗೆ ಹೋಗಿ ನಿರಾಶರಾದರೆ ಅಶ್ಚರ್ಯವೇನಿಲ್ಲ. ಆದರೆ ಅಮೇರಿಕೆಗೆ ಹೋಗಿ ಬಂದವರು ಹೇಳಿದ್ದು, ಬರೆದದ್ದು ಸುಳ್ಳೆಂದಲ್ಲ. ಆದರೆ ಹೆಚ್ಚಿನ ಬರಹಗಳು ಕುತೂಹಲವನ್ನು ಕೆರಳಿಸುವಂತಹವು; ವಾಸ್ತವಿಕತೆಯಿಂದ ದೂರವಾದವು. ಅವು ಅವರ ವೈಯಕ್ತಿಕ ಅನುಭವಗಳ ಶೇಕಡಾ ಹತ್ತರಷ್ಟು ಮಾತ್ರ ಇರಬಹುದು ಎಂದರೆ ಅತಿಶಯೋಕ್ತಿಯಾಗಲಾರದು. ಹೇಳದಿದ್ದ, ಬರೆಯಲಾಗದ ಎಷ್ಟೋ ಕಟು ಅನುಭವಗಳಿರುತ್ತವೆ … … ನಾನು ಭಾರತೀಯನಾಗಿದ್ದುಕೊಂಡು ಅಮೇರಿಕನ್ನರನ್ನು ತೂಗಿ ನೋಡಬೇಕೆಂಬ ಹಂಬಲದವನು. ಆದ್ದರಿಂದ ವೇಳೆ ಸಂಧಿ ದೊರೆತಾಗಲೆಲ್ಲ ಅಮೇರಿಕನ್ ಸ್ನೇಹಿತರೊಂದಿಗೆ ಅಮೇರಿಕನ್ ಕುಟುಂಬಗಳೊಡನೆ ವಾಸಿಸಿ, ಅವರೊಂದಿಗೆ ಒಂದಾಗಿ ಇರಲು ಯತ್ನಿಸಿ, ಅವರನ್ನು ತಿಳಿದುಕೊಳ್ಳುವ ಪ್ರಯತ್ನಮಾಡಿದ್ದೇನೆ. ಹದಿನೈದು ಸಾವಿರ ಮೈಲು ಪ್ರವಾಸ ಮಾಡಿ ಅಮೇರಿಕೆಯ ಹೆಚ್ಚಿನ ಪ್ರಾಂತಗಳನ್ನು ಸುತ್ತಾಡಿದ್ದೇನೆ. ನಾಲ್ಕು ವರ್ಷಗಳನ್ನು ಅಮೇರಿಕೆಯಲ್ಲಿ ಕಳೆದರೂ ಅಮೇರಿಕನ್ನರ ಬಗ್ಗೆ ಅಧಿಕಾರವಾಣಿಯಿಂದ ಬರೆಯುವ ಆತ್ಮವಿಶ್ವಾಸ ನನಗಿಲ್ಲ. ಆದರೆ ನನ್ನ ಕೆಲ ಅನುಭವಗಳನ್ನು ಯಥಾವತ್ತಾಗಿ ಓದುಗರಿಗೆ ನಿವೇದಿಸಿದರೆ, ಅಮೇರಿಕನ್ನರ ವೈವಿಧ್ಯಪೂರ್ಣ ಜೀವನದ ಪರಿಚಯವಾಗಿ, ಒಂದು ಒಳ್ಳೆ ತಿಳುವಳಿಕೆಗೆ ಮಾರ್ಗವಾದೀತೆಂದು ನಂಬಿದ್ದೇನೆ. ಅಲ್ಲಿ ಸವಿದ ಕೆಲ ರಸನಿಮಿಷಗಳನ್ನೂ ಇಲ್ಲಿ ಸೇರಿಸಿದ್ದೇನೆ. ಒಂದೆರಡು ಕಟು ಅನುಭವಗಳನ್ನೂ ಸೇರಿಸದಿದ್ದರೆ ಚಿತ್ರಣ ಪೂರ್ಣವಾಗಲಿಕ್ಕಿಲ್ಲವೆಂದು ಅವನ್ನೂ ಮೂಡಿಸಲು ಯತ್ನಿಸಿದ್ದೇನೆ. ಇದರಿಂದ ನನ್ನ ಅಮೇರಿಕೆಯ ಅನುಭವಗಳು ಇಷ್ಟೇ ಎಂದು ಹೇಳಲಿಕ್ಕಾಗದು. ಇದರೊಟ್ಟಿಗೆ ಮೈಮುರಿ ದುಡಿತ, ಬೆವರ ಇಳಿತ, ರಕ್ತದ ಕುದಿತ ಇವೆಲ್ಲ ಕೂಡಿದಾಗಲೇ ನನ್ನ ಅಮೇರಿಕೆಯ ಯಾತ್ರೆ ಫಲಕಾರಿಯಾಯಿತು. ಓದುಗರು ಏನಾದರೂ ತಮ್ಮ ಸಲಹೆ–ಸೂಚನೆಗಳನ್ನು, ಸಂಶಯಗಳನ್ನು ತಿಳಿಸಬೇಕು ಎನಿಸಿದರೆ ಅವಶ್ಯವಾಗಿ ಲೇಖಕನಿಗೆ ಬರೆದು ತಿಳಿಸಬೇಕು. ಈ ಕೊಡು–ಕೊಳಿಗಾಗಿ ಲೇಖಕ ಅವರಿಗೆ ತುಂಬ ಋಣಿಯಾಗುವನು.
ಕೃಷ್ಣಾನಂದ ಕಾಮತ
(ಮೊದಲ ಆವೃತ್ತಿಯಿಂದ)