ಇದೂ ಇದೆಯೇ?
ಕಾಲೇಜಿನ ಪ್ರಯೋಗಶಾಲೆಯಲ್ಲಿ ಕೆಲಸಕ್ಕೆ ಎಲ್ಲ ಸೌಕರ್ಯಗಳಿದ್ದುದ್ದರಿಂದ ಇಡೀ ದಿನವಷ್ಟೇ ಅಲ್ಲದೇ ರಾತ್ರಿಯೂ ಬಹಳ ಹೊತ್ತಿನ ತನಕ ಕಾಲೇಜಿನಲ್ಲಿರುತ್ತಿದ್ದೆ. ಅಂದಿನ ಕೆಲಸ ಮುಗಿಸಬೇಕಾದರೆ ರಾತ್ರಿಯ ಒಂದು ಗಂಟೆಯಾಗಿ ಹೋಗಿದೆ. ಕಟ್ಟಡದ ಮೂರನೇ ಅಂತಸ್ತಿನ ಮೇಲಿನ ಪ್ರಯೋಗಶಾಲೆಯಿಂದ ನಾಲ್ಕನೇ ಅಂತಸ್ತಿನಲ್ಲಿದ್ದ ನನ್ನ ಆಫೀಸಿಗೆ ಹೋದೆ. ಆಫೀಸಿನ ಹೊರಗೆ ವಿದ್ಯಾರ್ಥಿಯೊಬ್ಬ ಸಿಗರೇಟು ಸೇದುತ್ತ `ಕಲಾವಿದ್ಯಾರ್ಥಿಗಳು ಇಲ್ಲಿಯೇ ಇರುತ್ತಾರೆಯೇ?” ಎಂದು ಕೇಳಿದ. ಕಲಾವಿದ್ಯಾರ್ಥಿಗಳು ರಾತ್ರಿ ಕೆಲಸ ಮಾಡುವುದು ಹೆಚ್ಚು. ಆದರೆ ಅಂದು ಏಕೋ ಬಂದಿರಲಿಲ್ಲ. “ಇಲ್ಲ” ಎಂದು ಹೇಳಿ ನನ್ನ ಆಫೀಸ್ ಕೋಣೆಯ ಬಾಗಿಲನ್ನು ತೆಗೆಯಹೋದೆ. ಕೀಲಿ ತೆಗೆದಿತ್ತು. ನಾನೇ ಹಾಕಲು ಮರೆತಿರಬೇಕೆಂದುಕೊಂಡೆ. ಅಷ್ಟರಲ್ಲಿ ಸಿಗರೇಟು ಸೇದುತ್ತಿದ್ದವ “ಖೋಲಿಯಲ್ಲಿ ಯಾರೋ ಒಬ್ಬರು ಇದ್ದಾರೆ” ಎಂದ. ಅವನ ಮಾತಿನ ಅರ್ಥವಾಗದೇ ಖೋಲಿಯೊಳಗೆ ಹೋಗಿ ದೀಪ ಹಾಕಿದೆ. ನನ್ನ ಆಫೀಸಿನಲ್ಲಿ ವಿದ್ಯಾರ್ಥಿಯೊಬ್ಬನಿದ್ದ! ಧ್ವನಿ ಎತ್ತರಿಸಿ “ನನ್ನ ಆಫೀಸಿನಲ್ಲಿ ನಿನಗೇನು ಕೆಲಸ?” ಎಂದೆ. ಅಷ್ಟಕ್ಕೆ ಆತ ಅಳುಕಿ ಸಣ್ಣಗಾಗಿಹೋದ. ಅಷ್ಟರಲ್ಲಿ ಹೊರಗಿನವನು ಬಂದು “ನಮ್ಮ ಕೆಲವು ಸಾಮಾನು ಕಳವಾಗಿ ಹೋಗಿವೆ. ಕಲಾ-ಕ್ಲಾಸಿನ ವಿದ್ಯಾರ್ಥಿಗಳು ಕದ್ದಿರಬೇಕೆಂಬ ಅನುಮಾನ ನಮಗಿದೆ. ಈ ಕೋಣೆಯೂ ಅವರಿಗೇ ಸೇರಿರಬೇಕೆಂದು ತಿಳಿದು ಹುಡುಕುತ್ತಿದ್ದೆವು.” ಎಂದು ಹೇಳಿದ. “ಹುಡುಕುತ್ತಿದ್ದುದು ಕಳವಾದ ಸಾಮಾನೋ ಕದೀಬೇಕೆಂದಿರುವ ಸಾಮಾನೋ?” ಎಂದು ಕೇಳಬೇಕೆಂದಿದ್ದೆ. ಆದರೆ ಅವರು ಇಬ್ಬರಿದ್ದರು, ನಾನೊಬ್ಬನೇ ಹತ್ತಿರದಲ್ಲಿ ಇನ್ನಾರೂ ಇರಲಿಲ್ಲ. ಆದ್ದರಿಂದ “ಹೀಗೆ ಬೇರೊಬ್ಬರ ಕೋಣೆಯಲ್ಲಿ ಅಪರಾತ್ರಿ ಬರುವುದು ಸರಿಯಲ್ಲ” ಎಂದು ಅವರಿಗೆ ಹೋಗ ಹೇಳಿದೆ. ಪೋಲಿಸರಿಗೆ ತಿಳಿಸೋಣವೆಂದರೆ ಹತ್ತಿರದಲ್ಲಿ ಫೋನೂ ಇರಲಿಲ್ಲ. ಸರಿ ಸಾಮಾನೇನಾದರೂ ಕಳುವಾಗಿದೆಯೇ ಎಂದು ಕೋಣೆ ತುಂಬ ನೋಡಿದೆ. ಕಳುವಾಗುವುದರ ಬದಲಾಗಿ ಒಂದು ಹೊಸ ಚೀಲ ಕೋಣೆಯಲ್ಲಿತ್ತು. ತೆರೆದು ನೋಡಿದರೆ ಮೂರು-ನಾಲ್ಕು ಸಾವಿರ ರೂಪಾಯಿಯ ಬೆಲೆಬಾಳುವ ಸೂಕ್ಷ್ಮದರ್ಶಕ ಯಂತ್ರವೊಂದಿತ್ತು. ಈಗೇನು ಮಾಡುವದೆಂದು ಯೋಚಿಸಿದೆ. ಮನೆಗೆ ಒಯ್ಯೋಣವೆಂದರೆ ಅವರೆಲ್ಲಿಯಾದರೂ ಅವಿತು ನಿಂತು ಆಕ್ರಮಿಸಿಯಾರು ಎಂಬ ಅಂಜಿಕೆಯಿತ್ತು. ಆದ್ದರಿಂದ ಆಫೀಸ ಕೋಣೆಯ ಕಿಟಕಿಗಳ ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ, ಬೇಗ ಸರಿಯಾಗಿ ಹಾಕಿ ಮನೆಗೆ ಬಂದು ಮಲಗಿದೆ.
ಮರುದಿನ ಬೆಳಿಗ್ಗೆ ಬೇಗ ಎದ್ದು ಎಲ್ಲರಿಗಿಂತ ಮೊದಲು ಬಂದು ಆಫೀಸ ಕೋಣೆಯ ಬಾಗಿಲು ತೆಗೆದು ನೋಡುತ್ತೇನೆ-ಚೀಲ ಮಾಯವಾಗಿತ್ತು! ಕಳ್ಳರ ಹತ್ತಿರ ಈ ಎಲ್ಲ ಕೋಣೆಗಳ ಕೀಲಿಕೈಗಳು ಇರುವುದು ಖಂಡಿತವಾಯಿತು. ಪ್ರಾಧ್ಯಾಪಕರಿಗೆ ನಡೆದ ಘಟನೆಯನ್ನು ಹೇಳಿದೆ. ಅವರು ಸಂಭವಿಸಿದ್ದೆಲ್ಲವನ್ನು ಬರೆದುಕೊಡಲು ಹೇಳಿದರು. ಆಮೇಲೆ ನನ್ನ ಅಮೇರಿಕನ್ ಸಹಪಾಠಿಯೊಬ್ಬನ ಕೋಣೆಯಿಂದ ಸೂಕ್ಷ್ಮದರ್ಶಕ ಯಂತ್ರ ಕಳುವಾದದ್ದು ಗೊತ್ತಾಯಿತು. ಪೋಲಿಸರಿಗೆ ತಿಳಿಸಲಾಯಿತು. ಅವರು ಕಳ್ಳರ ಬದಲು ನನ್ನ ಬೆನ್ನುಹತ್ತಿಬಿಟ್ಟರು. ಹಗಲೆಂದಿಲ್ಲ, ರಾತ್ರಿಯೆಂದಿಲ್ಲ; ಕಾಲೇಜಿನಲ್ಲಿ, ಮನೆಯಲ್ಲಿ; ಓದುತ್ತಿರುವಾಗ, ಊಟ ಮಾಡುತ್ತಿರುವಾಗ ಈ ಪೋಲಿಸರು ಬಂದು ಬಂದು ನನ್ನನ್ನು ಕಾಡಿಸುವರು. ಕೊನೆಗೂ ಕಳ್ಳನು ಸಿಗದಿದ್ದರೆ ಎಲ್ಲಿ ನನ್ನನ್ನೇ ಹಿಡಿದು ಜೈಲಿನಲ್ಲಿ ಹಾಕುತ್ತಾರೋ ಎಂದು ಹೆದರಿಕೆಯಾಗಹತ್ತಿತ್ತು. ನಂತರ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಫೋಟೊಗಳನ್ನು ನೋಡಿ ಅದರಲ್ಲಿ ಯಾರಾದರೂ ಇದ್ದಾರೋ ಎಂದು ನೋಡಲು ಹೇಳಿದರು. ಒಂದು ದಿನ ಕುಳಿತು ಎಲ್ಲ ಫೋಟೋಗಳನ್ನು ನೋಡಬೇಕಾಯಿತು. ಒಬ್ಬನ ಗುರುತುಹತ್ತಿತ್ತು. ಆದರೆ ಪೋಲಿಸನವರಿಗೆ ಅವನೇ ಕದ್ದದ್ದು ಎಂದು ನಾನು ಬರೆದುಕೊಡಬೇಕಂತೆ! ಅದು ಸಾಧ್ಯವಿಲ್ಲ ಎಂದಾಗ ಕೇಸು ಅಲ್ಲಿಯೇ ಕುಸಿಯಿತು. ಪೋಲಿಸರಿಗಾದರೂ ಕಳ್ಳನನ್ನು ಹಿಡಿಯುವುದು ಎಳ್ಳಷ್ಟೂ ಮನಸ್ಸಿರಲಿಲ್ಲ.
ಇನ್ನೊಂದು ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದೆ. ಕಾರೊಂದು ನನ್ನ ಮುಂದಿನಿಂದ ಹಾದು ಹೋಗಿ ನಿಂತಿತು. ಅದರೊಳಗಿನಿಂದ ಒಬ್ಬ ನಿಗ್ರೊ ಹೊರಗೆ ಬಂದ. ಅವನತ್ತ ಲಕ್ಷ್ಯ ಕೊಡದೇ ನನ್ನ ಸಮಸ್ಯೆಗಳನ್ನು ಯೋಚಿಸುತ್ತ ಹೊರಟಿದ್ದೆ. ರೊಂಯ್ ಎಂದು ಕಲ್ಲೊಂದು ನನ್ನ ಕಿವಿಯ ಹತ್ತಿರದಿಂದ ಹೋಗಿ ಉರುಳಿತು. ತಿರುಗಿ ನೋಡಿದೆ, ಆ ನಿಗ್ರೊ ಕೈತುಂಬ ಕಲ್ಲುಗಳನ್ನು ಹಿಡಿದು ನನ್ನತ್ತ ಬೀಸುತ್ತಿದ್ದ. ಒಂದರ ಹಿಂದೊಂದು ಐದಾರು ಕಾರು ಹೋಗುತ್ತಿದ್ದರೂ ಯಾರೊಬ್ಬರೂ ನಿಲ್ಲಿಸಿ ನನ್ನ ಸಹಾಯಕ್ಕೆ ಬರಲಿಲ್ಲ. ಸರಿ, ಪಲಾಯನವೊಂದೇ ಮಾರ್ಗವೆಂದು ಕಾಲಿಗೆ ಬುದ್ದಿ ಹೇಳಿದೆ. ಮನೆ ಬಂದಾಗಲೇ ನಿಂತಿದ್ದು.
ಕೆಲ ದಿನಗಳ ನಂತರದ ಮಾತಿದು. ಕಾಲೇಜಿನಲ್ಲಿ ತಲೆ ಕೆಳಗೆ ಹಾಕಿ ಏನೋ ಬರೆಯುತ್ತಿದ್ದೆ. ನನ್ನ `ರೂಮ್-ಮೇಟ್’ ತೇಕುತ್ತ ಬಂದು “ಇದೀಗ ಮನೆಯಿಂದ ಬಂದೆಯಾ” ಎಂದು ಕೇಳಿದ. ಇಲ್ಲವೆಂದಾಗ “ನಿನ್ನ ಟ್ರಂಕ್, ಸಾಮಾನುಗಳೆಲ್ಲಾ ಅಸ್ತವ್ಯಸ್ತವಾಗಿ ಹರಡಿಕೊಂಡಿವೆ” ಎಂದು ಹೇಳಿದ. ಲಗುಬಗೆಯಿಂದ ಮನೆಗೆ ಧಾವಿಸಿದೆ. ನನ್ನ ಕ್ಯಾಮರಾ ಹೊರಗೆ ಸೋಫಾದ ಮೇಲೆ ಬಿದ್ದಿತ್ತು. ಸಾಮಾನುಗಳೆಲ್ಲ ಕೋಣೆಯ ತುಂಬ ಹರಡಿ ಬಿದ್ದಿದ್ದವು. ಟ್ರಂಕಿನೊಳಗಿನ ಬಟ್ಟೆಗಳೆಲ್ಲ ಯುದ್ಧಭೂಮಿಯಲ್ಲಿ ಸತ್ತುಬಿದ್ದ ಸೈನಿಕರಂತೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಒಳಗಿನಿಂದ ಹತ್ತು ಡಾಲರಿನ ನೋಟೊಂದು ಮಾಯವಾಗಿತ್ತು. ಅಂದು ಸಂಜೆ ನನ್ನ ಇನ್ನಿಬ್ಬರು ಸಹಪಾಠಿಗಳು ಮನೆಯಲ್ಲಿ ಇದ್ದರು. ಒಬ್ಬನು ತನ್ನ ಕೋಣೆಯಲ್ಲಿ ಓದುತ್ತ ಮಲಗಿದ್ದ. ಇನ್ನೊಬ್ಬ ಬಟ್ಟೆ ತೊಳೆಯಲು ಯಂತ್ರದತ್ತ ಹೋಗಿದ್ದ. ಬಾಗಿಲಿಗೆ ಬೀಗವಿಲ್ಲದ್ದರಿಂದ ಯಾರೋ ಮೆಲ್ಲಗೆ ನನ್ನ ಕೋಣೆಗೆ ಹೋಗಿರಬೇಕು. ಲಾಂಡ್ರಿಗೆ ಹೋದವನು ಯಾವಾಗ ಬರುತ್ತಾನೆಂದು ಕಾದ ಇನ್ನೊಬ್ಬನು ಸಂಜ್ಞೆ ಕೊಡಲು ಹೊರಗೆ ಕಾದಿದ್ದನೆಂದು ತೋರುತ್ತದೆ. ಸಾಬೂನು ಮರೆತದ್ದರಿಂದ ಸಹಪಾಠಿ ಬೇಗನೇ ಮನೆಗೆ ಬಂದ. ಅನಿರೀಕ್ಷಿತವಾಗಿ ಆತ ಬಂದದ್ದರಿಂದ ಹೆಚ್ಚಿನದನ್ನು ದೋಚಿಕೊಂಡು ಹೋಗಲಿಕ್ಕೆ ಕಳ್ಳರಿಗೆ ಅವಕಾಶ ದೊರೆಯಲಿಲ್ಲ. ಪೋಲಿಸರ ಕಾಟವೇ ಬೇಡವೆಂದು ಅವರಿಗೆ ತಿಳಿಸುವ ಗೋಜಿಗೇ ಹೋಗಲಿಲ್ಲ.
ಅಂದು ರವಿವಾರ, ಸಹಪಾಠಿಗಳು ಸಿನೇಮಕ್ಕೆ ಹೋಗಿದ್ದರು. ಹೊಟ್ಟೆತುಂಬ ಊಟ ಮಾಡಿದ ನನಗೆ ಕೂತಲ್ಲಿಯೇ ಸ್ವಲ್ಪ ಜೊಂಪುಹತ್ತಿತ್ತು. ಯಾರೋ ಬಾಗಿಲ ಮೇಲೆ ಟಕ್ ಟಕ್ ಎಂದು ಬಡಿದರು. ಕೂಡಲೇ ಏಳದೇ ಮತ್ತೆ ಕಣ್ಣು ಮುಚ್ಚಿದೆ. ಬಡಿತ ಜೋರಾಗುತ್ತ ನಡೆಯಿತು. ಓಡಿ ಹೋಗಿ ಬಾಗಿಲು ತೆರೆದೆ. ಪರಿಚಯದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಮಾತಾಡಲೂ ಬಾರದಷ್ಟು ಜೋರಾಗಿ ತೇಕುತ್ತ ಬಾಗಿಲಲ್ಲಿ ಬಂದು ನಿಂತಿದ್ದಳು. ಬಾಗಿಲು ತೆರೆಯುತ್ತಲೇ ಓಡಿ ಬಂದು ಸೋಫಾದಲ್ಲಿ ಕುಸಿಬಿದ್ದಳು. ಏನೋ ವಿಶೇಷ ಘಟನೆ ಸಂಭವಿಸಿರಬೇಕೆಂದು ಅವಳಿಗೆ ವಿಶ್ರಮಿಸಹೇಳಿ ಕಾಫಿ ತಯಾರಿಸಿ ತಂದು ಕೊಟ್ಟೆ. ಆಗ ಹೋದ ಜೀವ ಮರಳಿ ಬಂದಂತಾಗಿರಬೇಕು ಆಕೆಗೆ. ಸಾವಕಾಶವಾಗಿ ತನ್ನ ಅನುಭವವನ್ನು ಹೇಳಿದಳು.
ಕಾಲೇಜಿನಿಂದ ಆಕೆ ಮನೆಗೆ ಹೊರಟಿದ್ದಳಂತೆ. ದಾರಿಯಲ್ಲಿ ನಿಗ್ರೊನೊಬ್ಬ ಇವಳನ್ನು ನೋಡಿ ಹಾಡಲಾರಂಭಿಸಿದನಂತೆ.
“ನಿನ್ನ ಸುಕೋಮಲ ತುಟಿಗಳು ನನಗಾಗಿವೆ ಪ್ರಿಯೆ, ಮನದನ್ನೆ ನಿನ್ನ ಪ್ರೀತಿ ನನಗೆ ಮೀಸಲಲ್ಲವೇ? ಎನ್ನೆದೆಯ ಅಳುಕನ್ನು ತೆಗೆದು ಹಾಕೇ ನನ್ನ ಪ್ರೀತಿಯ ತೊರೆ ನಿನಗಾಗಿ ಇರಲಿ ನನ್ನ ತುಟಿ, ಬಾಹುಗಳು ನಿನ್ನೊಟ್ಟಿಗಿರಲಿ ನಾನು ಬೇಡವಾದರೆ ಜೀವವಾದರೂ ತೆಗೆ ಬಾರೆ” 1
ಹಾಡುತ್ತ ಎದ್ದು ಆಕೆಯನ್ನು ಹಿಂಬಾಲಿಸಿದನಂತೆ. ಈಕೆ ವೇಗವಾಗಿ ನಡೆಯತೊಡಗಲು ತಾನೂ ಅಷ್ಟೇ ವೇಗದಿಂದ ಹಿಂಬಾಲಿಸಿದನಂತೆ. ಈಕೆ ಓಡಲಾರಂಭಿಸಿದಾಗ ತಾನೂ ಓಡಿದನಂತೆ. ಒಬ್ಬಳೇ ಇರುವ ತನ್ನ ಕೋಣೆಗೆ ಹೋಗುವುದು ಕ್ಷೇಮವಲ್ಲವೆಂದು ದಾರಿಯಲ್ಲೇ ಇದ್ದ ನಮ್ಮ ಮನೆಗೆ ಬಂದಳಂತೆ.
ಕೊನೆಗೆ ತನ್ನ ಸಹಪಾಠಿಗಳ ಕಾವಲಿನಲ್ಲಿ ಅವಳನ್ನು ಅವಳ ಕೋಣೆಗೆ ತಲುಪಿಸಿದ್ದಾಯಿತು.
ಸಾಯರೆಕ್ಯೂಸದಲ್ಲಿ ಓದುವ ಭಾರತೀಯ ವಿದ್ಯಾರ್ಥಿನಿಯರು ಅಮೇರಿಕನ್ ವಿದ್ಯಾರ್ಥಿನಿಯರ ಮೇಲೆ ಚೆನ್ನಾಗಿ ಕಾವಲಿಡುತ್ತಾರೆಂಬ ನಂಬಿಕೆಯಿದೆ. (ಇವರು dating ಅಥವಾ ರಾತ್ರಿ ತಿರುಗಾಟ, ಕ್ಲಬ್-ಜೀವನಗಳಿಂದ ದೂರವಿರುತ್ತಾರೆ) ಹೀಗಾಗಿ ಮಹಿಳೆಯರ ವಸತಿಗೃಹಗಳಿಗೆ ಭಾರತೀಯ ವಿದ್ಯಾರ್ಥಿನಿಯರನ್ನು ಹೆಚ್ಚಾಗಿ `ವಾರ್ಡನ್’ ಎಂದು ಆರಿಸುತ್ತಾರೆ. ಈ ಕೆಲಸಕ್ಕಾಗಿ ಅವರಿಗೆ ಪುಕ್ಕಟೆ ವಸತಿಯಲ್ಲದೆ ಸ್ವಲ್ಪ ಸಂಬಳವನ್ನೂ ವಿಶ್ವವಿದ್ಯಾಲಯದವರು ಕೊಡುತ್ತಾರೆ. ರಜೆಯಲ್ಲಿ ವಿದ್ಯಾರ್ಥಿನಿಯರು ಹೊರಗಡೆ ಹೋದರೂ `ವಾರ್ಡನ್’ ಹಾಸ್ಟೇಲಿನಲ್ಲೇ ವಾಸಿಸುವ ವಾಡಿಕೆ. ಇಂತಹ ರಜೆಯಲ್ಲಿ ಭಾರತೀಯ `ವಾರ್ಡನ್’ ಒಬ್ಬಳೇ ಒಂದು ರಾತ್ರಿ ವಸತಿಗೃಹದಲ್ಲಿ ಮಲಗಿದ್ದಳು. ಮಧ್ಯರಾತ್ರಿ ಪೋನು `ಟ್ರಿನ್’ ಎಂದಿತು. ಪೋನು ಎತ್ತಿಕೊಂಡಾಗ ಆ ಕೊನೆಯಿಂದ ಪ್ರೇಮಸಲ್ಲಾಪ ಬರಲಾರಂಭಿಸಿತು. ಯಾರದೋ ಕುಚೇಷ್ಟೆ ಇದು ಎಂದು ಹಾಗೇ ಪೋನು ಬಡಿದು, ತಿರುಗಿ ಬಂದು ಮಲಗಿದಳಂತೆ. ತಿರುಗಿ ಪೋನು ಕರೆ ಬಂದಿತು. ಮತ್ತೆ ಎತ್ತಿದಾಗ “ಪ್ರಿಯೆ ನನ್ನ ಮೇಲೆ ಸಿಟ್ಟಿದೆಯೇನು? ನಾನು ಎಷ್ಟು ದಿನಗಳಿಂದ ನಿನಗಾಗಿ ಕಾದಿದ್ದೇನೆ, ಈ ರಾತ್ರಿ ನಿನ್ನೊಡನೆ ಕಳೆಯಬೇಕೆಂದಿದ್ದೇನೆ. ಇನ್ನು ಅರ್ಧ ಗಂಟೆಯಲ್ಲಿ ನಿನ್ನ ಕೋಣೆಯಲ್ಲಿರುತ್ತೇನೆ. ಏನಿದ್ದರೂ ಇಂದು … … ” ಮಾತು ಕೇಳುತ್ತಿದ್ದಂತೆ ಆಕೆಯ ಎದೆ ಜೋರಾಗಿ ಬಡಿದುಕೊಳ್ಳಲಾರಂಭಿಸಿತಂತೆ. ಮುಂದೆ ಏನು ಮಾಡಬೇಕೆಂದು ಯೋಚಿಸುವುದರಲ್ಲಿ ಹತ್ತು ಹದಿನೈದು ನಿಮಿಷ ಕಳೆದವಂತೆ. ಅನಂತರ ಲಗುಬಗೆಯಿಂದ ಪೋನು ಮಾಡಿ ತನ್ನ ಪರಿಚಯದ ಇಬ್ಬರು ಭಾರತೀಯರನ್ನು ಕರೆಸಿಕೊಂಡಳು. ಪೋಲಿಸರಿಗೆ ದೂರು ಕೊಡಲಾಯಿತು. ಅವರು ಯಾರಾದರೂ ಸುಳಿದಾಡಿದರೆ ತಿಳಿಸುತ್ತೇವೆ. ಎಂದು ಹೇಳಿ ಕಾವಲು ಇಡಿಸಿದರಂತೆ. ಒಬ್ಬರೂ ಅತ್ತ ಹಾಯಲಿಲ್ಲ. ಈ ಮಹಿಳೆ ತಿರುಗಿ ಎಂದೂ ಒಬ್ಬಂಟಿಗಳಾಗಿ ಇರುವ ಗೋಜಿಗೇ ಹೋಗಲಿಲ್ಲವಂತೆ.
ಅಮೇರಿಕನ್ನರೂ ಇಂಥ ಕಾಟದಿಂದ ಮುಕ್ತರಾಗಿಲ್ಲ. ವಿದ್ಯಾರ್ಥಿನಿಯರ ಮೇಲೆ ಆಗೀಗ ಬಲತ್ಕಾರಗಳೂ ಆಗುವುದುಂಟು. “ವಿದ್ಯಾರ್ಥಿ-ಕಳ್ಳರು” ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಿಶ್ವವಿದ್ಯಾಲಯದ ಪುಸ್ತಕಾಲಯದಲ್ಲಿ ಕಳವು ಮಾಡಿ ವಿದ್ಯಾರ್ಥಿನಿಯರೂ ಸಿಕ್ಕುಬಿದ್ದಿದ್ದೂ ಉಂಟು. ಪೋಲಿಸರ ಕಾರಿನ ಟಾಯರ್ಗಳನ್ನು ಕದ್ದ ಸಾಹಸಿಗಳೂ ಇದ್ದಾರೆ. ನಿಲ್ಲಿಸಿದ ಕಾರುಗಳ ಪೆಟ್ರೋಲ್ ಮತ್ತು ಟಾಯರುಗಳನ್ನು ಕದಿಯುವುದು ಸಾಮಾನ್ಯದ ಮಾತು. ಹುಡುಗರಿಗೆ ಕುಡಿತ, ಕುಣಿತ, ಡೇಟಿಂಗ್ ಮೊದಲಾದವುಗಳಿಗೆ ಹಣ ಬೇಕಷ್ಟೇ? ನಿಲ್ಲಿಸಿದ ಕಾರು ಕಂಡರೆ ಕೀಲಿ ಮುರಿದು ಅದನ್ನು ಏರಿ ಪೆಟ್ರೋಲ್ ಮುಗಿಯುವವರೆಗೂ ಅದನ್ನು ನಡೆಸಿ ನಂತರ ರಸ್ತೆಯ ಬದಿಗೆ ನಿಲ್ಲಿಸಿ ಫರಾರಿಯಾಗುತ್ತಾರೆ. ರೊಕ್ಕ ಬೇಕಾಗಿದ್ದರೆ ಕಾರಿನಲ್ಲಿ ಹೋಗುವ ಮುದುಕಿಯನ್ನು ಹಿಡಿದು ಜಬರಿಸಿಯೋ, ಗುಂಪುಗಟ್ಟಿ ಬಂದು ಅಂಗಡಿಗಳನ್ನು ಲೂಟಿ ಮಾಡಿಯೋ ಹಣ ದೊರಕಿಸುತ್ತಾರೆ. ಇಂತಹ ಚಟುವಟಿಕೆಗಳು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬಂದರೆ, ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳೂ ಇವರಿಗೆ ಕಡಿಮೆಯಿಲ್ಲ. ಅವರ ಕೋಲಾಹಲ ಬೇರೆ ರೀತಿಯಲ್ಲೂ ಇದೆ. ಅವರಲ್ಲಿ ಅನೇಕರು ಶಿಕ್ಷಕರನ್ನು ಬಡಿದದ್ದುಂಟು. ಹದಿನೈದು ದಿನಗಳಲ್ಲಿ ಮೂವತ್ತು-ನಾಲ್ವತ್ತು ಶಿಕ್ಷಕ-ಶಿಕ್ಷಕಿಯರು ಇಂಥ ಶಿಕ್ಷೆಗೆ ಗುರಿಯಾಗಿದ್ದರು. ಹದಿನಾಲ್ಕು ವರ್ಷದ ಹುಡುಗಿಯೊಬ್ಬಳು ಶಾಲೆಗೆ ತಡವಾಗಿ ಬಂದಳಂತೆ, ವರ್ಗದ ಶಿಕ್ಷಕಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಳು. ತಡಮಾಡಿ ಬಂದ ವಿದ್ಯಾರ್ಥಿನಿಯರು ಪ್ರಿನ್ಸಿಪಾಲರಿಂದ ಪರವಾನಿಗೆ ಚೀಟಿ ತರುವುದು ರೂಢಿ. ಶಿಕ್ಷಕಿ ಚೀಟಿ ಕೇಳಿದ್ದಕ್ಕೆ ವಿದ್ಯಾರ್ಥಿನಿ ಚಂಡಿಯ ಅವತಾರ ತಾಳಿ ಶಿಕ್ಷಕಿಯ ಮೇಲೆ ಏರಿ ಹೋಗಿ ಸಿಕ್ಕ ಹಾಗೆ ಬಡಿದಳಂತೆ. ಇನ್ನೊಬ್ಬ ವಿದ್ಯಾರ್ಥಿ ಶಿಕ್ಷಕನಿಗೆ ಹೊಡೆಯುತ್ತೇನೆಂದು ಖುರ್ಚಿಯನ್ನು ಎತ್ತಿಕೊಂಡು ಹೋಗಿ ಶಿಕ್ಷಕನು ಓಡಿಹೋದಲ್ಲೆಲ್ಲ ಬೆನ್ನುಹತ್ತಿದ್ದನಂತೆ. ಇನ್ನೊಬ್ಬ ವಿದ್ಯಾರ್ಥಿ ಶಿಕ್ಷಕನನ್ನು ಚಾಕುವಿನಿಂದ ಇರಿದನಂತೆ. ಪಿಸ್ತೂಲು ತಂದು ವಿದ್ಯಾರ್ಥಿಯೊಬ್ಬ ಶಿಕ್ಷಕನಿಗೆ ಬೆದರಿಕೆ ಹಾಕಿದನಂತೆ. ವಿದ್ಯಾರ್ಥಿಗಳ ಅವಿವೇಕತನ ಪ್ರತಿವರ್ಷ ಹೆಚ್ಚುತ್ತ ಹೋಗಿದೆಯಂತೆ. ಪ್ರತಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಒಡೆದ ಕಾಜುಗನ್ನಡಿ, ಮುರಿದ ಖುರ್ಚಿ-ಟೇಬಲ್ಲುಗಳನ್ನು ರಿಪೇರಿ ಮಾಡಲು ಸಾವಿರಾರು ಡಾಲರು ಖರ್ಚಾಗುತ್ತದಂತೆ.
“ವಿದ್ಯಾರ್ಥಿಗಳು ತಮ್ಮ ಮಿತ್ರವೃಂದವನ್ನು ಕರೆದು ಪಾರ್ಟಿ ಕೊಡುವುದು ವಾಡಿಕೆ. ಇಂತಹ ಪಾರ್ಟಿಗಳನ್ನು ಏರ್ಪಡಿಸಿದಾಗ ವಿರುದ್ಧ ಪಂಗಡದವರು ಅಲ್ಲಿ ಒಳನುಗ್ಗಿ ಪಾರ್ಟಿಗಳನ್ನು ಕೆಡಿಸುವುದೂ ಒಂದು ದೊಡ್ಡ ತಮಾಷೆಯೆನಿಸಿಕೊಳ್ಳುವಷ್ಟು ಇನ್ನೊಂದು ವಾಡಿಕೆಯಾಗಿದೆ. ಯಾರು ಯಾರು ಪಾರ್ಟಿ ಕೊಡುತ್ತಾರೆ ಎಂದು ತಿಳಿದುಕೊಳ್ಳಲು ವಿರುದ್ಧ ಪಂಗಡದ ಒಂದು ಗುಪ್ತಚಾರಪಥವೇ ತಯಾರಾಗಿರುತ್ತದೆ. ಪಾರ್ಟಿ ಒಳ್ಳೇ ಜೋರಿನಲ್ಲಿದ್ದಾಗ ಈ ಪಂಗಡದವರು ಒಳನುಗ್ಗಿ ಬಂದು ಸಿಕ್ಕವರನ್ನು ಹೊಡೆಯಲಾರಂಭಿಸುತ್ತಾರೆ, ಇಷ್ಟಕ್ಕೇ ಬಿಡದೆ ಕೈಗೆ ಸಿಕ್ಕ ಸಾಮಾನೆಲ್ಲ ಮುರಿಯುವುದು, ಚಲ್ಲುವುದು, ತುಳಿಯುವುದು, ಜಜ್ಜುವುದು ಮಾಡುತ್ತಾರೆ. ಒಮ್ಮೆ ಹೀಗಾಯಿತಂತೆ; ಪಾಲಕರು ಊರಿಗೆ ಹೋದಾಗ ಮಕ್ಕಳು ಇಂಥ ಒಂದು ಪಾರ್ಟಿ ಏರ್ಪಡಿಸಿ. ಪಾಲಕರು ತಿರುಗಿ ಬರುವಷ್ಟರಲ್ಲಿ ಪಾಪ, ಸಾವಿರಾರು ಡಾಲರುಗಳ ಹಾನಿಗೆ ಕಾರಣವಾಗಿದ್ದರು! ಪೋಲಿಸರು ವಿಚಾರಣೆಗೆ ಬಂದಾಗ “ಎಲ್ಲರೂ ಹೀಗೆ ಮಾಡುತ್ತಾರೆ ನಾವೂ ಮಾಡಿದರೆ ತಪ್ಪೇನಿದೆ ಅದರಲ್ಲಿ?” ಎಂದು ಭಾಗವಹಿಸಿದ ಹುಡುಗರೆಲ್ಲ ಜವಾಬು ಕೊಟ್ಟರಂತೆ. ಬಹುಸಂಖ್ಯಾತ ಪಾಲಕರೂ ಕೂಡ ತಮ್ಮ ಮಕ್ಕಳು ನಿರ್ದೊಷಿಗಳೆಂದೇ ವಾದಿಸುತ್ತಾರೆ. ಅಂದಮೇಲೆ ಸರಿಯೇ ಆಯಿತಲ್ಲವೇ?
ಆದರೂ ಸುದೈವಕ್ಕೆ ಅಮೇರಿಕೆಯ ಹೆಚ್ಚಿನ ವಿದ್ಯಾರ್ಥಿಗಳು ಈಗ ಈ ಗುಂಪಿಗೆ ಸೇರಿದವರಲ್ಲ. ಆದರೆ ಇಂಥ ಪೋಲಿಗಳ ಸಂಖ್ಯೆ ವರ್ಷ ವರ್ಷ ಹೆಚ್ಚುತ್ತ ನಡೆದಿದೆಯಂತೆ. ಇದೇ ವೇಗದಲ್ಲಿ ನಡೆದರೆ ಇನ್ನೊಂದು ಮೂವತ್ತು ವರ್ಷಗಳ ನಂತರ ಅಮೇರಿಕೆಯ ಗತಿ ಏನಾದೀತೆಂಬುದನ್ನು ಊಹಿಸುವುದೂ ಕಷ್ಟ. ಹುಯ್ ಎಂದು ನಾಯಿಕೊಡೆಯಂತೆ ಬೆಳೆದು ಬಂದಿದೆ ಆಧುನಿಕ ಅಮೇರಿಕನ್ ಸಂಸ್ಕೃತಿ. ಒಮ್ಮೆ ಕುಸಿಯಲಾರಂಭಿಸಿತೆಂದರೆ ಹೇಳಹೆಸರಿಲ್ಲದೇ ಹೋಗಬಹುದು. ಬಲಾಢ್ಯ ಬಾಹ್ಯ ಶತ್ರುಗಳು ಅಮೇರಿಕೆಗೆ ಇಲ್ಲದಿದ್ದರೂ ಸಮಾಜದ, ರಾಷ್ಟ್ರದ ವೈಯಕ್ತಿಕವಾದ ಕಾಯಿದೆಗಳನ್ನು ಉಲ್ಲಂಘಿಸುವ ರೂಢಿ ಬೆಳೆಯುತ್ತ ಹೋದರೆ ಆಂತರಿಕ ಕಾರಣಗಳಿಗೇ ಅಮೇರಿಕೆ ಬಲಿಯಾಗಬಹುದು.
ಗಂಡು-ಹೆಣ್ಣು