Jyotsna Kamat -- A Great Spirit

by Dr. Jayanti Manohar


First Online: October 06, 2022
Page Last Updated: November 26, 2022

Vedic scholar and writer Dr. Jayanti Manohar remembers her freind Jyotsna Kamat

ನಮ್ಮ ನಾಡು ಕಂಡ ಅದ್ಭುತ ಚೇತನ ಡಾ.ಜ್ಯೋತ್ಸ್ನಾ ಕಾಮತ್‌ರಿಗೆ ನನ್ನ ನುಡಿ ನಮನ

ಡಾ.ಜಯಂತಿ ಮನೋಹರ್


ನಮ್ಮ ನಾಡು ಕಂಡ ಡಾ. ಜ್ಯೋತ್ಸ್ನಾ ಕಾಮತ್‌ ರವರು ನಮ್ಮೊಂದಿಗಿದ್ದು ತಮ್ಮ ಅರಿವು – ಅನುಭವಗಳ ಧಾರೆ ಹರಿಸಿರುವುದು ನಮ್ಮ ಭಾಗ್ಯ.

ಹದಿನೆಂಟು ವರ್ಷಗಳ ಹಿಂದೆ, ʻನಮ್ಮ ಸಮಾಜದಲ್ಲಿ ಮಹಿಳೆಯರ ಸ್ಥಾನʼ ಎನ್ನುವ ವಿಚಾರವಾಗಿ ಜ್ಯೋತ್ಸ್ನಾ ಕಾಮತ್‌ರವರೊಂದಿಗೆ ಮಾತನಾಡಲು ಅವರ ಮನೆಗೆ ಹೋದದ್ದು ನನ್ನ ಸುಕೃತ. ಅಂದು ಪರಿಚಯವಾದ ಜ್ಯೋತ್ಸ್ನಾ ಕಾಮತ್‌ ರವರು ಅಂದಿಗೂ ಇಂದಿಗೂ ಅದ್ಭುತವಾಗಿಯೇ ಕಾಣುತ್ತಾರೆ. ಆ ಪರಿಚಯ ಸ್ನೇಹವಾಗಿ, ಆತ್ಮೀಯ ಸಂಬಂಧ ಬೆಳೆಯಿತು.


Jayanti Manohar (on left) with Jyotsna Kamat (speaking)

ಸಾಹಿತ್ಯಲೋಕದ ವಿವಿಧ ಆಯಾಮಗಳಲ್ಲಿ , ಸಂಶೋಧನೆಗಳಲ್ಲಿ ಪ್ರಸಿದ್ಧರಾಗಿದ್ದ ವಿದ್ವಾಂಸೆ ಜ್ಯೋತ್ಸ್ನಾರವರೊಂದಿಗೆ ನಡೆದ ಹಲವಾರು ವಿಚಾರಗಳ ಮುಕ್ತ ಮಾತು – ಚರ್ಚೆಗಳ ನೆನಪು ನನ್ನ ಮನಸ್ಸಿನಲ್ಲಿ ಇಂದೂ ಹಸಿರಾಗಿದೆ. ರಾಮ – ಸೀತೆಯರನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಿರುವ ನನ್ನ ನಾಟಕ ಮತ್ತು ಕಥಾನಕಗಳನ್ನು ಅವರು ಮುಕ್ತ ಮನಸ್ಸಿನಿಂದ ಅನುಮೋದಿಸಿದ್ದು ನನಗೆ ಆ ದಿಸೆಯಲ್ಲಿ ಮುಂದೆ ಸಾಗಲು ಅನುವಾಯಿತು. ಶ್ರೀ ಅರವಿಂದರು ಹೇಳಿರುವ ವೇದಮಂತ್ರಗಳ ಸಾಂಕೇತಿಕ ಅಂತರಾರ್ಥದ ಅಧ್ಯಯನ ಮಾಡುತ್ತಿದ್ದ ನನ್ನ ಮಾತುಗಳನ್ನು ಆಸ್ಥೆಯಿಂದ ಕೇಳಿ ಅವರು ಮಾಡಿರುವ, ʻಭಾರತೀಯ ಚಿಂತನೆಯಲ್ಲಿ ಮನೋವೈಜ್ಞಾನಿಕ ತತ್ತ್ವಗಳುʼ ಎನ್ನುವ ನನ್ನ ಪುಸ್ತಕದ ಮೌಲಿಕ ವಿಮರ್ಶೆಗೆ ನಾನು ಆಭಾರಿಯಾಗಿದ್ದೇನೆ.

ಬಹುಮುಖಿ ಆಸಕ್ತಿಯೊಂದಿಗೆ ಆಳವಾದ ಅಧ್ಯಯನ ಕೂಡಿರುವ ಜ್ಯೋತ್ಸ್ನಾರವರ ಚಿಂತನೆ ಹಾಗೂ ಬರಹಗಳು ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ವಿಸ್ತೃತವಾಗಿ ಕಾಣುತ್ತವೆ. ಕೊಂಕಣಿ ಭಾಷೆಯಲ್ಲಿಯೂ ಅವರ ಬರಹಗಳು ವಿಸ್ತಾರಗೊಂಡಿದೆ.



The author (right-most) with Dr. Jyotsna Kamat (third from right) at the relase of her book


ನನಗೆ ಜ್ಯೋತ್ಸ್ನಾರವರ ಪರಿಚಯವಾದಾಗ, ಅವರು ತಮ್ಮ ಮಲ್ಲೇಶ್ವರದ ಮನೆಯ ತುಂಬ ಹರಡಿದ್ದ ಪುಸ್ತಕಗಳ ಹಾಗೂ ಮನಸ್ಸಿನಲ್ಲಿ ತುಂಬಿದ್ದ ಚಿಂತನೆಗಳ ಮಹಾಪೂರದೊಂದಿಗೆ ಉಲ್ಲಸಿತರಾಗಿ ಕಂಡರು. ಹಲವು ಪುಸ್ತಕಗಳಿಗೆ ಯಥೋಚಿತ ಸುಂದರ ಚಿತ್ರಗಳನ್ನು ಒದಗಿಸಿದ್ದ ಅವರ ಪತಿ, ದಿವಂಗತ ಡಾ.ಕೃಷ್ಣಾನಂದ ಕಾಮತ್‌ರನ್ನು ಹೆಮ್ಮೆಯಿಂದ ನನಗೆ ಪರಿಚಯಿಸಿದರು. ಡಾ.ಕೃಷ್ಣಾನಂದ ಕಾಮತ್ ಅವರು ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿತವಾದ ಹೆಸರು. ಅವರನ್ನು ನೋಡಲಾಗಲಿಲ್ಲವಲ್ಲ ಎನ್ನುವ ಖೇದ ಇಂದಿಗೂ ಕಾಡುತ್ತದೆ. ಅವರದ್ದು ಅನುರೂಪ ದಾಂಪತ್ಯ.

ಭಾರತೀಯ ಸಂಸ್ಕೃತಿಯ ವಿವಿಧ ಮುಖಗಳ ಪರಿಚಯ ಮಾಡಿಸುವ ಜ್ಯೋತ್ಸ್ನಾ ಹಾಗೂ ಅವರ ಪತಿ ಕಾಮತ್ ರ ಚಿತ್ರಗಳನ್ನು ಮತ್ತು ಬರಹಗಳನ್ನು ʻಕಾಮತ್‌ ಪಾಟ್‌ ಪೋರಿʼ (www.kamat.com) ಎನ್ನುವ ಅಂತರ್ಜಾಲ ವೇದಿಕೆಯಲ್ಲಿ ಕಾಣಬಹುದು. ಅದನ್ನು ಇಂದಿನ ಕಾಲಮಾನಕ್ಕೆ ಅನುಗುಣವಾಗಿ ಪ್ರಪಂಚದೆಲ್ಲೆಡೆ ಆಸಕ್ತರಿಗೆ ತಲುಪುವಂತೆ ಮಾಡುತ್ತಿರುವ ಅಮೆರಿಕೆಯಲ್ಲಿ ನೆಲೆಸಿರುವ ಅವರ ಮಗ ವಿಕಾಸನ ಕಾರ್ಯ ವ್ಯಾಪ್ತಿ ಅಗಾಧವಾದುದು.

ಬಹಳಷ್ಟು ಬಾರಿ ಜ್ಯೋತ್ಸ್ನಾ ರವರ ಸ್ನೇಹ ಪೂರ್ಣ ಆತಿಥ್ಯವನ್ನು ಸವಿದ ನಾನು ಹಾಗೂ ನನ್ನ ಪತಿ, ಬಿ.ಎಸ್.ಮನೋಹರ್‌ ಅವರು ತೋರುತ್ತಿದ್ದ ವಾತ್ಸಲ್ಯಕ್ಕೆ ಮಾರುಹೋಗಿದ್ದೇವೆ. ನಾವು ಹೊರ ರಾಷ್ಟ್ರಗಳಿಗೆ ಸಮ್ಮೇಳನಗಳಿಗೆ ಹೋಗಿ ಬಂದ ಕೂಡಲೇ, ಅಲ್ಲಿನ ವಿಚಾರಗಳನ್ನು ಆಸ್ಥೆಯಿಂದ ಕೇಳಿ ನಮ್ಮ ಚಿತ್ರಗಳನ್ನು ನೋಡಿ ಒಬ್ಬ ಹತ್ತಿರದ ಗೆಳತಿಯಾಗಿ ಬೆನ್ನುತಟ್ಟಿ ಪುಸ್ತಕ ರೂಪದಲ್ಲಿ ಬರಲಿ ಎಂದು ಆಶಿಸುತ್ತಿದ್ದರು.

ಅವರ ಆಶಯ ಫಲಿಸಿ ನಮ್ಮ ಪುಸ್ತಕ ʻಸಾಗರದಾಚೆ ಹರಡಿರುವ ಭಾರತೀಯ ಸಂಸ್ಕೃತಿʼ ಲೋಕಾರ್ಪಣೆ ಆದದ್ದು ೨೦೧೯ ಜೂನ್‌ ೧೧. ಆರೋಗ್ಯದ ಸಮಸ್ಯೆ ಇದ್ದರೂ ಪ್ರೀತಿಯಿಂದ ಬಂದು ನಮ್ಮ ಪುಸ್ತಕದಲ್ಲಿರುವ ಮೌಲಿಕ ವಿಚಾರಗಳನ್ನು ಹಾಗೂ ತತ್ಸಂಬಂಧಿತ ಐತಿಹಾಸಿಕ ಸಂಗತಿಗಳನ್ನು ದಾಖಲೆ ಸಹಿತ ಪ್ರಸ್ತಾಪಿಸಿದರು. ನಾನು ತಿಳಿದಂತೆ, ಅವರಿಗೆ ಅತ್ಯಂತ ಪ್ರಿಯವಾದದ್ದು ಇತಿಹಾಸ. ಅಂದು, ಅವರು ದಕ್ಷಿಣ ಕೊರಿಯಾದ ಅವರ ಸೊಸೆ ಹಿರಿಯುಂಗ್‌ ಕಿಮ್ ಬಗ್ಗೆ ಬಹಳ ಸಂತಸದಿಂದ ಹೇಳಿದ ಮಾತು ಕೂಡ ಇತಿಹಾಸದ ಸಂಗತಿಯೇ. ಭಾರತದಿಂದ ದಕ್ಷಿಣ ಕೊರಿಯಾಗೆ ಬಂದಿದ್ದ ಮಹಾ ಯೋಧ ಕೌಂಡಿನ್ಯನ ಬಗ್ಗೆ ಸೊಸೆ ಹೇಳಿದಾಗ, ಕೌಂಡಿನ್ಯ ಗೋತ್ರದ ತಮ್ಮಿಬ್ಬರನ್ನು ಪ್ರಾಗ್‌ ಇತಿಹಾಸ ಜೋಡಿಸಿರುವುದನ್ನು ತಿಳಿದು ಸಂತಸವಾಯಿತು ಎನ್ನುತ್ತಾ ಅಂತಹ ಹಲವು ವಿಚಾರಗಳನ್ನು ನಮ್ಮೊಂದಿಗೆ ಪ್ರಸ್ತಾಪಿಸಿದರು.


ಕನ್ನಡ – ಇಂಗ್ಲಿಷ್‌ ಭಾಷೆಗಳಲ್ಲಿ ಜ್ಯೋತ್ಸ್ನಾ ರವರು ರಚಿಸಿರುವ ಮೌಲಿಕ ಕೃತಿಗಳ ಪಟ್ಟಿ ಸಂಖ್ಯೆಯಲ್ಲೂ, ವಿಚಾರ ಸಮೃದ್ಧಿಯಲ್ಲಿಯೂ ಅಗಾಧವಾದುದು. ಅವರ ಮನಸ್ಸಿನಲ್ಲಿ ತುಂಬಿದ್ದ ಮತ್ತಷ್ಟು ವಿಚಾರಗಳು ಹೊರಬರಲು ತವಕಿಸುತ್ತಿದ್ದವು. ಗಂಭೀರ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಜ್ಯೋತ್ಸ್ನಾರ ಮನೋಭಿತ್ತಿಯಿಂದ ಹೊರಬಂದ ʻಕಲಕತ್ತಾ ದಿನಗಳುʼ ಇತಿಹಾಸದ ಹಲವು ಪುಟಗಳನ್ನು ತೆರೆದಿಟ್ಟಿವೆ. ಈ ವರ್ಷ ಜನವರಿಯಂದು ಪ್ರಕಟವಾದ ಇದು ಇತಿಹಾಸದ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಬಹು ದೊಡ್ಡ ಆಕರವಾಗಿದೆ. ಅವರ ಮೇರು ಸಾಧನೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಆಧಾರಸಹಿತವಾಗಿ ವಿಚಾರಗಳನ್ನು ಮುಂದಿಡುವ ಅವರ ಎಲ್ಲಾ ಕೃತಿಗಳ ಆಳವಾದ ಅಧ್ಯಯನ ನಡೆಯಬೇಕೆಂಬುದು ಸಹೃದಯರ ಆಶಯ.

See Also:

  • Articles by Dr. Jayanti Manohar
  • Autobiography of Jyotsna Kamat (Incomplete)
    •