ವರ್ಗ

ಮುಂಜಾವಿನ ಏಳು ಗಂಟೆಗೆ ಪಾಠವಿತ್ತು. ಯಾವ ಕಟ್ಟಡ, ಯಾವ ಖೋಲಿ ಎಂದು ಹುಡುಕಿ ತೆಗೆಯುವದರಲ್ಲಿ ೧೫ ನಿಮಿಷಗಳು ಕಳೆದವು. ವರ್ಗ ಹೊಕ್ಕಾಗ ಏಳು ಹೊಡೆದು ಐದು ನಿಮಿಷಗಳಾಗಿದ್ದವು. ಮೊದಲ ದಿನ ಹೀಗೆ ತಡಮಾಡಿ ಹೋದರೆ ಶಿಕ್ಷಕರು ಏನು ಅಂದುಕೊಂಡಾರು ಎಂದು ಅಳುಕಿದ್ದೆ. ವರ್ಗದೊಳಗೆ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲಿ ಮಾತುಕತೆ ನಡೆಸಿದ್ದರು. ಬಹುಶಃ ಬೇಸಿಗೆ ರಜೆಯನ್ನು ಹೇಗೆ ಕಳೆದೆ. ಯಾವ ಹೊಸ ಹುಡುಗಿಯ ಸಂಗಡ `date’ (ದಿನಾಂಕ)ಮಾಡಿದೆ. ಎಷ್ಟು ಹಣ ಸಂಪಾದಿಸಿದೆ ಇತ್ಯಾದಿ ಅವರ ಸಂಭಾಷಣೆಯ ವಿಷಯವಾಗಿರಬೇಕು. ವಿದ್ಯಾರ್ಥಿಗಳು ಬಾಯಲ್ಲಿಟ್ಟು ಪೈಪನಿಂದ ಒಂದೇ ಸವನೆ ಹೊಗೆ ಹೊರಹೊಮ್ಮುತ್ತಿತ್ತು. ಆಶ್ರಮದ ಹೋಮ-ಹವನದ ಧೂಮದಂತೆ! ಹಿಂದಿನ ಕುರ್ಚಿಯಲ್ಲಿ ಕುಳಿತವ, ಮುಂದಿನ ಕುರ್ಚಿಯಲ್ಲಿ ಕುಳಿತವನ ತಲೆಯ ಮೇಲೆ ಎತ್ತರಿಸಿ ಕಾಲು ಇಟ್ಟಿದ್ದ. ಶಿಸ್ತು ಒಂದು ಬಿಟ್ಟು ಉಳಿದದ್ದೆಲ್ಲ ಅಲ್ಲಿತ್ತು.

ಶಿಕ್ಷಕರು ಬಂದ ನಂತರವೇ ಒಳಗೆ ಹೋದರಾಯಿತೆಂದು ಹೊರಗೇ ನಿಂತೆ. ಇನ್ನೊಂದು ಐದು ನಿಮಿಷ ಕಳೆದಿರಬೇಕು ಯಾರೋ ಒಳಗಡೆ ಪಾಠ ಹೇಳಿಕೊಡುತ್ತಿರುವಂತೆ ಭಾಸವಾಯಿತು. ಲಗುಬಗೆಯಿಂದ ಒಳಗೆ ಧಾವಿಸಿದೆ. ಸುತ್ತುವರೆದು ಕುಳಿತಿದ್ದ ವಿದ್ಯಾರ್ಥಿಗಳ ನಡುವೆ ಅಡ್ಡಡ್ಡಾಗಿ ಕುಳಿತ ಶಿಕ್ಷಕರು, ಪತ್ನಿಯೊಂದಿಗೆ ಸಂಭಾಷಿಸುವ ತೆರದಲ್ಲಿ ಪಾಠ ನಡೆಸಿದ್ದರು! ತಡಮಾಡಿ ಹೋದದ್ದಕ್ಕೆ ನಾಚಿಕೆಯಾಯಿತು. ಆದರೆ ಯಾರೂ ಏನೂ ಅನ್ನಲಿಲ್ಲ. ನನ್ನ ನಂತರವೂ ಹತ್ತು ಹದಿನೈದು ವಿದ್ಯಾರ್ಥಿಗಳು ಬರುತ್ತಲೇ ಇದ್ದರು. ಹತ್ತಿರ ಕುಳಿತ ವಿದ್ಯಾರ್ಥಿಯೊಬ್ಬ ಕಿಸೆಯಿಂದ ಕಾಗದದ ಕರವಸ್ತ್ರ ತೆಗೆದು ತನ್ನ ಮೂಗಿನ ಮ್ಯುನ್ಸಿಪಾಲ್ಟಿಯ ಸಫಾಯಿ ಪ್ರಾರಂಭಿಸಿದ. ಬಾರದ ಸಿಂಬಳಕ್ಕಾಗಿ ಸೂಂಸೂಂ ಶಂಖನಾದ ಪ್ರಾರಂಭಿಸಿದ. ತನ್ನಿಂದ ಇಡೀ ವರ್ಗಕ್ಕೆ ತೊಂದರೆಯಾಗುತ್ತದೆಂದು ಕ್ಷಣಮಾತ್ರವೂ ಆತ ಯೋಚಿಸಿದಂತೆ ತೋರಲಿಲ್ಲ. ನಂತರ ಕಾಗದವನ್ನು ಮುದ್ದೆ ಮಾಡಿ ತಿರುಗಿ ಜೇಬಿಗೆ ತುರುಕಿದ. ಮುಂದೆ ಕುಳಿತ ವಿದ್ಯಾರ್ಥಿನಿಯೊಬ್ಬಳು ಭರದಿಂದ ಕರವಸ್ತ್ರದಲ್ಲಿ ಉಗುಳಿ ಅದನ್ನು ಬ್ಯಾಗಿನಲ್ಲಿ ಇಟ್ಟಳು. ಪಾಠ ನಡೆದೇ ಇತ್ತು.

ವಿದ್ಯಾರ್ಥಿಯೋರ್ವನು ಶಿಕ್ಷಕನಿಗೆ ಪ್ರಶ್ನೆ ಕೇಳಿದ. ಹೊಲಸಾದೊಂದು ಪ್ಯಾಂಟು, ಮಿಲಟರಿಯವರು ಧರಿಸುವಂತಹ ಒರಟು ಬೂಟು, ಆರಾಮವಾಗಿ ಖುರ್ಚಿಯಲ್ಲಿ ಆರೂಢನಾಗಿ, ಹಲ್ಲುಗಳಲ್ಲಿ ಕಚ್ಚಿ ಹಿಡಿದ ಪಾಯಿಪಿನಿಂದ ಹೊಗೆಯನ್ನು ಬಿಡುತ್ತ, ಮೊದಲೇ ತಿಳಿಯದ ಇಂಗ್ಲೀಷನಲ್ಲಿ ಇನ್ನುಷ್ಟು ತಿಳಿಯದಂತೆ ಪ್ರಶ್ನೆ ಕೇಳಿದ. ಆತನ ಹಾವಭಾವದಿಂದ ಅವನಿಗೆ ಹೇಳಬೇಕಾಗಿದ್ದನ್ನು ಮಾತಿನಲ್ಲಿ ವ್ಯಕ್ತಮಾಡಲು ಬಾರದೆಂದು ತಿಳಕೊಂಡೆ. ವಿದ್ಯಾರ್ಥಿಯೊಬ್ಬ ಅವನು ಹೇಳಬೇಕಾದುದನ್ನು ಕರೆ ಹಲಿಗೆಯ ಮೇಲೆ ಬರೆದು ವಿವರಿಸಲು ಹೇಳಿದ. ಆತನು ಎದ್ದು ಬಲಗೈ ಪಾಯಿಪಿಗೆ ಬೇಕಾದ್ದರಿಂದ ಎಡಗೈಯಿಂದ ಇನ್ನೂ ಅ, ಆ, ಬರೆಯಲು ಕಲಿಯುವ ವಿದ್ಯಾರ್ಥಿಯಂತೆ ಕರಿ ಹಲಿಗೆಯ ತುಂಬ ಅಡ್ಡಡ್ಡವಾಗಿ ದೊಡ್ಡ ಸಣ್ಣ (capitals and italics) ಬಳಕೆಯಲ್ಲಿರುವ ಯಾವತ್ತೂ ಇಂಗ್ಲೀಷ್ ಕಾಗುಣಿತಾಕ್ಷರಗಳನ್ನು ಹೇಗೇಗೊ ಜೋಡಿಸಿ ಬರೆಯಲಾರಂಭಿಸಿದ. ಈ ತಮಾಷೆಯನ್ನು ನೋಡಿ, ಬಂದ ನಗೆಯನ್ನು ಕಷ್ಟದಿಂದ ತಡೆದುಕೊಂಡೆ. ಶಿಕ್ಷಕನಿಗೆ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರ ಕೊಡಲಾಗಲಿಲ್ಲ, ನಾಳೆ ಹೇಳುವೆನೆಂದ.

ವಿದ್ಯಾರ್ಥಿಗಳು ತಮ್ಮ ಎಲ್ಲ ಪುಸ್ತಕಗಳನ್ನು ವರ್ಗಕ್ಕೆ ಹೊತ್ತು ತರುವದು ವಾಡಿಕೆಯೆಂದು ತೋರಿತು. ವರ್ಗದಲ್ಲಿ ಕುಳಿತು ಪುಸ್ತಕದಲ್ಲಿಯ ಮುಖ್ಯ ಮುದ್ದೆಗಳನ್ನು ಗೆರೆಯೆಳೆದು ಗುರುತು ಹಾಕುತ್ತಲೇ ಇರುತ್ತಾರೆ. ಕೆಲವರ ಪುಸ್ತಕಗಳಂತೂ ಗೆರೆಯಿಂದಲೇ ತುಂಬಿಹೋಗಿರುತ್ತವೆ. ಇಂತಹವರಿಗಾಗಿ ಪ್ರಕಾಶಕರೇ ಇಡೀ ಪುಸ್ತಕದಲ್ಲಿ ಗೆರೆಗಳನ್ನು ಮುದ್ರಿಸಿ ಮಾರುವುದು
“ಒಳ್ಳೆಯದೆಂದು ತೋರುತ್ತದೆ. ಕುರ್ಚಿಯಲ್ಲಿ ಕುಳಿತಾಗ ನೆಲಕ್ಕೆ ಕಾಲು ತಾಗದ ಪುಟಾಣಿಯೊಬ್ಬಳು ತನ್ನ ಪುಸ್ತಕಗಳನ್ನೇ `ಪಾದಪೀಠ’ವಾಗಿ ಮಾಡಿಕೊಂಡು ಅದರ ಮೇಲೆ ಕಾಲು ಚಾಚಿ ಸುಖವಾಗಿ ಕುಳಿತಿದ್ದಳು. ಇಲ್ಲಿಯ ಬಹುಸಂಖ್ಯಾತ ವಿದ್ಯಾರ್ಥಿಗಳು ಪೆನ್ನನ್ನು ಉಪಯೋಗಿಸುವಂತೆ ತೋರಲಿಲ್ಲ. ಪೆನ್ಸಿಲುಗಳಿಂದಲೇ ಬರೆಯುತ್ತಾರೆ. ಆದರಿಂದ ಕಿಸೆಯಲ್ಲಿ ಅರ್ಧ ಡಜನ್ ಕೆತ್ತಿದ ಪೆನ್ಸಿಲ್ಗಳು ಇದ್ದೇ ಇರುತ್ತವೆ. ಪ್ರತಿಯೊಂದು ವರ್ಗದಲ್ಲಿ ಪೆನ್ಸಿಲ್ ಹರಿತ ಮಾಡುವ ಸಾಧನಗಳನ್ನಿಟ್ಟಿರುತ್ತಾರೆ. ಪೆನ್ಸಿಲಿನ ಪೂರೈಕೆಯೂ ಇರುತ್ತದೆ. ಅದರ ಲೆಕ್ಕವೇ ವಿದ್ಯಾರ್ಥಿಗಳಿಗಿರುವುದಿಲ್ಲ. ಡಿಕ್ಕನು ಬಾಬ್ನನ್ನು ಕರೆದಾಗ ಬಾಬ್ನು ನೋಡದಿದ್ದರೆ ಅವನತ್ತ ಪೆನ್ಸಿಲ್ ಒಗೆಯುವ. ಹೀಗೆ ಒಗೆದ ಪೆನ್ಸಿಲ್ಗಳನ್ನು ತಿರುಗಿ ಹೆಕ್ಕುವ ಗೋಜಿಗೂ ಹೋಗುವುದಿಲ್ಲ. ಭಾರತದಿಂದ ಹೋದ ಮೊದಲಲ್ಲಿ ನಾನು ನೂರಾರು ಪೆನ್ಸಿಲ್ಗಳನ್ನು ಕೂಡಿಹಾಕಿದ್ದೆ.

ಒಂದು ವರ್ಗ ಮುಗಿದು, ಇನ್ನೊಂದು ಭಾಷಣವೂ ಅದೇ ಕೋಣೆಯಲ್ಲಿ ಇದ್ದದ್ದರಿಂದ ಅಲ್ಲೇ ಕುಳಿತೆ. ವಿದ್ಯಾರ್ಥಿಗಳೆಲ್ಲ ಎದ್ದು ಹೋಗಿ ಕೈಯಲ್ಲಿ ಆಯ್ಸಕ್ರೀಮ್, ಕೆಂಡಿ-ಬಾರ್, ಬಿಸ್ಕೀಟು, ಚ್ಯೂಯಿಂಗ್ಗಮ್, ಚಾಕಲೇಟ್ ಮುಂತಾದವನ್ನು ಹಿಡಿದು ತಿನ್ನುತ್ತಲೇ ಒಳಗೆ ಬಂದರು. ಕುಮಾರಿಯರು ತಮ್ಮ ತುಟಿ-ಬಣ್ಣ ಸರಿಯಾಗಿದೆಯೇ ಎಂದು ಪರ್ಸಿನಿಂದ ಕನ್ನಡಿಯೆಳೆದು ಖಚಿತಪಡಿಸಿಕೊಂಡರು. ಒಬ್ಬಿಬ್ಬರು ಎದ್ದು ಹೋಗಿ ಸರಿಪಡಿಸಿಕೊಂಡು ಬಂದರು. ಶಿಕ್ಷಕರು ಬಂದ ಮೇಲೂ ವಿದ್ಯಾರ್ಥಿಗಳು ಬರುತ್ತಲೇ ಇದ್ದರು. ಹಾಜರಿ-ಗಿಜರಿಯ ಪರಿಪಾಠವಿಲ್ಲ. ಮುದ್ರಿಸಿ ತಂದ ಹಾಳಿಗಳನ್ನು ಎಲ್ಲರಿಗೂ ಹಂಚಿದರು. ಮತ್ತೆ-ಕ್ಲಾಸು ಸುರುವಾಯಿತು. ಹೊಸದಾಗಿ ಬಂದವರಿಗೆ ಇದೆಲ್ಲ ಅಶಿಸ್ತು, ಬೇಜವಾಬ್ದಾರಿಯೆಂದು ತೋರಿದರೂ ಈ ಅನೌಪಚಾರಿಕತೆ ಹಿತವಾಗಿದ್ದಂತೆ ಅನಿಸಿತು. ಆ ಕ್ಷಣ, ಪಾಠವೆಂದರೆ ಕಾಟವಾಗದೇ ಮಿತ್ರಗೋಷ್ಠಿಯಂತೆ ನಡೆದಿರುತ್ತದೆ. ವರ್ಗ ಮುಗಿದ ನಂತರ ತಡವಾಗಿ ಬಂದದ್ದಕ್ಕೆ ಶಿಕ್ಷಕರ ಕ್ಷಮೆ ಕೇಳೋಣವೆಂದು ಅವರನ್ನು ಹುಡುಕಿಕೊಂಡು ಹೊರಟೆ. ಅಮೇರಿಕೆಯಲ್ಲಿ ಎಲ್ಲ ಕೋಣೆಗಳ ಬಾಗಿಲು ಮುಚ್ಚಿರುವುದು ಸಾಮಾನ್ಯ ವಾಡಿಕೆ. ತನ್ನಷ್ಟಕ್ಕೇ ಮುಚ್ಚುವ ಬಾಗಿಲುಗಳಿರುತ್ತವೆ. ಒಂದು ಬಾಗಿಲಿನ ಮೇಲೆ `ಪ್ರಾಧ್ಯಾಪಕರು’ (Faculty) ಎಂದು ಬರೆದಿತ್ತು. ಹೋಗಿ ಎರಡು ಮೂರು ಸಲ ಬಾಗಿಲು ಬಡಿದೆ. ಯಾವ ಉತ್ತರವೂ ಬಾರದಿದ್ದರಿಂದ ಬಾಗಿಲು ನೂಕಿಕೊಂಡು ಒಳಗೆ ಹೋದೆ. ಅಲ್ಲಿ ಶಿಕ್ಷಕರ ಬದಲಾಗಿ ಕಮೋಡ್, ನೀರು, ಟಾವೆಲ್ಗಳು ನನ್ನನ್ನು ಸ್ವಾಗತಿಸಿದವು! “ಪ್ರಾಧ್ಯಾಪಕರಿಗಾಗಿ ಮೂತ್ರಾಲಯ” ಎಂದು ಬರೆಯಲಾರದೇ ನನ್ನನ್ನು ಮೋಸಗೊಳಿಸಿದ್ದರವರು!

ನಾಮಾಂತರ