ಹಂಪಿಯ ಉಬ್ಬು ಶಿಲ್ಪಗಳಲ್ಲಿ ಸಾಮಾಜಿಕ ಜೀವನ

ವಿಜಯನಗರ ಬಹುಸಂಖ್ಯಾತ ಕಟ್ಟಡಗಳಿಗಾಗಿ ಬಳಸಿದ ಗಟ್ಟಿ ಪಾಷಾಣದ ಮೇಲೆ ರಾಮಾಯಣ, ಮಹಾಭಾರತ, ಶಿವಪುರಾಣ, ಭಾಗವತ ಮೊದಲಾದ ಗ್ರಂಥಗಳ ಮೇಲೆ ಆಧಾರಿತ ದೇವಾಧಿ ದೇವತೆಗಳನ್ನು ಕೆತ್ತಲಾಗಿದೆ. ಇವುಗಳನ್ನೆಲ್ಲ ಒಂಟಿ ಉಬ್ಬು ಶಿಲ್ಪಗಳನ್ನಾಗಿಯೋ ಇಲ್ಲವೇ ಚಿತ್ರ ಪಟ್ಟಿಕೆಗಳನ್ನಾಗಿಯೋ ರೂಪಿಸಲಾಗಿದೆ.

 ಒಂಟೆ ಸವಾರರು,ಅಶ್ವಾರೋಹಿಗಳು

ಮಹಾನವಮಿಯ ದಿಬ್ಬವನ್ನು ಕೃಷ್ಣದೇವರಾಯನ ದಿಗ್ವಿಜಯದ ಸಂಕೇತವಾಗಿ ಕ್ರಿ.ಶ ೧೫೧೩ ರಲ್ಲಿ ರಚಿಸಲಾಯಿತು. ಇಂದಿಗೂ ತಕ್ಕ ಮಟ್ಟಿಗೆ ಉಳಿದು ಬಂದಿರುವ ಅಡಿಪಾಯದ ಸುತ್ತಲೂ ಎಂಟು ಹತ್ತು ಸ್ತರಗಳಲ್ಲಿ  ಉಬ್ಬು ಚಿತ್ರಗಳ ಪಟ್ಟಿಕೆಗಳನ್ನು ಕಾಣಬಹುದಾಗಿದೆ. ಆನೆಗಳನ್ನು ಪಳಗಿಸುವವರು, ಕುದುರೆ, ಒಂಟೆಗಳಿಗೆ ತರಬೇತಿ ಕೊಡುವವರು, ಅಶ್ವಾರೋಹಿಗಳು, ಮಾವುತರು, ಒಂಟೆ ಸವಾರರು, ನಾಯಿಗಳೊಂದಿಗೆ ಹೊರಟ ಬೇಡರು, ಗೃಹಕೃತ್ಯಗಳಲ್ಲಿ ತೊಡಗಿದ ಸ್ತ್ರೀಯರು, ಅಲಂಕಾರದಲ್ಲಿ ಮೈ ಮರೆತ ಯುವತಿಯರು ಮುಂತಾದವರನ್ನು ಕಟೆಯಲಾಗಿದೆ. ಸ್ತ್ರೀ ಪುರುಷರ ವಾದ್ಯವೃಂದ, ನೃತ್ಯ, ಸಂಗೀತ ಮೇಳಗಳನ್ನು ಕಾಣಬಹುದಾಗಿದೆ. ಹಜಾರ ರಾಮಸ್ವಾಮಿ ದೇವಾಲಯದ ಪ್ರಾಕಾರದ ಗೋಡೆಯ ಹೊರಭಾಗವನ್ನು ಐದು ಪಟ್ಟಿಗಳಲ್ಲಿ ವಿಂಗಡಿಸಿ, ಅವುಗಳಲ್ಲಿ ಭವ್ಯಾಕಾರದ ಉಬ್ಬು ಶಿಲ್ಪಗಳ ಪಟ್ಟಿಗಳನ್ನು ನಿರ್ಮಿಸಲಾಗಿದೆ.

ಅಶ್ವಾರೋಹಿಗಳು, ಮಾವುತರು, ಆನೆಗಳು

ಹಿಂದೂ ಸಾಮ್ರಾಜ್ಯದಲ್ಲಿ ಮಹಮ್ಮದೀಯರಿಗೂ ಅಗ್ರಸ್ಥಾನವಿತ್ತು ಎಂಬುದನ್ನು ಗಮನಕ್ಕೆ ತರುವ ಅನೇಕಾನೇಕ ಶಿಲ್ಪಗಳನ್ನು ವೀಕ್ಷಿಸಬಹುದಾಗಿದೆ. ಶ್ರೀ ವಿಠ್ಠಲ ದೇವಸ್ಥಾನ, ಶ್ರೀ ಕೃಷ್ಣ ದೇವಾಲಯ, ಅಚ್ಯುತರಾಯನ ದೇವಸ್ಥಾನ, ಮೊದಲಾದ ಕಡೆಯಲ್ಲಿ ಒಂಟಿ ಚಿತ್ರಪಟ್ಟಿಕೆಗಳು ಕಣ್ಣಿಗೆ ಬೀಳುವವು. ಕಲ್ಲಿನ ರಥದ ಅಡಿಯಲ್ಲಿಯೂ ಉಬ್ಬು ಶಿಲ್ಪ ಪಟ್ಟಿಕೆಗಳಿವೆ.

ಕಾದಾಡುವ ಸೈನಿಕರು

ಹಂಪಿಯ ದೇವಾಲಯಗಳ ಮಂಟಪಗಳಲ್ಲಿ ಏಕಶಿಲೆಯಲ್ಲಿ ನಿರ್ಮಿತವಾದ ಕಂಬಗಳಲ್ಲಿ ಅನೇಕಾನೇಕ ಒಂಟಿ ಉಬ್ಬು ಚಿತ್ರಗಳನ್ನು ಕೆತ್ತಲಾಗಿದೆ. ಅವುಗಳಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವವರು, ಸುಲಭವಾಗಿ ಗುರುತಿಸಬಹುದು. ನೆಲದ ಮೇಲೆ ನೀಳ ಜಡೆ ಹರಿಯ ಬಿಟ್ಟ ನರ್ತಕಿ, ಕುಸ್ತಿಯ ಪೇಚು ಹಿಡಿದ ಹೆಂಗಳೆಯರು, ಅಪ್ಪುಗೆಯಲ್ಲಿ ಮೈಮರೆತ ದಂಪತಿಗಳ ಆಕರ್ಷಕ ಶಿಲ್ಪಗಳಿವೆ. ಇಂಥ ಸಹಸ್ರಾರು ಶಿಲ್ಪಗಳು ಇನ್ನಿತರ ಎಡೆಗಳಲ್ಲಿರುವ ವಿಜಯನಗರ ಕಾಲೀನ ದೇವಾಲಯಗಳಲ್ಲಿಯೂ ಇವೆ. ಇವುಗಳಲ್ಲಿ ಕಾಣ ಬರುವ ಕೇಶಾಲಂಕಾರ, ಆಭರಣ , ಬಟ್ಟೆ ಬರೆ, ವೇಷ ಭೂಷಣಗಳನ್ನು ಆಳವಾಗಿ ಅಭ್ಯಸಿಸಿದರೆ ಅಂದಿನ ಸಾಮಾಜಿಕ ಜೀವನದ ಮೇಲೆ ಹೊಸ ಬೆಳಕನ್ನು ಚೆಲ್ಲ ಬಹುದಾಗಿದೆ.

ಡಾ. ಜ್ಯೋತ್ಸ್ನಾ ಕಾಮತ್