ಸನ್ಮಾನ್ಯ ಬುರ್ಡೆ ಅವರ ಮರೆಯಲಾಗದ ಸವಿ ನೆನಪುಗಳು

ಡಾ. ಜ್ಯೊತ್ಸ್ನಾ ಕಾಮತ್ ಮತ್ತು ಡಾ ಸುಷಮಾ ಆರೂರ್ ಅವರ ತಂದೆ, ಗಣೇಶ ವಿಶ್ವೇಶ್ವರ ಬುರ್ಡೆ ಓರ್ವ ಅಪರೂಪದ ಸರಕಾರಿ ನೌಕರರು, ತುಂಬ ಓದಿಕೊಂಡವರು. ಅದು ಅವರ ದೌರ್ಬಲ್ಯ ಎನಿಸುವಷ್ಟು ಪುಸ್ತಕಗಳಿಗೆ ದುಡ್ಡು ಸುರಿಯುತ್ತಿದ್ದರು. ಜೊತೆಗೆ ಇತರರಿಗೆ ಇಂಗ್ಲಿಷ್ ಹೇಳಿಕೊಡುವದು ಅವರ ಹಾಬಿ ಆಗಿತ್ತು. ಅವರ ಕಿರಿಯ ಸಹೋದ್ಯೋಗಿಯೊಬ್ಬರು ಅವರನ್ನು ನೆನಪಿಸಿಕೊಂಡ ಬಗೆ ಇಲ್ಲಿದೆ.

ನನ್ನ ಈ ಹಿಂದಿನ ಜೀವನದ ನೌಕರಿ ವೃತ್ತಿಯ ಆದಿ ಭಾಗದ ಕೆಲವು ಸವಿ ನೆನಪುಗಳನ್ನು ತಮ್ಮಲ್ಲಿ ಹಂಚಿಕೊಳ್ಳಲು  ಬಯಸುತ್ತೇನೆ. ನಾನು ೦೧/೦೮/೧೯೫೩ ನೇ ಇಸವಿಯಲ್ಲಿ ಆಗಿನ ಮಹಾರಾಷ್ಟ್ರ ಅಂಚೆ ವೃತ್ತದಲ್ಲಿ ಕಾರಕೂನನಾಗಿ ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದೆನು. ಆಗ ಗುಜರಾತ ಪ್ರಾಂತದಲ್ಲಿ ಸೌರಾಷ್ಟ್ರವೂ ಒಂದು ಭಾಗವಾಗಿತ್ತು. ನಾನು ಅಂಚೆ ಖಾತೆಯಲ್ಲಿ ಒಟ್ಟು ೩೯ ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ ತಾ. ೩೧/೦೭/ ೧೯೯೨ ನೇ ಇಸವಿಯಲ್ಲಿ ನಿವೃತ್ತಿ ಹೊಂದಿದೆ. ೧೯೫೩ ರಿಂದ ೧೯೫೬ ನೇ ಇಸವಿಯ ವರೆಗೆ ಅಂದರೆ ಮೂರು ವರ್ಷಗಳ ಸೇವೆಯನ್ನು  ಸೌರಾಷ್ಟದಲ್ಲಿ ಸಲ್ಲಿಸಿ ೧೯೫೬ ನೇ ಇಸವಿಯಲ್ಲಿ ಊನಾ  ( ಸುರತ್) ದಿಂದ ಕಾರವಾರ ಹೆಡ್ ಪೋಸ್ಟ ಆಫೀಸಿಗೆ ವರ್ಗಾವಣೆಯಾಗಿ ಬಂದೆನು.

Burde Master

Burde Master

ನಮ್ಮ ತಂದೆ ಶ್ರೀ ಗಣೇಶರಾವ್ ಬುರ್ಡೆ

೧೯೫೪ ನೇ ಇಸವಿಯ  ಜನೇವರಿಯಿಂದ  ಅಕ್ಟೊಬರದ ವರೆಗೆ  ನನ್ನ ತಂತಿಯ  ಟ್ರೈನಿಂಗ  ಅಹಮದಾಬಾದ ಟ್ರೈನಿಂಗ ಕೇಂದ್ರದಲ್ಲಿ ಮುಗಿಯಿತು. ತದನಂತರ ಪುನಃ ಪೋರಬಂದರ ಅಂಚೆ ಆಫೀಸಿನಲ್ಲಿ ಕೆಲಸ ಮುಂದುವರೆಸಿದೆ  ನನ್ನದು ಜುನಾಗಡ ಅಂಚೆ ದಿವಿಜನ್ ಆಗಿತ್ತು. ಗುಜರಾತ ಮತ್ತು ಮಹಾರಾಷ್ಟ್ರದಲ್ಲಿದ್ದ  ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂಚೆ ನೌಕರರಿಗೆ  ನಮ್ಮ ನಮ್ಮ ಹೋಮ್ ಡಿವಿಜನ್ ಗೆ ೧೯೫೬ ನೇ ಇಸವಿಯಲ್ಲಿ ನಮ್ಮ ಸ್ವಂತ ಖರ್ಚಿನಿಂದ ( without TA ) ವರ್ಗಾವಣೆ ಮಾಡಿದರು. ಅದು ಸಹ ನಮ್ಮ ಯುನಿಯನ್ ಮುಖಂಡರಾದ ಶ್ರೀ ಟಿ ಆರ್ . ಕುಲಕರ್ಣಿ ಎಂಬವರ ಸತತ ಪ್ರಯತ್ನದಿಂದಾಗಿತ್ತು. ಊನಾದಿಂದ (ಸುರತ್ ) ನನಗೆ ಕಾರವಾರಕ್ಕೆ ವರ್ಗವಾಗಿತ್ತು. ಆಗ ಕಾರವಾರ ಹೆಡ್ ಪೋಸ್ಟ ಆಫೀಸಿನಲ್ಲಿ  ಶ್ರೀ ಜಿ.ವಿ ಬುರ್ಡೆಯವರು ಸುಪರವೈಜರ್ ಆಗಿ ಕೆಲಸ ಮಾಡುತ್ತಿದ್ದರು . ನನಗೆ ಶ್ರೀ ಜಿ.ವಿ ಬುರ್ಡೆಯವರ ಪರಿಚಯ  ೧೯೫೬ನೇ ಇಸವಿಯಲ್ಲಿ ಆದದ್ದು. ಆಗ ನನಗೆ ೨೨ ವರ್ಷ ವಯಸ್ಸು. ಶ್ರೀ ಜಿ.ವಿ ಬುರ್ಡೆಯವರ ಜೊತೆಯಲ್ಲಿ ಶ್ರೀ ಫಾತರಫೇಕರ್ ಎನ್ನುವವರೂ ಬಹುಶ:  ಪೋಸ್ಟಲ್ ಸಿಗ್ನಲರ್ ಆಗಿ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಶ್ರೀ ಬುರ್ಡೆಯವರು ಟೆಲಿಗ್ರಾಫ್ ಸುಪರವೈಜರ್  ಆಗಿದ್ದರು. ೧೯೫೬ ಏಪ್ರಿಲ ತಿಂಗಳಲ್ಲಿ ನನಗೆ ಭಟ್ಕಳಕ್ಕೆ ಸ್ವಂತ ಖರ್ಚಿನಿಂದ ಕಾರವಾರದಿಂದ ವರ್ಗವಾಯಿತು.

ಎಸ್ ಆರ್ ಹೆಗ್ಡೆ

ಬಹುಶಃ ನನ್ನ ವರ್ಗವಾದ ಒಂದೆರಡು ವರ್ಷಗಳ ನಂತರ ಶ್ರೀ ಜಿ.ವಿ ಬುರ್ಡೆಯವರಿಗೂ ಭಟ್ಕಳಕ್ಕೆ ಪೋಸ್ಟಮಾಸ್ಟರ್ ಎಂದು ವರ್ಗವಾಯಿತು.ಅಂದಿನಿಂದ ಶ್ರೀ ಬುರ್ಡೆಯವರು ನನಗೆ ತುಂಬಾ ನಿಕಟವರ್ತಿಯಾದರು. ನಾನು ಅವರನ್ನು ನನ್ನ ಪರಮ ಗುರು ಎಂತಲೇ ಭಾವಿಸುತ್ತೇನೆ. ನನಗೆ ಅವರ ಮೇಲೆ ಪ್ರೀತಿ, ಆದರ ಹಾಗೂ ಗೌರವ ಇನ್ನೂ ಹೆಚ್ಚಾಯಿತು. ನನಗೆ ಹಾಗೂ ನನ್ನ ಸಹೋದ್ಯೋಗಿ ಶ್ರೀ ಆನಂದೂ ದಾಮೋದರ್ ಮಹಾಲೆ ಎನ್ನುವವರಿಗೆ ಶ್ರೀ ಬುರ್ಡೆಯವರು ಪ್ರತಿ ನಿತ್ಯ ಬೆಳಿಗ್ಗೆ ೦೫.೦೦ ಗಂಟೆಯಿಂದ ೦೭೦೦ ಗಂಟೆಯವರೆಗೆ ಇಂಗ್ಲಿಷ್ ಭಾಷೆಯ ಪ್ರಮುಖ ಪುಸ್ತಕಗಳನ್ನು ಓದಿ ತಿಳಿಸಿ ಹೇಳುತ್ತಿದ್ದರು. ಇದರಿಂದ ನಮ್ಮ  ಅಂಗ್ರೇಜಿ ಭಾಷೆ ಸುಧಾರಣೆಗೆ ತುಂಬಾ ಸಹಾಯವಾಯಿತು. ಅವರು ಮೆಟ್ರಿಕ್ಯೂಲೇಟ ಆಗಿದ್ದಾಗ್ಯೂ ಅವರ ಜ್ಞಾನ ಭಂಡಾರ  ಅಗಾಧವಾಗಿತ್ತು. ಅವರ ಬಗ್ಗೆ ನಾವು ಎಷ್ಟು ಪ್ರೀತ್ಯಾದರ , ಗೌರವ ಸಲ್ಲಿಸಿದರೂ ಸಾಲದು. ಅವರು ಈಗ ಈಹಲೋಕವನ್ನು ತ್ಯಜಿಸಿದರೂ ಅವರ ಅಪಾರ   ಕೊಡುಗೆಯ ಬಗ್ಗೆ  ನಾನು ತುಂಬಾ ಚಿರ ಋಣಿಯಾಗಿರುವೆ. ನನ್ನ ಈ ಮೇಲಿನ ಸವಿ ನೆನಪುಗಳು , ನನ್ನ ಜೀವನ ಪರ್ಯಂತ  ಮನಸ್ಸಿನಲ್ಲಿ ಹಸಿರಾಗಿಯೇ ಉಳಿಯುವದು ಹಾಗೂ ಮಾಸದೇ ಇರಲಿ ಎಂತ ಪರಮಾತ್ಮನಲ್ಲಿ ಧೃಢ ಭಕ್ತಿಯಿಂದ ಪ್ರಾರ್ಥಿಸುತ್ತೇನೆ.

ಎಸ್ ಆರ್ ಹೆಗ್ಡೆ

ನಿವೃತ್ತ ಸುಪರಿಂಟೆಂಡೆಂಟ್ ಆಫ್ ಪೋಸ್ಟ್ಸ

ಸತ್ಯಶ್ರೀ ,ಪ್ರಗತಿನಗರ, ಜೋಗ ರಸ್ತೆ

ಸಾಗರ,  ದೂರವಾಣಿ ೯೪೮೮೮೨೨೦೭೮೭೮