“Music is my first love, ಸಾಹಿತ್ಯ ಎರಡನೆಯದು. ಇದು ನನ್ನ ಅಂತರಂಗದ ಮಾತು. ಸಂಗೀತ ಬಿಟ್ಟರೆ ಭಾವ ಪ್ರಚೋದಿಸುವಂತಹ ಬೇರೆ ಯಾವ ಮಾಧ್ಯಮ ಇಲ್ಲ. ಒಂದು ೪೦೦ ಪುಟದ ಕಾದಂಬರಿಯಲ್ಲಿ ೩೦ -೪೦ ಪುಟ ಓದಿದ ಮೇಲೆ ರಸಸ್ಥಾನ ಕಾಣಬಹುದು, ಮಧ್ಯ ಮಧ್ಯ ಕೂಡ ಕಂಡುಬರಬಹುದು. ಆದರೆ ಸಂಗೀತ ಹಾಗಲ್ಲ ಸರಿಯಾದ ಗಾಯಕ ಷಡ್ಜ ಹಿಡಿದಾ ಅಂದ್ರೆ ಸಾಕು, ಪೂರ್ತಿ ಹಾಡುವ ತನಕ ಮತ್ತೇ ಷಡ್ಜದಿಂದಲೇ ಗಾಯನ ಪೂರ್ತಿ ಆಗುವ ತನಕ ರಸ ಒಸರ್ತಾ ಇರತ್ತೆ. ನನಗೆ ಕಾದಂಬರಿ ಬರೆಯುವಾಗ ನಡುವೆ ಸ್ಟಕ್ ಅಪ್ ಆದಾಗ, ಬರೆಯೊದನ್ನ ನಿಲ್ಲಿಸಿ, ನನ್ನ ಹತ್ತಿರ ಇರುವ ನನ್ನ ಆಗಿನ ಭಾವಕ್ಕೆ ತಟ್ಟುವಂತಹ ರೆಕಾರ್ಡು ಹಾಕಿ ಸಂಗೀತ ಕೇಳುತ್ತೇನೆ. ಒಂದೆರಡು ಗಂಟೆಯಲ್ಲಿ ಮತ್ತೆ ಬರವಣಿಗೆ ಶುರು ಮಾಡುತ್ತೇನೆ.”
“ಗ್ರೀಸ ದೇಶದ ತತ್ವಜ್ಞಾನಿ ಪ್ಲೇಟೊ ಹೇಳುತ್ತಾನೆ,’ ಪ್ರತಿಯೊಂದು ದೇಶದಲ್ಲೂ ಅವರದೇ ಆದ ಸಂಗೀತ ಇರುತ್ತದೆ. ಸಂಗೀತ ಆ ಆ ದೇಶದ ಮನೋಧರ್ಮವನ್ನು ಸೂಚಿಸುತ್ತದೆ’. ‘If you change the musical system of a country, in course of time its constitution will be changed.’ ನಮ್ಮ ದೇಶದ ಮೂಲ ತತ್ವ (ರಸ) ಓಂಕಾರ-ಷಡ್ಜ, ಅದು ಧ್ಯಾನದ ಸ್ಥಿತಿ ಇದ್ದ ಹಾಗೆ. ಸಂಗೀತದಲ್ಲಿ ಹಲವು ಪ್ರಕಾರಗಳಿರಬಹುದು ಆದರೆ ಅವೆಲ್ಲವೂ ಓಂಕಾರದಿಂದ ಪ್ರಾರಂಭವಾಗುತ್ತವೆ. ಆನಂದಕುಮಾರ ಸ್ವಾಮಿಯವರು ತಮ್ಮ ‘Dance of Shiva’ ಎಂಬ ಪ್ರಸಿದ್ಧ ಕೃತಿಯ, Indian Music ಎಂಬ ಅಧ್ಯಾಯದಲ್ಲಿ ಷಡ್ಜ ಅಥವಾ ಓಂಕಾರ ಇದು ಸೃಷ್ಟಿಯ ಮೊದಲ ಇರುವ ಸ್ಥಿತಿ (ವಿಶ್ವದ ಸೃಷ್ಟಿ ಕೂಡ) ಆಗಿ ಮುಂದೆ ಕ್ರಮೇಣ ತನ್ನೋಳಗೆ devolution ಆಗುತ್ತದೆ. ಒಂದು ರಾಗ ಬೆಳೆಯಬೇಕಾದರೆ ಒಬ್ಬ ಒಳ್ಳೆಯ ಸಂಗೀತಗಾರ ಓಂಕಾರದಿಂದ ಪ್ರಾರಂಭಿಸಿ, ವಿಸ್ತಾರವಾಗಿ ಬೆಳೆಸುತ್ತಾ ರಾಗದ ಸಮಾಪ್ತಿ ಆಗುವಾಗ ಮತ್ತೇ ಷಡ್ಜಕ್ಕೆ ಬಂದು ನಿಲ್ಲಿಸುತ್ತಾನೆ. ಒಂದು ರಾಗ ಎಂದರೆ ಒಂದು ಸೃಷ್ಟಿ. ಪ್ರತಿ ರಾಗಕ್ಕೆ ಬೇರೆ ಬೇರೆ ಭಾವಗಳು, ಸಂಗೀತಕ್ಕೆ ಮಾತ್ರ ಈ ಶಕ್ತಿ ಇದೆ.”
“ಹಿಂದಿನ ಕಾಲದಲ್ಲಿ ಶಿಷ್ಯಂದಿರು ಗುರುಗಳಿಂದ ಕಡಿಮೆ ಅಂದರೆ ೮-೧೦ ವರ್ಷ ಒಪ್ಪತ್ತು ಒಣ ರೊಟ್ಟಿ ತಿಂದು, ಏಕಾಗ್ರತೆಯಿಂದ ಸಂಗೀತ ಸಾಧನೆ ಮಾಡುತ್ತಿದ್ದರು. ಬೇರೆ ಎಲ್ಲೂ ಲಕ್ಷ್ಯ ಹೋಗುತ್ತಿರಲಿಲ್ಲ. ಈಗ ಸಂಗೀತದ ಮೇಷ್ಟ್ರು ಇದ್ದಾರೆ, ಸಂಗೀತಗಾರರು ಇಲ್ಲ, ಸಾಹಿತ್ಯದ ಅಧ್ಯಾಪಕರಿದ್ದಾರೆ, ಆದರೆ ಸಾಹಿತಿ ಇಲ್ಲ. ಸಾಹಿತ್ಯದ ಮರ್ಮವನ್ನು ಒಬ್ಬ ಸಾಹಿತಿಯೇ ಹೇಳಬಲ್ಲ. ಅದನ್ನು ಬೆಳೆಸುವದು ತುಂಬ ಕಷ್ಟ. ಸಂಗೀತಕ್ಕೆ ಹೊಸ ಹೊಸ ರೂಪ ಕೊಡುವವನು ಸಂಗೀತಗಾರ. ಅವನು ಕ್ರಿಯೇಟಿವ್ ಆಗಿರಬೇಕು. ಈಗ ಸಂಗೀತವನ್ನು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಸೆಮಿಸ್ಟರ್ ಪದ್ಧತಿಯಲ್ಲಿ ಕಲಿಸಬಹುದೆ? ನಾನೂ ಕೂಡ ಸಂಗೀತ ಕಲಿಯಲು ಪ್ರಾರಂಭಿಸಿದೆ ಆದರೆ ಪಾರ್ಟ ಟಾಯಿಮ್ ಸಂಗೀತ ಕಲಿಯೊದು ಸಾಧ್ಯವಿಲ್ಲ. ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಂದ ಸಂಗೀತದಲ್ಲಿ ಸಂಶೋಧನೆ, ವಿಜಯನಗರ ಸಾಮ್ರಾಜ್ಯದ ಶಿಲ್ಪಗಳ ಆಧಾರದ ಮೇಲೆ ರಾಗಗಳ ಕುರಿತು ಸಂಶೋಧನೆ ಮಾಡಿಸಿ ಎಂ ಮ್ಯೂಸ್ ಮತ್ತು ಪಿ ಎಚ್ ಡಿ ಡಿಗ್ರಿಗಳನ್ನು ಸಂಪಾದಿಸಿ ಮುಂದೆ ಸಂಗೀತದ ಉಪನ್ಯಾಸಕರಾದರೆ ಆಶ್ಚರ್ಯವಿಲ್ಲ. ಸಂಗೀತದ ಕ್ಷೇತ್ರವೇ ಬೇರೆ.”
“ಈಗ ಜಾನಪದ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಏನು ಸಂಬಂಧ? ಸಂಬಂಧ ಇದೆ. ಜಾನಪದ ಇದು ದೇಶಿ ಮತ್ತು ಮಾರ್ಗ ಇದು ಶಾಸ್ತ್ರೀಯ. ಒಬ್ಬ ದನ ಕಾಯುವವನು ಮನಸ್ಸಿನಲ್ಲಿ ಬಂದ ಒಂದು ಧಾಟಿಯನ್ನು ಮತ್ತೆ ಮತ್ತೇ ಹಾಡುತ್ತಾ ಇಇದ್ದರೆ ಅದೇ ಒಂದು ಜಾನಪದ ಸಂಗೀತವಾಗಬಹುದು. ಇದನ್ನೇ ಶಾಸ್ತ್ರಿಯ ಸಂಗೀತಗಾರ ಇದೇ ಧಾಟಿಯನ್ನು ರಾಗಕ್ಕೆ ಧಕ್ಕೆ ಆಗದ ಹಾಗೆ ತನ್ನ ಸ್ಕೇಲಲ್ಲಿ ಸಂಯೋಜನೆ ಮಾಡಿ ಪ್ರಸಿದ್ಧಿಯನ್ನು ಪಡೆಯುತ್ತಾನೆ.”
“ಭೀಮಸೇನ ಜೋಶಿಯವರು ಮಹಾರಾಷ್ಟ್ರದಲ್ಲಿ ಅಭಂಗ ಸಾಹಿತ್ಯವನ್ನು ಜನಪ್ರಿಯಗೊಳಿಸಿದವರು, ಹೀಗಾಗಿ ಮಹಾರಾಷ್ಟ್ರದವರು ಅವರನ್ನು ತಮ್ಮವರಾಗಿ ಮಾಡಿಕೊಂಡರು. ಸಂಗೀತದಲ್ಲಿ ಪ್ರಯೋಗ ಮಾಡಿದವರು ಕುಮಾರ ಗಂಧರ್ವರು. ಬಾಲ್ಯದಿಂದಲೇ ಹಾಡುಗಾರಿಕೆ ಪ್ರಾರಂಭಿಸಿದ ಕುಮಾರರನ್ನು ಮುಂಬಯಿಯ ದೇವಧರರು ಸಂಗೀತದಲ್ಲಿ ತರಬೇತಿ ಕೊಟ್ಟರು. ಪ್ರತಿಭೆ ಇದ್ದ ಕುಮಾರರು ಇನ್ನೇನು ಕಚೇರಿ ಪ್ರಾರಂಭಿಸುವ ಕಾಲದಲ್ಲಿಯೇ ಅವರಿಗೆ ಕ್ಷಯ ರೋಗ ಅಂಟಿ, ಒಂದು ಪುಪ್ಪುಸವನ್ನು ತೆಗೆಯಬೇಕಾಯಿತು. ಡಾಕ್ಟರರು ಹಾಡುಗಾರಿಕೆಯನ್ನು ನಿಲ್ಲಿಸಲು ಅಪ್ಪಣೆ ಮಾಡಿದ್ದರು. ಅಂಥಹ ಸನ್ನಿವೇಶದಲ್ಲಿ ಅವರಿಗೆ ಮಧ್ಯಪ್ರದೇಶದ ದೇವಾಸ ಎಂಬ ಪ್ರದೇಶಕ್ಕೆ ಹವಾ ಬದಲಾವಣೆಗೆಂದು ರವಾನಿಸಿದರು. ಮಾಳ್ವಾ ಪ್ರದೇಶದಲ್ಲಿ ಜಾನಪದ ಸಂಗೀತ ಬಹಳ. ಮನೆಯಲ್ಲಿಯೇ ವಿಶ್ರಮಿಸುತ್ತಿದ್ದ ಕುಮಾರರ ಕಿವಿಯ ಮೇಲೆ ಅಲ್ಲಿಯ ರೈತರು, ಗೌಳಿಗರು, ಕೆಲಸದವರು ಹಾಡಿಕೊಳ್ಳುವದು ಬೀಳುತ್ತಿತ್ತು. ಅವರಿಂದ ಗೀತೆಗಳನ್ನು ಮತ್ತು ಧಾಟಿಗಳನ್ನು ಸಂಪಾದಿಸಿ, ಕೆಲವನ್ನು ತಾವೇ ಬರೆದು, ಅವಕ್ಕೆ ಧಾಟಿಗಳನ್ನು ಹಚ್ಚಿ ಅಭ್ಯಾಸ ಮಾಡಿ ಮುಂದೆ ಹಾಡುವ ಅನುಮತಿ ಸಿಕ್ಕೊಡನೆ ತಮ್ಮ ಗಂಟಲು ಮತ್ತು ಶ್ವಾಸಕ್ಕನುಗುಣವಾಗಿ ತಮ್ಮದೇ ಶೈಲಿಯಲ್ಲಿ ಹಾಡುತ್ತಿದ್ದುದು ಅವರ ಹೊಸ ಅನ್ವೇಷಣೆಯಾಗಿತ್ತು. ಇದೆಲ್ಲ ಜಾನಪದದಿಂದ ಸ್ಪೂರ್ತಿ ಪಡೆದದ್ದು.”
“ಈ ಸಂದರ್ಭದಲ್ಲಿ ಸುಗಮಸಂಗೀತ ಈಗೀಗ ತುಂಬ ಸದ್ದು ಮಾಡುತ್ತಾ ಇದೆ. ಕಾವ್ಯವನ್ನು ಸಂಗೀತ ರೂಪದಲ್ಲಿ ಹಾಡುವದು ಸುಗಮಸಂಗೀತ. ಕರ್ನಾಟಕದಲ್ಲಿ ಇದೇನು ಹೊಸತಲ್ಲ. ಗಮಕ ಹಾಡುವ ಪದ್ಧತಿ ಮುಂಚಿನಿಂದ ಇದೆ. ಪದ್ಯದ ಅರ್ಥ, ಲಯ, ಧಾಟಿ ಆಲೋಚಿಸಿ ಹಾಡುವದು ಗಮಕ. ಗಮಕ ಅಂದ ತಕ್ಷಣ ನೆನಪಾಗೋದು ಹೊಸಳ್ಳಿ ಲಕ್ಷ್ಮೀ ಕೇಶವ ಶಾಸ್ತ್ರಿಯವರು. ಅವರು ಶಾಸ್ತೀಯ ಸಂಗೀತದ ರಾಗಗಳನ್ನು ಆಧರಿಸಿ, ಕಾವ್ಯ, ಅರ್ಥ ಮತ್ತು ಭಾವಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಹಾಡುತ್ತಿದ್ದರು. ಆಮೇಲೆ ಬಂದವರು ಕಾಳಿಂಗರಾಯರು. ಅವರು ಕೂಡ ತುಂಬ ಚೆನ್ನಾಗಿ ಹಾಡುವವರು. ಈಗಂತೂ ೫೦ ರಿಂದ ೧೦೦ ಜನರು ಕೂಡಿ ಅನೇಕ ವಾದ್ಯಗಳ ಜೊತೆ ಹಾಡುತ್ತಾರೆ. ವಾದ್ಯಗಳನ್ನಂತೂ ೨-೩ ತಿಂಗಳಲ್ಲೇ ಕಲಿತಾರೆ. ಅವು ಪ್ರೇಮ ಗೀತೆಗಳು, ವಿರಹ ಗೀತೆಗಳು ಆಗಬಹುದು ಆದರೆ ಇವುಗಳಲ್ಲಿ ಸಂಗೀತ ಮತ್ತು ಕಾವ್ಯವಾಚನ ಕಾಣ ಸಿಗುವುದಿಲ್ಲ! ಏನೇ ಇರಲಿ, ಶುದ್ಧ ಸಂಗೀತದಲ್ಲಿ ತರಬೇತಿ ಅತ್ಯವಶ್ಯಕ, ಅರ್ಥ ಮಾಡಿಕೊಳ್ಳದೇ ಹಾಡುವದು ಬೇಜಾರು. ಇವೆಲ್ಲ ಈಗಿನ new trends.”
“ಇವತ್ತಿನ ದಿವಸ, ಈ ಇಬ್ಬರು ಸೋದರಿಯರು ತಮ್ಮ ಸೋದರನಿಗೆ ಮಾಡಿದ ಸೇವೆ ಬಹು ದೊಡ್ಡದು ಅಂತ ಹೇಳಬಹುದು. ಅವರಿದ್ದದ್ದು ಮುಂಬಯಿನಲ್ಲಿ. ಕೊಂಕಣಿ ಮನೆ ಮಾತು. ಭಾಷಾ ದೃಷ್ಟಿಯಿಂದ ಕೊಂಕಣಿಗರ ಜೀವನವನ್ನು ಕಂಡಿದ್ದೇನೆ.ಇವರು ಕೆರಳ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುವ ಅಲ್ಪಸಂಖ್ಯಾತರು. ಯಶವಂತ ಚಿತ್ತಾಲರು ಕೊಂಕಣಿಗರೇ, ಮುಂಬಯಿ ನಿವಾಸಿ, ಕನ್ನಡದಲ್ಲಿ ಬರೆಯುವವರು. ಮನೆಯಲ್ಲಿ ಯಾರಿಗೂ ಕನ್ನಡ ಬರುವದಿಲ್ಲ. ಹೊರಗಿನ ಪ್ರಪಂಚ ಮರಾಠಿ, ಇಂಗ್ಲಿಷು, ಹಿಂದಿ. ಕನ್ನಡದವರ ಸಂಪರ್ಕಾನೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೂಡ ಕನ್ನಡದಲ್ಲಿ ಬರೆಯುವದನ್ನು ಅವರು ನಿಲ್ಲಿಸಲಿಲ್ಲ. ಅದೇ ತರಹ ಬುರ್ಡೆಯವರ ಮನೆಯೊಳಗೆ ಕೂಡ ಯಾರಿಗೂ ಕನ್ನಡದ ಗಂಧ -ಗಾಳಿ ಸೊಂಕದವರು. ಆದರೆ ಅವರಿಗೆ ಕರ್ನಾಟಕ ಸಂಘ ಮತ್ತು ಅಲ್ಲಿಯ ಅವರ ಸಹೊದ್ಯೋಗಿಗಳ ಸಂಪರ್ಕದಿಂದ ಮತ್ತು ಆಗ್ರಹದಿಂದ ಕನ್ನಡ ಬರವಣಿಗೆ ಅವರ ನಂತರದ ಕಾಲದಲ್ಲಿ ಸಾಧ್ಯವಾಯಿತು.”
“ಅವರು ಮರಾಠಿ, ಹಿಂದಿ, ಇಂಗ್ಲೀಷು ಮತ್ತು ಕನ್ನಡದಲ್ಲಿ ಬರೆಯುತ್ತಿರುವದು ನನಗೆ ಗೊತ್ತಿತ್ತು. ಆದರೆ, ಇಷ್ಟು ಸುಲಲಿತ ಭಾಷೆಯಲ್ಲಿ ಸಂಗೀತದ ಕುರಿತು ಬರೆದದ್ದು ಓದಿ ಆಶ್ಚರ್ಯವಾಯಿತು. ಇಂತಹ ಸರಳ ಭಾಷೆಯಲ್ಲಿ ನನಗೂ ಕೂಡ ಬರೆಯುವದು ಪ್ರಯಾಸವೇ. ನಮ್ಮ ಸಂಸ್ಕೃತಿಯನ್ನು ಅಧ್ಯಯನ ಮಾಡುವವರೆಲ್ಲರೂ ಈ ಪುಸ್ತಕವನ್ನು ಓದಬೇಕು. ಈಂತಹ ಒಳ್ಳೆ ಪುಸ್ತಕ ಬಿಡುಗಡೆಯನ್ನು ಸಂತೋಷದಿಂದ ಮಾಡುತ್ತಾ ಇದ್ದೇನೆ. ಆದರೆ ದುಃಖದ ವಿಷಯಂದರೆ ಅವರು ತುಂಬ ಬೇಗ ತೀರಿದರು. ಚಿಕ್ಕ ವಯಸ್ಸಿನಲ್ಲಿ ಸತ್ತರು. ನನಗಿಂತ ಚಿಕ್ಕವರು ಸತ್ತರೆ ಬಹಳ ಬೇಜಾರಾಗತ್ತೆ. ಅವರು ಇದ್ದದ್ದು ಮುಂಬಯಿಯ ಮಧ್ಯದಲ್ಲಿ ಗ್ರಾಂಟರೋಡನಲ್ಲಿ. ವಿಪರೀತ ವಾಯು ಮಾಲಿನ್ಯ, ಜನಸಂದಣಿ, ಟ್ರಾಫಿಕ್ ಜಾಮ್ ಗಳು. ಒಂದು ಇಡೀ ದಿನ ಅವರ ಮನೆಯಲ್ಲಿದ್ದೆ. ಚನ್ನಾಗಿ ನೋಡಿಕೊಂಡರು, ಸಾಯಂಕಾಲ ಅವರ ಮಗ ಎಯರಪೋರ್ಟ ತನಕ ಬಿಡೊಕೆ ಬಂದರು. ಆ ರಾತ್ರಿಯೇ ನನ್ನ ಗಂಟಲು ಕಟ್ಟಿ, ಬಹಳ ಕಸವಿಸಿ ಅನುಭವಿಸಿದೆ. ಆ ದಿನದಿಂದ ನನಗೆ ಅನಿಸಿದ್ದು, ಹೇಗೆ ಪ್ರಕಾಶ ಅವರು ಇಂತಹ ಪೊಲ್ಯುಶನದಲ್ಲಿ ಇದ್ದಾರೆ ಅನ್ನೋದು. ಸುಮಾರು ಎರಡು ವರ್ಷಗಳ ಮೇಲೆ ಅವರು ತೀರಿಹೋದ ಸುದ್ದಿ ಸಿಕ್ಕಿತು. ಅವರು ಮುಂಬಯಿ ಹೊರಗೆ ಅಥವಾ ಯಾವುದೇ ಬೇರೆ ಊರಲ್ಲಿ ಇದ್ದಿದ್ದರೆ ಇನ್ನೂ ೧೦-೧೫ ವರ್ಷ ಹೆಚ್ಚು ಬಾಳುತ್ತಿದ್ದರೆನೋ ಎಂದು ನನಗೆ ಅನಿಸುತ್ತದೆ. ಆದರೆ ಈ ಆಧುನಿಕ ಜಗತ್ತಿನಲ್ಲಿ ಅಷ್ಟು ಬೇಗ ಪ್ರದೇಶಗಳನ್ನು ಬಿಡುವದು ಅಶಕ್ಯವೇ. ಈ ನನ್ನ ಅನಿಸಿಕೆಗಳನ್ನು ಮಂದ್ರದ ಮೇಲೆ ನಾನು ಬರೆದ ಲೇಖದಲ್ಲಿ ಬರೆದಿದ್ದೇನೆ.”
“ಪ್ರಕಾಶ ಬುರ್ಡೆಯವರ ಮುಂಬಯಿಯ ಮನೆಯಲ್ಲಿಯ ಕಪಾಟಿನಲ್ಲಿ ತೂರಿದ್ದ ಬಿಡಿ ಲೇಖನಗಳನ್ನು ಅವರ ಸಹೋದರಿಯರು ಜೋಡಿಸಿ, ಪರಿಷ್ಕರಿಸಿ, ಪುಸ್ತಕ ರೂಪದಲ್ಲಿ ಅವರ ನೆನಪಿಗೆ ಮಾಡಿದ ಕೆಲಸ ಬಹು ದೊಡ್ಡದು. ಇದಕ್ಕಿಂತ ಯಾವ ಶ್ರಾಧ್ಧಾನು ಮಾಡಬೇಕಿಲ್ಲ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವದು ನನ್ನ ಕರ್ತವ್ಯ ಹಾಗೂ ಋಣ ತೀರಿಸೊದಕ್ಕೆ ಎಂದು ಭಾವಿಸಿದ್ದೀನಿ. ನೀವೆಲ್ಲರೂ ಬಂದು ಕಾರ್ಯಕ್ರಮಕ್ಕೆ ಶೋಭೆ ತಂದಿದ್ದೀರಿ. ನಮಸ್ಕಾರ.”