ಇದೊಂದು ಇತ್ತೀಚಿನ ಮಾತು. ಕಂಪ್ಯೂಟರನಲ್ಲಿ ಸರ್ಫಿಂಗ ಮಾಡುತ್ತಿದ್ದಾಗ ಇದ್ದಕಿದ್ದ ಹಾಗೆ ಯು ಟ್ಯೂಬಿನಲ್ಲಿ ಪಾಕಿಸ್ತಾನದ ರಿಯಾಸುದ್ದೀನ ಕವ್ವಾಲನ ತಂಡ ಹಾಡುತ್ತಿದ್ದ ಸನ್ನಿವೇಶ ಕಾಣಿಸಿತು. ಕೇಳಿ, ನೋಡಿ ಆಶ್ಚರ್ಯಚಕಿತನಾದೆ. ಕವ್ವಾಲಿಯ ಹಾಡು ಸಂಸ್ಕೃತ ಭಾಷೆಯಲ್ಲಿ ಇತ್ತು. ಕೆಲವು ಶಬ್ದಗಳು ಹೀಗಿದ್ದವು.
“ಗಿರಿಧರ, ಚತುರ, ಸುಂದರ, ದಾಮೋದರ, ಕಮಲನಯನ, ಕೃಪಾಲ, ಅಲಕ್ ನಿರಂಜನ, ನಿರಾಕಾರ, ನಿರ್ಗುಣ” ಬೆರಗಾಗುವಂತಹದೇ ವಿಷಯ! ಕವ್ವಾಲಿಯ ರಾಗ ‘ಖಟ್’. ತಬಲಾದ ಬೋಲ್, ಭಾಷೆಯೊಂದಿಗೆ ಲಯದಲ್ಲಿ ಚಪ್ಪಾಳೆ ಇಕ್ಕುತ್ತ ನಡೆದಿತ್ತು ಕವ್ವಾಲಿ. ‘ಖಟ್’ ರಾಗ ಜೈಪುರ-ಅತ್ರೋಳಿ ಘರಾಣೆಯ ಒಂದು ಅಪ್ರಚಲಿತ ರಾಗ. ‘ಶಟ್’ ಶಬ್ದದ ಅಪಭ್ರಂಶ ‘ಖಟ್’, ಆರು ರಾಗಗಳ ಮಿಶ್ರಣವಂತೆ! ಪಂ. ಮನ್ಸೂರರವರಿಂದ ಅನೇಕ ಸಲ ಕೇಳಿದ ರಾಗ. ಹಾಡಿನ ಪ್ರಾರಂಭ ಈ ರಿಯಾಸುದ್ದೀನ ಮಾಡಿದ್ದು ಕೂಡ ಮನ್ಸೂರ್ ಸ್ಟಾಯಿಲ್‌ನಲ್ಲಿಯೇ! ಕವ್ವಾಲಿ ನಂತರ ಈ ರಿಯಾಸುದ್ದೀನನು ವಿವರಣೆ ನೀಡಿದ್ದು ಕೂಡ ಅದ್ಭುತವೇ!
ಈ ಕವ್ವಾಲಿಯ ಮೂಲ ಗೀತ ಗೋವಿಂದ! “ಜೋ ರಾಗ ಮೈ ಆಪಕೆ ಖಿದಮತ ಮೆಂ ಪೇಶ ಕರ ರಹಾ ಹುಂ, ವೋ ಖಟ್ ನಾಮಸೆ ಜಾನಾ ಜಾತಾ ಹೈ. ಪಹಲೆ ಇಸ್ಕಾ ನಾಮ ಯೆ ನಹಿ ಥಾ.” ರಿಯಾಸುದ್ದೀನ ತಬಲಾದ ಲಯದಲ್ಲಿಯೇ ಕೀರ್ತನೆ ಮಾಡುವವರ ಶೈಲಿಯಲ್ಲಿ ವಿವರಣೆ ನೀಡುತ್ತಿದ್ದನು. ಗೋಪಾಲ ನಾಯಕನ ಮೈಫಿಲ್ಲು. ಈ ಗೋಪಾಲ ನಾಯಕನು ಕನ್ನಡಿಗ! ಸಂಗೀತಜ್ಞ .ಯಾದವರ ದೇವಗಿರಿ ಹಿಂದು ರಾಜ್ಯದಲ್ಲಿದ್ದವನು. ಅಲ್ಲಾಉದ್ದೀನ ಖಿಲಜಿ, ಈ ಯಾದವರ ಕೊನೆಯ ರಾಜ ರಾಮಚಂದ್ರನನ್ನು ಸೋಲಿಸಿ, ಅಮೀರ ಖುಸ್ರೋನ ಬಿನ್ನಹವನ್ನು ಮನ್ನಿಸಿ, ಗೋಪಾಲ ನಾಯಕನನ್ನು ದಿಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ನಾಯಕನು ಖಿಲಜಿಯ ಮುಂದೆ ತನ್ನ ಹಾಡುಗಾರಿಕೆಯನ್ನು ‘ಪೇಶ್’(ಪ್ರಸ್ತುತ) ಮಾಡಿದ. ಇದನ್ನು ಲಕ್ಷಪೂರ್ವಕವಾಗಿ ಕೇಳಿ ಅಮೀರ ಖುಸ್ರೋ, ‘ಕುಮಾಮ್’, ‘ಕುವಾಲಿ’, ‘ಕವ್ವಾಲಿ’ ಮಾಡಿದನಂತೆ! “ಜೋ ಗೋಪಾಲಸೆ ಗವಾಯಾಗಯಾ, ವಹ ಗೀತ ಥಾ, ಗೀತ ಗೋಬಿಂದ, ಪರಬಂಧ. ಗೋಪಾಲಕೆ ಸವಾಲಮೆ ಖುಸ್ರೋ ನೆ, ಯೆ ಕವ್ವಾಲಿ ಮೆ ಜವಾಬ ದಿಯಾ, ಲೇಕಿನ್ ಝಿಲಾಫ್ ಮೆ.” ರಿಯಾಸುದ್ದೀನ ತನ್ನ ಟಿಪ್ಪಣಿಯನ್ನು ಮುಂದುವರೆಸಿದ. ವೇದಿಕೆಯಲ್ಲಿದ್ದ ಎಲ್ಲರೂ ಚಪ್ಪಾಳೆಯೊಂದಿಗೆ ಧ್ವನಿಗೂಡಿಸಿದರು. ನೋಡಿ, ಮೊದಲು ಗೀತ ಗೋವಿಂದದ ಒಂದೇ ಒಂದು ಸಾಲನ್ನು ಹಾಡಿದವ ರಿಯಾಸುದ್ದೀನ ಅಷ್ಟೇ. ಇದೊಂದು ಅತ್ಯಂತ ಅಪರೂಪದ ಸಂಗೀತದ ಮೇಲಿನ ಮಿಥ್ಯೆ (myth), ಒಂದು ಆಖ್ಯಾಯಿಕೆ! ಸಾಧಾರಣ ೧೦ ನಿಮಿಷದ್ದು ಅಷ್ಟೇ. ಇದು ಮೌಖಿಕ ರೂಪದಲ್ಲಿ ೧೨/೧೩ ಶತಮಾನದಿಂದ ಈ ವರೆಗೆ ನಡೆದು ಬಂದ ಆಖ್ಯಾಯಿಕೆ, ಸಂಸ್ಕೃತ ಅಪಭ್ರಂಶವಾದುದು ೨೦ ನೇ ಶತಮಾನ ಬಂದ ಮೇಲೆ.
ಹಿಂದುಸ್ಥಾನಿ ಸಂಗೀತ ಪದ್ಧತಿಯಾಗಲೀ, ಕರ್ನಾಟಕ ಸಂಗೀತ ಪದ್ಧತಿಯಾಗಲೀ, ಇವುಗಳಲ್ಲಿ ಇಂತಹ ಮಿಥ್ಯೆಗಳಿಗೇನು ಕಡಿಮೆ ಇಲ್ಲ. ಅಮೀರ ಖುಸ್ರೋನ ಹೆಸರಿನಲ್ಲಿಯೇ ಉತ್ತರಾದಿ ಸಂಗೀತದ ಅನೇಕ ಆಖ್ಯಾಯಿಕೆಗಳಿವೆ. ತಂಬೂರಿಯ ತಂತಿಗಳಿಗೆ ಕಟ್ಟಿಗೆ ಪಟ್ಟಿಗಳನ್ನು ಜೋಡಿಸಿ ಆತ, ‘ಸಿತಾರ’ ಮಾಡಿದನಂತೆ! ಪಖಾವಜ಼್‌ನ್ನು (ಮೃದಂಗದಂತಹ ವಾದ್ಯ) ಎರಡು ಹೋಳು ಮಾಡಿ ‘ಹೊಸ’ ತಬಲ ಮತ್ತು ‘ಡಗ್ಗಾ’ ಅವನೇ ಮಾಡಿದನಂತೆ. ಇಂತಹ ಅನೇಕ ದಂತಕಥೆಗಳು ಅವನ ಹೆಸರಿನಲ್ಲಿವೆ. ಆದರೆ ನನ್ನ ದೃಷ್ಟಿಯಲ್ಲಿ ಈ ಮೇಲೆ ಕೊಟ್ಟ ಕತೆ ತುಂಬ ಮಹತ್ವದ್ದು. ಇಲ್ಲಿ ಖುಸ್ರೋ ಗೋಪಾಲ ನಾಯಕನನ್ನು, ‘ಸವಾಲ್-ಜವಾಬ’ದ ಸಂಗೀತದಲ್ಲಿ ಸೋಲಿಸಿದ್ದು ಅತ್ಯಂತ ಗೌಣ ವಿಷಯ. ಭಲೆ, ಆತ ಝಿಲಾಫ್ ರಾಗದಲ್ಲಿ ‘ಕುಮಾಮ್’ ಅಥವಾ ‘ಕವ್ವಾಲಿ’ ಹಾಡಿ, ‘ತಕ್ಕುದಾದ ಜವಾಬ ಕೊಟ್ಟು,’ ‘ಖಟ್’ ರಾಗದಲ್ಲಿ ೨೪ ಸರ್ಗಗಳುಳ್ಳ ಗೀತಗೋವಿಂದ ಹಾಡಿದ ಗೋಪಾಲನನ್ನು ಸೋಲಿಸಿದ ಎಂಬ ಮಾತಿನಲ್ಲಿಯೇ ಉತ್ತರಾದಿ ಸಂಗೀತದ ಉಗಮದ ಉತ್ತರವಿದೆ. ಹಿಂದವಿ ಭಾಷೆಯ (ಉರ್ದು+ಪರ್ಶಿಯನ್+ಹಿಂದಿ) ಪ್ರಚಾರದಲ್ಲಿದ್ದದ್ದೂ ‘ಕವ್ವಾಲಿ’ ಎಂಬ ಹೊಸ ಸಂಗೀತದ ಕಲಮಿನ ಉತ್ತರ ಕೂಡ ಅಡಗಿದೆ. ಗೋಪಾಲ ನಾಯಕನ ಕಾಲದಲ್ಲಿ, ‘ದಾಕ್ಷಿಣಾತ್ಯ’ದ ಸಂಗೀತದ ಪ್ರಭಾವ ಆಗ ಉತ್ತರದಲ್ಲ್ಲಿ ಪ್ರಚಾರವಾದದ್ದೂ, ಸುಮಾರು ೮೦-೧೦೦ ವರ್ಷಗಳ ಮೊದಲು. ಒಡಿಸ್ಸಾ ರಾಜ್ಯದಲ್ಲಿದ್ದ ಜಯದೇವ ಕವಿಯ ಗೀತ ಗೋವಿಂದ ಆಗ ಭಾರತದ ಉದ್ದಕ್ಕೂ ಉಚ್ಛ್ರಾಯದಲ್ಲಿತ್ತು. ಇಂದಿಗೂ ಈ ಜಯದೇವ ಕವಿಯ ಗೀತ ಗೋವಿಂದ ಆಸೇತು ಹಿಮಾಚಲದವರೆಗೆ ಆಸ್ಸಾಮ್, ಮಣಿಪುರ್, ಒಡಿಸ್ಸಾದಿಂದ ಕಛ್ ಗುಜರಾತದ ವರೆಗೆ ಪ್ರಚಾರದಲ್ಲಿದೆ ಎಂಬ ಮಾತನ್ನು ಯಾರೂ ಅಲ್ಲಗಳೆಯಲಾರರು. ಎಮ್.ಎಸ್. ಸುಬ್ಬುಲಕ್ಷ್ಮಿಯವರು ಕರ್ನಾಟಕ ಪದ್ಧತಿಯಲ್ಲಿ ರಾಗಮಾಲೆಯಲ್ಲಿ ಹಾಡಿದ ಗೀತಗೋವಿಂದದ ಒಂದೆರಡು ಸರ್ಗಗಳು ಈಗಲೂ ಯುಟ್ಯೂಬಿನಲ್ಲಿ ವೀಕ್ಷಿಸಬಹುದು. ಈ ಗೀತಗೋವಿಂದವು ನಾಟ್ಯ, ನೃತ್ಯ ಸಂಗೀತ ಒಳಗೊಂಡ ನೃತ್ಯ ಪ್ರಕಾರ ಕಥಕ್ಕಳಿ, ಭರತ ನಾಟ್ಯ, ಓಡಿಸ್ಸಿ, ಮತ್ತು ಮಣಿಪುರಿ ಪ್ರಕಾರಗಳಲ್ಲಿಯೂ ಸಿಗುತ್ತದೆ. ಕಥಕ್ ನೃತ್ಯದಲ್ಲಿ ಇವುಗಳದೇ ಸ್ವಲ್ಪ ಅಪಭ್ರಂಶ ರೂಪವನ್ನು ನಾವು ಕಾಣಬಹುದು. ಈಗಲು ಓಡಿಸ್ಸಾ ರಾಜ್ಯದಲ್ಲಿ ನೃತ್ಯಾವಿಷ್ಕಾರದಲ್ಲಿ ಅಷ್ಟಪದಿಗಳನ್ನು ಅರ್ಧ ಹಾಡಿ ಬಿಡುವದು ನಿಷಿದ್ಧವೆಂಬ ನಂಬಿಕೆ ಪ್ರಚಾರದಲ್ಲಿದೆ
ಸಾಹಿತ್ಯದಲ್ಲಿ ಶಬ್ದಗಳು ಅಪಭ್ರಂಶವಾದರೆ ಅದು ನಿಷಿದ್ಧ. ಆದರೆ ಸಂಗೀತದಲ್ಲಿ? ಅದೊಂದು ಸಂಗೀತದ ಹೊಸ ಆವಿಷ್ಕಾರ/ ಅವತಾರವೆಂದು ದಢವಾಗಿ ಹೇಳಬಹುದು. ಜಯದೇವ ಕವಿಯ ನೃತ್ಯ ನಾಟಿಕೆಯ ಅಪಭ್ರಂಶ, ‘ಕವ್ವಾಲಿ’ಯ ರೂಪವೆಂದು, ಹೊಸ ಸಂಗೀತ ಪ್ರವಾಹದ ಉಗಮವೆಂದು ತಿಳಿದುಕೊಂಡರೆ ಅದು ತಪ್ಪಾಗಲಾರದು. ಸಾಹಿತ್ಯದಲ್ಲಿ ಇಂತಹ, ‘ಮೋಡ್-ತೋಡ್ (ಒಡೆ, ತುಂಡು ಮಾಡು) ಅಕ್ಷಮ್ಯವಾದರೂ ಕೇಳಲು ಇಂಪಾದ, ರುಚಿಕಟ್ಟಾದ ಸಂಗೀತದ ಉಗಮ ಒಂದು ನವೀನ ಕಲ್ಪನಾ ವಿಲಾಸವೆಂದು ಅರ್ಥ ಮಾಡಿಕೊಳ್ಳಬಹುದು.
ಇದು ಉತ್ತರ ಭಾರತದ ಸಂಗೀತ ಪ್ರಕಾರದಲ್ಲಿಯೇ ಸಂಸ್ಕೃತ ಭಾಷೆಯ (ರಾಜಮಾನ್ಯ ) ಮೇಲೆ ಬೀರಿದ ದುಷ್ಪರಿಣಾಮದ ಒಂದು ಉದಾಹರಣೆ. ಸಂಸ್ಕೃತ ಆಗಿನ ಕಾಲದ ರಾಜ್ಯಕರ್ತರಿಗೆ, ‘ಪರಭಾಷೆ’! ದೇವದೇವತೆಗಳ ಸ್ತುತಿ ಒಳಗೊಂಡು, ಲಯಬದ್ಧ ರೀತಿಯಲ್ಲಿ ಗೇಯ ಪ್ರಕಾರದಲ್ಲಿ ಕಟ್ಟಿದ ಭಾಷೆ, ಕ್ರಮವಾಗಿ ದುರ್ಭರವಾಗಿರಬೇಕು. ಸಂಸ್ಕೃತ ಕಾವ್ಯಗಳ ಅನುವಾದ ಸುಲಭವಲ್ಲ. ಈ ಭಾಷೆಯ ಉಚಿತ ಬದಲಾವಣೆಯೆಂದರೆ ಕಾವ್ಯದ ಹೋಳುಗಳನ್ನಾಗಿ ಮಾಡಿ ನಾಲ್ಕು ಸಾಲಿನ ಹಾಡಾಗಿಸಿ, ಬೋಲಿ (ಜನಸಾಮಾನ್ಯರ ಭಾಷೆ) ಭಾಷೆಯಲ್ಲಿ ಪರಿವರ್ತಿಸುವದು ಮತ್ತು ದೇವದೇವತೆಗಳ ಸ್ತುತಿಯ ಬದಲಾಗಿ ಆಗಿನ ಕಾಲದ ಅನ್ನದಾತರಾದ, ‘ಬಾದಶಾಹ’ನ ಸ್ತುತಿ ಮಾಡುವದು ಹಿಂದವಿ ಭಾಷೆಯಲ್ಲಿ! ಗೀತಗೋವಿಂದ ಪ್ರಬಂಧ (ಪರಬಂಧ) ಪ್ರಕಾರದಲ್ಲಿದ್ದುದು ಮುಂದೆ ಖುದ್ದ ಬಾದಶಾಹನ ಸ್ತುತಿ ಸುಮನಗಳಲ್ಲಿ, ಪ್ರಬಂಧ ಪ್ರಕಾರಗಳ ಚೌಕಟ್ಟು ಕ್ರಮೇಣ ಮುರಿದು ಬಿದ್ದಿದ್ದರೆ ಆಶ್ಚರ್ಯವೇನೂ ಇಲ್ಲ! ಜಿತೇಂದ್ರ ಅಭಿಷೇಕಿ ಎಂಬ ಗ್ವಾಲಿಯರ್-ಆಗ್ರಾ ಪರಂಪರೆಯ ಗಾಯಕರು ಹೇಳಿದಂತೆ, ಪ್ರತಿಯೊಂದು ಕಾವ್ಯದ ಉದ್ಗ್ರಾಹ (ಮೊದಲ ಸಾಲು/ಧ್ವನಿ) ಹಾಡುವ ಮೊದಲು ಧ್ರುವಪದ (ಪಲ್ಲವಿ) ಹಾಡುವ ರೀತಿ ಇತ್ತು. ಉದಾಹರಣೆಗೆ ಅವರು ಗೀತ ಗೋವಿಂದದ ಈ ಸಾಲಿನ ಉಲ್ಲೇಖ ಮಾಡುತ್ತಾರೆ. ‘ರತಿಸುಖಸಾರೆಗತಮಭಿಸಾರೆ ಮದನ ಮನೋಹರ ವೇಷಂ’ ಭಾಷೆ ಸಂಸ್ಕೃತ. ಎಷ್ಟು ಸುಲಭವಾಗಿದೆ ನೋಡಿ ಮೇಲಿನ ಸಾಲುಗಳು?
ಹೀಗೆ ಕ್ರಮೇಣ ದ್ರುವಪದ (ದ್ರುಪದ)ವಷ್ಟೇ ಉಳಿಯಿತು. ಉದ್ಗ್ರಾಹ ಕ್ರಮೇಣ ಮಾಯವಾಗಿ ೨-೮ ಸಾಲಿನ ಹಿಂದಿ ಬೋಲಿ ಭಾಷೆಯ ರೂಪ ತಾಳಿತು. ಈ ಬದಲಾವಣೆಗೆ ಮುಸ್ಲಿಮ್ ರಾಜ್ಯದಲ್ಲಿ ೧೫೦-೨೦೦ ವರ್ಷಗಳಾದರೂ ಉರುಳಿರಬೇಕು ಎಂಬುದು ನನ್ನ ಅಂದಾಜು. ಗೀತ ಗೋವಿಂದ, ಅಮೀರ ಖುಸ್ರೋ ಮತ್ತು ಖಿಲಜಿಯ ನಂತರವೇ, ಸಾಧಾರಣ ಮುಘಲರ ಕಾಲದ ತಾನಸೇನನ ದ್ರುಪದಗಳು ಈಗಲೂ ಉತ್ತರಭಾರತದಲ್ಲಿ ಕಿವಿಯ ಮೇಲೆ ಕೈ ಇಟ್ಟುಕೊಂಡು ಭಕ್ತಿ ಭಾವದಿಂದ ಗವಾಯಿಗಳು ಹಾಡುತ್ತಿರುತ್ತಾರೆ.! ಪ್ರಬಂಧ ಗಾಯನದ ನಂತರದ ದ್ರುಪದ-ಧಮಾರ ಗಾಯನ ತಾನಸೇನನ ಕಾಲದಲ್ಲಿ ಅತ್ಯಂತ ಲೋಕಪ್ರಿಯ ವಾಗಿರಬೇಕು. ಡಾಗರ ಬಾನಿಯ ದ್ರುಪದದಲ್ಲಿ ಸಂಸ್ಕೃತ ರಚನೆಗಳೂ ಇವೆ. ಮುಂದೆ ೧೮ನೇ ಶತಮಾನದಲ್ಲಿ ಮುಘಲರ ಅಳಿಗಾಲದಲ್ಲಿಯೇ ಸದಾರಂಗ ಮತ್ತು ಅದಾರಂಗರ ಕಾಲದಲ್ಲಿ ಖಯಾಲ್ ಗಾಯನದ ಬೀಜ ನೆಟ್ಟಿದ್ದಾಗಿತ್ತು. ಇದು ಮತ್ತು ಠುಮರಿಗಳು ಈಗ ಪ್ರಚಾರದಲ್ಲಿರುವ ಹಿಂದುಸ್ಥಾನಿ ಮತ್ತು ಉತ್ತರಾದಿ ಪಧ್ಧತಿಯೆಂದು ಸ್ವಲ್ಪ ಲಘುವಾಗಿಯೇ ಹೇಳಬಹುದು.
ಜಿತೇಂದ್ರ ಅಭಿಷೇಕಿ ಒಬ್ಬ ಉಚ್ಚಕೋಟಿಯ ಹಿಂದುಸ್ಥಾನಿ ಪದ್ಧತಿಯ ಗಾಯಕರಾಗಿದ್ದರು. ಅವರು ಒಂದು ಮರಾಠಿ ಪತ್ರಿಕೆಯಲ್ಲಿ ಬರೆದದ್ದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. “ಮೊದಲು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಕೀರ್ತನಕಾರರು ಗೀತ ಗೋವಿಂದದ ಕೆಲವು ಸರ್ಗಗಳನ್ನು ಬೇರೆ ಬೇರೆ ರಾಗಗಳಲ್ಲಿ, ಅಂದರೆ ಮುಲ್ತಾನಿ, ಬಸಂತ, ಹಮೀರ ಹಾಡುತ್ತಿದ್ದುದು ನಾನು ಕೇಳಿದ್ದೇನೆ. ನಾನು ಸಹ ‘ಭೋ ರಾಧಿಕಾ ಮುಗ್ಧೆ’ ಹಾಡಿದ್ದೇನೆ.” ಗೋಪಾಲನಾಯಕನ ಈ ಜಯದೇವ ಕವಿ ವಿರಚಿತ, ‘ಪರಬಂಧ’ ಪ್ರಕಾರದ ಗೀತ ನಾಟ್ಯ ಅಥವಾ ಗೀತನೃತ್ಯ ಆಗಷ್ಟೇ ತುಂಬಾ ಪ್ರಚಾರದಲಿ ಇದ್ದಿರಬೇಕು. ಇತಿಹಾಸಕಾರರೂ ಕೂಡ ಗೀತ ಗೋವಿಂದದ ಕಾಲ ೧೧-೧೨ ನೇ ಶತಮಾನವೆಂದು ಗ್ರಹಿಸುತ್ತಾರೆ. ಗೀತ ಗೋವಿಂದದ ಪ್ರಕಾರ ಆ ಕಾಲದಲ್ಲಿ ರಾಜಾಶ್ರಯದಿಂದಲೇ ಲೋಕಾಶ್ರಯ ಕೂಡ ಪಡೆದಿರಬೇಕು. ಆ ಕಾಲದ ಕಾದಂಬರಿ ರೂಪದಲ್ಲಿಯ ಸನ್ನಿವೇಶಗಳನ್ನು ಭೈರಪ್ಪನವರು ಮನತಟ್ಟುವಂತೆ, ‘ಸಾರ್ಥ’ ಕಾದಂಬರಿಯಲ್ಲಿ ವರ್ಣಿಸಿದ್ದಾರೆ. ಅದೇ ಸುಮಾರಿಗೆ, ‘ಸಂಗೀತ ಗಂಗಾಧರಮ್’ ಮತ್ತು ‘ಗೀತ ಗಿರೀಶ’ ಎಂಬ ಗೀತ ನೃತ್ಯಗಳು ಶೈವ ಸಾಹಿತ್ಯದಲ್ಲಿ ಪ್ರಕಟವಾದವು. ವೈಷ್ಣವ ಸಾಹಿತ್ಯಕ್ಕೆ ಅದೇ ಹೊತ್ತಿಗೆ ಚೈತನ್ಯ ಮಹಾಪ್ರಭುವಿನ ಸಂಚಾರ ಉತ್ತರದಲ್ಲಿ ಜಗನ್ನಾಥ ಪುರಿಯಿಂದ ಬಂಗಾಲ ಮತ್ತು ಮಥುರಾ ವೃಂದಾವನದ ತನಕ ಹರಡಿದ್ದರಿಂದ ತುಂಬ ಲೋಕಾಶ್ರಯ ಸಿಕ್ಕಿರಬೇಕು.
ಜಿತೇಂದ್ರ ಅಭಿಷೇಕಿ ಒಬ್ಬ ಉಚ್ಚಕೋಟಿಯ ಹಿಂದುಸ್ಥಾನಿ ಪದ್ಧತಿಯ ಗಾಯಕರಾಗಿದ್ದರು. ಅವರು ಒಂದು ಮರಾಠಿ ಪತ್ರಿಕೆಯಲ್ಲಿ ಬರೆದದ್ದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. “ಮೊದಲು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಕೀರ್ತನಕಾರರು ಗೀತ ಗೋವಿಂದದ ಕೆಲವು ಸರ್ಗಗಳನ್ನು ಬೇರೆ ಬೇರೆ ರಾಗಗಳಲ್ಲಿ, ಅಂದರೆ ಮುಲ್ತಾನಿ, ಬಸಂತ, ಹಮೀರ ಹಾಡುತ್ತಿದ್ದುದು ನಾನು ಕೇಳಿದ್ದೇನೆ. ನಾನು ಸಹ ‘ಭೋ ರಾಧಿಕಾ ಮುಗ್ಧೆ’ ಹಾಡಿದ್ದೇನೆ.” ಗೋಪಾಲನಾಯಕನ ಈ ಜಯದೇವ ಕವಿ ವಿರಚಿತ, ‘ಪರಬಂಧ’ ಪ್ರಕಾರದ ಗೀತ ನಾಟ್ಯ ಅಥವಾ ಗೀತನೃತ್ಯ ಆಗಷ್ಟೇ ತುಂಬಾ ಪ್ರಚಾರದಲಿ ಇದ್ದಿರಬೇಕು. ಇತಿಹಾಸಕಾರರೂ ಕೂಡ ಗೀತ ಗೋವಿಂದದ ಕಾಲ ೧೧-೧೨ ನೇ ಶತಮಾನವೆಂದು ಗ್ರಹಿಸುತ್ತಾರೆ. ಗೀತ ಗೋವಿಂದದ ಪ್ರಕಾರ ಆ ಕಾಲದಲ್ಲಿ ರಾಜಾಶ್ರಯದಿಂದಲೇ ಲೋಕಾಶ್ರಯ ಕೂಡ ಪಡೆದಿರಬೇಕು. ಆ ಕಾಲದ ಕಾದಂಬರಿ ರೂಪದಲ್ಲಿಯ ಸನ್ನಿವೇಶಗಳನ್ನು ಭೈರಪ್ಪನವರು ಮನತಟ್ಟುವಂತೆ, ‘ಸಾರ್ಥ’ ಕಾದಂಬರಿಯಲ್ಲಿ ವರ್ಣಿಸಿದ್ದಾರೆ. ಅದೇ ಸುಮಾರಿಗೆ, ‘ಸಂಗೀತ ಗಂಗಾಧರಮ್’ ಮತ್ತು ‘ಗೀತ ಗಿರೀಶ’ ಎಂಬ ಗೀತ ನೃತ್ಯಗಳು ಶೈವ ಸಾಹಿತ್ಯದಲ್ಲಿ ಪ್ರಕಟವಾದವು. ವೈಷ್ಣವ ಸಾಹಿತ್ಯಕ್ಕೆ ಅದೇ ಹೊತ್ತಿಗೆ ಚೈತನ್ಯ ಮಹಾಪ್ರಭುವಿನ ಸಂಚಾರ ಉತ್ತರದಲ್ಲಿ ಜಗನ್ನಾಥ ಪುರಿಯಿಂದ ಬಂಗಾಲ ಮತ್ತು ಮಥುರಾ ವೃಂದಾವನದ ತನಕ ಹರಡಿದ್ದರಿಂದ ತುಂಬ ಲೋಕಾಶ್ರಯ ಸಿಕ್ಕಿರಬೇಕು.
ಮುಂಬಯಿ ಶಹರದಲ್ಲಿ ಗ್ವಾಲಿಯರ ಪರಂಪರೆಯ ಪಾರಸಿ ಜಾತಿಯ ಪಂಜಾಲ ಬಾಲಾಪೂರಿಯಾ ಎಂಬ ಗಾಯಕ-ಶಿಕ್ಷಕರಿದ್ದರು. ಅಂದ ಹಾಗೆ ಭಾರತದಲ್ಲಿಯ ಪಾರಸಿ ಸಮಾಜ ಪಾಶ್ಚಾತ್ಯ ಸಂಗೀತದಲ್ಲಿ ಹೆಸರು ಮಾಡಿದರೂ (ಜುಬಿನ್ ಮೆಹ್ತಾ, ಎ.ವಿ ಬಿಲಿಮೊರಿಯಾ) ಹಿಂದುಸ್ಥಾನಿ ಸಂಗೀತದಲ್ಲಿಯೂ ಹೆಸರು ಮಾಡಿದವರು. ಫಿರೋಜ್ ದಸ್ತ್ತೂರ್, ಜಾಲಸಾಹೇಬ ಹಾಗೂ ತಬಲಾ ಕಲಾಕಾರ ಆಬಾನ್ ಮಿಸ್ತ್ರಿ ಇತ್ಯಾದಿ. ಹಿಂದುಸ್ಥಾನಿ ಸಂಗೀತದ ಮೊಟ್ಟಮೊದಲಿನ ಸಂಘಟನೆ ಎಂದರೆ ಪಾರಸಿ ಗಾಯನ ಸಮಾಜ! ಇರಲಿ, ಈ ಜಾಲ ಸಾಹೇಬರೂ ತಮ್ಮ ಕಚೇರಿಯ ಸಮಾಪ್ತಿ ಒಂದೆರಡು ಅಷ್ಟಪದಗಳನ್ನು ಹಾಡಿಯೇ ಕಚೇರಿ ಮುಗಿಸುತ್ತಿದ್ದರು.
ಭಾರತದ ದಕ್ಷಿಣದ ರಾಜ್ಯಗಳಲ್ಲಿ ವಿಜಯನಗರ ಮತ್ತು ದೇವಗಿರಿ ಬಿಟ್ಟು ಇತರ ಪ್ರಾಂತಗಳಲ್ಲಿ ದೀರ್ಘಕಾಲ ಪರಕೀಯರ ಆಕ್ರಮಣ ಆಗದೇ ಇದ್ದರೂ ಕೂಡ ಅಲ್ಲಿಯ ಸಂಸ್ಕೃತಿ ಹೊರಗಿನವರ ಪ್ರಭಾವದಿಂದ ದೂರ ಉಳಿಯಲಿಲ್ಲ. ವಿಜಯನಗರ ಸಾಮ್ರಾಜ್ಯದಲ್ಲಿ ವರ್ಷಕ್ಕೆ ಹನ್ನೆರಡೂ ತಿಂಗಳುಗಳು, ಸಂಗೀತ ‘ಸುಗ್ಗಿ’ಯ ಕಾಲವಿದ್ದುದರಿಂದ ನಾವಿನ್ಯದ ಶೋಧದಲ್ಲಿದ್ದ ಕಲಾವಿದರೂ, ಸಂಗೀತಕರೂ ಇದೇ ಸಾಮ್ರಾಜ್ಯದ ಮೂಲೆಮೂಲೆಯಲ್ಲಿ ವಲಸೆ ಬಂದು ಸ್ಥಾಪಿತರಾಗಿದ್ದರು. ೧೫ ಮತ್ತು ೧೬ನೇ ಶತಮಾನದಲ್ಲಿ ಕರ್ನಾಟಕ ಸಂಗೀತದ ಪಿತಾಮಹರೆಂದು ಎನಿಸಿಕೊಂಡ ಪುರಂದರದಾಸರು ಹಾಗೂ ತೆಲುಗು ಮತ್ತು ಸಂಸ್ಕೃತದಲ್ಲಿ ತುಂಬ ಸಾಹಿತ್ಯ ರಚಿಸಿದ ಅಲ್ಲಸಾನಿ ಪೆದ್ದನ ಮತ್ತು ನಂತರದ ಅನೇಕ ಸಂಗೀತಜ್ಞರು ಕರ್ನಾಟಕ ಸಂಗೀತವನ್ನು ಸಮೃದ್ಧಗೊಳಿಸಿದರು.
ಬಿಜಾಪುರದ ಬಾದಶಹರು ಹಾಗೂ ತಂಜಾವೂರಿನ ಶಿವಾಜಿಯ ಮಲತಮ್ಮ ವೆಂಕೋಜಿಯ ವಂಶಜರು ಕರ್ನಾಟಕ ಸಂಗೀತ, ನಾಟಕ ಮತ್ತು ನೃತ್ಯಗಳಿಗೆ ಒಳ್ಳೆಯ ರಾಜಾಶ್ರಯ ಕೊಟ್ಟಿದ್ದರಿಂದ ಸರ್ಫೋಜಿಯ ಕಾಲದಲ್ಲಿ ಕರ್ನಾಟಕ ಸಂಗೀತ ಹುಲುಸಾಗಿ ಬೆಳೆಯಿತು. ಈ ಕಡೆ ಮೈಸೂರಿನ ಓಡೆಯರು ಕೂಡಾ ವಿಜಯನಗರ ಸಾಮ್ರಾಜ್ಯ ಅಳಿದ ಮೇಲೆ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತಕ್ಕೆ ಒಳ್ಳೆಯ ಆಧಾರಕೊಟ್ಟ ಅನೇಕ ಉದಾಹರಣೆಗಳು ಇವೆ. ಭಾರತರತ್ನ ಎಮ್.ಎಸ್. ಸುಬ್ಬುಲಕ್ಷ್ಮಿ ಹಾಡಿದ ಅಷ್ಟಪದಿಗಳಿರಲಿ ಅಥವಾ ಮುಂಬಯಿಯಲ್ಲಿದ್ದ ಪಾರಸೀ ಸಮಾಜದ ಜಾಲ ಸಾಹೇಬರು ಇರಲಿ ಅಥವಾ ಭರತ ನೃತ್ಯಾಂಗನೆ ಸುಚೇತಾ ಭೀಡೆ ಅಥವಾ ಓಂಕಾರನಾಥ ಪರಂಪರೆಯ ಹಿಂದುಸ್ಥಾನಿ ಸಂಗೀತದ ವಾಯೋಲಿನ ಬಾರಿಸುವ ವಿದುಷಿ ಎನ್ ರಾಜಂ ಅಥವಾ ಅವರ ಬಂಧು ಕರ್ನಾಟಕ ಪರಂಪರೆಯ ಡಾ. ಟಿ.ಎನ್. ಕೃಷ್ಣನ್ ಇರಲಿ, ಅವರೆಲ್ಲ ದನಿಗೂಡಿಸಿದ ಸ್ವರಸಮೂಹಗಳು ಬೇರೆ ಬೇರೆ ಪ್ರಕಾರದವು ಇದ್ದರೂ ಹೃದಯಕ್ಕೆ ತಟ್ಟುವಾಗ ಒಂದೇ ಪ್ರಕಾರದ್ದು ಎಂದು ಎನಿಸುತ್ತವೆ. ಸ್ವರಗಳು ಕುಣಿಯುತ್ತ ಕುಣಿಯುತ್ತ ಕೇಳುವವರ ಮನಸೂರೆಗೊಳ್ಳುತ್ತವೆ. ಇದೇ ಭಾರತೀಯ ಸಂಗೀತದ ಏಕಾತ್ಮತೆ ಎಂದು ಅನಿಸುತ್ತದೆ.
ಸಪ್ಟಂಬರ ೨೦೧೧ರಲ್ಲಿ ಮುಂಬಯಿ ನಗರದ ರಾಷ್ಟೀಯ ಕಲಾಕೇಂದ್ರದ ವತಿಯಿಂದ ಕರ್ನಾಟಕ ಮತ್ತು ಹಿಂದುಸ್ಥಾನಿ ಸಂಗೀತದ ಒಂದು ಚರ್ಚಾಸತ್ರ ನಡೆಯಿತು. ಕರ್ನಾಟಕ ಸಂಗೀತದ ಪರವಾಗಿ ಡಾ. ಟಿ.ಎನ್. ಕೃಷ್ಣನ್*, ಡಾ. ಎಂ. ಬಾಲಮುರಳಿಕೃಷ್ಣ ಭಾಗವಹಿಸಿದ್ದರು. ಹಿಂದುಸ್ಥಾನಿ ಸಂಗೀತದ ಅಧ್ವರ್ಯಗಳೆಂದು ತಾಳವಾದ್ಯಕ್ಕೆ ಪಂ. ಸುರೇಶ ತಳವಲ್ಕರ** ಹಾಗೂ ಮನ್ನಾರುಗುಡಿ ಈಶ್ವರನ್*** ಮತ್ತು ಕಂಠ ಸಂಗೀತದ ಪ್ರತಿನಿಧಿಗಳೆಂದು ಕಲಕತ್ತೆಯ ಅಜಯ ಚಕ್ರವರ್ತಿ**** ಮತ್ತು ಬಹುಕಾಲ ಮುಂಬಯಿಯಲ್ಲಿಯೇ ಇದ್ದು ಒಂದು ದಶಕದ ಹಿಂದೆ ಚೆನ್ನೈನಲ್ಲಿ ತಳ ಊರಿದ ಅರುಣಾ ಸಾಯಿರಾಮ***** ಭಾಗವಹಿಸಿದ್ದರು.
ಈ ಲೇಖನದ ಯಾವುದೇ ಸುಳಿವು ಆ ಸತ್ರದಲ್ಲಿ ಕಾಣದಿದ್ದರೂ ಚರ್ಚಾಸತ್ರದ ನೆರಳಿನಲ್ಲಿಯೇ ಈ ಏಕಾತ್ಮತೆಯ ಭಾವನೆ ನನ್ನನ್ನು ಎಚ್ಚರಿಸಿತು. ಇದನ್ನೇ ಭಾರತದ ಸರಕಾರ ಲಕ್ಷಗಟ್ಟಲೇ ಹಣ ಹರಿಸಿ, ‘
See Also: Indian Music