ಪ್ರಕಾಶ್ ಬುರ್ಡೆ – ಕೆಲವು ನೆನಪುಗಳು –

 

 

ಎಸ್.ಎಲ್. ಭೈರಪ್ಪ

 

”ಆತ್ಮೀಯರು ಪೂರ್ಣಾಯುಷ್ಯವನ್ನು ಪೂರೈಸಿ ಸತ್ತರೆ ಅವರ ಸಾವನ್ನು ಒಪ್ಪಿಕೊಳ್ಳಲು ಮನಸ್ಸಿಗೆ ಹೆಚ್ಚು ಕಷ್ಟವಾಗುವುದಿಲ್ಲ. ಅಕಾಲ ಮರಣಕ್ಕೊಳಗಾದ ಆತ್ಮೀಯರ ಸಾವು ನಮ್ಮನ್ನು ಅಸಹಾಯಕರನ್ನಾಗಿಸುತ್ತದೆ. ಅವರನ್ನು ನೆನಸಿಕೊಳ್ಳುವುದನ್ನು ಬಿಟ್ಟು ಬೇರೇನೂ ಮಾಡಲಾರದ ಅಸಹಾಯಕತೆಯಿಂದ ತೊಳಲುತ್ತೇನೆ. ಅವರನ್ನು ಜ್ಞಾಪಿಸಿಕೊಂಡು ನಾಲ್ಕು ಸಾಲು ಬರೆದುಕೊಂಡರೆ ಸ್ವಲ್ಪವಾದರೂ ಶಮನವಾದೀತು. ನನ್ನ ಪುಸ್ತಕ “ಸಂದರ್ಭ: ಸಂವಾದ”ದಲ್ಲಿ ಬರೆದ ಎರಡು ಪುಟಗಳನ್ನು ಇಲ್ಲಿ ನೆನಸಿಕೊಳ್ಳುತ್ತೇನೆ.

ಪ್ರಕಾಶ್ ಬುರ್ಡೆ ಮೂಲ ಧಾರವಾಡದವರು. ಆಕಾಶವಾಣಿಯ ನಮ್ಮ ಜ್ಯೋತ್ಸ್ನಾ ಕಾಮತರ ತಮ್ಮ. ಮುಂಬಯಿಯಲ್ಲಿ ನೌಕರಿಮಾಡಿ ನೆಲೆಸಿದ್ದರೂ ಅವರ ಕನ್ನಡ ಮತ್ತು ಕರ್ನಾಟಕದ ಪ್ರೀತಿ ಅಸಾಧಾರಣವಾದದ್ದು. ಮುಂಬಯಿಯ ಯಾವ ಕನ್ನಡ ಕಾರ್ಯಕ್ರಮಕ್ಕೂ ತಪ್ಪದೆ ಹಾಜರಾಗುತ್ತಾರೆ ಮತ್ತು ಅವರು ಇಂದಿಗೂ ಕನ್ನಡ ಪುಸ್ತಕಗಳನ್ನು ಓದುವವರು. ಮೇಲಾಗಿ ಸಂಗೀತವೆಂದರೆ ನಿಜವಾದ ನಶೆ ಇರುವವರು. ಮುಂಬಯಿಯ ಸಂಗೀತ ಜೀವನವನ್ನು ಕುರಿತು ಒಂದು ಪುಸ್ತಕ ಬರೆಯುವಷ್ಟು ಅನುಭವ ಉಳ್ಳವರು. ಸಂಗೀತದ ಸಭೆಗಳು, ಅವು ಆರಂಭವಾದ ವರ್ಷಗಳು, ಒಂದೊಂದರ ವೈಶಿಷ್ಟ್ಯ, ಯಾವ ಯಾವ ವರ್ಷ ಯಾವ ಯಾವ ದೊಡ್ಡ ಗಾಯಕರು ಎಲ್ಲೆಲ್ಲಿ ಹಾಡಿದರು ಅಥವಾ ನುಡಿಸಿದರು ಎಂಬ ವಿವರಗಳನ್ನು ಸಖತ್ ಬಲ್ಲವರು. ಬಹಳ ವರ್ಷ ಇಂಗ್ಲಿಷ್ ಪತ್ರಿಕೆಗಳಿಗೆ ಸಂಗೀತದ ವಿಮರ್ಶೆ ಬರೆಯುತ್ತಿದ್ದವರು. ಅವರು ಮತ್ತು ಓಂಕಾರ ಗುಲ್ವಾಡಿ ಇಬ್ಬರೂ ಕೂಡಿ ನನಗೆ ಮುಂಬಯಿ ಸಂಗೀತ ಜೀವನದ ಅಧಿಕೃತ ಪರಿಚಯ ಮಾಡಿಸುವ ಒಂದು ವಾರದ ಟೈಂಟೇಬಲ್ ಹಾಕಿದರು. ಗುಲ್ವಾಡಿಗೆ ಆಗಾಗ್ಗೆ ತಬಲಾವಾದನದ ಕಾರ್ಯಕ್ರಮವಿದ್ದು ಅವರು ಬರಲಾಗುತ್ತಿರಲಿಲ್ಲ. ಆದರೆ ಬುರ್ಡೆಯವರು ಬೆಳಗಿನಿಂದ ರಾತ್ರಿಯವರೆಗೆ ಒಂದೇ ಸಮನೆ ನನ್ನ ಜೊತೆಗಿದ್ದು ಎಲ್ಲ ಕಡೆಗೂ ಕರೆದೊಯ್ದು ಇಂಥಿಂಥ ಕಡೆಯೇ ಸಂಗೀತ ಕಾರ್ಯಕ್ರಮ ಸಂಗೀತೋತ್ಸವ ನಡೆಯಿತು ಎಂದು ತೋರಿಸಿ ವಿವರಿಸಿದರು.

ಸಂಗೀತಗಾರರಲ್ಲಿ ದಿನಕರ ಕಾಯ್ಕಿಣಿ ಮತ್ತು ಎಸ್.ಸಿ.ಆರ್. ಭಟ್ ಅವರನ್ನು ಭೇಟಿಮಾಡಿ ಅವರ ವೃತ್ತಿಯ ಅನುಭವವನ್ನು ಕುರಿತು ದೀರ್ಘವಾಗಿ ಸಂಭಾಷಣೆ ಮಾಡಿದೆ. ಭಟ್ ಲಕ್ನೋದ ಪ್ರಸಿದ್ಧ ಮಾರಿಸ್ ಕಾಲೇಜಿನಲ್ಲಿ ರತಂಜನ್‌ಕರ್ ಅವರ ಶಿಷ್ಯರಾಗಿ ಅನಂತರ ಅಲ್ಲಿಯೇ ಬಹಳ ವರ್ಷ ಸಂಗೀತ ಕಲಿಸಿದ ಗುರುಗಳು. ಈಗ ಸಯಾನ್‌ನಲ್ಲಿರುವ ವಲ್ಲಭ ಸಂಗೀತಾಲಯದಲ್ಲಿ ಗುರುಗಳಾಗಿದ್ದಾರೆ. ಇಂಥವರೊಡನೆ ಮಾತನಾಡುವಾಗ ನನಗೆ ಬೇಕಿದ್ದುದು ಅವರ ಅನುಭವದ ಭಾಗ. ಆದರೆ ಎಷ್ಟೋ ಕಡೆ ಈ ಮುಖವು ಅವರ ಅಥವಾ ಬೇರೊಬ್ಬರ ಖಾಸಗಿ ಜೀವನವನ್ನು ಕುರಿತ ಪ್ರಶ್ನೆಯಾಗಿಬಿಡುತ್ತಿತ್ತು. ಮೊದಲ ಸಲ ಭೇಟಿಯ ಪರಿಚಯದಲ್ಲಿ ಮಾತನ್ನು ಈ ದಿಕ್ಕಿಗೆ ಎಳೆಯುವುದು ಸೂಕ್ಷ್ಮವಾಗುತ್ತಿತ್ತು. ಹೀಗಾಗಿ ಇಂಥವರಿಂದ ನನಗೆ ಹೆಚ್ಚು ಮಾಹಿತಿ ದೊರಕುವುದಿಲ್ಲವೆನ್ನಿಸಿತು. ಒಂದು ದಿನ ನಾವು ಮೂವರೂ ಪನವೇಲಿನಲ್ಲಿ ಒಂದು ಸಂಗೀತ ಶಾಲೆಯನ್ನು ಆರಂಭಿಸಿದ್ದ ಧ್ರುಪದದ ಫ಼ರೀರುದ್ದಿನ್ ಡಾಗರ್ ಅವರಲ್ಲಿ ಹೋದೆವು. ಧ್ರುಪದ ಶೈಲಿಯ ವೈಶಿಷ್ಟ್ಯಗಳನ್ನು ತಿಳಿಯಲು ಇದರಿಂದ ಹೆಚ್ಚು ಅನುಕೂಲವಾಯಿತು. ಮರುದಿನದಿಂದ ನಮ್ಮ ಭೇಟಿಗಳ ರೀತಿಯನ್ನು ಬದಲಿಸುವಂತೆ ನಾನು ಪ್ರಕಾಶ್ ಬುರ್ಡೆಯವರಿಗೆ ಸೂಚಿಸಿದೆ. ನನಗೆ ಬೇಕಾದುದು ಹರಟೆ ಗುಸುಗುಸುಗಪ್ಪಗಳಲ್ಲಿ ಹೊರಬರುವ ಸಂಗೀತ ಮತ್ತು ಸಂಗೀತಗಾರರಿಗೆ ಸಂಬಂಧಿಸಿದ ವಿಷಯಗಳು. ದೊಡ್ಡ ಗಾಯಕರೊಡನೆ ನಡೆಸುವ ಶ್ರೀಮದ್ಗಂಭೀರ ಕಲಾಮೀಮಾಂಸೆಯ ತತ್ತ್ವಗಳಲ್ಲ. ಇಂಥ ಗಪ್ಪಾಗಳಿಗೆ ಕೆಳಮಟ್ಟದ ಸಂಗೀತಗಾರರು, ಕಡಿಮೆ ಸಂಪಾನೆಯ ತಬಲಾ ಮತ್ತು ಹಾರ್ಮೋನಿಯಂ ಸಾಥಿದಾರರು ಹೆಚ್ಚು ಉಪಯುಕ್ತರು. ಆದ್ದರಿಂದ ಅವರನ್ನು ಭೇಟಿಯಾಗೋಣ ಎಂಬ ನನ್ನ ಸಲಹೆಯನ್ನು ಬುರ್ಡೆಯವರು ಒಪ್ಪಿಕೊಂಡರು. ಇಂಥ ಹಲವರು ಅವರಿಗೂ ಗುಲ್ವಾಡಿಗೂ ಗೊತ್ತಿದ್ದರು. ನನ್ನ ಪರಿಚಯ ಹೇಳುವುದೇ ಬೇಡ. ಸುಮ್ಮನೆ ಈ ಕಡೆ ಬಂದಿದ್ದೆ, ನಿಮ್ಮನ್ನ ನೋಡಿ ಹೋಗೋಣ ಅಂತ ಇತ್ತ ತಿರುಗಿದೆವು, ಹೇಗಿದ್ದೀರಾ? ಎಂಬ ಕುಶಲ ಸಂಭಾಷಣೆ ಆರಂಭಿಸುವುದು. ಕೊಡುವ ಚಹಾ ಕುಡಿಯುವುದು, ಸಂಭಾಷಣೆಯನ್ನ ಗಪ್ಪಾದ ಕಡೆಗೆ, ಇತರ ಪ್ರಸಿದ್ಧ, ಅಪ್ರಸಿದ್ಧ ಸಂಗೀತಗಾರರ ಬಗೆಗೆ, ಅವರ ಗುಸುಗುಸುಗಳ ಕಡೆಗೆ ತಿರುಗಿಸುವುದು, ನಾನು ಸುಮ್ಮನೆ ಕೂತಿರುವುದು, ಸಂಭಾಷಣೆ ಹಿಂದಿ ಅಥವಾ ಮರಾಠಿ ಯಾವ ಭಾಷೆಯಲ್ಲಿ ನಡೆದರೂ ನನಗೆ ಅರ್ಥವಾಗುತ್ತದೆ ಎಂದು ಮಾತನಾಡಿಕೊಂಡು ಹೋದೆವು. ಹೀಗೆ ದಿನಕ್ಕೆ ಇಬ್ಬರು ಮೂವರಂತೆ ಮೂವರು ತಬಲಾಜಿಗಳು, ನಾಲ್ವರು ಹಾರ್ಮೋನಿಯಂ ಸಾಥಿದಾರರೊಡನೆ ತಲಾ ಎರಡು ಮೂರು ಗಂಟೆ ಕಳೆದೆವು. ನನಗೆ ಬೇಕಾದಷ್ಟು ವಿವರಣೆಗಳು ದೊರೆತವು. ಸಾಹಿತ್ಯ ಹುಟ್ಟುವುದು ಇಂಥ ಮಾತುಗಳಿಂದ, ಗಂಭೀರ ಶಾಸ್ತ್ರ ಅಥವಾ ಸಿದ್ಧಾಂತದ ಚರ್ಚೆಯಿಂದಲ್ಲ ಎಂಬ ನನ್ನ ನಂಬಿಕೆ ಮತ್ತೊಮ್ಮೆ ನಿಜವಾಯಿತು.
ಬುರ್ಡೆಯವರು ಒಬ್ಬ ಗಾಯಕರೊಡನೆ ಭೇಟಿ ಏರ್ಪಡಿಸಿದ್ದರು. ‘ಒಳ್ಳೆಯ ಮಾತುಗಾರ, ಸಂಗೀತ ಪ್ರಪಂಚದ ಬೇಕಾದಷ್ಟು ರುಚಿರುಚಿ ಘಟನೆಗಳು ಗೊತ್ತಿರುವ ಮನುಷ್ಯ. ನಿಮಗೆ ತುಂಬ ಅನುಕೂಲವಾಗುತ್ತೆ’ ಎಂದರು. ಆತ ಆ ಸಂಜೆ ಬಂದ. ಅರ್ಧ ತಾಸು ಮಾತು ನಡೆಯಿತು. ಆತನಿಗೆ ಮಾತಿನ ಲಹರಿ ಇರಲಿಲ್ಲ. ನನಗೆ ಬೇರೆ ಅಪಾಯಿಂಟ್‌ಮೆಂಟ್ ಇದೆ ಎಂದು ಹೇಳಿ ಹೋಗಿಬಿಟ್ಟ. ಅವನು ಹೋದ ನಂತರ ಬುರ್ಡೆಯವರಿಗೆ ಅರ್ಥವಾಯಿತು. ಅದು ಪಾನೀಯವಿಲ್ಲದಿದ್ದರೆ ಅವನ ಬುದ್ಧಿ ಜಡವಾಗುವ ಸಮಯ. ಅದಕ್ಕೆ ಅಪಾಯಿಂಟ್‌ಮೆಂಟ್ ಎಂಬ ನೆಪ ಹೇಳಿ ಹೋಗಿದ್ದಾನೆ. ‘ನಾವೇ ಪಾನೀಯಕ್ಕೆ ವ್ಯವಸ್ಥೆ ಮಾಡೋಣ. ನಾಳೆ ಸಂಜೆ ಮತ್ತೆ ಕರೆಸಿ,’ ನಾನು ಸೂಚಿಸಿದೆ. ಆ ದಿನ ನಾವು ಭೇಟಿಯಾದದ್ದು ಸಂಗೀತದ ಪಾಠ ನಡೆಸುವ ಒಂದು ಆಶ್ರಮ. ಅಲ್ಲಿ ಪಾನಿಯ ನಿಷಿದ್ಧ. ಆದ್ದರಿಂದ ಮರುಸಂಜೆ ಒಂದು ಬಾರಿನಲ್ಲಿ ಆತ ಮತ್ತು ನಾವು ಮೂವರು ಕುಳಿತೆವು. ನಾನಂತೂ ಕುಡಿಯುವವನಲ್ಲ. ಉಳಿದವರು ಅವನಿಗೆ ಕಂಪನಿ ಕೊಟ್ಟರು. ಆದರೆ ಸ್ಥಳಾಭಾವದ ಮುಂಬಯಿಯ ಬಾರ್ ಎಂದರೆ ಸಿಟಿ ಬಸ್ಸಿನಷ್ಟು ಕಿಷ್ಕಿಂಧ. ಎಷ್ಟು ಧ್ವನಿ ತಗ್ಗಿಸಿ ಮಾತನಾಡಿದರೂ ಹಿಂದು ಮುಂದಿನವರಿಗೆ ಅಕ್ಕಪಕ್ಕದವರಿಗೆ ಕೇಳಿಸುತ್ತಿತ್ತು. ಅವರ ಮಾತು ನಮಗೂ ಕೇಳಿಸುತ್ತಿತ್ತು. ಆತನನ್ನು ಲಹರಿಗೆ ತಂದು ನನಗೆ ಬೇಕಾದ ವಿಷಯವಾಗಿ ಮಾತನಾಡಿಸುವುದು ಹೇಗೆ? ಇಡೀ ಕಾರ್ಯಕ್ರಮವು ವ್ಯರ್ಥವಾಯಿತು. ಇದನ್ನು ಬೇಗ ಮುಗಿಸಬೇಕೆಂದು ನನಗೆ ಅನ್ನಿಸತೊಡಗಿತು. ಆದರೆ ಆತ ಮತ್ತೊಂದಕ್ಕೆ, ಇನ್ನೊಂದಕ್ಕೆ ಆರ್ಡರ್ ಮಾಡತೊಡಗಿದ. ಬಿಲ್ ತೆತ್ತ ಮೇಲೆ ಸರಿಯಾದ ಜಾಗ ಹುಡುಕಿ ನಾಳೆ ಸಂಜೆ ಇನ್ನೆಲ್ಲಾದರೂ ಏರ್ಪಡಿಸೋಣವೇ ಎಂದು ನಾನು ಬುರ್ಡೆಯವರಿಗೆ ಸೂಚಿಸಿದೆ. ಅವರು ನಿಮ್ಮದು ಸಾಹಿತ್ಯದ ಕೆಲಸ. ಸಂಜೆ ಒಂದು ಕೋಣೆ ಬಿಟ್ಟುಕೊಡಿ ಅಂತ ಕರ್ನಾಟಕ ಸಂಘವನ್ನು ಕೇಳಬಹುದು. ಆದರೆ ಅಲ್ಲಿ ಮದ್ಯದ ಸರಬರಾಜು ನಿಷಿದ್ಧ. ಕಾಫ಼ಿ ಚಹಾ ತಿನಿಸುಗಳಿಗೆ ಆಕ್ಷೇಪವಿಲ್ಲ” ಎಂದರು. ‘ಬೆಳಿಗ್ಗೆಯೋ ಮಧ್ಯಾಹ್ನವೋ ಆತನನ್ನು ಭೇಟಿಮಾಡಿದರೆ ಹೇಗೆ” ಎಂದೆ. ‘ಅವನಿಗೆ ಸಂಜೆ ಮಾತ್ರ ಬಿಡುವಾಗೂದು’ ಎನ್ನುವಾಗ ಅವರೂ ಅಸಹಾಯಕರಾಗಿದ್ದರು.

ಪುಣೆ ವಿಶ್ವವಿದ್ಯಾಲಯವು ಅದುವರೆಗೆ iರಾಠಿಗೆ ಅನುವಾದವಾಗಿ ಪ್ರಕಟವಾಗಿದ್ದ ನನ್ನ ಕಾದಂಬರಿಗಳನ್ನು ಕುರಿತು ಎರಡು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಮಹಾರಾಷ್ಟ್ರದ ಎಲ್ಲ ವಿಶ್ವವಿದ್ಯಾಲಯಗಳ ಮರಾಠಿ ಪ್ರಾಧ್ಯಾಪಕರು ಪುಣೆಯ ಎಲ್ಲ ಕಾಲೇಜುಗಳ ಮರಾಠಿ ಅಧ್ಯಾಪಕರು ಭಾಗವಹಿಸಿದ್ದರು. ಬುರ್ಡೆಯವರೂ ಬಂದಿದ್ದರು. ಆಗ ‘ಮಂದ್ರ’ವು ಕನ್ನಡದಲ್ಲಿ ಪ್ರಕಟವಾಗಿತ್ತು. ಮರಾಠಿಯ ಅನುವಾದವಾಗಿರಲಿಲ್ಲ. ಬುರ್ಡೆಯವರು ಈ ಕಾದಂಬರಿಯನ್ನು ಕುರಿತು ಬಹಳ ಪರಿಣಾಮಕಾರಿಯಾಗಿ ಮರಾಠಿಯಲ್ಲಿ ಭಾಷಣ ಮಾಡಿದರು. ಮರಾಠಿ ಜನಗಳಿಗೆ ಸಾಹಿತ್ಯದಷ್ಟೇ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿ. ‘ಮಂದ್ರ’ದ ವಸ್ತು ಮತ್ತು ವಿನ್ಯಾಸವನ್ನು ಕೇಳಿದ ಅವರು ಅದರ ಬಗೆಗೆ ಆಸಕ್ತರಾದರು. ಪತ್ರಿಕೆಯವರು ಬರೆದರು. ಹೀಗಾಗಿ ‘ಮಂದ್ರ’ದ ಮರಾಠಿ ಅನುವಾದವು ಬಹುಬೇಗ ಪ್ರಕಟವಾಯಿತು.

‘ನೀವು ಮುಂಬಯಿಗೆ ಬಂದಾಗಲೆಲ್ಲ ನಮ್ಮ ಮನೆಯಲ್ಲೇ ಉಳಿಯಬೇಕು’ ಎಂದು ಬುರ್ಡೆಯವರು ಒತ್ತಾಯಮಾಡಿದ್ದರು. ಅದು ಬಾಯಿಮಾತಿನದಲ್ಲ. ನಿಜವಾದ ವಿಶ್ವಾಸದಿಂದ ಮಾಡಿದ್ದು. ಒಮ್ಮೆ ಕರೆದೊಯ್ದು ಉಳಿಸಿಕೊಂಡೂ ಇದ್ದರು. ಕೇಂದ್ರ ಮುಂಬಯಿಯಲ್ಲಿದ್ದ ಅವರ ಮನೆಯಲ್ಲಿ ಒಂದು ದಿನ ಪೂರ್ತಿ ಇದ್ದೆ. ಒಂದೇ ಸಮನೆ ನಾವು ಮಾತನಾಡಿದೆವು. ಮರು ಬೆಳಗ್ಗೆ ಅವರ ಮಗನು ನನ್ನನ್ನು ವಿಮಾನನಿಲ್ದಾಣಕ್ಕೆ ಕರೆದೊಯ್ದು ಬಿಟ್ಟ. ನನಗೆ ಆ ಮಧ್ಯಾಹ್ನದ ವೇಳೆಗೆ ಗಂಟಲು ಕೆರೆತ ಆರಂಭವಾಯಿತು. ಅನಂತರ ಕೆಮ್ಮು. ಅವರ ಮನೆ ಮೂಲ ಮುಂಬಯಿಯ ಕೇಂದ್ರದಲ್ಲಿ ಇತ್ತು. ನಗರದ ಆ ಇಡೀ ಭಾಗದಲ್ಲಿ ದಟ್ಟವಾದ ದೂಷಿತ ಹವೆ. ಅಲ್ಲಿಯೇ ವಾಸಿಸುವವರಿಗೆ ಅಭ್ಯಾಸವಾಗಿರುತ್ತದೆ. ಶರೀರವು ಗಂಟಲು ಕೆರೆತ ಕೆಮ್ಮು ಮೊದಲಾದವುಗಳಿಗೆ ಹೊಂದಿಕೊಂಡಿರುತ್ತದೆ. ನನ್ನಂತೆ ಒಂದು ದಿನ ಉಳಿಯುವವರಿಗೆ ಪ್ರತಿಕ್ರಿಯೆ ಶುರುವಾಗುತ್ತೆ ಎಂದು ಅರ್ಥಮಾಡಿಕೊಂಡೆ. ಬುರ್ಡೆಯವರು ಯಾವುದಾದರೂ ಸಣ್ಣ ಊರಿನಲ್ಲಿ ಅಥವಾ ಮುಂಬಯಿಯ ಹೊರ ವಿಸ್ತರಣದಲ್ಲಿ ವಾಸವಾಗಿದ್ದರೆ ಇನ್ನು ಹತ್ತಿಪ್ಪತ್ತು ವರ್ಷವಾದರೂ ಬದುಕುತ್ತಿದ್ದರು ಎಂಬ ವಿಷಾದ ನನ್ನಲ್ಲಿದೆ. ಆದರೆ ನಮ್ಮ ದೇಶದ ಕೋಟಿಕೋಟಿ ನಗರವಾಸಿಗಳಲ್ಲಿ ಬುರ್ಡೆಯವರೂ ಒಬ್ಬರಾಗಿದ್ದರು, ಎಂಬ ವಾಸ್ತವತೆಯ ಅರಿವೂ ಇದೆ.