ಜದ್ದನಬಾಯಿ ಸಿನೇ ನಟಿ ನರ್ಗಿಸ್, ಮತ್ತು ಸಿನೆಮಾದಲ್ಲಿ ಕೆಲಸಮಾಡುತ್ತಿದ್ದ ಅಖ್ತರ್ ಹುಸೇನ್ ಇವರ ತಾಯಿ ಎಂಬುದು ಗೊತ್ತಿದ್ದರೂ, ಆಕೆ ‘ತವಾಯಫ್’ ಸಂಸ್ಕಾರ ಪಡೆದ ಮನೆತನದಿಂದ ಬಂದವಳು ಎಂದು ಕೇವಲ ಕೆಲವರಿಗೇ ಗೊತ್ತಿದ್ದ ವಿಷಯ. ಇವಳು ಮೂಕಿ ಸಿನೇಮಾ ಟಾಕೀ ಆದ ದಶಕದಲ್ಲಿಯೇ ಹೆಸರು ಮಾಡಿದ ಗಾಯಕಿ, ಸಂಗೀತ ದಿಗ್ದರ್ಶಕಿ ಹಾಗೂ ನಿರ್ಮಾಪಕಿ ಎಂದೂ, ಇವಳ ನಂತರವೇ ಸರಸ್ವತೀದೇವಿ ಎಂಬ ಮತ್ತೊಬ್ಬಳು ಸ್ತ್ರೀ ಸಂಗೀತ ದಿಗ್ದರ್ಶಕಿಯಾಗಿ ಮುಂದೆ ಬಂದದ್ದೂ ಸಿನೇಮಾ ವರ್ತುಲದಲ್ಲಿದ್ದವರಿಗೆ ಗೊತ್ತು.
ಜದ್ದನ ಬಾಯಿ ಮೂಲತಃ ಅಲಹಾಬಾದಿನವಳು. ತಾಯಿ ದಲೀಪಾ ಜಾನ್. ಋಷಿಗಳ ಕುಲ ಮತ್ತು ನದಿಯ ಮೂಲ ಕೇಳಬಾರದಂತೆ. ಇದರಲ್ಲಿ ತವಾಯಫ್ ಮೂಲವನ್ನು ಕೂಡ ಸೇರಿಸಬಹುದು. ಗೋಹರಜಾನ್ ಮತ್ತು ಮೌಜುದ್ದೀನರಿಗೆ ಠುಮರಿ ಕಲಿಸಿದ ಭಯ್ಯಾ ಗಣಪತರಾವ್ ಅವರ ವೃದ್ಧಾಪ್ಯಕಾಲದ ಶಿಷ್ಯೆ ಈಕೆ. ಬಳಿಕ ಈಕೆ ಮೌಜುದ್ದೀನ ಬಳಿ ಕೆಲ ಕಾಲ ಕಲಿತು ಸಂಪೂರ್ಣವಾಗಿ ‘ಕೋಠಿ’ಯಲ್ಲಿ ಹಾಡುವಷ್ಟು ನಿಪುಣಳಾದಳು. ಕೊಲಂಬಿಯಾ ರಿಕಾರ್ಡ ಕಂಪನಿಯವರು ಇವಳ ಗಜಲ್ಗಳ ತಟ್ಟೆಗಳನ್ನು ಮುದ್ರಿಸಿದರು. ಲಾಹೋರದಲ್ಲಿಯ ಒಂದು ಫಿಲ್ಮ ಕಂಪನಿ ಇವಳಿಗೆ ಮುಖ್ಯ ಪಾತ್ರವನ್ನು ಕೊಟ್ಟು ೧೯೩೩ರಲ್ಲಿ ‘ರಾಜಾ ಗೋಪಿಚಂದ’ ಚಲನಚಿತ್ರವನ್ನು ಮಾಡಿದರು. ಕರಾಚಿಯಲ್ಲಿಯ ಕಂಪನಿ ಪರವಾಗಿ ‘ಇನ್ಸಾನ್ ಯಾ ಶೈತಾನ್’ದಲ್ಲಿ ನಟಿಸಿ, ಪ್ರೇಮಚಂದರ ‘ಸೇವಾಸದನ’ದಲ್ಲಿಯೂ ಪಾತ್ರವಹಿಸಿದಳು. ಮುಂದೆ ಒಂದೆರಡು ಚಲನಚಿತ್ರಗಳಿಗೆ ಸಂಗೀತ ದಿಗ್ದರ್ಶನ ಮಾಡುತ್ತಾ ಮಗಳು ನರ್ಗೀಸಳನ್ನು ಬಾಲಕಲಾವಿದೆಯಾಗಿ ಮುಂದೆ ತಂದಳು (೧೯೩೬).
ಜದ್ದನ್ಳ ಮೊದಲನೇ ಪತಿ ನರೋತ್ತಮ ಖತ್ರಿ. ಮುಸಲ್ಮಾನನಾಗಿ ‘ಬಚ್ಚಿಬಾಬು’ ಎಂಬ ಹೆಸರನ್ನಿಟ್ಟುಕೊಂಡ. ಎರಡನೆಯವ ಇರ್ಶಾದ್ ಮೀರಖಾನ, ಹಾಗೂ ಮೂರನೆಯವ ಮೋಹನ ಬಾಬು, ಸಾರಸ್ವತ ಕುಲೋತ್ಪನ್ನ, ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ‘ಅಬ್ದುಲ್ ರಶೀದ’ನಾದ. ಹೀಗಿತ್ತು ಜದ್ದನಬಾಯಿಯ ಜಾದೂ. ಇವನ ಮಗಳೇ ನರ್ಗಿಸ್ ಊರ್ಫ ಫಾತಿಮಾ ರಶೀದ. ಅನ್ವರ್ ಹುಸೇನ್ ಮತ್ತು ಅಖ್ತರ್ ಇವರು ಬಚ್ಚಿಬಾಬುವಿನ ಮಕ್ಕಳು. ತನ್ನ ೫೭ನೇ ವಯಸ್ಸಿನಲ್ಲಿಯೇ, ಅಂದರೆ, ೧೯೪೯ರಲ್ಲಿ ಜದ್ದನಬಾಯಿ ತೀರಿಕೊಂಡಳು.
ಸ್ವಲ್ಪ ವಿನೋದಕ್ಕಾಗಿ ನಾನು ‘ತವಾಯಫ್’ರ ಮೂಲವನ್ನು ಹುಡುಕಲು ಹೋಗಬಾರದು ಎಂದು ಹೇಳಿದರೂ ತಮ್ಮ ಮಕ್ಕಳ ಉನ್ನತಿಗಾಗಿ ಜದ್ದನಬಾಯಿಯಂತಹ ನೂರಾರು ಮಹಿಳೆಯರಿಗೆ ‘ತವಾಯಫ್/ದೇವದಾಸಿ ಸಂಸ್ಕೃತಿ’ಯನ್ನು ಬಿಟ್ಟುಕೊಡಲು, ಅಥವಾ ಸಂಪೂರ್ಣವಾಗಿ ಅಳಿಸಲು ಮುಂಬಯಿಯಂತಹ ಮಹಾನಗರವನ್ನು ಸೇರಿಕೊಂಡು ‘ಸಿನೇ ಸಂಸ್ಕೃತಿ’ಯಲ್ಲಿ ಕಾಲಿಡಬೇಕಾಯಿತು. ಈ ಕ್ಷೇತ್ರದಲ್ಲಿ ಅವಕಾಶಗಳು ಸಿಗದೇ ಹೋದ ಅನೇಕರಿಗೆ ಹಿಂದಿನ ಶತಮಾನದಲ್ಲಿ ಕೆನೆಡಿ ಬ್ರಿಡ್ಜು, ಗಿರಗಾಂವಿನಲ್ಲಿ ತಾತ್ಪೂರ್ತಿಕ ಸ್ವರೂಪದಲ್ಲಿ ತಮ್ಮ ‘ಕೋಠಿ’ಗಳನ್ನು ನಡೆಸಬೇಕಾಗಿ ಬಂದದ್ದು ಸತ್ಯ. ಉಸ್ತಾದ ಅಮೀರ ಖಾನ್, ಖಾದೀಮ ಹುಸೇನ ಅವರಂತಹ ಕೋಠಿವಾಲೆ ಗವಾಯಿಗಳು, ಉತ್ತರ ಹಿಂದುಸ್ಥಾನದಿಂದ ವಲಸೆ ಬಂದ ತವಾಯಫ್ರಿಗೆ ಸಂಗೀತವನ್ನು ಕಲಿಸಲು ಮುಂಬಯಿಯಲ್ಲಿ ಬೀಡುಬಿಟ್ಟರೆ, ಗೋವಾದಿಂದ ಬಂದ ‘ದೇವದಾಸಿ’ಗಳಿಗೆ ತರಬೇತಿ ಕೊಡಲು ಸಾರಸ್ವತ ಕುಲೋತ್ಪನ್ನ ಪಂಡಿತ ಹೊನ್ನಾವರ ಕೃಷ್ಣಭಟ್ಟರು ಸದಾ ತತ್ಪರರಾಗಿದ್ದರು. ಪಂ. ರಾಮಕೃಷ್ಣ ಬುವಾ ವಝೆ (ಇವರೂ ಗೋವಾದವರೇ) ಹೆಮ್ಮೆಯಿಂದ ತಮ್ಮನ್ನೂ ‘ಕೋಠಿವಾಲೆ ಗವಾಯಿ’ ಎಂದು ಹೇಳಿಕೊಳ್ಳುತ್ತಿದ್ದರು. ಅದೇ ಮುಂದೆ ೧೯೬೦ರ ದಶಕದಲ್ಲಿ ಗಾಯಕಿಯರು ತಮ್ಮ ಮೂಲವನ್ನು ಅಳಿಸಲು ಕೈಕೊಂಡ ಉಪಕ್ರಮಗಳು ಹಿಂದುಸ್ಥಾನಿ ಸಂಗೀತದ ಇತಿಹಾಸದಲ್ಲಿ ಹೇರಳವಾಗಿವೆ. ಕಾಲಾಯ ತಸ್ಮೈ ನಮಃ!
ಮೇಘನಾದ ದೇಸಾಯಿ ಹಾಗೂ ಕೀಶ್ವರ ದೇಸಾಯಿ, ಪತಿಪತ್ನಿ ಕೂಡಿ ನರ್ಗೀಸ್ದತ್ತಳ ಜೀವನ ಚರಿತ್ರೆಯನ್ನು ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಮೇಘನಾದ ಅರ್ಥಶಾಸ್ತ್ರಜ್ಞ, ಮೇಲಿಂದ ಮೇಲೆ ಎನ್ಡಿಟಿವಿಯಲ್ಲಿ ಕಾಣಿಸುವ ವ್ಯಕ್ತಿ. ಅವರ ಪುಸ್ತಕದಲ್ಲಿ ನರ್ಗೀಸಳ ತಾಯಿ ಜದ್ದನಬಾಯಿ ಹಾಗೂ ಅವಳ ಅಜ್ಜಿ ದಲೀಪಾಜಾನ್ರನ್ನು ಕುರಿತು ಸಾಕಷ್ಟು ವಿವರಗಳೊಂದಿಗೆ, ಅಂದರೆ, ಅವಳ ಅಜ್ಜಿ ಹಾಗೂ ಮೋತಿಲಾಲ ನೆಹರೂ ಅವರ ಸಂಬಂಧದ ಬಗ್ಗೆ ವಿಶೇಷ ಟಿಪ್ಪಣಿ ಮಾಡಿದ್ದಾರೆ.
ಜದ್ದನಬಾಯಿಯ ತಾಯಿ ದಲಿಪಾಜಾನ್ ಕೂಡ ಮೋತೀಲಾಲ ನೆಹರೂ ಅವರಂತೆಯೇ ಕಾಶ್ಮೀರದವಳು. ಬ್ರಾಹ್ಮಣ ಕುಟುಂಬದಲ್ಲಿ ಜನ್ಮತಾಳಿದರೂ ಬಾಲ್ಯಾವಸ್ಥೆಯಲ್ಲಿಯೇ ಅಪಹರಣಕ್ಕೆ ತುತ್ತಾಗಿ ಮುಂದೆ ತವಾಯಫ್ ಸಂಪ್ರದಾಯಕ್ಕೆ ಸೇರಿಕೊಂಡಳು. ಮೋತಿಲಾಲರ ಮೊದಲನೆಯ ಪತ್ನಿ ತೀರಿಕೊಂಡು ದುಃಖಿತರಾಗಿದ್ದ ಮೋತಿಲಾಲ ಮತ್ತು ದಲಿಪಾಜಾನ್ರ ಸಂಬಂಧ ಬೆಳೆಯಿತು. ಮೋತಿಲಾಲರು ಎರಡನೇ ಮದುವೆ ಮಾಡಿಕೊಂಡ ನಂತರವೂ ಈ ಸಂಬಂಧ ವೃದ್ಧಿಂಗತವಾಗಿತ್ತು. ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾದರೂ, ದಲೀಪಾ ಜಾನರ ಸಂಬಂಧ ಮೋತಿಲಾಲರ ಮೃತ್ಯುವಿನ ತನಕವಿತ್ತು. ಮೋತಿಲಾಲರು ತೀರಿಕೊಂಡ ಮೇಲೆ ದಲಿಪಾ ಜಾನ್, ನಿರಾಭರಣ ವಿಧವೆಯಂತೆ ತನ್ನ ಜೀವನಯಾತ್ರೆಯನ್ನು ಮುಗಿಸಿದಳು. ಅತ್ಯಂತ ಬಡತನದಲ್ಲಿದ್ದ ಆಕೆಗೆ ಜವಾಹರಲಾಲರೂ, ಮೋತಿಲಾಲ ನೆಹರು ಅವರ ನಿಕಟ ಆಪ್ತ ಸರ್ ತೇಜ ಬಹದ್ದೂರ ಸಪ್ರು (೧೮೭೫-೧೯೪೯) ಅವರೂ ಆರ್ಥಿಕ ನೆರವನ್ನು ನೀಡುತ್ತಿದ್ದರಂತೆ.
ಜದ್ದನ್ಬಾಯಿ ಕೂಡ ಮೊದಲು ಕಲಕತ್ತೆಯಲ್ಲಿ ತವಾಯಫ್ಗಿರಿ ನಡೆಸಿ, ಬಳಿಕ ಚಲನಚಿತ್ರ ಕ್ಷೇತ್ರದಲ್ಲಿ ಪದಾರ್ಪಣ ಮಾಡಿದಳು. ಜದ್ದನಬಾಯಿ, ಜವಾಹರಲಾಲ ನೆಹರು ಅವರಿಗೆ ಪ್ರತಿವರ್ಷ ಉತ್ತರ ಹಿಂದೂಸ್ಥಾನದಲ್ಲಿ ತುಂಬ ಪ್ರಚಲಿತವಾದ ರಾಖೀಬಂಧನ ಮಾಡುತ್ತಿದ್ದರೆಂಬ ಆಖ್ಯಾಯಿಕೆ ಇದೆ.
ಜದ್ದನಬಾಯಿಯ ಆರೆಂಟು ಮುದ್ರಿತ ೭೮ ಆರ್ಪಿಎಮ್ ಸ್ಪೀಡಿನ ತಟ್ಟೆಗಳಿವೆ. ಇವಳ ಹಾಡುಗಾರಿಕೆ ಅತ್ಯಂತ ಪರಿಪೂರ್ಣವಾಗಿದ್ದು, ಅವಳ ಹೈ ಸ್ಪೀಡಿನ ತಾನಗಾರಿಕೆ ಅದ್ಭುತವಾಗಿದೆ. ಸ್ವಲ್ಪ ಗಡುಸು ಧ್ವನಿಯ ಹಾಡುಗಾರಿಕೆಯಲ್ಲಿ ಇದ್ದ ನಾಟಕೀಯತೆಯಿಂದ ಕೇಳುಗರಿಗೆ ಸ್ವಲ್ಪ ಕೃತ್ರಿಮತೆಯ ಭಾಸವಾಗುತ್ತದೆ. ಅವಳ ಧ್ವನಿಮುದ್ರಣವೆಲ್ಲ ೧೯೪೨ರ ಮೊದಲಿನದು. ನಂತರ ಈಕೆ ಹಾಡುಗಾರಿಕೆಯನ್ನು ಕ್ರಮಶಃ ಬಿಟ್ಟುಕೊಟ್ಟಿರಬೇಕು ಎಂದೆನಿಸುತ್ತದೆ. ಮಗಳು ನರ್ಗಿಸಳ ಒಂದು ಹಾಡು ಕೂಡ ಮುದ್ರಿತವಾಗಿಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ನರ್ಗಿಸ್ ದತ್ ರಾಜ್ಯಸಭೆಯ ಸದಸ್ಯಳಾಗಿದ್ದಳು ಎಂಬ ಮಾತನ್ನು ನಾವು ಮರೆಯುವ ಹಾಗಿಲ್ಲ. ಅಂತೆಯೇ, ಅವಳ ಪತಿ ಸುನಿಲ್ ದತ್ ಮತ್ತು ಮಗಳು ಪ್ರಿಯಾ ದತ್ ಕೂಡ.