ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ
ಸಂಪಾದಕರು: ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಮತ್ತು ಡಾ. ಸುಷಮಾ ಅಶೋಕ ಆರೂರ್
(ನೇಸರು ತಿಂಗಳೋಲೆ, ನವೆಂಬರ್ ೨೦೧೭ ರಲ್ಲಿ ಬಂದ ಡಾ ಲೀಲಾ ಬಿ ಅವರ, ಪ್ರಕಾಶ ಬುರ್ಡೆಯವರ , “ಸಂಗೀತ ಸರಸಿ: ಪ್ರಕಾಶ ಬುರ್ಡೆಯವರ ಸಂಗೀತ ಯಾನ” ಈ ಪುಸ್ತಕದ ವಿಮರ್ಶೆಯನ್ನು ಇಲ್ಲಿ ಹಾಕಲಾಗಿದೆ.)
ಇದೊಂದು ಅಪರೂಪದ ಕೃತಿ. ಇತ್ತೀಚಿಗಷ್ಟೇ ನಮ್ಮನ್ನು ಅಗಲಿದ ಸಂಗೀತ ಪ್ರೇಮಿ, ವಿಮರ್ಶಕ , ಸಂಘಟಕ, ಕನ್ನಡ ಮರಾಠಿ ಜನರ ನಡುವೆ ಕೊಡಿಯಂತಿದ್ದ ಮತ್ತು ಕನ್ನಡ ಮರಾಠಿ ಭಾಷೆಗಳ ಬಾಂಧವ್ಯದಲ್ಲಿ ಹೆಚ್ಚು ದುಡಿದ ಮತ್ತು ಸದಾ ಹಸನ್ಮುಖಿಯಾದ ಪ್ರಕಾಶ ಬುರ್ಡೆಅವರ ಲೇಖನಗಳು ಇಲ್ಲಿವೆ. ಇದು ೫೬೮ ಪುಟಗಳ ಕೃತಿ. ಇದನ್ನು ಎಂಟು ಅಧ್ಯಾಯಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಬುರ್ಡೆಯವರ ಆತ್ಮೀಯರ , ‘ನುಡಿನಮನ’’ ಇದೆ. ಒಟ್ಟು ೧೪ ಲೇಖನಗಳು ಇಲ್ಲಿವೆ. ಹೆಸರಾಂತ ಸಾಹಿತಿ ಎಸ್.ಎಲ್ ಭೈರಪ್ಪನವರು ಪುಣೆ ವಿಶ್ವವಿದ್ಯಾಲಯದಲ್ಲಿ ತಮ್ಮ , ‘’ಮಂದ್ರ’ ‘ ಕಾದಂಬರಿ ಬಗ್ಗೆ ಪ್ರಕಾಶ ಬುರ್ಡೆಯವರ ಮರಾಠಿ ಭಾಷಣದ ಪ್ರಸ್ತಾಪ ಮಾಡಿದ್ದಾರೆ. “ಮರಾಠಿ ಜನರಿಗೆ ಸಾಹಿತ್ಯದಷ್ಟೇ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. “ಮಂದ್ರ’ದ ವಸ್ತು ಮತ್ತು ವಿನ್ಯಾಸವನ್ನು ಕೇಳಿದ ಅವರು ಅದರ ಬಗ್ಗೆ ಆಸಕ್ತರಾದರು.. ಪತ್ರಿಕೆಯವರು ಸಾಕಷ್ಟು ಬರೆದರು.ಹೀಗಾಗಿ ಮಂದ್ರದ ಮರಾಠಿ ಅನುವಾದ ಬಹುಬೇಗ ಪ್ರಕಟವಾಯಿತು.” ಪ್ರೊ. ರಹಮತ್ ತರಿಕೆರೆ ತಮಗೆ ಗಾಯಕಿ ,” ಅಮೀರಬಾಯಿ ಕರ್ಣಾಟಕಿ” ಯನ್ನು ಬರೆಯುವಾಗ ಬುರ್ಡೆಯವರಿತ್ತ ಮತ್ತು ಗೋಹರ ಹಾಗೂ ಅಮೀರಬಾಯಿ ಕರ್ಣಾಟಕಿ ಜನ್ಮ ಶತಮಾನೋತ್ಸವಗಳು ಬಂದಾಗ ಮುಂಬಯಿ ಕರ್ಣಾಟಕ ಸಂಘದಲ್ಲಿ ಅಪೂರ್ವವಾದ ಕಾರ್ಯಕ್ರಮವನ್ನು ಚಾಂದವಣಕರ ಜತೆಗೂಡಿ ನಡೆಸಿಕೊಟ್ಟದ್ದನ್ನು ದಾಖಲಿಸಿದ್ದಾರೆ. ಆಪ್ತ ಮಿತ್ರ ಡಾ. ವ್ಯಾಸರಾವ್ ನಿಂಜೂರ್ ಅವರು ಪ್ರಕಾಶ ಬುರ್ಡೆಯವರಿಗೆ ಸಂಗೀತದ ಮೇಲೆ ಬರೆಯಲು ಪ್ರೋತ್ಸಾಹಿಸಿದವರು ಮತ್ತು ಬುರ್ಡೆಯವರು ಸ್ಥಾಪಿಸಿದ ಕರ್ನಾಟಕ ಸಂಘದ , ” ಕಲಾಭಾರತಿ”ಯ ಕನಸನ್ನು ನನಸಾಗಿ ಮಾಡಿದವರು. ಡಾ. ವ್ಯಾಸರಾವ್ ನಿಂಜೂರ್ ಅವರು ತಮ್ಮ ಮತ್ತು ಬುರ್ಡೆಯವರ ಆತ್ಮೀಯ ಸಂಬಂಧವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ’ಕಲಾಭಾರತೀ’ಯ ಹೆಚ್ಚಿನ ಶ್ರಮ ಬುರ್ಡೆಯವರದ್ದು ಎನ್ನುತ್ತಾ ಅವರ ಹಾಸ್ಯಪ್ರಜ್ಞೆಯನ್ನು ಕೂಡಾ ಜ್ಞಾಪಿಸಿಕೊಂಡಿದ್ದಾರೆ. ರಂಗಭೂಮಿಯ ವಿಮರ್ಶೆಗಳನ್ನು ಬರೆಯುವ ಮೂಲಕ ದೇಶದಾದ್ಯಂತ ಗಮನ ಸೆಳೆದದ್ದನ್ನೂ, ಟೈಮ್ಸ್ ಆಫ್ ಇಂಡಿಯಾಕ್ಕೆ ಅವರಿಂದ ಸುಮಾರು ಒಂದು ದಶಕದ ಕಾಲ ನಡೆದ ಸೇವೆಯನ್ನು ಶ್ರೀನಿವಾಸ ಜೋಕಟ್ಟೆ ನೆನೆಪಿಸಿದ್ದಾರೆ. ಬುರ್ಡೆಯವರು ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು ಎಂದಿದ್ದಾರೆ. ಬಿ.ಎ ಸನದಿ ಅವರು ಬುರ್ಡೆಯವರು ,”ತಮ್ಮ ಮುಂಬೈನ ಅತ್ಯಂತ ಹತ್ತಿರದ ಗೆಳೆಯ ” ಎಂದು ಬುರ್ಡೆಯವರೊಂದಿಗಿನ ಒಡನಾಟವನ್ನು ನೆನೆಪಿಸಿಕೊಂಡಿದ್ದಾರೆ.. ” ನಮ್ಮಿಬ್ಬರ ನಡುವಿನ ಸಮಾನ ಧರ್ಮವೆಂಬುದು ವ್ಯಾಖ್ಯಾನಕ್ಕೆ ಸಿಲುಕದ ಒಂದು ಪರಿಕಲ್ಪನೆ” ಎಂದಿದ್ದಾರೆ. ಡಾ. ಸುನೀತಾ ಶೆಟ್ಟಿ , ನಮ್ಮ ನಾಡಿನ ಹೆಸರಾಂತ ಲೇಖಕಿ , ಬುರ್ಡೆ ಅವರು ಒಂದು ಭಾಷಣದಲ್ಲಿ ,” ಕನ್ನಡ ಮರಾಠಿ ರಂಗಭೂಮಿಯ ಕೊಡು -ಕೊಳ್ಳುವಿಕೆಯನ್ನು ಸರಳವಾಗಿ ಉದಾಹರಣೆ ಸಹಿತವಾಗಿ ವಿವರಿಸಿದ್ದು ಅವರ ಮನಃಪಟಲದಲ್ಲಿದೆ” ಎಂದು ತಿಳಿಸಿದ್ದಾರೆ. ಡಾ. ಸುನಿತಾ ಶೆಟ್ಟಿ , ಬುರ್ಡೆಯವರ ಆಳವಾದ ವಿದ್ವತ್ತು ಮತ್ತು ಅವರ ಸಂಶೋಧನ ಪ್ರವೃತ್ತಿಯನ್ನು , ಅವರ ಹಲವಾರು ಲೇಖನಗಳ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ.. ಸೋದರಿ ಸುಷಮಾ ಆರೂರ್ ಅವರ ಲೇಖನ ಓದಿದ ಯಾರಿಗಾದರೂ ಕಣ್ಣೀರು ಬರದೆ ಇರಲಾರದು. ತನ್ನ ಅಣ್ಣನ ಬರವಣಿಗೆಯನ್ನು ಓದಿ ತನ್ನ ಅಣ್ಣನನ್ನು ಅರಿತಿದ್ದಾಗಿ ವಿವರಿಸಿದ್ದಾರೆ. ಸುಷಮಾಳ ಬರವಣಿಗೆಯ ಬಗ್ಗೆ ಹೇಳುವದಕ್ಕಿಂತ ಅವರ ಲೇಖನ ಓದಿದರೆ ಓಳಿತು. ತನ್ನ ಅಣ್ಣ, ” ಎಥ್ನೊಮ್ಯೂಸಿಕೊಲೊಜಿಸ್ಟ್” ಎಂದು ಬುರ್ಡೆಯವರ ಬಗ್ಗೆ ದಾಖಲಿಸಿದ್ದಾರೆ.
ಡಾ. ಲೀಲಾ. ಬಿ
ಹಳೆಯ ಗ್ರಾಮಫೋನ್ ರೆಕಾರ್ಡುಗಳು ಎಂದ ತಕ್ಷಣ ಕೋಡಲೇ ನೆನಪಿಗೆ ಬರುವ ಎರಡು ಹೆಸರುಗಳು ಡಾ. ಸುರೇಶ ಚಾಂದವಣಕರ್ ಮತ್ತು ಪ್ರಕಾಶ ಬುರ್ಡೆ ಅವರದ್ದು. ಬುರ್ಡೆಯವರು ಪ್ರಯತ್ನಿಸಿ ಸಂಗ್ರಹಿಸಿದ ಹಳೆಯ ಗ್ರಾಮಫೋನ್ ರೆಕಾರ್ಡುಗಳು. ಡಾ ಚಾಂದವಣಕರ್ ಅವರ ಮರಾಠಿ ದೈನಿಕ , ” ಮಹಾರಾಷ್ಟ್ರ ಟೈಮ್ಸ್ ನಲ್ಲಿ ಗ್ರಾಮಫೋನ್ ಯುಗ ಪ್ರಾರಂಭವಾಗಿ ಶತಮಾನೋತ್ಸವ ಆದಾಗ , “ಪೂರ್ವ ಸೂರಿಂಚೆ ಸೂರ್ ( ಪೂರ್ವ ಸೂರಿಗಳ ಸ್ವರಗಳು) ಎಂಬ ಶಿರ್ಷಿಕೆ ಅಡಿಯಲ್ಲಿ ಬರೆದಿದ್ದನ್ನು , ಪ್ರಕಾಶ ಬುರ್ಡೆ ತಪ್ಪದೇ ತನ್ನ ಲೇಖನಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾಗಿಯೂ ಮತ್ತು ಸ್ವತಃ ಕರ್ಣಾಟಕ ಸಂಗೀತದ ಧ್ವನಿ ಮುದ್ರಿಕೆಯನ್ನು ಪತ್ತೆ ಹಚ್ಚಿ ಆ ಮೂಲಕ ಹಿಂದಿನ ಹೆಸರುವಾಸಿ ಕಲಾವಿದರನ್ನು ಪರಿಚಯ ಮಾಡಲು ಪ್ರಯತ್ನಿಸಿದ್ದರು.” ಎಂದಿದ್ದಾರೆ. ” ನನ್ನ , ಪೂರ್ವ ಸೂರಿಂಚೆ ಸೂರ್ ತುಂಬ ಹಳೆಯ ಆದರೆ ಇಂಪು ಕಳೆದುಕೊಂಡ ಗ್ರಾಮ ಫೋನ್ ರೆಕಾರ್ಡುಗಳ ಕುರಿತಾಗಿತ್ತು.. ಇದು ಶ್ರೋತೃಗಳ ಮೆಚ್ಚಿಗೆ ಗಳಿಸಿತು. ಇದು ಬುರ್ಡೆಯವರಿಂದ ಸಾಧ್ಯವಾಯಿತು. ಅಂದಿದ್ದಾರೆ. ೨೦೦೪ ರಲ್ಲಿ ಕೇಸರಬಾಯಿ ಕೇರ್ಕರ ಅವರ ವಿರಳ ಧ್ವನಿ ಮುದ್ರಿಕೆ ಪುನರ್ಮುದ್ರಣದ ಸಿ.ಡಿ ” ಶ್ರುತಿ ಪ್ರಸಾರ” ಎಂಬ ಲೆಬೆಲ್ ಅಡಿ ಯಲ್ಲಿ ಕರ್ಣಾಟಕ ಸಂಘದಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮಕ್ಕೆ ಬಂದಿದ್ದ ಕೇಸರ ಬಾಯಿಯವರ ಮರಿಮಗಳು ೧೦ ಸಿ.ಡಿ ಕೊಂಡರಲ್ಲದೇ , ” ತನ್ನ ಮುತ್ತಜ್ಜಿ ಎಂತಹ ಅಸಾಧಾರಣ ಗಾಯಕಿ, ಸಂಗೀತದ ದಂತ ಕತೆಯಾಗಿದ್ದ ಪರಿ ತನಗೆ ಗೊತ್ತಿರಲಿಲ್ಲ ಎಂದು ಉದ್ಗರಿಸಿದರಂತೆ” ಇದರ ಯಶಸ್ಸು ಬುರ್ಡೆಯವರದ್ದು. “ಅಮೀರ ಬಾಯಿ ಕರ್ನಾಟಕಿ” ಪುಸ್ತಕ ಮರಾಠಿ, ಮತ್ತು ಕನ್ನಡದಲ್ಲಿ ಪ್ರಕಟಗೊಂಡಾಗ ಅವರಿಗೆ ಬಹಳ ಸಂತೋಷವಾಯಿತು ಎಂದು ಡಾ ಸುರೇಶ ಚಾಂದವಣಕರ್ ನೆನಪಿಸಿಕೊಂಡಿದ್ದಾರೆ. ಕೆ ಚಂದ್ರಮೌಳಿಯವರು ಕರ್ನಾಟಕ ಸಂಘದ ಬುರ್ಡೆಯವರ ಸಾಂಗತ್ಯ ಕಲಾಭಾರತಿಯಲ್ಲಿ ಜ್ಞಾಪಿಸಿಕೊಂಡಿದ್ದಾರೆ ಮತ್ತು ಅವರನ್ನು ,’’ಶ್ರವಣಕುಮಾರ’’ ಎಂದು ಎನ್ನಬಹುದು ಎಂದಿದ್ದಾರೆ. ವಿಠಲ್ ಸಿ. ನಾಡಕರ್ಣಿಯವರು ಬುರ್ಡೆಯವರು ” ನಿಜವಾದ ಕಲಾ ತಪಸ್ವಿ ಮತ್ತು ಹಲವಾರು ತರುಣ ಕಲಾವಿದರಿಗೆ ವೇದಿಕೆ ನಿರ್ಮಿಸಿ ಕೊಟ್ಟಿದ್ದಾರೆ “. ಬೇರೆ ಬೇರೆ ಭಾಷೆಗಳಲ್ಲಿ ಅವರ ನಿರರ್ಗಳ ನಿರೂಪಣೆಯನ್ನು ಮತ್ತು ಅವರ ವಿಶಾಲ ಮನೋಭಾವವನ್ನು ಜ್ಞಾಪಿಸಿಕೊಂಡಿದ್ದಾರೆ. ಕೊನೆಯದಾಗಿ ಸುಮೇಧಾ ರಾಯ್ಕರ್ ಮ್ಹಾತ್ರೆ ಅವರು , ” ಮಾನವತಾವಾದಿ, ವಿದ್ವಾಂಸ , ಏಕವ್ಯಕ್ತಿ ಡೈನಮೊ ಆಗಿ ಮುಂಬಯಿ ಮಹಾನಗರದ ಹಲವಾರು ಮೂಲೆಗಳಲ್ಲಿ ಪ್ರಕಾಶ ಬುರ್ಡೆಯವರು ಬೆಳಕು ಚೆಲ್ಲಿದ್ದಾರೆ.” ಎಂದಿದ್ದಾರೆ. ಹೀಗೆ ನಮನ ಸಲ್ಲಿಸಿದವರು ಪ್ರಕಾಶ ಬುರ್ಡೆಯವರ ಅತ್ಯಂತ ಆಪ್ತರು.. ಇವು ಅವರ ಮನದಾಳದ ಮಾತುಗಳು.
ರಂಗಭೂಮಿಯನ್ನು ಅಷ್ಟೇ ಪ್ರೀತಿಸಿದ ಬುರ್ಡೆಯವರ ಪುಸ್ತಕದಲ್ಲಿ ರಂಗ ಗೀತೆ ಮತ್ತು ಕಲಾವಿದರ ಸುದೀರ್ಘ ಪ್ರಸ್ತಾಪವಿದೆ. ಮರಾಠಿ ನಾಟ್ಯ ಸಂಸ್ಕೃತಿ, ಗುಜರಾತಿ ರಂಗಭೂಮಿ, ವಂಗರಂಗ ಗೀತೆಗಳು, ಮತ್ತು ಮುಂಬಯಿ ರಂಗಭೂಮಿ ನಡೆದು ಬಂದ ರೀತಿ, ೨೧ನೇ ಶತಮಾನದ ತನಕದ ಬೆಳವಣಿಗೆ ವಿವರಣೆ ನೀಡಿರುವದು ಮತ್ತು ಚಾರಿತ್ರಿಕ ಹಿನ್ನೆಲೆಯನ್ನು ಕೊಟ್ಟಿರುವದು ರಂಗಾಸಕ್ತರಿಗೆ ಅತ್ಯಂತ ಉಪಯುಕ್ತ. ೧೮೮೫- ೨೦೧೧ ರ ಅವಧಿಯಲ್ಲಿ ರಂಗಭೂಮಿ ವಿವಿಧ ಮುಖ ಬೆಳವಣಿಗೆಯನ್ನು ತೋರಿಸಿದೆ. ಮುಂಬಯಿ ರಂಗಭೂಮಿಯ ಜಮಶೇಡ್ಜಿ ಫ್ರಾಮಜಿ ಮಾದನ್ ರವರ ಬಗ್ಗೆ ಅಪರೂಪದ ಮಾಹಿತಿ ಇದೆ. ಇಂದಿನ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪರಂಪರೆ ಉಳಿಯಲು ಹಿಂದಿನ ಹಲವಾರು ಕಲಾವಿದರು ಶ್ರಮಪಟ್ಟು ಕಲಿತ ವಿದ್ಯೆಯ ದಾನವನ್ನು ಇಂದಿನ ಪೀಳಿಗೆಗೆ ಬಿಟ್ಟಿರುವದು ಸಾಕ್ಷಿ. ಅವರೆಲ್ಲ ‘’ಸಂಗೀತ ಸಾಮ್ರಾಜ್ಞಿ’ಯರು.’ ಎಂದು ವ್ಯಾಖ್ಯಾನಿಸಿದೆ. ಈ ಕಲಾವಿದರ ಪ್ರಸಿದ್ಧಿ, ಅವರ ಏಳು-ಬೀಳುಗಳ, ಜೀವನದ ಆಗು-ಹೋಗುಗಳನ್ನು ತಿಳಿಸಿಕೊಡುತ್ತದೆ. ಮುಖ್ಯವಾಗಿ ನಾವು ಕಂಡರಿಯದ ಕಲಾವಿದರ ಒಳಮುಖದ ಪರಿಚಯ ಇಲ್ಲಿದೆ. ಅಪರೂಪದ ಕಲಾವಿದೆ ಆಗ್ರೆವಾಲಿ ಜೊಹರಾಬಾಯಿ (೧೮೬೮-೧೯೧೩ )ಮೈ ನೇಮ್ ಇಸ್ ಜಾನಕಿಬಾಯಿ (೧೮೧೮- ೧೯೧೪) ಜದ್ದನ್ ಬಾಯಿ ( ನರ್ಗೀಸಳ ತಾಯಿ) ( ೧೮೯೨-೧೯೪೯) ಮೋಗುಬಾಯಿ ಕುರ್ಡಿಕರ್ (೧೯೦೪- ೨೦೧೦) ಇತ್ತೀಚಿಗೆ ನಿಧನರಾದ ಅಪ್ರತಿಮ ಕಲಾವಿದೆ ಕಿಶೋರಿ ಅಮೋಣಕರ್ ಅವರ ತಾಯಿ) ಯಾದೇ ಬೆಗಮ್ ಅಖ್ತರ್ ಕೀ (೧೯೧೪- ೧೯೭೪) ಅಂಜನಿಬಾಯಿ ಮಾಲಪೇಕರ್( ಮುಂಬಯಿ ವಸಂತಸೇನೆ, ೧೮೮೩-೧೯೭೪) ಈ ಎಲ್ಲ ಕಲಾವಿದರ ಚಾರಿತ್ರಿಕ ಹಿನ್ನೆಲೆ ಮತ್ತು ಇವುಗಳನ್ನು ಕಾಲಾನುಕ್ರಮವಾದ ಐತಿಹಾಸಿಕ ಘಟನೆಯ ದಾಖಲೆ ಇಲ್ಲಿಯ ವೈಶಿಷ್ಟ್ಯವಾಗಿದೆ.
ಮುಂದುವರೆಯುವದು