ಮುಂಬಯಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಮೂವತ್ತು ವರ್ಷಗಳ ಕಾಲ ವಕೀಲಿ ವೃತ್ತಿ ನಡೆಸಿದ ಮತ್ತು ನುರಿತ ಪಿಟೀಲು ವಾದಕರಾದ ಶ್ರೀ ನಾರಾಯಣ ಪಂಡಿತರು, ಅಕ್ಟೋಬರ ೧೩ರಂದು ಬೆಳಿಗ್ಗೆ ದೈವಾಧೀನರಾದರು. ಅವರು ಬಹಳ ವರ್ಷಗಳಿಂದ ಹೊನ್ನಾವರ ಹತ್ತಿರದ ಕಾಸರಕೋಡಿನಲ್ಲಿರುವ ಡಾ . ಕುಸುಮ ಸೊರಬರ ಸ್ನೇಹಕುಂಜದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಪಾರಂಪಾರಿಕ ಬಂದೀಶಗಳನ್ನು ಸಂಗ್ರಹಿಸಿ , ಅಭ್ಯಸಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ತಮ್ಮ ನಿರಂತರ ಕಲಿಕೆಯಿಂದ ಮುಂದುವರೆಸಿಕೊಂಡು ಹೋದ ಶ್ರೇಯ ಶ್ರೀ ನಾರಾಯಣ ಪಂಡಿತರಿಗೆ ಸಲ್ಲುತ್ತದೆ.
ಶ್ರೀ ನಾರಾಯಣ ಪಂಡಿತರ ತಂದೆ ವಿಘ್ನೇಶ್ವರ ಪಂಡಿತರು ಮುಂಬಯಿಯ ಹೆಸರಾಂತ ಸಂಗೀತಗಾರರಾದ ಪಂಡಿತ ಬಾಳಕೃಷ್ಣ ದೇವಧರರ ಸಂಗೀತ ಶಾಲೆಯಲ್ಲಿ ಪಿಟೀಲು ಶಿಕ್ಷಕರಾಗಿದ್ದರು. ಶ್ರೀ ನಾರಾಯಣರು ಮುಂಬಯಿಯಲ್ಲಿ ಜೂನ ೧೯೩೦ರಂದು ಹುಟ್ಟಿದ್ದು. ಅವರಿಗೆ ತಂದೆಯವರಿಂದ ಸಂಗೀತ ಶಿಕ್ಷಣ ದೊರಕಿತ್ತು. ಅದಕ್ಕಿಂತ ಹೆಚ್ಚಾಗಿ ದೇವಧರರ ಸಂಗೀತ ಶಾಲೆಗೆ ಬರುವ ಅನೇಕ ಹಿರಿಯ ಸಂಗೀತಗಾರರ ಮತ್ತು ವಾದಕರ ಕಚೇರಿಗಳನ್ನು ಆಲಿಸುವ , ಅಭ್ಯಸಿಸುವ ಸುಸಂಧಿಯು ಅವರಿಗೆ ಲಭಿಸಿತ್ತು. ದೇವಧರ ಸಾಹೇಬರ ಸಾಕುಮಗನಾದ ಮತ್ತು ಹಿಂದುಸ್ತಾನಿ ಸಂಗೀತದ ದಿಗ್ಗಜರೆನಿಸಿಕೊಂಡ ಕುಮಾರ ಗಂಧರ್ವರೊಡನೆ ಮೂವತ್ತು ವರ್ಷಗಳಿಗಿಂತ ಹೆಚ್ಚಿನ ಸಾಮಿಪ್ಯ ಅವರಿಗೆ ಚಿಕ್ಕಂದಿನಿಂಡ ದೊರಕಿತ್ತು. ದೇವಧರರ ಸಂಗೀತ ಶಾಲೆಯ ಆಶ್ರಯದಲ್ಲಿ ವಿವಿಧ ಪರಂಪರೆಯ ಹಾಡುಗಾರರನ್ನು ಆಮಂತ್ರಿಸಿ ಅನೇಕ ಕಾರ್ಯಕ್ರಮಗಳನ್ನು ಮತ್ತು ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳ ಒಳಿತಿಗಾಗಿ ಆಯೋಜಿಸುತ್ತಿದ್ದರು. ನಾರಾಯಣ ಪಂಡಿತರು ಬಡೆಗುಲಾಮ ಅಲಿ ಖಾನ್ ಸಾಹೇಬ, ಅಲ್ಲಾದಿಯಾಖಾನರು, ಕೇಸರಬಾಯಿ ಕೇರಕರ್, ಮೋಗುಬಾಯಿ ಕುರ್ಡಿಕರ್, ಕುಮಾರ ಗಂಧರ್ವ ಮುಂತಾದ ಹಲವಾರು ಶ್ರೇಷ್ಠ ಕಲಾವಿದರಿಗೆ ತಂಬೂರಿ ಶೃತಿಗೊಳಿಸುವದು ಇಲ್ಲವೇ ಸಾಥ ಕೊಟ್ಟಿದ್ದಾರೆ. ಇಂತಹ ವಾತಾವರಣದಲ್ಲಿ ಬೆಳೆದ ನಾರಾಯಣ ಪಂಡಿತರು ತಮ್ಮ ಅವಿರತ ಅಭ್ಯಾಸ ಮತ್ತು ಚಿಂತನೆಯಿಂದ ತಮ್ಮ ೨೫ ನೇಯ ವಯಸ್ಸಿನಲ್ಲಿಯೇ ಉತ್ತಮ ಪಿಟೀಲು ವಾದಕರೆಂದು ಹೆಸರು ಪಡೆದರು. ಆಕಾಶವಾಣಿಯಲ್ಲಿ ಅವರು ಏ ಗ್ರೇಡ್ ಕಲಾವಿದರಾಗಿದ್ದರು.
ನಾರಾಯಣ ಪಂಡಿತರು , ಕುಮಾರ ಗಂಧರ್ವರೊಡನೆ ಮಾಳವಾದಲ್ಲಿದ್ದಾಗ ಅನೇಕ ಪಾರಂಪಾರಿಕ ಬಂದಿಶಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡಿದ ಸಂಶೋಧಕರಷ್ಟೇ ಅಲ್ಲ ಅವರೊಬ್ಬ ಪ್ರಯೋಗಶೀಲರೂ ಆಗಿದ್ದರು. ಪ್ರತಿಯೊಂದು ಬಂದಿಶಿನ ಸಾಹಿತ್ಯ ರಚನೆ, ಮತ್ತು ಅವುಗಳನ್ನು ಸ್ವರಲಿಪಿಯಲ್ಲಿ ಬರೆಯುವ ಕುಶಲತೆ ಅವರಲ್ಲಿತ್ತು. ಇವೆಲ್ಲ ಅವರು ಕುಮಾರರ ಗರಡಿಯಲ್ಲಿ ಕಲಿತ ಪಾಠಗಳಾಗಿದ್ದವು. ” ಕುಮಾರಜೀ ರಚಿಸುತ್ತ ಹೋದಹಾಗೆ ಸ್ವರಲಿಪಿಯಲ್ಲಿ ಬರೆದುಕೊಳ್ಳುವ ಅಭ್ಯಾಸ ಆಗಿನಿಂದ ಶುರು ಆಗಿದ್ದು.ಕುಮಾರರ ಸಾಂಗತ್ಯ ಎರಡು ದಶಕದ್ದು . ಅವರಿಂದ ನೇರವಾಗಿ ಕಲಿತದ್ದು ಇರದಿದ್ದರೂ ಅಪರೊಕ್ಷವಾಗಿ ಅವರ ಪ್ರಯೋಗಗಳನ್ನು ಅಭ್ಯಸಿಸಿ ಸಂಗೀತದ ಭಾವ ಸೌಂದರ್ಯವನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಕುಮಾರರ ಸಾನಿಧ್ಯದಿಂದ ಕಲಿತಿರುವದು ನಿಜ. ಸಾಹಿತ್ಯದಲ್ಲಿ ಒಲವು ಬೆಳೆದದ್ದು ಕೂಡ ಇಲ್ಲಿಯ ವಾತಾವರಣದಲ್ಲಿ”. ಕುಮಾರರನ್ನು ಹತ್ತಿರದಿಂದ ಕಂಡ ನಾರಾಯಣ ಪಂಡಿತರನ್ನು ಭೇಟಿಯಾಗಬೇಕೆಂದು ನಾನು ಏಪ್ರಿಲ್ ೨೯ ೨೦೧೬ರಂದು ಕಾಸರಕೋಡಿನ ಸ್ನೇಹಕುಂಜದಲ್ಲಿ ಅವರೊಡನೆ ಎರಡು ಗಂಟೆ ಮಾತಾಡಿದ ಕೆಲ ತುಣುಕು ಮಾತುಗಳಿವು.
ಸ್ನೇಹಕುಂಜದಲ್ಲಿ ಇದ್ದುಕೊಂಡು ನಾರಾಯಣ ಪಂಡಿತರು ಅನೇಕರಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅವರ ಶಿಷ್ಯರಲ್ಲಿ ಅರ್ಪಿತ ಮತ್ತು ಅನ್ನಪೂರ್ಣ ಶಾನಭಾಗ ,ಲಲಿತಾ ಹಿರೆಗಂಗೆ, ಶಾರದಾ ಭಟ್, ಗಜಾನನ ಹೆಬ್ಬಾರ್, ರವಿಕಿರಣ , ಶ್ರೀಮತಿ ದೇವಿ ಮುಂತಾದವರು ತಮ್ಮ ಗುರುಗಳ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವದರಲ್ಲಿ ಸಂಶಯವಿಲ್ಲ.
ಸುಷಮಾ ಆರೂರ್