೧೯೯೭ರ ಮೊಟ್ಟ ಮೊದಲ ಶಿಶುನಾಳ ಶರೀಫ್ ಪ್ರಶಸ್ತಿಗೆ ಭಾಜಕರಾದ ಪುತ್ತೂರಿನಲ್ಲಿ ಹುಟ್ಟಿ , ದೂರದ ಪುಣೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಕನ್ನಡ ಸುಗಮ ಸಂಗೀತದ ಆದ್ಯ ಹಾಡುಗಾರರಾದ ಶ್ರೀಮತಿ ಜಯವಂತಿದೇವಿ ಹಿರೇಬೆಟ್ ಅವರು ಮೇ ೨೭, ೨೦೧೮ ರಂದು ಭಗವಂತನ ಪಾದ ಸೇರಿದರು.
ಐವತ್ತರ ದಶಕ, ಕರ್ನಾಟಕ ಏಕೀಕರಣದ ಕಾಲವದು, ರಾಷ್ಟ್ರಾಭಿಮಾನದ ಜೊತೆಜೊತೆಗೆ ಕನ್ನಡಾಭಿಮಾನವನ್ನು ಜನರಲ್ಲಿ ಬಿಂಬಿಸುವದು ಆಗ ಅವಶ್ಯಕವಾಗಿತ್ತು. ಇಂಥ ಹುರುಪಿನ ಕಾಲದಲ್ಲಿ ಕವಿಶ್ರೇಷ್ಠರಾದ ಕೆ.ಎಸ್ ನರಸಿಂಹ ಸ್ವಾಮಿಯವರ, ’ಹತ್ತು ವರ್ಷದ ಹಿಂದೆ’, ’ಮತ್ತೂರ ಸಂತೆಯಲ್ಲಿ’, ’ಅತ್ತಿತ್ತ ಸುಳಿದವರು ನೀವಲ್ಲವೇ?’ ದ .ರಾ ಬೇಂದ್ರೆಯವರ,’ ಯಾಕೋ ಕಾಣೆ ರುದ್ರ ವೀಣೆ,’ ’ವಾರೀ ನೋಟಾ’,’ ಇಂಥ ಕವನಗಳಿಗೆ ಕರ್ನಾಟಕ ಸಂಗೀತದ ರಾಗಗಳನ್ನು ಹಚ್ಚಿ, ಹಾಡಿದ ಶ್ರೇಯ ಜಯವಂತಿದೇವಿ ಹಿರೇಬೆಟ್ ಅವರಿಗೆ ಸಲ್ಲುತ್ತದೆ.
ಜಯವಂತಿದೇವಿಯವರು ಹುಟ್ಟಿದ್ದು ೧೯೨೭ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ. ತಂದೆ ಪಡುಕೊಣೆ ರಮಾನಂದರಾಯರು ಹಾಸ್ಯ ಪ್ರಬಂಧಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ಕೊಟ್ಟವರು. ತಾಯಿ ಸೀತಾಬಾಯಿ, ಕೂಡ ಕನ್ನಡದಲ್ಲಿ ಬರಹಗಾರ್ತಿ ಮತ್ತು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ನುರಿತವರಾಗಿದ್ದರು, ಜಯವಂತಿಯವರಿಗೆ ಚಿಕ್ಕಂದಿನಲ್ಲಿಯೇ ಸಂಗೀತದ ತರಬೇತಿ ಕೊಟ್ಟವರು. ಅವರ ಇನ್ನಿಬ್ಬ ಹೆಣ್ಣುಮಕ್ಕಳಾದ ಚಂದ್ರಭಾಗಾದೇವಿ ಮತ್ತು ಯಶೋಧರಾ ನೃತ್ಯದಲ್ಲಿ ಪರಿಣಿತಿ ಪಡೆದು ಪ್ರಸಿಧ್ಧರಾಗಿದ್ದಾರೆ. ಜಯವಂತಿಯವರ ಚಿಕ್ಕಪ್ಪ ಪ್ರಭಾಕರರಾವರು ಒಳ್ಳೆಯ ಹಾಡುಗಾರರು, ಪ್ರಬುದ್ಧ ತಬಲಾ ಹಾಗೂ ದಿಲರುಬಾ ನುಡಿಸುತ್ತಿದ್ದರು. ಇವರ ತಂದೆ ಪಡುಕೊಣೆ ನರಸಿಂಗರಾಯರು ಕಲ್ಲಿನ ಮೂರ್ತಿಗಳನ್ನು ತಯಾರಿಸುತ್ತಿದ್ದರಂತೆ! ಇಂತಹ ವೈವಿಧ್ಯಮಯ , ಸುಸಂಸ್ಕೃತ ವಾತಾವರಣದಲ್ಲಿ ಜಯವಂತಿದೇವಿಯವರು ಬೆಳೆದರು.
ಇವರ ತಂದೆಗೆ ಮದ್ರಾಸಿಗೆ ವರ್ಗವಾದಾಗ, ಕನ್ನಡ ಕಲಿಯುತ್ತಿದ್ದ ,ಜಯವಂತಿಯವರು ತಮ್ಮ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಆದರೆ ಕರ್ನಾಟಕ ಸಂಗೀತದ ಕಲಿಕೆಯನ್ನು ಬಿ.ಜಿ ರಾಮನಾಥರವರಲ್ಲಿ ಮುಂದುವರೆಸಿದರು. ಶಾಸ್ತ್ರೀಯ ಪಧ್ಧತಿಯ ಜೊತೆಗೆ , ದಾಸರ ಪದಗಳನ್ನು, ಕನ್ನಡ ಸುಗಮ ಸಂಗೀತವನ್ನೂ ಕಲಿಯುತ್ತಿದ್ದರು. ಇವರ ಪಕ್ಕದ ಮನೆಯಲ್ಲಿ ಆಗಿನ ಫೀಲ್ಮ ನಿರ್ದೇಶಕರಾದ ವಿ. ನಾಗಯ್ಯ ಅನ್ನುವವರು ವಾಸಿಸುತ್ತಿದ್ದರು. ಅವರು ತಂಜಾವೂರಿನ ಮರಾಠ ರಾಜನಾದ ಸರಫರೋಜೀಯವರ ( ಇವನು ಶಿವಾಜಿಯ ಮಲತಮ್ಮನಾದ ವ್ಯಂಕೋಜಿಯ ಮನೆತನದವನು) ಕಾಲದಲ್ಲಿ ಆಗಿ ಹೋದ ಕವಿ ಪುಂಗವ ತ್ಯಾಗರಾಜರ ಕುರಿತ , ’ತ್ಯಾಗಯ್ಯ ’ಎಂಬ ಚಿತ್ರಪಟದ ತಯಾರಿಯಲ್ಲಿದ್ದರು.ಅವರಿಗೆ ಒಳ್ಳೆಯ ಗಾಯಕಿಯ ಅಗತ್ಯವಿತ್ತು. ಪ್ರತಿದಿನ ಅವರ ಕಿವಿಯ ಮೇಲೆ ಬೀಳುತ್ತಿದ್ದ ಜಯವಂತಿಯವರ ಸುಂದರ ಗಾಯನ ಅವರನ್ನು ಆಕರ್ಷಿಸಿತ್ತು . ಹೀಗಾಗಿ , ಈ ಚಿತ್ರಪಟದಲ್ಲಿ , ಅರಮನೆಯ ಗಾಯಕಿಯ ಪಾತ್ರವನ್ನು ಕೊಟ್ಟು ಅವರಿಂದ ಕೆಲವು ಹಾಡುಗಳನ್ನು ಮತ್ತು ಒಂದು ಗಜ಼ಲ್ ಕೂಡ ಅವರಿಂದ ಹಾಡಿಸಿಬಿಟ್ಟರು, ಆ ಚಿತ್ರಪಟ ಪ್ರದರ್ಶನವಾದದ್ದು ೧೯೪೪ ರಲ್ಲಿ.
ಮುಂದೆ , ವಿ.ನಾಗಯ್ಯನವರೇ ಜಯವಂತಿಯವರಿಗೆ ಎಚ್.ಎಮ್,ವಿಯವರ ಪರಿಚಯ ಮಾಡಿಸಿದ ಕಾರಣ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಹಾಡಿದ ಅವರ ಕೆಲವು ಭಾವಗೀತೆಗಳು ಧ್ವನಿಮುದ್ರಿತವಾದವು.”ಭಾಗ್ಯದ ಲಕ್ಷ್ಮೀಬಾರಮ್ಮಾ’ ’ಹೂವ ತರುವರ ಮನೆಗೆ’. ’ ಸದಾ ಯೆನ್ನ ಹೃದಯದಲ್ಲಿ’, ’ತಲ್ಲಣಿಸಿದರು,’ ಸಹಿಸಲಾರೇನೆ ಗೋಪಿ”’ಇತ್ಯಾದಿ. ದ.ರಾ ಬೇಂದ್ರೆಯವರು ತಮ್ಮ ತಂದೆಯ ಪರಿಚಯದವರಾಗಿದ್ದು, ತಮಗೆ ಕನ್ನಡ ಹಾಡುಗಳನ್ನು ಹಾಡಲು ಪ್ರೋತ್ಸಾಹಿಸುತ್ತಿದ್ದರು ಎಂದು ಜಯವಂತಿಯವರು ಹೇಳಿಕೊಂಡಿದ್ದಾರೆ.
೧೯೪೮ರಲ್ಲಿ ಉದಯಶಂಕರವರ ನೃತ್ಯ-ಸಂಗೀತವನ್ನೊಳಗೊಂಡ” ಅಂತರ್ ರಾಷ್ಟ್ರೀಯ ಪ್ರಸಿದ್ಧಿಯ ’ಕಲ್ಪನಾ’ ಎಂಬ ಅಪ್ರತಿಮ ಮತ್ತು ಅನನ್ಯ ಚಿತ್ರಪಟಕ್ಕೆ ಎರಡು ಹಾಡುಗಳನ್ನು ಜಯವಂತಿಯವರು ಹಾಡಿದ್ದಾರೆ. ಒಂದು ”ಸದಿಯೊಂಕೀ ಬೆಹೊಶಿ’ ಇನ್ನೊಂದು’ ಬೆಹತೀ ಜಾ…’ ಎಂಬುದು.
ಹೀಗೆ ಸಂಗೀತ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದ್ದಂತೆ, ಅವರ ಮದುವೆ ದಿನಕರರಾವ್ ಹಿರೇಬೆಟ್ ಅವರೊಡನೆ ಆಗಿ ಅವರು ಪುಣೆಗೆ ಸ್ಥಳಾಂತರಿಸಿದರು. ಅವರ ಹೊಸ ಕುಟುಂಬವು ಅವರನ್ನು ಹಾಡಲು ಹುರಿದುಂಬಿಸಿದ್ದರೂ , ಅಷ್ಟು ಮಟ್ಟಿಗೆ ಅವರಿಗೆ ಅವಕಾಶಗಳು ಒದಗಲಿಲ್ಲ. ಆದರೆ, ಕನ್ನಡತಿಯಾದ ಅವರು ಆಗಾಗ ಕರ್ನಾಟಕ ಸಂಘ ಸಂಸ್ಥೆಗಳಲ್ಲಿ ಹಾಡುತ್ತಿದ್ದರು, ಧಾರವಾಡ, ಬೆಂಗಳೂರಿನಿಂದ ಆಕಾಶವಾಣಿಯಲ್ಲೂ ಉತ್ತಮ ಶ್ರೇಣಿಯ ಗಾಯಕಿಯಾಗಿದ್ದರಿಂದ ಕನ್ನಡ ಭಾವಗೀತೆ, ದಾಸರ ಪದಗಳನ್ನು ಹಾಡಿದ್ದಾರೆ.. ಮುಂಬಯಿ ಆಕಾಶವಾಣಿಯಿಂದಲೂ ಮರಾಠಿ, ಹಿಂದಿ ಮತ್ತು ಕೊಂಕಣಿ ಹಾಡುಗಳನ್ನು ಹಾಡಿದ್ದಾರೆ. ಆ ಕಾಲದಲ್ಲಿ ಆಕಾಶವಾಣಿಯ ಸಂಗೀತ ಕಾರ್ಯಕ್ರಮಗಳು, ಧ್ವನಿಮುದ್ರಣ ಬರುವ ಮೊದಲು ಹೆಚ್ಚಾಗಿ ನೇರ ಪ್ರಸಾರವಾಗುತ್ತಿದ್ದುದರಿಂದ ಮತ್ತು ಧ್ವನಿ ಸುರುಳಿಗಳು ನಶಿಸಿ ಹೋಗುವ ಕಾರಣ ಜಯವಂತಿಯವರ ಹೆಚ್ಚಿನ ಹಾಡುಗಳು ಈಗ ಲಭ್ಯವಾಗಿಲ್ಲ.
ಮುಂಬಯಿಯಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕರಾದ ಯಶವಂತ ದೇವ್ ಎಂಬವರ ಹತ್ತಿರ ೧೯೫೦-೬೦ ರ ವರೆಗೆ ಹಿಂದುಸ್ತಾನಿ ಸಂಗೀತದ ತರಬೇತಿ ಪಡೆದರು. ಇನ್ನೊಬ್ಬ ಚಿತ್ರಪಟ ಸಂಗೀತ ನಿರ್ದೇಶಕರಾದ ಬಬನರಾವ್ ನವಡಿಕರ್ ಅವರಲ್ಲಿ ಕೂಡ ಅನೇಕ ಭಾವಗೀತೆ, ಚಿತ್ರಪಟಕ್ಕೊಸ್ಕರ ಹಾಡುಗಳನ್ನು ಹಾಡಿದ್ದಾರೆ.
ಮುಂದೆ, ೧೯೯೭ರಲ್ಲಿ ಜಯವಂತಿದೇವಿಯವರಿಗೆ ಕನ್ನಡ ಸುಗಮಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಗಮನಿಸಿ ’ಸಂತ ಶಿಶುನಾಳ ಶರೀಫ ’ ರ ಮೊಟ್ಟ ಮೊದಲ ’ಜೀವಮಾನದ ಸಾಧನಾ ಪ್ರಶಸ್ತಿ ”ಯನ್ನು ಕೊಡಮಾಡಲಾಯಿತು. ಕರ್ನಾಟಕ ಬಿಟ್ಟು ದೂರ ಹೋದರೂ, ಕರ್ನಾಟಕ ಸರಕಾರ ತನ್ನನ್ನು ನೆನೆಸಿಕೊಂಡಿತೆಂಬ ಸಮಾಧಾನ ಅವರಿಗೆ ಕೊನೆಯವರೆಗೂ ಇತ್ತು.
ಅವರು ಕನ್ನಡ ಸುಗಮಸಂಗೀತದ ಆದ್ಯ ಪ್ರವರ್ತಕರಾಗಿದ್ದರು. ಅವರು ಕರ್ನಾಟಕದಲ್ಲಿದ್ದರೆ, ಅದೆಷ್ಟು ಪ್ರಗತಿ ಸಾಧಿಸುತ್ತಿದ್ದರೋ, ಮಾನ , ಸನ್ಮಾನ, ಹಣ ಗಳಿಸುತ್ತಿದ್ದರೋ, ಆದರೆ ಅವರಿಗೆ ಅದರ ವಿಶಾದವಿರಲಿಲ್ಲ. ಪ್ರಾಕೃತಿಕ ಸೌಂದರ್ಯದಿಂದ ತುಂಬಿದ ತಮ್ಮ ಅಥಶ್ರೀ ‘ಹಿರಿಯರ ಮನೆ’ಯಲ್ಲಿ ( Home for the Aged ) ವಿಧ ವಿಧ ಹಕ್ಕಿಗಳ ಚಿಲಿಪಿಲಿ ಗಾಯನ ಕೇಳುತ್ತ , ಅವರೊಡನೆ ಸಂಭಾಷಿಸುತ್ತ , ಎಲೆ ಮರೆಯ ಜೀವನದಲ್ಲಿಯೇ ಸಂತೃಪ್ತ ಜೀವನ ನಡೆಸಿ ಮೇ ೨೭, ೨೦೧೮ ಕ್ಕೆ ತಮ್ಮ ೯೧ನೇ ವಯಸ್ಸಿಗೆ ಅವರು ದೇವರ ಪಾದ ಸೇರಿದರು. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ.