ವಿಜಯನಗರದ ಕನ್ನಡತಿಯರ ಸೀರೆ

ಕರ್ನಾಟಕ ಶಾಸನಗಳು, ಕಾವ್ಯಗಳು ಹಾಗೂ ಇತರ ಗ್ರಂಥಗಳು ಶತಮಾನಗಳಿಂದ ಉಡುವ ಸೀರೆಗಳ ಕುರಿತು ಆಗೀಗ ಮಾಹಿತಿ ಕೊಡುವ ಕೃಪೆ ಮಾಡಿವೆ. ಆದರೆ ದುರ್ದೈವದಿಂದ ಅಂದಿನ ಕಲಾಕಾರರು ಇವನ್ನು ತಮ್ಮ ಕಲಾಕೃತಿಗಳಿಗಾಗಿ ಬಳಸಲೇ ಇಲ್ಲ! ಆದ್ದರಂದ ನಮ್ಮ ಪೂರ್ವಜರು ಸೀರೆಗಳಲ್ಲಿ ಶೋಭಿಸುತ್ತಿದ್ದರು? ಎಂದು ಅರಿಯುವ ಸುದೈವ ಇಂದಿನ ಪೀಳಿಗೆಗೆ ಇರಲೇಇಲ್ಲ. ಆದರೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿರುವ ಭಿತ್ತಿ ಚಿತ್ರಗಳು ಈ ಕೊರತೆಯನ್ನು ಹೋಗಲಾಡಿಲು ಬಹುಮಟ್ಟಿಗೆ ಸಹಾಯ ಮಾಡುತ್ತವೆ.

ಲೇಪಾಕ್ಷಿಯಲ್ಲಿರುವ ಪಾಪನಾಶೇಶ್ವರ ದೇವಾಲಯದ ಒಳ-ಹೋರಗೆ ವಿರುಪಣ್ಣನು ವಿಜಯನಗರದ ಆಳರಸು, ಅಚ್ಚುತದೇವರಾಯನ (ಕ್ರಿ.ಶ. 1530-42) ಕಾಲದಲ್ಲಿ ರಾಯಬಾರಿಯಾಗಿ ಕಾರ್ಯಕ್ಷಮತೆಯಿಂದ ಹಾಗೂ ಸ್ವಾಮಿ ನಿಷ್ಠೆಯಿಂದ ಪೆನುಕೊಂಡ ಮತ್ತು ಚಂದ್ರಗಿರಿ ಪ್ರಾಂತಗಳ ಆಡಳಿತಾಧಿಕಾರಿಯ ಹುದ್ದೆಗೇರಿದ. ಇದರಂದಾಗಿ ಆತನಿಗೆ ಈ ಭವ್ಯ ದೇವಾಲಯದ ನಿರ್ಮಾಣಕ್ಕೆ ಭಕ್ತರಿಂದ, ಪ್ರಜೆಗಳಿಂದ ಧನ ಸಹಾಯ ಪಡೆಯುವುದು ಸುಲಭವಾಯಿತು. ಈತನು ತನ್ನ ಸೋದರ ವೀರಣ್ಣನಾಯಕನ ನೆರವಿನಿಂದ ಕ್ರಿ.ಶ. 1535 ಯಲ್ಲಿ ಈ ದೇವಾಲಯವನ್ನು ವಿಸ್ತರಿಸಿ ಕಟ್ಟಿಸಿದನೆಂದು ಶಾಸನವು ಸಾರುತ್ತದೆ. ದೇವಾಲಯದ ಮೇಲ್ಛಾವಣಿಯ ಕಲ್ಲುಗಳಿಗೆ ಗಾರೆ ಬಳಿದು ಒಳಮೈಯನ್ನು ಭಿತ್ತಿ ಚಿತ್ರಗಳಿಗಾಗಿ ಬಳಸಲಾಗಿದೆ. ಶಿವಪುರಾಣ, ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಆಧಾರವಾಗಿ ಇಟ್ಟುಕೊಂಡು ಸಮಕಾಲೀನ ಜನ-ಜೀವನ ಬಿಂಬಿಸಲು ಯತ್ನಿಸಲಾಗಿದೆ.

 

 

 

 

 

 

ಚಿತ್ರಗಳಲ್ಲಿ ಸಿಂಹಪಾಲು ಸ್ತ್ರೀಯರಿಗೆ ಮೀಸಲಿಡಲಾಗಿದೆ. ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕು ಎಂದು ಲವಲವಿಕೆ ಹುಟ್ಟಿಸುವ ಲಾನಣ್ಯ ಅವರದು. ಹೆಂಗಳೆಯರೆಲ್ಲ ಸುಂದರ ಕೈಶಾಂಗಿಯರು. ಯಾರೊಬ್ಬರಿಗೂ ಕೊಬ್ಬು, ಬೊಜ್ಜು ಇಲ್ಲವೇಇಲ್ಲ! ಕಿರಿ ಸೀರೆಯನ್ನೆ ಮಾಟವಾಗಿ ಉಡುವ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ. ಕುಪ್ಪಸ ಧರಿಸದೆ, ಲಂಗ ತೊಡದೆ, ಸೀರೆಯೊಂದರಿಂದಲೇ ತಮ್ಮ ಹೆಣ್ತನವನ್ನು ಮುಚ್ಚಿಡುವ ಗುಟ್ಟನ್ನು ಕಲಿತು ಕೊಂಡಿದ್ದರು. ಸೀರೆಯ ಸೆರಗು ನರಿಗೆಗಳನ್ನು ಪಾದದವರೆಗೆ ಇಳಿಬಿಟ್ಟು ನಡುವಿಗೆ ಸೀರೆಯ ನಕ್ಷೆಗಳು ಎದ್ದು ಕಾಣುವಂತೆ ಸುತ್ತಿಕೊಂಡಿದ್ದಾರೆ. ಸೆರಗು ಎಡ ಬುಜದಿಂದ ಮೇಲೇರಿ ಹೋಗುವಾಗ ವಕ್ಷ ಸ್ಥಳವನ್ನು ಸರಿಯಾಗಿ ಮುಚ್ಚಿ ಹಾದಿರುತ್ತದೆ.

ಸೀರೆಗಳ ವರ್ಣ ವೈಖರ್ಯ, ಚಿತ್ತಾರಗಳನ್ನು ಸ್ವಲ್ಪದರಲ್ಲಿ ವಿವರಿಸುವಂತಿಲ್ಲ. ಅಡ್ಡ, ಉದ್ದ, ತೆಳು, ದಪ್ಪ, ಸೂಕ್ಷ್ಮ ಗೀರುಗಳನ್ನೆ ಚಮತ್ಕಾರಕ ರೀತಿಯಲ್ಲಿ ಬಳಸಿ ಅದೆಷ್ಟೋ ನಕ್ಷೆಗಳನ್ನು ರಚಿಸಲಾಗಿದೆ. ನೇಯ್ಗೆಯ ಕಲೆ ಎದ್ದು ಕಾಣುವಂತೆ, ಹಾಸು ಹೊಕ್ಕಾಗಿದ್ದ ಚೌಕುಳಿಗಳು, ಕಾಟ ಕೋನಗಳು, ಡೈಮಂಡ್ ಕಟ್ ಮುಂತಾದ ಆಕಾರಗಳನ್ನು ಗುರುತಿಸ ಬಹುದು. ಇದರಿಂದ ವರ್ತುಲಾಕೃತಿಯ ಅಸಂಖ್ಯ ಅವತಾರಗಳ ದರ್ಶನ ಇಲ್ಲಿ ಮಾಡಿಕೊಳ್ಳಬಹುದಾಗಿದೆ. ಹತ್ತಾರು ಚಕ್ರಗಳು, ನೂರಾರು ವಠಾಣಿಗಳು, ಸಾವಿರಾರು ಗೋಲಕಗಳು, ಲಕ್ಷಾಂತರ ಬಿಂದುಗಳು ಸೀರೆಗಳ ಉದ್ದಗಲಕ್ಕೆ ಹರಿಸಿದ್ದಾರೆ. ಕೆಲವು ಕಲಾಪತ್ತಿನ ಕೆಲಸ ಬನಾರಸ್ ಅಥವಾ ಕಾಂಜಿವರಂ ಸೀರೆಗಳನ್ನು ನಾಚಿಸುವಂತಿವೆ. ಈ ರೀತಿಯ ಸೀರೆಗಳು ಆಕಾಲಕ್ಕೆ ಕರ್ನಾಟಕದಲ್ಲಿ ಸಿದ್ಧವಾಗುತ್ತಿದ್ದ ಬಗ್ಗೆ ಪುರಾವೆಗಳು ಸಿಗುವುದರಿಂದ ಇವೆಲ್ಲಾ ಚಿತ್ರಕಾರರ ಕಲ್ಪನಾ ಸೃಷ್ಠಿ ಎನ್ನುವಂತಿಲ್ಲ. ಅತ್ಯಾಧುನಿಕ ಸೀರೆ ತಯಾರಕರು ಇಲ್ಲಿಯ ಚಿತ್ತಾರಗಳನ್ನು ಬಳಸುವಷ್ಟು ಅವು ನಿತ್ಯ ನೂತನವಾಗಿವೆ. ಅಂತೆಯೇ ಇವು ಆಳವಾದ ಅಧ್ಯಯನಕ್ಕೆ ಯೋಗ್ಯವಾಗಿವೆ

.– ಡಾ. ಜ್ಯೋತ್ಸ್ನಾ ಕಾಮತ್