ಮುಪ್ಪಿನೊಂದಿಗೆ ಹೊಂದಾಣಿಕೆ : ಹಿರಿಯರ ಗ್ರಾಮ – ಭಾಗ ೨

ಅಮೇರಿಕನ್ನರಲ್ಲಿ ಬಹಳಷ್ಟು ಜನ ಇಳಿವಯಸ್ಸಿನಲ್ಲಿ ಆರೋಗ್ಯದ ಕುರಿತು ವಹಿಸುವ ನಿಗಾ, ಅವರ ಕುಗ್ಗದ ಉತ್ಸಾಹ, ಸೌಂದರ್ಯ ದೃಷ್ಟಿ ಹಾಗೂ ಜೀವನಾಸಕ್ತಿಗಳು ಸಾಕಷ್ಟು ಭಾರತೀಯರಿಗೆ ಪರಿಚಿತವಾಗಿವೆ. ದೊಡ್ಡ ಸಂಖ್ಯೆಯಲ್ಲಿ ಅಮೇರಿಕೆಯಲ್ಲಿ ನೆಲೆಸಿದ ಭಾರತೀಯರ ತಾಯ್ತಂದೆ  ಗಳಲ್ಲಿ , ಮಕ್ಕಳನ್ನು ಭೇಟಿ ಮಾಡಲು ಹೋಗಿಬಂದವರಲ್ಲಿ ಕೆಲವರು, ಆ ಕುರಿತ ಪ್ರತ್ಯಕ್ಷ ಮಾಹಿತಿ, ಅನುಭವ ಪಡೆದವರು, ಇಲ್ಲಿಯ ಹೆಲ್ಥ ಕ್ಲಬ್, ಬ್ಯೂಟಿ ಪಾರ್ಲರ್, ಇತ್ಯಾದಿಗಳ ಮೂಲಕ ಅರಿವು ಬೆಳೆಸುತ್ತಿದ್ದಾರೆ. ರೊಥ್  ದಂಪತಿಗಳು ಕಠಿಣ ಪರಿಶ್ರಮ ಮಾಡಿದರೂ ಅವರ ವಯಸ್ಸಿಗೆ ಸಧೃಢರಾಗಿ ಕಾಣುತ್ತಾರೆ. ಜೀನಳ ಮಗಳು ಜೂಡಿ ೫೩ ವರ್ಷದವಳು ,  ಆಕೆಯ ಗಂಡ ರೋನ್ ೫೭ ವರ್ಷದವ .  ಇಬ್ಬರೂ  ೨೦-೨೫ ವರ್ಷ ಚಿಕ್ಕವರಾಗಿ ಕಾಣುತ್ತಾರೆ. ಸಾಮಾನ್ಯವಾಗಿ ಮೈಮಾಟ ಕಾಯ್ದುಕೊಂಡ ಅಮೇರಿಕನ್ನರ ಮುಖ ನೋಡಿ ವಯಸ್ಸು ಗುರುತಿಸುವದು ಅಸಾಧ್ಯವೇ! ಅದರಲ್ಲೂ ಹೇರಳವಾಗಿ ಲಭ್ಯವಿರುವ ಸೌಂದರ್ಯ ಪ್ರಸಾಧನಗಳನ್ನು ಬಳಸುವವರನ್ನು ಕಂಡರೆ ಮೋಸ ಹೋಗುವದು ಸುಲಭ  ಅರವತ್ತು ದಾಟಿದಾಕೆ, ನಲವತ್ತರ ಪ್ರೌಢೆಯಂತೆ, ನಲ್ವತ್ತರ ಅಂಚಿನಾಕೆ, ಇಪ್ಪದೈತರ ತರುಣಿಯಂತೆ ಕಂಡರೆ ಆಶ್ಚರ್ಯವಿಲ್ಲ. ಇಲ್ಲಿ ಅರವತ್ತು ವರ್ಷ ಮಧ್ಯವಯಸ್ಸೆಂದು ಗಣಿಸಲ್ಪಡುತ್ತದೆ. ಭಾರತೀಯರು ಎಣೆಯಿಲ್ಲದ ತಾಪತ್ರಯಗಳಿಂದಾಗಿ ಈ ವಯಸ್ಸು ಬರುವ ಹೊತ್ತಿಗೆ ನುಗ್ಗಾಗಿ ಹೋಗುತ್ತಾರೆ. ಅಮೇರಿಕನ್ನರ ಸಾಂಸಾರಿಕ ತೊಂದರೆಗಳು  ಬೇರೆ ಪ್ರಕಾರದವು. ನೌಕರಿಯ ನಿಶ್ಚಿತತೆ ಇಲ್ಲದಲ್ಲಿ, ಭಾವನಾತ್ಮಕ ನಂಟು ಇಲ್ಲದಲ್ಲಿ, ಲೌಕಿಕ ಆಕರ್ಷಣೆಗೆ ಸೀಮೆಯೇ ಇರದ ನಾಡಲ್ಲಿ , ಜನ ಬೇರೆ ವಿಧದಲ್ಲಿ  ಹೆಣಗಬೇಕಾಗುತ್ತದೆಯೆಂದು ದಿನದಿನವೂ ಅರಿತು ಕೊಳ್ಳು ವಂತೆ ಆಯಿತು. ಮರುದಿನ ಜೀನ್ ರೊಥ್ ತನ್ನ ಪರಿಚಯದ ಹಿರಿಯರ ಗ್ರಾಮಕ್ಕೆ ಕರೆದೊಯ್ಯುವೆನೆಂದಾಗ  ಹಿಗ್ಗಿದೆ.

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅತಿ ಹೆಚ್ಚಿನ ಮಹತ್ವ ಅಮೇರಿಕೆಯಲ್ಲಿದೆ. ಮಕ್ಕಳು ಬಲು ಬೇಗ ಸ್ವಾವಲಂಬಿಗಳಾಗುವಂತೆ ಪಾಲಕರು ಪ್ರೋತ್ಸಾಹಿಸಿದಂತೆ, ವೃದ್ಧರೂ ತಮ್ಮ ಮಕ್ಕಳೊಡನೆ ವಾಸಿಸಲು ಇಷ್ಟಪಡುವದಿಲ್ಲ . ವೃಧ್ಯಾಪ್ಯವನ್ನು ಎದುರಿಸುವ ಪೂರ್ವ ಸಿದ್ಧತೆಯನ್ನು ತಾವೇ ಕೈಕೊಂಡು ಸಿದ್ಧರಾಗುತ್ತಾರೆ. ಇಂಥವರು ತಮ್ಮ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿಯೋ  ವೃದ್ಧಾಮಶ್ರಮದಲ್ಲಿಯೋ ನೆಮ್ಮದಿಯಿಂದ ಕಳೆಯುವ ವ್ಯವಸ್ಥೆಯನ್ನು ಧಾರ್ಮಿಕ ಹಾಗೂ ಸ್ವಯಂಸೇವಾಸಂಸ್ಥೆಗಳು ಮಾಡುತ್ತಿದ್ದವು. ಈಗೆರಡು ದಶಕಗಳಿಂದ ಅಮೇರಿಕೆಯ ಫೆಡರಲ್  (ಇಲ್ಲಿಯ ಕೇಂದ್ರ ಸರಕಾರ), ಹಾಗೂ ರಾಜ್ಯ ಸರಕಾರಗಳು ಹಿರಿಯರ ಆರೋಗ್ಯದತ್ತ ವಿಶೇಷ ಗಮನ ಪೂರೈಸುತ್ತಿವೆ, ಅಥವಾ ಈಗಾಗಲೇ ಅಂಥ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ವಿಪುಲ ಧನಸಹಾಯ ಒದಗಿಸುತ್ತಿವೆ. ಜೀನ್ ತಮ್ಮ ಮೆನೊನೈಟ್ ಚರ್ಚ್ ಹಾಗೂ ಸರಕಾರದ ನೆರವಿನಿಂದ ನಡೆಸುತ್ತಿರುವ ಹಿರಿಯ ನಾಗರಿಕರ ಹಳ್ಳಿ ( ಸೀನಿಯರ್ ಸಿಟಿಝನ್ಸ್ ವಿಲ್ಲೇಜ್) ಗೆ ಕರೆದೊಯ್ದಳು.

ಲೆಬೆನಾನ್ ದ ಊರ ಹೊರಗೆ ಪ್ರಶಸ್ಥ ತಾಣದಲ್ಲಿ ಈ ಗ್ರಾಮ ರೂಪಗೊಂಡಿತ್ತು. ಪ್ರವೇಶದ್ವಾರದ ಎರಡೂ ಪಕ್ಕದಲ್ಲಿ ಇಬ್ಬರು ಹಿರಿಯರು, ರಸ್ತೆಯನ್ನು ಗುಡಿಸಿ ಚೊಕ್ಕಟವಾಗಿರಿಸುವಲ್ಲಿ, ಇನ್ನಿಬ್ಬರು ಕಸದ ಗುಪ್ಪೆಗಳನ್ನು ಒಯ್ದು ತೊಟ್ಟಿಗೆ ತುಂಬುವದರಲ್ಲಿ ತೊಡಗಿದ್ದರು. ಇನ್ನೂ ದೈಹಿಕ ಬಲ ಉಳಿದು ಕೊಂಡವರು, ಸುಮ್ಮನೆ ಕುಳಿತುಕೊಳ್ಳದೇ ಸಾಧ್ಯವಿದ್ದ ಕೆಲಸಗಳನ್ನು ಮಾಡುತ್ತಲೇ ಇದ್ದರು. ಮೂರು ನಾಲ್ಕು ಜನ ಇದುರಿನ ಹೂದೋಟದಲ್ಲಿ ಹೂಗಿಡಗಳ ಆರೈಕೆ ನಡೆಸಿದ್ದರು. ಒಬ್ಬಾತ ಬಿಸಿಲಲ್ಲಿ ಕುಳಿತು ದಾನವಾಗಿ ಬಂದ ಗ್ರಂಥಗಳ ರಾಶಿಯನ್ನು ವಿಷಯ ಪ್ರಕಾರ ಜೋಡಿಸುವದರಲ್ಲಿ ಮಗ್ನನಾಗಿದ್ದ. ಈ ಗ್ರಾಮದ ಸ್ವಚ್ಚತೆ, ಅಂದಚೆಂದ, ಉಪಯುಕ್ತತೆಗಳು ತಮಗೇ ಸೇರಿದವುಗಳು ! ಅವನ್ನು ಕಾಯ್ದುಕೊಂಡು ಹೋಗಬೇಕೆನ್ನುವ  ಸಮಷ್ಠಿ ಜೀವನದ ಕಲ್ಪನೆಯನ್ನು ಅಲ್ಲಿಯವರು ಬೆಳೆಸಿಕೊಂಡೇ ಇರುತ್ತಾರೆ.

ಎಪ್ಪತ್ತು ವರ್ಷಗಳಿಗೆ ಮೇಲ್ಪಟ್ಟವರಿಗೆ ಅಲ್ಲಿ ಎರಡು ನೂರಕ್ಕೂ ಮಿಕ್ಕಿ ಮನೆಗಳಿದ್ದವು. ಒಂಟಿ ಜೀವಿಗಳಿಗಾಗಿ, ದಂಪತಿಗಳಿಗಾಗಿ, ಎರಡೆರಡು, ನಾಲ್ಕು ನಾಲ್ಕು ಬ್ಲಾಕುಗಳಲ್ಲಿ ಫ್ಲಾಟು ಮನೆಗಳನ್ನು ರಚಿಸಿ ಸಾಧ್ಯವಿದ್ದೆಡೆ ಕೈತೋಟ ಮಾಡಿದ್ದರು. ಎರಡರಿಂದ ನಾಲ್ಕು ವರ್ಷ ಮೊದಲೇ ಮುಂಗಡ ಹಣ ಕೊಟ್ಟು ಕೆಲವರು ಕಟ್ಟಿಸಿಕೊಂಡಿದ್ದರೆ, ಈ ಅನುಕೂಲ ಇಲ್ಲದವರಿಗೆ ಸರಕಾರದ ಧನಸಹಾಯದಿಂದ  ಬ್ಲಾಕುಗಳನ್ನು  ನಿರ್ಮಿಸುವ ಕೆಲಸ ನಡೆದಿತ್ತು. ವಿಶಾಲವಾದ ಕಂಪೌಂಡಿನ ನಡುವೆ ಮುಖ್ಯ ಕಟ್ಟಡ ಎದ್ದು ಕಾಣುವಂತೆ  ದೊಡ್ಡ ಗ್ರಾಮದ ಸ್ಥಾಪನೆಯ ವರ್ಷ , ನಿವಾಸಿಗಳ ಸಂಖ್ಯೆ, ಅವರು ಬಂದಿರುವ ರಾಜ್ಯಗಳ ಹೆಸರು, ಊರುಗಳೊಂದಿಗೆ, ವಯಸ್ಸು, ವೃತ್ತಿಯ ವಿವರಗಳು ಇದ್ದವು.ಗ್ರಾಮದ ದೊಡ್ಡ ನಕಾಶೆ , ಈಗಿರುವ ಸೌಕರ್ಯಗಳು, ಒದಗಿಸಿರುವ ಸೌಕರ್ಯಗಳನ್ನು ಇನ್ನೊಂದೆಡೆ ಕಾಣಿಸಲಾಗಿತ್ತು. ಕಟ್ಟಡದಲ್ಲಿದ್ದ ರೆಸ್ಟೋರಾದಲ್ಲಿ ಊಟ, ಪೇಯ ಸೇವಿಸುತ್ತಿದ್ದ ವಯಸ್ಕರು ಕಳೆಯಿಂದ ಕೂಡಿದ್ದರು. ಕೆಲವರು ವ್ಹೀಲ್ ಚೇರಗಳ ಮೇಲೆ ಓಡಾಡಿಕೊಂಡಿದ್ದರು. ತೀರ ಕೈಲಾಗದವರಿಗೆ ಉಣಿಸುವ, ತಿನಿಸುವ, ದೈಹಿಕೆ ಸ್ವಚ್ಚತೆಗೆ ನೆರವಾಗುವ, ಸ್ವಯಂಸೇವಕರ ಪಡೆಯೇ ಅಲ್ಲಿತ್ತು. ಸಂಬಳ ಪಡೆಯುವ ಕೆಲವರು, ಅರೆ ಕಾಲಿಕ ಕೆಲಸಗಾರರೂ ಕೆಲವರು ಇದ್ದುದಾಗಿ ಜೀನ್ ಹೇಳಿದಳು. ಅಲ್ಲಿಯೇ ಶುಶ್ರೂ ಷಾಲಯ, ಪ್ರಥಮ ಚಿಕಿತ್ಸಾಕೇಂದ್ರ , ಔಷಧಗಳ ಅಂಗಡಿ, ಹೆಲ್ತ ಕ್ಲಬ್, ವಾಚನಾಲಯ, ಥಿಯೇಟರ್, ಇಸ್ತ್ರಿ ಅಂಗಡಿ, ಬ್ಯೂಟಿ ಪಾರ್ಲರ್, ಹೇರ್ ಕಟ್ಟಿಂಗ  ಸಲೂನ್ ಗಳು ಇದ್ದವು. ಕೆಲವುಗಳನ್ನು ವಯಸ್ಕರೇ ನಡೆಸುತ್ತಿದ್ದುದು ವಿಶೇಷವಾಗಿತ್ತು.

ಬ್ಯೂಟಿ ಸಲೂನ್ ಗಳಲ್ಲಿ  ಕೂದಲು ಗುಂಗುರಾಗಿಸಲು ಕ್ಲಿಪ್ ಹಾಕಿಕೊಂಡ ವೃದ್ಧೆಯರು ಕಂಡರು. ಬಗೆಬಗೆಯ ಹೇರ್ ಸ್ಟಾಯ್ಲ್ ಮಾಡಿಕೊಳ್ಳುವವರಿಗೆ  ಸಹಾಯಕ್ಕೆ ನಿಷ್ಣಾತರು ಇದ್ದಂತೆ, ಗಂಡಸರಿಗೂ  ಶೇವ ಮಾಡುತ್ತಿದ್ದ, ಹೇರ್ ಕಟ್ ಕೊಡುತ್ತಿದ್ದ ಹುಡುಗಿಯರಿದ್ದರು. ಅಮೇರಿಕೆಯ ಸಲೂನ್ ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ತ್ರೀಯರೇ ಕೆಲಸ ಮಾಡುತ್ತಾರೆ.

 ಆ ಬಳಿಕ ಕಡಿಮೆ ಆದಾಯದವರಿಗೆಂದು ಕಟ್ಟಿಸಿದ ಸಿಂಗಲ್ ರೂಮ್ ಅಪಾರ್ಟಮೆಂಟಕ್ಕೆ  ಹೋದೆವು. ಎಲ್ಲ ವ್ಯವಸ್ಥೆಯಿರುವ ದೊಡ್ಡ ರೂಮುಗಳು, ಏಕಾಂತ ಬಯಸುವ ಒಂಟಿಗರಿಗೆ, ಹಾಸಿಗೆ, ಟಿ.ವಿಸೆಟ್, ಫೋನು, ಚಿಕ್ಕ ಕಿಚನ್ ಆದಿಯಾಗಿ, ಬೆಲ್ ಮಾಡಿ ಇತರ ಸೌಕರ್ಯಗಳನ್ನು ಪಡೆಯುವ ಅನುಕೂಲ ಇತ್ತು. ಕೆಲವರ ಕೋಣೆಗಳ ಮೇಲೆ  Not Another beautiful Face !ಎಂಬ ಸ್ಟಿಕರ್ ಅಂಟಿಸಿದ್ದರು. ಅರ್ಥಾತ್ ಒಳಗೆ ನುಗ್ಗಿ ತೊಂದರೆ ಕೊಡಬೇಡಿ!  ಎಂಬ ಎಚ್ಚರಿಕೆಗೆ, ನಮ್ರ ಪರ್ಯಾಯ ನುಡಿ, ‘ಇಲ್ಲೇನೂ ಸುಂದರ ಮುಖವಿಲ್ಲ!’ ಎಂಬ  ಸೂಚನೆ ಮೋಜಾಗಿ ಕಂಡಿತು. ಇಲ್ಲಿ ನಿವೃತ್ತರಾಗಿ ಬಂದು ನೆಲೆಸಿದ ಬಳಿಕ , ಒಲವು- ಆಸಕ್ತಿ ಪರಸ್ಪರ ಹೊಂದಾಣಿಕೆ ಆಗಬಹುದು ಎನಿಸಿದ ವಯಸ್ಕರಲ್ಲಿ, ಪ್ರೇಮ ವಿವಾಹಗಳೂ ಜರಗುವದಂಟು! ಮನಸ್ಸಿಗೆ ಮುಪ್ಪಿಲ್ಲವಲ್ಲ! ಬಳಿಕ ದಂಪತಿಗಳ ಫ್ಲಾಟ್ ಗೆ ಸ್ಥಳಾಂತರಿಸುತ್ತಾರೆ.

ಮದುವೆಯನ್ನೇ ಮಾಡಿಕೊಳ್ಳದ, ಮಕ್ಕಳಿದ್ದ, ಮಕ್ಕಳಿಲ್ಲದ, ವಯಸ್ಕರಂತೆ ವಿಧುರ, ವಿಧವೆಯರೂ ಬಾಳ ಸಂಜೆಯನ್ನು ಕಳೆಯಲು ಬಂದವರಿದ್ದರು. ಅವರ ವಿವಿಧ ಆಸಕ್ತಿಗಳಿಗೆ  ಅನುಗುಣವಾಗಿ ವ್ಯಾಖ್ಯಾನಗಳು, ಫೀಲ್ಮ ಶೋಗಳು ಆಗಾಗ ಏರ್ಪಡುತ್ತವೆ. ವಾರಕ್ಕೊಮ್ಮೆ ಧರ್ಮ ಬೋಧನೆಯ ಏರ್ಪಾಡು ಇದ್ದಂತೆ  ಸಮೀಪದಲ್ಲೇ  ಚರ್ಚ್ ಇದೆ. ಹೊರಗಡೆಯಿಂದ ಊಟ ತಿಂಡಿ ತರಿಸುವ ವ್ಯವಸ್ಥೆಯೂ ಇದೆ. ಜೀವನದ ಸಿಹಿ-ಕಹಿ ಅನುಭವಗಳನ್ನು ಹೊಂದಿದ ಒಂದೇ ತಲೆಮಾರಿನ ಜನ , ಒಂದೆಡೆ ಕಲಿತು , ತಮ್ಮ ದೀರ್ಘಬಾಳಿನ ವಿವಿಧ ಘಟನೆ ಗಳನ್ನು , ಅನುಭವಗಳನ್ನು  ಹಂಚಿಕೊಳ್ಳಲು ಸಾಧ್ಯವಿದ್ದಂತೆ ತಮ್ಮ ಪಾಡಿಗೆ ತಾವು ಇರಲು ಯಾರೂ ನಿರ್ಲಕ್ಷಕ್ಕೆ ಒಳಪಟ್ಟಿಲ್ಲ ! ಎಂದು ಅನಿಸುವಂತೆ ಮಾಡಲು ಸ್ವಯಂ ಸೇವಕರು ಹೆಣಗುತ್ತಿರುತ್ತಾರೆ. ಪ್ರತಿಯೊಬ್ಬರ ಜನ್ಮ ದಿನದಂದು ಹೂಗುಚ್ಛ  ನೀಡುವ ಸವಿ ಹಾರೈಕೆ ಹೇಳುವ , ಪಾರ್ಟಿ ಕೊಡುವ ಪದ್ಧತಿ ಇಟ್ಟುಕೊಂಡವರು ಹೊರಗಿನ ನಾಗರಿಕರು ಇರುತ್ತಾರೆ. ಕಣ್ಣು ಮಂಜಾದವರಿಗೆ ಪುಸ್ತಕ, ಪತ್ರಿಕೆ ಓದಿ ಹೇಳುವವರು, ಪತ್ರ ಬರೆದು ಕೊಡುವವರುಒಂಟಿ ಜನರಿಗೆ ಸುಮ್ಮನೆ ಜೊತೆ ಕೊಡಲು ಬಂದವರಿರುತ್ತಾರೆ.

ಎಲ್ಲವನ್ನು ನೋಡಿಯಾದ ಮೆಲೆ ಜೀನ್ ಊರಲ್ಲಿಯ ಹಾಟೆಲೊಂದಕ್ಕೆ ಊಟಕ್ಕೆ ಕರೆದೊಯ್ದಳು. ತಮ್ಮ ಉಳಿದ ೮ ೧/೨ ಎಕರೆ ಜಮೀನು ಮಾರಿ, ಬಂದ ಹಣದಲ್ಲಿ  ಈ ಗ್ರಾಮದಲ್ಲಿ ಒಂದು ಫ್ಲ್ಯಾಟ ಕೊಂಡು ಇರುವ ವಿಚಾರ ರೊಥ್ ದಂಪತಿಗಳಿಗೆ ಇತ್ತಂತೆ. ಆದರೆ ಅವರ ಮಗ ಜೆರಾಡ್ ಅದೇ ರಾಜ್ಯದ ಬೆಂಡ್ ದಲ್ಲಿ ಮುಖ್ಯ ಪಾದ್ರಿಯಾಗಿರುವಾತ, ತಾನೇ ಆ ಜಮೀನು ಕೊಳ್ಳುವದಾಗಿ ಹೇಳಿ, ಇಸ್ಟೇಟಿನ ಉಸ್ತುವಾರಿ ನೋಡಿಕೊಂಡು ಅಲ್ಲಿಯೇ ಇರುವಂತೆ ಮನವೊಲಿಸುವಲ್ಲಿ ಸಫಲನಾದ! ರೊಥ್ ಕುಟುಂಬ ಹೆಚ್ಚಿನ  ವಾತ್ಸಲ್ಯವುಳ್ಳದಿದ್ದು, ವರ್ಷದಲ್ಲಿ ನಾಲ್ಕಾರು ಬಾರಿಯಾದರೂ ಎಲ್ಲರೂ ಸ್ವೀಟ ಹೋಂದಲ್ಲಿ ಸೇರುತ್ತಾರೆ. ಜೀನಳ ಓರ್ವ ಮೊಮ್ಮಗಳು ತಾತನ ಇಸ್ಟೇಟಿನಲ್ಲೇ ತನ್ನ ಮದುವೆ ನಡೆಯಬೇಕೆಂದು ಇಷ್ಟ ಪಟ್ಟದ್ದರಿಂದ  ಮೇ ತಿಂಗಳಲ್ಲಿ ಜರುಗಲಿರುವ ಮದುವೆಗೆ ಮುನ್ನಾ ವರ್ಷದ ನವೆಂಬರದಿಂದಲೇ ಜೀನ್, ತಯಾರಿ ನಡೆಸಿದ್ದಳು! ಮೊಮ್ಮಕ್ಕಳ ಕುರಿತಾದ ಅಜ್ಜಿಯರ ಮಮತೆ-ಕಾತರಗಳು ಎಲ್ಲ ದೇಶಗಳಲ್ಲೂ ಒಂದೇ! ಅಂದುಕೊಂಡೆ.

ಬಂಡವಳಶಾಹಿಯ ಕೇಂದ್ರವೆಂದು ಟೀಕೆಗೊಳಗಾದ ಅಮೇರಿಕೆಯಲ್ಲಿ ಸಾಮಾನ್ಯರ, ಬಡವರ, ನಿರ್ಗತಿಕರ ನೆಮ್ಮದಿಯ ವೃಧ್ಯಾಪ್ಯದಲ್ಲಿ ಸರಕಾರವು ಪಕ್ಷಗಳ ಬೇಧ ಭಾವವಿಲ್ಲದೇಲಕ್ಷ್ಯ ಪೂರೈಸುತ್ತಿದೆ. ಲೆಬೆನಾನ್ ಸಮೀಪದ ಕಾರವಾಲಿಸ್ ದಲ್ಲಿ . ವೃದ್ಧಾಪ್ಯದ ದ ತೊಂದರೆಗಳಿ ಗಾಗಿಯೇ ದೊಡ್ಡ ಸರಕಾರಿ ಆಸ್ಪತ್ರೆ ಇದೆ. ಜೇಕ್, ಮುನ್ನಾವರ್ಷ, ತೆರೆದ ಹೃದಯ ಶಸ್ತ್ರಚಿಕಿತ್ಸೆ ( open heart surgery ) ಗೆ ಒಳಪಟ್ಟಾಗ ಇಲ್ಲೇ ಸೇರಿದ್ದರು. ೮೦,೦೦೦ ಡಾಲರ್ ಖರ್ಚು ಬಂದಿತ್ತು. ಅದರಲ್ಲಿ ೭೫೦೦೦ ಡಾಲರ್ ದಷ್ಟು  ಸರಕಾರವೇ ಭರಿಸಿತು! ಈ ಅನುಕೂಲವಿಲ್ಲದಿದ್ದರೆ ಜೇಕ್ ಚಿಕಿತ್ಸೆ ಕನಸಿನಲ್ಲಿಯೂ ಸಾಧ್ವವಿರುತ್ತಿರಲಿಲ್ಲವೆಂದು  ಉದ್ಗರಿಸಿದ ಜೀನ್ ತನ್ನ ತಾಯಿ, ಮುಪ್ಪಿನಲ್ಲಿ ಚಿಕಿತ್ಸೆಗೆ ಹಣವಿಲ್ಲದೇ ಪರದಾಡಿದ್ದು, ತಾನು ಕೊಡುತ್ತಿದ್ದ  ತಿಂಗಳಿಗೆ ಇಪ್ಪತೈದು ಡಾಲರಗಳನ್ನು ನಿರಾಕರಿಸಿದ್ದು, ಕೊನೆಗೆ ಅವಳಿಗೆ ತಿಳಿಯದಂತೆ, ನೋಡಿಕೊಳ್ಳುತ್ತಿದ್ದ ಡಾಕ್ಟರರಿಗೆ  ಗುಟ್ಟಾಗಿ, ಅವಳ ಶುಶ್ರೂ ಷಾ ವೆಚ್ಚವನ್ನು ಭರಿಸಿದ್ದನ್ನು ನೆನಪಿಸಿಕೊಂಡಳು. “ಹಿರಿಯ ಬುಶ್, ಅಧ್ಯಕ್ಷರಾದಾಗ  ಬಹಳಷ್ಟು ರಿಯಾಯತಿಗಳು, ಪೆನ್ಶನ್ ಸೇರಿದಂತೆ ಹೆಚ್ಚಿದವು. ಈಗಿನ ಅಧ್ಯಕ್ಷ ಬಿಲ್ ಕ್ಲಿಂಟನ್, ವೃದ್ಧ, ನಿರ್ಗತಿಕರನ್ನು ಗುರುತಿಸಿ ನೀಡುವ ಪೆನ್ಶನ್ ಯೋಜನೆಯಿಂದಾಗಿ ಸಾಕಷ್ಟು ತರುಣರಲ್ಲಿ ಅಪ್ರಿಯರು ಆಗಿದ್ದಾರೆ!”ಎಂದು ಜೀನ್ ಉದ್ಗರಿಸಿದಳು.

 ಬರ್ಮಿಂಗ್ ಹ್ಯಾಮ್ ಮರಳಿದ ಮೇಲೆ ವಿಕಾಸನ ಹತ್ತಿರ ಅಮೇರಿಕೆಯ ಹಿರಿಯರಿಗಿರುವ  ಸೌಲಭ್ಯಗಳ ಕುರಿತು ಮೆಚ್ಚಿಗೆ ಹೇಳಿದೆ. ಆತ, ” ಅದೆಲ್ಲ ಸರಿ. ಆದರೆ ಅವರಿಗೆ ಸೌಲಭ್ಯ ಒದಗಿಸುವಲ್ಲಿ ನಮ್ಮ ಕರಭಾರ ಎಷ್ಟೋಂದು ಹೆಚ್ಚುತ್ತ ಹೋಗಿದೆಯಲ್ಲ!” ಎಂದ. ಆತನ ಗಳಿಕೆಯ ಶೇಕಡಾ ನಲವತ್ತರಷ್ಟು ಆದಾಯ ಕರಕ್ಕೆ ಹೋದರೆ ಅದರಲ್ಲಿ ಸುಮಾರು ೨೦% ಕ್ಕಿಂತ ಹೆಚ್ಚು ವೆಲ್ ಫೇರ್  ಅಥವಾ ಜನಹಿತಕ್ಕೆ ( ವೃದ್ಧರ ಆರೋಗ್ಯ ಸೇರಿದಂತೆ ) ಕಡಿತವಾಗುತ್ತಿತ್ತು. ಪ್ರತಿ ಸಂಬಳದ ಪಾವತಿ ( ಅದನ್ನು ಅಲ್ಲಿ ಬಿಲ್ ಎಂದು ಕರೆಯುತ್ತಾರೆ! ) ಯಲ್ಲಿ ಜನಹಿತಕ್ಕೆ ಬಳಸುವ ಮೊತ್ತವನ್ನು ಸ್ಪಷ್ಟ ಕಾಣಿಸುತ್ತಾರೆ. ಮತ್ತು ಮಾಡಿದ ವೆಚ್ಚ ಪಾರದರ್ಶಕವಾಗಿದ್ದು ಸುಧಾರಣೆಗಳು ಖಚಿತವಾಗಿರುತ್ತವೆ. ” ಆದರೆ ಆ ಕುರಿತು ನಮಗೆ ಎಳ್ಳಷ್ಟೂ ಬೇಸರವಿಲ್ಲ ಕಣಮ್ಮ! ನಾವು ಕೊಡುವ ಪ್ರತಿ ಸೆಂಟ್ ಕೂಡ  ( ಒಂದು ಡಾಲರಿಗೆ ನೂರು ಸೆಂಟ್) ಜನಹಿತಕ್ಕೆ , ಹಿರಿಯರ ಹಿತಕ್ಕೆ ವೆಚ್ಚವಾಗುತ್ತದೆ!ಎಂಬ ಸಮಾಧಾನ ನಮಗಿದೆ…. ನಮ್ಮ ದೇಶದಲ್ಲಿ ಅದು ಘಟಿಸುವದಿಲ್ಲವಲ್ಲ!” ಎಂದು ವಿಷಾದದಲ್ಲೇ ಹೇಳಿದಾಗ ನಮ್ಮಲ್ಲಿಯ ಹಿರಿಯರ ಕುರಿತು ನಿಟ್ಟುಸುರು ಬಿಡುವಂತೆ ಆಗಿತ್ತು. ಅವಿಭಕ್ತ ಕುಟುಂಬ ಪದ್ಧತಿ ನುಚ್ಚುನೂರಾಗಿ, ಹಿರಿಯರನ್ನು ನೋಡಿಕೊಳ್ಳುವ ಹೊಣೆ ತಮ್ಮದೆಂಬ ಪುರಾತನ ಕಲ್ಪನೆಯು ಮಾಯವಾಗಿ, ಸರಕಾರವು ನಿಷ್ಕ್ರಿಯವಾಗಿ , ಸ್ವಯಂ ಸೇವಾ ಪದ್ಧತಿಯೂ ಇಲ್ಲದ, ಅಪರೂಪಕ್ಕೆ ದಾನಿಗಳು ನಡೆಸುವ ವೃದ್ಧಾಶ್ರಮಗಳೂ, ನೆರವು ಇಲ್ಲದೇ ಸೊರಗಿ ಸೋತು ಮುಚ್ಚಿ ಹೋಗುವ  ದೃಶ್ಯಗಳು ಪುನಃಪುನಃ ನೆನಪಾದವು. ಈಗಂತೂ ಲಾಭಕಾಗಿಯೇ ಹುಟ್ಟಿಕೊಳ್ಳುವ ಹೊಸಹೊಸ ಹಿರಿಯರ ತಾಣಗಳು ಮೇಲೇಳುತ್ತಲೇ ಇವೆ .

(ಭಾರತ, ಭರದಿಂದ ಬದಲಾಗುತ್ತಲೇ ಇದೆ. ಇಲ್ಲೂ ಅಮೇರಿಕನ್ನರ ಜೀವನ ಪದ್ಧತಿಯನ್ನು ಅನುಕರಿಸುತ್ತಲೇ ಇದ್ದೇವೆ ಮಾರ್ಪಾಡಿನೊಂದಿಗೆ….. ವೃದ್ಧಾಶ್ರಮಗಳು  ಬರುತ್ತಿವೆ. ಸ್ವಂತ ಲಾಭಕ್ಕಾಗಿ ಅಥವಾ ವ್ಯಾಪಾರಿಕರಣಕ್ಕಾಗಿ ವೃದ್ಧಾಶ್ರಮಗಳು ತಲೆಯೆತ್ತುತ್ತಲೇ ಇವೆ! ಹಿರಿಯ ನಾಗರಿಕರು = ಸೀನಿಯರ್ ಸಿಟಿಝನ್ಸ್ ಎಂಬ ಪದ ಅಮೇರಿಕನ್ನರಿಂದ ಎರವಲು ಪಡೆದರೂ, ಅವರ ಪರಸ್ಪರ ಸೇವಾಪ್ರವೃತ್ತಿಯನ್ನು ರೂಢಿಸಿಕೊಂಡಿಲ್ಲ. )

( ಈ ಲೇಖ ಬರೆದದ್ದು ೧೯೯೬ರಲ್ಲಿ. ಈಗ ಜೀನ್ ರೊಥ್ ಇನ್ನಿಲ್ಲ. ಅವಳು ೨೦೧೨ರಲ್ಲಿ  ನಿಧನ ಹೊಂದಿದಳು.)

 

ಜ್ಯೋತ್ಸ್ನಾ ಕಾಮತ್