ಅಮೇರಿಕನ್ ಗೃಹಿಣಿ ಜೀನ್ ರೊಥ್ ನಮಗೆ ಮೂವತೈದು ವರ್ಷಗಳಿಂದಲೂ ಪರಿಚಿತಳು. ನನ್ನ ಪತಿ ಕೃಷ್ಣಾನಂದ ಕಾಮತರು ಅಮೇರಿಕೆಗೆ ಹೋಗುವ ಮುನ್ನವೇ ಪತ್ರಮುಖೇನ ಆಕೆಯ ಪರಿಚಯವಾಗಿತ್ತು. ಬಳಿಕ ಡಾಕ್ಟರೇಟು ಮುಗಿಸಿ ಭಾರತಕ್ಕೆ ಮರಳುವ ಮುನ್ನ ಕಾಮತರು ಅಮೇರಿಕೆಯ ಉದ್ದಗಲಕ್ಕೂ ಮಹಾಯಾತ್ರೆ ಕೈಕೊಂಡಾಗ ಅಕೆಯ ಪಶ್ಚಿಮ ಮಧ್ಯಮದ ಒರೆಗಾನ್ ರಾಜ್ಯದ ಚಿಕ್ಕ ಊರಾದ ಸ್ವೀಟ್ ಹೋಂಗೂ ಭೆಟ್ಟಿ ಕೊಟ್ಟು ರೂಥ್ ಪರಿವಾರದೊಂದಿಗೆ ಆತ್ಮೀಯವಾದ ದಿನಗಳನ್ನು ಕಳೆದಿದ್ದರು.
ಆ ಅನುಭವಗಳು ಅವರ ಅತ್ಯಂತ ಜನಪ್ರಿಯ ಪ್ರವಾಸಕಥನವಾದ ,’ನಾನೂ ಅಮೇರಿಕೆಗೆ ಹೋಗಿದ್ದೆ’ ‘(೮ನೇ ಆವೃತ್ತಿ ಮನೋಹರ ಗ್ರಂಥಮಾಲಾ, ಧಾರವಾಡ ಹಾಗೂ ಪ್ರಗತಿ ಗ್ರಾಫಿಕ್ಸ್ , ಬೆಂಗಳೂರು) ಪುಸ್ತಕದ ‘’ಲೇಖನಿಯ ಸ್ನೇಹಿತೆ’’ ಅಧ್ಯಾಯದಲ್ಲಿ ಒಡಮೂಡಿವೆ. *ನಂತರದ ವರ್ಷಗಳಲ್ಲೂ ನಮ್ಮಲ್ಲಿ ಪತ್ರವ್ಯವಹಾರ ನಡೆದೇ ಇತ್ತು. ಹೀಗಾಗಿ ನನ್ನ ಮೊದಲ ಅಮೇರಿಕಾ ಯಾತ್ರೆಯಲ್ಲಿ ಅವಳನ್ನು ಕಂಡು ಬರಲೇ ಬೇಕು ಎಂದು ನಿರ್ಧರಿಸಿದ್ದೆ.
ನಾನಿದ್ದ ಊರು ಅಮೇರಿಕೆಯ ದಕ್ಷಿಣದ ರಾಜ್ಯ ಅಲಬಾಮಾದ ಬರ್ಮಿಂಗಹ್ಯಾಂ. ಜೀನ್ ರೊಥ್ ಳ ಸ್ವೀಟ್ ಹೋಂ ಅಲ್ಲಿಂದ ನಾಲ್ಕು ಸಾವಿರ ಮೈಲುಗಳಾಚೆ ಇತ್ತು.! ಮಗ ವಿಕಾಸನು ಅಲ್ಲಿ ಹೋಗಿ ಬರಲು ಪ್ರೋತ್ಸಾಹಿಸಿದ . ಜೀನಳಿಗೆ ಫೋನಿಸಿ ಬರುವ ವಿಚಾರ ಹೇಳಿದಾಗ ತುಂಬಾ ಖುಷಿ ಪಟ್ಟಳು. ಬರಲಿದ್ದ ಪ್ರಯಾಣದ ವಿವರಗಳನ್ನು ಕೇಳಿಕೊಂಡಳು. ’’ಯೂಜಿನ್ ತನಕ ಬರಲಿದ್ದೇನೆ’’ ಎಂದಾಗ, ’’ಅಲ್ಲಿಂದ ಸ್ವೀಟ ಹೋಂ ಕೇವಲ ಒಂದು ಗಂಟೆಯ ದಾರಿ. ಕರೆದೊಯ್ಯಲು ನಾನು ಹಾಗೂ ಜೇಕ್ (ಪತಿ) ಬರುತ್ತೇವೆ’’ ಎಂದಾಗ ಹೆಚ್ಚಿನ ಹರ್ಷವಾಯಿತು.
Mrs. Kamat with Jeen Roth.
ಬರ್ಮಿಂಗಹ್ಯಾಮದಿಂದ ಯುಜಿನ್ ಗೆ ನೇರ ವಿಮಾನವಿರಲಿಲ್ಲ. ೧೫೦ ಮೈಲು ದೂರದ ಅಟ್ಲಾಂಟಾಕ್ಕೆ ಕಾರಿನಲ್ಲಿ ಹೋಗಿ ಅಲ್ಲಿಂದ ಸಾಲ್ಟ್ ಲೇಕ್ ಸಿಟಿಗೆ ಹಾರಬೇಕಿತ್ತು. ಪುನಃ ಅಲ್ಲಿಂದ ಯೂಜಿನ್ ಗೆ ಸಣ್ಣ ಪ್ಲೇನಿನ ಹಾರಾಟ. ದೇಶದ ಭಾಷೆ ಇಂಗ್ಲಿಷ್. ನನಗೆ ಇಂಗ್ಲಿಷ್ ಚೆನ್ನಾಗಿ ಬರುತ್ತದೆ! ಎಂಬ ಜಂಬ, ಮೊದಲ ಒಂದು ತಿಂಗಳ ಈ ದಾಕ್ಷಿಣಾತ್ಯರ ಎಳೆದೆಳೆದ ಪದೋಚ್ಚಾರಣೆ, ನಡುವೆ ನುಂಗಿ ಹಾಕುವ ಕ್ರಿಯಾಪದಗಳ ಅರ್ಥ ಮಾಡಿಕೊಳ್ಳುವದರಲ್ಲಿ , ನೀರಾಗಿ ಬಿಟ್ಟಿತ್ತು! ಈಗ ಒರೆಗಾನದ ಅಪರಿಚಿತ ಇಂಗ್ಲಿಷ ಮಾತುಗಾರಿಕೆ ಅರ್ಥವಾದೀತೆ? ಎಂಬ ಅಧೈರ್ಯ ಬೇರೆ.
ಜೀನ್ ರೊಥ್ ಳ ಉಚ್ಚಾರ ಫೋನಿನಲ್ಲಿ ಬಹುಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ ಎಂದೆನಿಸಿದ್ದರಿಂದ ವಿಶ್ವಾಸ ಮೂಡಿತು. ನಿಲ್ದಾಣದಲ್ಲಿ ಕಾದಿದ್ದ ರೋಥ್ ದಂಪತಿಗಳನ್ನು ಗುರುತಿಸುವದು ಕಷ್ಟವಾಗಲಿಲ್ಲ.
ಜೋರಾಗಿ ಮಳೆ ಸುರಿಯುತ್ತಿತ್ತು. ೭೭ ವರ್ಷದ ಜೇಕ್ ಕಷ್ಟಪಟ್ಟು ತಮ್ಮ ಹಳೆ ಗಾಡಿಯನ್ನು ಡ್ರೈವ್ ಮಾಡುತ್ತಿದ್ದಾಗ ಈ ಹಿರಿಯ ದಂಪತಿಗಳಿಗೆ ವೃಥಾ ತೋಂದರೆ ಕೊಟ್ಟೆನಲ್ಲ! ಎಂದು ಪರಿತಪಿಸುವಂತೆ ಆಗಿತ್ತು. ಅವರು ಮನೆ ಬಿಟ್ಟಾಗಲೇ ಜೋರಾದ ಮಳೆಯಿತ್ತಂತೆ. ರಾಷ್ಟ್ರೀಯ ರಾಜಮಾರ್ಗ (national high way) ರಾಜ್ಯ ರಸ್ತೆಗೆ ತಿರುಗಿ ಅಲ್ಲಿಂದ ಕೌಂಟಿ ರಸ್ತೆಗೆ ಪಯಣಿಸುವ ಅರ್ಧ ರಸ್ತೆಯಲ್ಲಿ ಸ್ವೀಟ ಹೋಂ ಇದೆ. ಜನಸಂಖ್ಯೆ ಏಳುಸಾವಿರವಿದ್ದು ಹೆಚ್ಚಿನ ಜನ ಕೃಷಿ- ಹಣ್ಣಿನ ತೋಟ, ಪಶು-ಪಾಲನೆಯಲ್ಲಿ ತೊಡಗಿದವರು. ಅಮೇರಿಕೆಯ ಒರೆಗಾನ್ ರಾಜ್ಯ ಪರ್ವತಾವಳಿಗಳ ಚೆಲುವಿಗೆ , ಅರಣ್ಯಗಳಿಗೆ, ಹಾಲು ಹೈನು ಹಾಗೂ ಕೃಷಿಗೆ ಪ್ರಸಿದ್ಧವಾಗಿದೆ.
ರೊಥ್ ದಂಪತಿ
ತೋಟದಿಂದ ಆವರಿಸಲ್ಪಟ್ಟ ರೊಥ್ ಕುಟಿರಕ್ಕೆ ತಲುಪಿದಾಗ ಐದು ಗಂಟೆಗೆ ಕತ್ತಲೆ ಕವಿದು ಬಿಟ್ಟಿತ್ತು . ಜೇಕ್ ಐದು ಗಂಟೆಗೇ ಊಟ ಮಾಡಿ ಮಲಗುತ್ತಾನೆ. ಇವತ್ತು ತಡವಾಯಿತೇನೋ! ಎಂದು ಆತುರಾತುರವಾಗಿ ಜೀನ್ ಟ್ಯೂನಾ, ಅಕ್ಕಿ, ಬಟಾಟೆ, ಕಾಳು ಸೇರಿಸಿ ಕ್ಯಾಸರೊಲ್ಲ್ ತಯಾರಿಸಿದಳು. ಕೋಸನ್ನು ಹೆಚ್ಚಿ, ಚೀಜ್ ಹಾಗೂ ಪೀಚ್ ಹಣ್ಣಿನ ಚೂರುಗಳನ್ನು ಸೇರಿಸಿ ಸ್ಯಾಲಡ್ ಮಾಡಿದಳು. ಟೊಮೇಟೊ, ಈ ಸೀಜನದ ಕೊನೆಯವು! ರುಚಿಯಿದೆಯೋ ಇಲ್ಲವೋ ! ಎನ್ನುತ್ತ ಹೆಚ್ಚಿದಳು. ಬ್ರೆಡ್ ಟೋಸ್ಟ್, ಚಾಕಲೇಟ್ ನಟ್ಟಿಸ್ ಹಾಗೂ ಐಯ್ಸ್ ಕ್ರೀಂಗಳೂ ಬಂದವು.
ಇವೆಲ್ಲ ತಯಾರಿಸಲು ಕಾಲು ಗಂಟೆಯೂ ಆಕೆಗೆ ಬೇಕಾಗಲಿಲ್ಲವಾದ್ದರಿಂದ ಆ ತನಕ ಪ್ಲೇಟು, ಚಮಚ, ಚಾಕುಗಳನ್ನು ಹೊಂದಿಸುತ್ತ ಇದ್ದ ನನಗೆ ಇನ್ನೊಮ್ಮೆ ಪರಿತಪಿಸುವ ಪ್ರಸಂಗ ಬರಲಿಲ್ಲ! ಬೇಗ ಮಲಗುವ ಜೇಕ್ , ಆ ಬಳಿಕ ಇನ್ನೆರಡು ಗಂಟೆ ಕಳೆದರೂ, ಕುಳಿತು ನಮ್ಮೊಡನೆ ಮಾತನಾಡುತ್ತಿದುದನ್ನು ನೋಡಿ ಅಚ್ಚರಿಯಾಯಿತು.
ಮರುದಿನ ಬೆಳಗಿನ ಅಲ್ಪೋಪಹಾರ ಮುಗಿಸಿ ಜೀನ್ ಳ ತೋಟ ಸುತ್ತಾಡಿ ಬರಲು ಹೊರಟೆವು. ಹಿಂದೆ ಅವರಿಗೆ ೪೦ ಎಕರೆಗಳ ಹೊಲ, ತೋಟ, ಡೈರಿಗಳಿದ್ದವು. ಅವನ್ನೆಲ್ಲ ಒಂದೊಂದಾಗಿ ಮಾರಬೇಕಾಗಿ ಬಂದ ಪ್ರಸಂಗಗಳನ್ನು ಜೀನ್ ವಿವರಿಸಿದಳು. ಜೇಕ್ ಬಹಳಷ್ಟು ವರ್ಷಗಳಿಂದ ಸ್ವೀಟ್ ಹೋಂ ಪ್ಲೈವುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಒರೆಗಾನ್ ಅರಣ್ಯ ರಾಜ್ಯವಷ್ಟೇ? ಪರಿಸರ ಜಾಗೃತಿಯ ಚಳುವಳಿ ಅಲ್ಲಿ ಒಮ್ಮಿಂದೊಮ್ಮೆ ಜೋರಾಗಿ, ಇದ್ದ ೪ ಕಾರ್ಖಾನೆಗಳಲ್ಲಿ ಮೂರನ್ನು ಮುಚ್ಚುವ ಪರಿಸ್ಥಿತಿ ಬಂದು ಜೇಕ್ ನಿರುದ್ಯೋಗಿಯಾದರು. ಅಮೇರಿಕೆಯ ಹೆಚ್ಚಿನ , ಅಷ್ಟೇಕೆ ಎಲ್ಲ ಉದ್ದಿಮೆಗಳೂ ಖಾಸಗೀ ಕೈಗಳಲ್ಲಿವೆ .ಹಾನಿ ಭರ್ತಿ ಮಾಡುವ ಕ್ರಮಗಳು ಅಲ್ಲಿಲ್ಲ. ತಮಗೆ ಬೇಕಾದ ಕಾಳು-ಕಡಿ ಬೆಳೆದು , ಜೇಕ್ ರ ನೌಕರಿಯ ಹಣದಿಂದ, ನೆಮ್ಮದಿಯ ಉಪಜೀವನ ನಡೆಸುತ್ತಿದ್ದ ರೊಥ್ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತು. ಇಬ್ಬರು ಹೆಣ್ಣುಮಕ್ಕಳ ಶಿಕ್ಷಣ , ಮದುವೆ , ಗಂಡು ಮಗನ ಓದು, ತರಬೇತಿಗಳಿಗೆ ಹಣ ಒದಗಿಸಲು ಜಮೀನು, ಡೈರಿಗಳನ್ನು ಒಂದೊಂದಾಗಿ ಮಾರಿದರು.
ಅಮೇರಿಕನ್ನರು ಅಪರ ವಯಸ್ಸಿನಲ್ಲಿ ನಮ್ಮಲ್ಲಿಯಂತೆ ಗಂಡು ಮಕ್ಕಳಿಂದ ಆರ್ಥಿಕ ಸಹಾಯ ನಿರೀಕ್ಷಿಸುವದಿಲ್ಲ. ಹೆಚ್ಚಿನ ಮಕ್ಕಳಾದರೂ ಚಿಕ್ಕಂದಿನಿಂದಲೇ ಸ್ವಾವಲಂಬಿಯಾಗಿ, ತಮ್ಮ ಶಿಕ್ಷಣದ ವ್ಯವಸ್ಥೆ ಮಾಡಿಕೊಳ್ಳುವದು ಸಾಮಾನ್ಯ. ರೊಥ್ ರ ಮಗ ಜೆರಾರ್ಡ್ ಅದನ್ನು ಕೈಕೊಂಡರೂ ಕೊರತೆ ತೀವ್ರವಾಯಿತು.
ಜೇಕ್ ಕೆಲಸ ಕಳೆದುಕೊಂಡಾಗ, ಜೀನ್ ನೌಕರಿಗೆ ಪ್ರಯತ್ನಿಸಲೇ ಬೇಕಾಯಿತು. ಅವಳಿಗೆ ಇಂಗ್ಲಿಷ್ ಭಾಷೆಯಲ್ಲಿ ಚೆನ್ನಾಗಿ ಬರೆಯುವ, ಟೈಪ್ ಮಾಡುವ ತರಬೇತಿಯಿದ್ದು, ಮನೆವಾರ್ತೆಯ ನಡುವೆಯೂ ರೂಢಿ ಉಳಿಸಿಕೊಂಡು ಬಂದಿದ್ದಳು. ಚರ್ಚಿನ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ವಾರದಲ್ಲಿ ಮೂರು ದಿನ ತಪ್ಪದೇ ಟೈಪಿಂಗ ಸೇವೆಯನ್ನು ಧರ್ಮಾರ್ಥ ಕೊಡಮಾಡುತ್ತಿದ್ದಳು. ಈಗ ತನ್ನ ೫೭ನೇಯ ವಯಸ್ಸಿನಲ್ಲಿ ತಮ್ಮ ಊರಿನಿಂದ ೧೭ಮೈಲು ದೂರದ ಪಟ್ಟಣ ಲೆಬೆನಾನ್ ದಲ್ಲಿ ರಾಜ್ಯ ಸರಕಾರದ ಕುಟುಂಬ ಕಲ್ಯಾಣ ( ನಮ್ಮ ಸಮಾಜ ಕಲ್ಯಾಣ ) ಖಾತೆಯಲ್ಲಿ ಕ್ಲಾರ್ಕ ಕೆಲಸ ಸಿಕ್ಕಿತು. ಅಲ್ಲಿಯ ಕಾನೂನಿನಂತೆ ನಿವೃತ್ತಿಯ ೬೫ನೇ ವರ್ಷದ ತನಕ ಕೆಲಸ ಮಾಡಿದಳು. ಯೋಗ್ಯತೆಗನುಸಾರವಾಗಿ ಆಯ್ಕೆ ಮಾಡುವ ದೇಶದಲ್ಲಿ , ಯಾವ ವಯಸ್ಸಿನಲ್ಲೂ ಸರಕಾರಿ ನೌಕರಿ ಸಿಗಬಹುದು! ಎಂಬ ವಿಚಾರ ಅಚ್ಚರಿಯ ಸಂತಸ ಕೊಟ್ಟಿತು. ತಿಂಗಳಿಗೆ೧೧೦೦ ಡಾಲರಗಳ ಸಂಬಳದ ನೌಕರಿ, ತಮ್ಮ ದುರ್ಭರ ದಿನಗಳಲ್ಲಿ ಕಾಪಾಡಿತು! ಎಂದು ಅಭಿಮಾನದಿಂದ ಹೇಳಿಕೊಂಡ ಜೀನ್ ಗೆ ಈಗ ತಿಂಗಳಿಗೆ ನೂರು ಡಾಲರ್ ಪೆನ್ಶನ್ ಬೇರೆ ದೊರೆಯುತ್ತಿದೆ. ಆ ಅಲ್ಪಾವಧಿಯ ಸರಕಾರಿ ನೌಕರಿಯಲ್ಲಿ!
ಅವಳು ಕ್ಲಾರ್ಕ ಆಗಿ ಮಡುತ್ತಿದ್ದ ಕೆಲಸದ ಬಗ್ಗೆ ವಿಚಾರಿಸಿದೆ.
ಬೆಳಿಗ್ಗೆ ೮ ರಿಂದ ಸಾಯಂಕಾಲ ೫ ಗಂಟೆಯವರೆಗೆ ಎಡಬಿಡದ ಕೆಲಸ. ನಡುವೆ ಅರ್ಧ ಗಂಟೆ ಊಟದ ವಿರಾಮವಷ್ಟೇ. ಕೆಲಸದ ವಿವರಗಳು ಬೇಕೇ? ಭಾರತೀಯ ಕಾರ್ಯ ಮಾಪನದ ಪ್ರಕಾರ , ಟೆಲಿಫೋನ ಆಪರೇಟರ್, ರಿಸೆಪ್ಶನಿಸ್ಟ್, ಪರ್ಚೇಸಿಂಗ ಕ್ಲಾರ್ಕ್, ಅಧಿಕಾರಿಗೆ ಸ್ಟೆನೊ ಕಮ್ ಟೈಪಿಸ್ಟ್! ಜೊತೆಗೆ ಲೆಬೆನಾನ್ ವಿಭಾಗದ ಸರಕಾರಿ ಔಷಧ, ಚಿಕಿತ್ಸಾ ಉಪಕರಣಗಳ ಸ್ಟೊರ್-ಇನ್-ಚಾರ್ಜ್! ಅಂದರೆ ಇಂಥದೇ ಭಾರತದ ಇಲ್ಲಿಯ ಸರಕಾರಿ ಆಫೀಸಿನಲ್ಲಿ ಐವರು ಮಾಡುವ ಕೆಲಸವನ್ನು ಜೀನ್ ರೋಥ್ ಒಬ್ಬಳೇ ತೂಗಿಸಿಕೊಂಡು ಹೋಗುತ್ತಿದ್ದಳು. ಮೊದಲ ಬಾರಿ ಕೋಟೇಶನ್ ಕರೆದು, ನ್ಯೂನತಮ ಕೊಟೇಶನ್ ವನ್ನಷ್ಟೆ ಪರಿಗಣಿಸಲು ಅಧಿಕಾರಿ ಹೇಳಿದ್ದರು. ಈಕೆ, ಅಷ್ಟನ್ನು ಮಾಡಿ, ಲಂಚ್ವೇಳೆಯಲ್ಲಿ ಸ್ವತಃ ಹೊರಗೆ ಹೋಗಿ ಮಾಲಿನ ಪರಿಕ್ಷೆಯನ್ನು ಇನ್ನೆರಡು ಕಡೆ ಮಾಡಿ ಬಂದು, ಆ ಬಳಿಕ ಚೌಕಾಶಿಯಿಂದ ಅವರಿಂದ ಕೋಟೇಶನ್ ಕೇಳಿ ಸಹಸ್ರಾರು ಡಾಲರಗಳನ್ನು ಸರಕಾರಕ್ಕೆ ಉಳಿಸಿಕೊಟ್ಟಾಗ ಅಧಿಕಾರಿಗೆ ಆಶ್ಚರ್ಯ! ಸಂತೋಷ – ಮೆಚ್ಚಿಗೆ ವ್ಯಕ್ತಪಡಿಸಿದ್ದನ್ನು ನೆನೆಸಿಕೊಂಡಳು.
ನಮ್ಮಲ್ಲಿ ಈ ಪರಿಸ್ಥಿತಿ ಊಹಿಸಿಕೊಳ್ಳಿ! ಸರಕಾರಿ ಸ್ಟೋರ್ ಗಳೆಂದರೆ ಕೊಳ್ಳೆ ಹೊಡೆಯುವ ತಾಣಗಳೇ! ಸಾಕಷ್ಟು ’’ನಿಷ್ಠ’ ‘ನೌಕರರಿಗೆ!
ಜೀನಳ ಮಧುರ ಸ್ವಭಾವ, ನಿರ್ವ್ಯಾಜ ಪ್ರೀತಿ, ಇತರರಿಗೆ ಸದಾ ಸಹಾಯ ಮಾಡುವ ಗುಣಗಳಿಂದಾಗಿ ಆಕೆಗೆ ಬಹಳಷ್ಟು ಸ್ನೇಹಿತರು, ಪರಿಚಿತರು ಇದ್ದಾರೆಂದು ಆ ರಾಜ್ಯದ ಸ್ವೀಟ ಹೋಂ, ಲೆಬೆನಾನ್, ಸೇಲಂ ಊರುಗಳಲ್ಲಿ ಅವಳೊಂದಿಗೆ ತಿರುಗಾಡುವಾಗ ಕಂಡು ಕೊಳ್ಳುವಂತಾಯಿತು.
ಉರುವಲು (ಇಂಧನ) ಈಗ ಉಳಿದಿರುವ ೮ ೧/೨ ಎಕರೆ ತೋಟದಲ್ಲಿಯೇ ವಿಪುಲವಾಗಿ ದೊರೆಯುತ್ತದೆ. ಜೇಕ್ ಆಗಾಗ ತಾವೇ ಕೊಡಲಿ ಹಿಡಿದು ಬೆಳೆದ ರೆಂಬೆಗಳನ್ನು ಕಡಿದು ಹಾಕಿದರೆ ಜೀನ್ ಅವನ್ನು ಹೊತ್ತೊಯ್ದು ಪೇರಿಸಿ ಇಡುತ್ತಾರೆ. ಇದೇ ಸೌದೆಯನ್ನು ಚಳಿಗಾಲದಲ್ಲಿ ಹೀಟರಗಳಿಗೆ ಬಳಸಿ, ವಿದ್ಯುತ್ ಬಿಲ್ಲ್ ಉಳಿಸುತ್ತಾರೆ. ಒರೆಗಾನ್ ದಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ! ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಅವರು ತಮ್ಮ ದಕ್ಷಿಣದ ರಾಜ್ಯ ಕ್ಯಾಲಿಫೋರ್ನಿಯಾದ ದಕ್ಷಿಣಕ್ಕೆ ಮೆಕ್ಸಿಕೊ ದೇಶದ ಗಡಿಯ ಊರು ಆದ ಮೆಕ್ಸಿಕಾಲಿಯಲ್ಲಿ ಚಳಿಗಾಲದ ಮೂರು ತಿಂಗಳು ಕಳೆಯುತ್ತಾರೆ. ಇದಕ್ಕಾಗಿ ಪ್ರವಾಸಿ ವಾಹನ ಹೊಂದಿದ್ದಾರೆ. ನ್ಯೂಯಾರ್ಕ್, ಕಾಲಿಫೋರ್ನಿಯ, ಕೆನಡಾಗಳಿಂದ ಬರುವ ತಮ್ಮಂಥ ಹಲವು ಹಿರಿಯ ದಂಪತಿಗಳ ಸ್ನೇಹ ಅವರಿಗಾಗಿದೆ. ’ ಈ ವಾರ್ಷಿಕ ಸ್ನೇಹ ಯಾತ್ರೆ ಹಾಗೂ ಸ್ನೇಹ ವಿಹಾರಗಳನ್ನು ನಾವೆಲ್ಲರೂ ಆತುರತೆಯಿಂದ ಕಾಯುತ್ತಲೇ ಇರುತ್ತೇವೆ! ಎಂದು ಜೀನ್ ಹೇಳಿದಳು.
ಅವರ ಪ್ರವಾಸಯಾನ, ಅಥವಾ, ಟ್ರಾವೆಲ್ ಟ್ರೇಲರ್ ಮನೆಯ ಕಂಪೌಂಡಿನಲ್ಲಿ ನಿಂತಿತ್ತು. ಹೊರಗಿನಿಂದ ವಾಹನದಂತೆ ಕಂಡರೂ ಒಳಹೊಕ್ಕಾಗ ಬೆಂಗಳೂರಿಗರ ಬಾಡಿಗೆ ಮನೆ ಹೊಕ್ಕಂತೆಯೇ ಭಾಸವಾಯ್ತು!
ಒಂದು ಚಿಕ್ಕ ಡ್ರಾಯಿಂಗ ರೂಮ್, ಎರಡು ಮಂಚ ಜೋಡಿಸಿದ ಬೆಡ್ ರೂಮು ಅದಕ್ಕೆ ಹೊಂದಿ ಇತ್ತು. ನಿಂತು ಅಡಿಗೆ ಮಾಡಲು ಸಾಲುವ ಜಾಗವಿದ್ದ ಕಿಚನ್, ಬಾತ್ ಟಬ್, ಬೇಸಿನ್, ಟಾಯ್ಲೇಟಗಳಿದ್ದ ಚಿಕ್ಕ ಬಾತ್ ರೂಂ ಇತ್ತಲ್ಲದೇ ಸಾಮಾನು ಇಡಲು ಎರಡು ಕ್ಲಾಜೆಟ್ಟ ಬೇರೆ ಇದ್ದವು! ಡ್ರಾಯಿಂಗ ರೂಮಿನಲ್ಲಿಟ್ಟ ಸೋಫಾ ಹಿಗ್ಗಿಸಿ ಇನ್ನಿಬ್ಬರು ಮಕ್ಕಳು, ಅಥವಾ ಕೃಶಾಂಗರು ಮಲಗಬಹುದಿತ್ತು.ಅಡಿಗೆಗೆ ಬೇಕಾದ ಕುಕಿಂಗ ಗ್ಯಾಸ್ ಸಿಲಿಂಡರ್ ಹಾಗೂ ನಲ್ಲಿ ನೀರಿಗೆ ಬೇಕಾದ ಟ್ಯಾಂಕರಗಳನ್ನು ವ್ಯಾನಿನ ಹೊರಗಡೆ ಜೋಡಿಸಲಾಗಿತ್ತು. ದೀಪಗಳ ವ್ಯವಸ್ಥೆಗೆ ಡೈನೆಮೊ ಇತ್ತು.ರೊಥ್ ಕುಟುಂಬದ ಕಾರು ಹಾಗೂ ನಿಸ್ಸಾನ್ ಟ್ರಕ್ ಇದ್ದು, ಪ್ರವಾಸದ ಹೊತ್ತಿಗೆ ಟ್ರಕ್ಕಿನ ಮೋಟರ್ ಯಂತ್ರವನ್ನು ಇದಕ್ಕೆ ಜೋಡಿಸಿ ಪ್ರವಾಸ ಮಾಡುತ್ತಾರೆ. ಸರತಿಯಿಂದ ಈ ದಂಪತಿ ಡ್ರೈವ್ ಮಾಡುತ್ತ ನಾಲ್ಕು ಸಾವಿರ ಮೈಲು ಮಾರ್ಗವನ್ನು ಕ್ರಮಿಸುತ್ತಾರೆ. ದಿನಕ್ಕೆ ೮೦೦ ಮೈಲಿ ಸಹಜವಾಗಿ ಗಾಡಿ ಓಡಿಸಬಲ್ಲೆನೆಂದು ಜೇಕ್ ಅಭಿಮಾನದಿಂದ ಹೇಳಿದರು.
ಜ್ಯೋತ್ಸ್ನಾ ಕಾಮತ್
ಮುಂದುವರೆಯುವದು …. ಮುಪ್ಪಿನೊಂದಿಗೆ ಹೊಂದಾಣಿಕೆ : ಹಿರಿಯರ ಗ್ರಾಮ -ಭಾಗ ೨