ಮಕ್ಕಳ ಬೆಳವಣಿಗೆ: ತಂದೆ ತಾಯಿಗಳ ಪಾತ್ರವೇನು? – ಡಾ. ಕೃಷ್ಣಾನಂದ ಕಾಮತ

ನೋಬೆಲ್ ಪಾರಿತೋಷಕ ಅಸ್ತಿತ್ವಕ್ಕೆ ಬಂದ ಕಳೆದ ಎಪ್ಪತ್ತೆಂಟು ವರ್ಷಗಳಲ್ಲಿ ಕೇವಲ ಇಬ್ಬರು ಭಾರತೀಯರು ಅದಕ್ಕೆ ಅರ್ಹತೆ ಪಡೆದರು. ಭಾರತದ ಜನಸಂಖ್ಯೆಯ ಒಂದು ಮೂರಾಂಶದಷ್ಟಿರುವ ಅಮೇರಿಕಕ್ಕೆ ಕಳೆದ ಒಂದೇ ವರ್ಷದಲ್ಲಿ ಆರು ನೋಬೆಲ್ ಪುರಸ್ಕಾರಗಳು ದೊರೆತವು. ಅದೇ ದೇಶ, ಒಲಿಂಪಿಕ್ ಪಂದ್ಯಾಟಗಳಲ್ಲಿ ಬಹುಸಂಖ್ಯೆಯಲ್ಲಿ ಸುವರ್ಣಪದಕಗಳನ್ನು ಗಳಿಸುತ್ತಿದೆಯಲ್ಲದೇ ವಿಶ್ವ ಚಾಂಪಿಯನ್ಶಿಪ್ ನ್ನೂ ಪಡೆಯುತ್ತಿದೆ. ಆದರೆ, ಭಾರತ ಹಾಕಿಯಲ್ಲಿ ಗಳಿಸುತ್ತಿದ್ದ ಒಂದೇ ಒಂದು ಸುವರ್ಣ ಪದಕಕ್ಕೂ ಎರವಾಗಬೇಕಾಗಿ ಬಂತು. ಒಂಟಿ ಸ್ತ್ರೀ ಪುಟ್ಟ ವಿಮಾನದಲ್ಲಿ ಭೂಪ್ರದಕ್ಷಿಣೆ ಹಾಕುವದು, ಬೆಲೂನಿನಲ್ಲಿ ಅಟ್ಲಾಂಟಿಕ್ ಮಹಾಸಾಗರ ದಾಟುವದು, ಚಂದ್ರಲೋಕಕ್ಕೆ ಹೋಗಿಬರುವದು, ಗುರುಶುಕ್ಲ ಗ್ರಹಗಳಿಗೆ ಯಂತ್ರೋಪಕರಣಗಳನ್ನು ಕಳಿಸುವದು, ಹಲವಾರು ವೈ‘ಜ್ನಾನಿಕ ಶೋಧಗಳು, ಕೃಷಿ-ಕಾರಖಾನೆ ಉತ್ಪಾದನೆ ಮುಂತಾದವುಗಳಲ್ಲೆಲ್ಲ ಅಮೇರಿಕೆಯದೇ ಎತ್ತಿದ ಕೈ. ಕೇವಲ ಮೂರು ಶತಕಗಳ ಇತಿಹಾಸ ಹೊಂದಿದ ಅಮೇರಿಕ, ಇಷ್ಟೊಂದು ಸಾಧಿಸುವಂತಾಗಿದ್ದರೆ, ಮೂವತ್ತು ಶತಕಗಳ ಇತಿಹಾಸವಿರುವ ಭಾರತ ಇಷ್ಟೇಕೆ ಹಿಂದೆ ಬಿದ್ದಿದೆ ಎಂಬುದು ಎಲ್ಲರೂ ವಿಚಾರಿಸಬೇಕಾದ ಮಾತು. ನಮ್ಮಲ್ಲಿಯೂ ಪುಷ್ಪಕ ವಿಮಾನಗಳಿದ್ದವು. ನಮ್ಮ ಪೂರ್ವಜರು ಅಣ್ವಸ್ತ್ರಗಳನ್ನು ಬಲ್ಲವರಾಗಿದ್ದರು. ಶಸ್ತ್ರಕ್ರಿಯೆಯ ಯಾವತ್ತೂ ಚಮತ್ಕಾರಗಳನ್ನು ಸಾಧಿಸಿದ್ದರು ಎಂದು ಒಣ ಡೌಲಿನ ಮಾತುಗಳನ್ನು ಹೇಳುವದಕ್ಕಿಂತ ನಮ್ಮ ಸಾಹಸ ಮುಂದೆ ಹೋಗಿಲ್ಲ. ಬಹುಶಃ ಇದಕ್ಕೆ ಹಲವಾರು ಕಾರಣಗಳ ಜೊತೆ ನಾವು ಬೆಳೆದು ಬಂದ ವಾತಾವರಣವೂ ಒಂದು ಪ್ರಬಲ ಕಾರಣವಾಗಿದೆ.

ತಾತನಿಗೆ ಮಗನಿನ್ನೂ ಶಿಶು- ಮುದಿಯ ತಂದೆ ಮೊಮ್ಮಕ್ಕಳನ್ನು ಪಡೆದ ತನ್ನ ಮಗನನ್ನು ಇನ್ನೂ ಮಗುವಿನಂತೆ ನೋಡಿಕೊಳ್ಳುವದು ನಮ್ಮಲ್ಲಿ ತೀರಾ ಸಾಮಾನ್ಯ. ಏನೇ ಕಲಿತಿರಲಿ, ಎಷ್ಟೇ ಆಧುನಿಕರೆಂದು ಜಂಭ ಕೊಚ್ಚಿಕೊಳ್ಳಲಿ, ಏನಾದರೂ ಶೌರ್ಯ ಸಾಹಸಗಳ ಪ್ರಮೇಯ ಬಂದಾಗ ಪಾಲಕರ ಹೆಸರು ಹೇಳಿ ಪಲಾಯನ ಮಾಡುವದು ನಮ್ಮಲ್ಲಿ ಧರ್ಮವಾಗಿದೆ. ಮಕ್ಕಳೆಂದರೆ ಮರ್ಕಟದಂತೆ, ಹಾಗೆ ಮಾಡಬೇಡ , ಹೀಗೆ ನೋಡಬೇಡ , ಅಲ್ಲಿ ಹೋಗಬೇಡ, ಇಲ್ಲಿ ಬರಬೇಡ ಎಂಬ ತರಬೇತಿಯಿಂದ ಎಳೆಯರ ವ್ಯಕ್ತಿತ್ವವನ್ನು ಅದುಮಿಬಿಡುವದರಲ್ಲಿ ನಾವು ಯಶಸ್ವಿಯಾಗಿದ್ದೇವೆ.ಹೇರಳವಾಗಿ ಹಣ ಖರ್ಚು ಮಾಡಿದರೆ ಮಕ್ಕಳು ಉತ್ತಮ ಬೆಳವಣಿಗೆ ಪಡೆಯುತ್ತಾರೆ ಎಂದು ಸಿರಿವಂತರು ಪರಿಗಣಿಸಿದರೆ, ಮಧ್ಯಮ ವರ್ಗದವರು ಅತೀ ಹೆಚ್ಚಿನ ವೈಯಕ್ತಿಕ ಲಕ್ಷ್ಯ ಮತ್ತು ಮುದ್ದಿನಿಂದ ಮಕ್ಕಳನ್ನು ನಾಲಾಯಕರನ್ನಾಗಿ ಮಾಡುತ್ತಾರೆ. ಬಡವರಂತೂ ಮಕ್ಕಳೆಂದರೆ ದುಡಿಯುವ ಇನ್ನೆರಡು ಕೈ ಎಂದು ತಿಳಿಯುವದರಿಂದ ಅವರಿಗೆ ಬಾಲ್ಯಾವಸ್ಥೆಯೇ ಇರುವದಿಲ್ಲ. ಇಂದಿಗೂ ನಗರವಾಸಿಗಳಲ್ಲಿ ಅಮೇರಿಕನ್ನರಂತೆ ವೇಷ ಭೂಷಣ ಧರಿಸಿ, ಅವರ ಚಲಚಿತ್ರಗಳನ್ನು ನೋಡಿ ಅವರ ಸಾಹಿತ್ಯದ ಅಲ್ಪ ಪರಿಚಯ ಪಡೆಯುವದು ಸುಸಂಸ್ಕೃತ ಲಕ್ಷಣವಾಗಿದೆ. ಸಾಲವಾದರೂ ಮಾಡಿ ಮಕ್ಕಳನ್ನು ಕಾನ್ವೆಂಟ ಅಥವಾ ಇಂಗ್ಲಿಷ ಮಾಧ್ಯಮವುಳ್ಳ ಶಾಲೆಗೆ ಕಳಿಸುವದು ಮಧ್ಯಮ ವರ್ಗದವರ ಗುರಿ. ಐದು ಇಂಗ್ಲಿಷ್ ಶಬ್ದಗಳನ್ನು ಮಕ್ಕಳು ಮಾತನಾಡಿದರೆಂದರೆ ಇವರು ಧನ್ಯತೆಯನ್ನು ಪಡೆಯುತ್ತಾರೆ.ಈ ಡಂಭಾಚಾರದಿಂದ ಮಕ್ಕಳಲ್ಲಿ ಡೌಲಿ ಬೆಳೆಯುತ್ತದೆಯೇ ಹೊರತು ಸಾಹಸ ಶೌರ್ಯಗಳಲ್ಲ.

ಪ್ರತಿಯೊಬ್ಬ ಅಮೇರಿಕನ್ನನೂ ತಾನು ಸ್ವತಂತ್ರ ನಾಗಬೇಕೆಂದು ಬಯಸುತ್ತಾನೆ. ಸದಾ ಯತ್ನಿಸುತ್ತಾನೆ. ಮೂರು ದಿನದ ಪ್ರಸೂತಿಯ ದಣಿವು, ಒಂದು ವಾರದ ವಿಶ್ರಾಂತಿಯ ನಂತರ ಅಮೇರಿಕನ್ ತಾಯಿ, ತಿರುಗಿ ತನ್ನ ದೈನಂದಿನ ಕೆಲಸಗಳನ್ನು ಪ್ರಾರಂಭಿಸುತ್ತಾಳೆ. ಅಳುವದು ಮಗುವಿನ ಜನ್ಮಸಿದ್ಧ ಹಕ್ಕು ಎಂದು ತಿಳಿದ ಭಾರತೀಯನಿಗೆ ಅಮೇರಿಕನ್ ಮಗು ಅಳುವದು ತೀರಾ ಕ್ವಚಿತ್ತಾಗಿ ಎಂದು ಅರಿವಾದಾಗ ಆಶ್ಚರ್ಯವಾಗದೇ ಇರದು.ಮಗುವಿನ ಬೆಳವಣಿಗೆಗೆ ಯಾವ ಯಾವ ಆಹಾರ, ಎಷ್ಟು ಪ್ರಮಾಣದಲ್ಲಿಬೇಕು ಎಂದು ವೈಜ್ಞಾನಿಕವಾಗಿ ನಿರ್ಧರಿಸಿದ್ದನ್ನು ಕಾಲ ಕಾಲಕ್ಕೆ ಕೊಡುವದಲ್ಲದೇ , ರೋಗ ಜೀವಿಗಳಿಂದ ಅದು ಕಲುಷಿತವಾಗದಂತೆ ಎಚ್ಚರಿಕೆ ವಹಿಸುತ್ತಾರೆ. ಮಲಮೂತ್ರಗಳಿಂದ ಸ್ವಚ್ಚವಾಗಿಡಲು ಡಾಯಪರಗಳನ್ನು ತೊಡಿಸುವದಲ್ಲದೇ ಅವುಗಳನ್ನು ಕ್ರಿಮಿನಾಶಕ ಗಳಿಂದ ಸ್ವಚ್ಚಗೊಳಿಸುತ್ತಾರೆ. ಮಗುವಿನ ಯಾವತ್ತು ಬೇಡಿಕೆಗಳನ್ನು ಪೂರೈಸಿದರೆ ಅದು ಅಳುವ ಅವಶ್ಯಕತೆಯಾದರೂ ಎಲ್ಲಿದೆ? ಅದೇ ನಮ್ಮಲ್ಲಿ ಮಗು, ಅತ್ತು ರಂಭಾಟಮಾಡಿದಾಗಲೇ ಅದು ಹಸಿದಿದೆ ಎಂದು ತಾಯಿಗೆ ಎಚ್ಚರಾಗುತ್ತದೆ. ಜೀರ್ಣ ವಾಗದ ಆಹಾರ, ಕಲುಷಿತ ಆಹಾರ ಕೊಡುವದರಿಂದ ಅದಕ್ಕೆ ಹೊಟ್ಟೆ ಜ಼ಾಡಿಸುತ್ತದೆ. ಅದು ಅತ್ತರೂ ಹಸಿದಿರಬೇಕೆಂಬ ಭ್ರಮೆಯಿಂದ ತಾಯಿ ಮತ್ತೇ ಹಾಲೂಡಿಸುತ್ತಾಳೆ! ಮನೆಯ ಮೂಲೆಗಳೆಲ್ಲ ಮಗುವಿಗೆ ಕಕ್ಕಸು, ಮೂತ್ರಾಲಯಗಳು. ಟಿಟೆನಸ್, ಪೋಲಿಯೊ, ಡಿಫ್ತೀರಿಯಾಗಳಂತಹ ಮಕ್ಕಳ ರೋಗಗಳ ವಿರುದ್ಧ ಮುನ್ನೆಚ್ಚರಿಕೆ ವಹಿಸುವದು ನಮ್ಮಲ್ಲಿ ವಿರಳ. ಮಗು ಹಾಸಿಗೆ ಹಿಡಿದಾಗ ಮಾತ್ರ ಡಾಕ್ಟರರ ಹತ್ತಿರ ಹೋಗುವದು ಪದ್ಧತಿ.

“ ಲಗಾಮು”- ನಾವು ಮಗುವಿಗೆ ಶೀತ ಬಾಧೆಯಾಗಬಾರದೆಂದು ಕೋಣೆಯಲ್ಲಿ ಗಾಳಿಯಾಡದಂತೆ ಮಾಡಿದರೆ ಇದಕ್ಕೆ ತದ್ವಿರುದ್ಧವಾಗಿ ಅಮೇರಿಕನ್ನರು ಜಾಗ್ರತೆಯಿಂದ ತಮ್ಮ ಮಕ್ಕಳಿಗೆ ಬೆಚ್ಚಗಿನ ಬಟ್ಟೆ ತೊಡಿಸಿ, ಮೈ ಕೊರೆಯುವ ಚಳಿಯಲ್ಲಿ ಸ್ಟ್ರೋಲರದಲ್ಲಿ ಕೂಡಿಸಿ ಸ್ವಚ್ಚ ಹವೆ ಸಿಗುವುದಕ್ಕೆ ಮನೆಯ ಹೊರಗೆ ಕೆಲ ಕಾಲ ಇಟ್ಟಿರುತ್ತಾರೆ. ಇದರಿಂದಾಗಿ ಮಕ್ಕಳು ಚಳಿ- ಗಾಳಿಗಳಿಗೆ ಸಹಿಷ್ಣುವಾಗಿ ಬೆಳೆಯುತ್ತವೆ. ತಾನು ಹೋದಲ್ಲೆಲ್ಲ ಮಗುವನ್ನು ತಾಯಿ ಒಯ್ಯುವದಲ್ಲದೇ ಮನರಂಜನೆಗೆಂದು ಹೂದೋಟ, ಪಾರ್ಕು, ಪ್ರಾಣಿ ಸಂಗ್ರಹಾಲಯಗಳಿಗೆ ಒಯ್ಯುತ್ತಾಳೆ. ತೋಳ ಬಂಧನದಲ್ಲಿ ಮಗುವನ್ನು ಎತ್ತಿ ಹಿಡಿಯುವದಕ್ಕಿಂತ , ಮನದಣಿ ಓಡಲು ಬಿಡುತ್ತಾಳೆ. ಜನಸಂದಣಿ ಬಹಳವಿದ್ದಲ್ಲಿ ಗಂಡಾಂತರ ಸ್ಥಳಕ್ಕೆ ಅದು ಧಾವಿಸಬಾರದೆಂದು ಕೆಲವಕ್ಕೆ ಲಗಾಮು ಕಟ್ಟಿರುತ್ತಾರೆ. ನಮ್ಮ ಮಾತೆಯರಲ್ಲಿ ಯಾರಾದರೂ ಅದನ್ನು ನೋಡಿ , ” ನಾಯಿಗಳಂತೆ ಮಕ್ಕಳನ್ನು ನಿಯಂತ್ರಿಸುತ್ತಾರೆ’ ಎಂದು ಎನ್ನುತ್ತಿದ್ದರೋ ಏನೋ? ಅಮೇರಿಕನ್ನರು ವೈಯಕ್ತಿಕ ಸುಖ- ನೆಮ್ಮದಿಗಳಿಗೆ ವಿಶೇಷ ಲಕ್ಷ್ಯ್ಯ ಪೂರೈಸಿರುವದರಿಂದ ಮಕ್ಕಳ ಬಗ್ಗೆ ಅಂತಃಕರಣ- ಪ್ರೀತಿಗಳು ಇರುವುದಿಲ್ಲ ಎಂದು ಸರ್ವಸಾಮಾನ್ಯರ ಕಲ್ಪನೆಯಿದ್ದಂತಿದೆ. ವಿವಾಹ ವಿಚ್ಚೇದನೆಯ ಆಟದಲ್ಲಿ ತೊಡಗಿದವರು ಅತಿ ಕಾಮುಕರು, ಕುಡುಕರು, ಕೆಲವರನ್ನು ಬಿಟ್ಟರೆ, ಸಾಮಾನ್ಯ ಅಮೇರಿಕನ್ ತಾಯಿ-ತಂದೆಗಳು, ಬಾಲಕರ ಸಾಹಸ ಸ್ವತಂತ್ರ ಪ್ರವೃತ್ತಿಗಳಿಗೆ ಅಡ್ಡಿ ಬಾರದಂತೆ ಆತ್ಮೀಯದಿಂದ ಬೆಳೆಸುತ್ತಾರೆ.

ಮುಂದುವರೆಯುವದು