ಈದೇ ಮೇ ೧೩ ರ ರಾತ್ರಿ, ಕೇವಲ ೩೬ ಗಂಟೆಗಳ ಆಸ್ಪತ್ರೆವಾಸ ಮತ್ತು ಅಂತಿಮ ಗಳಿಗೆಯ ಕಸಿವಿಸಿ, ಪ್ರಾಣಸಂಕಟಗಳನ್ನು ಅನುಭವಿಸಿ, ಆಕ್ಸಿಜನ್ ಸ್ವೀಕರಿಸಲೂ ಪ್ರತಿಭಟಿಸಿ, ಇಚ್ಚಾಮರಣಿ ಎನ್ನಬಹುದಾದ ಸಾವಿತ್ರಮ್ಮ ಕೊನೆಯ ಕ್ಷಣದವರೆಗೂ ಪ್ರಜ್ಞೆ ಕಳೆದುಕೊಳ್ಳದೇ ಇನ್ನಿಲ್ಲವಾದರು. ತೊಂಬತ್ತಾರು ವರ್ಷಗಳ ಕಾಲ , ಪ್ರತಿ ದಿನವನ್ನೂ ಸಾರ್ಥಕವಾಗಿ ಬದುಕಿ ನಾರೀ ಬಲದ ಅನುಪಮ ಮಾದರಿಯಾಗಿದ್ದಾರೆ. ಅವರೆಂದೂ ಸ್ತ್ರೀ –ಪುರುಷ ಸಮಾನತೆ, ಸಮಾನ ಹಕ್ಕುಗಳಿಗಾಗಿ ವಾದಿಸಿದ್ದಾಗಲಿ, ಬರೆದದ್ದಾಗಲಿ ಕಾಣೆ! ಗೃಹಿಣಿಯಾಗಿದ್ದುಕೊಂಡೇ ವಿಶ್ವವ್ಯಾಪಾರಗಳನ್ನು ಗಮನವಿಟ್ಟು ನೋಡುತ್ತ, ಪರಿಸರದ ಘಟನೆಗಳನ್ನೆಲ್ಲ ಕುತೂಹಲದಿಂದ ತಿಳಿದುಕೊಳ್ಳುತ್ತ, ತಿಳಿಮನಸ್ಸಿನಿಂದ ಅವನ್ನು ವಿಶ್ಲೇಷಿಸುತ್ತ, ಅವಶ್ಯ ಬಿದ್ದಾಗ ಸಮಸ್ಯೆಗಳನ್ನು ಬಗೆಹರೆಸಲು ಸಹಾಯ ನೀಡುತ್ತಿದ್ದರು. ಉತ್ತಮ ವಾಗ್ಮಿ, ಬೋಧಕಿ ಮತ್ತು ಚಿಂತಕಿಯಾಗಿದ್ದರು. ತನ್ನವರ , ಇತರರ ಜೀವನವನ್ನು ಸುಗಮವಾಗಿಸಲು ಸದಾ ಯತ್ನಿಸಿದರು. ನಗುಮುಖದ, ತಿಳಿಹೃದಯದ ಸಾವಿತ್ರಮ್ಮ ಒಳ್ಳೆಯ ಸಾಹಿತಿ ಆಗಿದ್ದರು. ಹಿರಿಯ ಸಾಧಕಿಯಾಗಿದ್ದರು. ಎರಡು ಶತಮಾನಗಳ ಕೊಂಡಿಯಾಗಿ ಬದುಕಿದರು. ಅವಕಾಶ ವಂಚಿತ ದಿನಗಳಲ್ಲಿ, ಅಪರೂಪದ ಬುದ್ಧಿಮತ್ತೆ, ಅಪಾರ ಸಹನೆ ಕಠಿಣ ಪರಿಶ್ರಮಗಳಿಂದ, ಅತಿ ಸೀಮಿತ ವರಮಾನದಲ್ಲಿ ಎಂಟು ಮಕ್ಕಳ ತಾಯಿಯಾಗಿ ಏನೆಲ್ಲ ಸಾಧಿಸ ಬಹುದು ಎಂದು ಸ್ವತಃ ಬದುಕಿ ತೋರಿಸಿದ್ದಾರೆ. ಐದಡಿಗೂ ಕಡಿಮೆ ಇದ್ದ ಪುಟ್ಟ ದೇಹದಲ್ಲಿ ದೊಡ್ಡ ಉತ್ಸಾಹದ ಚಿಲುಮೆಯನ್ನೇ ತುಂಬಿ ಕೊಂಡಿದ್ದರು. ಅದನ್ನು ಪರಿಸರಕ್ಕೆಲ್ಲ ಬೀರುತ್ತಲೇ ಕಣ್ಮರೆಯಾದರು. ಅವರ ಜಿವನ- ಸಾಧನೆಗಳು, ಯಾವ ಕಾಲಕ್ಕೂ, ಎಲ್ಲ ವಯಸ್ಸಿನವರಿಗೂ ಗಂಡು- ಹೆಣ್ಣು ಭೇದವಿಲ್ಲದೇ ಮಾದರಿಯಾಗಿ ನಿಂತಿವೆ.
ಶ್ರೀಮತಿ ಹೀರೆಮಗಳೂರು ವೆಂಕಟದಾಸಪ್ಪ ಸಾವಿತ್ರಮ್ಮನವರು , “ಪಾಪಚ್ಚಿ” ಎಂದೇ ನಿಕಟವಲಯದವರಿಗೆ ಪರಿಚಿತರು. ತಮ್ಮ ತವರಿನ ಇನಿಷಿಯಲ್ ಗಳನ್ನೇ ಕೊನೆತನಕ ಬಳಸಿದ ಹಿರಿಮೆ ಅವರದು. ಅವರ ತಂದೆ ಹೀರೆಮಗಳೂರು ವೆಂಕಟದಾಸಪ್ಪನವರು ಶಿಕ್ಷಕರಾಗಿದ್ದರು, ಇವರ ತಾಯಿ ಪಾರ್ವತಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕಿ, ಬಳಿಕ ಮುಖ್ಯಾಧ್ಯಾಪಕಿಯಾಗಿದ್ದರು. ೧೯೧೬ ರ ಅಕ್ಟೋಬರ ಹದಿನಾರರಂದು ಹುಟ್ಟಿದ ಸಾವಿತ್ರಮ್ಮನವರಿಗೆ ಲಕ್ಷ್ಮಿಕಟಾಕ್ಷ ಎಂದೂ ಪ್ರಾಪ್ತವಾಗದಿದ್ದರೂ , ಸರಸ್ವತಿ, ಸಂಪೂರ್ಣವಾಗಿ ಒಲಿದಿದ್ದಳು. ಅವರ ತಾಯಿಯ ಅಕ್ಕ ನಾಗಮ್ಮನವರು ಸಂಸ್ಕೃತ ಶಿಕ್ಷಕಿಯಾಗಿದ್ದರೆ, ಅಜ್ಜಿಯೂ ಅಪ್ಪರ್ ಸೆಕೆಂಡರಿ ಓದಿ ಇವತ್ತಿಗೆ ಸುಮಾರು ೧೪೦ ವರ್ಷಗಳ ಹಿಂದೆ ಶಿಕ್ಷಕಿಯಾಗಿದ್ದರು ಎಂದಾಗ ವಿಸ್ಮಯವಾಗುತ್ತದೆ. ದೊಡ್ಡಮ್ಮನೆನೋ ಬಾಲವಿಧವೆ. ಸ್ವಾವಲಂಬಿ ಜೀವನ ನಂಬಿದವರು. ಆದರೆ ತಾಯಿ, ಅಜ್ಜಿಯರು ತುಂಬು ಸಂಸಾರ ತೂಗಿಸಿಕೊಂಡೂ ಶಿಕ್ಷಕಿಯಾಗಿದ್ದದು ಆ ಯುಗದಲ್ಲಿ ಶ್ಲಾಘನೀಯವೆನಿಸುತ್ತದೆ. ಸಾವಿತ್ರಮ್ಮನವರ ಅಕ್ಕ ಬೆಳವಾಡಿ. ಎಸ್. ವೆಂಕಟಲಕ್ಷ್ಮಮ್ಮ ಹೊದ ಶತಮಾನದ ಪ್ರಾರಂಭದಲ್ಲಿ ಎಮ್.ಎ. ಮುಗಿಸಿ, ಶಿಕ್ಷಣ ಖಾತೆಯಲ್ಲಿ ಮೊದಲ ಸಾರ್ವಜನಿಕ ಶಿಕ್ಷಣದ ಮೊದಲ ಮಹಿಳಾ ನಿರ್ದೇಶಕರು (ಡಿ. ಪಿ ಆಯ್).
ಅಂದಿನ ಪದ್ಧತಿಯಂತೆ, ಪ್ರಾಥಮಿಕ ವಿದ್ಯಾಭ್ಯಾಸ ಮುಗಿಯಿತೋ ಇಲ್ಲವೋ ಅನ್ನುವಲ್ಲಿ ೧೧ ನೇ ವಯಸ್ಸಿಗೆ ಶ್ರೀ ಬಿ. ರಾಮಸ್ವಾಮಿ ಅವರೊಂದಿಗೆ ಸಾವಿತ್ರಮ್ಮನವರ ಮದುವೆ ಆಯಿತು. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಮ್.ಎ ಉತ್ತಮಗುಣಗಳಿಂದ ಮುಗಿಸಿದ ರಾಮಸ್ವಾಮಿ,ಅದೆಷ್ಟೋ ವರ್ಷ ಒಂದು ಸಂಸಾರವನ್ನು ಸುಗಮವಾಗಿ ತೂಗಿಸಬಹುದಾದ ಸಾದಾ ನೌಕರಿಯೂ ದೊರೆಯದೇ ಕಷ್ಟಪಟ್ಟರು. ಕನ್ನಡ, ಇಂಗ್ಲಿಷ, ಸಂಸ್ಕೃತವನ್ನು ಚೆನ್ನಾಗಿ ರೂಢಿಸಿಕೊಂಡವರು, ಸತತ ಅಧ್ಯಯನಶೀಲರಾದವರು ಗುಮಾಸ್ತರಾಗಿ, ಖಾಸಗಿ ಸಂಸ್ಥೆಗಳಲ್ಲಿ, ಫ್ಯಾಕ್ಟರಿ ಸೂಪರವೈಝರ್ ಆಗಿ , ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ಪರದಾಡಿದರು. ಹಂಗಾಮಿ ನೌಕರಿಗಳಾಗಿದ್ದವು ಅವೆಲ್ಲ. ಕೊನೆಗೊಮ್ಮೆ ಆಪ್ತರೊಬ್ಬರ ಸಲಹೆಯಂತೆ, ನಿಝಾಮನ ಆಡಳಿತದ ಹೈದರಾಬಾದಕ್ಕೆ ಹೋದರು. ಅಲ್ಲಿ ಕೆಲ ಕಾಲ, ನೃಪತುಂಗ ಕನ್ನಡ ಶಾಲೆಯ ಮೇಷ್ಟ್ರರಾಗಿ, ಶಾರದ ಕನ್ಯಾ ಶಾಲೆಯ ಮುಖ್ಯೋಧ್ಯಾಪಕರಾಗಿ ಕೊನೆಗೊಮ್ಮೆ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಲೆಕ್ಚರರ ಹುದ್ದೆ ಸಿಕ್ಕಿತು. ರೀಡರ್ ಆಗಿ ನಿವೃತ್ತರಾದರು. ಕನ್ನಡ , ತೆಲುಗು ಕಾವ್ಯಗಳ ತೌಲನಿಕ ಅಧ್ಯಯನ, ಕನ್ನಡ ಕಾವ್ಯಗಳ ವಿವಿಧ ಪಾತ್ರಗಳ, ಸಂಧರ್ಭಗಳ ವೈಶಿಷ್ಟ್ಯಗಳ ಕುರಿತ ಸಾಕಷ್ಟು ಲೇಖಗಳನ್ನು ಬರೆದಿದ್ದಾರೆ. “ನೀತಿವಾಕ್ಯಾಮೃತಂ” ಎಂಬ ಹತ್ತನೆಯ ಶತಮಾನದ ರಾಜಕಾರಣ ಸೂತ್ರಗಳ ಸಂಸ್ಕೃತ ಗ್ರಂಥವನ್ನು ಡಾ. ಜಿ ಎನ್ ದೀಕ್ಷಿತ ಹಾಗೂ ಡಾ. ಶ್ರೀನಿವಾಸ ರಿತ್ತಿ ಅವರೊಡನೆ ಸಂಪಾದಿಸಿದ್ದಾರೆ.
ಬೆಳೆಯುತ್ತ ಹೋದ ಸಂಸಾರದ ಆರ್ಥಿಕ ಹೊಣೆಗೆ ತಾನೂ ಹೆಗಲು ಕೊಟ್ಟು, ಸಾವಿತ್ರಮ್ಮ ಹೈದರಾಬಾದದ ಕನ್ನಡ ಶಾಲೆಯಲ್ಲಿ ಶಿಕ್ಷಕಿಯಾಗಿ ಮುಂದುವರೆದರು. ಈ ದಂಪತಿಗಳ ಎಂಟೂ ಮಕ್ಕಳು ಸ್ನಾತಕೊತ್ತರ ಪದವೀಧರರಾಗಿ, ವಿವಿಧ ಹುದ್ದೆಗಳಲ್ಲಿ ಮೇಲಿನ ದರ್ಜೆಗೇರಿದ್ದು ವಿಶೇಷ!
ಈಗಲೂ ಕರ್ನಾಟಕದ ಹಿಂದುಳಿದ ಪ್ರದೇಶವೆಂದೇ ಪರಿಗಣಿಸಲ್ಪಡುವ ಹೈದರಾಬಾದದ ಪ್ರದೇಶ ೬೦ ವರ್ಷಗಳ ಹಿಂದೆ ಹೇಗೆ ಇದ್ದಿರಬಹುದು ? ಎನ್ನುವದು ಊಹೆಗೆ ಬಿಟ್ಟ ವಿಷಯ! ಮುಸ್ಲಿಂ ಆಳರಸರ ಸಂಸ್ಥಾನದಲ್ಲಿ , ಮಹಿಳಾ ಸಮುದಾಯ, ಮತ, ಪಂಥ ಭೇದವಿಲ್ಲದೇ , ’ಪರ್ದಾ’ ಪದ್ಧತಿ ಆಚರಿಸುತ್ತಿದ್ದರು. ಕನ್ಯಾಶಾಲೆಗಳು ಇದ್ದರೂ , ತೆರೆ ಮುಚ್ಚಿದ ಟಾಂಗಾ, ಗಾಡಿ ಗಳಲ್ಲಿ ಹೆಣ್ಣು ಮಕ್ಕಳು ಹೋಗಿ ಬರಬೇಕಿತ್ತು. ಇನ್ನು ಸಹಶಿಕ್ಷಣ ಸಾಮಾಜಿಕ, ಸಾಮೂಹಿಕ ಚಟುವಟಿಕೆಗಳು ಅಷ್ಟಕ್ಕಷ್ಟೆ! ಸಾಲದ್ದಕ್ಕೆ ಉರ್ದು, ತೆಲುಗು, ಮರಾಠಿ, ಕನ್ನಡಗಳ ಬಹು-ಭಾಷಾಪ್ರದೇಶ ಬೇರೆ. ಇಂಥಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ರಾಮಸ್ವಾಮಿ ದಂಪತಿಗಳು ಸಕ್ರೀಯವಾಗಿ ದುಡಿದಿದ್ದಾರೆ. ಕನ್ನಡ ಸಂಘ ಕಟ್ಟಿದರು, ಪರಿಚಿತರು, ಸ್ಕೂಲುಗಳಲ್ಲಿ ಏನಿಲ್ಲೆಂದರೆ ಸ್ವಂತ ಮನೆಯಲ್ಲೆ ಕನ್ನಡ ಕಾವ್ಯವಾಚನ, ಕಥಾ ವಾಚನ, ಮಕ್ಕಳ ನಾಟಕಗಳು, ಸಮೂಹಗೀತೆ, ಏಕಪಾತ್ರಾಭಿನಯ ಮುಂತಾದವನ್ನು ಸಂಘಟಿಸುತ್ತ ಹೋದರು. ಅವರಿಬ್ಬರೂ ಹುಟ್ಟಿ ಬೆಳೆದ ಮೈಸೂರು ಸಂಸ್ಥಾನ , ಆ ದಿನಗಳಲ್ಲಿ ಸಾಮಾಜಿಕ ಸುಧಾರಣೆ, ಮಹಿಳಾ ಶಿಕ್ಷಣಗಳಲ್ಲಿ ಮುಂಚೂಣಿಯಲ್ಲಿತ್ತು. ಸಾವಿತ್ರಮ್ಮನವರು ಮೂರು ತಲೆಮಾರಿನ ಸುಶಿಕ್ಷಿತ ಹಿನ್ನೆಲೆಯವರು ಬೇರೆ! ಹೈದರಾಬಾದದಲ್ಲಿದ್ದ ಸಾಕಷ್ಟು ಕನ್ನಡ ಮನೆತನಗಳ ಮಕ್ಕಳು ಕನ್ನಡ ಶಾಲೆಯಲ್ಲೇ ಓದುವಂತೆ ಪ್ರೇರೆಪಿಸಿದರು. ಅವರಿಂದ ಹತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿಸಿದರು. ಪಂಜೆ, ಕುವೆಂಪು, ಕಾರಂತ, ರಾಜರತ್ನಂರ ಕೃತಿಗಳೆಲ್ಲ ಕಲಾತ್ಮಕ ರೂಪ ಪಡೆದು ಆ ದೂರದ ನಾಡಿನಲ್ಲಿ ಮರೆಯುವಂತೆ ನೋಡಿಕೊಂಡರು, ಕನ್ನಡ ಪ್ರೀತಿ ಬೆಳೆಸಿದರು.
ಪ್ರೊ. ರಾಮಸ್ವಾಮಿಗಳ ಗೃಹದ ಗ್ರಂಥ ಭಂಡಾರ ವ್ಯಾಪಕ ವಿಷಯಗಳ ಆಗರವಾಗಿತ್ತು, ವೈವಿದ್ಯಮಯವಾಗಿತ್ತು. ಮಕ್ಕಳೆಲ್ಲ ಸಾಹಿತ್ಯಪ್ರಿಯರೇ! ಜೊತೆಗೆ ಹೈದರಾಬಾದಕ್ಕೆ ಬರುತ್ತಿದ್ದ ಪ್ರಕಾಶಕರು, ಬರಹಗಾರರು, ಪುಸ್ತಕ ಮಾರಾಟಗಾರರು, ವಿಮರ್ಶಕರಾದಿ ಕನ್ನಡಿಗರು ಅವರ ಮನೆಯಲ್ಲೇ ಉಳಿದುಕೊಳ್ಳುವದು ವಾಡಿಕೆಯಾಗಿತ್ತು. ಹೀಗಾಗಿ ಸಾಹಿತ್ಯವಲಯದ ಸಾಮಯಿಕ ಬೆಳವಣಿಗೆಗಳೆಲ್ಲ ಅವರಿಗೆ ಗೊತ್ತಿರುತ್ತಿದ್ದವು.
ಈಗ ಸಾವಿತ್ರಮ್ಮನವರ ಅಪೂರ್ವ ಸಾಧನೆ ಪ್ರಾರಂಭವಾಯಿತು! ಶಾಲಾ ನೌಕರಿ ಯಾವ, ಯಾವ ಆಧುನಿಕ ಗೃಹೋಪಕರಣಗಳೂ ಲಭ್ಯವಿಲ್ಲದ ದಿನಗಳಲ್ಲಿ ಅಡಿಗೆ, ಊಟೋಪಚಾರ ತಪ್ಪದೇ ಪಾಲಿಸುತ್ತಿದ್ದ ಮಡಿಯ ನೈವೇದ್ಯ, ವ್ರತ, ಉಪವಾಸಗಳು, ಎಂಟು ಮಕ್ಕಳ ಪಾಲನೆ, ಓದು –ಬರಹಗಳ ಮೇಲ್ವಿಚಾರಣೆಯೊಂದಿಗೆ ತಮ್ಮ ಓದನ್ನೂ ಮುಂದುವರೆಸಿದರು! ಒಬ್ಬೊಬ್ಬ ಸಂತಾನದ ಜೊತೆಗೂ ಅವರು, ಎಸ್,ಎಸ್. ಎಲ್. ಸಿ, ಇಂಟರ್ ಮಿಡಿಯಟ್, ಬಿ.ಎ ಹಾಗೂ ಎಮ್.ಎ ಮಾಡಿದ್ದನ್ನು ಮಕ್ಕಳೆಲ್ಲ ಅಭಿಮಾನದಿಂದ ನೆನಪಿಸಿಕೊಳ್ಳುತ್ತಾರೆ. ಕೊನೆಯ ಮಗ ಜಯರಾಮ್ ತೊಟ್ಟಿಲ ಕೂಸಾಗಿದ್ದಾಗ ಎಮ್.ಎ ಮುಗಿಸಿದರು. ಶಾಲಾಶಿಕ್ಷಕಿಯಾಗಿ ಮುಂದರಿದಿದ್ದರು.ಜೊತೆಗೆ ಆಕಸ್ಮಿತವಾಗಿ ಘಟಿಸಿದ ಮೈದುನನ ಸಾವಿನಿಂದಾಗಿ, ನಿಂತು ಹೋಗಬಹುದಾಗಿದ್ದ ಅವರ ಎರಡು ಮಕ್ಕಳ ಶಿಕ್ಷಣಕ್ಕೆ ಹೈದರಾಬಾದಕ್ಕೆ ಕರೆ ತಂದು ಓದಿಸಿದರು.
ಪ್ರೊ. ರಾಮಸ್ವಾಮಿಯರು ನಿವೃತ್ತರಾದರು. ಆ ವಿಶ್ವವಿದ್ಯಾಲಯದ ನಿಯಮಕ್ಕನುಸಾರವಾಗಿ, ನಿವೃತ್ತಿ ವೇತನವಿರಲಿಲ್ಲ. ತಿರುಗಿ ಕಾಲೇಜುಗಳಲ್ಲಿ, ಅರೆಕಾಲಿಕ/ ಹಂಗಾಮಿ ಉಪನ್ಯಾಸಕಾರರಾಗಿ ಬೇರೆ ಬೇರೆ ಊರುಗಳಿಗೆ ಹೋಗಿ, ಸ್ವಯಂಪಾಕದೊಂದಿಗೆ ವೃತ್ತಿಜೀವನ ಮುಂದುವರೆಸಿದರು.
ಸಾವಿತ್ರಮ್ಮನವರೂ ಕಾಲೇಜು ರಂಗ ಪ್ರವೇಶಿಸಿದರು. ೧೯೭೦ರ ದಶಕದಲ್ಲಿ ಚಿಕ್ಕಬಳ್ಳಾಪುರದಲ್ಲಿ, ಕಾಲೇಜೊಂದು ಪ್ರಾರಂಭವಾಯಿತು. ಐವತ್ತು ದಾಟಿದ ಸಾವಿತ್ರಮ್ಮ ಅರ್ಜಿಯನ್ನು ದೌಡಾಯಿಸಿದರು. ಮೌಖಿಕ ಸಂದರ್ಶನವಷ್ಟೆ ಅಲ್ಲದೇ ಸಂದರ್ಶಕರು ಪಂಪನ ಕೃತಿಯಲ್ಲಿಯ ಒಂದು ಸಂದರ್ಭ ಕುರಿತು, ಲೆಕ್ಚರ್ ಕೊಡಲು ಹೇಳಿದರು. ಕೇಳಬೇಕೆ? ಹುಟ್ಟಾ ಅಧ್ಯಯನಶೀಲೆ, ಒಳ್ಳೆಯ ವಾಗ್ವೈಖರಿಯ, ವಿಷಯದ ಹಿಡಿತವಿದ್ದ ಸಾವಿತ್ರಮ್ಮ ಕೊಟ್ಟ ಅವಧಿಗೆ ಉಪನ್ಯಾಸ ಮಾಡಿ ಮುಗಿಸಿದರು. ವಿದ್ಯಾರ್ಥಿಗಳೊಂದಿಗೆ ಕುಳಿತ ಸಂದರ್ಶಕರೊಬ್ಬರು, “ ಆಂ! ಮುಗಿದೇ ಹೋಯ್ತ್ತೆ! “ ಎಂದು ಉದ್ಗರಿಸಿ ವಾಚು ನೋಡಿ ಕೊಂಡದ್ದನ್ನು ಸಾವಿತ್ರಮ್ಮ ನೆನಪಿಸಿಕೊಂಡಿದ್ದರು.
ಸಾವಿತ್ರಮ್ಮ ಉಪನ್ಯಾಸಕಿಯಾಗಿ ಆಯ್ಕೆ ಆದರು. ಉಳಿದ ಕೆಲವೇ ದಿನಗಳ ಸೇವೆಯಲ್ಲಿ ಅತ್ಯುತ್ತಮ ಬೋಧನೆಗೆ ಹೆಸರು- ವಾಸಿಯಾದರು. ಸಾರ್ವಜನಿಕ ಸಭೆಗಳಲ್ಲಿ, ಅವರ ವಾಗ್ ವೈಖರಿಯಿಂದ ಆಗಾಗ ಟಿಪ್ಪಣಿಯೂ ಇಲ್ಲದೇ ಉದ್ಧರಿಸುವ ಕಾವ್ಯ ಸಂಧರ್ಭಗಳಿಂದ, ವಿನೋದ ಪ್ರಸಂಗಗಳಿಂದ, ಜನಪ್ರಿಯ ಭಾಷಣಕಾರರಾದರು. ಮೈಕ್ ಎದುರಿಗೆ ಗಂಟೆಗಟ್ಲೆ ನಿರರ್ಗಳವಾಗಿ ಮಾತನಾಡುವದು ಅವರಿಗೆ ತೀರ ಕೊನೆಯ ವರ್ಷಗಳ ವರೆಗೂ ರೂಢಿಯಾಗಿತ್ತು. ತೆಲುಗು, ಇಂಗ್ಲಿಶ ಪುಸ್ತಕಗಳನ್ನು ಓದುತ್ತಿದ್ದರು. ಎಲ್ಲ ವಯಸ್ಸಿನ ಸ್ತ್ರೀ- ಪುರುಷರೊಂದಿಗೆ ಬೆರೆತು, ಅವರ ಸಾಂಸಾರಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸಾಧ್ಯವಾದ ಪರಿಹಾರ ಸೂಚಿಸುತ್ತಿದ್ದರು.
ಫ್ರೊ. ರಾಮಸ್ವಾಮಿಗಳು ೨೦೦೧ರಲ್ಲಿ ನಿಧನ ಹೊಂದಿದ ಬಳಿಕ , ಸಾವಿತ್ರಮ್ಮ ಅವರ ಸಮಗ್ರ ಬರಹಗಳನ್ನು ಸಂಗ್ರಹಿಸಿ, ಸಂಪಾದಿಸಿ, ಅವರನ್ನು ಬಲ್ಲವರಿಂದ ಲೇಖಗಳನ್ನು ತರಿಸಿಕೊಂಡು, ’ಮಧುರಸ್ಮೃತಿ’ ಎಂಬ ಬೃಹತ್ ಗ್ರಂಥವನ್ನು ಹೊರ ತಂದರು. ಅದು ಬಿ.ಎಮ್.ಶ್ರೀ ಪ್ರತಿಷ್ಠಾನದಿಂದ ಪ್ರಕಟವಾಯಿತು. ತಮ್ಮ ಮಾವನವರಾಗಿದ್ದ ಬೇಟೆರಾಯರು ಬರೆದಿದ್ದ ವ್ರತೊಪಾಸನೆ, ಆರತಿಯ ಹಾಡುಗಳ ಸಂಗ್ರಹವನ್ನು ಹೊರತಂದರು. ಸ್ವತಃ ಆರು ದಶಕಗಳ ಕಾಲದಲ್ಲಿ ಆಗಾಗ ಬರೆದು, ಓದಿ, ಪ್ರಸಾರಮಾಡಿ, ಮರೆತೂ ಹೋದ ನೆನಪಿಟ್ಟ ಕೆಲವು ಲೇಖ, ಕಥೆಗಳ ಮೂರು ಸಂಗ್ರಹಗಳನ್ನು ಹೊರತಂದರು.
೧) ಬರಡು ಬರಹಗಳು – ಸಮಾಜದ , ತಾವು ಕಂಡ ಓರೆ-ಕೊರೆ ನೋಟಗಳ ವಿನೋದ ಲೇಖಗಳು
೨) ಸುದ್ದಿ ಸುಂಕಮ್ಮ ( ಹರಟೆಗಳು)
೩) ಕಾವ್ಯದ ಒಂದು ಚುಂಗನ್ನು ಹಿಡಿದು. ( ಇದು ಕನ್ನಡ ಕಾವ್ಯಗಳಲ್ಲಿಯ ರಸವತ್ತಾದ ಸನ್ನಿವೇಶಗಳ ನಿರುಪಣೆಗಳು)
ಅವರು ಉಳಿಸಿಕೊಂಡ , ’ಆಕಾಶವಾಣಿ ಹೈದರಾಬಾದದಲ್ಲಿ ಮಾಡಿದ ಕೆಲ ಪ್ರಸಾರ ಭಾಷಣಗಳು, ಅಲ್ಲಲ್ಲಿ ಮಾಡಿದ ಕಿರು ಭಾಷಣಗಳ ಲಿಖಿತ ರೂಪಗಳನ್ನು ಒಳಗೊಂಡಿದೆ. ಮೂರೂ ಬಿ ಎಮ್. ಶ್ರೀ ಪ್ರತಿಷ್ಠಾನದ ಅವರ ಕುಟುಂಬ ಸ್ನೇಹಿತರಾಗಿದ್ದ ಶ್ರೀ ಗೀತಾಚಾರ್ಯರ ಒತ್ತಾಯ, ಪ್ರಚೋದನೆಗಳಿಂದ ಬೆಳಕು ಕಂಡವು.
ಅವರ ಅಸಾಧಾರಣ ವ್ಯಕ್ತಿತ್ವದ , ನನಗೆ ಎದ್ದು ಕಾಣುತ್ತಿದ್ದ ಗುಣವೆಂದರೆ ತೀವ್ರವಾಗಿ ಬದಲಾಗುತ್ತಿರುವ ಭಾರತೀಯ ಸಮಾಜದ ಬೆಳವಣಿಗೆಗೆ ಪೊಸಿಟಿವ್ ಆಗಿ ಸ್ಪಂದಿಸಿದ್ದು. ಪ್ರೌಢ ವಿವಾಹ, ವಿಧವಾವಿವಾಹ, ಅಂತರ್ ಜಾತಿಯ ವಿವಾಹಗಳನ್ನೆಲ್ಲ ತಮ್ಮವೇ ಕಾರಣಗಳಿಂದ ಪ್ರೋತ್ಸಾಹಿಸುತ್ತಿದ್ದರು. ಅವರ ದೊಡ್ಡ ಕುಟುಂಬದಲ್ಲಿ , ಹಲವಾರು ಮಕ್ಕಳು, ಮೊಮ್ಮಕ್ಕಳೆಲ್ಲ, ಅಮೇರಿಕನ್ ಸೇರಿದಂತೆ ಅಂತರ್ ಭಾಷೀಯ, ಜಾತೀಯ, ಪ್ರಾಂತೀಯ ವಿವಾಹವಾಗಿದ್ದಾರೆ. ಅವರೆಲ್ಲರಿಗೂ, ’ಪಾಪಚ್ಚಿ ’ ಎಂದರೆ ಅಚ್ಚುಮೆಚ್ಚು. ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಬಾಳಿ ಬದುಕಿ, ಕೊನೆಯಿಲ್ಲದ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತ, ದೊಡ್ಡ ಕುಟುಂಬವನ್ನು ಸಂಭಾಳಿಸುತ್ತ, ನೌಕರಿ ಮಾಡುತ್ತ, ಬೌದ್ಧಿಕವಾಗಿ ಬೆಳೆಯುತ್ತ, ಸಾಮಾಜಿಕ ಆಗು-ಹೋಗುಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತ, ಕನ್ನಡ ಸಾಹಿತ್ಯಿಕ, ಸಾಂಸ್ಕೃತಿಕ, ಜೀವನಕ್ಕೆ ತಮ್ಮದೇ ಕೊಡುಗೆಯಿತ್ತು, ಸಾವಿತ್ರಮ್ಮ ಕೊನೆಯವರೆಗೂ , ’ವನಸುಮ’ದಂತೆ ಹೈದರಾಬಾದದಲ್ಲಿ ಬದುಕಿ ಬಾಡುತ್ತಿದ್ದರೆನೋ! ಕೊನೆಯ ದಿನಗಳ ಅಲ್ಪವಾದ ಬೆಂಗಳೂರು ವಾಸ್ತವ್ಯ ಅವರನ್ನು ಅನೇಕ ಸಂಘ, ಸಂಸ್ಥೆಗಳಿಗೆ ಪರಿಚಯಿಸಿತು. ಗಾಂಧಿ ಸಾಹಿತ್ಯ ಸಂಘ, ಮಿಥಿಕ್ ಸೊಸಾಯಟಿ,ಲೇಖಕೀಯರ ಸಂಘ , ಆಕಾಶವಾಣಿ ಬೆಂಗಳೂರು, ಕನ್ನಡ ಸಂಸ್ಕೃತಿ ಕೇಂದ್ರಗಳು ಅವರನ್ನು ಸನ್ಮಾನಿಸಿದವು., ಅವರ ಅನನ್ಯ ವಾಗ್ ವೈಖರಿಗೆ ಅವಕಾಶವಿತ್ತವು. ಅವರ, ವಿವಿಧ ರಾಮಾಯಣಗಳಲ್ಲಿ, “ಕೈಕೆಯಿ ಪಾತ್ರದ ತೌಲನಿಕ ಅಧ್ಯಯನ” ದ ಒಂದು ಗಂಟೆಯ ಸೋದಾಹರಣ ಭಾಷಣ , ಇನ್ನೂ ಕಿವಿಯಲ್ಲಿ ಗುಂಯ್ ಗೊಡುತ್ತಿದೆ.
ಸದಾ ಹಸನ್ಮುಖಿಯಾಗಿರುತ್ತಿದ್ದ ಸಾವಿತ್ರಮ್ಮ ಕೊನೆಯವರೆಗೂ ಜೀವನೋಲ್ಲಾಸವನ್ನು ಉಳಿಸಿಕೊಂಡರು. ಸಂಗೀತ ಪ್ರಿಯರಾಗಿದ್ದ ಅವರು ಹಾರ್ಮೋನಿಯಂ ನುಡಿಸುತ್ತಿದ್ದರು. ಕ್ರಿಕೆಟ್ ಆಟದಲ್ಲಿ ಮೀರಿದ ಆಸಕ್ತಿ ಹೊಂದಿ,ಪ್ರತಿ ಕ್ಯಾಚ್, ರನ್ ಗಳಿಗೆ ಎಳೆಯರಂತೆ ಚಪ್ಪಾಳೆ ತಟ್ಟಿ ಕೂಗಿ ಆನಂದಿಸುತ್ತಿದ್ದರು. ಕಣ್ಣು ಮಂದವಾದರೂ ಲೆನ್ಸ್ ಹಿಡಿದು, ಪತ್ರಿಕೆ, ಲೇಖ, ಪುಸ್ತಕಗಳನ್ನು ಓದುತ್ತಿದ್ದರು, ಚರ್ಚಿಸುತ್ತಿದ್ದರು, ಅವರ ಪ್ರಸನ್ನತೆ ಸಾಂಸರ್ಗಿಕವಾಗಿತ್ತು. ಈ ಮಹಾಮಾತೆಯ ಹೈದರಾಬಾದದ ಮನೆಯಲ್ಲಿ ಒಂದು ವಾರ ಒಡನಿದ್ದು ಅವರ ಕೈಯಡಗೆಯ ಸವಿ, ಮಾತಿನ ಮೋಡಿ, ವೈಚಾರಿಕ ಸುಧೆಯ ಹನಿಗಳನ್ನು ಅನುಭವಿಸುವ ಅಪೂರ್ವ ಭಾಗ್ಯ ನನ್ನದಾಯಿತು.!
ಸುಮಾರು ಒಂದು ಶತಮಾನದ ತನ್ನ ಬಾಳಿನ ಅಪರೂಪದ ನೆನಪುಗಳನ್ನೆಲ್ಲ ಆತ್ಮವೃತ್ತಾಂತದ ರೂಪದಲ್ಲಿ ಸಾವಿತ್ರಮ್ಮ ಬರೆದಿಟ್ಟಿದ್ದಾರೆ. “ ಕೇವಲ ಆತ್ಮ ತೃಪ್ತಿಗೆ, ಖಾಸಗಿ ಅನುಭವಗಳಾಗಿದ್ದರಿಂದ ಪ್ರಕಟಿಸುವ ಮನಸ್ಸಿಲ್ಲ!” ಅಂದಿದ್ದರು. ಆದರೆ ಇಂದಿನ ಪೀಳಿಗೆಗೆ, ಶ್ರೀಮಂತರಿಗೆ, ’ವಿದ್ಯೆ’ (ಡಿಗ್ರಿ) ಯೊಂದೆ ರಾಜಮಾರ್ಗ ಎಂದು ನಂಬಿದವರಿಗೆ, ಹಿಂದಿನವರ ಬೌದ್ಧಿಕ ಶ್ರೀಮಂತಿಕೆಗೆ ಬೆಲೆಕಟ್ಟಲಾಗದು! ಎಂದು ಸ್ವತಃ ತನ್ನ ಸರಳ , ಸಾದಾ ಬದುಕು, ಆದರೆ ಅನುಭವಾಶ್ವರ್ಯದಿಂದ ತೋರಿಸಿಕೊಟ್ಟಿದ್ದಾರೆ. ಆ ಗ್ರಂಥ ಬೆಳಕು ಕಂಡರೆ ಎರಡು ಶತಮಾನಗಳ ಪ್ರತಿನಿಧಿಯೊಬ್ಬರು, ತಾವು ಕಂಡುಕೊಂಡ ಸಮಾಜದ ಹೊರಳು ನೋಟಗಳ ದಾಖಲೆಯನ್ನು ಹೊರನಾಡಿನಲ್ಲಿದ್ದೂ ಕನ್ನಡಿಗರಿಗೆಲ್ಲ ಪರಿಚಯಿಸಿದ ಹಿರಿಮೆ ಸಾವಿತ್ರಮ್ಮನವರದಾಗುತ್ತದೆ.
ಅವರ ಸ್ಮರಣೆ, ನನ್ನ ಪಾಲಿನ ಪುಣ್ಯ ವಿಶೇಷವಾಗಿದೆ.
ಡಾ, ಜ್ಯೋತ್ಸ್ನಾ ಕಾಮತ್