ಇತ್ತೀಚೆಗೆ ಅಂದರೆ 8-10-2017 ರಂದು ಬನ್ನೇರುಘಟ್ಟ ಮೃಗಾಲಯದಲ್ಲಿ ಎರಡು ಚಿಕ್ಕ ಪ್ರಾಯದ ಬಿಳೆ ಹುಲಿಗಳು ತಮಗೆ ಆಹಾರ ಕೊಡಬಂದ ಆಂಜನೇಯನನ್ನು ಆಕ್ರಮಿಸಿ ಕೊಂದು ಹಾಕಿದ ವಿಚಾರ, ಪತ್ರಿಕೆಯಲ್ಲಿ ಓದಿದಾಗ ಆ ದುರ್ದೈವಿಯ ಘೋರ ಮರಣದ ಬಗ್ಗೆ ತುಂಬ ವ್ಯಸನವಾಯಿತು. ಆತ ಆಗಷ್ಟೇ ಹೊಸ ಡ್ಯೂಟಿಗೆ ಹಾಜರಾಗಿದ್ದು, ಈ ಹುಲಿಗಳಿಗೆ ಅಪರಿಚಿತನಿದ್ದೋ, ಅಥವಾ ತಮ್ಮ ಆಹಾರ ಹೊತ್ತೊಯ್ಯಲು ಬಂದವನೆಂಬ ಭ್ರಮೆಯಲ್ಲೋ ಪಳಗದಿದ್ದ ಹುಲಿಗಳು ಕೊಂದವೇ? ಎಂದು ಯೋಚಿಸುತ್ತಿದ್ದಂತೆ, 1980 ರ ದಶಕದಲ್ಲಿ ಬಿಳೆ ಹುಲಿಗಳ ಕುರಿತು ಕೃಷ್ಣಾನಂದ ಕಾಮತರು ಬರೆದ ಲೇಖದ ನೆನಪಾಯಿತು. ಅವರ “ಪಶು-ಪಕ್ಷಿ ಪ್ರಪಂಚ” (೨ನೇ ಮುದ್ರಣ, ಪ್ರಗತಿ ಗ್ರ್ಯಾಫಿಕ್ಸ್-೨೦/೨) ದಲ್ಲಿ, ಮೊದಲ ಬಿಳಿ ಹುಲಿಗಳು ಭಾರತದಲ್ಲಿ ಜನ್ಮತಾಳಿ ವಿಶ್ವದ ವ್ಯಾಘ್ರಪ್ರಿಯರ ವಿಸ್ಮಯಾನಂದಗಳಿಗೆ ಕಾರಣವಾದ ವೈಜ್ಞಾನಿಕ ಕತೆಯಿದೆ.
ಅಕ್ಟೋಬರ್ 1984 ರಲ್ಲಿ ಮೈಸೂರು ಮೃಗಾಲಯದಲ್ಲಿಯೂ ಒಂದು ಹೆಣ್ಣು ಬಿಳಿಹುಲಿ ಮರಿ ಜನ್ಮತಾಳಿತು. ‘ಪ್ರಿಯದರ್ಶಿನಿ’ ಎಂದು ಹೆಸರಿಸಲ್ಪಟ್ಟ ಈಕೆ, ಎಲ್ಲರ ಕಣ್ಮಣಿಯಾಗಿ ಬೆಳೆಯಲಾರಂಭಿಸಿದಳು. ಈಕೆಯಿನ್ನೂ ೧ ವರ್ಷದ ಮಗುವಾಗಿದ್ದಾಗ, ಇತರ ಹುಲಿ ಸಂತತಿಯ ಎಳೆಮರಿಗಳಂತೆಯೇ ಬಗೆಬಗೆಯ ತುಂಟಾಟ, ಕಪಿಚೇಷ್ಟೆಗಳಲ್ಲಿ ಪ್ರೇಕ್ಷಕರಿಗೆಲ್ಲ ಮೀರಿದ ಮನರಂಜನೆ ಒದಗಿಸುತ್ತಿದಳು. ಕೆಲ ವರ್ಷಗಳ ಹಿಂದೆ ಆಕೆ ಸಹಸ್ರ ಸಹಸ್ರ ಜನರನ್ನು ಇಪ್ಪತ್ತು ವರ್ಷಗಳ ಕಾಲ ರಂಜಿಸಿ, ಮರಣ ಹೊಂದಿದಳು. ಆಕೆಯ ಬಾಲ್ಯಾವಸ್ಥೆಯ ಎರಡು ಚಿತ್ರಗಳು ಇಲ್ಲಿವೆ.
೧. ಬರ ಹೋಗುವ ಪ್ರೇಕ್ಷಕರನ್ನು ವೀಕ್ಷಿಸುತ್ತಿದ್ದಾಗ
೨. ಜನ್ಮಭೂಮಿಯಾಗಬಹುದಾದ ಕಾಡಿನಿಂದ ವಂಚಿತಳಾದರೂ ಇದ್ದುದರಲ್ಲೆ ದಿನ್ನೆಯ ಹುಲ್ಲಿನಲ್ಲಿ ವಿರಮಿಸುವಾಗ