“ಸಂಶೋಧಕಿ, ಲೇಖಕಿ, ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿರುವ ಡಾ.ಜ್ಯೋತ್ಸ್ನಾ ಕಾಮತ್ ಅವರಿಗೆ ತಂದೆ ಎಂದರೆ ಬದುಕಿಗೆ ಬುನಾದಿ ಹಾಕಿಕೊಟ್ಟ ಮೊದಲ ಗುರು. ತಂದೆಗಿದ್ದ ಭಾಷಾ ಪ್ರಬುದ್ಧತೆ, ಸಮಾನತೆಯ ಆಶಯ, ಆಲೋಚನೆಗಳ ವೈಖರಿಯೇ ತಮ್ಮ ಬಾಳಿನ ದೀವಿಗೆಯಾಗಿ ಮುನ್ನಡೆಸಿದ್ದು ಎನ್ನುವ ಅವರು ತಂದೆಯೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.”
ನನಗೆ ಏಳನೇ ವಯಸ್ಸಿದ್ದಾಗಲೇ ನನ್ನ ತಾಯಿ ತೀರಿಕೊಂಡರು. ಆಗಿಂದ ತಾಯಿ ತಂದೆ ಎಲ್ಲವೂ ಆದರು ನನ್ನ ಅಪ್ಪ. ನಾವು ನಾಲ್ಕು ಮಂದಿ ಮಕ್ಕಳು. ಅಪ್ಪನನ್ನು ನಾವೆಲ್ಲಾ ‘ಬಾಬಾ’ ಎಂದು ಕರೆಯುತ್ತಿದ್ದೆವು. ಅವರು ಪೋಸ್ಟ್ ಮಾಸ್ಟರ್ ಆಗಿದ್ದರು. ಹೀಗಾಗಿ ಅವರಿಗೆ ಉತ್ತರ ಕನ್ನಡ ಜಿಲ್ಲೆ, ಧಾರವಾಡ, ಕೊಪ್ಪಳ, ರಾಯಚೂರು, ಬೀದರ್-ಹೀಗೆ ಎಲ್ಲ ಕಡೆಗೂ ವರ್ಗ ಆಗುತ್ತಲೇ ಇರುತ್ತಿತ್ತು. ಆಗೆಲ್ಲಾ ಅವರ ಬೆನ್ನಿಗೇ ನಾವೆಲ್ಲರೂ ಊರೂರು ಸುತ್ತುತ್ತಿದ್ದೆವು. ಜೀವನ ಎಂದರೆ ನಿರಂತರ ಓಡಾಟ! ಎಂಬ ಕಲ್ಪನೆ ಆಗಿನಿಂದಲೇ ನಮ್ಮಲ್ಲಿ ಬೇರೂರಲು ತಂದೆಯೇ ಕಾರಣ.
ನನ್ನ ತಂದೆ ಕಷ್ಟದಲ್ಲೇ ಬೆಳೆದವರು. ಕುಮಟಾದಲ್ಲಿ ನೆಲೆಯೂರಿದ್ದ ನನ್ನ ಅಜ್ಜ ಕೂಡ ಅಂಚೆ ಇಲಾಖೆಯಲ್ಲಿದ್ದವರು. ಅವರಿಗೆ ಹತ್ತು ಮಂದಿ ಮಕ್ಕಳು. ಅದರಲ್ಲಿ ನನ್ನ ತಂದೆ.ನಾಲ್ಕನೆಯವರು. ಅಜ್ಜನಿಗೂ ವರ್ಗಾವಣೇ ಇದ್ದದ್ದೇ. ಜೊತೆಗೆ ಆಗೆಲ್ಲಾ ಪ್ಲೇಗ್‍ನ ಕಾಟ. ಆ ಸಂದರ್ಭದಲ್ಲೆಲ್ಲಾ ಅಜ್ಜ ಬದುಕಿ ಬಂದಿದ್ದೇ ಹೆಚ್ಚು ಎನ್ನುವಂಥ ಪರಿಸ್ಥಿತಿ. ಹೀಗಿದ್ದರೂ ಬೌದ್ಧಿಕವಾಗಿ ಹಿಂದುಳಿದಿರಲಿಲ್ಲ.. ಅಜ್ಜಿ ಆಗಿನ ಕಾಲದಲ್ಲೇ ಇಂಗ್ಲೀಷ್ ಕಲಿತಿದ್ದರು. ಹೀಗಿದ್ದಂಥ ಕುಟುಂಬದ ಹಿನ್ನೆಲೆಯಲ್ಲಿ ನನ್ನ ತಂದೆ ಬೆಳೆದಿದ್ದು.
ನನ್ನ ತಂದೆ ಓದಿದ್ದು ಮೆಟ್ರಿಕ್ಯುಲೇಷನ್. ಆದರೆ ಅವರ ಜ್ಞಾನ ಭಂಡಾರ, ಓದಿನ ಪರಿಧಿಯನ್ನು ಮೀರಿದ್ದಾಗಿತ್ತು. ಹಲವು ಭಾಷೆಗಳನ್ನು ಸ್ವತಃ ಕಲಿತಿದ್ದರು. ಭಾಷೆಗಳ ಬಗ್ಗೆ ವಿಪರೀತ ಮೋಹ. ನನ್ನ ಮಾತೃಭಾಷೆ ಕೊಂಕಣಿ. ಇದರೊಂದಿಗೆ ಕನ್ನಡ, ಮರಾಠಿ, ಹಿಂದಿ, ಸಂಸ್ಕೃತ, ಉರ್ದು, ಬಂಗಾಳಿಯನ್ನು ಎಷ್ಟು ಸೊಗಸಾಗಿ ಮಾತನಾಡುತ್ತಿದ್ದರು! ಇಂಗ್ಲೀಷ್ ಭಾಷೆ ಮೇಲಿನ ಅವರ ಪ್ರಭುತ್ವ ಅಚ್ಚರಿ ಹುಟ್ಟಿಸುವಂಥದ್ದು. ಅವರಿಗೆ ಪುಸ್ತಕಗಳೆಂದರೆ ತುಂಬಾ ಹುಚ್ಚು. ಓದಲು ಕುಳಿತರೆಂದರೆ ಲೋಕವನ್ನೇ ಮರೆತುಬಿಡುತ್ತಿದ್ದರು. ಬರುವ ಸೀಮಿತ ಆದಾಯದಲ್ಲೇ ಪುಸ್ತಕಗಳ ಮೇಲೆ ಸಾಕಷ್ಟು ಖರ್ಚು ಮಾಡುತ್ತಿದ್ದರು. ಜೇಬಿನಲ್ಲಿ ಹಣ ಇದ್ದರೆ ಸಾಕು ಪುಸ್ತಕ ಕೊಂಡು ಓದಲು ಕುಳಿತುಬಿಡುತ್ತಿದ್ದರು.
ಅಪ್ಪನ ಬಳುವಳಿ ಓದು
ಸಾಮಾನ್ಯವಾಗಿ ಅಪ್ಪಂದಿರು ಮಕ್ಕಳಿಗೆ ತಿಂಡಿ ತಿಂದೆಯಾ, ಎಲ್ಲಿಗೆ ಹೋಗುತ್ತೀಯ, ಏನು ಮಾಡುತ್ತಿದ್ದೀಯ, ಎಂದು ಪ್ರಶ್ನಿಸುತ್ತಾರೆ. ಆದರೆ ನನ್ನ ಅಪ್ಪ, ಇವತ್ತು ಏನು ಹೊಸತು ಓದಿದೆ ಎಂದೇ ಮಾತು ಆರಂಭಿಸುತ್ತಿದ್ದದ್ದು. ಸಮಯ ಹಾಳುಮಾಡಬೇಡ ಎನ್ನುತ್ತಿದ್ದರು. ನಮ್ಮೆಲ್ಲರಿಗೂ ಚಿಕ್ಕ ವಯಸ್ಸಿನಿಂದಲೇ ಓದು ಎನ್ನುವುದು ಉಸಿರಿನಂತೆಯೇ ಬೆರೆತುಹೋಗಲು ಅಪ್ಪನೇ ಕಾರಣ.
ಓದಲು ಅವರಿಗೆ ಇಂಥ ವಿಷಯಗಳೇ ಬೇಕೆಂದೇನಿರಲಿಲ್ಲ. ಇಂಗ್ಲೀಷ್ ಸಾಹಿತ್ಯ, ಇತಿಹಾಸ, ತತ್ವಜ್ಞಾನ ಹೀಗೆ ಹುಟ್ಟಿಸುವ ಯಾವುದಾದರೂ ಸರಿ. ಓದಲೇಬೇಕು ಎನ್ನುತ್ತಿದ್ದವರು. ಅವರು ಓದುವುದರೊಂದಿಗೆ ನಮ್ಮಿಂದಲೂ ಓದಿಸುತ್ತಿದ್ದರು. ಇದೇ ಅವರು ನಮಗೆ ಕೊಟ್ಟ ಬಹು ದೊಡ್ಡ ಆಸ್ತಿ.
ಆಗಲೇ ನಮಗೆ ಇಂಗ್ಲೀಷ್ ಕ್ಲಾಸಿಕ್‍ಗಳನ್ನು ಓದಿಸಿದ್ದರು. ಶೇಕ್ಸ್‍ಪಿಯರ್‍ನ ನಾಟಕವಲ್ಲದೇ ಕಥೆ, ಪ್ರಬಂಧಗಳನ್ನು ಓದಲು ಕೊಡುತ್ತಿದ್ದರು. ಟಾಲ್‍ಸ್ಟಾಯ್, ಹ್ಯೂಗೊ, ಆಸ್ಕರ್ ವೈಲ್ಡ್, ಜಾರ್ಜ್ ಆರ್ವೆಲ್, ಹೆಮಿಂಗ್ ವೇ ಇಂಥ ದೊಡ್ಡ ಸಾಹಿತಿಗಳನ್ನು ಆಗಲೇ ನಮಗೆಲ್ಲಾ ಪರಿಚಯಿಸಿದ್ದರು, ನನ್ನ ಬಾಬಾ. ಇದರೊಂದಿಗೆ ಇಂಗ್ಲೀಷ್‍ನಲ್ಲಿ ಆಯಾ ಕಾಲಕ್ಕೆ ಬರುವ ದೊಡ್ಡ ಲೇಖಕರ ಪುಸ್ತಕಗಳನ್ನು ಮನೆಗೆ ತರುತ್ತಿದ್ದರು. ಹಲವು ನಿಘಂಟುಗಳನ್ನು ಇಟ್ಟುಕೊಂಡಿದ್ದರು. ಕಿಟೆಲ್ ನಿಘಂಟಿನ ಮೊದಲ ಆವೃತ್ತಿ ನಮ್ಮ ಮನೆಯಲ್ಲಿದೆ. ಎಲ್ಲ ನಿಘಂಟುಗಳ ಬೇರೆ ಬೇರೆ ಆವೃತ್ತಿಗಳು ನಮ್ಮ ಮನೆಯಲ್ಲಿದ್ದವು. ಓದು ಎನ್ನುವುದು ಈ ಪರಿಯಲ್ಲಿ ನಮ್ಮನ್ನು ಆವರಿಸಲು ಅವರೇ ಕಾರಣ.
ಕೆಲವೊಮ್ಮೆ ಗೋಕರ್ಣ ಬೀಚಿನ ಬಳಿ ಮಕ್ಕಳೆಲ್ಲರನ್ನೂ ಕರೆದುಕೊಂದು ಹೋಗುತ್ತಿದ್ದರು. ನಮ್ಮನ್ನು ಆಡಲು ಬಿಟ್ಟು, ಅಲ್ಲಿ ಗೌರೀಶ ಕಾಯ್ಕಿಣಿ ಅವರೊಂದಿಗೆ ಮಾತನಾಡುತ್ತಾ ಕುಳಿತುಕೊಂಡರೆ ಅವರಿಗೆ ಸಂಜೆ ಸರಿಯುತ್ತಿದ್ದುದೂ ತಿಳಿಯುತ್ತಿರಲಿಲ್ಲ. ಆಡಿ ಆಡಿ ಸಾಕಾಗಿ ನಾವು ನಿದ್ದೆಗೆ ಜಾರುವ ಸಮಯ ಬಂದಾಗಷ್ಟೇ ಎದ್ದು ಹೋಗುತ್ತಿದ್ದದ್ದು. ಹೀಗಿತ್ತು ಅವರ ತಲ್ಲೀನತೆ.
ನೌಕರಿಯಲ್ಲೂ ಅಷ್ಟೆ. ತಮ್ಮ ವಿದ್ವತ್ತಿನಿಂದಲೇ ಹೆಸರು ಮಾಡಿದ್ದರು. ಬೇರೆ ಬೇರೆ ವಿಷಯಗಳನ್ನು ಚರ್ಚಿಸುವುದು, ವರ್ಗಾವಣೆ , ದೂರು, ನಿವೃತ್ತಿ, ಏನೇ ಇರಲಿ, ಅಚ್ಚುಕಟ್ಟಾಗಿ ಅರ್ಜಿ ಬರೆಯುವ ರೀತಿಯನ್ನು ಸಿಬ್ಬಂದಿಯವರಿಗೆ ಇವರೇ ಹೇಳಿಕೊಡುತ್ತಿದ್ದರಂತೆ!
ಸಮಾನತೆಯ ಸಾರಿದರು
ಗದಗದಲ್ಲಿ ಆರ್ಯ ಸಮಾಜದ ಸಂಸ್ಥಾಪಕರಲ್ಲೊಬ್ಬರಾಗಿದ್ದರು ಅಪ್ಪ. ಅವರು ಜಾತಿ,ಪಂಥ, ಧರ್ಮಗಳಲ್ಲಿ ಎಂದೂ ವಿಶ್ವಾಸವಿಟ್ಟವರಲ್ಲ. ಮೂರ್ತಿ ಪೂಜೆಯಲ್ಲೂ ನಂಬಿಕೆಯಿರಲಿಲ್ಲ. ಸಮಾಜಮುಖಿ ವಿಚಾರಧಾರೆ ಅವರದ್ದು. ಆಗಿನ ಕಾಲದಲ್ಲೇ ಅನೇಕರ ಅಂತರಜಾತಿ ಮದುವೆ ಮಾಡಿದ್ದರು. ಈ ಉಮೇದು ಎಲ್ಲದರಲ್ಲೂ ಇತ್ತು. ಸಂಪ್ರದಾಯದಿಂದ ಹೊರಗೆ ಬಂದು, ನಮಗೆಲ್ಲಾ ಭಿನ್ನವಾದ ಹೆಸರಿಟ್ಟಿದ್ದರು. ಈ ಹೆಸರುಗಳು ಎಂಭತ್ತು ವರ್ಷಗಳ ಹಿಂದೆ ಯಾರೂ ಊಹಿಸಲೂ ಸಾಧ್ಯವಿರಲಿಲ್ಲ. ಆಅರೆ ಅವರ ವಿಧ್ವತ್ತಿಗೆ ಬೆಲೆ ಇತ್ತು. ಯಾರೂ ಅವರನ್ನು ಟೀಕೆ ಮಾಡುತ್ತಿರಲಿಲ್ಲ. ಸಮಾಜಕ್ಕೆ ಅವರ ಕೆಲಸ ಬಹಳ ಮುಟ್ಟಿದೆ. ಹೀಗಿದ್ದಾಗ ಅವರೊಂದಿಗೇ ಇರುವ ಮಕ್ಕಳಿಗೆ ಅವರ ಪ್ರಭಾವ ಆಗದೇ ಇರಲು ಸಾಧ್ಯವೇ?
ತಂದೆ ಜನಿವಾರ ಹಾಕುತ್ತಿರಲಿಲ್ಲ. ಗಂಡುಮಕ್ಕಳಂತೆ, ಹೆಣ್ಣು ಮಕ್ಕಳಿಗೆ ಸಹ ಯಜ್ಞೋಪವಿತ್ರ ಹಾಕಬೇಕು, ಉಪನಯನ ಮಾಡಬೇಕು ಎಂದು ಹೊರಟಿದ್ದರು; ಅಷ್ಟು ಧೈರ್ಯಶಾಲಿ. ಹಿರಿಯರಿಂದ ತುಂಬಾ ವಿರೋಧ ವ್ಯಕ್ತವಾದ ಕಾರಣ ಪ್ರಯತ್ನವನ್ನು ನಿಲ್ಲಿಸಿದರು. ಸಮಾನತೆಯನ್ನು ಆ ಕಾಲದಲ್ಲೇ ಎತ್ತಿ ಹಿಡಿದಿದ್ದವರು ನನ್ನ ತಂದೆ.
ಅವರ ಆಲೋಚನೆಗಳೂ ಅಷ್ಟೆ; ವಿಶಾಲ ಮನೋಭಾವದವರು. ಎಂದಿಗೂ ಹೆಣ್ಣು, ಗಂಡು ಎಂಬ ಭೇದ ನಮ್ಮನ್ನು ಸೋಕದಂಟೆ ಬೆಳೆಸಿದರು. ನಾವು ಮೂರು ಹೆಣ್ಣುಮಕ್ಕಳು, ಒಬ್ಬ ತಮ್ಮ. ಆದರೆ ನಾವು ಬೆಳೆದ ರೀತಿಯಲ್ಲಿ ಒಂದಿಷ್ಟೂ ವ್ಯತ್ಯಾಸವಿರಲಿಲ್ಲ. ಎಲ್ಲರಿಗೂ ಒಂದೇ ರೀತಿ ಶಿಕ್ಷಣ ಕೊಡಿಸಿದ್ದರು. ಹಾಗೆ ನಮ್ಮನ್ನು ಸ್ವತಂತ್ರವಾಗಿ ಬೆಳೆಸಿದರು. ನಮಗೆ ಕೊಟ್ಟ ಸ್ವಾತಂತ್ರ್ಯ ಬಹುಶಃ ಯಾವ ತಂದೆಯೂ ಮಕ್ಕಳಿಗೆ ಕೊಟ್ಟಿರಲು ಸಾಧ್ಯವಿಲ್ಲ.
ಅವರಿಗೆ ದೇವರಲ್ಲಿ ನಂಬಿಕೆಯಿರಲಿಲ್ಲ. ಆದರೆ ಪ್ರತಿದಿನ ಭಗವದ್ಗೀತೆ, ಉಪನಿಷತ್, ಭಾಗವತ ಓದುತ್ತಿದ್ದರು. ಇಷ್ಟ ಇರುವವರಿಗೆ ಅನುವಾದ ಮಾಡಿ ಹೇಳುತ್ತಿದರು. ಅವರ ಸಂಸ್ಕೃತ ಪಾಂಡಿತ್ಯವೇ ನಮ್ಮಲ್ಲೂ ಮುಂದುವರೆದಿದ್ದು. ಅಷ್ಟು ಓದಿಕೊಂಡಿದ್ದ ವರ ವಿಚಾರಧಾರೆಯೂ ಹರಿತವಗಿತ್ತು. ನಾವೆಲ್ಲಾ ಚಿಕ್ಕವರಿದ್ದಾಗ, ಆಗಾಗ್ಗೆ ಕ್ವಾಟ್ರ್ರಸ್‍ನಲ್ಲಿನ ನಮ್ಮ ಮನೆಗೆ ಮಧ್ಯೆ ರಾತ್ರಿ ಒಂದಷ್ಟು ಸ್ವಾತಂತ್ರ್ಯ ಯೋಧರು ಬರುತ್ತಿದ್ದರು. ಅಮ್ಮ ಎದ್ದು ಅಡುಗೆ ಮಾಡುತ್ತಿದ್ದ ನೆನಪು. ಅವರು ಊಟ ಮಾಡಿಕೊಂಡು ಹೋಗುತ್ತಿದ್ದರು. ಈ ವಿಷಯ ನಮ್ಗೆ ಸ್ಪಷ್ಟವಾಗಿರಲೇ ಇಲ್ಲ. ಆದರೆ ಸ್ವಾತಂತ್ಯ್ರ ಬಂದ ಎಷ್ಟೋ ವರ್ಷಗಳ ನಂತರ ನಮಗೆ ತಿಳಿದಿದ್ದು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭೂಗತಯೋಧರಿಗೆ ನಮ್ಮ ತಂದೆ ಸಹಾಯ ಮಾಡುತ್ತಿದ್ದರು ಎಂದು. ಇದೇನಾದರೂ ಬ್ರಿಟಿಷ್ ಸರ್ಕಾರಕ್ಕೆ ತಿಳಿದಿದ್ದರೆ ನಾವೆಲ್ಲಾ ಬೀದಿಗಿಳಿಯಬೇಕಿತ್ತು. ಆದರೂ ಅಂಜದೇ ಹೋರಾಟಗಾರರಿಗೆ ಸಹಾಯ ಮಾಡುತ್ತಿದ್ದರು ಅಪ್ಪ.
ಸ್ವಾತಂತ್ರ್ಯದ ರುಚಿಉಣಿಸಿದರು
ಈಗಿನವರು ಪರೀಕ್ಷಾದೃಷ್ಟಿಯಿಂದ ಮಕ್ಕಳಿಗೆ ಪಾಠ ಕಲಿಸುತ್ತಾರೆ. ಆದರೆ ನನ್ನ ತಂದೆ ಬದುಕಿನ ದೃಷ್ಟಿಯಿಂದ ಕಲಿಸಿದವರು. ತುಂಬಾ ಉದಾರಿ, ಕಾಸಿದ್ದರೆ ಪುಸ್ತಕ ಖರೀದಿಸಿ, ಬಂದವರಿಗೂ ಓದಿ ಎಂದು ಕೊಡುತ್ತಿದ್ದರು. ನನಗೂ ಅಷ್ಟೆ. ನನ್ನ ಬದುಕಿಗೆ ಸ್ವಾತಂತ್ರ್ಯ ಕೊಟ್ಟು, ‘ನಿನ್ನಿಷ್ಟದ ನೌಕರಿ ಮಾಡು, ಇಷ್ಟಪಟ್ಟವರನ್ನೇ ಮದುವೆ ಆಗು’ ಎಂದಿದ್ದರು. ಅವರಷ್ಟು ಉದಾರ ಮನಸ್ಸಿನ ತಂದೆ ಅಪರೂಪ.
ಬೌದ್ಧಿಕವಾಗಿಯಷ್ಟೆ ಅಲ್ಲ, ದೈಹಿಕವಗಿಯೂ ಅಪ್ಪ ಕಟ್ಟುನಿಟ್ಟು. ನಮಗೆಲ್ಲಾ ಈಜಲು ಕಲಿಸಿದ್ದು ಅವರೇ. ಹಿರೇಕೆರೂರು ಬಳಿ ನಮ್ಮನ್ನು ಕರೆದುಕೊಂಡು ಹೋಗಿ ಈಜಿಸುತ್ತಿದ್ದರು. ಅವರು 90 ವರ್ಷದವರಾಗಿದ್ದಗಲೂ ನಡೆದೇ ಹೋಗುತ್ತಿದ್ದರು. ಪ್ರಾಣಾಯಾಮ, ಯೋಗಾಸನ ಅವರ ನಿತ್ಯ ಅಭ್ಯಾಸ. ಮಕ್ಕಳು, ಮೊಮ್ಮಕ್ಕಳು ಅವರಿಂದ ಕಲಿತಿದ್ದರು. ನಿವೃತ್ತಿಯ ನಂತರವೂ ಸುಮ್ಮನೆ ಕುಳಿತವರಲ್ಲ. ಅಕ್ಕಪಕ್ಕದ ಮನೆ ಮಕ್ಕಳು ಬಂದರೂ ಅವರಿಗೆ ನಿಘಂಟು ನೋಡಲು ಕಲಿಸುವುದು, ಶಬ್ದಗಳನ್ನು, ಭಾಷೆಯನ್ನು ಕಲಿಸುತ್ತಿದ್ದರು.
ಅವರು ಬಂಗಾಳಿ ಕಲಿತಿದ್ದು 72ನೇ ವಯಸ್ಸಿಗೆ. ನನ್ನ ಸೋದರ ಪ್ರಕಾಶ ಬುರ್ಡೆ ಮುಂಬೈನಲ್ಲಿದ್ದ. ಅಲ್ಲಿಗೆ ಇವರು ಹೋಗಿದ್ದಾಗ, ಪಕ್ಕದಲ್ಲಿ ಬಂಗಾಳೀ ಭಾಷೆ ಕಲಿಸುವ ತರಗತಿ ಇದೆ! ಎಂಬುದನ್ನು ತಿಳಿದುಕೊಂಡು ಅಲ್ಲಿಗೆ ಸೇರಿಕೊಂಡು ಕಲಿತರು. ಅವರು ಇಲ್ಲಿಗೆ ವiರಳಿದ ನಂತರ, ಮೊಮ್ಮಗಳು, ‘ತಾತ! ಬಂಗಾಳಿ ತರಗತಿಯಲ್ಲಿ ನೀನೇ ಮೊದಲು ಬಂದಿದ್ದೀಯ’ ಎಂದು ಶುಭ ಕೋರಿ ಟೆಲಿಗ್ರಾಂ ಕಳಿಸಿದ್ದಳು. ಇದು ಅಪ್ಪನ ಆಸಕ್ತಿಗೆ ಒಂದು ಉದಾಹರಣೆಯಷ್ಟೆ.
ಮನೆಯಲ್ಲಿ ಖಾಲಿಹಾಳೆ ಕಂಡರೆ ಸಾಕು, ಕ್ಯಾಲೆಂಡರ್ ಹಿಂದಿನ ಹಾಳೆಯನ್ನೂ ಬಿಡುತ್ತಿರಲಿಲ್ಲ. ಅದರಲ್ಲೇ ಅಕ್ಷರಗಳನ್ನು ಬರೆದು ಕಲಿಯುತ್ತಿದ್ದರು. ಅವರ ಅಕ್ಷರಗಳೂ ತುಂಬಾ ಮುದ್ದಾಗಿ ಇರುತ್ತಿದ್ದವು. ದೇವನಾಗರಿ, ಕನ್ನಡ, ಇಂಗ್ಲೀಷ್ ಅಕ್ಷರಗಳನ್ನು ಬರೆಯುತ್ತಾ ಕೂರುತ್ತಿದ್ದರು. ಓದುತ್ತಲೇ ಇರುತ್ತಿದ್ದರು ಎಂಬ ಮಾತ್ರಕ್ಕೆ ತೀರಾ ಗಂಭೀರವಾಗಿದ್ದರು ಎಂದೇನಿಲ್ಲ. ಅವರಲ್ಲಿ ಹಾಸ್ಯಪ್ರಜ್ಞೆಯೂ ಚೆನ್ನಾಗಿತ್ತು. ತುಂಬಾ ತಮಾಷೆ ಮಾಡುತ್ತಿದ್ದರು. ಹಾಸ್ಯದ ಪುಟ್ಟ ಕಥೆಗಳನ್ನೂ ಬರೆದಿದ್ದರು.
ನನ್ನಲ್ಲಿ ಸಂಸ್ಕೃತ ಹಾಗೂ ಇತಿಹಾಸದಲ್ಲಿ ವಿಶೇಷ ಒಲವು ಬೆಳೆಯಲು ಅಪ್ಪನ ವಿಚಾರಗಳೇ ನೆಲೆಗಟ್ಟು. ಅವರನ್ನು ನೋಡುತ್ತಲೇ ಬೆಳೆದವರಲ್ಲವೇ ನಾವು?
ನನ್ನ ಪಿಹೆಚ್‍ಡಿ ಸಂಶೋಧನೆಯನ್ನು ತಿದ್ದಿಕೊಟ್ಟವರು ನನ್ನ ತಂದೆಯೇ! ಅಷ್ಟು ಓದಿಕೊಂಡವರೇನೂ ಅಲ್ಲದಿದ್ದರೂ ಅವರ ಜ್ಞಾನದ ಮುಂದೆ ನನ್ನದು ಏನೂ ಆಗಿರಲಿಲ್ಲ. ಇಂಗ್ಲೀಷ್ ಭಾಷೆ ಮೇಲೆ ಪ್ರಭುತ್ವ ಅಷ್ಟಿತ್ತು. ಪಿಹೆಚ್‍ಡಿಗೆ ಮುಖ್ಯವಾಗಿ ಸಂಸ್ಕೃತಕಾವ್ಯಗಳನ್ನು, ಶಾಸ್ತ್ರಗಳನ್ನು, ಕನ್ನಡ ಶಾಸನಗಳನ್ನು ಬಳಸಿದ್ದೆ. ಅವುಗಳ ಅನುವಾದಕ್ಕೆ ಅವರೇ ಸಹಾಯ ಮಾಡಿದ್ದು. ಈಗಂತೂ ಓದಿಲ್ಲದೇ ನನಗಂತೂ ಒಂದು ದಿನವೂ ಕಳೆಯಲು ಸಾಧ್ಯವಿಲ್ಲ. ಇದು ನನ್ನ ತಂದೆಯ ಬಳುವಳಿ.
ಸರಳ ಜೀವಿ
ಮಕ್ಕಳೆಂದರೆ ಅಪ್ಪನಿಗೆ ಬಲು ಪ್ರೀತಿ. ಅಮ್ಮನೂ ಕುಶಲ ಕಲೆಯಲ್ಲಿ ಮುಂದಿದ್ದವರು. ಅವರೂ ಇಂಗ್ಲೀಷ್ ಓದುತ್ತಿದ್ದರು. ಒಂಭತ್ತು ಗಜ ಸೀರೆ ಉಟ್ಟುಕೊಂಡು ಬ್ಯಾಡ್ಮಿಂಟನ್ ಆಡುತ್ತಿದ್ದರು. ಈಜುತ್ತಿದ್ದರು. ಅಪ್ಪನೂ ಒಂದು ದಿನವೂ ನಮ್ಮ ಮೇಲೆ ರೇಗಿದ್ದಾಗಲಿ ಇಲ್ಲವೇ ಇಲ್ಲ. ಒಳ್ಳೆ ದೃಢಕಾಯರು ಅವರು. 96 ವರ್ಷ ಬದುಕಿದ್ದರು. ನೇತ್ರದಾನ ಕೂಡ ಮಾಡಿದ್ದರು. ಕೊನೆಯ ವರೆಗೂ ಓದುತ್ತಲೇ ಇದ್ದವರು.
ಆದರೆ ಇಂದಿಗೂ ನನ್ನ ತಂದೆ ಬಗ್ಗೆ ಕಾಡುವ ಒಂದು ಬೇಸರ ಎಂದರೆ, ಅವರ ಉಪಯೋಗ ನಾಲ್ಕು ಮಂದಿಗೆ ಆಗಲಿಲ್ಲ ಎಂಬುದು. ಏಕೆಂದರೆ ಅವರು ಓದಿ ಸಂತೋಷ ಪಡೆಯುತ್ತಿದ್ದರು. ಆದರೆ ಕೂತು ಬರೆಯುವ ರೂಢಿ ಅವರಿಗೆ ಬರಲೇ ಇಲ್ಲ. ಬರೆಯುವ ಶಿಸ್ತು, ತಾಳ್ಮೆ ಅವರಿಗೆ ಬರಲಿಲ್ಲ. ಹಾಗಿದ್ದಿದ್ದರೆ ದೊಡ್ಡ ಲೇಖಕ ಆಗುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ಆದರೆ ಹಾಗಾಗಲಿಲ್ಲ.
ಅವರ ಸಾವಿನ ಕುರಿತು ಹೇಳಲೇಬೇಕು. ಅವರಿಗೆ ವ್ರತ, ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ನಮ್ಮ ಮನೆಯಲ್ಲಿ ದೇವರ ಚಿತ್ರ, ದೇವರ ಕೋಣೆಯೂ ಇರಲಿಲ್ಲ. ಅವರು ತೀರಿ ಹೋದದ್ದು ವೈಕುಂಠ ಏಕಾದಶಿ ದಿನ! ಆದಿನ ಶತಾಯುಷಿ ಒಬ್ಬ ತೀರಿಕೊಂಡಿದ್ದಾರೆ! ಎಂದು ತಂಡತಂಡವಾಗಿ ಜನ ಬಂದು ಹಾರ ಹಾಕಿ ನಮಸ್ಕರಿಸಿ ಹೋದರು. ಇದನ್ನು ಕಂಡ ನಮಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಎಂಥ ವಿಪರ್ಯಾಸ ಅನ್ನಿಸಿತ್ತು.
ಅವರ ಘನ ವಿದ್ವತ್ತು, ವಿಚಾರ ಧಾರೆಗಳು ನಮ್ಮ ಬದುಕಲ್ಲಿ ಬೆರೆತು ನಮ್ಮನ್ನು ನಡೆಸಿದ ದಾರಿದೀಪ ಅಪ್ಪ! ಎಂದರೆ ಕಡಿಮೆಯಾದೀತು!