ಫಾದರ್ ಥಾಮಸ್ ಸ್ಟೀವನ್ಸ್ ಮತ್ತು ಅವನ ಕ್ರಿಸ್ತಪುರಾಣ (ಕ್ರಿ ಶಕ೧೫೪೯-೧೬೧೯ )

 

ಇಂಗ್ಲಂಡಿನಿಂದ ಭಾರತಕ್ಕೆ ಬಂದ ಮಿಶನರಿಗಳಲ್ಲಿ ಮೊದಲಿಗನಾದ ಫಾದರ್ ಥಾಮಸ್  ಸ್ಟೀವನ್ಸ್  ರೋಮನ ಕ್ಯಾಥೊಲಿಕ್ ಧರ್ಮದವನು. ಅವನು ತನ್ನ ೪೦ ವರ್ಷಗಳ  ಗೋವಾ ಮತ್ತು ಸಾಲಸೆಟ್ಟಿನಲ್ಲಿಯ ವಾಸ್ತವ್ಯದಲ್ಲಿ ಅನೇಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿ, ಕ್ರಿಸ್ತನ ಸಂದೇಶವನ್ನು ಪ್ರಚಾರ ಮಾಡಿದವನು. ಆದರೆ ಅವನನ್ನು ಗೋವಾದವರು ನೆನೆಸುವದು ಆವನ ಮೊಟ್ಟ ಮೊದಲ ಕೊಂಕಣಿ ವ್ಯಾಕರಣಕ್ಕಾಗಿ. ಪ್ರಶ್ನೋತ್ತರ ರೂಪದ ಬೋಧನೆಗಾಗಿ ಹಾಗೂ ಕ್ರಿಸ್ತನ ಜೀವನ ಮತ್ತು ಸಂದೇಶವನ್ನು ಸಾರುವ  ಅಲ್ಲಿಯ ಆಗಿನ  ಜನಸಾಮಾನ್ಯರಿಗೆ  ಅರ್ಥವಾಗುವ ಕೊಂಕಣಿ ಭಾಷೆಯ ’ಓವ” , ಅಂದರೆ ಎರಡು ಸಾಲಿನ ಪದ್ಯರೂಪದಲ್ಲಿ ಬರೆದ ಮೇರು ಕೃತಿ “ಕ್ರಿಸ್ತಪುರಾಣ”ಕ್ಕಾಗಿ.

ಥಾಮಸ್ ಸ್ಟೀವನ್ಸ್ ಕ್ರಿಸ್ತ ಶಕ ೧೫೪೯ ರಲ್ಲಿ ಇಂಗ್ಲಂಡಿನ ವಿಲ್ಟಶಾಯರಿನ ಬುಷ್ಟನ್ ಎಂಬ ಊರಲ್ಲಿ ಹುಟ್ಟಿದ. ಅವನ ತಂದೆ ಒಬ್ಬ ಶ್ರೀಮಂತ ವರ್ತಕನಾಗಿದ್ದು, ನಂತರ ಲಂಡನ್ನಿಗೆ ಸ್ಥಳಾಂತರಿಸಿದನು. ಥಾಮಸ್ ಚಿಕ್ಕ ವಯಸ್ಸಿನಲ್ಲಿ ಚರ್ಚನ್ನು ಪ್ರವೇಶಿಸಿ ಕ್ರಿಸ್ತನ ಸಂದೇಶವನ್ನು ನಾಲ್ಕೂದಿಕ್ಕಿನಲ್ಲಿ ಪ್ರಚಾರಮಾಡುವ ಹುಮ್ಮಸ್ಸು ಇಟ್ಟುಕೊಂಡಿದ್ದ.. ಆದರೆ ಅವನಿಗೆ ರಾಣಿ ಮೊದಲನೇ ಎಲಿಝಬೆಥ ಇಂಗ್ಲಂಡಿನಿಂದ ರೋಮ್ ಗೆ ಹೋಗಲು ವಲಸೆಗಾರರ ಕಾಯದೆಗಳು ಅಡ್ಡಿ ಬಂದರೂ, ಇವನದೇ ಕನಸನ್ನಿಟ್ಟಕೊಂಡ ಥಾಮಸ್ ಪೌಂಡ ಎಂಬ ಮಿತ್ರನೊಂದಿಗೆ ದೇಶ ದಾಟಲು ಪ್ರಯತ್ನಿಸಿದಾಗ, ಪೌಂಡನು ಸಿಕ್ಕಿ ಹಾಕಿಕೊಂಡು ೩೦ವರ್ಷ ಕಾರಾಗಾರಕ್ಕೆ ಅಟ್ಟಲ್ಪಟ್ಟನು. ಸ್ಟೀವನನು ಪಾರಾಗಿ ರೋಮ್ ನಲ್ಲಿ ದೇವತಾಶಾಸ್ತ್ರ, ಲ್ಯಾಟಿನ್, ಪೊರ್ತೂಗೀಸ್, ಸ್ಪಾನಿಶ್ ಭಾಷೆಗಳನ್ನು ಕಲಿತು ಅದಾಗಲೇ ರೂಪಗೊಂಡಿದ್ದ ’ಸೊಸಾಯಟಿ ಆಫ್ ಜೀಸಸ”  ಸಂಸ್ಥೆಯನ್ನು ಸೇರಿಕೊಂಡನು. ಅಂತಾರಾಷ್ಟ್ರೀಯ ಕಡಲ ವ್ಯಾಪಾರಕ್ಕೆ ಹೆಸರಾದ ಹಡಗಗಳು ಆಗ  ಪೊರ್ತುಗೀಸ್ ಮತ್ತು ಸ್ಪೆನ ನಿಂದಲೇ ಹೊರಡುತ್ತಿದ್ದು, ಲಿಸ್ಬನ್ ನಿಂದ ಏಪ್ರಿಲ್ ೧೫೭೯ಕ್ಕೆ ಹೊರಟ ಥಾಮಸ್ ಸ್ಟೀವನ್ಸ್ ಅದೇ ವರ್ಷ ಅಕ್ಟೊಬರಿನಲ್ಲಿ ಗೋವೆ ಸೇರಿದನು.


ಆವನು  ಇಂಗ್ಲಿಷ್ , ಲ್ಯಾಟಿನ್ ಮತ್ತು ಇತರ ಯೂರೊಪದ ಭಾಷೆಗಳಲ್ಲಿ ಪ್ರತಿಭಾನ್ವಿತ ಪಂಡಿತನಾಗಿದ್ದು, ಅನೇಕ ಕಾಗದ ಪತ್ರಗಳನ್ನು ಬರೆದಿರಬಹುದು, ಆದರೆ  ಕೇವಲ ಎರಡು, ಒಂದು ಇಂಗ್ಲಿಷಿನಲ್ಲಿ, ಮತ್ತೊಂದು  ಲ್ಯಾಟಿನ್ನಲ್ಲಿ ಸಹೋದರ ರಿಚಾರ್ಡನಿಗೆ ಬರೆದವು ಮಾತ್ರ ಸಿಕ್ಕಿವೆ. ಈ ಪ್ರದೇಶದ ಜನತೆ ಮತ್ತು ಅವರ ಭಾಷೆಯನ್ನು ತೀಕ್ಷ ಗಮನವಿಟ್ಟು ವೀಕ್ಷಣೆ ಮಾಡಿದ್ದರ ಬಗ್ಗೆ  ಮತ್ತು ಅವನ್ನು ಅಳವಡಿಸಿಕೊಂಡಿದ್ದನ್ನು ಈ ಪತ್ರಗಳು ಪ್ರತಿಬಿಂಬಿಸುತ್ತವೆ. “ ಇಲ್ಲಿ ಅನೇಕ ಭಾಷೆಗಳು ಪ್ರಚಲಿತವಿವೆ.ಅವರ ಉಚ್ಚಾರ ಒಪ್ಪತಕ್ಕದ್ದಾಗಿದೆ. ಅವರ ಭಾಷೆಯ ರಚನೆ ಗ್ರೀಕ ಮತ್ತು ಲ್ಯಾಟಿನ್ ಗೆ ಹತ್ತಿರ. ಇದರ ನುಡಿಗಟ್ಟು ಮತ್ತು ವಾಕ್ಯ ರಚನಾ ಕ್ರಮ ತುಂಬ ಅದ್ಭುತ.” ಹೀಗೆ ತಮ್ಮ ಪತ್ರಗಳಲ್ಲಿ ಬರೆದಿದ್ದಾನೆ. ಬಹುಶಃ ಭಾರತೀಯ ಮತ್ತು ಯುರೊಪೀಯನ್ ಭಾಷೆಗಳಲ್ಲಿದ್ದ  ಸಾಮ್ಯವನ್ನು ಗಮನಿಸಿದ್ದ ವಿದ್ವಾಂಸರಲ್ಲಿ ಇವನು ಮೊದಲಿಗ! ಅನ್ನಬಹುದು.

ಗೋವೆಯಲ್ಲಿ ಫಾದರ್ ಥಾಮಸ್ ಸ್ಟೀವನ್ಸ್ ನ  ಜೀವನ ತುಂಬ ಕಷ್ಟಕರವಾಗಿತ್ತು ಧಾರ್ಮಿಕ ಮತಾಂತರಕ್ಕೆ ಸ್ಥಳೀಯ ಜನರ ವಿರೋಧವಿತ್ತು. ಪೊರ್ತುಗಿಸ್ ಭಾಷೆ, ಸಂಪ್ರದಾಯಗಳು ಮತ್ತು ಹೆಸರುಗಳನ್ನು ಬಲವಂತವಾಗಿ ಸ್ಥಳೀಯರ ಮೇಲೆ ಹೇರಿದ್ದರು. ಆದರೆ ಕೆಲ  ಬೋಧಕರು ಸ್ಥಳೀಯ ಭಾಷೆ, ಸಂಪ್ರದಾಯಗಳನ್ನು ಮತ್ತು ಹಿಂದು ಧರ್ಮದಲ್ಲಿಯ ಜಟಿಲತೆಗಳನ್ನು ಕಷ್ಟಪಟ್ಟು ಕಲಿಯುವ ಪ್ರಯತ್ನವನ್ನು ನಡೆಸಿದ್ದರು. ಫಾದರ್ ಸ್ಟೀವನ್ಸ್ ಸ್ಥಳೀಯ ಸಮಾಜ ವ್ಯವಸ್ಥೆಯ ಗುಣ- ವಿಶೇಷವನ್ನು ಚೆನ್ನಾಗಿ ಮತ್ತು ಬಲು ಬೇಗ  ಅರಿತಿದ್ದ. ಅವನು ಕೊಂಕಣಿಯನ್ನು ಕಲಿತು , ವ್ಯಾಕರಣವನ್ನು  ಮೊದಲ ಬಾರಿಗೆ  ಯಶಸ್ವಿಯಾಗಿ ರಚಿಸಿದ. ಅಲ್ಲಿಯವರೆಗೆ ಸಾಮಾನ್ಯ ಜನರ ತಪ್ಪೊಪ್ಪಿಗೆಯನ್ನು ಯಾರೂ ಕೇಳಲು ಸಾಧ್ಯವಿರಲಿಲ್ಲ. (ಕ್ಯಾಥೊಲಿಕ್ ಸಮುದಾಯದಲ್ಲಿ ನಿಷ್ಟಾವಂತ ವ್ಯಕ್ತಿಯೊಬ್ಬ ತಾನು ಮಾಡಿದ ತಪ್ಪನ್ನು ಪಾದ್ರಿಯ  ಸಮಕ್ಷಮ ಒಪ್ಪಿಕೊಳ್ಳುವ ರೂಢಿ ಇದೆ.) ಹೀಗಾಗಿ ಅವರವರ ಭಾಷೆಯಲ್ಲಿ ತಪ್ಪೊಪ್ಪಿಗೆಯ ವಿಧಾನದಲ್ಲಿ, ಪಾದ್ರಿಗಳಿಗೆ ಸ್ಥಳೀಯ ಭಾಷೆ ಮತ್ತು ವ್ಯಾಕರಣ ಅರಿತು ಕೊಳ್ಳುವದು ಅವಶ್ಯವಿತ್ತು. ಇದರಿಂದ ಕೇವಲ ಜನರ ತಪ್ಪೊಪ್ಪಿಗೆ ಮಾತ್ರವಲ್ಲ, ಬೋಧಕರ ಮತ್ತು ಲೇಖಕರ ಸಹಾಯಕ್ಕೆ ಕೂಡ  ಈ ವ್ಯಾಕರಣ ತುಂಬ ಸಹಾಯವಾಯಿತು.

ಪ್ರಶ್ನೋತ್ತರ ರೂಪದಲ್ಲಿ ಅವನು ಬರೆದ ಕ್ರೈಸ್ತ ತತ್ವಗಳ ಬೋಧನೆ ( Catechism) ಕೂಡ ಆರಂಭಿಕರಿಗೆ ಬಹಳ ಉಪಯುಕ್ತವಾಯಿತು. ಆದರೆ ಕ್ರೈಸ್ತ ಧರ್ಮ ಮತ್ತು ತತ್ವಶಾಸ್ತ್ರವನ್ನು ಬರೆಯಲು ಅಥವಾ ಬೋಧಿಸಲು ಸ್ಥಳೀಯರಿಗೆ ಪರಿಚಿತವಿರುವ ಪುರಾಣದ ಪದಗಳ ಬಳಕೆ ಮಾಡಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ! ಎಂದು ಸ್ಟೀವನ್ಸ್ ಕಂಡುಕೊಂಡ..  ಇದರ ಪರಿಣಾಮವೇ” ಕ್ರಿಸ್ತಪುರಾಣ”ದ ಉಗಮ.

ಕ್ರಿಸ್ತ ಧರ್ಮದ ಪ್ರಚಾರಕ್ಕೆ ಅವನನ್ನು  ಪೊರ್ತುಗೀಸರ ವಶದಲ್ಲಿದ್ದ ಸಾಲಸೆಟ್ (ಸಾಷ್ಟಿ) ದ್ವೀಪಕ್ಕೆ ಕಳುಹಿಸಲಾಯಿತು. ಅಲ್ಲಿ ಸ್ಟೀವನ್ಸ ನು ತನ್ನ ದೀರ್ಘ ವಾಸದಲ್ಲಿ  ಸ್ಥಳೀಯ ಜನರನ್ನು ಕ್ರೈಸ್ತರನ್ನಾಗಿಸಿದನಂತೆ!   ಅದಷ್ಟೇ ಅಲ್ಲ, ಈ ಕಾಲದಲ್ಲಿ ಒಂದು ಉತ್ತಮ ಸಾಹಿತ್ಯದ ರಚನೆ ಕೂಡ ಆಯಿತು. ಅದರ ನಾವಿನ್ಯ, ಕಾವ್ಯ- ಗುಣ (lyrical)ಮತ್ತು ಜನಾಕರ್ಷಣೆಯನ್ನು ಕ್ರೈ ಸ್ತರಲ್ಲದವರೂ ಕೂಡ ಪ್ರಶಂಸಿಸಿದ್ದಾರೆ. ಆತನು ಆಗ  ಪ್ರಚಲಿತವಿದ್ದ ಪದಗಳನ್ನೇ ಉಪಯೋಗಿಸಿದ್ದಾನೆ. ಉದಾಹರಣೆಗೆ- ಸ್ವರ್ಗವೆಂಬುದು(heaven) ’ವೈಕುಂಠ”ವಾಯಿತು, ಸೈತಾನನು “ಭೂತ”ನಾದ, ಪಾದ್ರಿ ಯು “ಗುರು”ವಾದ , ನರಕ “ ’ಯಮಕೊಂಡ”ವಾಯಿತು. ಹೀಗೆ  ಇವೆಲ್ಲ ಪರಿಚಿತ ಶಬ್ದಗಳು ಓದುಗರ ಮನಸ್ಸಿಗೆ  ಹಿತವಾದವು. ಈಡಿ ಕೃತಿಯು ಪದ್ಯರೂಪದಲ್ಲಿದ್ದು,  ಕೊಂಕಣಿ  ಮತ್ತು ಮರಾಠಿಯಲ್ಲಿ ಆಗ  ಪ್ರಚಲಿತವಿದ್ದ ಎರಡು ಸಾಲಿನ ’ಓವಿ”ಗಳಲ್ಲಿದೆ .(stanzas) ಇವನ್ನು ಓದಲು ಮತ್ತು ನೆನಪಿಡಲು ಬಹು ಸುಲಭ ಮಾಡಿಬಿಟ್ಟ.

ಈ ಕೃತಿಯನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ, ಮೊದಲನೆ ಭಾಗ –  ಪೈಲೆ ಪುರಾಣ ಮತ್ತು ಎರಡನೇಯ ಭಾಗ –ದುಸರೆ ಪುರಾಣ. ಮೊದಲನೆಯ ಭಾಗದಲ್ಲಿ ೪೧೮೧ ಓವಿಗಳ ೩೬ ಅಧ್ಯಾಯಗಳು (ಕ್ಯಾಂಟೊ) ಗಳು, ಮತ್ತು ಎರಡನೇಯ ಭಾಗದಲ್ಲಿ  ೬೭೮೧ ಓವಿಗಳಿದ್ದ ೫೯ ಅಧ್ಯಾಯಗಳನ್ನು ಒಳಗೊಂಡಿದೆ. ಇದು ಆ ಪ್ರದೇಶದ ಸಮಕಾಲೀನ, ಆಡು ಭಾಷೆಯಾದ ಕೊಂಕಣಿಯಲ್ಲಿದೆ.

ಈ ಕೃತಿಯ  ವ್ಯಾಪಕ ಜನಪ್ರಿಯತೆಯ ಬಗ್ಗೆ ಹೇಳುವದಾದರೆ, ಅದರ ನಿತ್ಯ ಪಾರಾಯಣ  ಅಥವಾ ನಿತ್ಯ ಪಾಠವನ್ನು ಈಗಲೂ ಜನರು ಮಾಡುತ್ತಾರೆ. ಕ್ರಿಸ್ತ ಪುರಾಣದ ಹಿರಿಮೆಯೆಂದರೆ, ಪೊರ್ತುಗೀಸರ ಗೋವಾರಾಜ್ಯದಲ್ಲಿ,  ಸ್ಥಳಿಯ ಭಾಷೆಯಾದ   ಕೊಂಕಣಿಯಲ್ಲಿ  ಯೇಸುಕ್ರಿಸ್ತನಿಗೆ   ಸಂಬದಿಸಿದ ಮೊಟ್ಟಮೊದಲ ಮುದ್ರಿತವಾದ ಕೃತಿಯಾಗಿದೆ.