” ಪೆರುವಿನ ಪವಿತ್ರ ಕಣಿವೆಯಲ್ಲಿ” ( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ)

ಪೆರುವಿನ ಪವಿತ್ರ ಕಣಿವೆಯಲ್ಲಿ

( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ)

ನಯನ ಸಭಾಂಗಣ ಕನ್ನಡ ಭವನ

೧೩/೦೩/೨೦೦೪

ಸಾಯಂಕಾಲ ೫.೩೦

ಪ್ರಕಾಶಕರು- ನವಕರ್ನಾಟಕ ಪ್ರಕಾಶನ ಸಂಸ್ಥೆ                                                                   ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್

ಬೆಂಗಳೂರು

೨೦೦೪

ಈಗೊಂದು ವಾರದ ಹಿಂದೆ ನೇಮಿಚಂದ್ರ ಹೊನ್ನಾವರದ ಅಜ್ಞಾತವಾಸದಲ್ಲಿದ್ದ ನನ್ನನ್ನು ಅದು ಹೇಗೋ ಪತ್ತೆ ಹಚ್ಚಿ ಫೋನಿಸಿದರು. ” ಪೆರುವಿನ ಪ್ರವಾಸ ಕಥನ ಹೊರಗೆ ಬರ್ತಾ ಇದೆ, ನೀವೇ ಬಿಡುಗಡೆ ಮಾಡಬೇಕು! ಅಂತ ಫೋನ್ ಬಾಂಬ್ ಎಸೆದರು. ಖಂಡಾಂತರದಲ್ಲಿ ಹಾರಾಡ್ತಾ, ಆಂಡೀಜ್ ಪರ್ವತ ಶ್ರೇಣಿ , ಹತ್ತಿ, ಇಳಿದು, ಪೆರು ಕಣಿವೆ ಜಾಲಾಡಿ, ಅಮೇಝೋನದಲ್ಲಿ ತೇಲಿ ಬಂದ  ಈ ಮಿಂಚಿನ ಮಹಿಳೆ, ಅಮೇಝೋನ್ ಳೇ! ಹಿಂದೊಮ್ಮೆ ಸಾಗರದಂತಿದ್ದು ಈಗ ಹಳ್ಳದಂತೆ ಹರೀತಿರೋ ಶರಾವತಿ ಪಕ್ಕದ ಗುಡಿ ಗುಂಡಾರವನ್ನು ಸುತ್ತಿಕೊಂಡಿದ್ದವಳನ್ನು ಏನೇನೊ ಬೇಹುಗಾರಿಕೆಯಿಂದ ಪತ್ತೆ ಹಚ್ಚುವದರಲ್ಲಿ ಯಶಸ್ವಿ ಆದರು ಈ ನೇಮಿಚಂದ್ರ! ಅವರಿಗೆ ನಾನು ಹೆದರ್ತೀನಿ? ಅಸಾಧ್ಯವನ್ನು  ಸಾಧ್ಯವನ್ನಾಗಿಸುವ  ಸಲೀಸುತ ಮೈಗೂಡಿಸಿಕೊಂಡೀಕೆ. ಯಾಕೆ ಅವರಿಗೆ ಹೆದರ್ತೀನಿ ಅನ್ನೊದನ್ನ ಸಾಹಿತ್ಯದ ಮತ್ತು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹೇಳುವದು ಉಚಿತ.

Image result for Nemichandra

ಕೆಲವರ್ಷಗಳ ಹಿಂದೆ ಅವರ ಯೂರೋಯಾತ್ರೆಯ ಪ್ರವಾಸ ಕಥನ ’’ಒಂದು ಕನಸಿನ ಪಯಣ’’ ದ  ಬಿಡುಗಡೆ ಇತ್ತು. ಅದನ್ನು ಕಾಮತರೇ ಬಿಡುಗಡೆ ಮಾಡಬೇಕು ಅಂತ ಪಟ್ಟು ಹಿಡಿದ್ರು. ಕಾಮತರು ಇಂಥದಕ್ಕೆ ಒಪ್ಪುವ ಆಸಾಮಿ ಅಲ್ಲ ! ನೇಮಿಚಂದ್ರ ಮನೆಗೆ ಬಂದು , ಅವರ ಕೋಣೆಗೆ ನುಗ್ಗಿ, ” ನೋಡಿ ಸರ್! ನೀವು ಬಾರದೇ ಹೋದ್ರೆ, ನನಗೆ ಆ ಕಾರ್ಯಕ್ರಮವೇ ಬೇಡ ಅಂತ ಪಬ್ಲಿಶರ್ ಗೆ ಹೇಳಿಬಿಡ್ತೀನಿ! ಪುಸ್ತಕ ಬಿಡುಗಡೆನೂ ಬೇಡ , ಏನೂ ಬೇಡ ಅಂದ್ರು ಲೂಕ್ ಬಾಂಬ್. ಬರದೆ ಇದ್ರೆ ಸತ್ಯಾಗ್ರಹ ಹೂಡ್ತೀನಿ! ಈ ಕೋಣೆ ಮುಂದೆ ಅಂದ್ರು. ಮುಂದಿನ ಹೆಜ್ಜೆ ಸತ್ಯಾಗ್ರಹಕ್ಕೆ ತಯಾರಾಗ್ತಾರೆ ಅನಿಸಿಬಿಡ್ತು. ಆ ಬಡಪಾಯಿ, ಕಾಮತರು ಒಪ್ಪಿಕೊಂಡು ಬಿಟ್ರು! ಅವರು ಪಾಲ್ಗೊಂಡ  ಒಂದೇ ಒಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಸ್ಮರಣೀಯವಾದದ್ದನ್ನು ನೇಮಿಚಂದ್ರ ಹಾಗೂ ಕಾಮತರು ಬೇರೆ ಬೇರೆಯಾಗಿ ಒಂದೇ ಘಟನೆಯನ್ನು ಉಲ್ಲೇಖಿಸಿದ್ದಾರೆ. ಈಗ ಅವರ ಈ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದಿದ್ರೆ, ಹೊನ್ನಾವರಕ್ಕೆ ಬಂದು ದರದರ ಎಳ್ಕೊಂಡು ಗಾಡಿಯಲ್ಲಿ ಹಾಕಿಕೊಂಡು  ಬಂದ್ರೆ ಏನು ಗತಿ? ಅಂತ ಅವರು ಕೇಳಿದ ಕೂಡ್ಲೆ ಧ್ವನಿಯೇ ಏಳಲಿಲ್ಲ! ಒಪ್ಪಿಕೊಂಡು ಬಿಟ್ಟೆ!

ಕಾಮತರ – ನೇಮಿಚಂದ್ರರ ಪರಿಚಯ ಅಲ್ಪ ಕಾಲದ್ದು- ೫-೬ ವರ್ಷಗಳದ್ದು. ಆದರೆ ಕಾಮತರಿಂದ ತಾನು ಎಷ್ಟು ಪ್ರಭಾವಿತಳಾಗಿದ್ದೆ, ಎಂದು ಹೃದಯಸ್ಪರ್ಶಿ ಲೇಖವನ್ನು ಕಾಮತರ ಸಂಸ್ಮರಣ ಸಂಪುಟ, ’’ಕಮ್ಮಟಿಗ’’ದಲ್ಲಿ ಬರೆದಿದ್ದಾರೆ. ಕಹಿ ಇಲ್ಲದ ಸಿಹಿ ಮನಸ್ಸಿನ ವ್ಯಕ್ತಿ ಎಂದು ನೆನಪಿಸಿಕೊಂಡಿದ್ದಾರೆ. ಈ ಉತ್ತರ – ದಕ್ಷಿಣ ಅಮೇರಿಕೆಯ ಪ್ರವಾಸ ಮುಗಿಸಿಕೊಂಡು ಬಂದ ಮೇಲೆ ಕಾಮತರಿಗೆ ಹೇಳಿದ್ರು. ” ಸರ್, ಅಮೇರಿಕೆ ಬಗ್ಗೆಯೂ ಬರೆಯೋ ವಿಚಾರ ಇತ್ತು….. ಆದರೆ, ಹೋಗಿ ಬಂದ ಮೇಲೆ ನಾನು ಹೇಳೋ ಹೊಸದು ಏನೂ  ಉಳಿದಿಲ್ಲ. ೩೫ವರ್ಷಗಳ ಹಿಂದೆಯೇ ನಾನು ಏನೇನು ಬರೀಬೇಕು ಅಂತ ಇದ್ದದ್ದನ್ನೆಲ್ಲ ನೀವು ಬರೆದೇ ಬಿಟ್ಟಿದ್ದಿರಿ! ನಾನು ಪೆರು ಬಗ್ಗೆ ಬರೀತಿನಿ ಮಾಚ  ಪಿಚ್ಯು,  ಅಮೇಝೋನ್ ಬಗ್ಗೆ ಬರೀತಿನಿ” ಅಂತ ಕಾಮತರೊಂದಿಗಿನ ಕೊನೆಯ ಭೇಟಿಯಲ್ಲಿ ಹೇಳಿದ್ದರು.. ಈಗ ಆ ಪುಸ್ತಕವನ್ನು  ಕಾಮತರಿಗೆ ಅರ್ಪಣೆ ಮಾಡಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಲಲು ಕಾಮತರಿಲ್ಲವಲ್ಲ! ಅಂತ ನೋವನ್ನು ತೋಡಿಕೊಂಡೂ ಇದ್ದಾರೆ.

(ಎಡದಿಂದ ಬಲಕ್ಕೆ ನೇಮಿಚಂದ್ರ , ರಹಮತ್ ತರೀಕೆರೆ, ಹೇಮಲತಾ ಮಹಿಷಿ, ಜ್ಯೋತ್ಸ್ನಾ ಕಾಮತ್ ಮತ್ತು ಸಿ.ಆರ್ ಕೃಷ್ಣಮೂರ್ತಿ )

 ಕಾಮತರ ಕುರಿತ ನೇಮಿಚಂದ್ರರ ಪ್ರೀತಿ, ಗೌರವಗಳು ಮಿಗಿಲಾದವು. ಕಾಮತರನ್ನು ಸರಿಯಾಗಿ ಅರ್ಥೈಸಿಕೊಂಡ ವಿರಳರಲ್ಲಿ ಇವರು ಒಬ್ಬರು. ಇಬ್ಬರ ಸೃಜನಶೀಲತೆಯಲ್ಲೂ ತುಂಬ ಹೋಲಿಕೆ ಇದೆ. ಒಂದು  ಸಂದರ್ಭದಲ್ಲಿ ನೇಮಿಚಂದ್ರರನ್ನು, ’ಮಾನಸಪುತ್ರಿ’ ಎಂದು  ಕಾಮತರು ಕರೆದದ್ದೂ ಇದೆ. ಅವರಲ್ಲಿ ಸಾಮಾನ್ಯವಾಗಿದ್ದ ಕೆಲವು traits ಇದ್ದವು.

ಇಬ್ಬರೂ ದಣುವರಿಯದ ಪಯಣಿಗರು. ಕಂಡದ್ದನ್ನೆಲ್ಲ ಕಾದಿರಿಸುವ , ದೃಷ್ಟಿಸಿದ್ದನ್ನೆಲ್ಲ ದಾಖಲಿಸುವ ಪ್ರವೃತ್ತಿ ಇಬ್ಬರಲ್ಲೂ ಬಲವಾಗಿದೆ. ಅದು ನೋಟ್ಸ್ ರೂಪದಲ್ಲಿ ಇರಬಹುದು, ಕ್ಲಿಕ್ ಮಾಡ್ತಾ ಹೋಗಬೇಕು, ಕಂಡದ್ದು, ಕೇಳಿದ್ದು, ಮೂಡಿ ಬರಬೇಕು ಅನ್ನೊ ಛಲ! ವೈಯಕ್ತಿಕ ಸಾಹಸ, ಚಿಕಿತ್ಸಕ ಬುದ್ಧಿ, ಕುತೂಹಲ ದೃಷ್ಟಿಕೋನಗಳು ಎದ್ದು ಕಾಣುವಂತಹವು.

ಇಬ್ಬರಿಗೂ ಪ್ರವಾಸದ ಸೌಕರ್ಯಗಳು ಗೌಣ. ಏನನ್ನೊ ತಿಂದು, ಎಂಥವೊ ಬಟ್ಟೆ ಧರಿಸಿ, ಹೊರೆ ಹೊರೆ ಸಾಮಾನು ಹೊತ್ತು, ಗಂಟೆ ಗಂಟೆಗಳ ಪರವೆ ಇಲ್ಲದೇ ಸುತ್ತೋರು! ಎಷ್ಟೂ ಬೇಸರವಿಲ್ಲದೇ  ಅಪರಿಚಿತ ಪ್ರದೇಶದಲ್ಲಿ ಓಡಾಡಿಯಾರು! ಈ  wonderlust ಅಥವಾ ತಿರುಗಾಟದ ತೀಟೆ ಬಲವಾಗಿದ್ದವರೇ ಅಪೂರ್ವವಾದದ್ದನ್ನು ಸಾಧಿಸ್ತಾರೆ! ಇಬ್ಬರಿಗೂ ಪರಿಸರ ಪ್ರೇಮ, ದೇಶ ಪ್ರೇಮಗಳು ಜೋರಾಗಿವೆ.

ಇಲ್ಲಿಗೆ ಹೋಲಿಕೆ ಮುಗಿಯುತ್ತದೆ.ನೇಮಿಚಂದ್ರ, ಪ್ರವಾಸ ಕಥನಗಳನ್ನೆಲ್ಲ ಅಚ್ಚುಕಟ್ಟಾಗಿ ಬರೆದಿಟ್ಟು ದಾಖಲಿಸಿದ್ದಾರೆ. ಕಾಮತರು ಬಹಳಷ್ಟು ಕಂಡದ್ದನ್ನೆಲ್ಲ ಸ್ಮೃತಿಪಟಲದಲ್ಲಿ ದಾಖಲಿಸಿಕೊಂಡು ತಮ್ಮೊಂದಿಗೆ ಒಯ್ದು ಬಿಟ್ಟರು!

ಇನ್ನೊಂದು ನೇಮಿಚಂದ್ರರ trait  ,ಅವರಿಗೆ ನಿದ್ರೆ ಪ್ರಮಾಣ ತುಂಬ ಕಡಿಮೆ ಅತ ಕೇಳಿದ್ದೇನೆ. ಕ್ರೀಯಾಶೀಲ ವ್ಯಕ್ತಿ. ಈ ನಿದ್ರಾ ಸಮಯ ಉಳಿಸಿದ್ರೆ ಎಷ್ಟೆಲ್ಲ ಬರೆಯಬಹುದು. ಕಾಮತರು ನಿದ್ರಾ ದೇವಿಗೆ ಅನ್ಯಾಯ ಮಾಡ್ತಿರಲಿಲ್ಲ. ಹಾಸಿಗೆ , ದಿಂಬು , ಹೊದಿಕೆ ಒಂದೂ ಬೇಕಿಲ್ಲ, ಎಲ್ಲೆಂದರಲ್ಲಿ ಮಲಗಿ ನಿದ್ರಿಸಿ ವಿಶ್ರಾಂತಿ ಪಡೆದು ಮತ್ತೆ ಬೆಳಗಿನ ಜಾವ ತಿರುಗಾಟಕ್ಕೆ ರೆಡಿ.

ಈ ಪುಸ್ತಕ ನನಗೆ ಪ್ರಿಯವಾದದ್ದು ನೇಮಿಚಂದ್ರ ಅವರು ಸಾಹಿತ್ಯಿಕವಾಗಿ ಅಜ್ಞಾತವಾಗಿಯೇ ಉಳಿದಿದ್ದ ದಕ್ಷಿಣ ಅಮೇರಿಕ ಕುರಿತು ಬರೆದ ಮೊದಲ ಕನ್ನಡಿತಿ ಎಂದಿಷ್ಟೇ ಅಲ್ಲ ಅದಕ್ಕಾಗಿ ಅವರು ಮಾಡಿದ ಪ್ರವಾಸಪೂರ್ವ ಅಧ್ಯಯನ.  ಸ್ಪಾನಿಶ್ ಜನಾಂಗ ಅಲ್ಲಿಯ ಮೂಲ ನಿವಾಸಿಗಳ ಮೇಲೆ ನಡೆಸಿದ ಅತಿ ಕ್ರೂರ ದಬ್ಬಾಳಿಕೆ,  ಚರಿತ್ರೆಯ ವಿದ್ಯಾರ್ಥಿಯಾದ ನಾನು ಹಿಂದೆ  ಮಾಯಾದ ಅಮಾಯಕರ ಮೇಲಿನ ಅತ್ಯಾಚಾರಗಳನ್ನು ಓದಿ ಕಣ್ಣೀರು ಹಾಕಿದ್ದೆ. ಅದು ಸಾಹಿತ್ಯಿಕವಾಗಿಯೂ ಜನರಿಗೆ ತಲುಪುವಂತೆ ನೇಮಿಚಂದ್ರ ಶ್ರಮ  ವಹಿಸಿದ್ದಾರೆ. ಈ  ಪ್ರವಾಸ ಕಥನಕ್ಕೆ ಇತಿಹಾಸ, ಭೂಗೋಲ, ಜನಜೀವನದ ಆಯಾಮಗಳೂ ಸೇರಿಕೊಂಡ ಪಕ್ವ ಪಯಣದ ನಿರೂಪಣೆ, ಈ ಪೆರು ಪ್ರವಾಸ ಹೊಂದಿದೆ. ಜೊತೆಗೆ ಜ್ವಲಂತ ಸಮಸ್ಯೆಯಾದ  ಪರಿಸರ ವಿನಾಶದ ಕಡೆಗೆ  ಓದುಗರ ಗಮನ  ಸೆಳೆಯುವದನ್ನೂ ಮರೆತಿಲ್ಲ . ಇಂಥ ಪ್ರವಾಸ ಕಥನದ ಮಾದರಿಗಳು ಇವರ ಲೇಖನಿಯಿಂದ ಬರ್ತಾ ಇರಲಿ! ಕಥೆಗಾರ್ತಿ, ಜೀವನ ಚರಿತ್ರೆಕಾರ್ತಿ, ವೈಜ್ಞಾನಿಕ ಬರಹಗಾರ್ತಿಯಾಗಿ ಈಗಾಗಲೇ ಹೆಸರು ಮಾಡಿದ ನೇಮಿಚಂದ್ರ, ಅನನ್ಯ ಪ್ರವಾಸ ಕಥನಕರ್ತೆಯಾಗಿ ಬೆಳಗಲಿ! ಎಂದು ಹಾರೈಸ್ತೀನಿ.