೩.ಇಲ್ಲಿಯ ಆಹ್ಲಾದಕರವಾದ ಹವಾಗುಣ- ಫೆಬ್ರುವರಿಯ ಮೊದಲ ಹಂತದಲ್ಲಿ ವಸಂತ ೠತುವಿನ ಹಬ್ಬವನ್ನು ಆಚರಿಸಲಾಯಿತು. ಈಗ ಬೇಸಿಗೆ ಶುರು ಅಷ್ಟೇ ಆದರೂ ಮೋಡ ಕವಿದಿದ್ದರಿಂದ ಅಲ್ಲಿರುವ ತನಕ ಬೆಚ್ಚಗಿನ ಪೋಷಾಕಿನಲ್ಲಿಯೇ ಇರಬೇಕಾಯಿತು. ಬಿಸಿಲು ಇದ್ದರೂ ಕೂಡ ಪರ್ವತದ ಮಧ್ಯದಿಂದ ಬರುವ ತಣ್ಣಗೆ ಕೊರೆಯುವ ಗಾಳಿ ಹವಾಮಾನವನ್ನು ತಂಪಾಗಿ ಇಟ್ಟಿತ್ತು. ಗೋವಾದ ಬಿಸಿಲಿನ ಕಾವು ಹಾಗೂ ಸಮುದ್ರದ ಹಸಿತನದ ಅನುಭವವಿದ್ದ ನಮಗೆ ಇಲ್ಲಿಯ ಹವಾಮಾನ ಬಹಳ ಹಿಡಿಸಿತು. ತುಂತುರ ಮಳೆ ಇಲ್ಲಿ ಸಾಮಾನ್ಯವಂತೆ ಆದರೆ ನಮಗೆ ಈ ಅನುಭವ ಸಿಗಲಿಲ್ಲ.
೪.ಅತ್ಯುತ್ತಮ ಸಾರಿಗೆ ಸಂಪರ್ಕ– ಯೂನಾನ ಪ್ರಾಂತದ ರಾಜಧಾನಿಯಾದ ಕುನ್ಮಿಂಗದಿಂದ ಡಾಲಿಯ ನಾಲ್ಕೂವರೆ ಗಂಟೆಯ ಪ್ರವಾಸ ತುಂಬ ಸುಖಕರವಾಗಿತ್ತು. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಮಾರಾಟದ ಮಳಿಗೆಗಳು, ಸುಂದರವಾದ ಹೂದೊಟಗಳು, ಭವ್ಯವಾದ ಮೇಲಿನ ರಸ್ತೆಗಳು,ಪಾಶ್ಚಾತ್ಯ ಪೋಷಾಕಿನಲ್ಲಿ ಹಣ್ಣು ಹಂಪಲ ಮತ್ತು ತರಕಾರಿ ಮಾರುವ ಮಾರಾಟಗಾರರನ್ನು ನೋಡಿದರೆ ನಮುಲ್ಲಿಯ ಮೆಟ್ರೊ ಸಿಟಿಗಳ ನೆನಪಾಯಿತು. ಒಂದೇ ಅಂತರವೆಂದರೆ ಸ್ವಚ್ಚತೆ ಹಾಗೂ ವಾಹನಗಳ ಒಡಾಟದಲ್ಲಿಯ ನಿಯಂತ್ರಣ ನಮಗೆ ಬಹಳ ಮೆಚ್ಚುಗೆಯಾಯಿತು. ನಮಗಿಂತ ಹೆಚ್ಚು ಜನಸಂಖ್ಯೆ ಇದ್ದ ಚೈನಾದ ಅಷ್ಟು ಸುಧಾರಣೆಯಾಗದ ಪ್ರದೇಶ ಎಂಬ ನಮ್ಮ ಪೂರ್ವಗ್ರಹಿತ ಅಭಿಪ್ರಾಯವು ಕ್ಷಣದಲ್ಲಿ ಮಾಯವಾಯಿತು.
ಊರೊಳಗೆ ನಾಲ್ಕು ಮತ್ತು ಹೆದ್ದಾರಿಯಲ್ಲಿ ಹತ್ತು ಕಿರುದಾರಿಗಳನ್ನೊಳಗೊಂಡ ಅಗಲವಾದ ರಸ್ತೆಗಳನ್ನು ನೋಡಿ ನಾವು ಬೆರಗಾದೆವು. ರಸ್ತೆ ಖಾಲಿ ಇದ್ದರೂ ಕೂಡ ಯುನಿಫಾರ್ಮನಲ್ಲಿದ್ದ ಚುರುಕಾದ ಚಾಲಕನು ಆರಾಮವಾಗಿ ಗಡಿಬಿಡಿ ಇಲ್ಲದೇ ೩೬೦ ಕಿ.ಮಿ ರಸ್ತೆಯನ್ನು ಬರೀ ನಾಲ್ಕೂವರೆ ಗಂಟೆಯಲ್ಲಿ, ನಡುವೆ ೧೫ ನಿಮಿಷದ ವಿರಾಮವನ್ನು ಕೊಟ್ಟು ಡಾಲಿ ತಲುಪಿಸಿದ. ಎಲ್ಲೂ ಹಾರ್ನಿನ ಶಬ್ದವಿಲ್ಲ ಅಷ್ಟು ಶಿಸ್ತು ಪಾಲಿಸುತ್ತಾರೆ ಇಲ್ಲಿಯ ಜನ.ಗುಡ್ಡಗಾಡಿನ ಪ್ರದೇಶವಾದುದರಿಂದ ಅನೇಕ ಸುರಂಗಗಳನ್ನು ದಾಟಿ ನಾವು ಮುನ್ನಡೆದೆವು. ಸುರಂಗಗಳಲ್ಲಿ ಸ್ವಚ್ಚತೆ ಮತ್ತು ದೀಪಗಳು ಪ್ರಜ್ವಲಿಸುತ್ತಿದ್ದರಿಂದ ಗೋಡೆಗಳಿಗೆ ಟೈಲುಗಳನ್ನು ಹಾಕಿದ್ದು ಕಂಡಿತು. ರಸ್ತೆಯ ಅಕ್ಕಪಕ್ಕದಲ್ಲಿಯ ಗುಡ್ಡಗಳ ಮಣ್ಣು ಇಲ್ಲವೇ ಬಂಡೆಗಳು ಜಾರದ ಹಾಗೆ ಪ್ಲಾಸ್ಟೆರ ಹಾಕಿ ಗಟ್ಟಿ ಮಾಡಿದ್ದು ನೋಡಿ ಅಪಘಾತಗಳನ್ನು ತಡೆಯುವ ಮುಂಜಾಗ್ರತೆ ಇದು ಎಂದೆನಿಸಿತು. ಹೀಗೆ ಅಷ್ಟು ಸುಧಾರಣೆ ಇಲ್ಲದ ಜಾಗೆ ಎಂದುಕೊಂಡರೂ ಮೂಲಭೂತ ಮೂಲಾವಶ್ಯತೆಗಳನ್ನು ಇಲ್ಲಿಯ ಸರಕಾರ ದಯಪಾಲಿಸಿದೆ ಎಂದು ಕೌತುಕವೆನಿಸಿತು.
೫.ತರುಣ ಚೀನ -ವಿಶ್ವವಿದ್ಯಾಲಯದ ಆವರಣದಲ್ಲಿ ಇದ್ದುದರಿಂದ ನಾವು ಬರೀ ತರುಣಪೀಳಿಗೆಯನ್ನು ಕಂಡೆವು ಅದರೆ ಊರಲ್ಲಿ ಪೇಟೆಗಳಲ್ಲಿ ಕೂಡ ತರುಣರೇ! ಯಾವದೇ ಉದ್ಯೋಗ ಧಂಧೆಗಳಿರಲಿ ಮಹಿಳೆಯರು ಮುಂದು. ವಿರಾಮವೇಳೆಯಲ್ಲಿ ಹೆಣೆಯುತ್ತಲೋ, ಕಸೂತಿ, ಹೊಲಿಗೆ ಇಲ್ಲವೇ, ಕರಕುಶಲ ವಸ್ತುಗಳನ್ನು ಮಾಡುತ್ತಲಿರುವದನ್ನು ಕಾಣುತ್ತೇವೆ. ಅದೇ ಗಂಡಸರು ಇಸ್ಪೀಟು ಆಟದಲ್ಲಿ ತಮ್ಮ ವಿರಾಮದ ವೇಳೆಯನ್ನು ಕಳೆಯುವದನ್ನು ಗಮನಿಸಿದ್ದೇವೆ. ಎನೇ ಆದರೂ ಚಿನಿಯರು ಉದ್ಯಮ ಶೀಲರು. ಹಾಗಾದರೇ ವಯಸ್ಸಾದವರು ಎಲ್ಲಿ ಮಾಯವಾದರು ಎಂಬ ಪ್ರಶ್ನೆಗೆ ಉತ್ತರ ನಾವೇ ಕಂಡು ಹಿಡಿದೆವು. ತರುಣ ಪೀಳಿಗೆಯವರು ದುಡಿದು ಸಂಪಾದನೆ ಮಾಡುವಾಗ ಮನೆಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹಿರಿಯರದಿರಬೇಕು ಎಂದೆನಿಸಿತು. ನಮ್ಮ ಕೆಮೆರಾ ಕಳುವಾಯಿತೆಂದು (ಇದೊಂದೇ ಬೇಸರದ ಘಟನೆ) ಪೋಲಿಸ ಠಾಣೆಗೆ ಹೋಗಬೇಕಾಯಿತು. ನಮಗೆ ದಪ್ಪಗೆ ದೊಡ್ಡ ಹೊಟ್ಟೆ, ದಪ್ಪ ಮೀಸೆಗಳಿರುವ ಪೋಲಿಸರನ್ನು ಕಂಡು ಅಭ್ಯಾಸವಿದ್ದವರಿಗೆ ಅಲ್ಲಿಯ ತೆಳ್ಳಗೆ, ಬೆಳ್ಳಗೆ ‘ಸ್ಮಾರ್ಟ’ ಗಂಡು ಹೆಣ್ಣು ಪೋಲಿಸ ಅಧಿಕಾರಿಗಳನ್ನು ಕಂಡು ವಿಸ್ಮಯವಾಗಿದ್ದು ಸಹಜವೇ. ಒಂದು ವಾರ ತಿರುಗಿದ ಎಲ್ಲ ಜಾಗಗಳಲ್ಲಿ ಕಂಡವರು ತರುಣರೇ!
೬.ಪೌರನೀತಿಯ ತಿಳುವಳಿಕೆ- ಇಲ್ಲಿಯ ಜನರ ಪೌರ ಪ್ರಜ್ನೆ ನಮಗೆ ಬಲು ಮೆಚ್ಚುಗೆಯಾಯಿತು. ಪರಿಸರವನ್ನು ನಿರ್ಮಲವಾಗಿ ಇಡುವ ತಿಳುವಳಿಕೆ ಪ್ರತಿಯೊಬ್ಬ ನಾಗರಿಕನಲ್ಲಿ ಕಡ್ಡಾಯವಾಗಿ ಇರಲೇಬೇಕು, ನಮ್ಮದೇಶದಲ್ಲಿ ಅದು ಶೂನ್ಯ ಆದರೆ ಪರದೇಶದಲ್ಲಿ ಅದನ್ನು ನಾವು ಶ್ರಧ್ಧೆಯಿಂದ ಪಾಲಿಸುತ್ತೇವೆ. ಈ ವಿಚಿತ್ರ ನಡುವಳಿಕೆಗೆ ಆತ್ಮಶೋಧ ಅಗತ್ಯ! ನಮಗಿಂತ ಹೆಚ್ಚು ಜನಸಂಖ್ಯೆಯಿದ್ದ ನಾಡಿನಲ್ಲಿ ಜನರು ತಮ್ಮ ಪರಿಸರವನ್ನು ಸ್ವಚ್ಚ ಇಟ್ಟಿರುತ್ತಾರೆ, ಸಾರ್ವಜನಿಕ ವಾಹನಗಳಲ್ಲಿ ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇಟ್ಟಿರುತ್ತಾರೆ ಮತ್ತು ಜನರು ಅದರಲ್ಲಿಯೇ ಕಸವನು ಚೆಲ್ಲುತ್ತಾರೆ. ರಸ್ತೆಗಳ ಕೆಲವೇ ಅಂತರದಲ್ಲಿ ಸುಂದರವಾದ ಕಸದ ಡಬ್ಬಿಗಳನ್ನು ನೋಡಿದೆವು ಅದರ ಮೇಲೆ ‘ಸೈಕ್ಲೆಬಲ್’ ಮತ್ತು ‘ರಿಸೈಕ್ಲೆಬಲ್’ ಎಂಬ ಫಲಕವಿದ್ದು ಕಸವನ್ನು ‘ಪುನರುಪಯೋಗಿ’ ಮತ್ತು ‘ತ್ಯಜಿಸಲು ಯೋಗ್ಯ’ ಹೀಗೆ ಎರಡು ತರದಲ್ಲಿ ವರ್ಗಿಕರಿಸಿ ಕಸದ ವಿನಿಯೊಗವನ್ನು ಅಲ್ಲಿಯ ಪೌರಸಭೆ ಶ್ರಧ್ಧೆಯಿಂದ ಮಾಡುತ್ತದೆ. ಹಳ್ಳಿ ಗಳಲ್ಲಿ ಕೂಡ ಈ ಜಾಗ್ರತೆ ಕಂಡು ನಮಗೆ ಆಶ್ಚರ್ಯ ವಾಯಿತು. (ಇದು ಹತ್ತು ವರ್ಷಗಳ ಹಿಂದಿನ ಮಾತು) ಇಲ್ಲಿ ನಾಯಿ ಗಳು ದನ ಕರುಗಳು ನಮಗೆ ಕಾಣಿಸಲಿಲ್ಲ ಆದರೆ ಹಳ್ಳಿಯ ಮನೆಗಳ ಹಿಂದಿನ ಜಾಗದಲ್ಲಿ ಸೆಗಣಿ ಮತ್ತು ಒಣಗಿದ ಎಲೆ ಸೊಪ್ಪುಗಳ ಮಿಶ್ರಣವನ್ನು ರಸ್ತೆಯ ಒಂದು ಪಕ್ಕಕ್ಕೆ ಹಾಕಲಾಗಿತ್ತು. ಈ ಗೊಬ್ಬರವನ್ನು ಹೊಲದಲ್ಲಿ ಪಸರಿಸಿದನ್ನು ನಾವು ಈ ಮೊದಲು ಕಂಡಿದ್ದೆವು. ರಸ್ತೆಗಳು ಚಿಕ್ಕದಾದರೂ ಚೊಕ್ಕವಾದ ಹಳ್ಳಿರಸ್ತೆಗಳನ್ನು ಕಂಡು ‘ಭಲೆ!!!’ ಎನ್ನದೇ ಮಾರ್ಗವಿರಲಿಲ್ಲ. ಇನ್ನು ದನ ಕರುಗಳು ಮತ್ತು ನಾಯಿಗಳು ಕಾಣದೇ ಇರುವದಕ್ಕೆ ಕಾರಣ ಆಗ್ನೇಯ ಎಶಿಯಾ ದವರು ಇವುಗಳ ಭಕ್ಷಣೆ ಮಾಡುತ್ತಾರಷ್ಟೇ ಹೀಗಾಗಿ ಅವುಗಳನ್ನು ಹೊರಗೆ ಅಲೆದಾಡಲು ಬಿಡದೇ ಒಳ್ಳೆಯ ಸಂಗೋಪನೆ ಮಾಡುತ್ತಿರಬೇಕು!
೭.ಶಿಸ್ತು ಕಟ್ಟುಪಾಡು- ವಿಸ್ತಾರವಾದ ಭೂ ಪ್ರದೇಶವುಳ್ಳ ಹಾಗೂ ಅತಿ ಹೆಚ್ಚು ಜನಸಂಖ್ಯೆಇರುವ ಚೀನ ದೇಶದಲ್ಲಿ ಭಿನ್ನ ಪಂಗಡಗಳ ಅಲ್ಪಸಂಖ್ಯಾತರು ಇದ್ದರೂ ಕೂಡ ಕಾರ್ಮಿಕ ವರ್ಗದ ಸರ್ವಾಧಿಕಾರದಿಂದಲೋ ಎನೋ ಶಿಸ್ತು ಅವರಲ್ಲಿ ಮೂಲತ: ಬಂದುಬಿಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಚಿಕ್ಕಂದಿನಿಂದಲೇ ಅದನ್ನು ಬೆಳೆಸಿರಬೇಕು ಹೀಗಾಗಿ ರಕ್ತಗತವಾಗಿಬಿಟ್ಟಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವು ಇದನ್ನು ಅಲಕ್ಷಿಸಿದ್ದೇವೆ, ಇದು ನಮ್ಮ ದುರ್ದೈವ. ಆದರೆ ಶಿಸ್ತು ಇಲ್ಲಿಯ ಜನರ ಪ್ರತಿ ನಿತ್ಯದ ಜೀವನದಲ್ಲಿ, ಹಾಗೂ ಎಲ್ಲೆಲ್ಲೂ ಹಾಸುಹೋಗಿ ರುವದನ್ನು ನಾವು ಕಾಣುತ್ತೇವೆ. ಸಾರ್ವಜನಿಕ ಸ್ಠಳದಲ್ಲಿ, ವಾಹನಗಳಲ್ಲಿ, ಗದ್ದಲದಲ್ಲಿ, ಟ್ರಾಫಿಕ್ ಜಾಮನಲ್ಲಿ ಹಾರ್ನ ಹಾಕಿ ಶಬ್ಡಮಾಲಿನ್ಯ ಮಾಡಿದ ನೆನಪು ನಮಗಿಲ್ಲ. ಎಂತಹ ಪರಿಸ್ಥಿತಿಯಲ್ಲೂ ಗಡಿಬಿಡಿಯಿಲ್ಲದೇ ನಿಯಮಗಳನ್ನು ಉಲ್ಲಂಘಿಸದೇ ಯಾರೂ ತಮ್ಮ ತಾಳ್ಮೆಯನ್ನು ಕಳೆದುಕೊಂಡದ್ದನ್ನು ಕಂಡಿಲ್ಲ. ಇದಕ್ಕೆ ಇಲ್ಲಿಯ ಕಠಿಣ ಶಿಕ್ಷೆ ಕಾರಣವಿರಬೇಕು.
ಮುಂದುವರೆಯುವದು