ಜ್ಯೋತ್ಸ್ನಾರವರು ಕಲಕತ್ತಾ ಆಕಾಶವಾಣಿಯಲ್ಲಿ ಕೆಲಸಕ್ಕಿದ್ದಾಗ , ಕಾಮತರ ವಾಸ್ತವ್ಯ ಬೆಂಗಳೂರಿನಲ್ಲಿತ್ತು. ಪತ್ರ ಮುಖೇನ ವಾರ್ತಾಲಾಪಗಳು ನಡೆಯುತ್ತಿದ್ದ ಕಾಲವದು. ಕಾಮತರು ತಮ್ಮ ಜೀವನದಲ್ಲಾದ ಒಂದು ಘಟನೆಯ ಬಗ್ಗೆ ಬರೆದ ಲೇಖವಿದು.
ಕೆಲವು ವಾರಗಳ ಹಿಂದೆ, ಒಂದು ವಿರಳವಾದ ಘಟನೆ ಲ್ಯಾಬಿನಲ್ಲಿ ನಡೆಯಿತು. ಇಂಡಿಯನ್ ಇನ್ಸ್ಟಿಟ್ಯೂಟಿನ ಸಿ. ಭಾಸ್ಕರನ್ ಎಂಬಾತ ತುಂಬ ದಿನಗಳಿಂದ ನನ್ನ ಗಿರಾಕಿ. ಹಿಂದೊಮ್ಮೆ ಮಾಡಿಸಿಕೊಂಡು ಹೋದ ಕೆಲಸದ ಬಿಲ್ಲ್ ನ್ನು ಆಫೀಸಿನವರು ತಿರಸ್ಕರಿಸಿದ್ದರಂತೆ. ಅದನ್ನು ತಿರುಗಿ ಬರೆದು ಕೊಡುವಂತೆ ಬಿನ್ನವಿಸಿಕೊಂಡಿದ್ದ. ನಾನು ಒಪ್ಪಿದ್ದೆ ಕೂಡ. ಆದರೆ ಬೇಕಾದ ವಿವರಗಳನ್ನು ತರಲು ಪ್ರತಿಸಲವೂ ಮರೆತು ಬರುತ್ತಿದ್ದ. ಕೊನೆಗೊಮ್ಮೆ ಗೆಳೆಯನೊಂದಿಗೆ ದಿನೇಶ ರಾವನು ಲ್ಯಾಬಿನಲ್ಲಿದ್ದಾಗ, ಬಿಲ್ ತೆಗೆದುಕೊಂಡು ಬಂದ. ಹಿಂದೆ ನಾನು ಆಯಾ ಕೆಲಸಕ್ಕೆ ಇಂತಿಷ್ಟು ಎಂದು ವಿವರಿಸಿ ಹೇಳಿ ಒಟ್ಟು ಬರೆದು ಹಣ ಪಡೆಯುತ್ತಿದ್ದೆ. ಆದರೆ ಈಗ ಇನ್ಸ್ಟಿಟ್ಯೂಟಿಗೆ ವಿವರವಾದ ರಸೀದಿ ಬೇಕಾದ್ದರಿಂದ ನನಗೆ ಹೆಚ್ಚು ಅನುಕೂಲವಾಗಿದೆ! ಎಂದು ನಿನಗೆ ಹಿಂದೆ ಬರೆದಿದ್ದೆ ಅಲ್ಲವೇ? ಅದನ್ನೇ ನಾನು ಜಯಭಾಸ್ಕರನಿಗೆ ವಿವರಿಸುತ್ತಿದ್ದಾಗ ಅವನ ಗೆಳೆಯ ನಡುವೆ ಬಾಯಿ ಹಾಕಿದ. ಆದರೂ ತಾಳಿಕೊಂಡು ಅವನಿಗೆ ವಿವರಿಸಲು ಯತ್ನಿಸುತ್ತಿರುವಾಗಲೇ,” ಪ್ರತಿಯೊಂದು ಕೆಲಸಕ್ಕೆ ಇಂತಿಷ್ಟು! ಎಂದು ನಿರ್ಧಾರಿತ ದರವಿಲ್ಲವೇ? ಛಾಯಾಗ್ರಾಹಕರ ಸಂಘ ಒಪ್ಪಿಕೊಂಡ ಬೆಲೆಯ ಬೋರ್ಡನ್ನು ತೂಗಹಾಕಬೇಕು. ನೀವೆಲ್ಲ ಇನ್ಸ್ಟಿಟ್ಯೂಟನ್ನು ಸುಲಿಯುತ್ತಿರುವಿರಿ! ಹೀಗೆಲ್ಲ ಮಾಡಿದರೆ ನಿಮಗೆ ಗಿರಾಕಿಗಳು ಹೇಗೆ ಬಂದಾರು?” ಎಂದೆಲ್ಲ ಅಸಂಬದ್ಧವಾಗಿ ಮಾತನಾಡಿದ. ಬೆಚ್ಚಿದ ಜಯಭಾಸ್ಕರನ್, ಅವನಿಗೆ ತಿಳಿಹೇಳಲು ಯತ್ನಿಸಿದರೂ ತೆಲುಗುನಲ್ಲಿ ಅವನಿಗೆ ,” ಹೀಗೆಲ್ಲ ನೀನು ಮೆತ್ತಗಿದ್ದರೆ ನಡೆಯದು! ಕಡಕ್ ಆಗಬೇಕು” ಎಂದು ಹೇಳಿದ.
ಈ ಎಂಟು ವರ್ಷಗಳ ಲ್ಯಾಬ್ ಜೀವನದಲ್ಲಿ ನಾನು ಯಾರ ಮೇಲೂ ಇಷ್ಟೊಂದು, ’ನಾರಾಜ್’ ಆಗಿರಲಿಲ್ಲ. ಆದರೂ ತಾಳ್ಮೆ ತಂದುಕೊಂಡೆ. “ ದರದ ಬೋರ್ಡ್ ಹಾಕಲಿಕ್ಕೆ ನಾನು ಬೋಂಡಾ ಅಂಗಡಿ ನಡೆಸುತ್ತಿಲ್ಲ, ಯಾರೂ ಗಿರಾಕಿ ಬರದಿದ್ದರೆ, ನನ್ನ ವ್ಯಾಪಾರ ಕಡಿಮೆಯಾದರೆ, ನಿನಗೇಕೆ ದು:ಖ? ನನಗೂ –ನಿನಗೂ ಏನು ಸಂಬಂಧವಿಲ್ಲ. ನಿನ್ನೊಡನೆ ನಾನು ಒಂದು ಪೈಸಾದ ವ್ಯವಹಾರವನ್ನು ಮಾಡಿಲ್ಲ. ನಿನಗೆ ಏನಾದರೂ ಹೇಳುವದಿದ್ದರೆ, ನಿನ್ನ ಗೆಳೆಯನಿಗೆ ಹೇಳು. ಸಭ್ಯ ನಡತೆ, ನಿನಗೆ ಸಾಧ್ಯವಾಗದಿದ್ದರೆ, ಲ್ಯಾಬಿನ ಹೊರಗೆ ಹೋಗಬೇಕು…..” ಎಂದು ಹೇಳಿ ನಾನೇ ಎದ್ದು ಡಾರ್ಕ್ ರೂಂ ಗೆ ಹೋಗಿಬಿಟ್ಟೆ. ನಂತರ ದಿನೇಶ್ ರಾವನು ಅವನ ತಪ್ಪನ್ನು ಮನಗಾಣಿಸಲು ಯತ್ನಿಸಿದ. ಬಳಿಕ ಜಯಭಾಸ್ಕರನ್ ಒಳಗೆ ಬಂದ. ಹೊಸ ಪಾವತಿಯನ್ನು ಬರೆದು ಕೊಡಲು ಕೇಳಿಕೊಂಡಾಗ, “ ತಲೆತಿರುಕ ಗೆಳೆಯನನ್ನು ಕರೆತಂದಿದೀಯ! ಇಂದು ಬರೆದು ಕೊಡಲಾರೆ. ನಾಳೆ ಬಂದರೆ ಒಂದು ನಿಮಿಷದಲ್ಲಿ ಬರೆದು ಕೊಡುತ್ತೇನೆ’ ಎಂದೆ. ಲ್ಯಾಬ್ ಬಿಡುತ್ತಿದ್ದಂತೆ ತಲೆತಿರುಕನು, ’ಆದದ್ದೆಲ್ಲ ಮರೆತುಬಿಡು’ ಎಂದು ಹೇಳಿದ. “ ನನ್ನ ಕೊನೆಯುಸಿರು ಇರುವ ತನಕ ನೆನೆಪಿಡುವ ಘಟನೆ ಇದು ಹೇಗೆ ಮರೆಯಲು ಸಾಧ್ಯ? ಎಂದು ಕೇಳಿದೆ.
ಒಂದು ತಿಂಗಳ ನಂತರ ಜಯಭಾಸ್ಕರನ್ ಇನ್ನಷ್ಟು ಕೆಲಸ ತೆಗೆದುಕೊಂಡು ಬಂದಿದ್ದ. ಅವನ ಜೊತೆಗೆ ತಲೆತಿರುಕ ಮತ್ತು ಬೇರೊಬ್ಬ ವಿದ್ಯಾರ್ಥಿ ಇದ್ದ. ತಲೆತಿರುಕ, ನೇರವಾಗಿ ನನ್ನ ಹತ್ತಿರ ಬಂದ, “ ಅಂದು ನಿಮ್ಮ ಹಿನ್ನೆಲೆ ಏನೆಂದು ಅರಿಯದೇ ಹಾಗೆ ಮಾತನಾಡಿದೆ. ನಂತರ ನನ್ನ ಸಹಪಾಠಿಗಳು, ನಿಮ್ಮ್ಸ ಬಗ್ಗೆ , ನಿಮ್ಮ ಕೆಲಸದ ಬಗ್ಗೆ ಹೇಳಿದರು. ಆದ್ದರಿಂದ ನಾಚಿಕೆಯಿಂದ , ನಿರ್ಮಲ ಮನಸ್ಸಿನಿಂದ ನಿಮ್ಮ ಕ್ಷಮೆ ಕೇಳುತ್ತೇನೆ” ಎಂದ. ಎರಡೆರಡು ಬಾರಿ ಕ್ಷಮೆ ಕೇಳಿದ. ತಾಳ್ಮೆಯಿಂದ ವರ್ತಿಸಿದ್ದರಿಂದ, ಆತನನ್ನು ಕ್ಷಮಿಸುವ ಅಧಿಕಾರ ಬಂದಿತು. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಅವನಿಗೆ ಏಟು ಬಿಗಿದಿದ್ದರೆ, ಕೋರ್ಟು –ಕಚೇರಿ ಎಂದು ಅಲೆಯಬೇಕಾಗಿತ್ತು. ನನ್ನ ಖುರ್ಚಿಯಲ್ಲಿ ಬಾಬಾ ಕುಳಿತಿದ್ದರೆ, ಏನು ಮಾಡುತ್ತಿದ್ದರು? ಎಂದು ಹೇಳುವದು ಅಸಾಧ್ಯ. ಸುಶಿಕ್ಷಿತ ವಿದ್ಯಾರ್ಥಿಗಳೇ ಹೀಗಿರುವಾಗ ಜನಸಾಮಾನ್ಯರು ಹೇಗಿರುತ್ತಾರೆಂದು ನೀನೇ ಊಹಿಸು!
ಡಾ. ಕೃಷ್ಣಾನಂದ ಕಾಮತ್