ಹಿಂದೊಮ್ಮೆ ಜನರ ವೇಷ ಭೂಷಣಗಳಿಂದಲೇ ಜಾತಿ, ಧರ್ಮ, ಪಂಗಡ, ಪ್ರದೇಶಗಳನ್ನು ಕ್ಷಣಾರ್ಧದಲ್ಲಿ ಗುರುತಿಸಬಹುದಿತ್ತು. ಆದರೆ ಇಂದು ಸಕಲರೂ ಆತ್ಯಾಧುನಿಕರೆಂದು ಪರಿಗಣಿಸಲ್ಪಡಬೇಕೆಂದು ಹೆಚ್ಚೂಕಡಿಮೆ ಎಲ್ಲ ಪ್ರದೇಶದವರೂ ಸಮವಸ್ತ್ರದಂತೆ ಬಟ್ಟೆ ತೊಡಲಂರಂಭಿಸಿದ್ದಾರೆ. ವಯಸ್ಸು ಸೂಚಿಸುವ ಬಟ್ಟೆ ಧರಿಸುವ ಕಾಲವೂ ಒಂದಿತ್ತು. ಚಿಕ್ಕಮಗುವಿಗೆ ಝಬಲಾ, ನಂತರ ಕಸೆ ಅಂಗಿ ಬಳಿಕ ಝ(ಜ)ಂಪರ್ ಮತ್ತು ಪರಕರ (ಕಿರಗಣಿ). ಆಬಳಿಕ ಉದ್ದಲಂಗ+ಪೋಲಕಾ (ರವಿಕೆ), ದಾವಣಿ. ಬಳಿಕ ಪಾಚವಾರಿ (ಐದು ಗಜದ ಸೀರೆ), ಮದುವೆ ಬಳಿಕ ಸೀರೆ (ಕಾಸೆ ಹಾಕಿ ಉಡುವ ಒಂಬತ್ತು ಗಜದ ಸೀರೆ)ಗಳು ಮಾಮೂಲಾಗಿದ್ದವು. ಹೀಗಾಗಿ ಮಹಿಳೆಯರ ವಯಸ್ಸು ಉಡಿಗೆಯಿಂದಲೇ ಪತ್ತೆ ಹಚ್ಚಬಹುದಿತ್ತು ದುರ್ದೈವದಿಂದ ವಿಧವೆಯರಿಗೆ ಬಿಳಿ, ಕೆಂಪು ಸೀರೆಗಳು ಕಡ್ಡಾಯವಾಗಿದ್ದವು. ನಮ್ಮ ಊರಿನ ಹಾಲಕ್ಕಿ ಗೌಡತಿಯರು ‘ಕಡವಾಡದ’ ಸೀರೆಗಳನ್ನು ನೀಲಿಬಣ್ಣ ಇಷ್ಟಪಟ್ಟರೆ, ಮುಸ್ಲಿಮರು ರಕ್ತ ವರ್ಣದವನ್ನು ಬಯಸುತ್ತಿದ್ದರು. ಹೀಗಾಗಿ ಊರಜವಳಿ ಅಂಗಡಿಗಳಲ್ಲಿ ಸೇಲಂ, ಜಮ್ಮಲಮಡುಗು, ಮಾಲೆಗಾಂವ, ಈಚಲಕರಂಜಿ, ಇಲಕಲ್, ಶಾಹಪುರಿ, ಬನಹಟ್ಟಿ ಮುಂತಾದ ಊರುಗಳಿಂದ ಸೀರೆಗಳನ್ನು ತರಿಸಬೇಕಾಗುತ್ತಿತ್ತು.
ಪುರಷರೂ ತಮ್ಮ ಸಂಪ್ರದಾಯಪಾಲಿಸುತ್ತಿದ್ದರು. ಗೌಡರು, ಗಾಮೊಕ್ಕಲು ಪಂಗಡದವರು ಹೂಸಾಡದ ಜಾಳಾದ ಪಂಜಿಗಳನ್ನು ಕಚ್ಚೆಹಾಕಿ ಸೊಂಟಕ್ಕೆ ಸುತ್ತಿ ಕೊಂಡರೆ ದೀವರು ಎಮ್ಮಗನೂರಿನ… ಪವರ್ಲೂಮ್ ಪಂಚೆ ಬೇಕೆನ್ನುತ್ತಿದ್ದರು. ಕೃಷಿಕ ಸಮುದಾಯದವರು ಗಂಜಿಹಾಕಿದ ಬ್ಯಾಡಗಿಯ ‘420 ಅಥವಾ 421’ ನಂಬರಿನ ಪಂಚೆಗಳನ್ನು ತಮ್ಮವನ್ನಾಗಿಸಿದ್ದರು. ಎಂಟು ಮೊಳದ ಧೋತರ 9ಗಜದ ಫಿನ್ಲೆ ಧೋತರಕ್ಕೆ ಬೇಡಿಕೆ ಇರುತ್ತಿತ್ತು. ಇಂದಿನ ಜವಳಿ ಅಂಗಡಿ ಕಾರರಿಗೇ ಈ ಶಬ್ದ, ಸ್ಥಳಗಳ ಇರವು ಗೊತ್ತಿರಲಿಕ್ಕಿಲ್ಲ! ಹೆಚ್ಚಿನವು ಮಾಯವಾಗಿದೆ.
ಸ್ತ್ರೀ ಸ್ವಾತಂತ್ರ್ಯ, ಸ್ತ್ರೀಪುರುಷ ಸಮಾನತೆಯಲ್ಲಿ ವಿಶ್ವಾಸವಿಟ್ಟು ಭಾರತೀಯ ನಾರಿಯರು, ಪಾಶ್ಚಾತ್ಯರ ಉಡಿಗೆ ಸ್ವೀಕರಿಸಿದರೆ ಹೆಚ್ಚಿನವರು ಉತ್ತರಭಾರತದ ಸಲವಾರ ಕಮೀಜ್ಗಳನ್ನು ಬಳಸಲಾರಂಭಿಸಿ 3 ದಶಕಗಳೇ ದಾಟಿವೆ! ಭೇದ-ಭಾವ ತೊಡೆದು ಹಾಕುವ ಇಂಥ ಉಡಿಗೆ ಸ್ವಾಗತಾರ್ಹವೇ. ಆದರೆ ಸಮವಸ್ತ್ರಧರಿಸಿ ಭಿನ್ನತೆ ಕಲ್ಪಿಸಲು ಬಾರದು! ಹಿಂದೊಮ್ಮೆ ಅವರ ಉಡಿಗೆ ತೊಡಿಗೆಯಿಂದಲೇ ಕೇರಳ, ಮಹಾರಾಷ್ಟ್ರ, ಗುಜರಾತ, ಬಂಗಾಲಿ ಮಹಿಳೆಯರನ್ನು ತಟ್ಟನೆ ಗುರುತಿಸ ಬಹುದಾಗಿತ್ತು. ಇದನ್ನು ಈಗ ಹಿಂದಿನ ಪುಸ್ತಕಗಳಲ್ಲಿ ಚಿತ್ರಗಳಲ್ಲಿ ಮಾತ್ರ ನೋಡಲು ಸಾಧ್ಯ. ಅಷ್ಟೇಕೆ? ಸೌಗಂಧಿಕಾ ಪರಿಣಯವೆಂಬ 19ನೇ ಶತಮಾನದ ಕಲ್ಲಚ್ಚಿನ ಗ್ರಂಥದಲ್ಲಿ ಅನೇಕ ಪ್ರದೇಶಗಳ ಸ್ತ್ರೀಯರ ವೈಶಿಷ್ಟ್ಯಗಳನ್ನೂ ರೇಖಾಚಿತ್ರಗಳಲ್ಲಿ ತೋರಿಸಲಾಗಿದೆ. ತಮಿಳುನಾಡಿನಾಕೆ ಶಾಮಲ ವರ್ಣೆ. ಆಂಧ್ರದವಳು ಮಧ್ಯಮ. ಗುಜರಾಥದವರು ಕೊಂಚ ಸ್ಥೂಲಕಾಯದವರು. ಬಂಗಾಲಿಗಳು ಆಡಿನಂತೆ ಬಡಕಲು ಅಂತೆ! ಇಂದಿನದಿಗಳಲ್ಲಿ ಇಂಥವರ್ಣನಗೆಳು ಕೆಲಸಕ್ಕೆಬಾರವು!
ಈ ತೀವ್ರ ಬದಲಾನಣೆಗಳು ಜೋರಾಗಿ ಕಂಡರೂ ರಾಜ್ಯ ರಾಜ್ಯಗಳಲ್ಲಿ ಒಟ್ಟಾರೆ ಉಡಿಗೆಯ ಭಿನ್ನತೆಯನ್ನು ಅಲ್ಲಗೆಳೆಯುವಂತಿಲ್ಲ. ಇದನ್ನು ನನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಲು ಇನ್ನಿಲ್ಲದಷ್ಟು ಶ್ತಮಿಸಬೇಕಾಯಿತು. ಮೊದಲನೆಯದಾಗಿ ಕ್ಯಾಮರಾಧಾರಿಯ ಬಗ್ಗೆ ಅಬಲೆಯರಿಗೆ ಸದಾಕಾಲವೂ ಸಂದೇಹವೇ! ಛಾಯಾಗ್ರಹಣಕ್ಕೆ ಅನುಮತಿ ಕೇಳುವ ಮೊದಲೇ ‘ಬೇಡ’ ಎನ್ನುವ ಪರಿಪಾದ ಬೆಳೆದು ಬಂದಿದೆ. ಸಮಝಾಯಿಸಿ, ಪುಸಲಾಯಿಸಿ ಹೇಳಿದಾಗ, ಯಾರು?, ಏಕೆ, ಏತಕೆ? ಎಂದೆಲ್ಲ ವಿಚಾರಿಸಿ ಆದ ಬಳಿಕ, ತಮ್ಮ ಯಜಮಾನರನ್ನು ವಿಚಾರಿಸಿ! ಎಂದು ಕೈಕೊಡಹಿ ಹೋಗಿಬಿಡುತ್ತಾರೆ! ಆ ಮುಠ್ಠಾಳರೊಂದಿಗೆ ಪರಿಚಯದಿಂದ ಪ್ರಾರಂಭಿಸಿ ತಿರುಗಿ ಪ್ರಶ್ನೋತ್ತರಗಳು ನಡೆಯಬೇಕು. ಅವರ ಕೃಪಕಟಾಕ್ಷ ಪಡೆಯಲು ಮೊದಲಿಗೆ ಅವರ ಒಂದೆರೆಡು ಛಾಯಾಚಿತ್ತ ತೆಗೆಯಬೇಕು. ಮಕ್ಕಳು-ಮರಿ ಜೊತೆಗಿದ್ದರೆ ಅವರನ್ನೂ ಕ್ಲಿಕ್ಕಿಸಬೇಕು. ಆನಂತರವೇ ಆ ಮಹಾರಾಣಿಯ ಫೋಟೋ ತೆಗೆಯಲು ಅನುಮತಿ ಸಿಗತ್ತದೆ. ಇಷ್ಟೇಲ್ಲ ಅಡ್ಡಿ-ಆತಂಕಗಳನ್ನು ಒಡ್ಡಿದವರು ತಮಗೆ ಎಲ್ಲ ಚಿತ್ರಗಳ ಕಾಪಿ ಕಳಿಸಲು ಮರೆಯದಿರಿ! ಎಂದು ವಿಳಾಸ ಕೊಟ್ಟಾಗ ಜೀವನದ ವಿರೋಧಾಭಾಸದ ಪರಿಚಯ ಚೆನ್ನಾಗಿ ಆಗದೇ ಇರುತ್ತದೆಯೇ?