ಕಗ್ಗಳ್ಳಿಯಲ್ಲಿ ವಾಕ್ ! (ಒಂದು ಪತ್ರ)

ಕೃಷ್ಣಾನಂದ ಕಾಮತ
ಪ್ಲಾಸಿ
18-1-1970

“ಹಾಗೆ ಮಾಡು! ಹೀಗೆ ಮಾಡು, ಎಂದು ಬರೆದ ಪತ್ರಗಳನ್ನು ಓದಿ ನಿನಗೆ ಬೇಸರ ಬಂದಿರಬೇಕು! ಅಂತೆಯೇ ಇಂದು ಸ್ವಲ್ಪ ಬೇರೆ ರೀತಿಯ ಪತ್ರ ಬರೆಯಬೇಕೆಂದಿದ್ದೇನೆ. ನಕ್ಸಲೀಯರ ತೊಂದರೆ ತಪ್ಪಿಸಲು ಆಫೀಸನ್ನು ಮನೆಗೆ ವರ್ಗಾಯಿಸಿದ್ದೆನಲ್ಲವೇ? ಈಗ ನಾನು ಕಟ್ಟಿಹಾಕಿದ ಗೊಡ್ಡು ಎಮ್ಮೆಯಂತೆ ಆಗಿದ್ದೇನೆ! ಅಪರೂಪಕ್ಕೆ ನದೀತೀರಕ್ಕೆ ಹೋದರೆ, ಅದೇ ದೊಡ್ಡ ತಿರುಗಾಟ ಆಗಿಬಿಡುತ್ತಿತ್ತು. ಬೇಗ ಕತ್ತಲೆ ಆಗಿಬಿಡುವುದರಿಂದ ಎಲ್ಲಿಯೂ ಹೋಗಲಾಗುತ್ತಿದ್ದಿಲ್ಲ. ಆದ್ದರಿಂದ ಇಂದು ಎಲ್ಲಾದರೂ ಕೊಂಚದೂರ ವಾಕ್ ಮಾಡಿ ಬರೋಣವೆಂದು ಹೊರಟೆ. ಇತ್ತ ಗಂಗಾತೀರ ಅತ್ತ ಮೀರಾ ಬಝಾರ, ಬಿಟ್ಟು ಒಂದು ಕಾಲುದಾರಿ ಹಿಡಿದೆ. ನಮ್ಮ ಆಫೀಸಿನ ಹಿಂದಿನಿಂದ ನದಿಗೆ ಒಂದು ಬಾಂದ್ (ಒಡ್ಡು) ಹಾಕಿದ್ದಾರೆ. ಆ ಬಾಂದ್‍ದ ಮೇಲೆಯೇ ನಡೆದುಹೋಗಿ ನಾವಿಬ್ಬರೂ ಪ್ಲಾಸಿಯ ರಣರಂಗ ನೋಡಿದ್ದು ನೆನಪಿದೆಯೇ? ಆ ಐತಿಹಾಸಿಕ ಜಾಗವನ್ನು ಹಿಂದೆ ಹಾಕಿದೆ. ಈಗ ರಸ್ತೆ ಅಂಕು-ಡೊಂಕಾಗಿ ಹೊಲಗಳೊಳಗಿಂದ ಹೊರಟಿತು. ಆಸ್ಪತ್ರೆಗೆ ಹೊರಟ ಮಹಿಳೆಯೋರ್ವಳು ಮಗಳ ಲಂಗವನ್ನೇ ರವಕೆಯಾಗಿ ಧರಿಸಿದವಳು ಅದನ್ನು ಸರಿಪಡಿಸಿಕೊಂಡಳು. ಕಬ್ಬಿನ ಸಿಪ್ಪೆಗಳ ನಡುವೆ ತುಂಡು ಕಬ್ಬುಗಳನ್ನು ಅಡಗಿಸಿಕೊಂಡು ‘ಪೇದಾ’ನ ಕಣ್ಣುತಪ್ಪಿಸಿ ಹೊರಟ ಮಹಿಳೆಯೋರ್ವಳು ತನ್ನ ಗುಡಿಸಲ ಹತ್ತಿರ ಧಾವಿಸುತ್ತಿದ್ದಳು. ನಡೆಯಲಾಗದ ಮುದುಕಿಯೋರ್ವಳನ್ನು ಇಬ್ಬರು ಹರೆಯದವರು ಕೈಹಿಡಿದು ನಡೆಸಿಕೊಂಡು ಹೋಗುತ್ತಿದ್ದರು. ಕೊಯ್ಲು ಮುಗಿಸಿದ ಹೊಲಗಳಲ್ಲಿ ಕೃಷಿಕರು ಹೊಸ ಕಬ್ಬಿನ ನಾಟಿ ನಡೆಸಿದ್ದರು. ಅನ್ನದ ರಾಶಿಯನ್ನು ಅಗಿಯುವಷ್ಟು ಸುಲಭವಾಗಿ ಮಣ್ಣಿನ ರಾಶಿ ಅಗೆಯಲು ಆಗದೇ ಹೋರಾಟ ನಡೆಸಿದ್ದರು. “ನಿನ್ನ ಮನೆ ಎಲ್ಲಿ?” ಅನಿರೀಕ್ಷಿತವಾಗಿ ದಾರಿಹೋಕನೋರ್ವ ಕೇಳಿದ.

“ಮಿಲ್ ಬಳಿ?!” ಎಂದೆ. ಅವನಿಗೆ ಸಮಾಧಾನವಾಗದೇ ದೇಶ ಯಾವುದು? ಎಂದು ತಿರುಗಿ ಕೇಳಿದ. ಮೈಸೂರು* ಎಲ್ಲಿದೆ? ಎಂಬುದು ಅವನಿಗೆ ತಿಳಿಯದಿದ್ದರೂ ದಕ್ಷಿಣಭಾರತೀಯರನ್ನೆಲ್ಲ ಮದ್ರಾಸಿಗಳೆಂದು ಕರೆಯುವದು ರೂಡಿಯಗಿತ್ತು! ಮದ್ರಾಸಿ! ಎಂದು ಕರೆಯಿಸಿಕೊಳ್ಳುವದು ಮನಸ್ಸಿಗೆ ಬಾರದ್ದರಿಂದ ನಿಜವನ್ನೇ ಹೇಳಿದೆ. ಗೋಣುಹಾಕಿ, ಈಗ ಎಲ್ಲಿ ಹೊರಟಿದ್ದಿ? ಎಂದು ಪ್ರಶ್ನಿಸಿದ. ಆ ದಾರಿ ಎಲ್ಲಿಹೋಗುತ್ತಿದೆ? ಎಂದು ತಿಳಿಯದ್ದರಿಂದ, ತಿರುಗಾಡಲು ಹೊರಟಿದ್ದೇನೆ” (ಃಏಕೆ ಜಾಜ್ಜಿ!) ಎಂದು ಹೇಳಿದೆ. ಅವನಿಗೆ ಅದು ವಿಚಿತ್ರವೆನಿಸ್ರಬೇಕು. ಎರಡು ನಿಮಿಷ ನನ್ನನ್ನೇ ಎವೆಯಿಕ್ಕಿ ನೋಡಿ ಹೊರಟುಹೋದ.

ಮುಂದೊಂದು ಹೊಲ. ತೊಗರಿ ಗಿಡಗಳು ಸವರ್ಣೀಯ ಹೂಗಳನ್ನು ಬಿಟ್ಟು ನಿಂತಿದ್ದವು. ಈರುಳ್ಳಿ ನೆಟ್ಟ ಹೊಲಗಳು ಹಚ್ಚಹಸುರಾಗಿದ್ದವು. ಸಾಸಿವೆ ಸಸಿಗಳು ಅಲ್ಲಲ್ಲಿ ತಲೆ ಎತ್ತಿದ್ದವು. ಇಂಗುತ್ತಿದ್ದ ನೀರಲ್ಲಿ ಸಿಗುವ ಇರುವೆಯಂಥ ಚಿಕ್ಕ ಮೀನುಗಳಿಗಾಗಿ ಅಲ್ಲಿ ಒಡ್ಡು ಹಾಕಿ ಇಲ್ಲಿ ಹೊಂಡ ತೋಡಿ, ನೀರನ್ನು ಬಲೆಗೆ ತೋಕಿ ಮೀನುಸಿಕ್ಕಾಗ ದಿಗ್ವಿಜಯ ಗಳಿಸಿದಂತೆ ಮಕ್ಕಳು ಕುಣಿಯುತ್ತಿದ್ದವು. ರಸ್ತೆಯ ಈ ಬದಿಯ ಹೊಂಡ ಮಹಿಳೆಯರಿಗಾಗಿ ಪ್ರತ್ಯೇಕವಿದ್ದಂತಿತ್ತು. ಅಂತೆಯೇ ಕಿಶೋರಿಯರು ಕೆಲವರು ಸೀರೆಯನ್ನೇ ಬಲೆಯಾಗಿ ಬೀಸಿ ಮೀನು ಹಿಡಿಯಲು ಹೆಣಗುತ್ತಿದ್ದರು. ಉಟ್ಟ ಸೀರೆಯನ್ನೇ ಬಳಸುತ್ತಿದ್ದಿರಬೇಕು! ಅಂತೆಯೇ ಶರೀರದ ಯಾವ ಭಾಗವನ್ನೂ ಸರಿಯಾಗಿ ಮುಚ್ಚದೇ ಹರಿದ ಸಣ್ನ ಬಟ್ಟೆಯು ಹೆಣಗಾಡುತ್ತಿತ್ತು! ಕೃಷಿಕನೋರ್ವ ಹೊಂಡದ ಆ ಕಡೆಯ ನೀರನ್ನು ದೋಣಿಯಾಕಾರದ ‘ದೊಟ್ಟೆ’ಯಿಂದ ತೂಕಿ ತೂಕಿ ತನ್ನ ಪುಟ್ಟ ಹೊಲಕ್ಕೆ ಸುರಿಯುತ್ತಿದ್ದ. ಇನ್ನೊಂದು ಹೊಲದಲ್ಲಿ ಟ್ಯೂಬಿನ ಬಾವಿ ಇದ್ದವನು, ಹಿಡಿಗೆ ಕಲ್ಲೊಂದನ್ನು ಕಟ್ಟಿ ಒಂದೇ ಸವನೆಗೆ ಪಂಪನ್ನು ನಡೆಸಿದ್ದ.

ಇದರಿನಿಂದ ಜೋರಾಗಿ ಬೈಸಿಕಲ್ ಮೇಲೆ ಬರುತ್ತಿದ್ದಾತ ನನ್ನನ್ನು ನೋಡಿದೊಡನೆ ಸಾಯಿಕಲ್ ನಿಲ್ಲಿಸಿ ಕೆಳಗೆ ಇಳಿದ. “ನಿನ್ನ ಮನೆ ಎಲ್ಲಿ? ಎಲ್ಲಿಗೆ ಹೊರಟಿದ್ದಿ? ಇಲ್ಲಿ ಹೊಸದಾಗಿ ಬಂದಿದಿಯಾ? ಎಂದು ಎರಡು ಬಾರಿ ಅವೇ ಪ್ರಶ್ನೆ ಕೇಳಿದ ನನ್ನ ಉತ್ತರಗಳಿಂದ ಸಮಾಧಾನವಾಗದೇ ನಾನು ಮುಂದೆ ಹೋದರೂ ನನ್ನನ್ನೇ ನೋಡುತ್ತ ನಿಂತುಬಿಟ್ಟಿದ್ದ! ಇವರೆಲ್ಲ ಏಕೆ ಹೀಗೆ ಕೇಳುತ್ತಿದ್ದಾರೆ? ಹೊಸಬರು ಯಾರಾದರೂ ಬಂದರೆ ಪಾಕಿಸ್ತಾನದ ದಲಾಲಿ! ಎಂದು ಅನುಮಾನಿಸುತ್ತಿದ್ದಾರೆಯೇ? ಎನಿಸಿತು. ಆಗಿನ್ನೂ ಬಂಗ್ಲಾದೇಶ್ ಉದಯಿಸಿರಲಿಲ್ಲ. ಪ್ಲಾಸಿಯು ಪೂರ್ವಪಾಕಿಸ್ತಾನದ ಗಡಿಯಲ್ಲಿತ್ತು.

ಮುಂದಿನ ಹೊಂಡ ಮಹಿಳೆಯರ ಬಯಲು ಸ್ನಾನಗೃಹವಿರಲು ಸಾಕು. ಅಂತೆಯೇ ತಮ್ಮ ನಿತ್ಯಕರ್ಮಗಳಲ್ಲಿ, ಬರಹೋಗುವವರನ್ನು ಅಲಕ್ಷಿಸಿ ಮಗ್ನರಾಗಿದ್ದರು. ಸೀರೆಯನ್ನು ಗಗನಕ್ಕೆ ಹಾರಿಸಿದ ಒಬ್ಬಾಕೆ ಪಾತಾಳಲೋಕದ ಸ್ವಚ್ಛತೆ ನಡೆಸಿದ್ದಳು! ಇನ್ನೊಬ್ಬಾಕೆ ನೀರಿನ ಮುಚ್ಚುಮರೆಯಲ್ಲಿ ಸೀರೆ ಬಿಚ್ಚಿದಳು. ತನ್ನ ಮೇಲಂತಸ್ತಿನಲ್ಲಿ ಆಕರ್ಷಣೆ ಏನೂ ಉಳಿದಿಲ್ಲ! ಎಂದು ಮನಗಂಡಾಕೆ ಕೆಳಗಿನ ಮಹಡಿಯ ಸ್ವಚ್ಛತೆಯಲ್ಲಿ ಮೈಮರೆತಿದ್ದಳು. ಮೂಡುತ್ತಿರುವ ಯೌವನದ ಪರಿವಿಲ್ಲದಾಕೆ ಮುಳುಗುತ್ತ ಏಳುತ್ತ ಸಂಗಡಿಗಳೊಂದಿಗೆ ಜಲಕ್ರೀಡೆ ನಡೆಸಿದ್ದಳು. ಯಾರ ಹಂಗೂ ಇಲ್ಲದ ವೀರವನಿತೆಯೋರ್ವಳು, ಅಲ್ಲಿಯ ರಣಾಂಗಣದಲ್ಲೆ ನೀರಿನಿಂದ ಎದ್ದು ಬಂದು ಸೀರೆ ಬದಲಿಸಿದಳು. ಮುಂದಿನ ಹೊಂಡ ಬಾತುಕೋಳಿಗಳಿಗೆ ಮೀಸಲಾಗಿತ್ತು. ಕೊಕ್! ಕೊಕ್! ಎಂದು ಗಾನ ಮಾಡುತ್ತ ಹೊರಟಿದ್ದವು, ಒಂದರಹಿಂದೊಂದು.

ಮುಂದೊಂದು ಗ್ರಾಮ. ಆಧುನಿಕ ಮಸೀದೆಯೇ ಅಲ್ಲಿಯ ಎತ್ತರದ ಕಟ್ಟಡವಾಗಿತ್ತು. ಊರು ಬಾಂದಿನಿಂದ ತೀರ ಕೆಳಗೆ ಇದೆ. ಇಲ್ಲಿ ಬೆಳೆದ ಕಬ್ಬನ್ನು ಕಾರಖಾನೆಗೆ ಸಾಗಿಸುವದರಲ್ಲಿ ಜನ ತೊಡಗಿದ್ದರು. ಹೊಟ್ಟೆಗಿಲ್ಲದ ಕೋಣಗಳಿಂದ ಚಕ್ಕಡಿಯನ್ನು ಬಾಂದಿನ ಮೇಲೆ ಎಳೆಯಲಾಗದ್ದರಿಂದ ಅದಕ್ಕಿಂತ ಹೆಚ್ಚು ಬಲವಿಲ್ಲದವರು ಒಂದೇ ಸವನೆ ಅವನ್ನು ದೂಡುತ್ತಿದ್ದರು. ಪಂಜಾಬ್‍ದಲ್ಲಿ ಇಷ್ಟು ಜನ ಅನಾಮತ್ತಾಗಿ ಅದನ್ನು ಎತ್ತಿ ಬಾಂದಿನ ಮೇಲೆ ಇಡುತ್ತಿದ್ದರೋ ಏನೋ!

ಆ ಗ್ರಾಮದಾಟಿ ಬಂದೆ. ಬಾಂದಿನ ಮೇಲೆ ಜನರ ಓಡಾಟವೇ ಇರಲಿಲ್ಲ. ದೂರದಲ್ಲಿ ಮೋಟಾರು, ಲಾರಿಗಳು ಗೋಚರಿಸುತ್ತಿದ್ದುದರಿಂದ ಈ ಬಾಂದು ಬೆಹ್ರಾಮಪುರ ರಸ್ತೆಗೆ ಕೂಡುತ್ತಿದ್ದಿರಬೇಕೆಂದು, ಮುಂದೆ ಹೊರಟೆ. ಆದರೆ ಈ ದಾರಿ ಮುಖ್ಯರಸ್ತೆಯತ್ತ ಹೋಗದೇ ಇನ್ನೆಲ್ಲಿಯೋ ಹೊರಟಿತ್ತು. ಅಂತೆಯೇ ಅಲ್ಲಿ ಸೀಳಾದ ಕಾಲುದಾರಿಯಿಂದ ಹೊರಟೆ. ಸಣ್ಣಹಳ್ಳಿ. ಇಕ್ಕೆಲದಲ್ಲಿ ಗಿಡಗಂಟೆಗಳು. ಮುಂದೆ ಸಾಗುತ್ತಿದ್ದಂತೆ ಕೈಗಳು ಮೂಗನ್ನು ಮುಚ್ಚಿಕೊಳ್ಳುವ ದುರ್ಗಂಧ! ಆ ಪ್ರದೇಶದಲ್ಲಿ ಪುರುಷರಿಗೆ ಪ್ರವೇಶವಿದ್ದಿರಲಿಕ್ಕಿಲ್ಲ. ನಿಶ್ಚಿಂತೆಯಿಂದ ಮಹಿಳಾ ತಂಡವೊಂದು ಬಹಿರ್ದೆಸೆಗೆ ಕುಳಿತಿತ್ತು! ಜೊತೆಗೆ ನೆರೆಮನೆಯವರ ಚಾಡಿ, ಸಾಂಸಾರಿಕ ಸುಖದುಃಖಗಳ ವಿನಿಮಯ ಸಾಗಿತ್ತು. ಆಕಸ್ಮಿಕವಾಗಿ ಬಂದ ಆಗಂತುಕನಿಗೆ ‘ಗಾರ್ಡ್ ಆಫ್ ಆನರ್’ ಕೊಡಲು ಕೆಲವರು ಸಿದ್ಧರಾಗಿ ಎದ್ದರು. ಗೃಹಿಣಿಯೊಬ್ಬಳು ಅರ್ಧ ಎದ್ದು ಕುಳಿತಳು. ಈ ಒಳಹಾದಿಯನ್ನು ಮುಖ ತಿರುವಿ ಲಗುಬಗೆಯಿಂದ ಕ್ರಮಿಸಿದೆ. ಅದು ಕೊನೆಗೊಮ್ಮೆ ರಾಜಮಾರ್ಗಕ್ಕೆ ಕೂಡಿಕೊಂಡಾಗ, ಬದುಕಿದೆಯ ಬಡಜೀವ! ಎಂದು ನಿಟ್ಟುಸಿರು ಹೊರಬಿತ್ತು. ಅಲ್ಲೆಲ್ಲ ಸಣ್ಣಸಣ್ಣ ಮಣ್ಣಿನ ಗೋಡೆಯ ಹುಲ್ಲಿನ ಮಾಡಿನ ಮನೆಗಳು. ಅಲ್ಲಲ್ಲಿ ಕಟ್ಟಿದ ದನ-ಕರುಗಳು. ಮಕ್ಕಳ ಮಂಗಾಟ, ಕುಚೋದ್ಯಗಳು ನಡೆದೇ ಇದ್ದವು. ಹೊಲಗಳಿಗೂ ಮನೆಗಳಿಗೂ ಒಂದೇ ಟ್ಯೂಬಿನ ಬಾವಿಯ ನೀರಿನ ಪೂರೈಕೆ. ಅಕ್ಕಿಯನ್ನು ಕುಟ್ಟುವ ರಾಟೆಗಳು ಅಲ್ಲಲ್ಲಿ ಕಂಡವು.

ಸರಿಯಾದ ರಾಜಮಾರ್ಗ ತಲುಪಿದಾಗ ನೆಮ್ಮದಿ ಅನಿಸಿತು. ಮಾರ್ಗದ ಎರಡೂ ಬದಿಗೆ ಮನೆಗಳು, ಅಂಗಡಿಗಳು. ಊರು ಚಿಕ್ಕದಾದರೂ ಜನವಸ್ತಿ ಜಾಸ್ತಿ! ಹೊಲದಲ್ಲಿ ನೀರಿನ ಪೈಪ್ ಹಾಯಿಸುತ್ತಿದ್ದ ಒಬ್ಬನಿಗೆ ನನಗೆ ನೀರು ತಿನ್ನಬೇಕಾಗಿದೆ! ಎಂದೆ (ಬಂಗಾಲಿಗಳು ರೊಟ್ಟಿ, ನೀರು, ಬೀಡಿ ಎಲ್ಲದಕ್ಕೂ ‘ತಿನ್ನು’ ಕ್ರಿಯಾಪದ ಬಳಸುತ್ತಾರೆ) ಬಾ! ಎಂದು ಸನ್ನೆ ಮಾಡಿ ಕರೆದ ಬಳಿಕ ಈ ನೀರು ಚೆನ್ನಾಗಿಲ್ಲ! ಎಂದು ದೂರದಲ್ಲಿದ್ದ ಬಾವಿ ತೋರಿಸಿದ. ಅದು ಓರ್ವ ಸಾಬಿಯ ಮನೆಯ ಬಾವಿಯಾಗಿತ್ತು. ಸಾಬಿ ಮತ್ತಿತರರು ಹುರಿಗಾಳು ತಿನ್ನುತ್ತಾ ಇದ್ದರು. ಅವರಿಗೆ ನೀರು ತಿನ್ನಬೇಕಾಗಿದೆ! ಎಂದೆ. ಎಂದು ಅವರಿಗೆ ಅರ್ಥವಾಗುವ ಬಂಗಾಲಿಯಲ್ಲಿ ಹೇಳಿದೆ. ಗೃಹಿಣಿ, ಹರಿದು ಚಿಂದಿಯಾದ ಸೀರೆಯಿಂದಲೇ ಮುಖಮುಚ್ಚಿಕೊಂಡಳು. ಬಾವಿ ನೀರು ಕುಡಿಯಲು ಅನುಮತಿ ದೊರೆಯಿತು. ಬಾವಿಯಿಂದ ನೀರು ಸೇದಿ ಮುಖ ತೊಳೆದು ನೀರು ಕುಡಿದೆ. ಪಕ್ಕದ ಗೋಡೆಗೆ ಒಗೆದುಹಾಕಿದ ತಿಂಗಳ ಕೆಂಪುಪತಾಕೆಗಳು ತಂಡಾವು ನೀರೇ ಮುಖ್ಯವಾಗಿರುವ ರಾಜಸ್ತಾನದಲ್ಲಿ ಈ ಪತಾಕೆಗಳ ರಾಶಿಯನ್ನು ರಸ್ತೆಯಂಚಿನ ನಾಲೆಯಲ್ಲಿ ಬಿಸಾಕಿದರೆ ಬಟ್ಟೆ ಕಡಿಮೆ ಉಪಯೋಗಿಸುವ ಈ ‘ದೇಶ’ದಲ್ಲಿ ಅವನ್ನು ತೊಳೆದು ಪುನಃ ಉಪಯೋಗಿಸುತ್ತಾರೆ.

ರಾಜಮಾರ್ಗದಲ್ಲಿ ಸಾಗಿದೆ. ಹಣ್ಣ ಹಣ್ಣಾದ ಮುದುಕನೋರ್ವ ಬಾಬು ನಡೆದೇ ಹೊರಟಿಯಲ್ಲ? ಬ್ಯಾಕ್ ಇಲ್ಲವೇ? ಎಂದು ಕೇಳಿದ. ನನ್ನ ಬಳಿ ಸಾಯಕಲ್ ಇಲ್ಲವೆಂದು ಒಪ್ಪಿಕೊಂಡೆ. ಮತ್ತೆ ಮನೆ ಎಲ್ಲಿ? ಎಲ್ಲಿಂದ ಬಂದೇ? ಎಲ್ಲಿಗೆ ಹೊರಟೆ? ಪ್ರಶ್ನೆಗಳು. “ಇಲ್ಲಿಗೆ ಹೊಸದಾಗಿ ಬಂದಿರುವೆ. ತಿರುಗಾಡಲು (ಘರಿ) ಬಂದಿದ್ದೇನೆ. ಎಂದಾಗ, ಅರ್ಥವಾದಂತೆ ಹಲ್ಲುತೆಗೆದು ನಕ್ಕ. ಈ ರಸ್ತೆ ಎಲ್ಲಿಗೆ ಹೋಗುತ್ತದೆ? ಎಂದು ಗೊತ್ತಿದ್ದರೂ ಕೇಳಿದೆ. “ಐದುಗಂಟೆಗೆ ಬಸ್ ಇದೆ! ನಡೆದು ಯಾಕೆ ಹೋಗುತ್ತಿ? ಇದು ದೂರದ ಹಾದಿ. ಒಳಹಾದಿಯಿಂದ ಹೋಗು! ಎಂದು ದಾರಿ ತೋರಿದ. ಆ ಒಳಹಳ್ಳಿ ಪೂರ್ತಿ ಸಾಬರದಾಗಿತ್ತು. ಅರೆನಗ್ನ ವ್ಯಕ್ತಿಗಳೆಲ್ಲ ನನ್ನನ್ನೇ ದಿಟ್ಟಿಸಿದಾಗ ಅಧೈರ್ಯವಾಯಿತು! ಅಲ್ಲಿದ್ದ ಯುವಕನಿಗೆ “ಈ ದಾರಿಯಿಂದ ಹೋದರೆ ಮಿಲ್ ತಲುಪಬಹುದಲ್ಲವೇ” ಎಂದು ಕೇಳಿದೆ. ತಾನು ಸರಕಾರಿ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಹುಸೇನನನ ಅಣ್ಣ! ಎಂದಾಗ ನಾನೂ ಅದೇ ಆಫೀಸಿನಲ್ಲಿ ಇದ್ದೇನೆ’ ಎಂದೆ. ‘ನನಗೆ ನೀವು ಯಾರು ಎನ್ನುವದು ಗೊತ್ತು! ಎಂದ. ನನಗೆ ಜನರ ಪರಿಚಯ ಇಲ್ಲದಿದ್ದರೂ ಜನರಿಗೆ ನನ್ನ ಪರಿಚಯವಿದೆಯೆಂದು ಅಭಿಮಾನವೆನಿಸಿತು.

ಮುಂದೆ ಸಾಗಿದೆ. ಸಾಬರ ತಂಡ ಎಂದುರಾಯಿತು. ನಾನಾಗಿ ಅವರನ್ನು ಮಾತನಾಡಿಸಿದೆ. ಈ ರಸ್ತೆ ಬಾಂದ್‍ಗೆ ಹೋಗುತ್ತಿದೆಯೇ? ಎಂದು ವಿಚಾರಿಸಿದೆ. ತಿರುಗಿ ಅವೇ ಪ್ರಶ್ನೆಗಳಿ ಎದುರಾದವು! ಮಿಲ್ಲಿನಲ್ಲಿ ಕೆಲಸದ ಪರಿಚಯವಿದ್ದ ಒಬ್ಬ ಯಾವ ಕೆಲಸ ಮಾಡುತ್ತಿ? ಎಂದು ಕೇಳಿದ. “ಕೀಟಗಳ ಬಗ್ಗೆ” ಎಂದಾಗ ಅರ್ಥವಾದಂತೆ ಪುಖಾ ಡಾಕ್ಟರ್ (ಕೀಟಗಳ ಡಾಕ್ಟರ್!) ಎಂದು ಗೆಲುವಿನ ನಗು ನಕ್ಕ. ಹತ್ತು ನಿಮಿಷಗಳ ವರೆಗೆ ನನಗೆ ಬರುತ್ತಿದ್ದ ಗ್ರಾಮೀಣ ಬಂಗಾಲಿಯಲ್ಲೇ ನನ್ನ ಬಗ್ಗೆ ಮಾಹಿತಿ ಪೂರೈಸಿದೆ. ಈಗ ಇಲ್ಲಿಯ ಅತಿ ಸಣ್ಣ ಹಳ್ಳಿಯಲ್ಲಿ ಕೂಡ ನನಗೆ ಹೇಳಬೇಕಾದ್ದನ್ನು ಹೇಳಬಲ್ಲೆ! ಎಂಬ ಧೈರ್ಯ ಬಂದಿದೆ. ಯಾವ ಅಭ್ಯಂತರ ಇಲ್ಲದೇ ತಿರುಗಾಡಲು ಸಾಧ್ಯವಿದ್ದರೆ! ಇಷ್ಟಾರಲ್ಲಿ ಒಳ್ಳೆಯ ಬಂಗಾಲಿ ಮಾತನಾಡಬಹುದಾಗಿತ್ತು. ಆದರೂ ಅವರು ಉಪಯೋಗಿಸುವ ಹಲವಾರು ಶಬ್ದಗಳನ್ನು ರೂಡಿಸಿಕೊಂಡಿದ್ದೇನೆ. ಭಂಗಿ (ಚಿಲ್ಲರೆ), ಜಾಂಗಾ (ಪಾತ್ರೆ), ತಟಕಾ (ತಾಜಾ) ಘರಿ (ವಾಕ್) ಹೇಟೆ (ನಡೆದು) ಪಾರಿನಾ (ಬಾರದು) ಇತ್ಯಾದಿ.

ರಸ್ತೆಗುಂಟ ದಾರಿಹೋಕರು ಕೇಳಿದ್ದನ್ನೇ ಕೇಳುತ್ತಾರೆ. ಆದ್ದರಿಂದ ತಿರುಗಾಡಲು (ವಾಕ್) ಎನ್ನದೆ ಪುಖಾ ನೋಡಲು! ಅನ್ನಲಾರಂಭಿಸಿದೆ. ಸೈಕಲ್ ಮೇಲೆ ಸಾಗಿದವರೂ ಇಳಿದು ವಿಚಾರಿಸುತ್ತಿದ್ದರು. ಹೆಗಲಿಗೊಂದು, ಸೊಂಟಕ್ಕೊಂದು ಕೆಂಪು ವಸ್ತ್ರ ಸುತ್ತಿಕೊಂಡು ಒಂದು ಕಾಲ ಮೇಲೆ ನಿಂತು ದೊಣ್ಣೆ ಹಿಡಿದಾತ ‘ಪೇದಾ’ ಎಂದು ತನ್ನನ್ನು ಪರಿಚಯಿಸಿ ತಿರುಗಿ ಅವೇ ಪ್ರಶ್ನೆಗಳನ್ನು ಕೇಳಲಾರಂಭಿಸಿದ! ಕೇಳಿಸಿಕೊಂಡ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ. “ಡಾಕ್ಟರ್ ಕಾಮತ್ ಪುಕಾಯ್ ಡಾಕ್ಟರ್” ಎಂದು ಆತನಿಗೆ ವಿವರಣೆ ಕೊಟ್ಟ. ಇಲ್ಲಿಯವರಿಗೆಲ್ಲ ನನ್ನ ಪರಿಚಯವಿಲ್ಲದಿದ್ದರೂ ನನ್ನ ಆಫೀಸು ಮತ್ತು ಮಾಡುತ್ತಿದ್ದ ಕೆಲಸ ಗೊತ್ತಿತ್ತು.

ತಿರುಗಿ ಪ್ಲಾಸಿಯ ರಣಾಂಗಣ ಕಾಣಿಸಿತು. ಸೂರ್ಯದೇವ ಪಡುವಣದಲ್ಲಿ ಮರೆಯಾಗಲಿದ್ದ. ಕೆಂಬಣ್ನದ ಬಾನಿನ ಪಡಿನೆಳಲು ನದಿಯ ನೀರಲ್ಲಿ ಮೂಡಿತ್ತು. ಪ್ಲಾಸಿಯ ಕುಮಾರಿಯರ ತಂಡ ಒಂದು ಬಂದಿತು. ಶಾಂತವಾದ ಹೊಂಡದ ನೀರು ಈ ತಾಂಡಾಕ್ಕಾಗಿ ಕಾದಿದಂತಿತ್ತು. ತಿರುಗಿ ಮನೆ ಸೇರಿದಾಗ ಮೈಕೈದಣಿದಿದ್ದರೂ ಹೊಸ ಹುರುಪು ನನ್ನದಾಗಿತ್ತು. ಆ ಹುರುಪಿನಲ್ಲೇ ಈ ಪತ್ರ ಬರೆಯಲು ಕುಳಿತೆ.

ಕೃಷ್ಣಾನಂದ

(1968070ನೇ ಅವಧಿಯಲ್ಲಿ ಕೃಷ್ಣಾನಂದ ಕಾಮತರು ಪಶ್ಚಿಮ ಬಂಬಾಲದ ಏಕ ಮಾತ್ರ ಸಕ್ಕರೆ ಕಾರಖಾನೆಯಿದ್ದ, ಇತಿಹಾಸ ಪ್ರಸಿದ್ಧ ಪ್ಲಾಸಿ ಹಳ್ಳಿಯಲ್ಲಿ ಕಬ್ಬಿನ ಬೆಳೆಯ ಕೀಟ ನಿಯಂತ್ರಣಾಲಯದ ಮುಖ್ಯ ಸಂಶೋಧನಾಧಿಕಾರಿಯಾಗಿದ್ದರು. ಫೋನು ಸೌಕರ್ಯವಿಲ್ಲದ ಆ ದಿನಗಳಲ್ಲಿ ಪತ್ನಿಗೆ ದಿನಾಲು ಪತ್ರ ಬರೆಯುವದೊಂದೇ ಸಂಪರ್ಕಸಾಧನವಾಗಿತ್ತು. ಇಂಥ ಒಂದು ಪತ್ರವನ್ನು ಮೇಲೆ ಕೊಡಲಾಗಿದೆ. :ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್)

________________________________________
*ಆಗ ಕರ್ನಾಟಕಕ್ಕೆ ಮೈಸೂರು ರಾಜ್ಯವೆಂದು ಹೆಸರಿತ್ತು.