೧೮೮೫ರ ವರ್ಷದ ಒಂದು ನಸುಕು. ಎಂದಿನಂತೆ, ಅಘೋರಮಣಿ ಜಪ , ತಲ್ಲೀನತೆಯಿಂದ ಮುಗಿಸಿದಳು. ಪ್ರಾಣಾಯಾಮ ಕೈಕೊಂಡಳು. ಬಳಿಕ ತನ್ನ ಜಪಗಳ ಫಲವನ್ನು ಆರಾಧನಾ ಮೂರ್ತಿಗೆ ಅರ್ಪಿಸಲು ಮುಂದಾದಾಗ ನೋಡುತ್ತಾಳೆ, ಅವಳ ಎಡಬದಿಗೆ ಶ್ರೀ ರಾಮಕೃಷ್ಣರು ಕುಳಿತಿದ್ದಾರೆ! ತನ್ನ ಗೋಪಾಲನಂತೆಯೇ ಅವರ ಬಲಗೈ ಮುಷ್ಟಿಯಲ್ಲಿದೆ. ಬೆಚ್ಚಿ ಬಿದ್ದ ಅವಳು, “ಈತ ಯಾವಾಗ , ಹೇಗೆ ಒಳಗೆ ಬಂದ? ಎಂದು ದಿಟ್ಟಿಸುತ್ತಿದ್ದಂತೆ ಅವರು ಮಾಯವಾಗಿದ್ದರು. ಆಸ್ಥಳದಲ್ಲಿ ಅವಳ ಗೋಪಾಲನೇ ಶಿಶು ರೂಪದಲ್ಲಿ ಕಂಡ. ಅಂಬೆಗಾಲಿಡುತ್ತ ಬಂದು, “ ಅಮ್ಮಾ ನನಗೆ ಬೆಣ್ಣೆ ಬೇಕು!” ಎಂದು ಮಗು ಹೇಳಿತು. “ ಅಯ್ಯೊ! ನಾನೊಬ್ಬ ಬಡ ವಿಧವೆ, ಬೆಣ್ಣೆಯನ್ನು ಎಲ್ಲಿಂದ ತರಲಿ? ಎಂದು ಹರ್ಷೋನ್ಮಾದದಿಂದ ಕೂಗಿಕೊಂಡಳು. ಆ ವೇಳೆಯಲ್ಲಿ ಆಕೆಯ ಕೂಗನ್ನು ಆಲಿಸಲು ಯಾರೂ ಅಲ್ಲಿರಲಿಲ್ಲ. “ಇನ್ನೇನಾದರೂ ತಿಂಡಿ ಕೊಡು !” ಮಗು ಮತ್ತೇ ಹೇಳಿತು. ಬಿಕ್ಕುತ್ತ ಅಘೋರಮಣಿ, ನೆಲುವಿನ ಮೇಲಿದ್ದ ಪಾತ್ರೆಯಿಂದ ಕೊಬ್ಬರಿಯುಂಡೆಯನ್ನು ತೆಗೆದು ಅವನ ಕೈಗಿತ್ತಳು. ಬಾಲ ಗೋಪಾಲ ಅದನ್ನು ತಿನ್ನುತ್ತ ಅವಳ ತೊಡೆಯ ಮೇಲೆಯೇ ಕುಳಿತುಬಿಟ್ಟ. ಜಪಮಾಲೆ ಹಿಡಿದೆಳೆದ. ಗುಡಿಸಲ ತುಂಬ ಬಿದ್ದು, ಎದ್ದು ಆಡಲಾರಂಬಿಸಿದ. ನಸುಕು ಹರಿಯುತ್ತಿದ್ದಂತೆ, ಅಘೋರಮಣಿ ಗೋಪಾಲನನ್ನೆತ್ತಿಕೊಂಡು ದಕ್ಷಿಣೇಶ್ವರಕ್ಕೆ ಧಾವಿಸಿದಳು. ಗೋಪಾಲನು , ತನ್ನ ಪುಟ್ಟ ಕಾಲುಗಳನ್ನು ಅವಳ ಎದೆಯ ಮೇಲೆ ಇಳಿಬಿಟ್ಟು, ಹೆಗಲ ಮೇಲೆ ಒರಗಿ ನಿದ್ರಿಸಿದ್ದ. “ ಗೋಪಾಲ! ಗೋಪಾಲ! ಎಂದು ಕೂಗುತ್ತ ಬಂದವಳನ್ನು ದೇಗುಲದ ಆವರಣವನ್ನು ಗುಡಿಸುತ್ತಿದ್ದ ಭಕ್ತೆಯೊಬ್ಬಳು ನೋಡಿ ಆವಕ್ಕಾದಳು . ಕೆದರಿದ ಕೂದಲು,, ಅತ್ತು ಕೆಂಪಾದ ಕಣ್ಣು, ಉಟ್ಟ ಜೋತಾಡುತ್ತಿದ್ದ ಬಟ್ಟೆಯತ್ತ ಗಮನಕೊಡದೇ, ನೇರ ಶ್ರೀ ರಾಮಕೃಷ್ಣರ ಕೊಠಡಿಯತ್ತ ಅಘೋರಮಣಿ ಧಾವಿಸಿದಳು. ಶ್ರೀ ರಾಮಕೃಷ್ಣರು ಕುಳಿತಿದ್ದ ಮಂಚದ ಬಳಿ ಸಾರುತ್ತಿದ್ದಂತೆ ಅವಳ ಗೋಪಾಲ ಎಚ್ಚತ್ತು, ಕೆಳಗಿಳಿದು, ಶ್ರೀ ರಾಮಕೃಷ್ಣರ ಶರೀರದಲ್ಲಿ ಅದೃಶ್ಯನಾದ . ಈಗ ಶ್ರೀ ರಾಮಕೃಷ್ಣರು ಅವಳ ತೊಡೆಗೆ ಒರಗಿ ಕುಳಿತರು. ಅಲ್ಲಿದ್ದ ಭಕ್ತಳು ಗಮನಿಸಿದಂತೆ, ಯಾವ ಮಹಿಳೆಯನ್ನೂ ಅವರು ಸ್ಪರ್ಶಿಸಿದ್ದನ್ನು ಕಂಡವರಿಲ್ಲ ! ಆಗವರಲ್ಲಿ ಕಂಡದ್ದು ಕೇವಲ ಶಿಶುಭಾವ. ಅಘೋರಮಣಿ ಅವರಿಗೆ ಬೆಣ್ಣೆ, ತಿಂಡಿಗಳನ್ನು ತಿನಿಸಿದಳು. ಬಳಿಕ ಹರ್ಷೊದ್ವೇಗದಲ್ಲಿ ಕೊಠಡಿಯ ತುಂಬ ಕುಣಿಯಲಾರಂಬಿಸಿದಳು. ಆಕೆಯ ಸ್ವರೂಪ ಕಂಡು ಶ್ರೀ ರಾಮಕೃಷ್ಣರು ಮುಗುಳ್ನಕ್ಕರಂತೆ. “ ಗೋಪಾಲ , ನನ್ನ ಗೋಪಾಲ! ನಿನ್ನೊಳಗೆ ಲೀನನಾಗಿ ಬಿಟ್ಟನಲ್ಲ! ಮತ್ತೆ ಬಂದು ಬಿಡು ಗೋಪಾಲ”ಎಂದು ಗೋಳಿಟ್ಟಳು. ತಾನು ಇಷ್ಟು ದಿನ ಪೂಜಿಸುತ್ತ ಬಂದಿದ್ದ ಗೋಪಾಲ ಯಾರೆಂದು ಈಗ ಈಗ ಅವಳ ಮನಸ್ಸಿಗೆ ಅರಿವಾಯಿತು. ಅಂದಿನಿಂದ ಅಘೋರಮಣಿ, ಎಲ್ಲರ ಪಾಲಿಗೆ , ’ಗೋಪಾಲನ ಅಮ್ಮ’ನಾದಳು. ( ಗೋಪಾಲ ಕೆ ಮಾ)
ಆಕೆ ತನ್ನ ಗುಡಿಸಲಿಗೆ ಹೋಗುವ ಮುನ್ನ, ಧ್ಯಾನಸ್ಥರಾದ ಶ್ರೀ ರಾಮಕೃಷ್ಣರ ದೇಹದಿಂದ ಇಳಿದು ಬಾಲ ಗೋಪಾಲ ಪ್ರತ್ಯಕ್ಷನಾದ. ಅವನನ್ನು ಹೊತ್ತು , ಗುಡಿಸಲಿಗೆ ಬಂದರೆ, ಅಘೋರಮಣಿಗೆ ತನ್ನ ದಿನ ನಿತ್ಯದ ಜಪ-ಪೂಜೆಗಳನ್ನು ಮಾಡಲು ಆಗಲಿಲ್ಲ. ಇಡೀ ದಿನ ಓಡಾಡುತ್ತ ಗದ್ದಲವೆಬ್ಬಿಸುತ್ತಿದ್ದ. ರಾತ್ರಿ ಅವನಿಗೆ ತಿನಿಸಿ, ತಟ್ಟಿ, ಮಲಗಿಸಿದಳು. ದಿನವಿಡಿ ಮಗುವೊಂದರ ಜೊತೆಗೆ ಮಾತನಾಡುತ್ತಿದ್ದ ಅವಳಿಗೆ ಹುಚ್ಚು ಹಿಡಿದಿದೆಯೆಂದೇ ಜನ ಭಾವಿಸಿದರು.
ಎಲ್ಲೆ ಹೋಗಿರಲಿ, ಸಮಯಸಿಕ್ಕಾಗಲೆಲ್ಲ ಜಪ ಮಾಡುವದು ಗೋಪಾಲನ ಅಮ್ಮನಿಗೆ ರೂಢಿಯಾಗಿತ್ತು. ಇದನ್ನು ನೋಡಿದ ಶ್ರೀ ರಾಮಕೃಷ್ಣರು ಒಮ್ಮೆ ಹೇಳಿದರು,” ನೀನಾಗಲೇ ಬೇಕಾದಷ್ಟು ಜಪಸಾಧನೆ ಮಾಡಿರುವಿ. ಇನ್ನೂ ಬೇಕಿಲ್ಲ!”“ಹಾಗೆಂದರೇನು? ಮತ್ತೆ ಮತ್ತೆ ಜಪ ಮಾಡುವದು ಬೇಕಿಲ್ಲವೇ?
“ನಿನಗಾಗಿ ಮಾಡುವದು ಬೇಕಿಲ್ಲ, ಆದರೆ (ತನ್ನ ದೇಹವನ್ನು ತೋರಿಸುತ್ತ) ಈ ದೇಹದ ಒಳಿತಿಗಾಗಿ ನಿನ್ನ ಉಪಾಸನೆಯನ್ನು ಮುಂದುವರೆಸಬಹುದು.”
ಗೋಪಾಲನ ಅಮ್ಮ ಒಪ್ಪಿಕೊಂಡಳು. ಈಗ ಮೊದಲಿನಂತೆ ಬಾಲಗೋಪಾಲ ದರ್ಶನವೀಯುತ್ತಿರಲಿಲ್ಲ. ಅಘೋರಮಣಿ ರಾಮಕೃಷ್ಣರನ್ನು ಕಂಬನಿ ಸುರಿಸುತ್ತಾ ಕೇಳಿದಳು, “ ಗೋಪಾಲನೇಕೆ ಮೊದಲಿನಂತೆ ಕಾಣಿಸಿಕೊಳ್ಳುತ್ತಿಲ್ಲ. ನಾನೇನು ತಪ್ಪು ಮಾಡಿದ್ದೇನೆ.”
ಅವಳನ್ನು ಸಂತೈಸುತ್ತ ಅವರೆಂದರು,” ಕಲಿಯುಗದಲ್ಲಿ ಭಗವಂತನ ದರ್ಶನ ಮತ್ತೆ ಮತ್ತೆ ಘಟಿಸುತ್ತಿದ್ದರೆ ಭೌತಿಕ ಶರೀರ ಹೆಚ್ಚು ದಿನ ತಾಳುವದಿಲ್ಲ. ಅದರ ಅಸ್ತಿತ್ವ ಕೇವಲ ಇಪ್ಪತೊಂದು ದಿನಗಳಷ್ಟೇ! ಆಮೇಲೆ ಅದು ತರಗಲೆಯಂತೆ ಬಿದ್ದುಹೋಗುತದೆ.”
ಆದರೆ, ಅವಳಿಗೆ ಈ ಭಗವತ್ ದರ್ಶನ ಮತ್ತು ಆ ಬಳಿಕದ ಉನ್ಮತ್ತತೆಯ ರೂಢಿಎಷ್ಟಾಗಿತ್ತೆಂದರೆ, ಅವಳಿಗೆ ಹೃದಯವೇದನೆ ಕಾಣಿಸಿಕೊಂಡಿತು. ಅದರ ನಿವಾರಣೋಪಾಯವೆಂದು ಶ್ರೀ ರಾಮಕೃಷ್ಣರು, ಅವಳಿಗೆ ,” ನಿನ್ನ ಆಧ್ಯಾತ್ಮಿಕ ಬಲ ಹೆಚ್ಚುತ್ತ ಹೋಗಿದೆ, ಉಪವಾಸ ಕಡಿಮೆ ಮಾಡು , ಎನನ್ನಾದರೂ ತಿನ್ನು” ಎಂದು ಸೂಚಿಸಿದರು.
ಒಮ್ಮೆ ಗೋಪಾಲನ ಅಮ್ಮ ಸಂಗಡಿಗರೊಂದಿಗೆ ದಕ್ಷಿಣೇಶ್ವರಕ್ಕೆ ಹೋದಾಗ, ಶ್ರೀ ರಾಮಕೃಷ್ಣರು, ಅಲ್ಲಿದ್ದವರಿಗೆಲ್ಲ , “ ಈ ತಾಯಿಯ ದೇಹದ ಕಣಕಣದಲ್ಲಿ ದೇವನಿದ್ದಾನೆ” ಎಂದು ಹೇಳಿ , ಸ್ವತಃ ತಿಂಡಿ ತಂದು ತಿನ್ನಿಸಹತ್ತಿದರು. ಇದರಿಂದ ಸಂಕೊಚಪಟ್ಟು ಅಘೋರಮಣಿ , ’ಏಕೆ ತನಗೆ ಹೀಗೆ ಅಕ್ಕರೆಯಿಂದ ತಿನ್ನಿಸುವದು’ ಎಂದು ಕೇಳಿದಾಗ, ಶ್ರೀ ರಾಮಕೃಷ್ಣರು,” ನೀನು ನನಗೆ , ಹಿಂದೊಮ್ಮೆ ಹೀಗೆಯೇ ತಿನಿಸಿದ್ದೆ “ ಎಂದು ಹೇಳಿ, “ಹಿಂದಿನ ಜನ್ಮದಲ್ಲಿ, ಅಂದರೆ, ಕೃಷ್ಣಾವತಾರದಲ್ಲಿ ಈಕೆ ವೃಂದಾವನದಲ್ಲಿ ಹಣ್ಣು ಮಾರುತ್ತಿದ್ದಳು, ಗೋಪಾಲನಿಗೆ ಸಿಹಿ ಹಣ್ಣನ್ನು ಆರಿಸಿ ತಿನ್ನಿಸುತ್ತಿದ್ದಳು” ಎಂದು ತಮ್ಮ ಶಿಷ್ಯಂದಿರಿಗೆ ಹೇಳಿದರಂತೆ!
ಒಂದು ಸಲ ಭಕ್ತನೋರ್ವನ ಮನೆಯಲ್ಲಿ ಭಗವತ ಚಿಂತನೆ ನಡೆದಿತ್ತು. ಆಗ ದೇವರ ಕುರಿತ ,’ಹುಚ್ಚು’ಹಿಡಿದವರಿಗೆ ಮಾತ್ರ ಆತನ ದರ್ಶನವಾಗುತ್ತದೆ ಎಂದು ಹೇಳುತ್ತ , ಗೋಪಾಲನ ಅಮ್ಮನನ್ನು ಉದಹರಿಸಿದರಂತೆ. ಅಲ್ಲಿ ನೆರೆದವರಿಗೆ ಅವಳನ್ನು ನೋಡುವ ತವಕವಾಯಿತು.,ಹೇಳಿ ಕಳಿಸಿದರಂತೆ. ಆ ತನಕ ಬೋಧನೆಯಲ್ಲಿದ್ದ ಶ್ರೀರಾಮಕೃಷ್ಣರು ಸಮಾಧಿಸ್ತರಾದರು. ಅವರ ಶರೀರ, ಬಾಲ ಕೃಷ್ಣನ ರೂಪ ತಾಳಿದಂತೆ ತೋರಿತು. ಅಂಬೆಗಾಲಿಡುತ್ತ , ಒಂದು ಕೈ ನೆಲಕ್ಕೂರಿ, ಇನ್ನೊಂದನ್ನು ಎತ್ತಿ ಹಿಡಿದು ಸಭಾಭವನದ ಮುಖ್ಯ ದ್ವಾರದತ್ತ ಹೊರಳುತ್ತಿದ್ದಂತೆ, ಗೋಪಾಲನ ಅಮ್ಮ ಒಳಗೆ ಬಂದದ್ದನ್ನು ನೋಡಿ ಜನರು ಮೂಕರಾದರಂತೆ.
“ ನಿಜ ಹೇಳಬೇಕೆಂದರೆ, ನನಗೆ ಬಾಲಗೋಪಾಲನ ಈ ರೂಪ ಇಷ್ಟವಿಲ್ಲ! ನನ್ನ ಗೋಪಾಲ ನಗುತ್ತ, ಆಡುತ್ತ, ಅಂಬೆಗಾಲಿಡುತ್ತ ಹರಿದಾಡುತ್ತಿರಬೇಕು. ಈತನೋ ದೊಡ್ಡ ಕೊರಡಿನಂತೆ ನಿಶ್ಚಲನಾಗಿದ್ದಾನೆ!” ಎಂದು ಸಮಾಧಿಸ್ತರಾದ ಶ್ರೀರಾಮಕೃಷ್ಣರನ್ನು ಕುರಿತು ಉದ್ಗರಿಸಬೇಕೆ? ಅಷ್ಟು ಸಲಿಗೆ ಗೋಪಾಲನ ಅಮ್ಮನಿಗೆ.
ಶ್ರೀ ರಾಮಕೃಷ್ಣರು ವಿನೋದ ಸ್ವಭಾವದವರು. ಒಮ್ಮೆ ನರೇನ್ (ನರೇಂದ್ರನಾಥ, ಸ್ವಾಮಿ ವಿವೇಕಾನಂದ) ಮತ್ತು ಗೋಪಾಲನ ಅಮ್ಮನನ್ನು ಮಾತನಾಡಲು ಹಚ್ಚಿ, ತಾವು ಅವರ ಮಾತು ಕೇಳಲು ಕುಳಿತರು. ಇಷ್ಟು ವಿರುಧ್ಧ ಸ್ವಭಾವ, ಶಿಕ್ಷಣ, ಸಂಸ್ಕಾರ , ನಡೆ-ನುಡಿಗಳಲ್ಲಿ ಮಹದಂತರವಿದ್ದ ಇಬ್ಬರು ವ್ಯಕ್ತಿಗಳು ಒಂದೆಡೆ ಅವರಿಗೆ ದೊರಕಿರಲಾರರು! ನರೇಂದ್ರನಾಥನು ಇಂಗ್ಲಿಷ್ ಚೆನ್ನಾಗಿ ಬಲ್ಲವ, ಉಚ್ಚಶಿಕ್ಷಣ ಪಡೆದವ, ಮೂರ್ತಿಪೂಜೆ ಅಲ್ಲಗಳೆದು, ನಿರಾಕಾರ ದೇವರನ್ನು ನಂಬಿದವ. ಗೋಪಾಲನ ಅಮ್ಮ , ಲೋಕದ ದೃಷ್ಟಿಯಲ್ಲಿ ನಿರಕ್ಷರಿ, ಗ್ರಾಮೀಣ , ನಯ-ನಾಜೂಕು ಇಲ್ಲದ ಸೀದಾ, ಸಾಧಾರಣ ಮುಗ್ಧೆ. ಆದರೆ, ದೇವೋಪಾಸನೆಯ ಅವಳ ಸ್ವಂತದ ಅನುಭವಗಳನ್ನು ವಿವರಿಸುವಂತೆ ಶ್ರೀ ರಾಮಕೃಷ್ಣರು ಸೂಚಿಸಿದರು. ಆಕೆ ತಾನು ಗೋಪಾಲನನ್ನು ಕಂಡುಕೊಂಡ ಬಗೆ , ತನ್ನ ಸರಳ ಉಪಾಸನಾ ವಿಧಾನಗಳನ್ನು , ತನ್ಮಯತೆಯಿಂದ ವಿವರಿಸುತ್ತಿದ್ದಂತೆ , ನರೇಂದ್ರನ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಸುರಿಯಿತು. ನರೇಂದ್ರನು ಭಾವಜೀವಿಯಾಗಿದ್ದ, ಜೊತೆಗೆ, ವ್ಯಕ್ತಿಯ ಮನೋಬಲ, ಆಂತರಿಕ , ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ಅಳೆಯಬಲ್ಲವನಾಗಿದ್ದ.”
“ನಾನೊಬ್ಬ ಬಡ , ಅಜ್ಞಾನಿ ವಿಧವೆ, ನೀನೋ ಶ್ರೀಮಂತ, ಜ್ಞಾನಿ, ತುಂಬ ಓದಿಕೊಂಡವ! ನನಗಾದ ಈ ದರ್ಶನಗಳೆಲ್ಲ ನಿಜವೆಂದು ನಿನಗೆ ಅನಿಸುತ್ತಿದೆಯೇ?” ಎಂದು ದೈನ್ಯದಿಂದ ಗೋಪಾಲನಅಮ್ಮ ಕೇಳಿದಾಗ,
“ತಾಯಿ! ಖಂಡಿತಕ್ಕೂ ನಿನ್ನ ಎಲ್ಲ ಅನುಭವಗಳು ನಿಜವಾಗಿವೆ!” ನರೇನ್ ಘೋಷಿಸಿದ.
ಆಶ್ಚರ್ಯದ ಸಂಗತಿ ಅಂದರೆ, ಗೋಪಾಲನ ಅಮ್ಮ ಇರುವ ಗುಡಿಸಲಿನ ಅಕ್ಕ-ಪಕ್ಕದಲ್ಲಿ ಭೂತ ಸಂಚಾರವಿತ್ತು ಮತ್ತು ಇದರ ಅರಿವು ಅವಳಿಗಿತ್ತು. ಆದರೆ ಅವಳ ಅತ್ಯುಚ್ಚ ಆಧ್ಯಾತ್ಮಿಕ ಸಾಧನೆಯಿಂದಾಗಿ ಯಾವ ತೊಂದರೆಯೂ ಅವಳಿಗೆ ಆಗಿರಲಿಲ್ಲ. ಒಮ್ಮೆ ಶ್ರೀ ರಾಮಕೃಷ್ಣರು ಸ್ವಾಮಿ ಬ್ರಹ್ಮಾನಂದರನ್ನು ಕರೆದುಕೊಂಡು ಆಲ್ಲಿ ಹೋದಾಗ ಅವರಿಗೆ ಅದರ ಅನುಭವ ಆಗಿತ್ತು.
ನಿವೇದಿತಾ ಮತ್ತು ಇನ್ನಿಬ್ಬ ಮಹಿಳೆಯರು ಸನ್ಯಾಸತ್ವದ ದೀಕ್ಷೆ ಪಡೆಯಲು ವಿವೇಕಾನಂದರ ಬಳಿ ಬಂದಾಗ , ಗೋಪಾಲನ ಅಮ್ಮನ ಬಳಿ ಅವರನ್ನು ಕಳಿಸಿದರು. ಆಕೆ ತನಗೇನು ತಿಳಿಯುತ್ತದೆ, ತಾನು ತೀರ ಸಾಮಾನ್ಯ , ಅಜ್ಞಾನಿ ಎಂದಾಗ , ವಿವೇಕಾನಂದರು, “ಏನೆಂದೆ? ನೀನು ಸಾಮಾನ್ಯಳೇ? ಕೇವಲ ಜಪದ ಬಲದಿಂದ ಪರಮಾತ್ಮನ ಸಾನಿಧ್ಯದ ಪರಮಾವಸ್ಥೆ ತಲುಪಿರುವಿ! ನಿನ್ನಿಂದ ದೀಕ್ಷಾದಾನ ಸಾಧ್ಯವಿಲ್ಲದಿದ್ದರೆ ಇನ್ನಾರಿಂದ ಸಾಧ್ಯ? ನೀನೊಂದು ಕೆಲಸ ಮಾಡು, ನಿನ್ನ ಇಷ್ಟ ಮಂತ್ರವನ್ನು ಅವರಿಗೆ ಬೋಧಿಸು, ಆಗ ಅವರ ಕೆಲಸವಾಗುತ್ತದೆ…”.ಎಂದರು. ದೀಕ್ಷೆ ನೀಡಲು ಗೋಪಾಲನ ಅಮ್ಮ ಸಮ್ಮತಿಸಿದಳು. ಹಿಂದಿರುಗಿದ ಈ ಮಹಿಳೆಯರು ತಮ್ಮ ಅನುಭವವನ್ನು ವಿವೇಕಾನಂದರಿಗೆ ನಿವೇದಿಸಿದರು. “ ನಾವೀಗ ಕಂಡ ನೋಟ ನಮ್ಮ ನಿಜವಾದ ಪ್ರಾಚೀನ ಭಾರತ. ಪ್ರಾರ್ಥನೆ, ಕಂಬನಿ, ಜಾಗರಣೆ, ವ್ರತೋಪವಾಸಗಳ ನಾಡು. ಅದೀಗ ಮಾಯವಾಗುತ್ತಲಿದೆ.” ಎಂದು ಉದ್ಗರಿಸಿದರು.
ಶ್ರೀ ರಾಮಕೃಷ್ಣರ ಶಿಷ್ಯಂದಿರ ಬಗ್ಗೆ ಗೋಪಾಲನ ಅಮ್ಮನಿಗೆ ಅಪರಿಮಿತ ಮಮತೆಯಿತ್ತು. ವಿವೇಕಾನಂದರ ನಿಧನ ವಾರ್ತೆ ಕೇಳಿ, ಎಚ್ಚರತಪ್ಪಿ ಬಿದ್ದು ಬಲ ಮೊಣಗೈ ಮೂಳೆ ಮುರಿದುಕೊಂಡಿದ್ದಳು. ಆಗ ಅವಳನ್ನು ನೋಡಿಕೊಳ್ಳಲು ರಾಮಕೃಷ್ಣ ಮಠದಿಂದ ಓರ್ವ ಸಹಾಯಕಿಯನ್ನು ಕಳಿಸಿಕೊಡಲಾಗಿತ್ತು. ಅವಳ ಆರೋಗ್ಯ ಕೆಡುತ್ತ ಹೋದಾಗ ಕಲಕತ್ತೆಗೆ ಒಯ್ಯಲಾಯಿತು, ಆಗ ಸೋದರಿ ನಿವೇದಿತಾ ಮುತುವರ್ಜಿಯಿಂದ ಅವಳ ಜವಾಬ್ದಾರಿ ವಹಿಸಿದಳು. ”ಎಲ್ಲರಲ್ಲೂ ಭಗವಂತನನ್ನು ಕಾಣುವ ವೇದಾಂತ ಬೋಧನೆಯ ಪರಮಹಂತವನ್ನು ಗೋಪಾಲನ ಅಮ್ಮ ಮುಟ್ಟಿದ್ದಳು. ಆಕೆ ’ಪರಮಹಂಸತ್ವ’ ತಲುಪಿದ್ದಳು !”ಎಂದು ಸೋದರಿ ನಿವೇದಿತಾ ಬರೆದಿದ್ದಾರೆ.
೧೯೦೬ರ ಜುಲೈ, ೮ರಂದು ಗೋಪಾಲನ ಅಮ್ಮನ ಕೊನೆಯ ಗಳಿಗೆ ಬಂದಿತು. ಗಂಗಾತೀರಕ್ಕೆ ಅವಳನ್ನೊಯ್ದು ಮಲಗಿಸಲಾಯಿತು. ಅವಳ ಕಿವಿಯಲ್ಲಿ ನಾರಾಯಣ ನಾಮಸ್ಮರಣೆಯನ್ನು ಉಸುರಲಾಯಿತು. ಗೋಪಾಲನೊಲಿದ ಜೀವ , ಕೊನೆಗೊಮ್ಮೆ ಅವನಲ್ಲಿ ಲೀನವಾಯಿತು.