ಬಗೆ ಬಗೆಯ ರೂಪದಲ್ಲಿ ಭಗವಂತನನ್ನು ಆರಾಧಿಸಿ, ಆತನನ್ನು ಸಾಕ್ಷಾತ್ಕರಿಸಿಕೊಳ್ಳುವ ಆಧ್ಯಾತ್ಮಿಕ ಸ್ವಾತಂತ್ರ್ಯ, ನಮ್ಮ ದೇಶದ ಭಕ್ತರಿಗೆ ಲಭಿಸಿದೆ. ಭಾವದಂತೆ ದೇವನೊಲಿದ ಪುಣ್ಯಜೀವಿಗಳು ಅನೇಕರಿದ್ದಾರೆ. ಈ ಭಾವಗಳಲ್ಲಿ ಅನೇಕ ಪ್ರಕಾರಗಳಿವೆ. ದಾಸ್ಯಭಾವ ಸಾಮಾನ್ಯವಾಗಿದೆ. ಶ್ರೀ ರಾಮ –ಹನುಮರ ಸಂಬಂಧದಲ್ಲಿ ಇದನ್ನು ಕಾಣಲಾಗುತ್ತಿದೆ. ವಾತ್ಸಲ್ಯ ಭಾವ , ತಾಯಿ- ಮಗುವಿನ ನಡುವಿನದು, ಮಧುರ ಭಾವ, ಶ್ರೀಕೃಷ್ಣ – ಗೋಪಿಯರ ಬಗೆಗಿನದು,ಎಂದು ಗುರುತಿಸಲಾಗುತ್ತದೆ. ಇವೆಲ್ಲ ಭಾವದ ಸಾಧನಾ ಕ್ರಮಗಳು ಪುರಾಣ ಇತಿಹಾಸಗಳಿಗೆ ಸೀಮಿತವಾಗಿಲ್ಲ. ಪೂರ್ವ ನಿಕಟ ಯೂಗದಲ್ಲೂ ಇಂಥ ವಾತ್ಸಲ್ಯ ಭಾವದಿಂದ ಭಗವತ್ ಸಾನಿಧ್ಯ ಪಡೆದು ಮಿಂಚಿದ ಭಕ್ತೆಯರಿದ್ದಾರೆ. ಇಂಥ ಮಹಾಭಕ್ತೆ, ಅಘೋರ ಮಣಿ ದೇವಿ ಸ್ವಯಂ ಪ್ರೇರಣೆಯಿಂದಲೇ ಪೂಜೆ, ಜಪ, ಧ್ಯಾನ ಮತ್ತು ಸಹಜ ವಿರಕ್ತಿಗಳಿಂದಲೇ ದೇವನನ್ನು ಒಲಿಸಿಕೊಂಡ ಜೀವಿ. ಈ ಸಾಧ್ವಿಯಲ್ಲಿಯ ಅಪರೂಪದ ಮಾತೃತ್ವವನ್ನು ಗುರುತಿಸಿದವರು ಶ್ರೀ ರಾಮಕೃಷ್ಣ ಪರಮಹಂಸರು. ಶ್ರೀಕೃಷ್ಣನ ಬಾಲರೂಪದಲ್ಲೇ ಆಕೆ ಭಗವಂತನನ್ನು ಕಂಡಿದ್ದಳು. ಗ್ರಾಮೀಣ ಅನಕ್ಷರಸ್ಥಳೆಂದೇ ಈಗಿನವರು ಕರೆಯಬಹುದಾದ ಸಾದಾ, ಸರಳ , ಮುಗ್ಧ ವಿಧವೆಯೋರ್ವಳಲ್ಲಿ ಸುಪ್ತವಾಗಿ ಬೆಳೆದು ಬಂದಿದ್ದ ಆಧ್ಯಾತ್ಮಿಕ ಬಲವನ್ನು ಶ್ರೀ ರಾಮಕೃಷ್ಣರು ಕಂಡುಕೊಂಡದ್ದು , ಅದು ಹೊರಚೆಲ್ಲಿ ಬೆಳಗುವಂತೆ ಮಾಡಿದ್ದು, “ಗೋಪಾಲ ಕೆ ಮಾ” (ಗೋಪಾಲನ ಅಮ್ಮ) ಎಂಬ ಹೆಸರಿನಿಂದಲೇ ಆಕೆ ಪರಿಚಿತಳಾಗುವಂತೆ ಆದದ್ದು , ಶ್ರೀ ರಾಮಕೃಷ್ಣರ , ಶಿಷ್ಯರ ಕುರಿತ ಮಮತೆಯ ಸುಂದರ ನಿದರ್ಶನವಾಗಿದೆ. ವಾತ್ಸಲ್ಯ ಭಾವದ ಅಪರೂಪದ ಮಾದರಿಯಾಗಿದೆ.
ಗಂಗಾ ನದಿಯ ತೀರದ ಕಾಮಾರ ಹಾಟಿ ಗ್ರಾಮದ , ಕಾಶಿನಾಥ ಭಟ್ಟಾಚಾರ್ಯರ ಬಡ ಬ್ರಾಹ್ಮಣ ಕುಟುಂಬದಲ್ಲಿ ೧೮೨೨ ರ ಸುಮಾರಿಗೆ ಅಘೋರಮಣಿದೇವಿ ಜನ್ಮವೆತ್ತಿದಳು. ೯ನೇ ವರ್ಷದಲ್ಲೇ ಅವಳ ವಿವಾಹವಾಯಿತು. ಆದರೆ ಆಕೆಯಿನ್ನೂ ಪ್ರಾಯಕ್ಕೆ ಬರುವ ಮೊದಲೇ ಪತಿ ನಿಧನ ಹೊಂದಿದ.ಅನಾಥಳಾದ ಆಕೆ ತನ್ನ ೧೩ನೇ ವಯಸ್ಸಿಗೆ ತವರುಮನೆ ಸೇರಿಕೊಳ್ಳುವಂತೆ ಆಯಿತು. ಆಕೆಯ ಅಣ್ಣ ನೀಲಮಾಧವ ಭಟ್ಟಾಚಾರ್ಯ ಎಂಬಾತ ವೃತ್ತಿಯಿಂದ ಅರ್ಚಕನಾಗಿದ್ದ. ಕಲಕತ್ತೆಯ ಗೋವಿಂದಚಂದ್ರ ದತ್ತನೆಂಬ ಶ್ರೀಮಂತ ವ್ಯಾಪಾರಿಯೊಬ್ಬ ಕಾಮಾರ ಹಾಟಿಯಲ್ಲಿ ರಾಧಾ ಮಾಧವನ ದೇವಸ್ಥಾನವನ್ನು ನಿರ್ಮಿಸಿದ ಬಳಿಕ , ನೀಲ ಮಾಧವರು ಅಲ್ಲಿಯ ಪೂಜೆ, ಪುನಸ್ಕಾರಗಳಿಗಾಗಿ ನೇಮಿಸಲ್ಪಟ್ಟ . ಸುಂದರವಾದ ಹೂದೋಟ , ವನರಾಜಿಗಳಿಂದ ಕೂಡಿದ ಆ ದೇವಾಲಯ, ಭಕ್ತರನ್ನು ಆಕರ್ಷಿಸುವ ತಾಣವಾಗಿ ಪರಿಣಮಿಸಿತು.
ಎಳೆಯ ವಯಸ್ಸಿನಿಂದಲೇ ವಿರಕ್ತ ಜೀವನವನ್ನು ರೂಢಿಸಿಕೊಂಡಿದ್ದ ಅಘೋರಮಣಿಗೆ , ಸೋದರನ ಮನೆಯ ಸಾಂಸಾರಿಕ ಜಂಜಡಗಳ ಜೀವನ ಸರಿಬೀಳಲೇ ಇಲ್ಲ. ದೇವಾಲಯದಲ್ಲಿ , ಅದರ ಹೂದೋಟದಲ್ಲಿ , ಜಪ-ಧ್ಯಾನಗಳಲ್ಲಿ ದಿನ ಕಳೆಯುತ್ತಿದ್ದಳು.
ಗೋವಿಂದಚಂದ್ರ ದತ್ತನ ನಿಧನದ ಬಳಿಕ ಆತನ ಪತ್ನಿ ಮನೋಮೋಹಿನಿ , ಕಾಮಾರ ಹಾಟಿಯ ರಾಧಾಮಾಧವ ದೇವಸ್ಥಾನದ ಆವಾರದಲ್ಲಿಯೇ ಪುಟ್ಟ ಮನೆ ಕಟ್ಟಿಸಿಕೊಂಡು ಇರಲಾರಂಬಿಸಿದಳು. ಅಘೋರಮಣಿಯ ಭಕ್ತಿ-ಭಾವ, ಮುಗ್ಧತೆಗಳಿಂದ ಪ್ರಭಾವಿತಳಾಗಿ, ತಮ್ಮ ದೇವಾಲಯದ ತೋಟದ ಒಂದು ಮೂಲೆಯಲ್ಲಿ ಬಂದಿರಲು ಆಮಂತ್ರಣವಿತ್ತಳು. ಆ ಕೂಡಲೇ ಅಘೋರಮಣಿ , ಒಂದು ಕೋಣೆಯ ಗುಡಿಸಲು ಒಂದನ್ನು ನಿರ್ಮಿಸಿಕೊಂಡು ವಾಸಿಸಲಾರಂಭಿಸಿದಳು.ಅಘೋರ ಮಣಿಯ ಭಕ್ತಿಭಾವ , ಮುಗ್ಧತೆಗಳಿಂದ ಪ್ರಭಾವಿತಳಾಗಿ, ತಮ್ಮ ದೇವಾಲಯದ ತೋಟದ ಒಂದು ಮೂಲೆಯಲ್ಲೆ ಬಂದಿರಲು ಆಮಂತ್ರಣವಿತ್ತಳು. ಆ ಕೂಡಲೇ ಅಘೋರಮಣಿ, ಒಂದು ಕೋಣೆಯ ಗುಡಿಸಲು ಒಂದನ್ನು ನಿರ್ಮಿಸಿಕೊಂಡು ವಾಸಿಸಲಾರಂಬಿಸಿದಳು. ಆರವತ್ತು ವರ್ಷಗಳವರೆಗೂ ಮೀರಿ ಈ ತಾಣ , ಅವಳ ತಪೋಭೂಮಿಯಾಗಿ ಪರಿಣಮಿಸಿತು. ಮಣ್ಣಿನ ನೆಲ, ಕಲ್ಲಿನ ಹಾಸಿಗೆ, ಮಡಿಸಿಟ್ಟ ಚಾಪೆಯೇ ಅತಿಥಿಗಳಿಗೆ ಆಸನ, ಮೂಲೆಯೊಂದರಲ್ಲಿ ಶುಭ್ರವಾಗಿ ಸಾರಿಸಿದ ಒಲೆ, ಕೆಲ ಮಡಕೆಗಳು, ಅಕ್ಕಿ, ಬೇಳೆ, ತರಕಾರಿಗಳನ್ನಿಡಲು ಅವು ಸಹಾಯಕವಾಗಿದ್ದವು. ಪುಟ್ಟ ಪೆಟ್ಟಿಗೆಯೊಂದರಲ್ಲಿ ಅವಶ್ಯದ ಬಟ್ಟೆಗಳು. ನೆಲುವಿನ ಮೇಲಿಟ್ಟ , ಮಣ್ಣಿನ ಪಾತ್ರೆಗಳಲ್ಲಿ ಮಂಡಕ್ಕಿ, ಬತ್ತಾಸುಗಳಂಥ ಅತಿಥಿ ಸತ್ಕಾರದ ಸಾಮಗ್ರಿಗಳು. ಮೂಲೆಯೊಂದರಲ್ಲಿ ಕೈಗೆಟುಕುವಂತೆ, ಇಟ್ಟು ರಾಮಾಯಣದ ಪ್ರತಿ, ಕನ್ನಡಕ, ಜಪಮಾಲೆ ಇದ್ದ ಚೀಲ ಇವಿಷ್ಟೆ ಅವಳ ಭೌತಿಕ ಸಂಪತ್ತು.
ಬೆಳಿಗ್ಗೆ ೩ ಗಂಟೆಗೆ ಅವಳ ದಿನಚರಿ ಪ್ರಾರಂಭವಾಗುತ್ತಿತ್ತು. ಪ್ರಾತರ್ ಜಪವೇ ೩ ಗಂಟೆಗಳ ಕಾಲ ಸಾಗುತ್ತಿತ್ತು. ಗಂಗಾಸ್ನಾನದ ಬಳಿಕ ದೇಗುಲದ ಒಳ-ಹೊರಗಿನ ಸ್ವಚ್ಛತೆ ಮುಗಿಸಿ, ಪೂಜೆಗಾಗಿ ತೋಟದಿಂದ ಹೂ ಕೀಳುವದು, ಹೂ ಮಾಲೆಗಳನ್ನು ಕಟ್ಟುವದು, ಶ್ರೀ ಗಂಧವನ್ನು ತೇಯ್ದು ಇಡುವದು, ಸಾಗುತ್ತಿತ್ತು. ದಿನಕ್ಕೆರದು ಬಾರಿ ಗಂಗಾಸ್ನಾನ , ಸ್ನಾನದ ಬಳಿಕ ಬಿಲ್ವ ವೃಕ್ಷದ ಕೆಳಗೆ ಧ್ಯಾನ ನಂತರ ಒಲೆ ಹಚ್ಚಿ ಅನ್ನ –ಬೇಳೆ, ತರಕಾರಿಗಳ ಸಾದಾ ಅಡಿಗೆ , ತನ್ನ ಆರಾಧನ ಮೂರ್ತಿ , ಬಾಲ ಗೋಪಾಲನಿಗೆ ಎಡೆ ಇಡುವಳು. ಮತ್ತೇ ಸಾಯಂ ಪೂಜೆ , ಭಜನಗಳಲ್ಲಿ ಪಾಲುಗೊಳ್ಳುವಳು. ರಾತ್ರಿ ಊಟವಿಲ್ಲ, ಚುರಮುರಿ, ಒಂದು ಬಾಳೆಹಣ್ಣು, ಇಲ್ಲವೇ ಕಾಯಂಡ ,ಕೊಂಚ ಹಾಲು ಸೇವನೆ. ಬಳಿಕ ಜಪಕ್ಕೆ ಏಕಾಗ್ರತೆಯಿಂದ ಕುಳಿತಳೆಂದರೆ ಮಧ್ಯರಾತ್ರಿಯವರೆಗೂ ನಡೆಯುತ್ತಿತ್ತು.. ಆಕೆಯ ಈ ಯಾಂತ್ರಿಕ ಜೀವನದ ದೊಡ್ಡ ಬದಲಾವಣೆಯೆಂದರೆ, ಮನೋಮೋಹಿನಿಯೊಂದಿಗೆ ಆಕೆ ಕೈಕೊಂಡ ಗಯಾ, ವಾರಣಾಸಿ, ಪ್ರಯಾಗ. ಮಥುರಾ, ಬೃಂದಾವನಗಳ ತೀರ್ಥಯಾತ್ರೆ ಒಂದೇ! ಆಗಾಗ ದಕ್ಷಿಣೇಶ್ವರ ಯಾತ್ರೆ, ಆಕೆಯನ್ನು ಹೊರ ಜಗತ್ತಿಗೆ ಪರಿಚಯಿಸಲು ಕಾರಣವಾಯಿತು.
ಶ್ರೀ ರಾಮಕೃಷ್ಣರ ಹೆಸರನ್ನು ಅಘೋರಮಣಿ ಕೇಳಿದ್ದಳು. ಒಮ್ಮೆ ಮನೋಮೋಹಿನಿ ಮತ್ತು ಇನ್ನೊಬ್ಬ ಮಹಿಳೆಯೊಂದಿಗೆ ಮೂರು ಮೈಲು ದೂರದ ದಕ್ಷಿಣೇಶ್ವರಕ್ಕೆ ದೋಣಿಯಿಂದ ಹೋದಳು. ಬರಿಗೈಯಿಂದ ಸಾಧು ಪುರುಷರನ್ನು ಕಾಣುವದು ತರವಲ್ಲವೆಂದು ಎರಡು ಕಾಸಿನ ಕೊಬ್ಬರಿಯುಂಡೆ ಕೊಂಡು ಹೋಗಿದ್ದಳು.. ಇತರರೆಲ್ಲ ಒಳ್ಳೇ ತಿಂಡಿಯನ್ನು ಹಣ್ಣುಗಳನ್ನು ತಂದಿರುತ್ತಾರೆ. ಇದನ್ನು ಅವರು ಮುಟ್ಟಲಿಕ್ಕಿಲ್ಲ! ಎಂದು ಕೊಂಡೇ ಹೋಗಿದ್ದಳು. ಆದರೆ, ಈಕೆಯನ್ನು ನೋಡುತ್ತಿದ್ದಂತೆ, “ ಬಂದೆಯಾ? ಬಾ, ಎಲ್ಲಿ ನೀನು ತಂದ ತಿಂಡಿಯನ್ನು ಕೊಡು.” ಶ್ರೀ ರಾಮಕೃಷ್ಣರೆಂದರು. ತುಂಬ ರುಚಿಯಿಂದಲೇ ತಿಂದರು. ಬಳಿಕ “ ಈ ಅಂಗಡಿ ತಿಂಡಿಗೇಕೆ ಕಾಸು ಸುರಿಯುತ್ತಿ? ನೀನೇ ಮನೆಯಲ್ಲಿ ಮಾಡಿದ ಏನಾದರೂ ವಸ್ತು ತಾರಲ್ಲ? ಪಲ್ಯದ ಚೂರಾದರೂ ನಡೆಯುತ್ತದೆ! “ ಎಂದರು. “ನಿನ್ನ ಕೈ ಆಹಾರಬೇಕು!” ಎಂದರು. ಅಂದು ಅವರು , ದೇವರು, ಧರ್ಮ, ಭಕ್ತಿ ಪರಿಪಾಲನೆ ಯಾವ ವಿಚಾರದ ಕುರಿತೂ ಮಾತನಾಡಲಿಲ್ಲ. ಬರೇ ಆ, ಈ, ಅಡಿಗೆ ಕುರಿತು ಮಾತನಾಡಿದರು. “ಎಂಥ ವಿಚಿತ್ರ ಸಾಧು! ಬರೇ ಊಟ, ತಿಂಡಿ ಬಗ್ಗೆ ಮಾತನಾಡುತ್ತಾನೆ. ಇವನು ಹೇಳಿದ ಪಕ್ವಾನ್ನಗಳನ್ನು ಎಲ್ಲಿಂದ ತಯಾರಿಸಲಿ? ಮತ್ತೇ ಇಲ್ಲಿ ಬಾರದಿದ್ದರೆ ಆಯಿತು.!” ಎಂದುಕೊಂಡು, ತನ್ನ ಗುಡಿಸಲಿಗೆ ಹಿಂದಿರುಗಿದಳು. ಆದರೆ, ಕಾಮಾರ್ ಹಾಟಿ ತಲುಪಿದೊಡನೆ, ಮತ್ತೇ ದಕ್ಷಿಣೇಶ್ವರಕ್ಕೆಹೋಗುವ ಆಸೆ ಚಿಗುರೊಡೆಯಿತು.
ಎರಡನೇ ಬಾರಿ ಹೋದಾಗ , ಮನೆಯಲ್ಲಿ ಮಾಡಿದ ಕೊಂಚ ಪಲ್ಯವನ್ನು ಒಯ್ದಿದ್ದಳು.ಅದನ್ನು ರಾಮಕೃಷ್ಣರು ಹೆಚ್ಚಿನ ರುಚಿಯಿಂದ ತಿಂದು, “ ಅಮೃತದಂತಿದೆ!” ಎಂದು ಹೇಳಿದಾಗ ಕಣ್ಣೀರು ಉದುರಿತ್ತು. ಆ ಬಳಿಕವೂ ನಾಲ್ಕಾರು ಬಾರಿ ಹೋದಾಗ , “ಈ ಬಾರಿ ಏನು ತಂದಿರುವಿ? “ ಎಂದು ಮಗುವಿನಂತೆ ವಿಚಾರಿಸುತ್ತಿದ್ದರು. ಬೇಸತ್ತ ಅಘೋರಮಣಿ , “ ಗೋಪಾಲ! ನನ್ನ ಯಾವತ್ತೂ ಪೂಜೆ ಮತ್ತು ಪ್ರಾರ್ಥನೆಯ ಫಲವೇ ಇದು? ಮತ್ತೇ ಆ ತಿಂಡಿಪೋತ ಸಾಧುವಿನ ಬಳಿ ಹೋಗಲಾರೆ!” ಎಂದು ಕೊಂಡರೂ ಆಲ್ಲ್ಲಿ ಹೋಗದೇ ಆಕೆಗೆ ನೆಮ್ಮದಿಯೇ ಇರಲಿಲ್ಲ
ಮುಂದುವರೆಯುವದು………..