ಮುಕ್ತಾ ವೆಂಕಟೇಶರೊಂದಿಗೆ ಡಾ ಜ್ಯೋತ್ನಾ ಕಾಮತ್
ಮುಕ್ತಾ ವೆಂಕಟೇಶ್ ಮದ್ರಾಸ್ ನಲ್ಲಿ ೧೯೦೩ ರಲ್ಲಿ ಜನಿಸಿದರು. ತಂದೆ ಎ ಮಹಾದೇವಯ್ಯ ತಮಿಳಿನಲ್ಲಿ ಮೊದಲ ಕಾದಂಬರಿಕಾರರಾಗಿ ಪ್ರಸಿದ್ಧರು. ಸೋದರ ಎಂ ಕೃಷ್ಣನ್ ಅಂತರ್ ರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರರು. ತಮಿಳು, ಸಂಸ್ಕೃತ ಇಂಗ್ಲಿಷ್ ಸಾಹಿತ್ಯದ ಮನೆಯ ವಾತಾವರಣದಲ್ಲಿ ತನಗಿಷ್ಟವಾದ ಕಲಾಪ್ರಕಾರಗಳನ್ನೂ ಕೆಲಮಟ್ಟಿಗೆ ಮುಕ್ತಾ ಬೆಳೆಸಿಕೊಂಡಿದ್ದರು. ಅವರ ತಲೆಮಾರಿಗೆ ಅಪರೂಪವಾಗಿದ್ದ ಇಂಗ್ಲೀಷ ವಿದ್ಯಾಭ್ಯಾಸವೂ ದೊರೆಯಿತು. ೧೯೨೦ರಲ್ಲಿ ಮೈಸೂರು ಸಂಸ್ಥಾನದ ರೇಲ್ವೆಯಲ್ಲಿ ಇಂಜಿನಿಯರ್ ಆಗಿದ್ದ ವೆಂಕಟೇಶ ಶಾಸ್ತ್ರಿಗಳೊಡನೆ ವಿವಾಹ ಏರ್ಪಟ್ಟಿತು. ಪದವಿ ಪಡೆಯಲು ವಿವಾಹ ಅಡ್ಡಬಂದರೂ ಮೈಸೂರಿನಲ್ಲಿ ನೆಲೆಸಿದ್ದು, ಅವರ ಕಲಾಭಿವೃದ್ಧಿಗೆ ಹೆಚ್ಚಿನ ಚಾಲನೆ ದೊರೆಯಿತು. ಪತಿಯೊಡನೆ ಒಂದು ವರ್ಷದ ಇಂಗ್ಲಂಡಿನ ವಾಸ್ತವ್ಯ , ಅವರಿಗೆ ಬ್ರಿಟಿಷ ಚಿತ್ರಕಾರ ಝೇವಿಯರ್ ವಿಲ್ಸ್ ರಿಂದ ತರಬೇತಿ ಪಡೆಯಲು ವರದಾನವಾಗಿ ಪರಿಣಮಿಸಿತು. ಮೈಸೂರಿಗೆ ಮರಳಿದಾಗ ಪುಷ್ಪ ಚಿತ್ರಣದ ಪರಿಣತಿ, , ಕಾಯಾಗಿ, ಹೂವಾಗಿ, ಗಟ್ಟಿ ನೆಲೆ ಒದಗಿಸುವ ಮರವಾಗಿ ಏರ್ಪಟಿತ್ತು.
ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿದ್ದ ಅವರ ಮನೆಯ ವಿಶಾಲ ವರಾಂಡ ಮುಕ್ತಾರ ವೈವಿಧ್ಯಮಯ ಕಲಾಸಕ್ತಿಯ ಕೃತಿಗಳ ಮ್ಯೂಸಿಯಂ ತರಹ ಇತ್ತು. ೬೦-೭೦ ವರ್ಷಗಳ ಹಿಂದೆ ಅವರು ಕಸೂತಿಯಲ್ಲಿ ಚಿತ್ರಿಸಿದ ಇಣಚಿ, ಬೆಕ್ಕು, ಮೊಲ ಇತ್ಯಾದಿಗಳು ಈ ದೀರ್ಘಾವಧಿಯ ನಂತರವೂ ಅಂದಚೆಂದವಾಗಲಿ ಬಣ್ಣವಾಗಲೀ ಕಳೆದುಕೊಂಡಿರಲಿಲ್ಲ . ಹಣ್ಣು ಹಂಪಲಗಳ ಚಿತ್ರಣದಂತೆ, ನಿಸರ್ಗ ನೋಟಗಳೂ ಇದ್ದವು. ಮೈಸೂರು ನಗರದ ಬೀದಿಗಳ ಪ್ರಾತಃಕಾಲದ ದೃಶ್ಯ, ಗುಲ ಮೋಹರ ಗಿಡಗಳಿಂದ ರಂಜಿತ ಮಾರ್ಗದಲ್ಲಿ, ಜೋಡೆತ್ತಿನ ಚಕ್ಕಡಿ ಪ್ರಯಾಣ, ದೇವಾಲಯ ಪರಿಸರ ಚಿತ್ರಗಳು ರಮ್ಯವಾಗಿದ್ದವು. ನಟರಾಜನ ಇನ್ನಾರೂ ಯತ್ನಿಸದ ನೃತ್ಯ ಭಂಗಿಯ ಚಿತ್ರವಿತ್ತು. ತುಂಬ ಹಿಂದೆ ಚಿತ್ರಿಸಿದ ಸಂಪಿಗೆ, ದಾಸವಾಳದ ಹೂಗಳಂತೂ ಸಜೀವವಾಗಿ ನಳನಳಿಸುತ್ತಿದ್ದವು.
ಹೂಗಳನ್ನೆ ಅಭಿವ್ಯಕ್ತಿ ಮಾಧ್ಯಮವಾಗಿ ಅವರು ಆರಿಸಿಕೊಳ್ಳಲು ಕಾರಣ ವಿಚಾರಿಸಿದ್ದೆ.
“ ಗಿಡ ಮರಗಳು, ರಸ್ತೆ ದೇವಾಲಯಗಳು ನಮ್ಮೊಂದಿಗೆ ಬಹುಕಾಲ ಇರುತ್ತವೆ. ಹೂಗಳು ದೇವರ ಅತ್ಯಂತ ಸೂಕ್ಷ್ಮ ಸುಂದರ ಸೃಷ್ಟಿ, ಕ್ಷಣಿಕವಾದ ಅವುಗಳ ಕೋಮಲ ಸೌಂದರ್ಯವನ್ನು ಸೆರೆಹಿಡಿದಿಡುವ ಹಂಬಲ ನನ್ನದು” ಎಂದಿದ್ದರು. ಬಿಳಿ, ಹಳದಿ, ಕೇಸರಿ ಹೂಗಳಿಗೆ ರಬ್ಬಾದ ಬಣ್ಣದ ಹಿನ್ನೆಲೆ (ವಾಶ್) ಒದಗಿಸಿದರೆ, ರಬ್ಬಾದವಕ್ಕೆ ತಿಳಿಯಾದ ಹಿನ್ನೆಲೆ ಕೊಡುತ್ತಿದ್ದರು. ಗುಲಾಬಿ, ಸದಾನಂದ, ನಂದಿ ಬಟ್ಟಲು, ಕಣಗಿಲೆ ಗೊಂಡೆ ಹೂಗಳೆಲ್ಲ ಅವರ ಕುಂಚದಲ್ಲಿ ನಳನಳಿಸುತ್ತಿದ್ದವು. ಬೋಗನ್ ವಿಲಾ, ರುಕ್ಷಪುಷ್ಪ, ವಿಷ್ಣು ಕಾಂತಿ, ತುಂಬೆಗಳಂತಹ ಪುಟ್ಟ ಸೃಷ್ಟಿಗಳೂ ಸಜೀವವಾಗಿ ಅವರ ಪುಷ್ಫ ಚಿತ್ರಣದ ಅಸಂಖ್ಯ ಆಯಾಮಗಳ ಇಣುಕು ನೋಟಗಳನ್ನು ಒದಗಿಸುತ್ತಿದ್ದವು.
ಕೊನೆಯ ದಿನಗಳ ವರೆಗೂ ಮುಕ್ತಾರ ಪುಷ್ಪ ಚಿತ್ರಣದಲ್ಲಿ ಮಗ್ನರಾಗಿರುತ್ತಿದ್ದರು. ಈಚೆಗೆ ಅವರ ಕೃತಿಗಳಿಗೆ ತುಂಬ ಬೇಡಿಕೆ ಬರಲಾರಂಬಿಸಿತ್ತು. ಅವರ ಸ್ವಾವಲಂಬನದ ದಿಟ್ಟ ನಿಲುವು, ವೃದ್ಧರಿಗೆ ದಾರಿದೀಪವಾಗಬಲ್ಲದು. ೧೯೮೩ ರಲ್ಲಿ ಪತಿಯ ನಿಧನದ ಬಳಿಕವೂ ಒಂಟಿಯಾಗಿಯೇ ಆ ದೊಡ್ಡ ಮನೆಯಲ್ಲಿ ವಾಸಿಸಿದರು. ರುಕ್ಮಿಣಿ ಅರುಂಡೇಲ್, ಸರೋಜಿನಿ ನಾಯಡು, ಕಮಲಾದೇವಿ, ಆರ್. ಕೆ ನಾರಾಯಣ್, ಡಾ. ಗೋಪಾಲಸಾಮಿ ( ಮೈಸೂರು ಆಕಾಶವಾಣಿ ಸಂಸ್ಥಾಪಕರು) ಮತ್ತು ಹಿರಿಯ ಸಂಗೀತಗಾರರನ್ನೆಲ್ಲ ನಿಕಟವಾಗಿ ಬಲ್ಲವರಾಗಿದ್ದರು. ಹೊಸದಾಗಿ ಹೊರ ಬೀಳುತ್ತಿದ್ದ ಇಂಗ್ಲೀಷ್ ಸಾಹಿತ್ಯ ಕೃತಿಗಳನ್ನು ತಪ್ಪದೇ ಓದಿ ಚರ್ಚಿಸುತ್ತಿದ್ದರು. ಅತ್ಯಂತ ಚುರುಕಾದ ಅವರ ಸ್ಮರಣಶಕ್ತಿ ಪವಾಡ ಸದೃಶವಾಗಿತ್ತು. ತಲೆಮಾರಿನ ಅಂತರವಿಲ್ಲದೇ ಕಿರಿಯರೊಡನೆ ಬೆರೆತು ಹೋಗುತ್ತಿದ್ದ ಅವರ ಸರಳತೆ ಚೇತೋಹಾರಿಯಾಗಿತ್ತು.
ಡಾ ಜ್ಯೋತ್ನಾ ಕಾಮತ್