ಕರ್ನಾಟಕ ಕಲೋದ್ಧಾರಕ ಸಂಘ (೧೯೫೬) ಧಾರವಾಡದ ಹವ್ಯಾಸಿ ನಾಟಕ ಬಳಗವಾಗಿದ್ದು, ಹಾವನೂರ ದಂಪತಿ, ಸಕ್ರಿಯ ಸದಸ್ಯರಾಗಿದ್ದರು. ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಧೀರೇಂದ್ರ ಕುಲಕರ್ಣಿ ಅವರು ಬರೆದ,’ ಧರ್ಮಧ್ವಂಧ್ವ ’ನಾಟಕದ ತಯಾರಿ ನಡೆದಿತ್ತು. ಎಂದಿನಂತೆ ತರುಣ ದಂಪತಿಯ ಪಾತ್ರದಲ್ಲಿ ಈ ಮಾಮಾ-ಮಾಮಿ ಬರಬೇಕಾಗಿತ್ತು. ಆದರೆ ಮಾಮಿಯವರು ಮೂರನೆ ಬಾರಿ ಗರ್ಭಿಣಿ ಆಗಿ, ಆ ಪಾತ್ರ ವಹಿಸಲು ಅನರ್ಹರಾದರು! ಆ ಪಾತ್ರವನ್ನು ನಾನು ವಹಿಸಬೇಕಾಗಿ ಬಂದಿತು. ಉತ್ತರ ಕನ್ನಡದ, ಕೊಂ-ಕನ್ನಡ’ ಭಾಷೆಯ ನಾಲಿಗೆಗೆ ಧಾರವಾಡದ ದೇಶಸ್ಥ ಕನ್ನಡ ಭಾಷೆ
ಹೊರಳುತ್ತಿರಲಿಲ್ಲ! ಆಗ ನನ್ನ ಭಾಷೆ , ಹಾವಭಾವ, ತಿದ್ದಿ ರಂಗ ಪ್ರಜ್ಞೆಗಳನ್ನು ಹೇಳಕೊಟ್ಟವರು ಭಾರತಿಮಾಮಿ. ನಂತರ ಅವರೊಡನೆ ಬಾನುಲಿ ನಾಟಕ, ಇನ್ನೂ ಕೆಲ ನಾಟಕಗಳಲ್ಲಿ ಅಭಿನಯಿಸಿದೆ. ಅವುಗಳಲ್ಲಿ ’ನನಗ ಬ್ಯಾರೆ ಅಗೋದ ಅದ, ಕಣ್ಣುಗಳು, ಜಾಗೃತ ರಾಷ್ಟ್ರ, ಚಿರಕುಮಾರ ಸಭಾ, ಮುಂತಾದವು ನೆನಪಾಗುತ್ತವೆ.
೧೯೬೧ರಲ್ಲಿ ಟಾಗೋರರ ಜನ್ಮ ಶತಾಬ್ದಿಗೆ, ಹಾವನೂರರು ಚಿರಕುಮಾರ ಸಭಾ’ ವನ್ನು ನಾಟಕಕ್ಕೆ ಅಳವಡಿಸಿದರು. ಅದರಲ್ಲಿ ಹಿರೋ ಅಕ್ಷಯನ ಪಾತ್ರವನ್ನು ಅವರೇ ವಹಿಸಿದರು.ಆವರ ಪತ್ನಿ, ‘ಪುರಬಾಲಾಳ’ ಪಾತ್ರ ನಾನು ಮಾಡಿದರೆ, ಮುಖ್ಯವಾಗಿದ್ದ, ಕ್ಲಿಷ್ವವೂ ಆಗಿದ್ದ ಗಂಡುಪಾತ್ರವನ್ನು ಮಾಮಿ ಮಾಡಿದ್ದು ಕಣ್ಣಿಗೆ ಕಟ್ಟಿದಂತಿದೆ! ಚಿಕ್ಕ ಚಿಕ್ಕ ಪಾತ್ರಗಳ, ಹಲವಾರು ದೃಶ್ಯಗಳನ್ನು ಒಳಗೊಂಡ ನಾಟಕದಲ್ಲಿ ಸಾಕಷ್ಟು ನಟ-ನಟಿಯರಿದ್ದರು. ನಿರ್ದೇಶಕರೂ ಆಗಿದ್ದ ಮಾಮಾ ಮಾಮಿ ಅದರಲ್ಲಿ , ’ಬಂಗಾಲಿತನ’ ತರಲು ಸಾಕಷ್ಟು ಹೆಣಗಿದರು. ಸಾಲದ್ದಕ್ಕೆ ಹವ್ಯಾಸಿ ತಂಡ, ಹೆಚ್ಚಿನವರು ಹೊಸಬರೇ! ಸ್ಪಷ್ಟವಾದಿ, ಕೆಲವೊಮ್ಮೆ ಮಾಮಿಯವರ ನಿಷ್ಟುರ ಅನಿಸುವ ತಿದ್ದುಪಡೆಗೆ ವಾದ,ಚರ್ಚೆ, ಜಗಳಗಳು ಜೋರಾಗುತ್ತಿದ್ದವು. ಎಲ್ಲರ ನಾಟಕ ಪ್ರೀತಿಯೊಂದೇ ಹೊಸೆಯುವ ಹಗ್ಗವಾಗಿತ್ತು. ಬಾಸಲ್ ಮಿಶನ್ ಹೈಸ್ಕೂಲ ಅಂದು ಹಾವನೂರ ವಾಸಿಸುತ್ತಿದ್ದ ಮನೆಯ ಸಾಮೀಪ್ಯದಿಂದಾಗಿ ಅಲ್ಲಿಯ ಹಾಲು ರಿಹರ್ಸಲ್ ರೂಂ ಆಗಿ, ಮಾಮಾರ ಮನೆ ರಿಟಾಯರಿಂಗ್ ರೂಂ ಆಗಿರುತ್ತಿತ್ತು. ಮಾಮಿಯವರು ಮೂವರು ಮಕ್ಕಳಿಗೆ ಊಟ ಮಾಡಿಸಿ,ಕೈಗೂಸಾದ ನಿವೇದಿತಾಳನ್ನು ಹೊತ್ತು ತಂದು ಹಾಲ್ ದ ಬದಿಗೆ ಮಲಗಿಸಿ ರಾತ್ರಿ ೧೦-೧೧ ರ ತನಕ ರಿಹರ್ಸಲ್ ಹಾಗೂ ಪಾತ್ರ ನಿರ್ವಹಣೆಯನ್ನು ಸಲೀಸಾಗಿ ನಿರ್ವಹಿಸುತ್ತಿದ್ದರು. ಆ ನಾಟಕ ಅತ್ಯಂತ ಯಶಸ್ವಿಯಾಯಿತು. ಇನ್ನೆರಡು ಪ್ರಯೋಗಗಳು ಆದ ನೆನಪು.
ಮುಂದುವರೆಯುವದು